ಬೇರೆ ದಿನಗಳಲ್ಲಿ ಬಾಯಿ ಮುಚ್ಚದಂತೆ ಸೋಬಾನೆ ಪದ ಹೇಳುವ ಗಣಪಿ, ಗೋಯ್ದು ಎಲ್ಲರನ್ನೂ ಎಷ್ಟು ಒತ್ತಾಯಿಸಿದರೂ ಬಾಯಿಬಿಡಲಿಲ್ಲ. “ಅದ ಪೆಟ್ಟಿಗಿ ಮುಂದೆಲ್ಲ ಹೇಳೂಕೆ ಆಗೂದಿಲ್ವೆ. ಹೆದ್ರೀಕಿ ಬರ್ತದೆ. ದೆನಿ ನಡಗಿ ಗಂಟಲು ಕಟ್ಟೋಯ್ತದೆ. ಮತ್ತೆ ಸಾಯೇಬ್ರು ಕೇಳಿದ್ರೆ ಕಿವಿ ಮುಚ್ಕಬೇಕಾಗೂದು.” ಎನ್ನುತ್ತಾ ಹಾಡಲು ನಿರಾಕರಿಸಿದರು. ಸಾಯೇಬರನ್ನು ನಿರಾಸೆಗೊಳಲಿಸಲು ಇಷ್ಟವಿಲ್ಲದ ನೀಲಿಯ ಅಪ್ಪ ಯಾವುದಾದರೂ ಹಾಡನ್ನು ಹೇಳುವಂತೆ ಮಗಳನ್ನು ಪುಸಲಾಯಿಸಿದರು. ಪೇಟೆಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ತನ್ನ ಮಗಳ ದನಿ ದೂರ ದೇಶದವರೆಗೂ ಹೋಗುವುದನ್ನು ಎಣಿಸಿಯೇ ಅವರಿಗೆ ಖುಶಿಯಾಗಿತ್ತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹನ್ನೆರಡನೆಯ ಕಂತು ನಿಮ್ಮ ಓದಿಗೆ
ಉಸ್ಸಪ್ಪಾ ಎಂದು ಬಾಯಮ್ಮ ಮೀನಿನ ಬುಟ್ಟಿಯನ್ನಿಳಿಸಿ ಬೆವರೊರೆಸುವಾಗ ಯಮುನಮ್ಮ ಇನ್ನೂ ಅಡುಗೆ ಮನೆಯಲ್ಲಿ ಆಳುಗಳಿಗೆ ಅವಲಕ್ಕಿ ಕಲೆಸುವ ಗಡಿಬಿಡಿಯಲ್ಲಿದ್ದರು. ಬೆಳಗಿನ ಕೆಲಸಗಳನ್ನು ಮುಗಿಸಿದ ಗೋವಿಂದ ಹತ್ತು ಗಂಟೆಯ ಆಸರಿ ಕುಡಿಯಲು ಬಂದು ಅಲ್ಲಿಯೇ ಕಂಬಕ್ಕೊರಗಿದ್ದ. ಇದ್ದಕ್ಕಿದ್ದಂತೆ ಈ ಹೊಸ ಬಾಯಮ್ಮ ಮೀನು ತಿನ್ನದವರ ಮನೆಯೆದುರು ಬುಟ್ಟಿಯಿಳಿಸಿದ್ದನ್ನು ಕಂಡು ಚೂರು ಮಜಾ ತೆಗೆದುಕೊಳ್ಳಲೆಂದು ಹೊಂಚುಹಾಕುತ್ತಿದ್ದ. “ಓ ಇವರು ಹೊಸ ಬಾಯಮ್ಮ ಕಾಣ್ತದೆ. ನಿಮ್ಮ ಅಮ್ಮನೋ, ಅತ್ತೇನೋ ಅಲ್ವಾ ಮೊದಲು ಬರ್ತಿದ್ದದ್ದು?” ಎಂದು ಅವಳನ್ನು ಮಾತಾಡಿಸಿದ. “ಅತ್ತೇನೂ ಅಲ್ಲ, ಅಮ್ಮನೂ ಅಲ್ಲ. ನನ್ನ ದೊಡ್ಡಮ್ಮ ಅವ್ರು. ಒಂದು ತಿಂಗಳಿಂದ ಸೊಂಟನೋವು ಎಂದು ಮಲಗ್ಬಿಟ್ಟಿದ್ದಾರೆ. ಮತ್ತೆ ಯಾಪಾರ ಬಿಟ್ಟು ಇರೂಕಾಯ್ತದೆ. ಅದ್ಕೆ ಈಗ ನಾನು ಶುರು ಮಾಡದೆ” ಎನ್ನುತ್ತಾ ಪೀಠಿಕೆ ಹಾಕಿದಳು. ಇವರಿಬ್ಬರ ಮಾತುಕತೆ ಕೇಳಿದ ಯಮುನಮ್ಮ ಬಂದರ‍್ಯಾರೆಂದು ನೋಡಿ ಹೋಗೋಣವೆಂದು ಅವಸರದಲ್ಲಿಯೇ ಹೊರಗಿಣುಕಿದರು. ಮೀನು ಬುಟ್ಟಿ ಇಟ್ಟು ಕುಳಿತ ಬಾಯಮ್ಮನನ್ನು ನೋಡಿ, “ಅರೆ! ಹೆಣ್ಣೇ! ನಿಮ್ಮಮ್ಮ ಊರಿಗೆಲ್ಲ ಮೀನು ಮಾರಿ ಬುಟ್ಟಿ ಖಾಲಿಯಾದ ಮೇಲೆ ಇಲ್ಲಿಗೆ ಬರ್ತಿದ್ರು. ನೀನು ನೋಡಿದ್ರೆ ಮೀನು ತಂದು ನಮ್ಮ ಮನೆ ಅಂಗಳದಲ್ಲಿಟ್ಟಿದ್ಯಲ್ಲೆ.” ಎಂದು ಮಾತು ಪ್ರಾರಂಭಿಸಿದರು. ಅವರ ಮಾತು ಮುಗಿಯುವುದನ್ನೇ ಕಾಯುತ್ತಿದ್ದ ಬಾಯಮ್ಮ, “ಅಹಹಾ! ಹೀಂಗೆ ಬಂದ್ಬಿಟ್ಟು ಮೀನು ತಿನ್ನದವರ ಥರಾ ನಾಟಕ ಮಾಡಿದ್ರೆ ಕಳೆದ ವಾರದ ದುಡ್ಡನ್ನು ಬುಟ್ಬುಡ್ತೀನಿ ಅಂದ್ಕೋಬೇಡಿ. ಈಗ ಮೀನು ಬೇಡದಿದ್ರೆ ಅಷ್ಟೇ ಹೋಯ್ತು. ಕಳೆದವಾರ ತಗಂಡ್ರಲ್ಲ, ಮನೆಗೆ ನೆಂಟ್ರು ಬತ್ತಾರಂತ ಹತ್ತು ಬಂಗ್ಡೆ. ಅದರ ದುಡ್ಡನ್ನು ಮೊದಲು ಇಟ್ಟು ಮಾತಾಡಿ” ಎಂದು ಮೀನುಪೇಟೆಯ ಭಾಷೆಯಲ್ಲಿ ದಬಾಯಿಸತೊಡಗಿದಳು. ಇವಳ ಮಾತನ್ನು ಕೇಳಿ ಅವಾಕ್ಕಾದ ಯಮುನಮ್ಮ ಗೋವಿಂದನ ಕಡೆಗೆ ನೋಡಿ, “ನೀನಾದ್ರೂ ಹೇಳೋ ಗೋವಿಂದ. ಇವಳ್ಯಾವಳೋ ಮಾರಾಯ? ಯಾರಾದ್ರೂ ಕೇಳಿದ್ರೆ ನಗಾಡಿಯಾರು. ನಾನು ಇವಳತ್ರ ಮೀನು ಯಾವಾಗ ತಗೊಂಡೆ ಮಾರಾಯ? ಊರಿಗೆ ಹೊಸಬಳು, ದಾರಿ ತಪ್ಪಿ ಮನೆಯನ್ನು ಅದಲುಬದಲು ಮಾಡಿಕೊಂಡಿದ್ದಾಳೆ ಅನಿಸ್ತದೆ.” ಎಂದು ಅವನ ಸಹಾಯವನ್ನು ಯಾಚಿಸಿದರು. ಅಷ್ಟಕ್ಕೇ ಸುಮ್ಮನಾಗದ ಬಾಯಮ್ಮ, “ಹಾಂ, ಹೊಸಬಳು ಅಂತ ಯಾಮಾರಿಸಲಿಕ್ಕೆ ನೋಡಬೇಡಿ. ನಾನು ಮೊದಲ ಸಲವಲ್ಲ ಬರ್ತಿರೋದು. ದೊಡ್ಡಮ್ಮನ ಜತೆಯಲ್ಲಿ ಶ್ಯಾನೆ ಸಲ ಬಂದಿದ್ದೀನಿ. ಮೀನು ತಗೊಂಡವರು ನೀವೆ, ನನಗೆ ಸರೀ ನೆನಪಿದೆ. ದುಡ್ಡು ಕೊಟ್ರೆ ಸರಿಹೋಯ್ತು. ಇಲ್ಲಾಂದ್ರೆ ನಾಕು ಜನ ಸೇರಿಸಿ ಪಂಚಾಯ್ತಿ ಮಾಡ್ತದೆ ನಾನು.” ಎಂದು ರೋಪ್ ಹಾಕಿದಳು. ಗೋವಿಂದ ಯಮುನಮ್ಮನ ಕಡೆಗೆ ನೋಡಿ, “ನಂಗೆಂಥ ಗೊತ್ತದೀರಾ? ಹೊಸ ಬಾಯಮ್ಮ ಹೇಳ್ದಾಂಗೆ ಬಂಗ್ಡೆ, ಗಿಂಗ್ಡೆ ತೆಕಂಡಿರೋ ಏನೊ?” ಎಂದು ಮುಸಿಮುಸಿ ನಗತೊಡಗಿದ.
