ಮತ್ತೇ ನನ್ನ ಅರಸುತ್ತಿಯಾ
ಸುಖಾ ಸುಮ್ಮನೆ
ಉಸಿರಿಲ್ಲದೆ
ಅಲೆಯುತ್ತೀಯಾ
ಅದೆಷ್ಟು ಕಾಲ ಉರುಳಿ ಹೋಯ್ತು
ಎಲುಬಿನ ಹಂದರದಲ್ಲಿ
ಮತ್ತೇ ನನ್ನ ಅರಸುತ್ತಿಯಾ?
ಒಂಟಿ ಗೆಜ್ಜೆಯ ನಾದ ನಿನಾದ
ಕಪ್ಪು ಕೋಲಿನ ಬಿಸಿಅಪ್ಪುಗೆ
ಬತ್ತಿದ ಬಾವಿಯ ತಳಮಳ
ಹಾಡು ಹಕ್ಕಿಯ ಕಳವಳ
ಇನ್ನೇನು ಉಳಿದಿದೆ
ಮತ್ತೇನನ್ನ
ಅಗೆಯುತ್ತಿಯಾ?
ನಿನ್ನದೇ ಅವಶೇಷಗಳಡಿಯಲ್ಲಿ
ಕಣ್ಣೀರ ಕುಡಿಯುವ ಹೃದಯಕ್ಕೆಲ್ಲಿ
ಜಾಗವಿದೆ
ಮತ್ತೇನನ್ನೊ ಅರುಹಿ
ನಿನ್ನನ್ನೇ ನೀನು ಕಳೆದುಕೊಳ್ಳುತ್ತಿಯಾ
ಅರ್ಥ ಅನರ್ಥಗಳ ಜಾಡಿನಲ್ಲಿ
ಗಾಯಗಳ ಕೂಸು ಸುಖಾ ಸುಮ್ಮನೆ ನರಳುತ್ತಿದೆ
ಬಿಗಿಯುವ ಕಣ್ರೆಪ್ಪೆಗಳಿಗೆ
ಮುರಿದು ಬಿದ್ದ ಅಸ್ತಿತ್ವಕ್ಕೆ
ಬೊಗಸೆ ನೆತ್ತರಿಗೆ
ತುಟಿ ಹಚ್ಚುವೆಯಾ?
ಮನದ ಕಂದೀಲ ಕಾಡಿಗೆಯ ಹೀರಬಲ್ಲೆಯಾ?
ಸುಖಾ ಸುಮ್ಮನೆ
ಆತ್ಮವು ದಣಿದಿದೆ
ಗೆಳೆಯ
ಕಾಲಗರ್ಭದೊಳ ಹೊರ
ಕಾದಾಟಕ್ಕೆ
ಅಸ್ತಿತ್ವದ ಪರದಾಟಕ್ಕೆ
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಒಳ್ಳೆಯ ಕವಿತೆ
ಅರ್ಥಪೂರ್ಣ. ಸೊಗಸಾಗಿದೆ. ಅಭಿನಂದನೆಗಳು.