ಕಾರ್ಮಿಕ ವರ್ಗದ ನಗರವಾದ ಲಿಂಕೋಪಿಂಗ್‌-ನಲ್ಲಿ ಬೆಳೆದ ಓಯ್‌ಯೆರ್ 1970-ರ ದಶಕದ ಆರಂಭದಲ್ಲಿ ಬಂಡಾಯದ ಯುವ ಓಯ್‌ಯೆರ್ ಕವಿಯಾಗಿ ಬೀಟ್ ಕಾವ್ಯ ಹಾಗೂ ಬಾಬ್ ಡಿಲನ್, ಅಲ್ಲದೆ ಯುರೋಪಿಯನ್ ಸಾಹಿತ್ಯ ಚಳವಳಿಗಳು, ಅತಿವಾಸ್ತವಿಕತಾವಾದಿ ಸಾಹಿತ್ಯ ಮತ್ತು ವ್ಲಾಡಿಮಿರ್‌ ಮಾಯಕೋವ್ಸ್ಕಿಯಂತಹ ಕವಿಗಳಿಂದ ಸ್ಫೂರ್ತಿ ಪಡೆದು ತಮ್ಮದೇ ಆದ ಒಂದು ಉದ್ಧಟ ಕಾವ್ಯ ಶೈಲಿಯಿಂದ ಸ್ವೀಡಿಷ್ ಕಾವ್ಯಲೋಕದಲ್ಲಿ ಸ್ಫೋಟಕ ಪ್ರವೇಶ ಮಾಡಿದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಬ್ರೂನೊ ಕೆ. ಓಯ್‌ಯೆರ್-ರ (Bruno K. Öijer) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

1951-ರಲ್ಲಿ ಜನಿಸಿದ ಬ್ರೂನೊ ಕೆ. ಓಯ್‌ಯೆರ್, ಹಲವು ದಶಕಗಳಿಂದ ಸ್ವೀಡನ್ ದೇಶದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಕವಿಗಳಲ್ಲಿ ಒಬ್ಬರಾಗಿದ್ದಾರೆ. ‘ವೆಸುವಿಯಸ್‌’ ಎಂಬ ಹೆಸರಿನ ಬಂಡಾಯ ಕಾವ್ಯ ಕೂಟದ ಸದಸ್ಯರಾಗಿ, ಅವರು ತಮ್ಮ ಮೊದಲ ಪುಸ್ತಕ, Song for Anarchism ಅನ್ನು 1973-ರಲ್ಲಿ ಪ್ರಕಟಿಸಿದರು. ಇದರ ನಂತರ ತೀವ್ರವಾದ, ಅತಿವಾಸ್ತವಿಕತಾವಾದಿ-ಪ್ರಭಾವಿತ (surrealist-influenced) ಹಲವಾರು ಕವನ ಸಂಕಲನಗಳು ಪ್ರಕಟವಾದವು. ಇದೇ ಸಮಯದಲ್ಲಿ ಅವರು ತಮ್ಮ ನಾಟಕೀಯ ಕಾವ್ಯ-ವಾಚನದ ಪ್ರದರ್ಶನ ಶೈಲಿಗೆ ಹೆಸರುವಾಸಿಯಾದರು. 1980-ರ ದಶಕದಲ್ಲಿ, ಅವರು ರಾಕ್ ಬ್ಯಾಂಡ್‌-ಗಳೊಂದಿಗೆ (rock bands) ತಮ್ಮ ಕವಿತೆಗಳ ಪ್ರದರ್ಶನ ನೀಡುತ್ತಾ, ನಗರಗಳನ್ನು ಸುತ್ತುತ್ತಾ, ಸಾಕಷ್ಟು ಸಮಯ ಕಳೆದರು.