ಅವನ ಮಾತಿಗೆ ಮುನಿಸಿಕೊಂಡ ಯಮುನಮ್ಮ, “ಹೋಗಿ ಹೋಗಿ ನಿನ್ನತ್ರ ಹೇಳ್ತಿನಲ್ಲ ಮಾರಾಯ. ಬೆಂಕಿ ಬಿದ್ದಲ್ಲಿ ಚಳಿಕಾಯಿಸೋ ಆಸಾಮಿ ನೀನು. ನೀನು ತಮಾಷೆ ಮಾಡಿದ್ರೂ ಆ ಮಗು ಅದನ್ನ ಸತ್ಯ ಅಂತ ನಂಬ್ತದೆ. ಇಲ್ನೋಡು ಕೂಸೆ, ನೀನು ಈಗ ಒಂದು ತಿಂಗಳಿನಿಂದ ನಮ್ಮೂರಿಗೆ ಬತ್ತಿದ್ದೆ. ನಿನ್ನ ಅಮ್ಮ ಅದ್ಯಲೇ, ಅದು ನಾನು ಮದುವೆಯಾಗಿ ಬಂದಾಗಿನಿಂದ ನಂಗೆ ಗುರ್ತ. ಊರಿಗೆಲ್ಲ ಮೀನು ಹಂಚಿ ಬುಟ್ಟಿ ಖಾಲಿಯಾದ ಮೇಲೆ ನಮ್ಮನೆ ಅಂಗಳದಲ್ಲಿ ಕೂತು ಕಷ್ಟ, ಸುಖ ಮಾತಾಡಿ ಹೋಗ್ತಿತ್ತು. ಊರಿನವ್ರೆಲ್ಲಾ ಮೀನು ಮಾರೋ ಬಾಯಮ್ಮಂಗೂ, ಮಜ್ಜಿಗೆ ಉಣ್ಣೋ ಯಮುನಮ್ಮಂಗೂ ಅದೆಂಥ ಗೆಳತನ ನೋಡಿ ಅಂತ ಪಾರ್ಸ ಮಾಡ್ತಿದ್ರು. ಆಗೆಲ್ಲೋ ಅವಳ ಜತೆ ಬಂದ ನೀನೂ ನಮ್ಮನೆಯಲ್ಲಿ ಮಜ್ಜಿಗೆ ಕುಡಿದಿರಬಹುದು. ಹಾಗಂತ ನಾನು ನಿನ್ನತ್ರ ಮೀನು ತಗೊಳ್ಳೋದುಂಟೇನೆ? ನಾವು ಮೀನು ತಿನ್ನೋ ಜಾತಿ ಅಲ್ಲ ಕಣೆ.” ಎಂದು ಸಮಾಧಾನದಿಂದ ನುಡಿದರು. ಆದರೆ ಹೊಸ ಬಾಯಮ್ಮ ಮಾತ್ರ, “ನಂಗೆ ನನ್ನ ದೊಡ್ಡಮ್ಮನ ಥರಾ ಮರೆವು ರೋಗ ಏನಿಲ್ಲ. ಕಳೆದವಾರ ಬಂದಾಗ ಇದೇ ಮನೆಯಲ್ಲೇ, ನೀವಿರಲಿಲ್ಲ. ನಿಮ್ಮ ಸೊಸೆ ಅಂತ ಕಾಣ್ತದೆ. ಒಳಗಿನಿಂದ ದೊಡ್ಡ ಮಣ್ಣಿನ ಪಾತ್ರೆ ತಂದು ಹತ್ತು ಬಂಗ್ಡೆ ತುಂಬಕಂಡು ಹೋದ್ರು. ದುಡ್ಡು ಕೇಳಿದ್ದಕ್ಕೆ ಮುಂದಿನವಾರ ಬಂದಾಗ ಕೊಡ್ತೀನಿ ಅಂದ್ರು. ನನ್ನ ದುಡ್ಡು ನಂಗ್ ಕೊಡಿ. ಈಗ್ಲೇ ಹೊರಟೆ.” ಎಂದು ಪಟ್ಟು ಹಿಡಿದಳು. ಇನ್ನಿದು ವಿಪರೀತಕ್ಕೆ ಹೋಗುವುದೆಂದು ಮನಗಂಡ ಗೋವಿಂದ, “ನೀವು ಹೋಗಿ ಆಸ್ರ ಮಾಡಿ ಅಮ್ಮ. ಅವಳಿಗೆ ದುಡ್ಡು ನಾ ಕೊಡಿಸ್ತೆ.” ಎಂದವನೇ ಮನೆಯ ಹಿಂದಿನ ಬೇಲಿಯಂಚಿಗೆ ಹೋಗಿ ನೀಲಿಯನ್ನು ಕರೆದ. ಸ್ವಲ್ಪವೇ ಹೊತ್ತಿನಲ್ಲಿ ನೀಲಿಯ ಅಮ್ಮ ಅಂಗಳದಲ್ಲಿ ಹಾಜರಾದಳು. “ಅರೆ! ಬಾಯಮ್ಮ. ಇದೆಂಥದ್ದೇ ನಿಂದು? ಕಳೆದವಾರ ಮೀನು ತಗಂಡದ್ದು ನಾ ಅಲ್ವೇನೆ? ಅಲ್ಲಿ ದುಡ್ಡ ಹಿಡಕಂಡು ನೀ ಬರ್ತೆ ಅಂತ ಕಾಯ್ತಿದ್ರೆ ನೀ ಇಲ್ಲಿ ಯಮುನಮ್ಮಂಗೆ ಮೀನು ತಿನ್ಸೋ ಆಲೋಚನೆಯಲ್ಲಿದ್ಯೋ ಹೇಂಗೆ? ನಡಿ, ನಡಿ. ನಮ್ಮನೆ ಆಚೆಗದೆ.” ಎಂದು ಅವಳಿಗೆ ಮೀನುಬುಟ್ಟಿ ಎತ್ತಲು ಅನುವಾದಳು. ಅಷ್ಟರಲ್ಲಿ ಮನೆಯ ಹೊರಗೆ ಬಂದ ಯಮುನಮ್ಮ, “ಈ ಹೊಸ ಬಾಯಮ್ಮನ ಕಾಟದಲ್ಲಿ ಆಗೋದಲ್ಲ ಮಾರಾಯ್ತಿ. ಅಂತೂ ಮೀನು ತಗೊಂಡವರು ಸಿಕ್ಕಿದ್ರು ಅಂತಾಯ್ತು. ದುಡ್ಡಾದ್ರೂ ತಗದು ಕೊಟ್ಟು ಬಿಡಬಹುದು ಮಾರಾಯ್ತಿ. ಅವ್ರು ಹತ್ತು ಬಂಗ್ಡೆ ತಿಂದ್ರು ಅಂತ ಟಾಂ, ಟಾಂ ಮಾಡ್ತದಲೇ ಈ ಹುಡುಗಿ.” ಅಂದವರೆ ಇಬ್ಬರಿಗೂ ಒತ್ತಾಯ ಮಾಡಿ ಅವಲಕ್ಕಿ, ಚಾ ಕೊಟ್ಟು ಕಳಿಸಿದರು.
