ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ ಕಲ್ಲು ಮರಳಾಗಿ ರೂಪಾಂತರ ಹೊಂದುವ ಜಗತ್ತಿನ ವಿಸ್ಮಯದ ನಡೆಯಲ್ಲಿ ಮರಳೂ, ಕಲ್ಲೂ ದೈವವಾಗುವುದರಲ್ಲಿ ಏನು ವಿಶೇಷವಿದೆ! ಪುತಿನ ಅವರಿಲ್ಲಿ ಮೂರ್ತಿಯನ್ನೂ ದೇವರಾಗಿ ನೋಡುತ್ತಿಲ್ಲ, ದೇವರಾಗಲು ಹೊರಟಿರುವ ಕಲ್ಲು ಅವರಿಗೆ ಅಚ್ಚರಿಯಾಗಿ ಕಾಣುತ್ತದೆ.
ಜ. ನಾ. ತೇಜಶ್ರೀ ಬರೆದ `ಅರಿವು-ಇರವುಗಳ ಸನ್ನೆಗೈ ಪುತಿನ ಮಲೆದೇಗುಲ’ ಕೃತಿಯ ಕುರಿತು ದೀಪಾ ಫಡ್ಕೆ ಬರಹ

ಜೀವಯಾನದ ಅಮರಕವಿ ಎಸ್ ಮಂಜುನಾಥ್ ಅವರ ಸಾಲುಗಳನ್ನು ಉಚ್ಚರಿಸುತ್ತಲೇ ಈ ಲೇಖನವನ್ನು ಆರಂಭಿಸುತ್ತೇನೆ. “ಸಂಕೇತದಿಂದಷ್ಟೇ ಅಮೂರ್ತವೆಂಬುದು ಮೂರ್ತವಾಗಲು ಸಾಧ್ಯ. ಪ್ರೀತಿ ಎನ್ನುವ ಅಮೂರ್ತವಾದ ಭಾವನೆ ಮೂರ್ತಗೊಳ್ಳುವುದು ತಾನು ಪ್ರೀತಿಸುವ ಒಬ್ಬ ವ್ಯಕ್ತಿಯಿಂದಲೇ, ತಾಯ್ತನ ಎನ್ನುವುದು ಮೂರ್ತಗೊಳ್ಳುವುದು ತಾಯಾಗಿರುವ ಒಂದು ಹೆಣ್ಣಿನಿಂದಲೇ-ಹೀಗೆ. ಒಬ್ಬ ವ್ಯಕ್ತಿ ಅಥವಾ ಸಮುದಾಯ ಆಶ್ರಯಿಸುವ ಸಂಕೇತವನ್ನು ನಿರಾಕರಿಸಲು ಬರುವುದಿಲ್ಲ. ಅದು ಯಾಕಾಗಿ ಆ ಸಂಕೇತವನ್ನು ಆಶ್ರಯಿಸಿದೆ ಎಂದು ನೋಡಬೇಕಷ್ಟೇ”. `ಮಲೆದೇಗುಲ’-ಕವನಸಂಕಲನದಲ್ಲಿ ಹಿರಿಯ ಕವಿ ಪುತಿನ ಅವರು ಅಮೂರ್ತವನ್ನು ಮೂರ್ತಗೊಳಿಸಲು ಹೇಗೆ ಪ್ರಯತ್ನಿಸಿದ್ದಾರೆ ಮತ್ತು ಅವರು ಎಷ್ಟು ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಮಂಜುನಾಥ್ ಅವರು ಹೇಳಿದ ಅನನ್ಯವಾದ ಕಾಣ್ಕೆಯಿದು. ಈ ಸಾಲುಗಳನ್ನು ನಾನು ಓದಿದ್ದು ಕವಿ ಜ. ನಾ. ತೇಜಶ್ರೀ ಅವರ `ಅರಿವು-ಇರವುಗಳ ಸನ್ನೆಗೈ ಪುತಿನ ಮಲೆದೇಗುಲ’ ಎನ್ನುವ ಕೃತಿಯಲ್ಲಿ.

(ಜ. ನಾ. ತೇಜಶ್ರೀ)

ಪ್ರತೀ ಬಾರಿ ದೇವರು, ಧರ್ಮದ ಅಸ್ತಿತ್ವದ ಕುರಿತು ಮನಸ್ಸು ಹೊಯ್ದಾಡುವಾಗಲೆಲ್ಲ ಮನಸ್ಸು ನೂರು ಬಾರಿ ಸ್ಮರಿಸುತ್ತಾ ಸಂತೈಸಿಕೊಳ್ಳುವುದು ಪುತಿನ ಅವರ `ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ’ ಎನ್ನುವ ಸಾಲುಗಳಿಂದ. ಪುತಿನ ಅವರ `ಗೋಕುಲ ನಿರ್ಗಮನ’ ಗೀತನಾಟಕದ `ಅಕ್ಕೊ ಶ್ಯಾಮ ಅವಳೇ ರಾಧೆ ನಲಿಯುತಿಹರು ಕಾಣಿರೇ’ ಗೀತೆಯನ್ನು ನೂರಾರು ಬಾರಿ ಕೇಳಿರುವೆ. ಪ್ರತಿ ಕೇಳುವಿಕೆಯೊಂದಿಗೆ, ಮಿಶ್ರಭಾವಗಳನ್ನು ಮೂಡಿಸಿ ಮತ್ತಷ್ಟು ಕುತೂಹಲ ಹುಟ್ಟಿಸುತ್ತಾ ಸಾಗಿದ ಕವಿ ಪುತಿನ. ಅವರ `ಮಲೆದೇಗುಲ’ ಕವನಗಳ ಬಗ್ಗೆ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರೊಂದಿಗೆ ಬಹಳ ಹಿಂದೆ ಮಾತಾಡಿದ್ದಾಗ `ಆ ಕವನಗಳ ಸಂಕೀರ್ಣ ಅಭಿವ್ಯಕ್ತಿ ಮತ್ತು ಪುತಿನ ಅವರ ದೇಗುಲ ಅನ್ನುವ ಮುಕ್ತ ಮತ್ತು ಅಷ್ಟೇ ಗಹನವಾದ ಭಾವದೊಂದಿಗೆ ಓದುಗನಿಗೆ ಸರಿಸಮನಾಗಿ ಸ್ಪಂದಿಸಲು ಸಾಧ್ಯವಾಗದೇ ಹೋದ ಕಾರಣ ಮಲೆದೇಗುಲ, ಕಾವ್ಯಮೋಹಿಗಳಿಗೂ ಸ್ವಲ್ಪ ಅಪರಿಚಿತವಾಗಿಯೇ ಉಳಿಯಿತು’ ಎಂದಿದ್ದರು.