ಕಾರ್ಮಿಕ ವರ್ಗದ ನಗರವಾದ ಲಿಂಕೋಪಿಂಗ್‌-ನಲ್ಲಿ (Linköping) ಬೆಳೆದ ಓಯ್‌ಯೆರ್ 1970-ರ ದಶಕದ ಆರಂಭದಲ್ಲಿ ಬಂಡಾಯದ ಯುವ ಕವಿಯಾಗಿ ಬೀಟ್ ಕಾವ್ಯ (Beat poetry) ಹಾಗೂ ಬಾಬ್ ಡಿಲನ್ (Bob Dylan) ಅಲ್ಲದೆ ಯುರೋಪಿಯನ್ ಸಾಹಿತ್ಯ ಚಳವಳಿಗಳು, ಅತಿವಾಸ್ತವಿಕತಾವಾದಿ ಸಾಹಿತ್ಯ ಮತ್ತು ವ್ಲಾಡಿಮಿರ್‌ ಮಾಯಕೋವ್ಸ್ಕಿ ಯಂತಹ (Vladimir Mayakovsky) ಕವಿಗಳಿಂದ ಸ್ಫೂರ್ತಿ ಪಡೆದು ತಮ್ಮದೇ ಆದ ಒಂದು ಉದ್ಧಟ ಕಾವ್ಯ ಶೈಲಿಯಿಂದ ಸ್ವೀಡಿಷ್ ಕಾವ್ಯಲೋಕದಲ್ಲಿ ಸ್ಫೋಟಕ ಪ್ರವೇಶ ಮಾಡಿದರು. ಈ ಅವಧಿಯಲ್ಲಿ ಡಿಲನ್ ಅವರ ಹಾಡುಗಳನ್ನು ಸ್ವೀಡಿಷ್ ಭಾಷೆಗೆ ಕವಿತೆಗಳಾಗಿ ಅನುವಾದಿಸಿದರು. ಓಯ್‌ಯೆರ್-ರವರ ಆರಂಭಿಕ ಸಂಗ್ರಹಗಳಲ್ಲಿ ಡಿಲನ್ ಮತ್ತು ಅಲೆನ್ ಗಿನ್ಸ್‌ಬರ್ಗ್‌-ರ ಪ್ರಭಾವವು ಗಮನಾರ್ಹವಾಗಿದೆ. ಆರಂಭದಲ್ಲಿ ಬಾಬ್ ಡಿಲನ್ (Bob Dylan) ಅವರ ಗೀತ-ಸಾಹಿತ್ಯದಿಂದ ಸ್ಫೂರ್ತಿ ಪಡೆದರಲ್ಲದೆ, ಓಯ್‌ಯೆರ್ ಬಾಬ್ ಡಿಲನ್-ರ ಹಾಗೆ ತನ್ನ ವ್ಯಕ್ತಿತ್ವವನ್ನು ಕೂಡ ರೂಪಿಸಿಕೊಂಡರು. ಆದಾಗ್ಯೂ, ಅವರ ಕವಿತೆಗಳು ವಾಚನ-ಗಾಯನ ಪ್ರದರ್ಶನಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಅವರ ಕವನಗಳು ತಮ್ಮ ಸಹಜ ಮತ್ತು ಕೌಶಲ್ಯಪೂರ್ಣ ಭಾವಗೀತಾತ್ಮಕತೆ ಮತ್ತು ಆಗಾಗ್ಗೆ ಅತಿವಾಸ್ತವಿಕ ಶಕ್ತಿಯಿಂದ ಪುಟದ ಮೇಲೆ ಇನ್ನಷ್ಟು ಆಕರ್ಷಕವಾಗಿ ಮೂಡಿ ಬರುತ್ತವೆ.

1990-ರ ದಶಕದಲ್ಲಿ ಅವರು ಮತ್ತೆ ಕಾವ್ಯ ರಚನೆಯತ್ತ ಗಮನ ಹರಿಸಿ, ಮೂರು ಕವನ ಸಂಕಲನಗಳನ್ನು ಹೊರತಂದರು – Medan giftet verkar (While The Poison Acts, 1990), Det förlorade ordet (The Lost Word, 1995), ಮತ್ತು Dimman av allt (The Fog Over Everything, 2001). ಈ ಮೂರು ಕವನ ಸಂಕಲನಗಳು ಒಟ್ಟಾಗಿ ಅವರ “classic trilogy” ಎಂದು ಈಗ ಪ್ರಸಿದ್ಧವಾಗಿದೆ.

