ಮಂಜಿಯ ಕೊನೆಯ ಮಗಳು ತಿಂದದ್ದನ್ನೆಲ್ಲ ವಾಂತಿ ಮಾಡುತ್ತ, ಏನನ್ನೂ ತಿನ್ನದೇ ದಿನವೊಂದರಲ್ಲೇ ಬವಳಿಬಂದು ಮಲಗಿದಾಗ ಹೊರಗೆಲ್ಲೋ ತಿರುಗಾಡಲು ಹೋದಾಗ ಮರ್ತ್ಯು ಹೊಡೆಯಿತೆಂದೇ ಹೆಂಗಸರೆಲ್ಲ ತಿಳಿದಿದ್ದರು. ಮಗುವನ್ನು ನೋಡಿದ ಮಾದೇವಿ ತನ್ನ ಬ್ಯಾಗಿನಲ್ಲಿದ್ದ ಅದೆಂಥದ್ದೋ ಪುಡಿಯನ್ನು ನೀರಿನಲ್ಲಿ ಕರಗಿಸಿ, ಇಷ್ಟಿಷ್ಟೇ ಮಗುವಿನ ಬಾಯಿಗೆ ಹಾಕುತ್ತ ಅವಳು ಎಚ್ಚರಗೊಳ್ಳುವಂತೆ ಮಾಡಿದ್ದಳು. ಅದೇನೋ ಮಾಯಕವಿತ್ತೋ ಆ ಬಿಳಿಯ ಪುಡಿಯಲ್ಲಿ! ಕಮಲಿಯ ಮಗನಿಗೆ ಇದ್ದಕ್ಕಿದ್ದಂತೆ ರಾತ್ರಿ ಜ್ವರ ಬಂದು ತಲೆಗೇರಿ ಏನೇನೋ ಬಡಬಡಾಯಿಸುತ್ತಿರುವಾಗಲೂ ಹಾಗೆ, ಅದೇನೋ ಮಾತ್ರೆಯ ತುಂಡೊಂದನ್ನು ಕುಡಿಸಿ, ರಾತ್ರಿಯಿಡೀ ತಲೆಗೆ ತಣ್ಣೀರ ಪಟ್ಟಿಯಿಟ್ಟು ಜ್ವರವನ್ನು ಓಡಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ
ಹೊಳೆಸಾಲಿನ ಸೂರ್ಯ ಬೆಟ್ಟದ ನಡುವೆ ಮೆಲ್ಲನೆ ಮರೆಯಾಗುವ ಹೊತ್ತಿನಲ್ಲಿ ಹಕ್ಕಿಗಳೆಲ್ಲ ತಮ್ಮ ಗೂಡುಗಳಿಗೆ ಹಾರತೊಡಗಿದರೆ ದುಡಿಮೆ ಮುಗಿಸಿ ಹೊರಟ ಹೆಂಗಸರೂ ತಮ್ಮ ಬೊಗಸೆ ತುಂಬಾ ಅಂದಿನ ಅಡುಗೆಗೆ ಒದಗುವ ಸೊಪ್ಪು, ತರಕಾರಿ, ಗಡ್ಡೆ, ಗೆಣಸುಗಳನ್ನು ತುಂಬಿಕೊಂಡು ಮನೆಯೆಡೆಗೆ ನಡೆಯುತ್ತಿದ್ದರು. ಆದರೆ ಈ ಗಂಡಸರು ಮಾತ್ರ ಸಂಜೆಯ ಖಾರದಡುಗೆಗೆ ಮೀನು-ಗೀನು ತರುವ ನೆಪವೊಡ್ಡಿ ಮನೆಯಿಂದ ಹೊರಬೀಳುತ್ತಿದ್ದರು. ಹಾಗೆ ಹೊರಟ ಸವಾರಿಗಳೆಲ್ಲವೂ ಊರ ಸಂಧಿಯಲ್ಲೆಲ್ಲೋ ಇರುವ ಸಾರಾಯಿ ಮಾರುವ ಮನೆಯಂಗಳಕ್ಕೆ ಹೋಗಿ ತಲುಪುತ್ತಿತ್ತು. ಮನೆಯಲ್ಲಿ ಪುಡಿಗಾಸು ಇದ್ದವರು ಅದನ್ನೇ ತಮ್ಮ ಕಿಸೆಯಲ್ಲಿ ತುರುಕಿಕೊಂಡು ಹೊರಟರೆ, ಇಲ್ಲದವರು ಮನೆಯೊಳಗಿರುವ ಅಲ್ಪ ಸ್ವಲ್ಪ ಅಡಿಕೆ, ತೆಂಗು, ಪಾತ್ರೆ, ಪಗಡೆ ಏನಿಲ್ಲದಿದರೆ ಹೆಂಡತಿ ಮಕ್ಕಳ ಮೈಮೇಲಿರಬೇಕಾದ ಬೆಳ್ಳಿಯ ಚೂರುಪಾರು ಒಡವೆಯನ್ನಾದರೂ ಕಿಸೆಯಲ್ಲಿಟ್ಟುಕೊಂಡು ಹಾಜರಿ ಹಾಕುತ್ತಿದ್ದರು. ಸರಕಾರವೇ ಪರವಾನಗಿ ನೀಡಿದ ಮೀಟರಿನಂಗಡಿ ಹಳ್ಳಿಯಾಚೆಗೆ ಮಡಲಿನ ಗುಡಿಸಲಿನಲ್ಲಿ ಇತ್ತಾದರೂ ಗೇರುಹಣ್ಣಿನ ಸಾರಾಯಿಯೆದುರು ಅದು ಸಪ್ಪೆಯೆನಿಸುತ್ತಿತ್ತು. ಅಲ್ಲೋ, ಇಲ್ಲೋ ಎಲ್ಲೋ ಅಂತೂ ಸಂಜೆಯಾಗುತ್ತಲೇ ಇಡಿಯ ಊರಿನ ಗಂಡು ಲೋಕಕ್ಕೊಂದು ಅಮಲು ನೆತ್ತಿಗೇರುತ್ತಿತ್ತು.
ಮಿತಿಯಲ್ಲಿರುವವರು ಕತ್ತಲಾಗುವ ಮುಂಚೆ ಒಂದೆರಡು ಬಂಗಡೆಯನ್ನು ಚೀಲಕ್ಕೆ ತುರುಕಿ ಮನೆಸೇರಿ ಹೆಂಗಸರು ಬಚ್ಚಲಿನಲ್ಲಿ ಕಾಯಿಸಿಟ್ಟ ಬಿಸಿನೀರನ್ನು ಮೈತುಂಬಾ ಎರೆದುಕೊಂಡು, ಉಂಡು ಮುಸುಕು ಹಾಕಿ ಮಲಗಿದರೆ ಮಿತಿ ಮೀರಿದವರದು ಬೇರೆಯೇ ಲೋಕ. ಗದ್ದೆಯ ಬದುವಿನ ಮೇಲೆ ನಡೆಯಲಾಗದೇ ಕಾಲು ಜಾರುತ್ತಾ, ಗದ್ದೆಯ ಕೆಸರನ್ನು ಮೈತುಂಬಾ ಮೆತ್ತಿಕೊಳ್ಳುತ್ತಾ, ಕೈಯ್ಯಲ್ಲಿದ್ದ ಸಾಮಾನಿನ ಚೀಲವನ್ನು ಆಯುಧವೇನೋ ಎಂಬಂತೆ ಝಳಪಿಸುತ್ತಾ, ಎಚ್ಚರದ ಸ್ಥಿತಿಯಲ್ಲಿ ಹೇಳಲಾಗದ್ದನ್ನು ನಿರ್ಭಿಡೆಯಿಂದ ಕೂಗಿ ಹೇಳುತ್ತಾ, ಬೆಳಕಿನಲ್ಲಿ ಬಟ್ಟೆಯುಟ್ಟುಕೊಂಡವರನ್ನು ಮಾತಿನಲ್ಲಿಯೇ ಬೆತ್ತಲಾಗಿಸುತ್ತ, ತಮ್ಮ ಲಂಗೋಟಿ ಜಾರಿಹೋದದ್ದನ್ನು ಗಮನಿಸದೇ ಅಕ್ಷರಶಃ ನಿರ್ವಾಣ ಸ್ಥಿತಿಯನ್ನು ತಲುಪುತ್ತಿದ್ದರು. ಹೀಗೆ ಎಲ್ಲಿಯೋ ಅರೆಉಸಿರು ಬಿಡುತ್ತಾ ಮಲಗಿದವರನ್ನು ಕಂಡವರು ಕರುಣೆಯಿಂದ ಮನೆಗೆ ತಲುಪಿಸುತ್ತಿದ್ದರು. ಮರುದಿನ ಹಗಲಿನ ಅರ್ಧಭಾಗ ತಮ್ಮ ನಡವಳಿಕೆಯ ಬಗ್ಗೆ ನಾಚಿಕೆಯಿಂದ ತಲೆತಗ್ಗಿಸಿ ತಿರುಗುವ ಇವರು, ಮಧ್ಯಾಹ್ನ ಕಳೆದು ಸಂಜೆಯಿಳಿದರೆ ಸಾಕು, ಮತ್ತದೇ ಅಮಲು ಲೋಕಕ್ಕೆ ಹಂಬಲಿಸಿ ನಶೆಯ ದಾರಿ ಹಿಡಿಯುತ್ತಿದ್ದರು.
ಇಂದಾದರೂ ಹಿಡಿಮೀನು ತಂದಾರೆಂದು ಹಂಬಲಿಸಿ, ಕಟುಖಾರ ಕಡೆದಿಟ್ಟು ಕಾಯುವ ಹೆಂಗಸರು ಕಂಬದಂಚಿಗೆ ಕುಳಿತು ಗಂಡ ಬರುವ ದಾರಿಯನ್ನು ದಿಟ್ಟಿಸುತ್ತಿದ್ದರು. ಅಪರೂಪಕ್ಕೊಮ್ಮೆ ಅಪ್ಪನ ಕಿಸೆಯಿಂದ ಸಿಗುವ ಪೆಪ್ಪರಮೆಂಟಿನ ಕನಸಿನಲ್ಲಿರುವ ಮಕ್ಕಳು ಮಾತ್ರ ಹೀಗೆ ಕಾಯಲಾರದೇ ಅಂಗಳದ ಅಂಚಿನಲ್ಲಿ ನಿಂತು ಸಾಧ್ಯವಿರುವಷ್ಟು ದೊಡ್ಡ ದನಿ ತೆಗೆದು, “ಓ…. ಅಪ್ಪಾ. ಬಾರೋ, ಬಾರೋ, ಬಾರೋ…” ಎಂದು ರಾಗವಾಗಿ ಕರೆಯುತ್ತಿದ್ದರು. ಒಂದು ಮನೆಯ ಅಂಗಳದಿಂದ ಪ್ರಾರಂಭವಾಗುವ ಈ ದನಿ ನಿಧಾನವಾಗಿ ಅಂಗಳದಿಂದ ಅಂಗಳಕ್ಕೆ ಸಾಂಕ್ರಾಮಿಕವಾಗುತ್ತ ಇಡಿಯ ಹೊಳೆಸಾಲು ಅಪ್ಪಂದಿರನ್ನು ಕರೆಯುವ ಮಕ್ಕಳ ಹಾಡನ್ನು ತಾನೇ ತಾರಕ ಸ್ಥಾಯಿಯಲ್ಲಿ ಹಾಡುತ್ತಿರುವುದೇನೋ ಎಂಬಂತೆ ಭಾಸವಾಗುತ್ತಿತ್ತು. ಆ ಪುಟ್ಟ ಮಕ್ಕಳ ದನಿ ತನ್ನ ನೀರಿನ ಸೆಳವನ್ನು ದಾಟಿ ಆಚೆಗೆ ಹರಿಯಲಾರದೆಂದು ಗೊತ್ತಿದ್ದ ಹೊಳೆಯು ದುಃಖದ ಮಡುವಿಗೆ ಜಾರುತ್ತ ಕಪ್ಪಾಗುತ್ತಿತ್ತು. ಅಂತೂ ಇಂತು ಮನೆತಲುಪುವ ಮಹಾನುಭಾವರು ಹೆಂಡತಿ ಬಡಿಸಿದ ಊಟವನ್ನು ಉಂಡು ಮಲಗಿದರೆ ಮನೆಯವರಿಗೆಲ್ಲ ಸ್ವರ್ಗಸುಖ. ಆದರೆ ಕುಡಿತದ ಗಂಡನಿರುವ ಮನೆಯಲ್ಲಿ ನರಕದ ಬಾಗಿಲು ಸದಾ ತೆರೆದೇ ಇರುತ್ತಿತ್ತು. ವಿನಾಕಾರಣ ಜಗಳ ತೆಗೆದು ಹೆಂಡತಿಯನ್ನು ಬಡಿದು, ಹಿಂಸಿಸಿ ಮಲಗದಿದ್ದರೆ ತನ್ನ ಪುರುಷಾರ್ಥಕ್ಕೆ ಅವಮಾನವೆಂದು ಭಾವಿಸಿದ ಜನಪದವದು. ಅಬಕಾರಿ ಖಾತೆಯ ಸಿಬ್ಬಂದಿಗಳು ವಾರಕ್ಕೆರಡು ಬಾರಿ ಹೊಳೆಸಾಲಿನ ಮನೆಗಳ ತಪಾಸಣೆ ನಡೆಸುತ್ತಿದ್ದರೂ ಸಾರಾಯಿಯೆಂಬ ಈ ನಶೆ ಅದು ಹೇಗೆ ಹೊಳೆಸಾಲಿನಲ್ಲಿ ಹರಿಯುತ್ತಿತ್ತೋ ಮಾರಮ್ಮನಿಗೇ ಗೊತ್ತು.
