ತೂಕದ ಕೂಳು
ತೂಕದ ಕೂಳು
ಅದೆಷ್ಟು ಹಗಲುಗಳು ಹಸಿದಿವೆ
ಕಡು ಇರುಳ ಕಳವಳವ ಹೊಸೆದು
ಎದೆ ಗುಂಡಿಗೆಯ ಪರಚುವ ತಿರುವುಗಳು
ಕಂಪಿಸಿವೆ ಗೂಢ ಲಿಪಿಯ ಲಕೋಟೆಗಳು
ಹನಿ ಹನಿ ಮಳೆಯು ನರಳುವಲ್ಲಿ
ತೀರದ ನೆನಪುಗಳ ಹಾವಳಿಯೂ
ಅದುರುವ ಇರುಳ ರೆಪ್ಪೆಗಳ ಕೀಳುತ್ತಿವೆ
ತುಂಡು ಬಟ್ಟೆಯ ಏಕಾಕಿತನದಲ್ಲೂ
ಎದೆಯ ಹಾಡ ಗುನುಗುವಲ್ಲಿ
ಖಿನ್ನತೆಗೆ ದೂಡುವ ಸರಳುಗಳು
ಪಂಜರದ ಪರಿಭಾಷೆ ವಿಜೃಂಭಿಸುವಲ್ಲಿಯೂ
ಅರಚುತ್ತಿವೆ ನಕ್ಷತ್ರಗಳು
ಕ್ಷೀಣ ದನಿಯ ಜೊತೆಗಾರರೂ
ಸುಟ್ಟ ಕರುಳುಗಳ ಚಲನೆಯಲ್ಲೂ
ಮುರಿದಿವೆ ಬೆರಳುಗಳು
ಕೆಂಡದ ಹೋಳಿಗೆಗೆ ತುಟಿ ಹಚ್ಚಿ ಕೂತಿರುವೆ
ಭ್ರೂಣಗಳ ಸುತ್ತಿಟ್ಟು
ಅಪೌಷ್ಟಿಕ ಹಕ್ಕಿಗಳ ಮೈದಡವಿ
ಕೊಡವಿಕೊಂಡು ದುಃಸ್ವಪ್ನಗಳ
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