ತಲೆಗೆ ಮಂಕು ಬಡಿದಂತಾಯಿತು, ಆದರೂ ಚೇತರಿಸಿಕೊಂಡು ಮನೆ ತಲುಪಿದೆ. ಶಶಿ, ಮಕ್ಳು ಕಾಯ್ತಾ ಇದಾರೆ, ಆಗ್ಲೇ ತುಂಬಾ ಹೊತ್ತಾಯ್ತು, ಟೈಮ್ ನೋಡಿ ೧೦:೩೦, ನಂಗು ಜೋರಾಗಿ ನಿದ್ದೆ ಬರ್ತಾ ಇದೆ. ಬೇಗ ಬನ್ನಿ ಊಟ ಮಾಡೋಣವೆಂದಳು ನಿಶಾ. ನಾನು ಏನು ಮಾತಾಡದೆ ಕೈಯಲ್ಲಿದ್ದ ಪೇಪರ್ ಬ್ಯಾಗ್ ಅನ್ನು ಅವಳ ಕೈಗೆ ನೀಡಿದೆ. ಬಿರಿಯಾನಿ ತಿನ್ನಲು ಶುರು ಮಾಡಿದೆವು. ಯಾಕೆ ಶಶಿ ಏನು ಮಾತಾಡುತ್ತಿಲ್ಲ? ಸ್ವಲ್ಪ ಸುಸ್ತಾಗಿದೀರಾ ಅನ್ಸುತ್ತೆ. ಇಲ್ಲಾ.. ವಿಷಯ ಅದು ಅಲ್ಲ, ಎಂದು ನಡೆದ ಘಟನೆಯನ್ನು ಅವಳಿಗೆ ಹೇಳಿದೆ.
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ “ಕಬಾಬ್ ಮೆ ಹಡ್ಡಿ” ನಿಮ್ಮ ಓದಿಗೆ

ನಾನೊಬ್ಬ ನಾನ್ವೆಜ್ ಪ್ರಿಯ. ಆದರೆ.. ಇತ್ತೀಚಿನ ದಿನಗಳಲ್ಲಿ ನಿರಂತರ ಕ್ಲೈಂಟ್ ಮೀಟಿಂಗ್‌ಗಳು, ಪ್ರೆಸೆಂಟೇಷನ್ಸ್ ಮತ್ತು ಪ್ರಾಜೆಕ್ಟ್ ಡೆಡ್‌ಲೈನ್‌ಗಳಿಂದಾಗಿ ಮನೆಯಲ್ಲಿ ನಾನ್ವೆಜ್ ಮಾಡಿಸಿಕೊಂಡು ತಿನ್ನಲು ಬಿಡುವಾಗಿರಲಿಲ್ಲ. ಇವತ್ತು ತಿಂದರಾಯಿತು, ಇಲ್ಲಾ ನಾಳೆ ತಿಂದರಾಯಿತು ಬಿಡು.. ಎಂದು ಹೀಗೆ ದಿನಗಳು ಉರುಳುತ್ತಾ ನನ್ನ ನಾಲಿಗೆಗೆ ಚಡಪಡಿಕೆ ಶುರುವಾಗಿತ್ತು. ಕೆಲಸದ ವಿರಾಮದ ವೇಳೆಯಲ್ಲಿ ಯೂಟ್ಯೂಬ್, ಇನ್ಸ್ಟಾ ರೀಲ್‌ಗಳನ್ನು ನೋಡುತ್ತಾ ನನ್ನನ್ನು ನಾನು ವಿಶ್ರಮಿಸಿಕೊಳ್ಳುತ್ತಿದ್ದೆ. ರೀಲ್ಸ್‌ಗಳನ್ನು ಸ್ಕ್ರಾಲ್ ಮಾಡುವಾಗ, ಎಲ್ಲಿಂದಲೋ ಬರುತ್ತಿದ್ದ ‘ಬೆಳ್ಳುಳ್ಳಿ ಕಬಾಬ್’ ನಂತಹ ವಿಡಿಯೋಗಳು ನನ್ನ ಚಡಪಡಿಕೆಯನ್ನು ಕೆಣಕಿ, ಒನ್ ಮೋರ್ .. ! ಒನ್ ಮೋರ್.. ! ಎನ್ನುವಂತೆ ಇತರ ಫುಡ್ ವಿಡಿಯೋಗಳು ಸಾಲಾಗಿ ಬಂದು ಸಹನೆಯನ್ನು ಪರೀಕ್ಷಿಸುತ್ತಿದ್ದವು.