ಹೀಗಿರುವ ದಿನಗಳಲ್ಲೊಮ್ಮೆ ಇದ್ದಕ್ಕಿದ್ದಂತೆ ಕರಿಕಟ್ಟೆಯ ಲಚ್ಚಿ ಕಾಣೆಯಾಗಿದ್ದಳು. ಮಕ್ಕಳು, ಮೊಮ್ಮಕ್ಕಳನ್ನು ಹೊಂದಿದ್ದ ಅವಳು ಅರವತ್ತರ ಆಸುಪಾಸಿನಲ್ಲಿಯೂ ನೆಟ್ಟಿ, ಕಳೆ, ಕೊಯ್ಲು ಎಂದು ಊರಿನ ಹೆಣ್ಣುಮಕ್ಕಳೊಡನೆ ಕೆಲಸ ಮಾಡುತ್ತಿದ್ದಳು. ಇದ್ದೊಬ್ಬ ಮಗ ದೂರದ ಬಂದರಿನ ಊರಿನಲ್ಲಿ ಮೀನಿಗೆಂದು ಬೋಟು ಹತ್ತಿ ಹೋದರೆ ವರ್ಷದ ಆರು ತಿಂಗಳು ಮನೆಗೆ ಹಿಂದಿರುಗುತ್ತಿರಲಿಲ್ಲ. ಮದುವೆಯಾದ ಮಗಳು ಗಂಡನ ಮನೆಯಲ್ಲಿ ಇರಲಾಗದೇ ಇಲ್ಲಿಯೇ ದರಬಾರು ಮಾಡಿಕೊಂಡಿರುತ್ತಿದ್ದಳು. ತಿಂಗಳಿಗೋ, ಮಾಸಕ್ಕೋ ಬರುವ ಅವಳ ಗಂಡನ ಉದ್ಯೋಗವೇನೆಂದು ಊರಿನ ಯಾರಿಗೂ ತಿಳಿಯದಿದ್ದರೂ ಮನೆಯಲ್ಲಿರುವ ಎರಡೆಕೆರೆ ಭೂಮಿಯನ್ನು ಮಾತ್ರ ದಿನವೂ ಅಗೆದು, ತರಿದು ಕೆಂಬಣ್ಣಕ್ಕೆ ತಿರುಗಿಸುತ್ತಲೇ ಇರುತ್ತಿದ್ದ. ಅಷ್ಟೆಲ್ಲ ಕಾಮಗಾರಿ ಮಾಡುತ್ತಿರುವನೆಂದರೆ ಪೇಟೆಯಲ್ಲಿ ಅದೆಂಥದ್ದೋ ದೊಡ್ಡ ಕೆಲಸವೇ ಇರಬೇಕು ಎಂದು ಊರಿನವರೆಲ್ಲರೂ ಮಾತನಾಡುತ್ತಿದ್ದರು. ಲಚ್ಚಿಯ ಮಗಳು ಮಾತ್ರ ಗಂಡ ಬರುವುದನ್ನೇ ಕಾಯುತ್ತ ಇನ್ನೊಂದು ಗಳಿಗೆ ಅವನನ್ನು ಅಗಲಲಾರೆನೆಂದು ಅವನೊಂದಿಗೆ ಒತ್ತಿಕೊಂಡೇ ಇರುತ್ತಿದ್ದಳು. ಸಂಜೆಯ ವೇಳೆಗೆ ಊರ ಹೊರಗಿನ ಮೀಟರಿನಂಗಡಿಗೆ ಹೋಗಿ ಅವರಿಬ್ಬರೂ ಒಂದಿಷ್ಟು ಟೈಟಾಗಿ ಕೈ-ಕೈ ಹಿಡಿದುಕೊಂಡು ಹಾದಿ ತುಂಬಾ ಓಡಾಡುವ ದೃಶ್ಯವನ್ನು ಊರಿನವರೆಲ್ಲರೂ ಕದ್ದು ನೋಡುತ್ತಿದ್ದರು. ಲಚ್ಚಿ ಮಾತ್ರ ಇದಕ್ಕೂ ತನಗೂ ಏನೇನೂ ಸಂಬಂಧವಿಲ್ಲವೆಂಬಂತೆ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತ ದಿನದ ಗಂಜಿಗೆ ಉಪ್ಪುಖಾರ ಹುಟ್ಟಿಸುತ್ತಿದ್ದಳು.