ಹೊಳೆಸಾಲಿಗೆ ಸಾಯ್ಬರು ಬರುವುದು ಹೊಸದೇನೋ ಅಗಿರಲಿಲ್ಲ. ಅಲ್ಲಿ ಸಿಗುವ ಕೆಸುವಿನ ಗಡ್ಡೆ, ಪಂಜರ ಗಡ್ಡೆ, ಸೀತಾಫಲ, ಹಲಸಿನ ಹಣ್ಣು ಎಲ್ಲವೂ ಅವರಿಗೆ ಬಹಳ ಪ್ರಿಯ. ಎಲ್ಲಕ್ಕಿಂತ ಮಿಗಿಲೆಂದರೆ ಹೊಳೆಸಾಲಿನ ಜನರ ಜತೆಗೆ ನಡೆಸುವ ರಾತ್ರಿಯ ಶಿಕಾರಿ. ಆಗ ಹೊಡೆಯುತ್ತಿದ್ದ ಮೊಲ, ಬರ್ಕದ ಮಾಂಸವೆಂದರೆ ಸಾಯ್ಬರಿಗೆ ಅಚ್ಚುಮೆಚ್ಚು. ಹಾಗೆ ಹೊಳೆಸಾಲಿನವರ ಚೂರು ಪಾರು ಬೆಳೆಗಳ ಖರೀದಿಗೆ ಬರುತ್ತಿದ್ದವರೆಂದರೆ ಕೊಳೆ ಅಡಿಕೆಯ ಸಾಯೇಬ್ರು. ತೋಟದಲ್ಲಿ ಹಣ್ಣಾಗುವ ಮೊದಲೇ ಮಾಗಿ ಕೆಳಗೆ ಬಿದ್ದ ಕಾಯಿ ಅಡಿಕೆಗಳನ್ನು ಮನೆಯ ಹೆಂಗಸರು ಒಂದೂ ಬಿಡದಂತೆ ಹೆಕ್ಕಿ ತಂದು, ಸುಲಿದು, ಮಳೆಗಾಲದ ಕಳ್ಳ ಬಿಸಿಲಿನಲ್ಲಿ ಇಷ್ಟಿಷ್ಟೇ ಒಣಗಿಸಿ ಇಟ್ಟರೆ ಅದನ್ನು ಪುಡಿಗಾಸು ನೀಡಿ ಖರೀದಿಸುವವರು ಈ ಸಾಯಬ್ರು. ಹಾಗಾಗಿ ಅವರಿಗೆ ಕೊಳೆ ಅಡಿಕೆ ಸಾಯಬ್ರು ಅಂತಾನೇ ಉಪನಾಮ. ಮಣ್ಣಿನ ಒಲೆಯ ಕಾವಿನಲ್ಲಿಯಾದರೂ ಅಡಿಕೆಯನ್ನು ಒಣಗಿಸಿ ಪುಡಿಗಾಸು ಸಂಪಾದಿಸುವುದೆಂದರೆ ಮನೆಯ ಹೆಂಗಸರಿಗೆ ಇನ್ನಿಲ್ಲದ ಖುಶಿ. ಇವರು ಆ ಹೆಂಗಳೆಯರೆಲ್ಲರ ಆಪದ್ಭಾಂದವರು. ಮಳೆಗಾಲದಲ್ಲಿ ಈ ವ್ಯಾಪಾರವಾದರೆ ಬೇಸಗೆಯಲ್ಲೂ ಅವರ ವ್ಯಾಪಾರ ನಿಲ್ಲದು. ಗೇರುಬೀಜದಲ್ಲಿ ಆರಿಸಿ ತೆಗೆದ ಪೊಕ್ಕುಬೀಜವನ್ನೂ ಅವರು ಕೊಳ್ಳುತ್ತಾರೆ. ತೋಟದಲ್ಲೊಂದು ಜಿಕ್ಕು ಬಾಳೆಕೊನೆ ಇದ್ದರೂ ಕಡಿದು ಒಯ್ಯುತ್ತಾರೆ. ನಾಲ್ಕು ಕಟ್ಟು ವೀಳ್ಯದೆಲೆ ಕೊಯ್ದು ಕೊಟ್ಟರೂ ಚಿಲ್ಲರೆ ಕಾಸು ಕೊಡುತ್ತಾರೆ. ಸೀತಾಫಲದ ಮರವನ್ನು ತಾವೇ ಹತ್ತಿ ಒಂದಿಷ್ಟು ಕೊಯ್ದು, ಮನೆಯವರಿಗೂ ಇಷ್ಟು ಕೊಟ್ಟು ಉಳಿದಿದ್ದಕ್ಕೆ ಕಾಸು ನೀಡುತ್ತಾರೆ. ಮನೆಯ ಮಕ್ಕಳಿಗೆ ಖಾಯಿಲೆ, ಕಸಾಲೆ ಎಂದರೆ ಪೇಟಿಯಿಂದ ಬರುವಾಗ ತಮಗೆ ಪರಿಚಯವಿರುವ ವೈದ್ಯರಿಂದ ಕೆಂಪು ಔಷಧ ತಂದು ಕೊಡುತ್ತಾರೆ. ಅಡಿಕೆ ಕೊಳೆಗೆ ಔಷಧವನ್ನೂ ಅವರೇ ಹೊಳೆಸಾಲಿನವರಿಗೆ ಒದಗಿಸುತ್ತಾರೆ. ಕೊಳೆಅಡಿಕೆ ಸಾಯೇಬ್ರನ್ನು ಕಾಣದೇ ವಾರವಾದರೆ ಊರಿನವರೆಲ್ಲರೂ ಚಡಪಡಿಸುತ್ತಾರೆ. ದುಡ್ಡಿನ ವಿಷಯದಲ್ಲವರು ಸದಾ ಸೀದಾಸಾದಾ. ಲೆಕ್ಕ ಬರುವವರಿರಲಿ, ಬಾರದವರಿರಲಿ, ದೊಡ್ಡವರಿರಲಿ, ಮಕ್ಕಳಿರಲಿ ನ್ಯಾಯ ಅಂದ್ರೆ ನ್ಯಾಯ. ರೇಟು ಕಡಿಮೆಯಾದರೂ ಹಣದಲ್ಲೆಂದೂ ಮೋಸ ಮಾಡಿದವರಲ್ಲ. ಯಾಪಾರದಲ್ಲಿ ಮೋಸ ಮಾಡಿದ್ರೆ ಅಲ್ಲಾ ಮಾಫ್ ಮಾಡಲ್ಲ ಎಂಬುದವರ ಖಚಿತ ನಿಲುವು.
ಇವರು ಹೊಳೆಸಾಲಿನ ಖಾಯಂ ಅತಿಥಿಗಳಾದರೆ ದುಬಾಯಿ ಉದ್ಯೋಗಿಗಳಾದ ದೊಡ್ಡ ಸಾಹೇಬರು ಮತ್ತು ಚಿಕ್ಕ ಸಾಹೇಬರು ವರ್ಷಕ್ಕೊಮ್ಮೆ ಬರುವ ಅಪರೂಪದ ಅತಿಥಿಗಳು. ವರ್ಷಕ್ಕೋ, ಎರಡು ವರ್ಷಕ್ಕೋ ತಮ್ಮೂರಿಗೆ ಬಂದಾಗ ಹೊಳೆಸಾಲಿಗೆ ಬಾರದೇ ಹೋದರೆ ಅವರಿಗೆ ನಿದ್ದೆ ಬಾರದು. ತಮ್ಮ ವಿಶಿಷ್ಟವಾದ ಕನ್ನಡದಲ್ಲಿ ಎಲ್ಲರನ್ನೂ ಮಾತನಾಡಿಸುತ್ತಾ, ಎಲ್ಲರ ಮನೆಗೂ ಭೇಟಿ ನೀಡುತ್ತಾ, ಅವರು ಕೊಡುವ ಚಾ, ಗಂಜಿ, ಅನ್ನ, ಮೀನು, ಮಡ್ಡಿ ಎಂಥದ್ದೇ ಇರಲಿ ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸುತ್ತಾ ಒಂದೆರಡು ದಿನಗಳನ್ನು ಕಳೆಯುವುದು ಅವರ ರೂಢಿ. ಹಾಗೆ ಬರುವಾಗ ಅವರು ಬರಿಗೈಯ್ಯಲ್ಲಿ ಬಾರರು. ಹೊಸದಾಗಿ ಮದುವೆಯಾದವರಿಗೆ ಉಡುಗೊರೆ, ಮಕ್ಕಳಿಗೆ ಅಪರೂಪದ ಚಾಕಲೇಟುಗಳು, ತರುಣಿಯರಿಗೆ ಪರಿಮಳದ ಸೋಪುಗಳು, ಹುಡುಗರಿಗೆ ಪುಟ್ಟ ಅತ್ತರಿನ ಬಾಟಲ್ಲುಗಳು ಹೀಗೆ ಅವರು ತರುವ ಸೂಟಕೇಸುಗಳ ತುಂಬ ಉಡುಗೊರೆಗಳೇ ತುಂಬಿರುತ್ತಿದ್ದವು. ನಾಲ್ಕು ಸಲ ಹಾಕಿ ನೀರಿಗದ್ದಿದ ಕೂಡಲೇ ಬಣ್ಣಗೆಟ್ಟು ಮಸುಕಾಗುವ ತಮ್ಮ ಹತ್ತಿಬಟ್ಟೆಯ ರವಿಕೆಗಳ ನಡುವೆ ಅವರು ತರುತ್ತಿದ್ದ ಪಾಲಿಸ್ಟರ್ ಬಟ್ಟೆಯ ಬಣ್ಣ, ನುಣುಪು, ಬಾಳಿಕೆ ಎಲ್ಲವೂ ಹೊಳೆಸಾಲಿನ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚಾಗಿತ್ತು. ದುಬಾಯಿ ಪೀಸಿದೊಂದು ರವಿಕೆ ಹೊಲಿಸಿಕೊಳ್ಳಬೇಕು ಎಂಬುದು ಅವರ ಕನಸೂ ಆಗಿತ್ತು.