ಕೆಲವು ಪ್ರಾಪ್ತಿಗಳು ತುಂಬ ಸಹಜವಾಗಿ ತೀರಾ ಅನಿರೀಕ್ಷಿತವಾಗಿ ಮಡಿಲಿಗೆ ಬಂದು ಬೀಳುವುದಿದೆ. ಹಾಗೆ ಕೈಗೆ ಬಂದು ಮುಟ್ಟಿದ್ದು ಜ. ನಾ ತೇಜಶ್ರೀ ಅವರ `ಅರಿವು –ಇರವುಗಳ ಸನ್ನೆಗೈ ಪುತಿನ ಮಲೆದೇಗುಲ’ ಪುಸ್ತಕ. ಕಾವ್ಯವೆಂಬುದು ಜ. ನಾ. ತೇಜಶ್ರೀ ಅವರಿಗೆ ಧ್ಯಾನ. ನಿತ್ಯದ ಕ್ಷಣಭಂಗುರಗಳನ್ನೂ ಒಮ್ಮೆ ಅರೆ! ತೆರೆದ ಕಣ್ಣುಗಳಿಂದ, ಮತ್ತೊಮ್ಮೆ ಅರೆತೆರೆದ ಕಾವ್ಯಕಣ್ಣಿನಿಂದಲೇ ನೋಡುವ ತೇಜಶ್ರೀ ಅವರಿಗೆ ಪುತಿನ ಮಲೆದೇಗುಲದ ಮುಕ್ತಕಗಳು ಹೆಬ್ಬಾಗಿಲಿಗಿರುವ ಸಣ್ಣ ಬಾಗಿಲಿಂದ ಪ್ರವೇಶ ಕೊಟ್ಟು ಒಳಹೊಕ್ಕ ನಂತರ ಬಯಲನ್ನೇ ಮುಂದಿಟ್ಟಿತು ಎಂದು ಕಾಣುವಂತೇ ಎಳೆಎಳೆಯಾಗಿ ಎಲ್ಲೂ ಸಿಕ್ಕಾಗದಂತೇ ಬಿಡಿಸಿ ಇಟ್ಟಿದ್ದಾರೆ. ಓದುತ್ತಿದ್ದಂತೇ ಅನಿಸಿತು ಇದೊಂದು ಅಪ್ಪಟ `ಯಾತ್ರೆ’ ಎಂದು.
`ಮಲೆದೇಗುಲ’, ಪು. ತಿ. ನರಸಿಂಹಾಚಾರ್-ಪುತಿನ ಅವರ ಐವತ್ತೊಂದು ಕವನಗಳ ಗುಚ್ಛ. ಹತ್ತು ಸಾಲುಗಳ ಈ ಕವನಗಳಲ್ಲಿ ಮೊದಲ ಎಂಟು ಸಾಲುಗಳು ಒಂದು ಅಖಂಡದ ಕುತೂಹಲ, ಜಿಜ್ಞಾಸೆ, ಪ್ರಶ್ನೆಯಲ್ಲಿ ಅದ್ದಿದ ಕವಿ ಮನಸ್ಸು ಕಂಡರೆ ಕೊನೆಯ ಎರಡು ಸಾಲುಗಳನ್ನು ಆ ಅಖಂಡವೆನ್ನುವುದು ಅರ್ಥವಾಗದೇ ಇರುವಾಗ ಮತ್ತು ಅರ್ಥವಾದಾಗ ಮೂಡುವ ವಿನೀತಭಾವದೊಡನೆ ಮೂಡುವ ನಿವೇದನೆಯಾಗಿ ಕಾಣುತ್ತದೆ. ಹಾಗಾಗಿ ಇವುಗಳನ್ನು ಬರೇ ಕವನಗಳೆಂದರೆ ಸಾಲದೇನೋ, ಇವುಗಳ ಕವನಗಳ ಮೂಲಕ ಅಕ್ಷರ ಕಂದೀಲನ್ನು ಹಿಡಿದು ಹೊರಟು, ಇದೇ! ಅಥವಾ ಇದಿರಲೂಬಹುದು ಅಥವಾ ಇದಲ್ಲ ಇದಲ್ಲ ಎನ್ನುವ ಮತ್ತೆ ಮುಂದೆ ನಡೆಯುವ ಹುಡುಕಾಟದ ಅಥವಾ ಇಷ್ಟೇ ನಿಜಕ್ಕೂ! ನಾವು ಸುಮ್ಮನೇ ಮತಿಗೆಟ್ಟವರಂತೇ ಬೇರೊಂದು ಲೋಕದ ಚೈತನ್ಯಕ್ಕಾಗಿ ಕನವರಿಸುತ್ತಿದ್ದೇವೆಯೇ? ಎಂದು ಭಿನ್ನ ಭಿನ್ನ ನೋಟಗಳನ್ನು ನೋಡಿ ಅನುಭಾವಿಸಿ ಬರೆದಂತಿವೆ.