ಒಂದು ದಿನ ಹೀಗಾಯಿತು, ಒಂದರ ನಂತರ ಒಂದು ಇದ್ದಂತಹ ರಾತ್ರಿಯ ಕ್ಲೈಂಟ್ ಮೀಟಿಂಗ್‌ಗಳು ಕಾರಣಾಂತರಗಳಿಂದ ರದ್ದಾದವು. ಆಗ ನನ್ನ ತಲೆಯಲ್ಲಿ ತಟ್ಟನೆ ಹೊಳೆದದ್ದೇ ‘ಕಬಾಬ್ ‘.

ಮನೆಯ ಅಂಗಳದಲ್ಲಿದ್ದ ಗಾಡಿಯನ್ನು ಸಂತಸದಿಂದ ಹೊರತೆಗೆದು “ನಿಶಾ ಇಂದು ಎಲ್ಲರು ಬಿರಿಯಾನಿ ಮತ್ತು ಕಬಾಬ್ ತಿನ್ನೋಣ, ಅನ್ನಕ್ಕೆ ಇಡಬೇಡ” ಎಂದು ಜೋರಾಗಿ ಕೂಗಿ ಗಾಡಿಯನ್ನು ಶುರು ಮಾಡಲು ಅಣಿಯಾದೆ.

“ಬೇಗ ಬಂದು ಬಿಡಿ ಶಶಿ, ಇಲ್ಲಾಂದ್ರೆ ಮಕ್ಳು ಮಲ್ಕೊಂಡು ಬಿಡ್ತಾರೆ” ಕುಕ್ಕರ್‌ಗೆ ಹಾಕಿದ ಅಕ್ಕಿಯನ್ನು ವಾಪಾಸ್ ಅಕ್ಕಿ ಚೀಲಕ್ಕೆ ಹಾಕುತ್ತ ಹೇಳಿದಳು.

“ಒಂದು ದಿನ ಚೂರು ನಿದ್ದೆಗೆಟ್ಟರೆ ಏನು ಆಗುವುದಿಲ್ಲ ಡಿಯರ್” ಹೇಳಿ ಗೇಟ್ ತೆಗೆದು ಹೊರಟುಹೋದೆ.

ಮಗನ ಸ್ಕೂಲಿನಿಂದ ಸ್ವಲ್ಪ ದೂರದಲ್ಲಿದ್ದ ಗೌಡರ ಮನೆ ಹೋಟೆಲ್‌ಗೆ ಹೋದೆ, ಅಲ್ಲಿ ಬಿರಿಯಾನಿ ಮತ್ತು ಕಬಾಬ್ ಪಾರ್ಸೆಲ್ ಮಾಡಲು ಹೇಳಿದೆ. ಅಯ್ಯೋ ಸಾರ್… ! ಬಿರಿಯಾನಿ ಇದೆ ಆದರೆ ಕಬಾಬ್ ಖಾಲಿಯಾಗಿದೆ, ಹೋಟೆಲ್ ಮಾಲೀಕ ಹಲ್ಲು ಕಿರಿದ. ನಿಶಾಗೆ ಫೋನಾಯಿಸಿ “ಇಲ್ಲಿ ಕಬಾಬ್ ಖಾಲಿಯಾಗಿದೆ ಕಣೆ” ಸಣ್ಣ ದನಿಯಲ್ಲಿ ಹೇಳಿದೆ. ಪರವಾಗಿಲ್ಲ ಶಶಿ ಏನು ಇದೆಯೋ ಅದನ್ನೇ ತೆಗೊಂಡು ಬಾ ಎಂದಳು. No way ನಿಶಾ.. ! ಇವತ್ತು ಕಬಾಬ್ ಮಾತ್ರ ತಿನ್ನಲೇಬೇಕು. ನವ್ಯ ಮಿಲಿಟರಿ ಹೋಟೆಲ್‌ವೆ ಹೋಗಿ ತರುತ್ತೇನೆಂದೆ. ಅಯ್ಯೋ ರೀ.. ಅದು ಸ್ವಲ್ಪ ದೂರ ಇದೆ, ಸುಮ್ನೆ ಟೈಮ್ ಆಗುತ್ತೆ ಮನೆಗೆ ಬಂದುಬಿಡಿ.. ಬೇಸರ ವ್ಯಕ್ತಪಡಿಸಿ, ಧ್ವನಿ ಕ್ಷೀಣಿಸಿದಳು. ಇಲ್ಲ ಮಾರಾಯ್ತಿ ಹೋಗುತ್ತೇನೆಂದು ಹಠಮಾಡಿದಾಗ, ಸರಿ take care dear ಎಂದು ಫೋನ್ ಕಟ್ ಮಾಡಿದಳು.