ಹೀಗೆ ಬರುವ ದೊಡ್ಡ ಮತ್ತು ಸಣ್ಣ ಸಾಹೇಬರ ಅಪ್ಪನೂ ಹೊಳೆಸಾಲಿಗೆ ಪರಿಚಿತರೇ ಆಗಿದ್ದರು. ಅಲಿ ಸಾಹೇಬ್ರು ಎಂದು ಊರಿನವರೆಲ್ಲರ ಪ್ರೀತಿಗೆ ಪಾತ್ರರಾದವರು ಅವರು. ಅವರ ಬಗ್ಗೆ ಹೊಳೆಸಾಲಿನ ಹಿರಿಯಜ್ಜಿ ಯಾವಾಗಲೂ ಒಂದು ಕತೆಯನ್ನು ಹೇಳುತ್ತಿದ್ದರು. ಕಾರಣಾಂತರಗಳಿಂದ ಅಜ್ಜಿಯ ಮನೆಗೆ ಬಂದ ಸಾಯೇಬ್ರು ರಾತ್ರಿಯೂ ಅಲ್ಲಿಯೇ ಉಳಿಯುವಂತಾಯಿತಂತೆ. ಚಳಿಗಾಲವಾದ್ದರಿಂದ ಹೊರಗೆ ಚಾವಡಿಯಲ್ಲಿ ಮಲಗುವ ಅವರಿಗೆ ಚಳಿಯಾಗಬಹುದೆಂದು ಅಜ್ಜಿ ಮುಡಕಿನ ಹುಲ್ಲಿನಿಂದ ಮಾಡಿದ ಚಾಪೆಯೊಂದನ್ನು ನೀಡಿ, “ಸಾಯೇಬ್ರೆ, ಚಳಿಯಾಯ್ತದೆ. ಹಸೆ ಮೂಡ್ ಹಾಕಿ ಮಲಗಿ” ಎಂದಳಂತೆ. ಹಾಸಿ, ಹೊದೆಯಲು ಚಾದರಗಳಿಲ್ಲದ ಆ ಕಾಲದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಈ ಚಾಪೆಯನ್ನು ತಮ್ಮ ಸುತ್ತಲೂ ಎರಡು ಮಡಿಕೆಗಳಲ್ಲಿ ಸುತ್ತಿಕೊಂಡು ಮಲಗುತ್ತಿದ್ದರಂತೆ. ಅದನ್ನು ಹಳ್ಳಿಯ ಭಾಷೆಯಲ್ಲಿ ಮೂಡ್ ಹಾಕುವುದು ಎನ್ನುತ್ತಾರೆ. ಅಜ್ಜಿಯ ಮಾತನ್ನು ಕೇಳಿದ ಸಾಯೇಬ್ರು, “ಅಜ್ಜೀ, ಹಸಿ(ಚಾಪೆ) ಹೊದ್ರೆ ದೆಸಿ (ಅದೃಷ್ಟ) ಹೋಯ್ತದೆ. ಹಸಿ ಬ್ಯಾಡ.” ಎನ್ನುತ್ತಾ ತಾವುಟ್ಟ ಲುಂಗಿಯನ್ನೇ ಹಾಸಿಕೊಂಡು ಮಲಗಿದರಂತೆ. ನಡುರಾತ್ರಿಯಲಿ ಚಳಿಯಿಂದ ಕಟಕಟನೆ ನಡುಗುವಾಗ ತಡೆಯಲಾರದೇ ಬಾಗಿಲನ್ನು ತಟ್ಟಿ ಅಜ್ಜಿಯನ್ನು ಎಬ್ಬಿಸಿ, “ದೆಸಿ ಹೋದ್ರೆ ಹೋಗ್ಲಿ. ಹಸಿ ಕೊಡು ಮುದುಕಿ” ಎಂದರಂತೆ. ಇದನ್ನು ಹೇಳಿ ಅಜ್ಜಿ ಕಿಲಕಿಲನೆ ನಗುತ್ತಿದ್ದಳು.
