ಆಸ್ಟ್ರೇಲಿಯಾದಲ್ಲಿ ಇಂತಹ ಸಮುದಾಯ ಶಾಂತಿ ಕದಡುವ ಘಟನೆಗಳು ನಡೆಯುವುದು ಅಪರೂಪ. ಕನಿಷ್ಟ ಶಿಕ್ಷಣ, ಮಧ್ಯಮ ವರ್ಗ ಸಮಾಜದ ಹೆಚ್ಚು ಜನರು ದುಡಿದು ಗಳಿಸಿ ಸಾಮಾನ್ಯ ಜೀವನ ನಡೆಸುವ ಮೌಲ್ಯವನ್ನಿಟ್ಟುಕೊಂಡು ಬದುಕುವವರು. ಒಂದು ರೀತಿಯಲ್ಲಿ ಹೇಳುವುದಾದರೆ ಏಕತಾನದಲ್ಲಿ ಚಲಿಸುವ ಸಮಾಜದ ಸ್ತರಕ್ಕೆ ಕುಂದು ಬಂದರೆ ಎಲ್ಲರಿಗೂ ತಬ್ಬಿಬ್ಬಾಗಿ ಬಿಡುತ್ತದೆ. ಸಿಡ್ನಿಯಲ್ಲಿ ನಡೆದ ಕಳೆದ ವಾರಾಂತ್ಯದ ಘಟನೆಯಿಂದ ಜನರು ವಿಚಲಿತರಾಗಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಆಸ್ಟ್ರೇಲಿಯಾ ವರ್ಣನೆ ಮಾಡುವಾಗ ಅದರಲ್ಲಿ ಕಾಂಗರೂ, ಸಿಡ್ನಿ ಓಪೆರಾ ಹೌಸ್, ಸಿಡ್ನಿ ಹಾರ್ಬರ್ ಬ್ರಿಡ್ಜ್, ಊಲುರೂ ಬಂಡೆ, ಗ್ರೇಟ್ ಬ್ಯಾರಿಯರ್ ರೀಫ್, ಮತ್ತು ಅಬೊರಿಜಿನಲ್ ಸಂಸ್ಕೃತಿ ಇರಲೇಬೇಕು. ಕೆಲವೊಮ್ಮೆ ಈ ಪಟ್ಟಿಗೆ Bondi ಬೀಚ್ ಕೂಡ ಸೇರಿಕೊಳ್ಳುತ್ತದೆ. ಗಾತ್ರದಲ್ಲಿ ಚಿಕ್ಕದಾದರೂ ಬಾಂಡೈ ಬೀಚ್ ಇರುವ ಸ್ಥಳಕ್ಕೆ ‘ಕೋಟ್ಯಾಧಿಪತಿಗಳ ಸ್ವರ್ಗ’ ಎಂದು ಹೆಸರಿದೆ. ಅದರ ಪೂರ್ವಕ್ಕಿದೆ ಅನುಪಮ ಚೆಲುವಿನ ಪೆಸಿಫಿಕ್ ಸಾಗರ. ಅನತಿ ದೂರದಲ್ಲಿದೆ ಸಿಡ್ನಿ ಹಾರ್ಬರ್ ಮತ್ತು ಸಿಡ್ನಿ ಓಪೆರಾ ಹೌಸ್. ಸುತ್ತಲೂ ಹರಡಿರುವ ಬಡಾವಣೆಗಳಲ್ಲಿ ವಾಸಿಸುವುದು ಮಿಲಿಯನೇರ್ ಜನರು. ಹೆಸರಿಗೆ ತಕ್ಕಂತೆ ಇರುವ ಸೂಪರ್ ಮಾರ್ಕೆಟ್ಟುಗಳಲ್ಲಿ ಇರುವ ಅಂಗಡಿಗಳು ಬಹು ಬೆಲೆ ಬಾಳುವ ಬ್ರಾಂಡ್‌ಗಳು. ಸಕ್ಕರೆಗೆ ಮುತ್ತಿಕೊಳ್ಳುವ ಇರುವೆಗಳಂತೆ ಅವುಗಳನ್ನು ಅರಸಿ ಬರುವ ಜನರು, ನೋಡಿ ಆನಂದಿಸುವವರಿಗೇನೂ ಕಡಿಮೆಯಿಲ್ಲ. ಅದರಲ್ಲೂ ವಾರಾಂತ್ಯ ಬಂತೆಂದರೆ ಅಂಗಡಿಗಳು ಸಾವಿರಾರು ಜನರಿಂದ ತುಂಬಿ ತುಳುಕುತ್ತವೆ.