ಅವಳ ಗಂಡ ಜಟ್ಟಿ ಹೆಸರಿಗೆ ತಕ್ಕಂತೆ ಜಟ್ಟಿಯೆ. ಆರಡಿಯ ಕಡೆದಿಟ್ಟ ಮಾಟದ ಆಳು. ಆದರೆ ಕೆಲಸವೆಂದರೆ ಅವನಿಗೆ ಎಂದೂ ಆಗಿಬರದ ವಿಷಯ. ಅದ್ಯಾವ ಕಾಲದಲ್ಲಿಯೋ ಬಿಳಿ ಮುಖದ ಮನುಷ್ಯರು ಹಳ್ಳಿಗೆ ಬರುವಾಗ ಅವರ ಸೇವೆಗೆಂದು ಅವನನ್ನು ನೇಮಿಸಿದ್ದರಂತೆ. ಅವರ ಊಟಕ್ಕೆ ಕಾಡಿನಲ್ಲಿರುವ ಮೊಲಗಳನ್ನು, ಬರ್ಕಗಳನ್ನು, ಉಡಗಳನ್ನು, ಚಿಗರೆಗಳನ್ನು ಶಿಕಾರಿ ಮಾಡುವುದು ಅವನ ಕೆಲಸವಾಗಿತ್ತಂತೆ. ಬಿಳಿಯರು ಮಾಂಸವನ್ನು ಭರ್ಜಿಯಂತಹ ಚಮಚಗಳಲ್ಲಿ ಕತ್ತರಿಸಿ ತಿನ್ನುವುದನ್ನು ಅಭಿನಯಿಸುತ್ತ, ಅವರ ಅಡುಗೆಯ ಬಗ್ಗೆ ರಸವತ್ತಾಗಿ ವಿವರಿಸುತ್ತಾ, ಅಲ್ಲಲ್ಲಿ ಅಂಗ್ರೇಜಿ ಪದಗಳನ್ನು ಉಚ್ಚರಿಸುತ್ತಾ ಸ್ವಾತಂತ್ರ್ಯ ಪೂರ್ವದ ಪಳೆಯುಳಿಕೆಯಂತೆ ಅವನು ಊರ ತುಂಬಾ ತಿರುಗುತ್ತಿದ್ದ. ಅವನ ಮಾತುಗಳನ್ನು ಯಾರೂ ನಂಬುತ್ತಿಲ್ಲವಾದರೂ ಊರ ಹೊರಗಿನ ಕಾಡಿನಲ್ಲಿ ಈಗಲೂ ಬಾಗಿಲು ಮುಚ್ಚಿಕೊಂಡಿರುವ ದೊಡ್ಡ ಬಂಗಲೆಯೊಂದು ಫರಂಗಿಗಳು ಅಲ್ಲಿಗೆ ಬರುತ್ತಿದ್ದುದಕ್ಕೆ ಸಾಕ್ಷಿಯಾಗಿ ನಿಂತಿತ್ತು. ಹೀಗಿದ್ದ ಜಟ್ಟಿಗೆ ದಿನವೂ ಕುಡಿಯಲು ಹಣವನ್ನು ಲಚ್ಚಿಯೇ ಕಡ್ಡಾಯವಾಗಿ ನೀಡಬೇಕಿತ್ತು.
ನಿನ್ನೆಯಷ್ಟೇ ತಮ್ಮೊಂದಿಗೆ ಗದ್ದೆಯಲ್ಲಿ ಸುವ್ವೀ ಎಂದು ರಾಗವಾಗಿ ಹಾಡುತ್ತಾ ಕಳೆತೆಗೆದವಳು ಇಂದು ಕೆಲಸಕ್ಕೆ ಬಾರದಾಗ ಊರ ಹೆಂಗಸರು ಅವಳ ಮನೆಯಂಗಳದಲ್ಲಿ ನಿಂತು ಜಟ್ಟಿಯನ್ನು ಕೇಳಿದರು. ಅವನು ಸಾರಾಯಿ ಬುಡ್ಡಿಯನ್ನು ಲೋಟಕ್ಕೆ ಬಗ್ಗಿಸುತ್ತಾ, “ಎಲ್ಲಿ ಹಾಳಾಗೋದ್ಲೋ? ನಂಗೇನು ಗೊತ್ತು?” ಎಂದು ಉಡಾಫೆಯ ಮಾತನಾಡಿದ್ದ. ಮಗಳೂ, ಅಳಿಯನೂ ಪೇಟೆಯ ಸುಖಕ್ಕೆ ಹೋಗಿದ್ದರಿಂದ ಇನ್ಯಾರನ್ನು ಕೇಳುವುದೆಂದು ಹೆಂಗಸರು ವಾಪಸ್ಸಾದರು. ಮರುದಿನವೂ ಅವಳ ಸುಳಿವು ಸಿಗದಾಗ ಮನೆಯ ಹತ್ತಿರ ನಿಂತು ಪರಾಂಬರಿಸಿದರು. ಮನೆಯೊಳಗಿಂದ ಸಣ್ಣ ನರಳುವಿಕೆ ಕೇಳಿದಂತಾಗಿ ಗುಂಪಾಗಿ ಒಳನುಗ್ಗಿದರೆ ಲಚ್ಚಿ ಸಾವು, ಬದುಕಿನ ನಡುವೆ ಹೊರಳಾಡುತ್ತಿದ್ದಳು. ಕುಡಿತದ ಅಮಲಿನಲ್ಲಿ ಕಾಡುಮೊಲದ ತಲೆಗೆ ಹೊಡೆದಂತೆ ಹೆಂಡತಿಯನ್ನು ಬಡಿದು ನೆಲಕ್ಕೆ ಉರುಳಿಸಿದ ಜಟ್ಟಿ ಮುಂದೇನು ಮಾಡಲು ತೋಚದೇ ಅವಳ ಕೊರಳಿನಲ್ಲಿರುವ ತಾಳಿಯನ್ನು ಸಾರಾಯಿ ಅಂಗಡಿಗೆ ಕೊಟ್ಟು ಬುಂಡೆಯನ್ನೇ ಖರೀದಿಸಿ ಬಂದಿದ್ದ. ಅವಳು ನೀರು ಎಂದು ಕನವರಿಸಿದಾಗಲೆಲ್ಲ ಸಾರಾಯಿಯನ್ನು ಅವಳ ಗಂಟಲಿಗೆ ಸುರಿದು ನೋವು ತಿಳಿಯದಂತೆ ಮಾಡುತ್ತಿದ್ದ. ಎದ್ದೇಳಲಾರದ ಲಚ್ಚಿ ಇನ್ನೇನು ದಿನ ಕಳೆದರೆ ಊರಿನ ನಂಟು ಕಳೆದುಕೊಳ್ಳುವಂತಿದ್ದಳು. ಅವಳನ್ನು ಈ ಸ್ಥಿತಿಯಲ್ಲಿ ನೋಡಿ ಬೆಚ್ಚಿದ ಹೆಂಗಸರು ತಮ್ಮ ಮನೆಯ ತರುಣರನ್ನು ಕರೆತಂದು