ಮಲೆದೇಗುಲವೆಂದರೆ ಬೆಟ್ಟದ ದೇಗುಲ. ಮೇಲುಕೋಟೆ, ಪುತಿನ ಸಾಹಿತ್ಯದ ಅವಿಭಾಜ್ಯ ಅಂಗದಂತೆ. ಆದ್ದರಿಂದ ಈ ಕವನಗಳ ದೇಗುಲ ಮೇಲುಕೋಟೆಯೂ ಇರಬಹುದು ಇನ್ಯಾವುದೋ ಎತ್ತರದ ಬೆಟ್ಟದ ದೇವಾಲಯವೂ ಆಗಿರಬಹುದು. ಬೆಟ್ಟದ ಮೇಲೆ, ನದೀ ದಂಡೆಗಳ ಮೇಲೆ ದೇವರನ್ನು ಕೂರಿಸಿದವರು ನಾವೇ ತಾನೇ! ಹೀಗೆ ನಿತ್ಯವೂ ದೇವಾಲಯದ ಪ್ರಾಂಗಣದಲ್ಲಿ ಕಂಡ, ಕಂಡು ಮನದಲ್ಲಿ ಮೂಡಿದ ನೋಟಗಳು ಕವನಗಳ ರೂಪದಲ್ಲಿ ಮಲೆದೇಗುಲದಲ್ಲಿ ಶಾಶ್ವತವಾಗಿವೆ. ಪುತಿನ, ಭಕ್ತಿಪಂಥದ ಕವಿ. ತೇಜಶ್ರೀ ಹೇಳುವಂತೆ ಭಕ್ತಿಗಾಗಿ ಹಂಬಲಿಸಿದ ಕವಿಯೇ ಹೊರತು ಭಕ್ತಕವಿಯಲ್ಲ. ಹರಿದಾಸರು, ವಚನಕಾರರು ಉತ್ತರದ ಮೀರಾ ಎಲ್ಲರೂ ಭಕ್ತಿಗಾಗಿ ಭಕ್ತಿಯಿಂದ ಹಂಬಲಿಸಿದ ಕವಿಗಳು. ಭಕ್ತನಿಗೂ ಭಕ್ತಿಪಂಥಕ್ಕೂ ನಿಚ್ಚಳವಾದ ವ್ಯತ್ಯಾಸವಿದೆ. ಭಕ್ತನಾದವ ತನ್ನಿಷ್ಟದ ಒಡೆಯ, ದೈವವನ್ನು ಕಣ್ಮುಚ್ಚಿ ಒಪ್ಪುವವ. ಇದು ಸಾಮಾನ್ಯರ ಕತೆ. ಆದರೆ ಭಕ್ತಿಪಂಥದ ದಾಸರು ತಮ್ಮ ದೈವವನ್ನೇ ಧೈರ್ಯದಿಂದ ಪ್ರಶ್ನಿಸಿದವರು. ನೀನ್ಯಾಕೋ ನಿನ್ನ ಹಂಗ್ಯಾಕೋ ಎಂದೂ ಜರಿದವರು. ಈ ಧೈರ್ಯವನ್ನು ಭಕ್ತಿಯೊಂದೇ ನೀಡಲು ಸಾಧ್ಯ.

ಈ ಕಾರಣಕ್ಕೆ ಪುತಿನ ಭಕ್ತಿಗಾಗಿ ಹಂಬಲಿಸಿದ ಭಕ್ತಿಪಂಥದ ಕವಿಯೆಂದರೆ ಅಪಚಾರವಾಗದು. ತನ್ನ ದೈವಕ್ಕಾಗಿ ಕಲ್ಲು ಮಣ್ಣಿನ ಗುಡಿ ನಿರ್ಮಿಸಿದ ಸಾಕ್ಷಿಗಳು ಜಗದ ತುಂಬ. ಇಂಥದ್ದೇ ಗುಡಿಯ ಮುಂದೆ ನಿತ್ಯವೂ ನಿಲ್ಲುತ್ತಿದ್ದ ಪುತಿನ ಅವರ ಮನಸ್ಸಿಗೆ ಮನುಷ್ಯನ ಮನಸ್ಸಿನ ಇಚ್ಛಾಶಕ್ತಿಯೂ ಬೆರಗಾಗಿ ಕಂಡಿರಬೇಕು. ಮನುಷ್ಯ ಕತ್ತಲಲ್ಲಿ ಪರದಾಡುತ್ತಾ ನೂರಾರು ಮಾರ್ಗಗಳ ಮೂಲಕ ಬೆಳಕನ್ನು ಅರಸಿದ ಸಾಕ್ಷಿಗಳು ಮುಂದಿರುವಾಗ ಈ ಕತ್ತಲೂ ಎಷ್ಟು ಕುತೂಹಲಕಾರಿ ಎಂದು ಕಂಡಿದ್ದರಲ್ಲಿ ಅಚ್ಚರಿಯಿಲ್ಲ.