While the Poison Acts ಮತ್ತು ಟ್ರಿಲಜಿ-ಯ ಉಳಿದೆರಡು ಸಂಕಲನಗಳು ವ್ಯಾಪಕವಾಗಿ ಮೆಚ್ಚುಗೆ ಪಡೆದವು. ಓಯ್‌ಯೆರ್-ರವರ ಸ್ವಚ‌್ಛಂದ ಉನ್ಮತ್ತ, ಬೀಟ್-ಪ್ರಭಾವಿತ, ಅತಿವಾಸ್ತವಿಕವಾದ ರೂಪಕಗಳ ಬಗ್ಗೆ ಈ ಹಿಂದೆ ಸಂಶಯ ವ್ಯಕ್ತಪಡಿಸಿದ ಪಂಡಿತ ವಿಮರ್ಶಕರು ಮತ್ತು ಕವಿಗಳು ಸಹ ಅವರ ಈ ಕಾವ್ಯ ಸಂಕಲನಗಳನ್ನು ಇದ್ದಕ್ಕಿದ್ದಂತೆ ಸ್ವಾಗತಿಸಿದರು. “ನೊಬೆಲ್ ಪ್ರಶಸ್ತಿ ವಿಜೇತ ಕವಿ ಟೊಮಾಸ್ ಟ್ರಾನ್ಸ್ಟ್ರೋಮರ್-ರ (Tomas Tranströmer) ನಂತರ ಬಂದ ಅತ್ಯಂತ ಮೈಮರೆಸುವ ಸ್ವೀಡಿಷ್ ಕವಿ ಬ್ರೂನೊ ಕೆ. ಓಯ್‌ಯೆರ್,” ಎಂದು ಖ್ಯಾತ ಸ್ವೀಡಿಷ್ ಕವಿ-ವಿಮರ್ಶಕ ಲಾರ್ಸ್ ಗುಸ್ಟಾಫ್ಸನ್ ಅವರು (Lars Gustafsson) ಘೋಷಿಸಿದರು. ಕುಖ್ಯಾತ ಬಂಡಾಯ ಕವಿಯೆಂದು ಹಿಂದೆ ಛಾಪು ಪಡೆದ ಓಯ್‌ಯೆರ್ ಈಗ ಸ್ವೀಡಿಷ್ ಕವಿಗಳ ಅಧಿಕೃತ ವಂಶಾವಳಿಯಲ್ಲಿ ಹೆಸರು ಪಡೆದಿದ್ದಾರೆ. ಇಂದಿಗೂ, ಓಯ್‌ಯೆರ್-ರನ್ನು ಆಗಾಗ್ಗೆ ಟ್ರಾನ್ಸ್‌ಟ್ರೋಮರ್‌ಗೆಗೆ ಹೋಲಿಸಲಾಗುತ್ತದೆ; ‘ದಿ ಟ್ರಿಲಜಿ’-ಯ ಸಂಗ್ರಹಿತ ಆವೃತ್ತಿಯ ಬೆನ್ನುಡಿಯಲ್ಲಿ ಅವರನ್ನು ಹೆಸರಾಂತ ಸ್ವೀಡಿಷ್ ಕವಿಗಳಾದ ಕಾರ್ಲ್ ಮೈಕೆಲ್ ಬೆಲ್‌ಮನ್, ಗುಸ್ಟಾಫ಼್ ಫ್ರೋಡಿಂಗ್ ಮತ್ತು ಗುನ್ನಾರ್ ಎಕೆಲೋಫ಼್-ಗೆ (Carl Michael Bellman, Gustaf Fröding, and Gunnar Ekelöf) ಹೋಲಿಸಲಾಗಿದೆ. ಇಲ್ಲಿಯವರೆಗೆ ಹತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಓಯ್‌ಯೆರ್ ಈಗ ಸ್ವೀಡಿಷ್ ರಾಷ್ಟ್ರೀಯ ಅಂಗೀಕೃತ ಕವಿಚಕ್ರದ ಭಾಗವಾಗಿದ್ದಾರೆ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಬ್ರೂನೊ ಕೆ. ಓಯ್‌ಯೆರ್-ರ ಐದೂ ಕವನಗಳನ್ನು ಮಲೆನಾ ಮೋರ್ಲಿಂಗ್ (Malena Mörling) ಮತ್ತು ಜೊನಸ್ ಎಲೆರ್ಸ್ತರೋಮ್ (Jonas Ellerström) ಅವರು
ಮೂಲ ಸ್ವೀಡಿಷ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

