ಮಹಿಳಾ ವಿದ್ಯಾಪೀಠದ ರೂವಾರಿಗಳಾದ ವೀರನಗೌಡ ಮತ್ತು ನಾಗಮ್ಮ ತಾಯಿ ದಂಪತಿಗಳು ಅಪ್ಪಟ ಗಾಂಧಿವಾದಿಗಳು. ಅಸ್ಪೃಶ್ಯತೆ ನಿವಾರಣೆಯನ್ನು ತಿಳಿಸಿಕೊಟ್ಟ ಮಹಾತ್ಮ ಗಾಂಧೀಜಿ ಅವರು ದೀನ, ದಲಿತ, ದುರ್ಬಲರ ಒಳಿತಿಗಾಗಿ ಮಾಡುವ ನಿಸ್ವಾರ್ಥ ಸೇವೆ ಅತ್ಯಂತ ಪವಿತ್ರವಾದದ್ದು ಹಾಗೂ ಅದು ದೇವರನ್ನು ಪೂಜಿಸಿದಷ್ಟೇ ಫಲ ದೊರೆಯುವ ಸೇವಾ ಕಾರ್ಯ, ಅಸ್ಪೃಶ್ಯರನ್ನು ಈ ಕಾರಣದಿಂದಲೇ ಗಾಂಧೀಜಿಯವರು ದಲಿತರು ಎಂದು ಕರೆಯುವ ಮೂಲಕ ಅವರ ಉದ್ಧಾರವೇ ಜನಾರ್ಧನನ ಸೇವೆ ಎಂಬುದನ್ನು ದೃಢವಾಗಿ ನಂಬಿದ್ದರಲ್ಲದೆ ಗಾಂಧಿಜೀಯವರ ಅನುಯಾಯಿಗಳೆಲ್ಲ ಕೇರಿಯ ಜನರಗಳಿಗಾಗಿ ಸೇವೆ ಮಾಡುವಂತಹ ವಾತಾವರಣವನ್ನು ನಿರ್ಮಿಸಿದರು.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ “ಹೊಸ ಓದು” ಹೊಸ ಓದು ಅಂಕಣದಲ್ಲಿ “ಕರ್ನಾಟಕದ ಕಸ್ತೂರಬಾ” ಕೃತಿಯ ಕುರಿತ ಬರಹ

“ಅಳಲಿನಲಿ ಬಳಲುವವರ ಕರುಳ ಸಾಂತ್ವನಿಸಿ ಅದುವೇ ಜಪತಪಗಳಿಗಿಂತ ಮಿಗಿಲೆಂದು ತಿಳಿದ ಮಾನಸಿ” ಸತ್ಯ ಸಮತೆಯ ಪಥಕೆ ಯಾವ ದೇವನು ಇಹನು ಸತ್ಯ ಸಮತೆಯ ದಾಟಿ ಧರ್ಮವಿಹುದೇ? ಪ್ರೀತಿ ವಿಶ್ವಾಸಗಳ ಮೀಂಟಿ ಮಿಡಿಯುವ ಹೃದಯ ದೇವ ಮಂದಿರಕ್ಕಿಂತ ಕಡಿಮೆಯಹುದೇ ಎಂಬ ಮಾನವೀಯ ಅಂತಃಕರಣದಿಂದ ಬದುಕಿ ಶತಮಾನಗಳ ಹಿಂದೆಯೇ ಮಹಿಳಾಸಾಧನಾಪಥ ರೂಪಿಸಿದ “ಕರ್ನಾಟಕದ ಕಸ್ತೂರಬಾ” ಈ ಕೃತಿಯು ಮಹಿಳಾ ವಿದ್ಯಾಪೀಠದ ಸಂಸ್ಥಾಪಕರಾದ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಅವರ ಧರ್ಮಪತ್ನಿಯಾದ ಶ್ರೀಮತಿ ನಾಗಮ್ಮ ತಾಯಿ ಪಾಟೀಲ್ ಅವರ ಆತ್ಮಕಥನವಾಗಿದೆ.

ಈ ಕೃತಿಯನ್ನು ಅವರ ಸುಪುತ್ರಿಯಾದ ಅಮಲಕ್ಕ ಕಡಗದವರು ರಚಿಸಿದ್ದಾರೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಕಳೆದ 90 ದಶಕಗಳ ಹಿಂದಿನ ದೇಶದ ಸ್ವಾತಂತ್ರ‍್ಯ ಸಂಗ್ರಾಮದ ಯಾವುದೇ ಕಥನಗಳಿರಲಿ ಅವು ರೋಚಕವ ಮತ್ತು ಅವಿಸ್ಮರಣೀಯ ಹೋರಾಟದ ಕಥನಗಳಾಗಿವೆ. ಈ ದಿಶೆಯಲ್ಲಿ ಅಂದಿನ ಕಾಲಘಟ್ಟದ ಸ್ವಾತಂತ್ರ ಹೋರಾಟಗಾರರ ಕುರಿತಾಗಿ ಆಯಾ ಪ್ರದೇಶದ ಜನರಿಂದ ಕೆಲವು ಸತ್ಯ ಮತ್ತು ವಾಸ್ತವಿಕ ಘಟನೆಗಳನ್ನಾಧರಿಸಿದ ಕೃತಿಗಳು ಹೊರಬಂದಿವೆ. ಆಯಾ ಪರಿಸರದ ಪ್ರಭಾವದಿಂದ ಸಮಕಾಲೀನ ಸ್ವಾತಂತ್ರೋತ್ತರದ ಬರಹಗಾರರು ಅತ್ಯಂತ ಶ್ರಮ ಮತ್ತು ಶ್ರದ್ಧೆಯಿಂದ ಹೋರಾಟಗಾರರ ಜೀವನದ ಕಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ಸಂಸ್ಥಾಪಕರು ಹಾಗೂ ಕಸ್ತೂರಬಾ ದಲಿತ ಬಾಲಿಕಾಶ್ರಮದ ರೂವಾರಿಗಳು ಆದ ನಾಗಮ್ಮ ತಾಯಿ ಪಾಟೀಲ್ ಅವರ ಕುರಿತಾಗಿ ಈವರೆಗೂ ಅಂತಹ ಮಹತ್ವದ ಕೃತಿಗಳು ಲಭ್ಯವಿರಲಿಲ್ಲ. ಮೈಲಾರ ಮಹಾದೇವಮ್ಮ, ಹಳ್ಳಿಕೇರಿ ಚನ್ನಮ್ಮರಂತಹ ಮುಂಚೂಣಿಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಈಗಾಗಲೇ ಕೃತಿಗಳು ಲಭ್ಯವಿವೆ, ಆದರೆ ನಾಗಮ್ಮ ತಾಯಿಯವರ ಅಪಾರ ಸೇವೆ ಮತ್ತು ಶಿಕ್ಷಣಮುಖಿ, ಸಮಾಜಮುಖಿ, ಜನಸೇವೆಯನ್ನು ಕುರಿತು ದಾಖಲಾರ್ಹವಾದ ಕೃತಿಗಳು ಲಭ್ಯವಿರಲಿಲ್ಲ.

ಸ್ವಾತಂತ್ರ‍್ಯ ಹೋರಾಟದ ಇತಿಹಾಸ ಅದರೊಂದಿಗೆ ಗಾಂಧೀಜಿಯವರ ಚಳವಳಿಗಳಿಗೆ ಪೂರಕವಾಗಿ ಇತಿಹಾಸದಲ್ಲಿ ಮೈಲುಗಲ್ಲಾಗಿ ನಿಲ್ಲಬಹುದಾದ ಮಾದರಿಯ ಸೇವೆ ಸಲ್ಲಿಸಿದ ತ್ಯಾಗಜೀವಿ ನಾಗಮ್ಮ ತಾಯಿಯವರ ಜೀವನದ ಯಶೋಗಾಥೆ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಈ ಹಿಂದೆ ಸಂಶೋಧನೆಗಳು ನಡೆದರೂ ಕೂಡ ನಾಗಮ್ಮ ತಾಯಿಯವರ ಸ್ವಾತಂತ್ರ‍್ಯ ಹೋರಾಟದಲ್ಲಿ ಸಹಭಾಗಿತ್ವ ಹಾಗೂ ದೀನ ದಲಿತ ದುರ್ಬಲರಿಗಾಗಿ ಹಗಲಿರುಳು ದುಡಿದ ಮತ್ತು ಇದರೊಂದಿಗೆ ಮಹಿಳಾ ಸಬಲೀಕರಣಕ್ಕೆ ಕೊಡುಗೆಯನ್ನು ನೀಡಿದ ಶ್ರೀಮತಿ ನಾಗಮ್ಮ ತಾಯಿಯವರ ಕುರಿತಾದ ಸತ್ಯ ಮತ್ತು ನೈಜ ಘಟನೆಗಳ ಆಧಾರಿತ ಈ ಕೃತಿಯು ಅತ್ಯಂತ ಮಹತ್ವಪೂರ್ಣವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದಾಖಲಾರ್ಹವಾಗಬಹುದಾದ ಧಾರವಾಡ, ಹಾವೇರಿ, ಗದಗ ಈ ಪರಿಸರದ ಅನೇಕ ಮಹಿಳಾ ಹೋರಾಟಗಾರರನ್ನು ಅವರ ಸೇವೆಯನ್ನು ಸ್ಮರಿಸುವ ಪೂರಕ ದಾಖಲೆಗಳನ್ನು ಈ ಕೃತಿ ಒಳಗೊಂಡಿದೆ. ಕೇವಲ ನಾಲ್ಕನೇ ತರಗತಿಯವರೆಗೆ ಓದಿದ ನಾಗಮ್ಮ ತಾಯಿಯವರು ಅವರ ಪತಿಯವರಾದ ಪದ್ಮಶ್ರೀ ಸರ್ದಾರ್ ವೀರನಗೌಡರೊಂದಿಗೆ ಸೇರಿ ಮಹಾತ್ಮ ಗಾಂಧೀಜಿ, ಕಸ್ತೂರಬಾ, ವಿನೋಬಾ ಭಾವೆ ಅವರ ಹೋರಾಟಗಳಿಂದ ಪ್ರೇರಿತರಾಗಿ ಮತ್ತು ಸ್ವದೇಶಿ ಚಳುವಳಿಯಲ್ಲಿ ತಮ್ಮದೇಯಾಗಿರುವ ವಿಶಿಷ್ಟ ಹೆಗ್ಗುರುತನ್ನು ಉಳಿಸಿ ಹೋಗಿದ್ದಾರೆ.