“ಕತ್ತಲದು ಕಗ್ಗತ್ತಲರಿವಾಳವರಿಯದೆಯೆ ಮತಮತಗಳಟ್ಟಣೆಯ ಕಟ್ಟಿ ನಿಲುವಿರುಳು: ಸನಿಯವಷ್ಟನೆ ಬೆಳಗಿ ಕೊನೆಗೆ ಶರಣೆಂದೆಯೇ ಎಲ್ಲ ಮತಿ ಮೈಗರೆವ ನಿಲುಗಡೆಯ ಹುರುಳು” ಕತ್ತಲು, ಈ ಲೌಕಿಕದ ದಿನಗಳು. ಕತ್ತಲ ಗುಹೆಯೊಂದರಲ್ಲಿ ಸಿಕ್ಕಿರುವ ಜೀವವೊಂದು ಬೆಳಕನ್ನು ಅರಸುತ್ತಾ ನಡೆಯುವ ಪ್ರಕ್ರಿಯೆಯೇ ಜೀವನ. ಇದಕ್ಕೊಂದು ಮತ, ಧರ್ಮಗಳ ಅಟ್ಟಣೆ ಅಥವಾ ಅಟ್ಟಣಿಗೆ ಅಥವಾ ಕಟ್ಟಳೆ. ಒಂದೊಂದು ಮತ, ಧರ್ಮದೊಳಗೂ ನೂರೊಂದು ಕತ್ತಲೆಯ ಕಟ್ಟಳೆ. ಒಬ್ಬ ಒಂದೆಂದರೆ ಇನ್ನೊಬ್ಬ ಎರಡೆನ್ನುವ ಸೂತ್ರಕ್ಕೆ ಬಂಧಿಸುವ ಆಟ. ಒಬ್ಬ ಆಕಾರವನ್ನು ಸೂಚಿಸಿದರೆ ಇನ್ನೊಬ್ಬ ನಿರಾಕಾರವನ್ನು ಸೂಚಿಸುತ್ತಾ ಭಿನ್ನ ಭಿನ್ನ ದಾರಿಗಳಿಂದ ಬೆಳಕಿನೆಡೆಗೆ ಪಯಣವನ್ನು ಮಾಡಿದವರೇ. ಆದರೆ ಅಟ್ಟಣೆಯ ಎತ್ತರಕ್ಕೆ ತಕ್ಕಷ್ಟೇ ತಾನೇ ನೋಟ ಸಿಗುವುದು. ನಂತರ ಬರೇ ಕತ್ತಲೆಯೇ. ಈ ಹೊತ್ತಿನಲ್ಲಿ ಸ್ವಲ್ಪ ದೂರ ಕೈ ಹಿಡಿದು ವಿಜ್ಞಾನ ನಡೆಸಿದರೂ ಸಾವು ಮತ್ತು ನಂತರದ ಪಯಣದ ಬಗೆಗೆ ಧರ್ಮ, ವಿಜ್ಞಾನ ಎರಡೂ ನಿರುತ್ತರವಾಗಿ ಸುಮ್ಮನಾಗುತ್ತದೆ ಎನ್ನುತ್ತಾರೆ ಕವಿ. ಮನುಷ್ಯನ ಎಲ್ಲ ಶ್ರದ್ಧೆ, ಸಾಹಸ, ಸಾಧನೆಯ ನಂತರವೂ ಅವನು ಸಾವನ್ನು ಯೋಚಿಸಿದಾಗ ಅದರಿಂದ ಪಾರಾಗಲು ಅವನು ತೋರಿಕೊಂಡ ದಾರಿ `ಪರ’ದ ಹೊಸಲೋಕ. ಅಂದರೆ ನಮ್ಮ ಮನಸ್ಸೇ ಸ್ವರ್ಗನರಕಗಳನ್ನು ಹಿತವಾಗಿ ಸೃಷ್ಟಿಸಿಕೊಂಡಿದೆಯೋ! ಈ ಹೊಸಲೋಕವನ್ನು ಸೃಷ್ಟಿಸಿಕೊಂಡರೂ ಲೌಕಿಕದ ಪಾಶದಿಂದ ಅವನು ತಪ್ಪಿಸಿಕೊಳ್ಳಲಾರ. ಅದು ಅಸಹಾಯಕತೆ. ಧರ್ಮಕ್ಕಾಗಲಿ, ವಿಜ್ಞಾನಕ್ಕಾಗಲಿ ಮನುಷ್ಯನ ಅಸಹಾಯಕತೆಗೆ ಪಾಡಿಗೆ ಅರ್ಥ ಕಂಡುಕೊಳ್ಳಲಾಗದ ಸ್ಥಿತಿಗೆ ಈ ಮುಕ್ತಕ ಕನ್ನಡಿ ಹಿಡಿಯುತ್ತದೆ. ಆಗ ಕಣ್ಣ ಮುಂದೆ ಕಾಣುವ ಕತ್ತಲೆಯೇ ಶ್ಯಾಮಲವರ್ಣ. ಶ್ಯಾಮ ಎಂದರೆ ಕೃಷ್ಣನೂ ಹೌದು, ಕತ್ತಲೆಯೂ ಹೌದು. ಆದರೆ ಈ ಶ್ಯಾಮ ತುಂಬಾ ಮುದ್ದು. ಈ ಶ್ಯಾಮನ ಕೈಯಲ್ಲಿ `ಜಗವ ನಾದಿಸುವ ಮುರುಳಿ’ ಇರುವ ಕಾರಣ, ಮನುಷ್ಯ ಮುರುಳಿಯ ನಾದದಲ್ಲಿ ಲೀನವಾಗುತ್ತಾನೆ ಅಥವಾ ಹಾಗಂದುಕೊಂಡು ಭ್ರಮಿಸುತ್ತಾನೆ ಎನ್ನುತ್ತಾರೆ.