ದುಬಾಯಿಯಿಂದ ಬರುವ ಸಾಯೇಬರು ಅಚ್ಚರಿಯ ಸಂತೆಯನ್ನೇ ಹೊಳೆಸಾಲಿಗೆ ಹೊತ್ತು ತರುತ್ತಿದ್ದರು. ಎಂಥೆಂಥದ್ದೋ ಮಾಯಕದ ಗೊಂಬೆಗಳು, ಕೀ ಕೊಟ್ಟರೆ ಓಡುವ ಬಸ್ಸು, ನಿಪ್ಪಲ್ ಬಾಯಿಂದ ತೆಗೆದೊಡನೆ ಅಳುವ ಶಿಶು, ಚಂಡೆ ಬಡಿಯುವ ಕೋತಿ, ನಾಣ್ಯವಿಟ್ಟರೆ ಪಟ್ಟಕ್ಕನೆ ಬಂದು ಒಳಗೆಳೆದುಕೊಳ್ಳುವ ನಾಯಿ ಹೀಗೆ ಹೊಳೆಸಾಲಿನವರು ಕಂಡು ಕೇಳರಿಯದ ಆಟಿಕೆಗಳನ್ನು ತಂದು ಊರ ನಡುವಿರುವ ಮನೆಯವರ ಅಂಗಳದಲ್ಲಿ ಪ್ರದರ್ಶನ ಮಾಡುತ್ತಿದ್ದರು. ದುಡಿಮೆಯನ್ನು ಮುಗಿಸಿ ಬಂದ ಜನರೆಲ್ಲರೂ ಸುತ್ತಲೂ ನಿಂತು ಸಂಭ್ರಮದಿಂದ ನೋಡುತ್ತಿದ್ದರು. ಮಕ್ಕಳಂತೂ ಕಿಂದರಿಜೋಗಿಯ ಹಿಂದೆ ಸುತ್ತುವ ಗುಂಪಿನಂತೆ ಅವರ ಹಿಂದೆಯೇ ಸುತ್ತುತ್ತಿದ್ದರು. ಹೊಳೆಸಾಲಿನಲ್ಲಿ ಬೆಳಗಾದರೆ ಸಾಕು, ಕೊಯ್ಯಯ್ಯೋ… ಕೊಯ್ಯಯ್ಯೋ… ಎಂದು ಕೂಗುತ್ತಾ, ಹಿಂದೆಯೇ ಅರ್ಥವಾಗದ ಭಾಷೆಯಲ್ಲಿ ವಾರ್ತೆಯನ್ನು ಹೇಳಿ, ಮತ್ತೆ ಭಕ್ತಿಗೀತೆಗಳ ಪ್ರವಾಹವನ್ನೇ ಹರಿಸುವ, ಚಿಂತನ, ಕೃಷಿರಂಗ ಅಂತೆಲ್ಲ ಜೀವನಕ್ಕೆ ಬೇಕಾದ ಮಾಹಿತಿಗಳನ್ನು ತಿಳಿಸುವ, ಹೊಸ ಚಿತ್ರಗೀತೆಗಳ ಮೂಲಕ ಕನಸಿನ ಲೋಕವನ್ನು ಕಾಪಿಡುವ ರೇಡಿಯೋ ಕೂಡ ಅವರ ಕೊಡುಗೆಯೆ. ತಮ್ಮ ಮನೆಯಲ್ಲಿ ರೇಡಿಯೋ ಎಂಬ ಅಪರೂಪದ ವಸ್ತುವಿದೆಯೆಂಬುದನ್ನು ಇಡಿಯ ಲೋಕಕ್ಕೆ ಸಾರುವಂತೆ ಅದನ್ನು ಫುಲ್ ವಾಲ್ಯೂಮಿನಲ್ಲಿಟ್ಟು ಹಚ್ಚುವುದೆಂದರೆ ಅವರಿಗೊಂದು ಪ್ರೆಸ್ಟೀಜು. ನಾಲ್ಕಾರು ಬರ್ಕದ ಶಿಕಾರಿ ಮಾಡಿದ ಮನೆಗಳಿಗೆ ಸಾಯೇಬರದು ರೇಡಿಯೋದ ಇನಾಮು.
ಈ ಸಲ ಬೇಸಿಗೆಯಲ್ಲಿ ಸಾಯೇಬರು ಬರುವಾಗ ಇನ್ನೂ ಅಚ್ಚರಿಯ ಪೆಟ್ಟಿಗೆಯೊಂದನ್ನು ತಂದಿದ್ದರು. ಅದರೊಳಗೆ ಕುಳಿತಿರುವ ಕ್ಯಾಸೆಟ್ ಎಂಬ ಸಾಧನವೊಂದು ಎದುರಿನವರು ಮಾತನಾಡಿದ್ದೆಲ್ಲವನ್ನೂ ರೆಕಾರ್ಡ್ ಮಾಡಿಬಿಡುತ್ತಿತ್ತು. ಮೊದಲಿಗೆ ನೀಲಿಯ ಮನೆಯಂಗಳದಲ್ಲಿ ಅದರ ಪ್ರದರ್ಶನವಾಯಿತು. ಅಲ್ಲೇ ಮೂಲೆಯಲ್ಲಿ ನಿಂತಿದ್ದ ನಿಂಗಿ, ಗೋಪಿ ಮಾತಾಡುತ್ತಿದ್ದುದನ್ನು ಆ ಪೆಟ್ಟಿಗೆ ಪುನಃ ಕೇಳಿಸಿದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟರು. “ನಿಮ್ದು ಯಾರಾದ್ರೂ ಚಂದ ಮಾಡಿ ಹಾಡು ಹೇಳಿದ್ರೆ ನಮ್ದು ಅದನ್ನು ಇದರೊಳಗೆ ರೆಕಾರ್ಡ ಮಾಡ್ತದೆ. ಮತ್ತೆ ನಮ್ದು ದುಬಾಯಿಗೆ ಹೋಗೂವಾಗ ತೆಕಂಡು ಹೋದ್ರೆ ಅದನ್ನ ಕೇಳೂಕಾಗ್ತದೆ. ನಿಮ್ಮ ನೆನಪು