ಸಾತ್ವಿಕ ಬದುಕು ಮೌಲಿಕ ಕಾರ್ಯಗಳಿಂದ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಅಪ್ಪಟ ಗಾಂಧಿವಾದಿ, ಅಪ್ಪಟ ದೇಶಭಕ್ತೆ ಕರ್ನಾಟಕದ ಕಸ್ತೂರಬಾ ಎಂದೆ ಗೌರವಿಸಲ್ಪಡುವ ದಿವಂಗತ ಶ್ರೀಮತಿ ನಾಗಮ್ಮ ತಾಯಿ ಪಾಟೀಲ್ ಅವರ ಜೀವನ ಕಥನ ಚಿರಸ್ಮರಣೀಯವಾಗಿದೆ. ಇಂತಹ ಅಪರೂಪದ ಮಾಹಿತಿಗಳನ್ನು ಒಳಗೊಂಡ ಈ ಕೃತಿಯು ಇತಿಹಾಸ ತಜ್ಞರಿಗೆ, ಸಂಶೋಧಕರಿಗೆ, ಅಧ್ಯಯನಕಾರರಿಗೆ ಅತ್ಯಂತ ಮೌಲಿಕವಾದ ಪರಾಮರ್ಶನ ಕೃತಿಯಾಗಿದೆ. ಈ ಕೃತಿಯನ್ನು ಮಹಿಳಾ ವಿದ್ಯಾಪೀಠದ ಟ್ರಸ್ಟಿಗಳು ಹಾಗೂ ಸದ್ಯ 88 ವರ್ಷದ ಅವರ ಸುಪುತ್ರಿ ಶ್ರೀಮತಿ ಅಮಲಕ್ಕ ಕಡಗದವರು ತಮ್ಮ ತಾಯಿ ತಂದೆಯವರೊಂದಿಗಿನ ಒಡನಾಟ ಹಾಗೂ ಸ್ವಾತಂತ್ರ‍್ಯ ಸಂಗ್ರಾಮದ ರೋಚಕ ಇತಿಹಾಸವನ್ನು ಈ ಕೃತಿಯ ಮೂಲಕ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಮಹಿಳಾ ಶಿಕ್ಷಣದ ಮೈಲಿಗಲ್ಲನ್ನು ರೂಪಿಸಿದ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಾಗಮ್ಮ ತಾಯಿ ಪಾಟೀಲ್ ಕನಸಿನ ಕೂಸಾದ ಮಹಿಳಾ ವಿದ್ಯಾಪೀಠವು ಇಂದು ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶೈಕ್ಷಣಿಕ ಸಂಸ್ಥೆಯಾಗಿ ಬೆಳದಿವೆ. ಸ್ವಾತಂತ್ರ‍್ಯಪೂರ್ವದಲ್ಲಿಯೇ ಮಹಿಳಾ ಸಂಘಟನೆ, ಮಹಿಳಾ ಶಿಕ್ಷಣ, ಹರಿಜನೋದ್ಧಾರದ ಕೇಂದ್ರವಾಗಿ ಕಾರ್ಯನಿರ್ವಹಿಸಿದ ಮಹಿಳಾ ವಿದ್ಯಾಪೀಠವೂ ಶತಮಾನಗಳ ಹಿಂದೆಯೇ ದಲಿತೋದ್ಧಾರ ಮತ್ತು ದೇಶೋದ್ಧಾರದ ಅನೇಕ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ತನ್ನದೇ ಆದ ಸೇವೆಯನ್ನು ನೀಡಿರುವದು ಅವಿಸ್ಮರಣೀಯ.

ಮಹಿಳಾ ವಿದ್ಯಾಪೀಠದ ರೂವಾರಿಗಳಾದ ವೀರನಗೌಡ ಮತ್ತು ನಾಗಮ್ಮ ತಾಯಿ ದಂಪತಿಗಳು ಅಪ್ಪಟ ಗಾಂಧಿವಾದಿಗಳು. ಅಸ್ಪೃಶ್ಯತೆ ನಿವಾರಣೆಯನ್ನು ತಿಳಿಸಿಕೊಟ್ಟ ಮಹಾತ್ಮ ಗಾಂಧೀಜಿ ಅವರು ದೀನ, ದಲಿತ, ದುರ್ಬಲರ ಒಳಿತಿಗಾಗಿ ಮಾಡುವ ನಿಸ್ವಾರ್ಥ ಸೇವೆ ಅತ್ಯಂತ ಪವಿತ್ರವಾದದ್ದು ಹಾಗೂ ಅದು ದೇವರನ್ನು ಪೂಜಿಸಿದಷ್ಟೇ ಫಲ ದೊರೆಯುವ ಸೇವಾ ಕಾರ್ಯ, ಅಸ್ಪೃಶ್ಯರನ್ನು ಈ ಕಾರಣದಿಂದಲೇ ಗಾಂಧೀಜಿಯವರು ದಲಿತರು ಎಂದು ಕರೆಯುವ ಮೂಲಕ ಅವರ ಉದ್ಧಾರವೇ ಜನಾರ್ಧನನ ಸೇವೆ ಎಂಬುದನ್ನು ದೃಢವಾಗಿ ನಂಬಿದ್ದರಲ್ಲದೆ ಗಾಂಧಿಜೀಯವರ ಅನುಯಾಯಿಗಳೆಲ್ಲ ಕೇರಿಯ ಜನರಗಳಿಗಾಗಿ ಸೇವೆ ಮಾಡುವಂತಹ ವಾತಾವರಣವನ್ನು ನಿರ್ಮಿಸಿದರು.

ಈ ನಿಟ್ಟಿನಲ್ಲಿ ಗಾಂಧೀಜಿ ಅವರು ಹಾಕಿಕೊಂಡ ಹಲವಾರು ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು, ಮಹಿಳೆಯರ ಕಲ್ಯಾಣ ಮತ್ತು ಶಿಕ್ಷಣದ ಮುಖಾಂತರ ಅವರ ಸುಸ್ಥಿರ ಅಭಿವೃದ್ಧಿ. ಇಂತಹ ಒಂದು ಯೋಜನೆಯನ್ನು ಹುಬ್ಬಳ್ಳಿಯಂತಹ ನಗರದಲ್ಲಿ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ವೀರನಗೌಡ ಮತ್ತು ನಾಗಮ್ಮ ತಾಯಿ ದಂಪತಿಗಳಿಗೆ ಸಲ್ಲುತ್ತದೆ. 1933ರಲ್ಲಿ ಮಹಾತ್ಮಾ ಗಾಂಧಿಜೀ ಅವರು ಕರ್ನಾಟಕಕ್ಕೆ ದಲಿತ ವಿಕಾಸಕ್ಕಾಗಿ ಪ್ರವಾಸ ಕೈಗೊಂಡಾಗ ಅವರ ಆದೇಶದಂತೆ ಇಬ್ಬರು ದಲಿತ ಮಕ್ಕಳಾದ ತಾರಾ ಮತ್ತು ಮಥುರ ಎಂಬ ಕೇರಿಯ ಹೆಣ್ಣುಮಕ್ಕಳನ್ನು ಕರೆ ತಂದು ಅವರ ಯೋಗಕ್ಷೇಮ, ವಿದ್ಯಾಭ್ಯಾಸದಲ್ಲಿ ಸಹಾಯ ಹಸ್ತವನ್ನು ನೀಡುವುದಲ್ಲದೆ ದಲಿತ ಬಾಲಿಕಾಶ್ರಮ ಎಂದು ಸ್ಥಾಪನೆ ಮಾಡಿ ಹುಬ್ಬಳ್ಳಿ ಸುತ್ತು ಮುತ್ತಲಿನ ಹಳ್ಳಿ ಹಳ್ಳಿಗಳಿಗೆ ಹೋಗಿ ಹಸಿವು, ಬಡತನ, ಅನಕ್ಷರತೆಯಿಂದ ಬಳಲುತ್ತಿದ್ದ ಮಕ್ಕಳನ್ನು ಈ ಆಶ್ರಮಕ್ಕೆ ಕರೆದುಕೊಂಡು ಬಂದು ಆರೈಕೆ ಮಾಡಿರುವದು ಪಾಟೀಲ ದಂಪತಿಗಳ ಅತ್ಯಂತ ಶ್ಲಾಘನೀಯ ಸೇವೆಯಾಗಿದೆ.

1930ರ ದಶಕದಲ್ಲಿ ಹಳ್ಳಿಗರಿಗೆ ಶಿಕ್ಷಣ, ಸ್ವಚ್ಛತೆಯಗಳ ಬಗ್ಗೆ ಅಷ್ಟೊಂದು ಅರಿವಿರಲಿಲ್ಲ. ಹಳ್ಳಿಗಳಲ್ಲಿ ಶಾಲೆಗಳೇ ಇರುತ್ತಿರಲಿಲ್ಲ, ಇದ್ದರೂ ಅವುಗಳು ಯಾವುದೋ ಗುಡಿ -ಗುಂಡಾರ ಆಲದಮರ ಅಥವಾ ಗ್ರಾಮದ ಮುಖ್ಯ ಸ್ಥಳದಲ್ಲಿ ಇರುವ ಯಾವುದೋ ಕಟ್ಟೆಗಳ ಮೇಲೆ ಏಕೋಪಾಧ್ಯಾಯ ಶಾಲೆಗಳಿರುತ್ತಿದ್ದವು. ಗಂಡು ಮಕ್ಕಳೇ ಅಕ್ಷರ ಕಲಿಕೆಗೆ ಹೋಗಲು ಹಿಂಜರಿಯುತ್ತಿದ್ದ ದಿನಗಳಲ್ಲಿ ಹೆಣ್ಣು ಮಕ್ಕಳಂತೂ ಅಕ್ಷರಾಭ್ಯಾಸ ಮಾಡುವುದು ಕನಸಿನ ಮಾತಾಗಿತ್ತು. ಮೇಲ್ವರ್ಗದ ಮಕ್ಕಳು ಯಾವುದೇ ಅಂಜಿಕೆ ಅಳುಕಿಲ್ಲದೆ ಮುಕ್ತವಾಗಿ ಶಿಕ್ಷಣವನ್ನು ಪಡೆಯುತ್ತಿದ್ದರೆ, ಕೇರಿಯ ಇತರರು ಮತ್ತು ಅಸ್ಪೃಶ್ಯರ ಮಕ್ಕಳು ಬಡತನ ಮತ್ತು ಜಾತಿ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಿದ್ದರು. ಇಂತಹ ಸೂಕ್ಷ್ಮ ಕಾರಣಗಳನ್ನು ಗಮನಿಸಿದ ಗಾಂಧೀಜಿಯವರು ದೇಶದಾದ್ಯಂತ ಸರ್ವೋದಯ, ಅಸ್ಪೃಶ್ಯತಾ ನಿವಾರಣೆ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣದ ಮಹತ್ವ, ಮತ್ತು ಸರ್ವರಿಗೆ ಸಮ ಬಾಳು ಸರ್ವರಿಗೆ ಸಮಪಾಲು ಎಂಬ ತತ್ವದಡಿ ರೂಪಿಸಿದ ಗ್ರಾಮೀಣಾಭಿವೃದ್ಧಿಯ ಯೋಜನೆಯ ಫಲವಾಗಿ ನಗರಗಳಲ್ಲಿ ಕೆಲವರು ಅನುಯಾಯಿಗಳು ಇಂತಹ ಸೇವೆಗೆ ಅಣಿಯಾಗಿರುವದು ಮಾನವೀಯ ಕಾರ್ಯಗಳಲ್ಲಿಯೇ ಶ್ರೇಷ್ಠವಾದದು. ಇಂತಹ ಯೋಜನೆಯ ಫಲವಾಗಿಯೇ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ರೂವಾರಿಗಳು ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿಯ ಜನರಿಗೆ ಶಿಕ್ಷಣದ ಮಹತ್ವವನ್ನು ಗಾಂಧೀಜಿಯವರ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹರಿಜನೋದ್ಧಾರ ಮತ್ತು ಗ್ರಾಮೀಣೋದ್ಧಾರದ ಮಹತ್ವವನ್ನು ತಿಳಿಸುವ ಮೂಲಕ ಅವರ ಮನವೊಲಿಸಿ ಹೆಣ್ಣು ಮಕ್ಕಳನ್ನು ಬಾಲಿಕಾಶ್ರಮಕ್ಕೆ ಸೇರಿಸಲು ಕರೆ ತಂದು ಆರೈಕೆ ಮಾಡಿರುವ ಈ ಸೇವಾ ಕಾರ್ಯ ಪಾಟೀಲ್ ದಂಪತಿಗಳ ಜೀವನದ ಅತ್ಯಂತ ಮಹತ್ವಪೂರ್ಣವಾಗಿರುವ ಕಾರ್ಯವಾಗಿದೆ.