ಮನಃಶಾಸ್ತ್ರದ ಪ್ರಕಾರ ನಮ್ಮ ಮನಸ್ಸಿಗೆ ಎರಡು ಭಾಗ. ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸು. ಮನಸ್ಸನ್ನು ಒಂದು ಕೆರೆಗೆ ಹೋಲಿಸಿದರೆ ತಿಳಿನೀರಿನ ಭಾಗವೇ ಜಾಗೃತ ಮನಸ್ಸು. ಸಿಗ್ಮಂಡ್ ಫ್ರಾಯ್ಡ್‌ನ ಪ್ರಕಾರ ಜಾಗೃತ ಮನಸ್ಸಿಗೆ ಹಿತವಲ್ಲದ ವಿಚಾರಗಳನ್ನು ಸುಪ್ತಮನಸ್ಸಿಗೆ ತಳ್ಳುತ್ತದೆ. ಅದು ಮತ್ತೆ ಮೇಲೆ ಬಾರದಂತೇ ಒಂದು ತೆರೆ ಇರುತ್ತದೆ. ಆ ತೆರೆ ತಳದಲ್ಲಿದ್ದ ಅಹಿತ ವಿಚಾರಗಳನ್ನು ಮೇಲೇರದಂತೇ ತಡೆಯುತ್ತದಂತೆ. ಮನುಷ್ಯ, ತನ್ನ ಕತ್ತಲಿನಲ್ಲಿಯೂ ಬೆಳಕನ್ನು ಊಹಿಸುವುದೇ ಈ ಮುರಳಿಯ ನಾದದ ಅರ್ಥ. ಅಂದರೆ ಅಹಿತವಾದ ಸಂದರ್ಭದಲ್ಲಿಯೂ ತನ್ನನ್ನು ರಮಿಸಿಕೊಳ್ಳಲು ಹಿತವನ್ನು ಬಯಸುವ ಮನಸ್ಸಿನ ಕಾರಣದಿಂದಲೇ ಅದು ಮನುಷ್ಯನನ್ನು ಮತ್ತೆ ಮತ್ತೆ ಬದುಕಿನತ್ತ ಕೊಂಡೊಯ್ಯತ್ತದೆ. ಕತ್ತಲು ಬೆಳಕಿನಾಟದ ಸೃಷ್ಟಿಯ ರೀತಿಯಿದು ಎನ್ನುತ್ತಾರೆ ಕವಿ.

(ಹಿರಿಯ ಕವಿ ಪುತಿನ)

 

ಇವುಗಳನ್ನು ಬರೇ ಕವನಗಳೆಂದರೆ ಸಾಲದೇನೋ, ಇವುಗಳ ಕವನಗಳ ಮೂಲಕ ಅಕ್ಷರ ಕಂದೀಲನ್ನು ಹಿಡಿದು ಹೊರಟು, ಇದೇ! ಅಥವಾ ಇದಿರಲೂಬಹುದು ಅಥವಾ ಇದಲ್ಲ ಇದಲ್ಲ ಎನ್ನುವ ಮತ್ತೆ ಮುಂದೆ ನಡೆಯುವ ಹುಡುಕಾಟದ ಅಥವಾ ಇಷ್ಟೇ ನಿಜಕ್ಕೂ! ನಾವು ಸುಮ್ಮನೇ ಮತಿಗೆಟ್ಟವರಂತೇ ಬೇರೊಂದು ಲೋಕದ ಚೈತನ್ಯಕ್ಕಾಗಿ ಕನವರಿಸುತ್ತಿದ್ದೇವೆಯೇ? ಎಂದು ಭಿನ್ನ ಭಿನ್ನ ನೋಟಗಳನ್ನು ನೋಡಿ ಅನುಭಾವಿಸಿ ಬರೆದಂತಿವೆ.

ನೂರು ಸಿದ್ಧಾಂತಗಳ ನಡುವೆ ಬದುಕು ಸಾಗುತ್ತಿರುವ ಹೊತ್ತಿನಲ್ಲಿ ಇಂತಹ ಭಿನ್ನ ಚೈತನ್ಯದ ಹುಡುಕಾಟ ಅತ್ಯಂತ ಮುದ ನೀಡುತ್ತದೆ. ಸ್ಥಾವರ, ಜಂಗಮ, ಒಂದು, ಎರಡು, ಸಾಕಾರ, ನಿರಾಕಾರಗಳ ನಡುವೆ ಮನುಷ್ಯ ನಿರ್ಮಿತ ಗುಡಿಯೂ ನಮ್ಮೊಳಗೆ ಅಂತಃಸ್ಫೋಟ ಮಾಡಬಲ್ಲದು, ಸುಪ್ತವಾಗಿರುವ ಚೈತನ್ಯವನ್ನು ಅಲುಗಾಡಿಸಬಲ್ಲದೆಂದು ನಿರೂಪಿಸುತ್ತದೆ. ರುದ್ರಪಠನ ಕೇಳುವ ಹೊತ್ತಿನಲ್ಲಿ ನಮಃ ಸಿಕತ್ಯಾಯ ಚ ಎನ್ನುವ ಸಾಲಿನ ಅರ್ಥ ಕುತೂಹಲ ಕೆರಳಿಸಿತ್ತು. `ಸಿಕತ’ ಎಂದರೆ ಮರಳು. ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ ಕಲ್ಲು ಮರಳಾಗಿ ರೂಪಾಂತರ ಹೊಂದುವ ಜಗತ್ತಿನ ವಿಸ್ಮಯದ ನಡೆಯಲ್ಲಿ ಮರಳೂ, ಕಲ್ಲೂ ದೈವವಾಗುವುದರಲ್ಲಿ ಏನು ವಿಶೇಷವಿದೆ! ಪುತಿನ ಅವರಿಲ್ಲಿ ಮೂರ್ತಿಯನ್ನೂ ದೇವರಾಗಿ ನೋಡುತ್ತಿಲ್ಲ, ದೇವರಾಗಲು ಹೊರಟಿರುವ ಕಲ್ಲು ಅವರಿಗೆ ಅಚ್ಚರಿಯಾಗಿ ಕಾಣುತ್ತದೆ. ಅಂಥ ಕಲ್ಲಿನ ಸ್ಥಾವರವೊಂದು ಕವಿಗೆ ದೈವದ ಭಿನ್ನ ರೂಪವಾಗಿ ಕಂಡುಬರುವುದೂ ಮನಸ್ಸಿನ ವಿಕಾಸದ ಒಂದು ಸೊಗಸಾದ ನಡೆಯಾಗಿದೆ ಎನ್ನುವುದನ್ನು ಈ ಕವಿತೆಗಳು ಅರುಹುತ್ತವೆ.