ಬಾಂಡೈ ಪ್ರದೇಶದ ಅಂತಹುದೊಂದು ಸೂಪರ್ ಮಾರ್ಕೆಟ್ ಸಂಕೀರ್ಣದಲ್ಲಿ ಕಳೆದ ವಾರಾಂತ್ಯ ಯಾರೂ ಊಹಿಸಿರದಿದ್ದ ಘಟನೆ ನಡೆಯಿತು. ನಲವತ್ತು ವರ್ಷದ ಗಂಡಸೊಬ್ಬ ಚಾಕುವಿನಿಂದ ಹಲವರನ್ನು ತಿವಿದು ಅವರಲ್ಲಿ ಆರು ಮಂದಿ ಸತ್ತರು. ಕಡೆಗೆ ಒಬ್ಬ ಮಹಿಳಾ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯು ಅವನನ್ನು ಎದುರಿಸಿ ಎಚ್ಚರಿಸಿ, ಸ್ವಯಂರಕ್ಷಣೆಗಾಗಿ ಗುಂಡು ಹಾರಿಸಿದಾಗ ಚಾಕು ಹಿಡಿದಿದ್ದ ಅವನು ಸತ್ತನೆಂದು ವರದಿಯಾಗಿದೆ. ಅವನನ್ನೂ ಒಳಗೊಂಡು ಏಳು ಜನರ ಮರಣವಾಗಿದೆ. ಇರಿತಕ್ಕೊಳಗಾಗಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ನಡೆಸಿರುವ ಪ್ರಥಮ ತನಿಖಾ ವರದಿಗಳಂತೆ ಈ ದುರ್ದೈವದ ಘಟನೆಗೆ ಯಾವುದೇ ಆತಂಕವಾದಿ ಅಥವಾ ಭಯೋತ್ಪಾದನೆ ಗುಂಪುಗಳ ಜೊತೆಗಿನ ಸಂಬಂಧವಿಲ್ಲ ಎನ್ನುವುದು ಎಲ್ಲರಿಗೂ ನೆಮ್ಮದಿ ತಂದಿದೆ.
ಆಸ್ಟ್ರೇಲಿಯಾದಲ್ಲಿ ಇಂತಹ ಸಮುದಾಯ ಶಾಂತಿ ಕದಡುವ ಘಟನೆಗಳು ನಡೆಯುವುದು ಅಪರೂಪ. ಕನಿಷ್ಟ ಶಿಕ್ಷಣ, ಮಧ್ಯಮ ವರ್ಗ ಸಮಾಜದ ಹೆಚ್ಚು ಜನರು ದುಡಿದು ಗಳಿಸಿ ಸಾಮಾನ್ಯ ಜೀವನ ನಡೆಸುವ ಮೌಲ್ಯವನ್ನಿಟ್ಟುಕೊಂಡು ಬದುಕುವವರು. ಒಂದು ರೀತಿಯಲ್ಲಿ ಹೇಳುವುದಾದರೆ ಏಕತಾನದಲ್ಲಿ ಚಲಿಸುವ ಸಮಾಜದ ಸ್ತರಕ್ಕೆ ಕುಂದು ಬಂದರೆ ಎಲ್ಲರಿಗೂ ತಬ್ಬಿಬ್ಬಾಗಿ ಬಿಡುತ್ತದೆ. ಸಿಡ್ನಿಯಲ್ಲಿ ನಡೆದ ಕಳೆದ ವಾರಾಂತ್ಯದ ಘಟನೆಯಿಂದ ಜನರು ವಿಚಲಿತರಾಗಿದ್ದಾರೆ. ಏಕೆಂದರೆ ಚಾಕು ಹಿಡಿದುಕೊಂಡು ಓಡಾಡಿ ಜನರನ್ನು ಇರಿದವನ ಮಾನಸಿಕ ಆರೋಗ್ಯ ಚೆನ್ನಾಗಿರಲಿಲ್ಲವಂತೆ. ಇದು ಕೂಡ ತಲ್ಲಣವನ್ನು ಹುಟ್ಟುಹಾಕಿದೆ. ಏಕೆಂದರೆ ಅವನು ಕ್ವೀನ್ಸ್‌ಲ್ಯಾಂಡ್ ರಾಜ್ಯದವನು. ಅಲ್ಲಿಂದ ಪಕ್ಕದ ರಾಜ್ಯಕ್ಕೆ ಪಯಣಿಸಿದ್ದ. ಅಲ್ಲಿ ಅವನು ಕಳೆದ ಕೆಲ ತಿಂಗಳ ಕಾಲ ಎಲ್ಲಿದ್ದ, ಏನು ಮಾಡಿದ ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ, ಅವನಿಗೂ ಮತ್ತು ಅವನು ಇರಿದ ಜನರಿಗೂ ಯಾವುದೇ ಸಂಬಂಧವಿರಲಿಲ್ಲ, ಹಾಗಾಗಿ ಇದು ಸಿಟ್ಟು, ಸೇಡು ತೀರಿಸಿಕೊಳ್ಳುವ, ದ್ವೇಷದ ಪ್ರಕರಣವಲ್ಲ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಚಾಕು, ಪಿಸ್ತೂಲು, ಗನ್ ಇತ್ಯಾದಿ ಆಯುಧಗಳನ್ನು ಕೊಳ್ಳುವುದು, ಬಳಸುವುದಕ್ಕೆ ಕಠಿಣ ಕ್ರಮಗಳಿವೆ. ಅಂಗಡಿಗಳಲ್ಲಿ ಚಾಕು, ಚೂರಿಗಳನ್ನು ಮಾರಲು ಪರವಾನಗಿ ಇರಬೇಕು. ಅವನ್ನು ಬೀಗ-ಕೀಲಿ ಸಹಿತವಾಗಿ ಭದ್ರವಾದ ಗಾಜಿನ ಪೆಟ್ಟಿಗೆಗಳಲ್ಲಿ ಇಟ್ಟಿರುತ್ತಾರೆ. ಅವನ್ನು ನೋಡಿ ಗ್ರಾಹಕರು ಕೊಳ್ಳಬೇಕೆಂದರೆ ಅವರಿಗೆ ೧೮ ವರ್ಷ ತುಂಬಿರಬೇಕು. ಅಂಗಡಿಯ ಕೀಲಿ ಇರುವ ನಿಗದಿತ ಸಿಬ್ಬಂದಿ ಬಂದು ಪೆಟ್ಟಿಗೆ ತೆಗೆದು ಚಾಕು, ಚೂರಿಗಳನ್ನು ತೋರಿಸಿ ವಿವರಿಸುತ್ತಾರೆ. ಗ್ರಾಹಕರು ಕೊಳ್ಳಬೇಕೆಂದರೆ ಕೆಲವೊಮ್ಮೆ ಅವರ ವಯಸ್ಸಿನ ದಾಖಲೆಯನ್ನು ಪರಿಶೀಲಿಸುವುದೂ ಇದೆ.
ಇಂತಹ ಹಿನ್ನೆಲೆಯಲ್ಲಿ ೪೦ ವರ್ಷದ ಜೊಯೆಲ್ ದೊಡ್ಡದೊಂದು ಚಾಕು ಹಿಡಿದುಕೊಂಡು ಜನರನ್ನು ತಿವಿದಿದ್ದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚೂಪಾದ ಆಯುಧಗಳನ್ನು, ಪಿಸ್ತೂಲು, ಗನ್ ಕೊಳ್ಳಲು ಜನಸಾಮಾನ್ಯರು ತಮ್ಮ ಸ್ವಸ್ಥ ಮಾನಸಿಕ ಆರೋಗ್ಯವನ್ನು ಪ್ರಮಾಣಿಸುವ ದಾಖಲೆಯನ್ನು ಹೊಂದಿರಬೇಕೆ, ಬೇಡವೇ ಎನ್ನುವುದು ಚರ್ಚಿತವಾಗುತ್ತಿದೆ. ಆದರೆ, ಇದನ್ನು ಪಕ್ಕಕ್ಕಿಟ್ಟು ಕೆಲವರು ಆಸ್ಟ್ರೇಲಿಯನ್ ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ಅನಾರೋಗ್ಯವನ್ನು ಕುರಿತು ಮಾತನಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮಾನಸಿಕ ಅನಾರೋಗ್ಯಕ್ಕೆ ಕಾರಣಗಳೇನು, ಪರಿಹಾರಗಳೇನು ಎನ್ನುವತ್ತ ಗಮನ ಕೊಡಬೇಕು ಎನ್ನುವುದು ಸಮಂಜಸವಾಗಿದೆ.
ಅಂತಹ ಚರ್ಚೆಗಳಲ್ಲಿ ಮೊದಲಿಗೆ ಬರುವುದು ದಿನೇದಿನೇ ಬಿಗಡಾಯಿಸುತ್ತಿರುವ ದಿನನಿತ್ಯ ಜೀವನದ ವೆಚ್ಚ. Cost of living ಅನ್ನುವ ಭೂತ ಎಲ್ಲರನ್ನೂ ಕಾಡುತ್ತಿದೆ. ವಾರದ ಬಾಡಿಗೆಯಲ್ಲಿ ಹೆಚ್ಚಳ, ಸ್ವಂತ ಮನೆಯಿದ್ದು ಬ್ಯಾಂಕ್ ಸಾಲವಿದ್ದರೆ ಅದಕ್ಕೆ ಕಟ್ಟುವ ಬಡ್ಡಿಯ ಏರಿಕೆ, ತಿನ್ನುವ ಆಹಾರ ಪದಾರ್ಥಗಳ ಬೆಲೆಯೇರಿಕೆ, ಒಂದು ಲೀಟರ್ ಪೆಟ್ರೋಲ್ ದರ ಎರಡು ಡಾಲರಿಗೂ ಮೀರಿದೆ. ಆದರೆ ಸಂಬಳದಲ್ಲಿ ಬದಲಾವಣೆಯಿಲ್ಲ. ಕೋವಿಡ್-೧೯ ಸಮಯದಲ್ಲಿ ಮನೆಯಿಂದ ಕೆಲಸ ಮಾಡಿದ ಅನೇಕರು ಈಗ ಆಫೀಸಿಗೆ ಮರಳಿದ್ದಾರೆ. ಅಂದರೆ ತಿಂಗಳ ಬಜೆಟ್ಟಿನಲ್ಲಿ ಕಾರು, ಬಸ್, ಟ್ರೇನ್ ಇತ್ಯಾದಿಗಳ ಸಾರಿಗೆ ಖರ್ಚು ಸೇರಿಕೊಂಡಿದೆ. ಡಾಕ್ಟರರ ಬಳಿ ಒಂದು ಹತ್ತು ನಿಮಿಷದ ಸಾದಾ ಭೇಟಿಗೆ ಸ್ವಂತ ಪರ್ಸಿನಿಂದ ನಲವತ್ತು ಡಾಲರ್ ತೆರಬೇಕು. ಈ ರೀತಿ ಏರುತ್ತಿರುವ ನಿತ್ಯಜೀವನದ ಖರ್ಚು ಅನೇಕರನ್ನು ಕಂಗೆಡಿಸಿದೆ.
ದಿನದಿನಕ್ಕೆ ವಸತಿರಹಿತ (ಹೋಂ ಲೆಸ್) ಜನರ ಸಂಖ್ಯೆ ಹೆಚ್ಚುತ್ತಿದೆ. ತತ್ಕಾಲಿಕ ಉದ್ಯೋಗದಲ್ಲಿರುವವರು ಸದಾ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದರೆ ಅದರ ಜೊತೆಗೆ ಸೇರುವುದು ಕೆಲಸ ಹೋದರೆ ಜೇವನ ನಿರ್ವಹಣೆ ಹೇಗೆ ಎನ್ನುವ ಚಿಂತೆ. ಈ ಅನೇಕ ರೀತಿಯ ಚಿಂತೆ, ಅಧೈರ್ಯ, ಬೆಂಬಿಡದ ಆತಂಕಗಳು ಮಾನಸಿಕ ಆರೋಗ್ಯವನ್ನು ಕುಗ್ಗಿಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಮಾನಸಿಕ ಒತ್ತಡ, ಖಿನ್ನತೆ, ಅಭದ್ರ ಸ್ಥಿತಿ ಒಡ್ಡುವ ಸವಾಲುಗಳನ್ನು ಎದುರಿಸಲು ಇಲ್ಲವಾದ ಮಾನಸಿಕ ಸ್ಥೈರ್ಯ ಮತ್ತು ಜೀವನಾನುಭವದ ಕೊರತೆ, ಸಮುದಾಯದಿಂದ ಸಹಾಯ ಪಡೆಯಲು ಹಿಂದೇಟು ಹಾಕುವುದು ಅಥವಾ ಹೇಗೆಂದು ತಿಳಿಯದೇ ಇರುವುದು, ಕೀಳರಿಮೆ, ಹೀಗೇ ಬಹುರೂಪಗಳ ಕಾರಣಗಳು ಮನಸ್ಸಿನಾರೋಗ್ಯದ ಮೇಲೆ ನಾನಾವಿಧಗಳ ಪರಿಣಾಮಗಳನ್ನು ಬೀರುತ್ತಿವೆ. ಪರಿಸ್ಥಿತಿ ಬಿಗಡಾಯಿಸುತ್ತಿದೆಯೇ ವಿನಃ ಅವುಗಳಿಗೆ ಪರಿಹಾರಗಳೇನು ಎನ್ನುವುದು ಸ್ಪಷ್ಟವಾಗಿಲ್ಲ.