ಸಾರಾಯಿಯ ಅನಾಹುತವನ್ನು ಅವರ ಕಣ್ಣೆದುರಲ್ಲಿ ತೋರಿಸುತ್ತಾ ಕಂಬಳಿಯಲ್ಲಿ ಕಟ್ಟಿ ತಾಲೂಕಿನ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಡಾಕ್ಟರರ ಸೂಚನೆಯಂತೆ ಜಟ್ಟಿಗೊಂದು ಬುದ್ದಿ ಕಲಿಸೋಣವೆಂದು ಅವನ ಮೇಲೆ ಕೇಸೊಂದನ್ನು ದಾಖಲಿಸಿದರು. ಇವೆಲ್ಲದರ ಪರಿವೆಯೇ ಇಲ್ಲದ ಜಟ್ಟಿ, “ಅಂಥ ಫಿರಂಗಿಯೋರ ಗುಂಡಿಗೇ ಹೆದರದ ಗಂಡು ನಾನು. ಇನ್ನು ಇವರೆಲ್ಲ ಯಾವ ಲೆಕ್ಕ?” ಎಂದೆನ್ನುತ್ತ ಬುಂಡೆಯನ್ನೆತ್ತಿ ಸಾರಾಯಿಯಲ್ಲಿ ಮೀಯುತ್ತಿದ್ದ.
ಕುಡಿತದ ಗಂಡನಿರುವ ಮನೆಯಲ್ಲಿ ನರಕದ ಬಾಗಿಲು ಸದಾ ತೆರೆದೇ ಇರುತ್ತಿತ್ತು. ವಿನಾಕಾರಣ ಜಗಳ ತೆಗೆದು ಹೆಂಡತಿಯನ್ನು ಬಡಿದು, ಹಿಂಸಿಸಿ ಮಲಗದಿದ್ದರೆ ತನ್ನ ಪುರುಷಾರ್ಥಕ್ಕೆ ಅವಮಾನವೆಂದು ಭಾವಿಸಿದ ಜನಪದವದು. ಅಬಕಾರಿ ಖಾತೆಯ ಸಿಬ್ಬಂದಿಗಳು ವಾರಕ್ಕೆರಡು ಬಾರಿ ಹೊಳೆಸಾಲಿನ ಮನೆಗಳ ತಪಾಸಣೆ ನಡೆಸುತ್ತಿದ್ದರೂ ಸಾರಾಯಿಯೆಂಬ ಈ ನಶೆ ಅದು ಹೇಗೆ ಹೊಳೆಸಾಲಿನಲ್ಲಿ ಹರಿಯುತ್ತಿತ್ತೋ ಮಾರಮ್ಮನಿಗೇ ಗೊತ್ತು.
ಆಸ್ಪತ್ರೆಯವರ ಕಂಪ್ಲೇಂಟಿನಂತೆ ಜಟ್ಟಿಯನ್ನು ಬಂಧಿಸಲು ದಾಖಲೆಗಳನ್ನು ಪರಿಶೀಲಿಸಿದ ಪೋಲೀಸರು ಬೆವರಿನಿಂದ ತೋಯ್ದು ಹೋದರು! ಯಾಕೆಂದರೆ ದಾಖಲೆಗಳ ಪ್ರಕಾರ ಜಟ್ಟಿ ಅದಾಗಲೇ ಸತ್ತು ಎರಡು ವರ್ಷಗಳು ಕಳೆದಿದ್ದವು. ಜಮೀನಿನ ಸುಧಾರಣೆಯ ಹೆಸರಿನಲ್ಲಿ, ಬಾವಿ ತೋಡಿಸುವ ನೆಪದಲ್ಲಿ, ಸಸಿ ಹಾಕುವ ಬಾಬ್ತಿಗೆಂದು ಬ್ಯಾಂಕಿನಿಂದ ಸದಾ ಸಾಲ ಪಡೆಯುತ್ತಿದ್ದ ಅಳಿಯ ಮಾವನನ್ನು ದಾಖಲೆಯಲ್ಲಿ ಅದ್ಯಾವಾಗಲೋ ಕೊಂದು, ಮರಣ ಪತ್ರವನ್ನು ಹಾಜೀರುಪಡಿಸಿ ಎಲ್ಲವನ್ನೂ ತನ್ನ ಹೆಸರಿಗೆ ಮಾಡಿಕೊಂಡಿದ್ದ. ಈ ಸುದ್ದಿ ಊರ ತುಂಬೆಲ್ಲ ಹರಡಿ ಜಟ್ಟಿಯ ಕಿವಿಗೂ ತಲುಪಿದಾಗ ಏರಿದ್ದ ಸಾರಾಯಿಯ ನಶೆ ಸರ್ರನೆ ಇಳಿದುಹೋಗಿತ್ತು. ಆಸ್ತಿಯ ಮನೆ ಹಾಳಾಯ್ತು, ಭೂಮಿಯ ಒಡಲಿನಲ್ಲಿ ಒಂದೂ ಸಸಿಯೂರದ ತನಗೆ ಅದು ಇದ್ದರೆಷ್ಟು, ಬಿಟ್ಟರೆಷ್ಟು ಎಂದಿದ್ದ ಜಟ್ಟಿಗೆ ತಾನು ಜೀವಂತವಾಗಿ ಸತ್ತು ಹೋಗಿರುವುದನ್ನು ಕಲ್ಪಿಸಿಕೊಳ್ಳಲೂ ಆಗದೇ ಪರದಾಡತೊಡಗಿದ. ಮರುದಿನ ಬೆಳ್ಳಂಬೆಳಿಗ್ಗೆಯೇ ನಗರದ ಪೋಲೀಸು ಠಾಣೆಯೆದುರು ನಿಂತು, “ಕಳ್ಳ ನನ ಮಕ್ಕಳ್ರಾ, ಬದುಕಿದ್ದಾಗಲೇ ಸಾಯಿಸ್ತೀರೇನೋ ನನ್ನಾ? ನಾನೇ ನನ್ನ ಹೆಂಡತಿಗೆ ಹೊಡೆದೋನು. ಏನ್ ನನ್ನ ದೆವ್ವ ಬಂದು ಹೊಡೀತು ಅಂದ್ಕಂಡ್ತಾ? ಬನ್ರೋ, ನನ್ನ ಕೈಯ್ಯಿಗೆ ಬೇಡಿ ಹಾಕಿ.” ಎಂದು ಕಿರುಚತೊಡಗಿದ. ತುರ್ತು ಸಭೆ ಕರೆದ ಪೋಲೀಸ್ ಆಫೀಸರು ಎಲ್ಲರೊಂದಿಗೆ ಚರ್ಚಿಸಿ ಏನು ಮಾಡಿದರೂ ದಾಖಲೆಯಲ್ಲಿ ಬದುಕಿರದ ಇವನನ್ನು ಬಂಧಿಸಲಾಗದೆಂದು ಕೈಚೆಲ್ಲಿದ್ದರು.