ಸುಮಾರು ವರ್ಷಗಳಿಂದ ಆ ಒಂದು ದೇವಾಲಯವನ್ನು ನೋಡಲೇಬೇಕೆನ್ನುವ ತೀವ್ರ ಹಂಬಲವಿತ್ತು. ಅದಕ್ಕೆಂದು ಹೊರಟಿದ್ದೇವು. ಅದು ಹತ್ತಿರ ಹತ್ತಿರವಾಗುತ್ತಿದ್ದಂತೇ ಕತ್ತು ಉದ್ದ ಮಾಡಿ ನೋಡುತ್ತಿದ್ದಾಗ, `ಸಮಾಧಾನದಿಂದಿರು ಇದೋ ನಾನು ಸಮೀಪದಲ್ಲೇ ಇದ್ದೇನೆ’ ಎನ್ನುವಂತೆ ಅಷ್ಟು ದೂರಕ್ಕೇ ಅದರ ಬೃಹತ್ ಗೋಪುರ ಕಣ್ಣಿಗೆ ಬಿದ್ದಾಗ ಮನದೊಳಗೆ ಅವ್ಯಕ್ತ ಭಾವ. ಅದರ ಮುಂದೆ ನಿಂತು ಕ್ಷಣಗಳ ಕಾಲ ನೋಡುತ್ತಾ ನಿಂತಿದ್ದಾಗ, ಕಾಲದ ಹೊಡೆತಗಳನ್ನು ಸ್ವೀಕರಿಸುತ್ತಲೇ ಕಟ್ಟಿಸಿದವನ ಇಚ್ಛಾಶಕ್ತಿಯ ಪರಿಚಯ ನೀಡುವಂತೇ ಇನ್ನೂ ಭವ್ಯವಾಗಿ ನಿಂತಿತ್ತು. ಅದರ ಅನನ್ಯ ಮತ್ತು ವಿಸ್ತಾರವೂ ಧೀಮಂತವೂ ಆದ ಆಕಾರವನ್ನು ಕಣ್ತುಂಬಿಸಿಕೊಳ್ಳಲು ಕಣ್ಣು ಇನ್ನೂ ದೊಡ್ಡದಿರಬೇಕಿತ್ತು ಅನಿಸಿತ್ತು. ವಿಠಲ ಭಕ್ತಿಯ ಆವೇಶ ತುಂಬಿಕೊಂಡು ಸಾಲು ಸಾಲು ಜನ ಪಂಡರಾಪುರಕ್ಕೆ ವಾರಿ ಹೋಗುವಂತೇ ಆ ದೇವಾಲಯದ ಮುಖಮಂಟಪದ ಹೆಬ್ಬಾಗಿಲಿಂದ ಹೋಗದೇ ಬದಿಯಲ್ಲಿರುವ ಇನ್ನೊಂದು ದ್ವಾರದ ಮೂಲಕ ಪ್ರವಾಸಿಗರು ಒಳಹೋಗುತ್ತಿದ್ದರು. ಆ ಪ್ರವಾಸಿಗರ ರಾಶಿಯೊಂದಿಗೆ ಒಂದು ಟ್ರಾನ್ಸಿಗೆ ಒಳಗಾದಂತೇ ನಮ್ಮ ಕಾಲುಗಳೂ ಚಲಿಸಲಾರಂಭಿಸಿದವು. ಮನದ ಇಚ್ಛಾಶಕ್ತಿಗೊಂದು ಜೀವಂತ ಸಾಕ್ಷಿ ಆಗಿರುವ ಆ ದೇವಾಲಯ ಸಂಕೀರ್ಣದೊಳಕ್ಕೆ ಹೋಗುತ್ತಿದ್ದಂತೇ ಅದರ ಬೃಹತ್ ಆಕಾರದ ಮುಂದೆ ಅದನ್ನು ಕಟ್ಟಿದ ಮನುಷ್ಯನ ಕುಲವೂ ಇರುವೆಗಳಂತೇ ಪುಟ್ಟದಾಗಿ ಕಾಣುತ್ತಿತ್ತು. ಏಕೆಂದರೆ ನಮ್ಮ ಕಣ್ಣ ಮುಂದಿತ್ತು ತಂಜಾವೂರಿನ ಬೃಹದೀಶ್ವರ ದೇವಾಲಯ.