1
ಬಂದು ಸೇರಿದೆ
ಮೂಲ: Arrived

ರಸ್ತೆಬದಿಯಲ್ಲಿರುವ ಕೆರೆಗಳು ಕೂಡ
ಮಬ್ಬಾಗಿ ಸುಸ್ತಾಗಿ ಬಿದ್ದಿದ್ದವು
ಹಲವು ವಾರಗಳ ಮಳೆಯ ನಂತರ.
ಆದರೆ ನಾನು ಕೊನೆಗೂ ಬಂದು ಸೇರಿದೆ,
ನನ್ನೆಲ್ಲ ಸಾಮಾನುಗಳ ಜತೆ ಕಾರಿನಿಂದ ಇಳಿದೆ.
ಹೊರಗೆ ಹಂಚಿನ ಮಾಡಿನ, ಒಳಗೆ ಮರದ ಒಲೆಯ,
ಕೆಂಪು ಪೆಯಿಂಟ್ ಹಚ್ಚಿದ್ದ ಆ ಹಳೆಯ ಮನೆಗೆ
ತಡಕೊಳ್ಳಲಿಕ್ಕೆ ಆಗಲಿಲ್ಲ.
ಕಾಡಿನ ಅಂಚಿನಿಂದ ತನ್ನನ್ನು ಕಿತ್ತುಕೊಂಡು
ಓಡಿಬಂತು ನನ್ನತ್ತ ಕೈತೆರೆದು ಸ್ವಾಗತಿಸಲು.
ಆಕಾಶ ದಾರಿಯಲ್ಲಿ
ಬೇರೆನಿಲ್ಲ, ಬರೀ ಉದ್ದುದ್ದ ಸಪೂರ ಮೋಡ ಗೆರೆಗಳು,
ದೈವಗಳ ಗಾಲಿ ಗುರುತುಗಳ ಹಾಗೆ.
ನಡುಗಾಳಿಯಲ್ಲಿ ತಟ್ಟನೆ ನಿಂತುಬಿಟ್ಟವು,
ಬೆರಗಿನಲಿ
ಸದ್ದಿಲ್ಲದಂತಾದವು, ಇದನ್ನು ನೋಡಿ.

2
ಆರನೆಯ ಅಂತಸ್ತು
ಮೂಲ: 6th Floor

ಈಗ ಛಳಿ ಅನಿಸುವುದಿಲ್ಲ ನಿನಗೆ
ಹಸಿವು, ಬಾಯಾರಿಕೆ, ಯಾವುದೂ ಅನಿಸುವುದಿಲ್ಲ ನಿನಗೆ
ನಿನ್ನ ಜೀವವೆಂದರೆ ಪ್ರೀತಿ ನಿನಗೆ
ನಿನ್ನ ಪಯಣಗಳಲ್ಲಿ ನೀನೆಂದೂ ದಾರಿತಪ್ಪಿದ್ದಿಲ್ಲ.

ನಾನಿಲ್ಲಿ ಮಲಗಿರುವೆ, ರಾತ್ರಿಯಲಿ ನೀನು
ಮೆಲ್ಲನೆ ತುದಿಗಾಲಲ್ಲಿ ಹೊರಹೋಗುವುದು,
ನದಿಯನ್ನು ನಿರ್ವಸ್ತ್ರಗೊಳಿಸಿ,
ನೀರನ್ನು ನಿನ್ನ ದೇಹದ ಪಕ್ಕದಲ್ಲಿ ಮಲಗಿಸುವುದು,
ಕೇಳಿಸುವುದು ನನಗೆ.