ತನ್ನ ಮೈಮುಟ್ಟಲು ಪೋಲೀಸರಿಗೂ ಮೀಟರಿಲ್ಲ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತ ಬಂದ ಜಟ್ಟಿಗೆ ಅವನ ಅಳಿಯ ಜುಟ್ಟು ಹಿಡಿದು ಹೇಳಿದ್ದ, “ಇನ್ನು ಮುಂದೆ ಸುಮ್ಮನೆ ನಾನು ಕೊಟ್ಟಷ್ಟನ್ನು ಕುಡಿದುಕೊಂಡು ಮನೆಯೊಳಗೆ ಬಿದ್ಕೊಂಡಿದ್ರೆ ಸರಿ, ಇಲ್ಲಾಂದ್ರೆ ದಾಖಲೆ ಸತ್ಯವಾಗಿಬಿಡುತ್ತದೆ.” ಮಾವನ ಮರಣದ ದಾಖಲೆಯಿಟ್ಟು ಅದೆಷ್ಟೋ ಸಾಲಗಳನ್ನು ಮನ್ನಾ ಮಾಡಿಕೊಂಡಿದ್ದ ಅಳಿಯನಿಗೆ ಇವನು ಬದುಕಿರುವುದೆಲ್ಲಿ ಬ್ಯಾಂಕಿಗೆ ಗೊತ್ತಾಗಿ ಅಧ್ವಾನವಾದರೆ ಅನಿಸಿ ಹೆದರಿಕೆಯಾಗಿತ್ತು. ತಾನು ನಿಂತ ನೆಲವೇ ತನ್ನನ್ನು ನುಂಗುತ್ತಿರುವಂತೆ ಭಾಸವಾಗಿ, ತಾನಿರುವುದು ಸತ್ಯವಾಗಿಯೂ ಹೌದೋ ಅಲ್ಲವೋ ಎಂಬುದೇ ಸಂಶಯವಾಗಿ ನಿಂತಲ್ಲೇ ಕುಸಿದ ಜಟ್ಟಿ ಮುಂದೆಂದೂ ಬಗ್ಗಿದ ತನ್ನ ಸೊಂಟವನ್ನು ನೆಟ್ಟಗೆ ಮಾಡಲಿಲ್ಲ.
ಸಾರಾಯಿಯ ಮಹಿಮೆಯಿಂದ ಇದ್ದವರೆಲ್ಲ ಸತ್ತುಹೋಗುವ ಚೋದ್ಯಕ್ಕೆ ಬೆರಗಾದ ಹೊಳೆಸಾಲಿನ ಗಂಡಸರು ನಾಲ್ಕಾರು ದಿನ ಇದರ ಸಹವಾಸವಲ್ಲ ಮಾರಾಯ ಎನ್ನುತ್ತ ಗಡಂಗಿನ ದಾರಿ ತುಳಿಯದಾದರು. ವಾರವೊಂದು ಉರುಳುತ್ತಿದ್ದಂತೆ ಬಾಯಿಯೆಲ್ಲ ಚಪ್ಪೆಗೆಟ್ಟು, ಸಂಜೆಗಳೆಲ್ಲ ರಂಗು ಕಳಕೊಂಡಂತೆ ಭಾಸವಾಗಿ ಮತ್ತೆ ಹಳೆಯ ಚಾಳಿಯನ್ನು ಶುರುವಿಟ್ಟುಕೊಂಡರು.