ಚಿದಂಬರ, ಬೃಹದೀಶ್ವರ ದೇವಾಲಯಗಳಂಥ ವಾಸ್ತುಶಿಲ್ಪದ ಅಚ್ಚರಿಗಳನ್ನು ನಿರ್ಮಿಸಿದ ಮನುಷ್ಯನ ಮನಸ್ಸಿನ ಸಂಕಲ್ಪದ ಬಗ್ಗೆಯೇ ಯೋಚಿಸುತ್ತಿದ್ದ ಹೊತ್ತಿನಲ್ಲೇ ಕೈಗೆ ಬಂದು ಸೇರಿದ್ದು `ಪುತಿನ ಮಲೆದೇಗುಲ’ ಪುಸ್ತಕ. ಇದನ್ನು ಪ್ರಸ್ತಾಪಿಸಲು ಮುಖ್ಯ ಕಾರಣ, ತೇಜಶ್ರೀ ಅವರು ತಮ್ಮ ಮಾತಿನಲ್ಲಿ “ಮಲೆದೇಗುಲದಲ್ಲಿ ಕವಿಯ ಮನಸ್ಸು ದೇವಸ್ಥಾನದ ಒಳಕ್ಕೆ ಹೋಗುವುದೇ ಇಲ್ಲ. ದೇವರನ್ನು ವರ್ಣಿಸುವುದಿಲ್ಲ. ಬದಲಿಗೆ ಇಲ್ಲಿ `ದೇಗುಲ’ ಎನ್ನುವ ಭಾವ ಮುಖ್ಯವಾಗಿದೆ. ಅದನ್ನು ಅರಸಿ ಬರುವ `ಮಾನುಷ್ಯವಾಹಿನಿ’ ಮತ್ತು ದೇಗುಲದ ಸುತ್ತ ನಡೆಯುವ ಆಚರಣೆಗಳು ಮುಖ್ಯವಾಗಿವೆ. ದೇವರು ಇದ್ದಾನೊ ಇಲ್ಲವೋ ಎನ್ನುವುದು ಇಲ್ಲಿನ ಪ್ರಶ್ನೆಯಲ್ಲ. ಸಾಮುದಾಯಿಕವಾದ ಒಂದು ನಂಬಿಕೆ ಇದೆಯಲ್ಲ ಇದು ಹೇಗೆ ಅನ್ನುವುದು ಇಲ್ಲಿನ ಹುಡುಕಾಟ. `ದೇಗುಲ’/ `ಆಚರಣೆ’ ಅನ್ನುವುದು `ಕಲೆಕ್ಟಿವ್ ಕಾನ್ಷಿಯಸ್’ (ಸಾಮುದಾಯಿಕ ಪ್ರಜ್ಞೆ) ಎಂಬುದನ್ನು ಮರೆಯಬಾರದು ಅನ್ನುವುದನ್ನು ವಿವಿಧ ಕೋನಗಳಿಂದ ಈ ಕವಿತೆಗಳು ನಿರೂಪಿಸುತ್ತವೆ” ಈ ಮಾತಿಗೆ ನಮ್ಮ ಪ್ರವಾಸ ಸಾಕ್ಷಿಯಾಗಿತ್ತು. ನಾವ್ಯಾರೂ ಒಳ ಹೋಗುವ ಆಸಕ್ತಿ ತೋರಿರಲಿಲ್ಲ.

ಒಂದು ಗುಡಿ, ಒಂದು ರಂಗವಲ್ಲಿ, ಹೂ ಆರಿಸುವ, ಅಡುಗೆ ಮಾಡುವ, ಬೀಜ ಬಿತ್ತುವ ಇವೆಲ್ಲ ನಿತ್ಯದ ಹೆಜ್ಜೆಗಳು ಕವಿಯ ಪ್ರತಿಭೆಯ ಕಣ್ಣಿಗೆ ಬಿದ್ದು ಅವೆಲ್ಲವೂ ಮರು ನಿರ್ಮಿತಿಗೊಂಡಾಗ ಮಲೆದೇಗುಲದಂಥ ಕವನಗಳು ಹುಟ್ಟುತ್ತವೆಯೇನೋ! ಈ ಅಪೂರ್ವ ಕವನಗಳ ಬಗೆಗೆ ಕವಿ ಎಸ್ ಮಂಜುನಾಥ್ ಅಷ್ಟೇ ಸೊಗಸಾದ ಟಿಪ್ಪಣಿ ನೀಡಿದ್ದಾರೆ. ಮಂಜುನಾಥ್ ಬರೆದ ಒಂದೊಂದು ಮಾತೂ ಒಂದೊಂದು ಹೊಸ ಆಯಾಮವನ್ನು ತೆರೆದಿಡುತ್ತದೆ. “ವೈಚಾರಿಕ ಅರ್ಥ ಮೀರಿದ (ಆಧುನಿಕ ಮನುಷ್ಯನಿಗೆ ಅಸಾಧ್ಯವಾದ ಸವಾಲು ತಾನೇ ಇದು?) ವಿಧಿಗಳು, ಕಲ್ಪಗಳು, ಉತ್ಸವಗಳು ಆ ಭಾವವನ್ನು ಉತ್ಪಾದಿಸುತ್ತವೆ-ಸಾಮುದಾಯಿಕವಾಗಿ. ಒಂದು ಕವಿತೆ, ಹಾಡು, ಚಿತ್ರ ಒಬ್ಬ ವ್ಯಕ್ತಿಗೆ ಮಾಡುವುದನ್ನೇ ವಿಧಿ ಕಲ್ಪಗಳು ಸಮೂಹಕ್ಕೆ ಸಾಧ್ಯಮಾಡುತ್ತವೆ. ಪ್ರಾಪಂಚಿಕವಾದ ಎಚ್ಚರದ ಸ್ಥಿತಿಯಲ್ಲಿ ಮನುಷ್ಯನಿಗೆ ಲಾಭ-ನಷ್ಟ, ಕ್ಷೇಮ-ಹಾನಿಗಳ ಚಿಂತೆಯಷ್ಟೇ. ಆದರೆ ಈ ಭವವನ್ನು ಮೀರಿದ ಒಂದು ಲಾಭದ ಸ್ಥಿತಿಗಾಗಿ ಅವನ ಹಂಬಲಿಕೆ ಇದ್ದೇ ಇರುತ್ತದೆ. ತನ್ನ ವ್ಯಕ್ತಿ ಅಹಮಿಕೆಯನ್ನು ಕಳೆದುಕೊಂಡು ಸಮುದಾಯದೊಂದಿಗೆ ಕೂಡಿಕೊಳ್ಳುವ, ಒಂದು ದೊಡ್ಡದಾದ್ದರಲ್ಲಿ ತನ್ನ ಸೀಮಿತ ಗುರುತಳಿಯುವ `ರಸಸ್ಥಿತಿ’ ಅದು. ಆ ಸ್ಥಿತಿಗೆ ಸಂಕೇತ ಈ ಕವಿಗೆ ದೇಗುಲ. ಆ ಭಾವದ ಮೋಡಗಳನ್ನು ತಡೆದು ಮಳೆಯಾಗಿ ಇಳಿಯುವಂತೆ ಮಾಡುವ ಮಲೆಯಂತೆ ಈ ದೇಗುಲ” ಎನ್ನುತ್ತಾ `ಲೋಕವೆಂಬುದು ಮಾಧ್ಯಮ-ಮನಸ್ಸನ್ನು ಎತ್ತಿ ತೋರಿಸಲು’ ಎನ್ನುತ್ತಾರೆ.