ಸಮಾಜದ ಆರೋಗ್ಯಕ್ಕೆಂದು ಸರಕಾರಗಳೇನೋ ಇನ್ನಷ್ಟು, ಮತ್ತಷ್ಟು ಹಣವನ್ನು ಹೂಡುತ್ತಿವೆ. ಹೊಸಹೊಸ ಅಧ್ಯಯನಗಳು ಹೊರಬರುತ್ತಿವೆ. ಎಳೆಯರ ಆರೋಗ್ಯ, ಯುವಜನತೆಯ ಆರೋಗ್ಯ ಮತ್ತು ಹಿರಿಯ ಪ್ರಜೆಗಳ ಆರೋಗ್ಯ ಎಂದೆಲ್ಲಾ ತರಾವರಿ ಆರೋಗ್ಯ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಇಷ್ಟೆಲ್ಲಾ ಆದರೂವೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಗುಣಮಟ್ಟ ಇಳಿಯುತ್ತಿದೆ.
ಇದೆಲ್ಲದರ ಹಿನ್ನೆಲೆಯಲ್ಲಿ, ಚಾಕು ಹಿಡಿದು ಯದ್ವಾತದ್ವಾ ಜನರನ್ನು ತಿವಿದ ೪೦ ವರ್ಷದ ಜೊಯೆಲ್ ಮನಃಸ್ಥಿತಿ ಕೆಡಲು ಕಾರಣಗಳೇನಿದ್ದವು, ಸಮಾಜದಲ್ಲಿ ಅವನಂತಹವರು ಇದ್ದಾರೆಯೇ, ವ್ಯಕ್ತಿಯೊಬ್ಬನ ಆತಂಕಕಾರಿ ಮನಃಸ್ಥಿತಿಯನ್ನು ವಿಶ್ಲೇಷಿಸಬೇಕೇ ಅಥವಾ ಅದರ ಜೊತೆಗೆ ಒಟ್ಟಾರೆ ಸಮಾಜದ ಆರೋಗ್ಯವನ್ನು ಗಮನಿಸಬೇಕೇ ಎನ್ನುವ ಪ್ರಶ್ನೆಗಳು ಮುಖ್ಯವಾಗುತ್ತಿವೆ. ಮನುಷ್ಯರು ಎಲ್ಲೂ ಹೇಗೋ ಯಾವುದೊ ಕಾರಣದಿಂದ ಸಾಯಬಹುದು. ಹುಟ್ಟು, ಸಾವು ನಮ್ಮ ಕೈಯಲ್ಲಿಲ್ಲ. ಆದರೆ ಹೀಗೆ ಮತ್ತೊಬ್ಬ ಮನುಷ್ಯನಿಂದ, ಅವನ ವಿಕೃತ ಆಲೋಚನೆಗಳಿಂದ, ಕೃತ್ಯದಿಂದ ಸಾವಿಗೀಡಾಗುವುದು ನಿಜಕ್ಕೂ ಖೇದದ ಸಂಗತಿ. ಒಂದು ಸಮಾಜದಲ್ಲಿ, ಸಮುದಾಯದ ಜನರು ಪರಸ್ಪರತೆಯ ಭಾವದಿಂದ, ನಿರ್ಭೀತಿಯಿಂದ, ಶಾಂತಿಯಿಂದ ಬದುಕುವುದು ಅತ್ಯಗತ್ಯ. ಅದಕ್ಕೆ ಎಲ್ಲರ ಮಾನಸಿಕ ಆರೋಗ್ಯವೂ ಚೆನ್ನಿರಬೇಕು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.