ಇತ್ತ ಆಸ್ಪತ್ರೆಯಿಂದ ಬಿಡುಗಡೆಗೊಂಡು ಬಂದ ಲಚ್ಚಿಯನ್ನು ನೋಡುವ ನೆಪದಲ್ಲಿ ಸೇರಿದ ಹೆಂಗಳೆಯರೆಲ್ಲರೂ ಈ ಸಾರಾಯಿಯ ಕರಿನೆರಳಿನಿಂದ ತಮ್ಮ ಬಿಡುಗಡೆಯ ಬಗ್ಗೆ ಯೋಚಿಸತೊಡಗಿದರು. ಇಪ್ಪತ್ತು ವರ್ಷಕ್ಕೆ ಅಂಟಿದ ಚಟ ಎಪ್ಪತ್ತಾದರೂ ಬಿಡದು ಎಂಬ ನಿರಾಸೆಯಲ್ಲಿ ಮುಳುಗುತ್ತಿದ್ದಂತೆಯೇ ಮೂರು ವರ್ಷಗಳ ಹಿಂದೆ ಪೇಟೆಯ ಊರಿನಿಂದ ಮದುವೆಯಾಗಿ ಬಂದ ಮಾದೇವಿ ಮಾತನಾಡತೊಡಗಿದಳು, “ಬೆಳೆದ ಮರಾನ ಎಲ್ಲಕ್ಕ ಸರಿ ಮಾಡಕಾಯ್ತದೆ? ನಮ್ಮ ಮುಂದೆ ಬೆಳೀತಾ ಇರೋ ಸಸಿಗಳನ್ನ ನೇರವಾಗಿಸೋಣ ಅಂದ್ರೆ ನೀವೆಲ್ಲಿ ಕೇಳ್ತೀರಾ? ಹೊಳೆ ದಾಟಿ ಆಚೆ ಬಿದ್ರೆ ಸಾಲೆ ಅದೆ. ಎಷ್ಟು ಜನ ನಿಮ್ಮ ಮಕ್ಕಳನ್ನ ಸಾಲಿಗೆ ಕಳಿಸ್ತೀರಿ? ಸರಿಯಾಗಿ ಕಾಲು ಬಂದು ನಡೀಲಿಕ್ಕೆ ಕಲಿತ್ರೆ ಸಾಕು. ದನ ಮೇಯಿಸೋಕಂತ ದೊಡ್ಡ ಮಕ್ಕಳ ಕೂಡ ಬೆಟ್ಟಕ್ಕೆ ಕಳಿಸ್ತೀರಿ. ಅಲ್ಲಿ ದೊಡ್ಡೋರ ಜತೆ ಸೇರಿ ಅವ್ರೂ ಕುಡಿಯೂಕೆ ಕಲಿತಾರೆ. ನಾಲ್ಕಕ್ಷರ ಬರ, ಸರ ಕಲಿತ್ರೆ ಕುಡಿಬಾರದು, ಹೆಂಡ್ತೀನ ಹೊಡೀಬಾರದು ಅಂತೆಲ್ಲ ತಿಳೀತದೆ. ಮೊದಲು ನಮ್ಮ ಮಕ್ಕಳನ್ನ ಸಾಲಿಗೆ ಕಳಿಸೋಣ. ಆ ಮಾಸ್ರ್ರು ಪ್ರತಿ ವರ್ಷ ಬಂದು ಹೇಳಿ ಹೋಗ್ತಾರಲ್ಲ, ಅವ್ರ ಮಾತನ್ನ ಕೇಳೋಣ.” ಎಂದಾಗ ಎಲ್ಲರಿಗೂ ಹೌದೌದು ಅನಿಸಿತು. ಸ್ನಾನ ಮಾಡಲು ಪರಿಮಳದ ಸೋಪು ಬಳಸ್ತಾಳೆ, ಮುಖಕ್ಕೆ ಪೌಡರ್ ಹಚ್ತಾಳೆ ಅಂತೆಲ್ಲ ಹೀಯಾಳಿಸುತ್ತ ಅವಳನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳದೇ ಇದ್ದ ತಮ್ಮ ಬಗ್ಗೆ ಅವರೆಲ್ಲ ಪಶ್ಚಾತ್ತಾಪಪಟ್ಟರು. ಇದು ಮೊದಲ ಸಲವಲ್ಲ, ಮಕ್ಕಳ ವಿಷಯದಲ್ಲಿ ಅವಳು ವಹಿಸುತ್ತಿದ್ದ ಕಾಳಜಿಯನ್ನವರು ಮೊದಲಿನಿಂದಲೂ ಗಮನಿಸಿಕೊಂಡೇ ಬಂದಿದ್ದರು.
ಮಂಜಿಯ ಕೊನೆಯ ಮಗಳು ತಿಂದದ್ದನ್ನೆಲ್ಲ ವಾಂತಿ ಮಾಡುತ್ತ, ಏನನ್ನೂ ತಿನ್ನದೇ ದಿನವೊಂದರಲ್ಲೇ ಬವಳಿಬಂದು ಮಲಗಿದಾಗ ಹೊರಗೆಲ್ಲೋ ತಿರುಗಾಡಲು ಹೋದಾಗ ಮರ್ತ್ಯು ಹೊಡೆಯಿತೆಂದೇ ಹೆಂಗಸರೆಲ್ಲ ತಿಳಿದಿದ್ದರು. ಮಗುವನ್ನು ನೋಡಿದ ಮಾದೇವಿ ತನ್ನ ಬ್ಯಾಗಿನಲ್ಲಿದ್ದ ಅದೆಂಥದ್ದೋ ಪುಡಿಯನ್ನು ನೀರಿನಲ್ಲಿ ಕರಗಿಸಿ, ಇಷ್ಟಿಷ್ಟೇ ಮಗುವಿನ ಬಾಯಿಗೆ ಹಾಕುತ್ತ ಅವಳು ಎಚ್ಚರಗೊಳ್ಳುವಂತೆ ಮಾಡಿದ್ದಳು. ಅದೇನೋ ಮಾಯಕವಿತ್ತೋ ಆ ಬಿಳಿಯ ಪುಡಿಯಲ್ಲಿ! ಕಮಲಿಯ ಮಗನಿಗೆ ಇದ್ದಕ್ಕಿದ್ದಂತೆ ರಾತ್ರಿ ಜ್ವರ ಬಂದು ತಲೆಗೇರಿ ಏನೇನೋ ಬಡಬಡಾಯಿಸುತ್ತಿರುವಾಗಲೂ ಹಾಗೆ, ಅದೇನೋ ಮಾತ್ರೆಯ ತುಂಡೊಂದನ್ನು ಕುಡಿಸಿ, ರಾತ್ರಿಯಿಡೀ ತಲೆಗೆ ತಣ್ಣೀರ ಪಟ್ಟಿಯಿಟ್ಟು ಜ್ವರವನ್ನು ಓಡಿಸಿದ್ದಳು. ತಮಗೆಲ್ಲ ಗೊತ್ತಿರದ ಮಾಯಕದ ವಿದ್ಯೆಯೊಂದು ಇವಳಿಗೆ ತಿಳಿದಿದೆಯೆಂಬುದು ಎಲ್ಲರ ಅರಿವಿಗೆ ಬರುತ್ತಿತ್ತು. ಗದ್ದೆಯ ನೆಟ್ಟಿಯಿರಲಿ, ಅಡುಗೆ ಮನೆಯಲ್ಲಿರಲಿ, ಸೌದೆ ಹೊರುವ ಕಾಯಕವಿರಲಿ ಎರಡು ತಾಸಿಗೊಮ್ಮೆ ನೆನಪಿಸಿಕೊಂಡು ತನ್ನ ಮಗಳಿಗೆ ಮೊಲೆಯೂಡುತ್ತಿದ್ದಳು. ಗಂಡಸರು ಇದ್ದಾರೆಂಬ ಖಬರಿಲ್ಲದೆ ಎಲ್ಲಿ ನೋಡಿದರಲ್ಲಿ ಮಗುವನ್ನು ಎದೆಗೆ ಒತ್ತಿಕೊಳ್ಳುವ ಅವಳನ್ನು ಇದೇ ಹೆಂಗಸರು ಛೇಡಿಸಿದ್ದರು. ಆಗೆಲ್ಲ ಮಾದೇವಿ ಮೊಲೆ ಕುಡಿಯದೇ ಬೆಳೆದ ಗಂಡು ಅದ್ಯಾವನವ್ನೆ? ತಂದು ತೋರಿಸಿ ಎಂದು ನಗುತ್ತಲೇ ಅವರೆಲ್ಲರ ಮಾತನ್ನು ನಿರ್ಲಕ್ಷಿಸಿದ್ದಳು.