3
ನಾನು ನಟಿಸಿದೆ
ಮೂಲ: I Pretended

ನೀನು ಇಲ್ಲವೆಂದು.
ನಿನ್ನ ಮುಖವನ್ನು ಮುಟ್ಟುವಂತೆ ನಟಿಸಿದಾಗ
ನಿನ್ನ ಮುಖ ನೀರಾಗಿ ಕರಗಿ
ದಿಂಬಿನ ಮೇಲೆ ಬೆಳಕಿನ ಪ್ರತಿಫಲನಗಳಾಗಿ ಹರಡಿತು.
ಆ ಕೋಣೆ ಆಗಲೆ ತನ್ನ ಬಟ್ಟೆಗಳ ಬದಲಿಸಿ
ಕಾಡಿನ ಒಂದು ಸವರಿದ ಜಾಗವಾಗಿ ಮಾರ್ಪಟ್ಟಿತ್ತು.
ಅಲ್ಲಿ ಒಬ್ಬಳು ಕಿನ್ನರಿ ತನ್ನ ಸಣ್ಣ
ಹಸಿರು ಡೆಸ್ಕಿನ ಹಿಂದೆ ಕೂತಿದ್ದಳು,
ಡೆಸ್ಕಿನ ಅರೆಗಳು ಸೆಳೆದಿದ್ದವು,
ಇಬ್ಬನಿಯಿಂದ ಒದ್ದೆಯಾಗಿದ್ದವು.
ಅವಳು ದಾರಿತಪ್ಪಿ ಜನವಾಸಿತ ಪ್ರದೇಶಗಳಿಗೆ ಹೋಗಿದ್ದಳು,
ಗಾಬರಿಯಾಗಿ ಕಣ್ಣೀರು ಸುರಿಸುತ್ತಾ
ತನ್ನನ್ನು ಮರಳಿ ಮನೆಗೆ
ಬರೆಯಿಸಿಕೊಳ್ಳಲು ತೀವ್ರಗತಿಯಲ್ಲಿ ಯತ್ನಿಸಿದಳು.
ನೀಲಿ-ಬೆರಿಗಳಿಂದ ತುಂಬಿದ ಶಾಯಿ-ಸೀಸೆ
ಮಗುಚಿ ಬಿದ್ದಿತು.
ಪದಗಳು, ವಾಕ್ಯಗಳು,
ಅವಳ ಕೈಗಳ ಸುತ್ತ ಹಾರಾಡಿದವು,
ಗಾಳಿಯು ಹಿಡಿದು ಕಡಿದ
ಸಾಬೂನಿನ ನೀರ್ಗುಳ್ಳೆಗಳಂತೆ
ಸಿಡಿದವು.

4
ಆ ಹಾಡು
ಮೂಲ: The Song

ಮಳೆ ಮಂಕಾಗುತ್ತಾ ಹೋಯ್ತು
ಬಾಗಿಲುಗಳಿಗೆ ಬಡಿಯುವುದ ನಿಲ್ಲಿಸಿತು
ಸಿಯೆನಾ*-ದ ಹೊಟೆಲ್ ರೂಮೊಂದರಲ್ಲಿ
ಕಣ್ತೆರೆದು ಮಲಗಿದ್ದೆ
ದೂರದ ಮಾತುಗಳನ್ನ, ನಗೆಗಳನ್ನ ಕೇಳುತ್ತ
ಕಿರಿದಾದ ಓಣಿಗಳಲ್ಲಿ ಮಾಯವಾಗುತ್ತಿರುವ
ಹೆಂಗಸರ ಹೈ-ಹೀಲ್ಸ್-ಗಳ ಹಾಡನ್ನು ಕೇಳಿದೆ
ಇದು ನಿನ್ನ ಊರಲ್ಲವಾ ಎಂಬುದರ ಬಗ್ಗೆ ಯೋಚಿಸಿದೆ