ಗ್ರಾಮೀಣ ಪ್ರದೇಶ ಮತ್ತು ಕೃಷಿ ಮೂಲದ ಜನರು 1930 -40 ರ ದಶಕದಲ್ಲಿ ಹಳ್ಳಿಗಳಲ್ಲಿ ತಮ್ಮ ಹೆಣ್ಣು ಮಕ್ಕಳಿಂದ ದೂರವಿರಲು ಯಾವ ಪಾಲಕರು ಇಚ್ಚಿಸುತ್ತಿರಲಿಲ್ಲ. ಕೂಲಿ ಕಾರ್ಮಿಕರು, ರೈತಕ್ಕಿ ಕುಟುಂಬ, ಗುಳೇಕಾರರು ಎಂತಹದೇ ಕಷ್ಟ ಬಂದರೂ ಮಕ್ಕಳನ್ನು ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಅಲೆದಾಡುತ್ತಿದ್ದರು. ಆದರೆ ನಾಗಮ್ಮ ತಾಯಿ ದಂಪತಿಗಳು ಅವರ ಮನವೊಲಿಸಿ ಅವರ ಮಕ್ಕಳನ್ನು ದಲಿತ ಬಾಲಿಕಾಶ್ರಮಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದರು.

ಅನೇಕ ಹೆಣ್ಣು ಮಕ್ಕಳು ನೈರ್ಮಲ್ಯದ ಅರಿವಿಲ್ಲದೆ ಕೊಳಕು ಬಟ್ಟೆ, ಸರಿಯಾದ ಆಹಾರವಿಲ್ಲ, ತಲೆಯಲ್ಲಿ ಹೇನು -ಕಜ್ಜಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರು. ನಾಗಮ್ಮ ತಾಯಿಯವರು ಸ್ವತಃ ಅವರ ತಲೆಯನ್ನು ಬಾಚಿ ಆ ಹೆಣ್ಣು ಮಕ್ಕಳಿಗೆ ಸ್ನಾನ ಮಾಡಿಸಿ ಅವರನ್ನು ಆರೈಕೆ ಮಾಡಿರುವದು ನಿಜಕ್ಕೂ ಕೂಡ ಅತ್ಯಂತ ಮಾನವೀಯ ಸೇವಾಕಾರ್ಯವಾಗಿದೆ. ಶತಮಾನಗಳ ಹಿಂದೆ ಅಸ್ಪೃಶ್ಯರನ್ನು ಮುಟ್ಟಿಸಿಕೊಳ್ಳುವುದಂತೂ ದೂರ ಉಳಿಯಿತು ಅವರ ನೆರಳು ಕೂಡ ಅಪವಿತ್ರವೆಂದು ಭಾವಿಸುವ ಆ ದಿನಗಳಲ್ಲಿ ಕೇರಿಯ ಹೆಣ್ಣು ಮಕ್ಕಳನ್ನು ನಗರದ ಹೃದಯ ಭಾಗದ ಈ ಆಶ್ರಮಕ್ಕೆ ಕರೆದುಕೊಂಡು ಬಂದು ಅವರನ್ನು ಮುಟ್ಟಿ, ಆರೈಕೆ ಮಾಡುತ್ತಿದ್ದುದರಿಂದ ನಾಗಮ್ಮ ತಾಯಿ ಮತ್ತು ವೀರನಗೌಡರನ್ನು ಸಮಾಜದ ಕೆಲವರು, ಕುಟುಂಬದ ಅನೇಕರು ಇವರನ್ನು ಕೂಡ ಅಸ್ಪೃಶ್ಯರಂತೆ ಕಾಣತೊಡಗಿದರು. ಇವರೊಂದಿಗೆ ಸ್ನೇಹ ಪ್ರೀತಿಯಿಂದಿದ್ದ ಅನೇಕರು ಪಾಟೀಲ್ ದಂಪತಿಗಳ ಮನೆಗೆ ಹಾಗೂ ಆಶ್ರಮಕ್ಕೆ ಹೆಜ್ಜೆ ಇಡುವುದನ್ನು ಕೂಡ ನಿಲ್ಲಿಸಿದರು. ಎಂತಹದೇ ಕಷ್ಟಗಳು ಬಂದರೂ ಕೂಡ ಪಾಟೀಲ್ ದಂಪತಿಗಳಿಗೆ ಗಾಂಧಿವಾದದಲ್ಲಿ ಶ್ರದ್ಧೆ ಇತ್ತೇ ವಿನಃ ಬೇರೆ ಯಾವುದೇ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ದಲಿತ ಮಕ್ಕಳ ಊಟ- ಉಪಚಾರವನ್ನು ಅವರಿಗೆ ಅಕ್ಷರ ಅಭ್ಯಾಸವನ್ನು ಮಾಡಿಸುವಲ್ಲಿ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಂಡರು.

ಗಾಂಧೀಜಿಯವರ ದಲಿತ ಜನೋದ್ಧಾರದ ಅಭಿಯಾನ ದೇಶ ವ್ಯಾಪಿಯಾದಾಗ ಹಾಗೂ ದಲಿತ ಪತ್ರಿಕೆ ಪ್ರಾರಂಭವಾದಾಗ ಈ ಕುರಿತಾಗಿ ಕೆಲವರಿಗೆ ಜ್ಞಾನೋದಯವಾಯಿತು. ದೀನದಲಿತ ದುರ್ಬಲರ ಏಳಿಕೆಗಾಗಿ ಸಮಾಜದ ನಿಂದನೆಯನ್ನು ಸಹಿಸಿಕೊಂಡ ಪಾಟೀಲ್ ದಂಪತಿಗಳ ಸೇವೆ ತ್ಯಾಗ ಸಹನೆಯ ಬಗ್ಗೆ ಜನರಲ್ಲಿ ಅಭಿಮಾನ ಉಂಟಾಯಿತು. ಬರಬರುತ್ತ ಆಶ್ರಮಕ್ಕೆ ಹಣ ದವಸಧಾನ್ಯಗಳ ಸಹಾಯ ಒದಗಿಬರಹತ್ತಿತು. ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠದ ಅಂದಿನ ಜಗದ್ಗುರುಗಳು ಪಾಟೀಲ್ ದಂಪತಿಗಳ ಕಾರ್ಯಕ್ಕೆ ಒತ್ತುಕೊಟ್ಟು ಜಾತ್ರೆಯ ಸಮಯದಲ್ಲಿ ದಾಸೋಹದಲ್ಲಿ ಸಹಪಂಕ್ತಿಯ ಭೋಜನಕ್ಕೆ ಭಾಗವಹಿಸಲು ಅಪ್ಪಣೆ ನೀಡುವ ಮುಖಾಂತರ ಪಾಟೀಲ್ ದಂಪತಿಗಳ ಈ ಸೇವಾಕಾರ್ಯವನ್ನು ಪ್ರೋತ್ಸಾಹಿಸಿದರು.

ಇದರ ನಡು ನಡುವೆ ಆಗಾಗ ಅನೇಕ ಮಡಿವಂತರು ಪಾಟೀಲ್ ದಂಪತಿಗಳ ಈ ಕಾರ್ಯವನ್ನು ಸಹಿಸದೆ ಅವರನ್ನು ದೂಷಿಸುವ ಕಾರ್ಯವನ್ನು ಕೂಡ ಮಾಡುತ್ತಲೇ ಇದ್ದರು. ಆದರೆ ಇದಾವುದನ್ನು ಗಣನೆಗೆ ತೆಗೆದುಕೊಳ್ಳದೆ ನಾಗಮ್ಮ ತಾಯಿಯವರು ಅತ್ಯಂತ ಶ್ರದ್ಧೆ ಮತ್ತು ಕಾಠೀಣ್ಯದಿಂದ ದೇಶ ಭಕ್ತಿಯ ವ್ರತ ಹಿಡಿದುದರಿಂದ ಈ ಸೇವಾಕಾರ್ಯದಿಂದ ವಿಮುಖರಾಗುವ ಮಾತೇ ಇರಲಿಲ್ಲ. ಈ ಕಾರಣದಿಂದಲೇ ಮುಂದೆ ಈ ದಲಿತ ಬಾಲಿಕಾಶ್ರಮವು, ನಾಡಿನ ಪ್ರಪ್ರಥಮ ಕಸ್ತೂರಬಾ ದಲಿತ ಬಾಲಿಕಾಶ್ರಮವೆಂದು ನಾಮಕರಣಗೊಂಡು, ಇಂದು ಬೃಹತ್ ಸಂಸ್ಥೆಯಾಗಿ ಬೆಳೆದಿದೆ.

ದಾನವೀರ ಶಿರಸಂಗಿ ಲಿಂಗರಾಜರ ಟ್ರಸ್ಟ್ ವತಿಯಿಂದ ನೀಡಲಾದ ಧನ ಸಹಾಯದಿಂದ ರೂಪುಗೊಂಡ ಲಿಂಗಾಯತ ಶಿಕ್ಷಣ ಸಂಸ್ಥೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಅವರು ಕೆ.ಎಲ್. ಇ. ಅಂತಹ ಬೃಹತ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಒಬ್ಬರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿರುವದನ್ನು ಇಲ್ಲಿ ನೆನೆಯಬಹುದು. ಮುಂದೆ ಪದ್ಮಶ್ರೀ ಸರ್ದಾರ್ ವೀರನಗೌಡರ ಈ ಸೇವೆಯನ್ನು ಗಮನಿಸಿದ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವೀರನಗೌಡ ಒಡನಾಡಿಗಳಾದ ಸ್ವಾತಂತ್ರ ಹೋರಾಟಗಾರರು, ಸಮಾಜದ ಅನೇಕ ಹಿರಿಯರು, ರಾಷ್ಟ್ರದ ಪ್ರಮುಖ ಎಲ್ಲ ಧುರಿಣರು ಆಶ್ರಮಕ್ಕೆ ಬಂದು ಅವರ ಸೇವಾ ಕಾರ್ಯವನ್ನು ನೋಡಿ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಮುಂಬೈ ಸರ್ಕಾರ ವೀರನಗೌಡರನ್ನು ಅಸೆಂಬ್ಲಿ ಸದಸ್ಯರನ್ನಾಗಿ ನೇಮಕ ಮಾಡಿ (ಎಂ.ಎಲ್.ಎ) ಆಶ್ರಮಕ್ಕೆ ಜಮೀನನ್ನು ಕೊಟ್ಟರು. ಹೀಗೆ ಸ್ವಾತಂತ್ರ‍್ಯದ ಹೋರಾಟದ ಸಂದರ್ಭದಲ್ಲಿಯೇ ದಲಿತ ಬಾಲಿಕಾಶ್ರಮವು, ಶಾಲೆ, ಟ್ರೈನಿಂಗ್ ಕಾಲೇಜು, ಗಾಂಧಿಜೀ ಪ್ರಾರ್ಥನಾ ಮಂದಿರಗಳನ್ನು ಸರ್ಕಾರದ ಧನಸಹಾಯದಿಂದ ಕಟ್ಟಲು ಪ್ರಾರಂಭಿಸಿದರು. 1951 ಡಿಸೆಂಬರ್ 25ರಂದು ಅಂದಿನ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಅವರು ಹುಬ್ಬಳ್ಳಿಗೆ ಬಂದಾಗ ಆಶ್ರಮದ ಆವರಣದಲ್ಲಿಯೇ ಊಟವನ್ನು ಮಾಡಿ ಅತ್ಯಂತ ಸಹರ್ಷದಿಂದ ಮಹಿಳಾ ವಿದ್ಯಾಪೀಠದ ಮೊದಲ ಸಂಸ್ಥೆ ದಲಿತ ಬಾಲಿಕಾಶ್ರಮವನ್ನು ಕಸ್ತೂರಬಾ ದಲಿತ ಬಾಲಿಕಾಶ್ರಮವೆಂದು ನಾಮಕರಣ ಮಾಡಿದರು.