ನವಿಲ ಗರಿಯ ಸಾವಿರ ಕಣ್ಣುಗಳಂತೇ ಜಗತ್ತಿನ ಚೈತನ್ಯ ಮಾತು ಶಬ್ದ, ನಿಶ್ಶಬ್ದ, ಧ್ವನಿ, ಅರ್ಥ ಹೀಗೆ ಅಣುರೇಣು ತೃಣ ಕಾಷ್ಠಗಳಲ್ಲಿಯೂ ತುಂಬಿ ನಮ್ಮೊಡನೇ ಉಸಿರಾಡುತ್ತಿರುತ್ತದೆ. ಪ್ರಾಯಶಃ ಇದೇ ಕಾರಣಕ್ಕೆ ಇರಬೇಕು, ಮಾತು ಮುತ್ತಿನಂತಿರಬೇಕು ಎಂದಿದ್ದು. ಮಾತು, ಅಸಹನೆ, ದ್ವೇಷದಿಂದ ತುಂಬಿದಾಗ ಅದರೊಳಗಿರುವ ಚೈತನ್ಯಕ್ಕೆ ಕುಂದುಂಟಾಗಬಹುದು ಎನ್ನುವ ಎಚ್ಚರ ಜಾಗೃತವಿದ್ದರೆ ಮಾತೂ `ಪರಮ’ದ ಒಂದು ರೂಪವಾಗುತ್ತದೆ.
ಇಂಥ ಅಮೃತಮಯ ಕವಿತೆಗಳ ಪ್ರಪಂಚಕ್ಕೆ ಅತ್ಯಂತ ಸುಲಭವಾದ ದಾರಿ ತೋರಿದವರು ತೇಜಶ್ರೀ. ಏಕೆಂದರೆ ಸ್ವಲ್ಪ ಕಠಿಣವೆನಿಸುವ ಈ ಕವಿತೆಗಳ ತಿರುಳನ್ನು ಸರಿಯಾಗಿ ಹಿಡಿದು ಸವಿದು ಈ ಅರಿವು ಇರವುಗಳ ಸನ್ನೆಗೈ ಕೃತಿಯಲ್ಲಿ ತೇಜಶ್ರೀ ನೀಡಿದ್ದು ಒಂದು ಪ್ರಯೋಗವೇ. ಆದರೆ ಈ ಪ್ರಯೋಗ ನಿಜಕ್ಕೂ ಯಶಸ್ವಿ ಪ್ರಯೋಗವಾಗಿದ್ದು ಕಾವ್ಯಮೋಹಿಗಳಿಗೆ ಒಂದು ಉಪಕಾರದಂತಿದೆ. ಪುತಿನ ಗಂಧದ ಕೊರಡನ್ನು ಅರಸಿ ಅರಸಿ, ಆರಿಸಿ ಅತ್ಯಂತ ಪರಿಮಳಯುಕ್ತ ಕೊರಡನ್ನು ನಮ್ಮ ಮುಂದೆ ಇಟ್ಟಿದ್ದರು. ಅವಸರದ ಈ ಹೊತ್ತಿನಲ್ಲಿ ಕಾವ್ಯರಸಿಕರಿಗೆ ಸುಲಭವಾಗಲೆಂದು ತೇಜಶ್ರೀ ಗಂಧವನ್ನು ಅರೆದೂ ಕೊಟ್ಟಿದ್ದಾರೆ, ಗಂಧ ಸಂಕೇತವೂ ಹೌದು, ಔಷಧಿಯೂ ಹೌದು.