ಅವಳ ಹೊಸಪರಿಗೆ ಎಲ್ಲರೂ ಅಚ್ಛರಿಗೊಂಡಿದ್ದರೂ ಇಂದು ಅವಳು ಹೇಳಿದ್ದು ಅವರೆಲ್ಲರಿಗೆ ನಿಜವೆನಿಸಿತ್ತು. ಮರುದಿನ ಬೆಳಗಾಗುತ್ತಲೇ ತಮ್ಮ, ತಮ್ಮ ಮಕ್ಕಳನ್ನು ಏಳಿಸಿ, ಮೈಕೈ ತಿಕ್ಕಿ ತೊಳೆದ ಹೆಂಗಸರು ಇದ್ದುದರಲ್ಲಿಯೇ ಹೊಸಬಟ್ಟೆಯನ್ನು ಹಾಕಿ, ದೇವಿಮನೆಯಿರುವ ಕಡೆಗೆ ಕೈಜೋಡಿಸಲು ಹೇಳಿ, ಅವರ ಹೆಗಲಿಗೊಂದು ಪಾಟಿಚೀಲವನ್ನು ನೇತಾಡಿಸಿ ಶಾಲೆಯ ಹಾದಿ ಹಿಡಿಸಿದ್ದರು. ದಿನವೂ ಬಾಯಿತುಂಬ ಕವಳ ತುಂಬಿಕೊಂಡು, ಕೈಯ್ಯಲ್ಲೊಂದು ಕೋಲು ಹಿಡಿದುಕೊಂಡು ತಮ್ಮ ದನಕರುಗಳೊಂದಿಗೆ ಕಾಡು, ಮೇಡು ಅಲೆದು ರೂಢಿಯಾದ ಕೆಲವು ತುಡುಗು ಹುಡುಗರು ಶಾಲೆಗೆ ಹೋಗಲು ಒಲ್ಲೆನೆಂದು ಹಠ ಹಿಡಿದರು. ಅವರ ಮಾತಿಗೆ ಕೆರಳಿದ ಅವರ ಅಮ್ಮಂದಿರು ಹುಣಸೆಯ ಬಡರೊಂದನ್ನು ಅವರ ಮುಂದೆ ಝಳಪಿಸಿ ಇನ್ನು ಅವರಾಟ ನಡೆಯದೆಂಬುದನ್ನು ಸಾಬೀತುಪಡಿಸಿದರು.
ಮನೆಯ ಹೆಂಗಸರ ಈ ಹೊಸಪರಿ ಗಂಡಸರಿಗೆ ಹೊಸದೆನಿಸಿದರೂ ಏನಾದರೂ ಮಾಡಿಕೊಳ್ಳಲಿ ನಮಗೇನೆಂಬ ಉದಾಸೀನದಿಂದ ಹೊಲದ ದಾರಿ ಹಿಡಿದರು. ಕೆಲವರು ದನ ಮೇಯಿಸಲು ಜನವ್ಯಾರು? ಎಂದು ತಗಾದೆ ತೆಗೆದರಾದರೂ ಅದಕ್ಕೂ ಒಂದು ಪರಿಹಾರವನ್ನು ಮಾದೇವಿಯ ಸಲಹೆಯಂತೆ ಎಲ್ಲರೂ ಮಾಡಿಕೊಂಡಿದ್ದರು. ಶಾಲೆಗೆ ಹೋಗುವ ವಯಸ್ಸು ಮೀರಿದ ನಾಲ್ಕಾರು ಹುಡುಗರಿಗೆ ಎಲ್ಲ ಮನೆಯವರೂ ಸೇರಿ ಪುಡಿಗಾಸು ನೀಡಿ ಊರಿನವರೆಲ್ಲರ ದನಕರುಗಳನ್ನು ಮೇಯಿಸಿ ಬರಲು ಒಪ್ಪಿಸಿದ್ದರು. ಒಂಟಿಯಾಗಿ ಶಾಲೆಗೆ ಹೋಗುತ್ತಿದ್ದ ನೀಲಿಯೀಗ ಊರ ತಂಡದ ನಾಯಕಿಯಂತೆ ಎಲ್ಲರಿಗಿಂತ ಮುಂದೆ ತನ್ನ ಎರಡು ಜಡೆಗಳನ್ನು ಕುಣಿಸುತ್ತಾ ನಡೆಯುತ್ತಿದ್ದಳು. ಮದುವೆಗೆ ತಯಾರಾಗಿ ನಿಂತಿದ್ದ ಹೊಳೆಸಾಲಿನ ಲಕ್ಷಣವಂತ ಹುಡುಗಿಯರು “ಕೊಡು ಶಿವನೆ ಕುಡುಕನಲ್ಲದ ಗಂಡನ್ನ” ಎಂದು ಹಾಡು ಹೇಳುತ್ತಾ ಮನೆಯಂಗಳವನ್ನು ಗುಡಿಸಿ, ಬಿಳಿಯ ರಂಗೋಲಿ ಎಳೆಯುತ್ತಿದ್ದರು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.