ಮಹಿಳಾ ಸಬಲೀಕರಣದ ಉದ್ದೇಶವಿಟ್ಟುಕೊಂಡು ಪ್ರಾರಂಭಿಸಿದ ಈ ಸಂಸ್ಥೆ ಮುಂದೆ ವಿಧವೆಯರಿಗಾಗಿ, ಗಂಡ ಬಿಟ್ಟವರಿಗಾಗಿ, ಅರ್ಧ ಶಿಕ್ಷಣ ನಿಲ್ಲಿಸಿದವರಿಗಾಗಿ, ಊಟ- ವಸತಿ -ಆಶ್ರಯ- ಶಿಕ್ಷಣವನ್ನು ನೀಡಿ ಅವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಾಯ ಹಸ್ತ ನೀಡಿರುವುದನ್ನು ಕಾಣಬಹುದು. ಇಂತಹ ಅನೇಕ ಗಮನಾರ್ಹ ಮಹತ್ವಪೂರ್ಣ ಅಂಶಗಳನ್ನು ಒಳಗೊಂಡ ಈ ಕೃತಿಯು ಲೇಖಕಿಯಾದ ಅಮಲಕ್ಕ ಕಡಗದವರು ಅವರ ತಾಯಿಯವರ ಕೆಲವು ಪತ್ರಗಳನ್ನು ಆಧರಿಸಿ ಹಾಗೂ ತಾವೇ ಸ್ವತಃ ಕೆಲವೊಂದು ಪ್ರತ್ಯಕ್ಷ ಕಂಡ ಸಾಕ್ಷಿಗಳನ್ನು ಆಧರಿಸಿ ಈ ಕೃತಿಯಲ್ಲಿ ಮಹತ್ವಪೂರ್ಣವಾದ ಅಂಶಗಳನ್ನು ದಾಖಲಿಸಿದ್ದಾರೆ.

ನಾಗಮ್ಮ ತಾಯಿ ಪಾಟೀಲ್ ಅವರ ಆತ್ಮಕಥನದಂತೆ ಮೂಡಿಬಂದ ಈ ಕೃತಿಯಲ್ಲಿ ಒಟ್ಟು 22 ಅಧ್ಯಾಯಗಳಿದ್ದು ಶ್ರೀಮತಿ ನಾಗಮ್ಮ ತಾಯಿಯವರ ಬಾಲ್ಯ, ಅವರ ವಿವಾಹ, ಅವರ ತ್ಯಾಗಮಯ ಜೀವನ, ಗಾಂಧೀಜಿಯವರ ಭೇಟಿ, ದಲಿತ ಮಕ್ಕಳ ಪ್ರವೇಶ, ಕಾಂಗ್ರೆಸ್ ರಾಷ್ಟ್ರೀಯ ಸ್ವಾತಂತ್ರ‍್ಯ ಚಳುವಳಿ, ಜೈಲುವಾಸ, ದೇಶದ ಸ್ವಾತಂತ್ರ‍್ಯೋತ್ಸವ, ಆಶ್ರಮದ ಅಭಿವೃದ್ಧಿಯ ಕಡೆಗೆ ಗಮನ, ದೇವಸ್ಥಾನ ಪ್ರವೇಶ, ಆಶ್ರಮಕ್ಕೆ ಧನ ಸಹಾಯ, ಮಕ್ಕಳ ಶಿಕ್ಷಣ, ಗಾಂಧೀಜಿಯವರ ಅಗಲುವಿಕೆಯ ನೋವುಗಳು, ದಲಿತ ಬಾಲಿಕಾಶ್ರಮದ ಸರ್ವತೋಮುಖ ಬೆಳವಣಿಗೆ, ಸ್ವಾತಂತ್ರೋತ್ತರ ಈ ಆಶ್ರಮಕ್ಕೆ ದೊರೆತ ಪುರಸ್ಕಾರಗಳು, ಆಶ್ರಮದ ಸಂಸ್ಥೆಗಳು ಹಾಗೂ ನಾಗಮ್ಮ ತಾಯಿ ಮತ್ತು ವೀರನಗೌಡರ ಜೀವನದ ಮಹತ್ವದ ಘಟನೆಗಳು ಅಪರೂಪದ ಭಾವಚಿತ್ರಗಳು ಇವೆಲ್ಲವುಗಳೊಂದಿಗೆ ಸಾಬರಮತಿ ಪ್ರವಾಸದ ನೆನಪುಗಳನ್ನು ಒಳಗೊಂಡಂತೆ ಅನಿಕ ಮಹತ್ವಪೂರ್ಣ ವಿಷಯಗಳನ್ನು ದಾಖಲಿಸಿದ್ದು ಅತ್ಯಂತ ಶ್ಲಾಘನೀಯವಾಗಿದೆ. ಈ ಕೃತಿಗೆ ಪ್ರೊ ವೀರಣ್ಣ ರಾಜೂರ ಆವರು ಮುನ್ನುಡಿ ಬರೆದಿದ್ದಾರೆ. ನಾಗಮ್ಮ ತಾಯಿಯವರ ಮಗಳಾದ ಪುಷ್ಪಾ ಕಾಖಂಡಕಿಯವರ ಪತಿ ಹಾಗೂ ಕವಿವಿಯ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು ಪಾಟೀಲ ದಂಪತಿಗಳ ಅಳಿಯರಾದ ಪ್ರೊ ಲಕ್ಷ್ಮಣ ಕಾಖಂಡಕಿಯವರು ನೆನಪಿನಾಳದ ಕೆಲ ಮಾತುಗಳನ್ನು ದಾಖಲಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಬೆಳಗಾವಿಯ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವ ಸಂಧರ್ಬದಲ್ಲಿ ಹೊರಬಂದ ಈ ಕೃತಿಯು ಅತ್ಯಂತ ಮಹತ್ವಪೂರ್ಣವಾದ ದಾಖಲೆಯಾಗಿದೆ.

ಸ್ತ್ರೀ ಸಬಲೀಕರಣದ ಶಕ್ತಿಕೇಂದ್ರ ಹುಬ್ಬಳ್ಳಿಯ ಕಸ್ತೂರ ಬಾ ದಲಿತ ಬಾಲಿಕಾಶ್ರಮ ಮತ್ತು ಮಹಿಳಾ ವಿದ್ಯಾಪೀಠದ ರೂವಾರಿಗಳಾದ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಅವರ ಧರ್ಮಪತ್ನಿಯಾದ ಶ್ರೀಮತಿ ನಾಗಮ್ಮ ತಾಯಿ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ತಮ್ಮದೇ ಆಗಿರುವ ವಿಶಿಷ್ಟ ಸೇವೆಯನ್ನು ಸಲ್ಲಿಸಿದವರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಉಪ್ಪಿನ ಸತ್ಯಾಗ್ರಹ ಚಲೇಜಾವ್ ಚಳುವಳಿಗಳಲ್ಲಿ ಪರೋಕ್ಷವಾಗಿ ಬೆಂಬಲಿಸಿ ಸ್ಥಳೀಯ ಪ್ರತಿಭಟನೆಗಳಲ್ಲಿ ಭಾಗವಹಿಸಿದವರು. ಗಾಂಧೀಜಿಯವರ ಕನಸಿನ ಕೂಸಾದ ವರ್ಧಾದ ದಲಿತ ಆಶ್ರಮದ ಸಾಧನೆ ಮತ್ತು ಗುರಿ ಉದ್ದೇಶದಿಂದ ಪ್ರಭಾವಿತರಾಗಿ ಹುಬ್ಬಳ್ಳಿಯಲ್ಲಿ 1934ರಲ್ಲಿ ದಲಿತ ಬಾಲಿಕಾಶ್ರಮವನ್ನು ಸ್ಥಾಪನೆ ಮಾಡುವುದರ ಮುಖಾಂತರ ಹಿಂದುಳಿದ ದಲಿತ, ಅಲ್ಪಸಂಖ್ಯಾತ ಮತ್ತು ಬಡ ಮಕ್ಕಳಿಗೆ ಅನ್ನ ಅಕ್ಷರವನ್ನು ನೀಡಿ ಆಶ್ರಯವನ್ನು ನೀಡಿದ್ದು ಶ್ಲಾಘನೀಯವಾದದ್ದು.

ಶತಮಾನಗಳ ಹಿಂದೆಯೂ ಸ್ವಾತಂತ್ರ‍್ಯ ಪೂರ್ವದಲ್ಲಿನ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದರೆ, ದಲಿತರನ್ನು ಮುಟ್ಟಿಸಿಕೊಳ್ಳದೆ ಇರುವ ಅಂತಹ ಕಾಲದಲ್ಲಿ ದಲಿತಕೇರಿಯ ಮಕ್ಕಳನ್ನು ತಮ್ಮಸಮಕ್ಕೆ ಕರೆದುಕೊಂಡು ಬಂದು ಅವರ ತಲೆ ಬಾಚಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಶಾಲೆಗೆ ಕಳಿಸುವ ಅತ್ಯಂತ ಶ್ರೇಷ್ಠ ಕಾರ್ಯವನ್ನು ಕೈಗೊಂಡವರು ನಾಗಮ್ಮ ತಾಯಿ ಪಾಟೀಲ. ಗಾಂಧೀಜಿಯವರ ಚಲೆಜಾವ್ ಚಳುವಳಿ, ಹರಿಜನೋದ್ಧಾರ, ಗ್ರಾಮ ಸ್ವರಾಜ್ಯಗಳಂತಹ ಸೈದ್ಧಾಂತಿಕ ಹೋರಾಟಗಳ ಪ್ರಭಾವಕ್ಕೆ ಒಳಗಾಗಿ ನಾಗಮ್ಮತಾಯಿಯವರು ಹುಬ್ಬಳ್ಳಿಯಲ್ಲಿ ದಲಿತ ಬಾಲಿಕಾಶ್ರಮವನ್ನು ಸ್ಥಾಪನೆ ಮಾಡುವ ಮೂಲಕ ಗಾಂಧೀಜಿಯವರ ಹೋರಾಟಗಳಿಗೆ ಬೆಂಬಲವನ್ನು ನೀಡಿದ್ದು ಇತಿಹಾಸದಲ್ಲಿ ಅಚ್ಚಳಿಯದ ಹೆಮ್ಮೆಯ ಸಂಗತಿಯಾಗಿದೆ.