ಹೇಗೆ ಶರತ್ಕಾಲದ ಒಂದು ರಾತ್ರಿ
ನೀನು ನಾನು ಇಲ್ಲಿಂದ ದೂರದ
ನನ್ನ ಚಳಿಭರಿತ, ಹಿಂದುಳಿದ ನಾಡಿನಲ್ಲಿ ಭೇಟಿಯಾದಾಗ
ನಿನ್ನ ಕೈಯಲ್ಲಿ ಕೀಟ್ಸ್ ಮತ್ತು ಶೆಲ್ಲಿಯ
ಕವನಗಳ ಪುಸ್ತಕವಿತ್ತು
ನನ್ನನ್ನು ಕಂಡು ನಿನಗೆ ಖುಷಿಯಾದಂತೆ ಅನಿಸಿತು ನನಗೆ
ಒಂದು ಉದ್ದನೆಯ ಹಳೆಯ ಫ್ಯಾಶನ್ನಿನ
ಉಡುಪು ತೊಟ್ಟಿದ್ದೆ ನೀನು
ದಾ ವಿಂಚಿ** ನೇವರಿಸಬಹುದಾದಂತಹ
ಕಪ್ಪು ಕೂದಲು ನಿನ್ನದು
ನಮ್ಮಿಬ್ಬರಿಗೂ ಬರೇ ಇಪ್ಪತ್ತರ ವಯಸ್ಸು ಆಗ
ಯಾಕೆ ನಿನಗೆ ಬದುಕಲು ಅನುಮತಿ ದೊರೆಯಲಿಲ್ಲ
ಈ ಲೋಕಕ್ಕೆ ನಿನ್ನ ಭೇಟಿ
ಇಷ್ಟು ಅಲ್ಪಕಾಲದ್ದಾಗಿರುತ್ತೆ ಎಂದು
ಯಾಕೆ ಅರಿವಾಗಲಿಲ್ಲ ನನಗೆ ಅಂದು
ಎಂದೆಲ್ಲಾ ಯೋಚಿಸಿದೆ

*ಸಿಯೆನಾ – ಇಟಲಿ ದೇಶದ ಟಸ್ಕನಿ ಪ್ರಾಂತದಲ್ಲಿರುವ ಒಂದು ನಗರ
**ದಾ ವಿಂಚಿ – ಖ್ಯಾತ ಚಿತ್ರಕಾರ ಲಿಯೊನಾರ್ದೊ ದಾ ವಿಂಚಿ