ಮಾಡ್ಕಳ್ಳತದೆ.” ಎಂದು ಸಣ್ಣ ಸಾಯೇಬ್ರು ಹೇಳಿದಾಗ ಯಾರೊಬ್ಬರೂ ಹಾಡು ಹೇಳಲು ಮುಂದೆ ಬರಲಿಲ್ಲ. ಬೇರೆ ದಿನಗಳಲ್ಲಿ ಬಾಯಿ ಮುಚ್ಚದಂತೆ ಸೋಬಾನೆ ಪದ ಹೇಳುವ ಗಣಪಿ, ಗೋಯ್ದು ಎಲ್ಲರನ್ನೂ ಎಷ್ಟು ಒತ್ತಾಯಿಸಿದರೂ ಬಾಯಿಬಿಡಲಿಲ್ಲ. “ಅದ ಪೆಟ್ಟಿಗಿ ಮುಂದೆಲ್ಲ ಹೇಳೂಕೆ ಆಗೂದಿಲ್ವೆ. ಹೆದ್ರೀಕಿ ಬರ್ತದೆ. ದೆನಿ ನಡಗಿ ಗಂಟಲು ಕಟ್ಟೋಯ್ತದೆ. ಮತ್ತೆ ಸಾಯೇಬ್ರು ಕೇಳಿದ್ರೆ ಕಿವಿ ಮುಚ್ಕಬೇಕಾಗೂದು.” ಎನ್ನುತ್ತಾ ಹಾಡಲು ನಿರಾಕರಿಸಿದರು. ಸಾಯೇಬರನ್ನು ನಿರಾಸೆಗೊಳಲಿಸಲು ಇಷ್ಟವಿಲ್ಲದ ನೀಲಿಯ ಅಪ್ಪ ಯಾವುದಾದರೂ ಹಾಡನ್ನು ಹೇಳುವಂತೆ ಮಗಳನ್ನು ಪುಸಲಾಯಿಸಿದರು. ಪೇಟೆಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ತನ್ನ ಮಗಳ ದನಿ ದೂರ ದೇಶದವರೆಗೂ ಹೋಗುವುದನ್ನು ಎಣಿಸಿಯೇ ಅವರಿಗೆ ಖುಶಿಯಾಗಿತ್ತು. ಅಪ್ಪನ ಆಸೆಯನ್ನು ನಿರಾಕರಿಸಲಾರದ ನೀಲಿ ಪೆಟ್ಟಿಗೆ ಮುಂದೆ ಕುಳಿತು ತಾನು ಕಲಿತ ಹೊಸ ಹಾಡೊಂದನ್ನು ಹಾಡಿಯೇಬಿಟ್ಟಳು. ಸಾಯೇಬರು ಪೆಟ್ಟಿಗೆಯೊಳಗಿರುವ ಕ್ಯಾಸೆಟ್ಟನ್ನು ಕಿರ್ ಎಂದು ಹಿಂದೆ ಮಾಡಿ ಹಚ್ಚಿದಾಗ ಪೆಟ್ಟಿಗೆಯಿಂದ, “ಕನಕನಿಗೊಲಿದಾ ಗೋವಿಂದ, ನಮ್ಮನು ಕಾಯೋ ಮುಕುಂದ” ಎಂಬ ಹಾಡು ತೇಲಿಬರತೊಡಗಿತು. ದನಿಯು ಪೆಟ್ಟಿಗೆಯಿಂದಲೇ ಬರುತ್ತಿದೆಯೆಂಬುದನ್ನು ಖಚಿತಪಡಿಸಲು ಸೇರಿದ ಜನರೆಲ್ಲ ಮತ್ತೆ, ಮತ್ತೆ ನೀಲಿಯ ಮುಖವನ್ನು ನೋಡತೊಡಗಿದರು. ನೀಲಿ ನಾಚಿ ತಲೆ ತಗ್ಗಿಸಿದಳು. ಕಂಬಕಾನಿಸಿ ಕುಳಿತ ಗೋವಿಂದ ಮಾತ್ರ, “ಒಳ್ಳೇ ಕೂಸು ನಮ್ಮ ನೀಲಿ. ಎಂತಾದ್ರೂ ಆಗಲಿ, ನನ್ನ ಹೆಸ್ರನ್ನು ದುಬಾಯಿವರೆಗೂ ಕಳಿಸಿದ್ಲು.” ಎಂದು ನಗೆಚಟಾಕಿ ಹಾರಿಸಿದ.
ಹೊಳೆಸಾಲಿನ ವಾಸವನ್ನು ಮುಗಿಸಿ ಹೊಳೆದಾಟಿ ಹೋಗುವ ಗಳಿಗೆಯಲ್ಲಿ ಸಾಬರ ಟೇಪಿನಲ್ಲಿ ನೀಲಿಯ ಗೋವಿಂದ ನಗುತ್ತಲಿದ್ದುದನ್ನು ಕಂಡು ಹೊಳೆಯ ಎದೆಯೊಳಗೆ ಅವ್ಯಕ್ತ ಸಂತೋಷದ ಅಲೆಯೊಂದು ಉಕ್ಕೇರಿಬಂದಿತು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಗ್ರಾಮೀಣ ಜನರ ಮುಗ್ಧತೆ, ಧಾರ್ಮಿಕ ಸೌಹಾರ್ದಯುತ ರೀತಿ ನೀತಿಗಳ ಸುಂದರ ಚಿತ್ರಣ ಲೇಖನದ ಉದ್ದಕ್ಕೂ ತುಂಬಿಕೊಂಡಿದೆ.
ಧನ್ಯವಾದಗಳು ಮೇಡಂ
ಸಣ್ಣ ಸಣ್ಣ ವಿಚಾರಗಳನ್ನೂ ವಾವ್ ಎನ್ನುವ ರೀತಿಯಲ್ಲಿ ಪೋಣಿಸುವ ಈ ಶೈಲಿಯೇ ಅದ್ಭುತ!
ಧನ್ಯವಾದಗಳು ಸರ್