ನಾಗಮ್ಮ ತಾಯಿ ಪಾಟೀಲ್ ಅವರ ಪತಿಯವರಾದ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ‍್ಯ ಹೋರಾಟಗಾರರು ಅದರೊಂದಿಗೆ ಶಿಕ್ಷಣಪ್ರೇಮಿಗಳು ಹೀಗಾಗಿ ಉತ್ತರಕರ್ನಾಟಕದ ಹಿಂದುಳಿದ ಭಾಗದಲ್ಲಿ ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಮಹಿಳಾ ವಿದ್ಯಾಪೀಠವನ್ನು ಸ್ಥಾಪಿಸಿ ಸಮಾಜೋಶೈಕ್ಷಣಿಕ ಸೇವಾಕಾರ್ಯ ಮಾಡಿದ್ದು ಉತ್ತರಕರ್ನಾಟಕ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲಾಗಿ ಪ್ರಶಂಸೆಗೆ ಪಾತ್ರವಾಗಿದೆ. ಇದರೊಂದಿಗೆ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿಯ ಸಂಸ್ಥಾಪನೆ ಮಾಡಿದ್ದು ಶ್ಲಾಘನೀಯವಾಗಿದೆ. ಕೆ.ಎಲ್.ಇ ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಸರದಾರ ವೀರನಗೌಡರು ಒಬ್ಬರಾಗಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಕೈಗೊಂಡ ದೇಶಪ್ರೇಮದ ಅನೇಕ ಘಟನೆಗಳಿಗೆ ನಾಗಮ್ಮ ತಾಯಿ ಪಾಟೀಲ್ ಅವರು ತನು ಮನ ಧನದಿಂದ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ‍್ಯ ನಂತರವೂ ಶತಮಾನದ ಹೊಸ್ತಿಲಲ್ಲಿ ಬದುಕಿದ ನಾಗಮ್ಮ ತಾಯಿಯವರು ತಮ್ಮ ಜೀವಿತದ ಕೊನೆಯ ಅವಧಿಯವರೆಗೂ ಗಾಂಧಿವಾದದಲ್ಲಿಯೇ ಶ್ರದ್ಧೆಯಲ್ಲಿಟ್ಟು ಬದುಕಿದವರು. ಚರಕದಿಂದ ನೂಲನ್ನು ತೆಗೆಯುವದು, ಮಹಿಳಾ ಸಬಲೀಕರಣ ಮತ್ತು ಮಹಿಳಾ ಶಿಕ್ಷಣಕ್ಕೆ ಆದ್ಯತೆಯನ್ನು ನೀಡುವದು ಇವರ ಪರಮ ಗುರಿಯಾಗಿತ್ತು. ಖಾದಿ ಬಟ್ಟೆಯನ್ನು ಧರಿಸುವುದರ ಮೂಲಕ ಸ್ವದೇಶಿ ಆಂದೋಲನಕ್ಕೆ ತಮ್ಮದೇಯಾಗಿರುವ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಭಾರತ ಬಿಟ್ಟು ತೊಲಗಿ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ಕರೆ ಕೊಟ್ಟಂತೆ ಅನೇಕ ಸ್ವಾತಂತ್ರ‍್ಯ ಹೋರಾಟಗಾರರು ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ತೊಡಗಿಸಿಕೊಂಡಾಗ ಅಂತಹ ವೀರಯೋಧರಿಗೆ ಊಟದ ವ್ಯವಸ್ಥೆಯನ್ನು ವಸತಿ ವ್ಯವಸ್ಥೆಯನ್ನು ಪಾಟೀಲ್ ದಂಪತಿಗಳು ಮಾಡಿದ್ದು ಅವಿಸ್ಮರಣೀಯವಾಗಿದೆ.

ಬೆಳಗಾವಿ ಜಿಲ್ಲೆಯ ಹುದುಲಿಗೆ ಗಾಂಧೀಜಿಯವರು ಬಂದಾಗ ಅಲ್ಲಿ ನಡೆದ ಶಿಬಿರದಲ್ಲಿ ಧಾರವಾಡ ಜಿಲ್ಲೆಯ ಅನೇಕ ಸ್ವಾತಂತ್ರ‍್ಯ ಯೋಧರು ಭಾಗವಹಿಸಿದ್ದರು. ಮುಂಜಾನೆ ಪ್ರಭಾತ ಪೇರಿಯಲ್ಲಿ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ದಂಪತಿಗಳು ಸಕ್ರಿಯವಾಗಿ ಭಾಗವಹಿಸಿ ಮುಂದಾಳತ್ವವನ್ನು ವಹಿಸಿಕೊಂಡು ಗಾಂಧೀಜಿಯವರ ಯೋಜನೆಯಂತೆ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದರು ನಾಗಮ್ಮ ತಾಯಿ ಮತ್ತು ವೀರನಗೌಡರು ತಮ್ಮ ಮಗಳಿಗೆ ಮಹಾತ್ಮ ಗಾಂಧೀಜಿಯವರ ಕಡೆಯಿಂದ ಅಮಲಾ ಎಂದು ಹೆಸರನ್ನು ಇಡಿಸಿದ್ದು ನಿಜಕ್ಕೂ ಅವಿಸ್ಮರಣೀಯ.

ಇದರ ನಡು ನಡುವೆ ಆಗಾಗ ಅನೇಕ ಮಡಿವಂತರು ಪಾಟೀಲ್ ದಂಪತಿಗಳ ಈ ಕಾರ್ಯವನ್ನು ಸಹಿಸದೆ ಅವರನ್ನು ದೂಷಿಸುವ ಕಾರ್ಯವನ್ನು ಕೂಡ ಮಾಡುತ್ತಲೇ ಇದ್ದರು. ಆದರೆ ಇದಾವುದನ್ನು ಗಣನೆಗೆ ತೆಗೆದುಕೊಳ್ಳದೆ ನಾಗಮ್ಮ ತಾಯಿಯವರು ಅತ್ಯಂತ ಶ್ರದ್ಧೆ ಮತ್ತು ಕಾಠೀಣ್ಯದಿಂದ ದೇಶ ಭಕ್ತಿಯ ವ್ರತ ಹಿಡಿದುದರಿಂದ ಈ ಸೇವಾಕಾರ್ಯದಿಂದ ವಿಮುಖರಾಗುವ ಮಾತೇ ಇರಲಿಲ್ಲ.

ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ದಂಪತಿಗಳ ಈ ಅಮೃತಸೇವೆಯನ್ನು ಸ್ಮರಿಸುವ ಮೂಲಕ ನಾಡಿನ ಮಹಿಳಾ ಸಬಲೀಕರಣಕ್ಕೆ ಅಡಿಪಾಯ ಹಾಕಿದ ತನ್ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮವನ್ನು ಒದಗಿಸಿದ ಈ ದಂಪತಿಗಳ ಸೇವೆಯನ್ನು ಈ ಆತ್ಮಕಥನದ ಮೂಲಕ ಸ್ಮರಿಸಿರುವುದು ಅಭಿಮಾನದ ಸಂಗತಿಯಾಗಿದೆ.
ಮಹಿಳಾ ವಿದ್ಯಾಪೀಠದಲ್ಲಿ ದೊಡ್ಡದಾದ ಗಾಂಧೀಜಿ ಪ್ರಾರ್ಥನಾ ಮಂದಿರವಿದ್ದು ಅಲ್ಲಿ ಗಾಂಧೀಜಿಯವರ ಚಿತಾಭಸ್ಮವನ್ನು ಇರಿಸಲಾಗಿದೆ. ಬಹುತೇಕ ಕರ್ನಾಟಕದಲ್ಲಿ ಗಾಂಧೀಜಿಯವರ ಚಿತಾಭಸ್ಮವನ್ನು ಹುಬ್ಬಳ್ಳಿ, ಬಳ್ಳಾರಿ ಮತ್ತು ಮಡಿಕೇರಿಯಲ್ಲಿ ಇರಿಸಿದ್ದು, ಇಂದಿನ ಕಿತ್ತೂರು ಕರ್ನಾಟಕ ಭಾಗದಲ್ಲಿ ಗಾಂಧೀಜಿಯವರ ಚಿತಾಭಸ್ಮವನ್ನು ಇರಿಸಿದ ಏಕೈಕ ಪ್ರಾರ್ಥನಾ ಮಂದಿರ ಇದಾಗಿದೆ.

ಇಂದು ಮಹಿಳಾ ವಿದ್ಯಾಪೀಠ ಸಂಸ್ಥೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಅಮಲಕ್ಕ ಕಡಗದವರು ಗಾಂಧೀಜಿಯವರ ಕಡೆಯಿಂದ ತಮ್ಮ ನಾಮಕರಣವನ್ನು ಮಾಡಿಸಿಕೊಂಡ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಚಲೇಜಾವ್ ಚಳುವಳಿಯ ಸಂದರ್ಭದಲ್ಲಿ ತಮ್ಮ ಪತಿಯೊಂದಿಗೆ ಕ್ರಾಂತಿಯಲ್ಲಿ ಧುಮುಕಿದ ನಾಗಮ್ಮ ತಾಯಿಯವರು ಜೈಲುವಾಸವನ್ನು ಕೂಡ ಅನುಭವಿಸಿದ್ದಾರೆ. ಹುಬ್ಬಳ್ಳಿ ಧಾರವಾಡ, ಹಾವೇರಿ, ಹಾನಗಲ್ಲ, ನರಗುಂದ, ಭಾಗದ ಅನೇಕ ಸ್ವಾತಂತ್ರ‍್ಯ ಯೋಧರ ಪತ್ನಿಯರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು ಗಾಂಧೀಜಿಯವರು ಕರೆ ನೀಡಿವ ಎಲ್ಲ ಹೋರಾಟಗಳಿಗೆ ಶಕ್ತಿಯಾಗಿ ನಿಂತುಕೊಂಡ ಮಹಿಳಾ ವೀರಮಣಿಗಳಲ್ಲಿ ನಾಗಮ್ಮ ತಾಯಿ ಪಾಟೀಲ್ ಅವರು ಮುಂಚೂಣಿಯಲ್ಲಿದ್ದವರು.