5
ನಮ್ಮಲ್ಲಿ ಪ್ರತಿಯೊಬ್ಬರೂ
ಮೂಲ: Each and every one of us

ನಾನು ಯಾರಿಂದಲೂ ಸೌಖ್ಯವನ್ನು ಕೋರಲಿಲ್ಲ
ನನಗೆ ಚೆನ್ನಾಗೆ ಗೊತ್ತಿತ್ತು
ಸೌಖ್ಯವೆನ್ನುವುದು ಕೋರಿದರೂ ಸಿಗುವುದಿಲ್ಲವೆಂದು
ನಮ್ಮಲ್ಲಿ ಪ್ರತಿಯೊಬ್ಬರೂ ಒಂದು ದ್ವೀಪದ ಹಾಗೆ
ನಮ್ಮ ನಮ್ಮ ಕತ್ತಲುಗಳನ್ನ
ನಾವೇ ಬಾಚಬೇಕು
ನಮ್ಮ ನಮ್ಮ ಅಸಹಾಯಕತೆಗಳನ್ನ
ನಾವೇ ನೋಡಿಕೊಳ್ಳಬೇಕು
ಇಲ್ಲಿ ಇತ್ತೆಂದು ಅನಿಸಿದ ಲೈಟ್‌ಹೌಸು
ಎಷ್ಟೋ ವರ್ಷಗಳ ಹಿಂದೆ ಕೊಳ್ಳೆಹೊಡೆಯಲಾಗಿತ್ತು
ಎಲ್ಲಾ ಮನುಜರೂ ತಮ್ಮ ಜತೆ ತಮ್ಮ ತಮ್ಮ
ಬೆಳಕಿನ ಸಣ್ಣ ಸಿಬಿರುಗಳನ್ನು ಒಯ್ಯುತ್ತಾರೆ
ತಮ್ಮ ಮತ್ತು ಇತರರ ದಾರಿತಪ್ಪಿಸುತ್ತಾರೆ
ನಾವು ಎಷ್ಟೇ ದೂರ ಎಷ್ಟೇ ದೀರ್ಘ ಪಯಣಿಸಿದರೂ
ನಮ್ಮ ಎದುರು ನಮ್ಮ ಕೈಗಳನ್ನ
ಕಾಣಲು ಸಹ ಕಷ್ಟಪಡುವೆವು
ಈ ಸಹಸ್ರಾರು ವರ್ಷಗಳಲ್ಲಿ ಬಾಳುಳಿದ
ಒಂದೇ ರಾಜ್ಯವೆಂದರೆ
ಅದು ಪಾತಾಳ ರಾಜ್ಯ
ನಾನು ಆಗಾಗ ಅಲ್ಲಿಗೆ ಹೋಗುವೆ
ಇಲ್ಲದ ರಸ್ತೆಗಳಲ್ಲಿ ನಡೆದಾಡುವೆ
ಕೆಡವಿದ, ಮರೆತ ಕೆಫೆಗಳಲ್ಲಿ ಕೂರುವೆ
ಆದರೆ ಅಲ್ಲಿ ಅದೇ ವಯಸ್ಸಾದ ವೇಯ್ಟರ್
ಅವನ ಬಗ್ಗೆ ನನಗೆ ಕಾಳಜಿಯಿದೆ
ಅವನು ತನ್ನ ಪಾತ್ರವನ್ನು ಪೂರ್ತಿಯಾಗಿ
ಕೊನೆಯವರೆಗೂ ನಿಭಾಯಿಸುವನು
ನನಗೆ, ನನ್ನ ಗೆಳೆಯರಿಗೆ ನಾವು ಯಾವಾಗಲೂ
ಕುಡಿಯುವ ವೈನ್ ನೀಡುವನು
ನಾವು ಗ್ಲಾಸುಗಳನ್ನು ಏರಿಸಿ ಒಬ್ಬರಿನ್ನೊಬ್ಬರಿಗೆ
ಸ್ವಸ್ತಿಪಾನ ಮಾಡುವಾಗ
ಗ್ಲಾಸುಗಳಿಂದ ಮಂಜನ್ನು ಕುಡಿಯುವೆವು
ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ
ನಾವು ಅಲ್ಲಿ ಇಲ್ಲ ಎಂಬ ಅರಿವಿದೆ
ನಮ್ಮ ಬೆನ್ನಹಿಂದಿರುವ ಗೋಡೆಯ ಮೇಲೆ
ನೇತು ಹಾಕಿರುವ ಉದ್ದನೆಯ ಚಿಕ್ಕಗಲದ
ತೈಲಚಿತ್ರದಲ್ಲಿ ಮಾತ್ರ ನಾವಿದ್ದೇವೆ
ಚಿತ್ರದಲ್ಲಿ ಬಿಡಿಸಿದ ಅಲ್ಲಿ ಸೇರಿರುವ ಪಾತ್ರಗಳು
ತಮ್ಮ ಹೃದಯಗಳನ್ನು ಕಿತ್ತು
ಹುಲ್ಲಿನ ಮೇಲೆ ಜೋಪಾನವಾಗಿ ಇಟ್ಟಿದ್ದಾರೆ
ಚಿತ್ರದ ಹಿನ್ನೆಲೆಯಲ್ಲಿ ಕಾಣುವ
ಕಪ್ಪನೆಯ, ಹಿಮಶೀತಲ ನದಿ
ಸುತ್ತಿಬರುತ್ತಾ ತನ್ನನ್ನೇ ಕತ್ತರಿಸಿಕೊಳ್ಳುತ್ತೆ
ತನ್ನನ್ನೇ ಬಿಡಿಸಿಕೊಳ್ಳಲು ಕಾಯುತ್ತಿರುವಂತೆ
ಎಲ್ಲವನ್ನೂ ಹೊದೆಯಲು ಕಾಯುತ್ತಿರುವಂತೆ