ಹುಬ್ಬಳ್ಳಿಯ ನರಸಿಂಹ ದಾಬಡೆ, ಮೈಲಾರ್ ಮಹದೇವಪ್ಪ ಮತ್ತು ಮೈಲಾರ ಮಹಾದೇವಮ್ಮ ದಂಪತಿಗಳ ಜೊತೆಗೆ ಹಳ್ಳಿಕೇರಿ ಗುದ್ಲಪ್ಪ ಮತ್ತು ಚನ್ನಮ್ಮ ದಂಪತಿಗಳ ಜೊತೆಗೆ ಅನನ್ಯತೆಯನ್ನು ಬೆಳೆಸಿಕೊಂಡ ನಾಗಮ್ಮ ತಾಯಿಯವರು ಹುಬ್ಬಳ್ಳಿಯ ಚನ್ನಬಸಮ್ಮ ರತ್ನಕಟ್ಟಿ ಮುಂತಾದ ಸ್ವಾತಂತ್ರ‍್ಯ ಯೋಧರೊಂದಿಗೆ ಮಹಿಳಾ ಪರಧ್ವನಿಯನ್ನು ಗಟ್ಟಿಗಿತ್ತಿಯಾಗಿ ನಿಭಾಯಿಸಿದ್ದು ಇತಿಹಾಸದ ಪುಟಗಳಲ್ಲಿ ಸ್ಮರಣೀಯವಾಗಿದೆ. ಸ್ವಾತಂತ್ರ‍್ಯ ನಂತರದಲ್ಲಿ ಹಾಗೂ ಕರ್ನಾಟಕ ರಾಜ್ಯದ ರಾಜ್ಯಪಾಲರಿಂದ ಮುಖ್ಯಮಂತ್ರಿಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಂದ ಅನೇಕ ಪ್ರಶಸ್ತಿ ಪುರಸ್ಕಾರ ಮತ್ತು ಗೌರವ ಸನ್ಮಾನಗಳಿಗೆ ನಾಗಮ್ಮ ತಾಯಿಯವರು ಪಾತ್ರರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಸ್ಥಾಪಿತಗೊಂಡ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಮಹಿಳಾ ವಿದ್ಯಾಪೀಠ ಸಂಸ್ಥೆಯು ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ದಂಪತಿಗಳ ಕನಸಿನ ಕೂಸಾಗಿದ್ದು 21ನೇ ಶತಮಾನ ಹಾಗೂ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ತನ್ನ ಇಚ್ಚಿತ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಕೆಜಿಯಿಂದ ಪಿಜಿಯವರೆಗೆ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ಮಹಿಳಾ ವಿದ್ಯಾಪೀಠ ಸಂಸ್ಥೆಯು ನಮ್ಮ ನಾಡಿನ ಹೆಮ್ಮೆಯ ಮಹಿಳಾ ಸಂಸ್ಥೆಯಾಗಿ ರೂಪುಗೊಂಡಿದೆ. ಗಾಂಧಿ ಪ್ರಾರ್ಥನಾ ಮಂದಿರದಲ್ಲಿ ಗಾಂಧೀಜಿಯವರ ಚಿತಾಬಸ್ಮವನ್ನು ಇರಿಸಲಾಗಿದ್ದು ಈವರೆಗೂ ಕೂಡ ಅಗಸ್ಟ್ 15 ಹಾಗೂ ಜನವರಿ 26ರಂದು ಗಾಂಧೀಜಿ ಪ್ರಾರ್ಥನಾ ಭವನದ ಮುಂದೆ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ‍್ಯ ಯೋಧರಿಗೆ ನಮನವನ್ನು ಸಲ್ಲಿಸುವ ಪರಂಪರೆ ಶತಮಾನಗಳಿಂದ ಮುಂದುವರಿದುಕೊಂಡು ಬಂದಿದೆ. ಇಂದಿಗೂ ಮಹಿಳಾ ವಿದ್ಯಾಪೀಠದಲ್ಲಿ ನಾಗಮ್ಮ ತಾಯಿ ಆಶ್ರಮವಿದ್ದು ಅಲ್ಲಿ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ಅವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಹಾಗೂ ಅವರು ಬಳಸಿದ ವಿಶಿಷ್ಟ ವಸ್ತುಗಳ ಪ್ರದರ್ಶನವನ್ನು ಕೂಡ ಕಾಣಬಹುದು. ಮಹಿಳಾ ವಸತಿ ನಿಲಯಗಳು ಮಹಿಳಾ ಮಹಾವಿದ್ಯಾಲಯ, ಮಹಿಳಾ ಸ್ನಾತಕೋತ್ತರ ಪಿಜಿ ಸೆಂಟರ್, ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ, ಮಹಿಳಾ ಡಿಎಡ್ ಶಿಕ್ಷಣ ಸಂಸ್ಥೆ, ಮಹಿಳಾ ವೃತ್ತಿಪರ ಕೋರ್ಸಗಳು, ಮಹಿಳಾ ಎನ್ ಟಿ ಸಿ ಕಾಲೇಜ್ ಹಾಗೂ ವೃತ್ತಿಪರ ಬ್ಯೂಟಿಷಿಯನ್ ಕೋರ್ಸ್‌ಗಳು ಹಾಗೂ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ಒಳಗೊಂಡ ಬೃಹತ್ ಸಂಸ್ಥೆಯಾಗಿ ಇಂದು ಬೆಳೆದುದು ಪಾಟೀಲ ದಂಪತಿಗಳ ಕನಸು ನನಸಾದಂತಾಗಿದೆ. ಸ್ವಾತಂತ್ರ‍್ಯ ಪೂರ್ವದಿಂದ ಹಿಡಿದು ಸ್ವಾತಂತ್ರ‍್ಯ ನಂತರದಲ್ಲಿ ಒಂಬತ್ತು ದಶಕಗಳಿಂದ ನಿರಂತರವಾಗಿ ಮಹಿಳಾ ವಿದ್ಯಾಪೀಠ ಮತ್ತು ಕಸ್ತೂರ ಬಾ ದಲಿತ ಬಾಲಿಕಾಶ್ರಮವು ಸ್ತ್ರೀ ಸಬಲೀಕರಣದ ಶಕ್ತಿಕೇಂದ್ರವಾಗಿ ತನ್ನ ಹಿರಿಮೆ ಗರಿಮೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದದ್ದು ಶ್ಲಾಘನೀಯವಾಗಿದೆ.

ತಿಲದ ಮರೆಯ ತೈಲದಂತೆ ಅವಿರತವಾಗಿ ಶ್ರಮಿಸಿ ನಾಡಿನ ಸರ್ವತೋಮುಖ ಏಳಿಗೆ ಕನಸು ಕಂಡವರು ವೀರನಗೌಡ ಮತ್ತು ನಾಗಮ್ಮ ದಂಪತಿಗಳು. ಸ್ವಾತಂತ್ರ‍್ಯ ಪೂರ್ವದಲ್ಲಿ ಅವರು ನೆಟ್ಟ ಚಿಕ್ಕ ಸಸಿ ಇಂದು ಹೆಮ್ಮರವಾಗಿ ಬೆಳೆದು ಉತ್ತರ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಮಹಿಳಾ ವಿದ್ಯಾಪೀಠವಾಗಿ ಬೆಳೆದು ಲಕ್ಷಾಂತರ ವಿದ್ಯಾರ್ಥಿನಿಯರ ಬದುಕನ್ನು ರೂಪಿಸಿದೆ.

ಈ ಸಂಸ್ಥೆಯ ಸಂಸ್ಥಾಪಕರಾದ ಸರ್ದಾರ್ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ‍್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಗಾಂಧೀಜಿಯವರ ಕಟ್ಟಾ ಅಭಿಮಾನಿಗಳು ಅನುಯಾಯಿಗಳಾದ ಇವರ ದೇಶಸೇವೆ ಚಿರಸ್ಮರಣೀಯವಾಗಿದೆ. ಇದೇ ಕಾರಣಕ್ಕಾಗಿ ಅವರಿಗೆ ಸರದಾರದ ಎಂಬ ಬಿರುದನ್ನು ನೀಡಲಾಗಿತ್ತು. ಶ್ರೀ ವೀರನಗೌಡರ ಸಾಮಾಜಿಕ, ಶೈಕ್ಷಣಿಕ ಸೇವೆಗೆ ಮನ್ನಣೆ ನೀಡಿ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗಾಂಧೀಜಿಯವರ ಸೇವಾ ಕಾರ್ಯದಿಂದ ಹುರುಪುಗೊಂಡು ಹುಬ್ಬಳ್ಳಿಯಲ್ಲಿ ಕಸ್ತೂರಿ ಬಾ ದಲಿತ ಬಾಲಿಕಾಶ್ರಮವನ್ನು ಪ್ರಾರಂಭಿಸಿದರು.
ಉತ್ತರಕರ್ನಾಟಕದ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ಇದೊಂದು ಹೊಸ ಪ್ರಯೋಗವಾಗಿತ್ತು. ವೀರನಗೌಡರ ಧರ್ಮಪತ್ನಿಯಾದ ನಾಗಮ್ಮ ತಾಯಿಯವರ ಕಾಳಜಿ ಅವರ ಕರ್ತೃತ್ವ ಶಕ್ತಿ ಈ ದಲಿತ ಬಾಲಿಕಾಶ್ರಮಕ್ಕೆ ಉಸಿರನ್ನು ತುಂಬಿ ಪೋಷಣೆ ನೀಡಿತು.

ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿ ಗಾಂಧೀಜಿಯವರ ಹರಿಜನೋದ್ಧಾರದ ಆಶಯವನ್ನು ಈಡೇರಿಸುವಲ್ಲಿ ಶಕ್ತಿಕೇಂದ್ರವಾಗಿ ಹುಬ್ಬಳ್ಳಿಯ ಕಸ್ತೂರ ಬಾ ದಲಿತ ಬಾಲಿಕಾಶ್ರಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದನ್ನು ಸ್ಮರಿಸಬಹುದು. ನಾಗಮ್ಮ ತಾಯಿಯವರ ಕಾಳಜಿ, ಕರ್ತೃತ್ವ ಶಕ್ತಿ ಈ ಸಂಸ್ಥೆಯ ಹಿಂದೆ ಅಡಗಿತ್ತು. ಸ್ವಾತಂತ್ರ‍್ಯ ಪೂರ್ವದಲ್ಲಿ ಸ್ಥಾಪನೆಯ ಭಾಗ್ಯ ಕಂಡ ಈ ಆಶ್ರಮದಲ್ಲಿ ವಿದ್ಯೆಯನ್ನು ಕಲಿತ ಲಕ್ಷಾಂತರ ಹೆಣ್ಣುಮಕ್ಕಳು ಅನೇಕರು ಇಂದು ಅತ್ಯಂತ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಪ್ರಪಂಚದಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನೆಲೆ ಕಂಡ ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯನ್ನು ಹಾಗೂ ದಂಪತಿಗಳ ಸೇವೆಯನ್ನು ಸಮಾಜವು ಕೊಂಡಾಡಿತು ಶ್ಲಾಘಿಸಿತು.

ಜಾತಿ ಮತ ಭೇದ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ನಾಗಮ್ಮ ತಾಯಿಯವರು ತಮ್ಮ ಪತಿ ವೀರನಗೌಡರು ಒಟ್ಟಿಗೆ ದಲಿತ ಬಾಲಿಕಾಶ್ರಮದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಎಂತಹವರಿಗೂ ಕೂಡಾ ಸ್ಪೂರ್ತಿದಾಯಕ ಆದರ್ಶಪ್ರಾಯ ಮತ್ತು ಅನುಕರಣೀಯ ಸೇವೆಯಾಗಿತ್ತು.

ದಲಿತೋದ್ಧಾರ ಮತ್ತು ಸಮಾಜೋದ್ಧಾರವೇ ತಮ್ಮ ಜೀವನದ ಉಸಿರು ಎಂಬುದನ್ನು ಅರಿತುಕೊಂಡಿದ್ದ ವೀರನಗೌಡ ದಂಪತಿಗಳ ಸೇವೆಯನ್ನು ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೆನೆಯುವದು ನಾವು ಆ ದಂಪತಿಗಳ ಸೇವೆಗೆ ನೀಡುವ ಗೌರವವಾಗಿದೆ.

ಕೆ.ಎಲ್.ಇ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಒಬ್ಬರಾದ ಸರ್ದಾರ್ ವೀರನಗೌಡ ಪಾಟೀಲ್ ಅವರ ಕನಸು ಮತ್ತು ಆಶಯಕ್ಕೆ ತಕ್ಕಂತೆ ಧರ್ಮಪತ್ನಿ ನಾಗಮ್ಮ ತಾಯಿ ಪಾಟೀಲ್ ಅವರು ಇಡೀ ತಮ್ಮ ಬದುಕನ್ನು ದಲಿತೋದ್ಧಾರ ಮತ್ತು ಸಮಾಜ ಸೇವೆಗೆ ಸಮರ್ಪಿಸಿಕೊಂಡು ಅವಿಸ್ಮರಣೀಯವಾಗಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಮಾರ್ಪಾಡುಗಳನ್ನು ಹುಬ್ಬಳ್ಳಿ ಅಂತಹ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿಯಲ್ಲಿ ಹೆಣ್ಣು ಮಕ್ಕಳ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಮಹಿಳಾ ಸಬಲೀಕರಣಕ್ಕೆ ಹೊಸ ವೇದಿಕೆಯನ್ನು ಒದಗಿಸಿ ಕೊಟ್ಟಿರುವುದನ್ನು ನಾಗಮ್ಮ ತಾಯಿ ಪಾಟೀಲ್ ಅವರ ಈ ಜನಪರ ಸೇವೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಮಹಿಳಾ ವಿದ್ಯಾಪೀಠದ ಸಂಸ್ಥಾಪಕರಾದ ದಿವಂಗತ ನಾಗಮ್ಮ ವೀರನಗೌಡ ಪಾಟೀಲ್ ಅವರ ಹಾಗೂ ಮಹಿಳಾ ವಿದ್ಯಾಪೀಠದ 70ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪದವಿ ಮಹಾವಿದ್ಯಾಲಯಕ್ಕೆ ಹೊಸ ಕಟ್ಟಡವನ್ನು ಕಟ್ಟಿ ಮನೋರಮಾದೇವಿ, ಜುಗಲ್ ಕಿಶೋರ್ ಸೋಮಾನಿ ಎಂದು ನಾಮಕರಣ ಮಾಡುವಾಗ ಅಂದಿನ ರಾಜ್ಯಪಾಲರಾದ ಟಿ. ಏನ್ ಚತುರ್ವೇದಿ ಯವರು ಹಾಗೂ ಕಂದಾಯ ಸಚಿವರಾದ ಜಗದೀಶ್ ಶೆಟ್ಟರ್ ಅವರು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವರಾದ ಬಸವರಾಜ್ ಹೊರಟ್ಟಿ ಅವರು ಇದೇ ಸಂದರ್ಭದಲ್ಲಿ ಅವ್ವ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ನಾಗಮ್ಮ ತಾಯಿ ಮತ್ತು ವೀರನಗೌಡರ ಸಮಾಜಮುಖಿ ಸೇವೆಯನ್ನು ಸಂಸ್ಮರಣೆ ಗೈದುದು ಹೆಮ್ಮೆಯ ಸಂಗತಿಯಾಗಿದೆ.

ಈ ಆಲದ ಮರದ ನೆರಳಿನಲ್ಲಿ ನೂರಾರು ಸಂಸ್ಥೆಗಳು ಹುಟ್ಟಿಕೊಂಡು ಹೆಣ್ಣು ಮಕ್ಕಳ ಶೈಕ್ಷಣಿಕ ಹಸಿವನ್ನು ನೀಗಿಸುವಲ್ಲಿ ಯಶಸ್ವಿಯಾಗಿವೆ. ನೂರಾರು ಹೆಣ್ಣು ಮಕ್ಕಳು, ಸಾವಿರಾರು ಅನಾಥೆಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಲಕ್ಷಾಂತರ ಮಹಿಳೆಯರು ಈ ಸಂಸ್ಥೆಯಲ್ಲಿ ಓದಿ ಅಧಿಕಾರಿಗಳಾಗಿದ್ದಾರೆ ಸುಶಿಕ್ಷಿತರಾಗಿದ್ದಾರೆ. ಇದು ಸ್ವಾತಂತ್ರ‍್ಯೋತ್ತರ ಭಾರತೀಯ ಮಹಿಳಾ ಸಬಲೀಕರಣಕ್ಕೆ ಭದ್ರ ಬುನಾದಿಯನ್ನು ಹಾಕಿದ ಶ್ರೇಯಸ್ಸು ಈ ದಂಪತಿಗಳಿಗೆ ಸಲ್ಲುತ್ತದೆ.

ಗಾಂಧೀಜಿಯವರು ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ಬಂದಾಗ ಈ ಭಾಗದಲ್ಲಿ ಗಾಂಧೀಜಿಯವರ ಬಲಗೈಯಾಗಿ ಸ್ವಾತಂತ್ರ‍್ಯ ಸಂಗ್ರಾಮ ಚಳುವಳಿ, ಚಲೇಜಾವ್ ಚಳುವಳಿ, ಸ್ವದೇಶಿ ಆಂದೋಲನ, ಭಾರತ ಬಿಟ್ಟು ತೊಲಗಿ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಖಾದಿಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧೀಜಿಯವರ ಜೊತೆಗೆ ಮುಂಜಾನೆ ಪ್ರಭಾತ ಪೇರಿ. ಪ್ರಾರ್ಥನಾಸಭೆಗಳನ್ನು ನಡೆಸುವುದರಲ್ಲಿ ಮುಂಚೂಣಿಯಲ್ಲಿ ನಿಂತು ಗಾಂಧೀಜಿಯವರ ಒಡನಾಡಿಯಾಗಿ ಉತ್ತರ ಕರ್ನಾಟಕದ ಭಾಗದ ಪ್ರತಿನಿಧಿಯಾಗಿ ಸೇವೆಯನ್ನು ಸಲ್ಲಿಸಿದರು. ಮೈಲಾರ ಮಹದೇವಮ್ಮ ಮತ್ತು ಮೈಲಾರ ಮಹಾದೇವಪ್ಪ, ಗುದ್ಲೆಪ್ಪನವರ ಜೊತೆಗೆ ಗಾಂಧೀಜಿಯವರೊಂದಿಗೆ ನಿಕಟವರ್ತಿಗಳಾಗಿ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ‍್ಯ ಸಂಗ್ರಾಮಕ್ಕೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಸಮಸಮಾಜದ ಕನಸುಗಾರರಾದ ಹಾಗೂ ಸಮಾಜೋ ಧಾರ್ಮಿಕ ಕ್ರಾಂತಿಯ ನೇತಾರರಾದ ಬಸವಣ್ಣನವರು ಮತ್ತು ಗಾಂಧೀಜಿಯವರ ಸಾಮಾಜಿಕ ಶೈಕ್ಷಣಿಕ ಕಳಕಳಿ ವೀರನಗೌಡ ಅವರಲ್ಲಿ ಮೇಳವಿಸಿತ್ತು. ಸ್ತ್ರೀ ಶಿಕ್ಷಣದ ಮಹತ್ವ ಹಾಗೂ ಮಹಿಳಾ ಸಬಲೀಕರಣದ ಹರಿಕಾರರಾದ ವೀರನಗೌಡ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಾಗಮ್ಮ ತಾಯಿ ಪಾಟೀಲರು ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ದಲಿತರಿಗೆ ಸಾಮಾಜಿಕ ಸಮಾನ ಅವಕಾಶವನ್ನು ಕಲ್ಪಿಸಿ ಮುಖ್ಯ ವಾಹಿನಿಗೆ ತರುವ ಬಗ್ಗೆ ಕ್ರಿಯಾಶೀಲರಾಗಿ’ ಸಮಾಜೋ ಶೈಕ್ಷಣಿಕ ಸೇವೆಯನ್ನು ತಮ್ಮ ಜೀವನದ ಸೇವಾಮೃತವನ್ನೇ ತಮ್ಮ ಗುರಿಯಾಗಿಸಿಕೊಂಡರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ ದಂಪತಿಗಳು ದಲಿತರಿಗೆ ಮನೆಯಲ್ಲಿ ಆಶ್ರಯವನ್ನು ನೀಡಿದರು. 1934ರಲ್ಲಿ ದಲಿತ ಬಾಲಿಕಾಶ್ರಮ ಸ್ಥಾಪನೆಗೆ ಶ್ರೀಕಾರ ಹಾಕಿದರು. ಇಂದು ಅದು ಕಸ್ತೂರ ಬಾ ದಲಿತ ಬಾಲಿಕಾಶ್ರಮವೆಂದು ಹೆಸರನ್ನು ಪಡೆದುಕೊಂಡಿದೆ. ಗಾಂಧೀಜಿಯವರು ವರ್ದಾದಲ್ಲಿ ಸ್ಥಾಪಿಸಿದ್ದ ದಲಿತ ಬಾಲಿಕಾಶ್ರಮದ ಮಾದರಿಯಲ್ಲಿಯೇ ಉತ್ತರ ಕರ್ನಾಟಕ ಭಾಗದಲ್ಲಿ ಏಕೈಕ ಮಹಿಳಾ ಕಲಿಕಾ ಆಶ್ರಮವಾಗಿ ನೆಲೆ ನಿಂತಿದ್ದು ರೋಚಕ ಕಥಾನಕವಾಗಿದೆ. ಸಮಾಜೋ ಶೈಕ್ಷಣಿಕ ಹೋರಾಟಕ್ಕೆ ಸ್ತ್ರೀ ಸಮುದಾಯದ ಸಬಲೀಕರಣಕ್ಕೆ ಬಹುದೊಡ್ಡ ಯಶೋಗಾಥೆಯನ್ನು ಈ ಸಂಸ್ಥೆ ಹೊಂದಿರುವದನ್ನು ಕಾಣುತ್ತೇವೆ. ಅಂದು ಹಿರಿಯರು ಕಂಡ ಕನಸು ಇಂದು 90 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿ ಸ್ತ್ರೀ ಶಿಕ್ಷಣದ ಮುಕುಟಮಣಿಯಾಗಿ ಅಳಲಿನಲ್ಲಿ ಬಳಲುವವರ ಕರುಳ ಸಾಂತ್ವನಗೊಳಿಸಿ ಜಪತಪಗಳಿಗಿಂತ ಶಿಕ್ಷಣ ದಾಸೋಹವೇ ಮೇಲೆಂದು ಸ್ತ್ರೀ ಸಶಕ್ತಿಕರಣಕ್ಕಾಗಿ ಉತ್ತರ ಕರ್ನಾಟಕದ ಮಹಿಳಾ ವಿದ್ಯಾಪೀಠವೂ ಶಿಕ್ಷಣಕ್ಕೆ ಬಹುದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ.

ನಾಗಮ್ಮ ತಾಯಿ ಪಾಟೀಲ್ ಅವರ ಸೊಸೆಯಾದ ಲಿಂಗೈಕ್ಯ ಡಾ.ಲಕ್ಷ್ಮೀಭಾಯಿ ಪ್ರೇಮಾನಂದ ಪಾಟೀಲರು ಅವರ ತರುವಾಯ ಸತ್ಯ, ನ್ಯಾಯ, ನಿಷ್ಠೆಯಿಂದ ಮಹಿಳಾ ವಿದ್ಯಾಪೀಠದ ಅಧ್ಯಕ್ಷರಾಗಿ ಅಮೂಲ್ಯ ಸೇವೆಯನ್ನು ಸಲ್ಲಿಸಿದರು. ಪಾಟೀಲ್ ದಂಪತಿಗಳ ದೂರ ದೃಷ್ಟಿಯ ಫಲವಾಗಿ ಶತಮಾನದ ಹೊಸ್ತಿಲಲ್ಲಿರುವ ವಿದ್ಯಾಪೀಠ ಸಂಸ್ಥೆಯು ದಿನದಿಂದ ದಿನಕ್ಕೆ ಶೈಕ್ಷಣಿಕ ಅಭಿವೃದ್ಧಿಯ ಉತ್ತುಂಗವನ್ನು ಏರಿದೆ. ಈ ಕಾರ್ಯ ಸಾಧನೆಗೆ ಜೀವಂತ ಸಾಕ್ಷಿ ಎಂಬಂತೆ ಶೈಕ್ಷಣಿಕ ಸಾಂಸ್ಕೃತಿಕ ಪ್ರಗತಿಯೊಂದಿಗೆ ಸಮಾಜಕ್ಕೆ ಶ್ರೇಷ್ಠ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಕಾಣಿಕೆ ನೀಡಿರುವದು ಹಾಗೂ ಲಕ್ಷಾಂತರ ಹೆಣ್ಣುಮಕ್ಕಳು ವಿದ್ಯೆಯ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡಿರುವದು ಮಹಿಳಾ ವಿದ್ಯಾಪೀಠದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಕಾಯಕ ಮತ್ತು ದಾಸೋಹಗಳ ಶರಣ ಸಂಸ್ಕೃತಿ ಹಾಗೂ ಸ್ವಾತಂತ್ರ‍್ಯ ಸಂಗ್ರಾಮದ ದಲಿತೋದ್ಧಾರ ಮತ್ತು ಗ್ರಾಮೋದ್ಧಾರ ಎರಡು ದೃಷ್ಟಿ ಕೋನಗಳನ್ನು ಸಾಕಾರಗೊಳಿಸಿದ ಉತ್ತರ ಕರ್ನಾಟಕದ ಏಕೈಕ ಹೆಮ್ಮೆಯ ಸಂಸ್ಥೆ ಎಂದರೆ ಸರ್ದಾರ್ ವೀರನಗೌಡ ಪಾಟೀಲ್ ಮಹಿಳಾ ವಿದ್ಯಾಪೀಠವಾಗಿದೆ.

1968ರಲ್ಲಿ ಈ ಸಂಸ್ಥೆಗೆ ಧರ್ಮದರ್ಶಿಗಳನ್ನು ನೇಮಕ ಮಾಡಲಾಯಿತು ಸ್ವಾತಂತ್ರ‍್ಯ ನಂತರದ ಭಾರತದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಳಿಗೆ ಅನುಗುಣವಾಗಿ ಈ ಸಂಸ್ಥೆ ಕಾಲ ಕಾಲಕ್ಕೆ ಮಾರ್ಪಾಟುಗೊಂಡು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಅಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ, ಮತ್ತು ಧರ್ಮದರ್ಶಿಗಳ ಮತ್ತು ಪದಾಧಿಕಾರಿಗಳನ್ನು ಹೊಂದಿ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. 19991ರಲ್ಲಿ ಹಣಕಾಸಿನ ತೊಂದರೆಯಿಂದ ಈ ಸಂಸ್ಥೆ ಬಳಲುತ್ತಿದ್ದಾಗಲೂ ಕೂಡ ಅಂದಿನ ಅಧ್ಯಕ್ಷರಾದ ಲಕ್ಷ್ಮಿಬಾಯಿ ಪಾಟೀಲ್ ಅವರ ಮಗ ಪ್ರೇಮಾನಂದ ಪಾಟೀಲ್ ಅವರು ಸಮಚಿತ್ತದಿಂದ ಶಿಕ್ಷಣ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.

ಸ್ವಾತಂತ್ರ‍್ಯ ಪೂರ್ವದಲ್ಲಿ ದಲಿತ ಬಾಲಿಕಾಶ್ರಮದಿಂದ ಪ್ರಾರಂಭವಾದ ಈ ಸಂಸ್ಥೆ ಶಿಶು ವಿಹಾರ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ, ಎನ್ ಟಿ ಸಿ ತರಬೇತಿ, ಕಾರ್ಯನಿರತ ಮಹಿಳಾ ಸಾಮಾನ್ಯ ವಸತಿಗೃಹಗಳು, ವೃತ್ತಿ ಪರ ತರಬೇತಿ ಕೋರ್ಸುಗಳು ಐಟಿಐ ತರಬೇತಿ, ಕಸೂತಿ ಹೊಲಿಗೆ ಕೋರ್ಸ್ ಗಳನ್ನು ಕೂಡ ಹೊಂದಿದೆ. 1992ರಲ್ಲಿ ಎನ್. ಸಿ .ಐ .ಟಿ ಯ ಮಾನ್ಯತೆಯನ್ನು ಪಡೆದುಕೊಂಡ ಕರ್ನಾಟಕದ ಪ್ರಥಮ ಮಹಿಳಾ ಐಟಿಐ ತರಬೇತಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪದವಿ ಮಹಾವಿದ್ಯಾಲಯ,ಪದವಿ ಪೂರ್ವ ಮಹಾವಿದ್ಯಾಲಯ ಕರಾಅಮವಿವಿ ವಿಜಾಪುರದ ಸ್ನಾತಕೋತ್ತರ ಶಿಕ್ಷಣ ಕೇಂದ್ರ, ಮಹಿಳೆಯರ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಪ್ರಗತಿಗೆ ಅವಶ್ಯಕತೆ ಇರುವ ಎಲ್ಲ ವೇದಿಕೆಗಳನ್ನು ಒಂದೇ ಸೂರಿನಡಿ ಒದಗಿಸಿಕೊಟ್ಟು ಜಾಗತೀಕರಣೋತ್ತರದ ಈ ಸಂದರ್ಭದಲ್ಲಿಯೂ ಪ್ರಗತಿಯನ್ನು ಸಾಧಿಸುತ್ತಿರುವದು ಪ್ರಶಂಸನೀಯ ಸಂಗತಿ. ಸದ್ಯ ಸರ್ದಾರ್ ವೀರನಗೌಡ ಪಾಟೀಲ್ ಮಹಿಳಾ ವಿದ್ಯಾಪೀಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಜ್ಞಾನಾರ್ಜನೆಯನ್ನು ಮಾಡುತ್ತಿದ್ದಾರೆ. ಐದನೂರಕ್ಕೂ ಹೆಚ್ಚು ಮಹಿಳೆಯರು, ವಿದ್ಯಾರ್ಥಿನಿಯರು ವಸತಿ ಗ್ರಹದಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಾರೆ. ನೂರಕ್ಕೂ ಅಧಿಕ ಬೋಧಕ ಬೋಧಕೇತರ ಸಿಬ್ಬಂದಿಗಳು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗೆ ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿ ಗಾಂಧೀಜಿಯವರಿಂದ ಪ್ರಭಾವ ಹಾಗೂ ಪ್ರೇರಣೆಗೆ ಒಳಗಾದ ವೀರನಗೌಡ ಪಾಟೀಲ್ ಮತ್ತು ನಾಗಮ್ಮ ತಾಯಿ ಪಾಟೀಲ್ ದಂಪತಿಗಳು ಸಮಾಜಮುಖಿಯಾಗುವುದರೊಂದಿಗೆ ಶೈಕ್ಷಣಿಕ ಸೇವೆಯನ್ನು ದಲಿತೋದ್ಧಾರ ಮತ್ತು ಹರಿಜನೋದ್ಧಾರ ಸೇವೆಯನ್ನುಗೈದ ಫಲವಾಗಿ ಇಂದು 90 ವರ್ಷಗಳು ದಾಟಿದರು ತನ್ನದೇ ಆದ ಹೆಚ್ಚುಗಾರಿಕೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ರವೀಂದ್ರನಾಥ್ ಟಾಗೋರ್ ಅವರ ಶಾಂತಿನಿಕೇತನದ ಮಾದರಿ ಹಾಗೂ ಗಾಂಧೀಜಿಯವರ ವರ್ಧಾ ಶಿಕ್ಷಣ ಪದ್ಧತಿಯಂತೆ ರೂಪುಗೊಂಡ ದಲಿತ ಬಾಲಿಕಾಶ್ರಮವು 21ನೇ ಶತಮಾನದ ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಮರ್ಥ ವೇದಿಕೆಯನ್ನು ಒದಗಿಸಿ ಕೊಟ್ಟಿರುವದು ಅವಿಸ್ಮರಣೀಯವಾಗಿದೆ.

ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ದಂಪತಿಗಳ ಈ ಅಮೃತಸೇವೆಯನ್ನು ಸ್ಮರಿಸುವ ಮೂಲಕ ನಾಡಿನ ಮಹಿಳಾ ಸಬಲೀಕರಣಕ್ಕೆ ಅಡಿಪಾಯ ಹಾಕಿದ ತನ್ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮವನ್ನು ಒದಗಿಸಿದ ಈ ದಂಪತಿಗಳ ಸೇವೆಯನ್ನು ಸ್ಮರಿಸುವುದು ಅಭಿಮಾನದ ಸಂಗತಿಯಾಗಿದೆ.

ಜಾಗತೀಕರಣೋತ್ತರ 21ನೇ ಶತಮಾನದ ಇಂದಿನ ಭಾರತದ ಅಭಿವೃದ್ಧಿಗೆ ಶತಮಾನಗಳ ಹಿಂದೆಯೇ ಆಂಗ್ಲರ ಆಳ್ವಿಕೆಯ ವಿರುದ್ಧವಾಗಿ ಬಂಡಾಯದ ಮತ್ತು ಕ್ರಾಂತಿಕಾರಿ ಚಳುವಳಿಯ ಮೂಲಕ ನಮ್ಮ ದೇಶವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ಸ್ವಾತಂತ್ರ‍್ಯ ಪಡೆದು ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಮತ್ತು ಬಲಿದಾನಗೈದ ಎಲ್ಲ ಹುತಾತ್ಮರನ್ನು ಮಹಾತ್ಮರನ್ನು, ಸ್ವಾತಂತ್ರ‍್ಯವೀರರನ್ನು ಸ್ಮರಣೆಮಾಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಭಾರತದ ನೆಲ, ಜಲ, ಮಣ್ಣಿನ ಕಣ ಕಣಗಳಲ್ಲಿ ಭಾರತೀಯರ ಹೃದಯ ಮತ್ತು ಮನಗಳಲ್ಲಿ, ಭಾರತದ ಸ್ವಾತಂತ್ರ‍್ಯ ಸಂಗ್ರಾಮವು ಜಾಗತಿಕ ಇತಿಹಾಸದಲ್ಲಿ ಆಚಂದ್ರಾರ್ಕವಾಗಿ ಅಜರಾಮರವಾಗಿದೆ.