ಬೈಕಿನ ಡಿಕ್ಕಿಯಿಂದ ಹೆಲ್ಮೆಟ್ ಹೊರ ತೆಗೆದು ತೆಲೆಗೆ ಹಾಕಿಕೊಂಡು, ಗೂಗಲ್ ಮ್ಯಾಪ್ ಅಲ್ಲಿ ನವ್ಯ ಮಿಲಿಟರಿ ಹೋಟೆಲ್ ಎಂದು ಲೊಕೇಶನ್ ಸೆಟ್ ಮಾಡಿದಾಗ ೩.೪ ಕಿಲೋಮೀಟರ್ಸ್ ತೋರಿಸಿತು. ಮೊಬೈಲ್ ಸ್ಟ್ಯಾಂಡ್ಗೆ ಮೊಬೈಲನ್ನು ಹಾಕಿದೆ. ಕೈಯಲ್ಲಿ ಬೈಕಿರುವಾಗ, ಬೈಕಲ್ಲಿ ಪೆಟ್ರೋಲಿರುವಾಗ, ಹಕ್ಕಿಯಂತೆ ಹಾರು ಶಶಿ ಎಂದು ಮನಸು ಹುರಿದುಂಬಿಸಿತು. ತುಸು ದೂರ ಸಾಗಿದ ನಂತರ ಬಿ.ಕೆ ಸರ್ಕಲ್ ತಲುಪಿ ಅಲ್ಲಿಂದ ಗೊಟ್ಟಿಗೆರೆ ಮಾರ್ಗ ಅನುಸರಿಸಿ ನೇರವಾಗಿ ನನ್ನ ಗುರಿಯ ಕಡೆಗೆ ಸಾಗತೊಡಗಿದೆ. ಊರ ಹೊರವಲಯ, ಜನ ಸಂದಣಿಯಿಲ್ಲದ ಜಾಗ, ರಸ್ತೆ ಬದಿಯಲ್ಲಿ ಎತ್ತರದ ಗಿಡಗಳು, ಎಡಗಡೆ ಕೆರೆ ಹಾಗೂ ಆಕಾಶದಲ್ಲಿ ಅರ್ಧ ಚಂದ್ರ. ಇವೆಲ್ಲದರ ಮಧ್ಯೆ ನನ್ನ ಪಯಣ ಸಾಗುತಿತ್ತು. ‘ಹಗಲೋ ಇರುಳೋ ನನಗೊಂದು ತೋರದಿಂದು’ ಹಳೆಯ ಹಾಡೊಂದನ್ನು ಗುನುಗುತ್ತ, ತಂಗಾಳಿಯನ್ನು ಆಸ್ವಾದಿಸುತ್ತ ಸಾಗಿದ್ದೆ.

ಕೊನೆಗೂ ನನ್ನ ಗುರಿಯನ್ನು ತಲುಪಿದೆ. ಅವಸರದಿಂದ ಹೋಟೆಲ್ ಎದುರು ಗಾಡಿಯನ್ನು ನಿಲ್ಲಿಸಿ, ತಲೆಯಿಂದ ಹೆಲ್ಮೆಟ್ ತೆಗೆದು ಗಾಡಿಗೆ ಜೋತು ಹಾಕಿದೆ. ಮೊಬೈಲ್ ಸ್ಟ್ಯಾಂಡಿನ ನಟ್ಟನ್ನು ಸಡಿಲಗೊಳಿಸಿ, ಮೊಬೈಲ್ ತೆಗೆದು ಜೇಬಲ್ಲಿ ಇರಿಸಿಕೊಂಡು ಹೋಟೆಲ್‌ಗೆ ದೌಡಾಯಿಸಿದೆ. ಕೌಂಟರ್ಗೆ ಹೋಗಿ ಎರಡು ಬಿರಿಯಾನಿ ಮತ್ತು ಒಂದು ಪ್ಲೇಟ್ ಕಬಾಬ್ ಪಾರ್ಸೆಲ್ ಮಾಡಲು ಹೇಳಿದೆ. ಆಗಲೇ ಹೋಟೆಲ್ನಲ್ಲಿ ಕುಳಿಕೊಂಡ ಜನರು ಆರ್ಡರ್ ಮಾಡಿದ್ದರಿಂದ ಮತ್ತು ಕೌಂಟರ್ನಲ್ಲಿ ತಮ್ಮ ಪಾರ್ಸೆಲ್‌ಗಾಗಿ ಕೆಲುವು ಜನರು ನನಗಿಂತ ಮುಂಚೆ ಬಂದು ಕಾಯುತ್ತಿದ್ದರಿಂದ ನನ್ನ ಪಾರ್ಸೆಲ್ ಕೊಂಚ ಸಮಯ ತೆಗೆದುಕೊಳ್ಳತೊಡಗಿತು. ನಾನು ಸ್ವಲ್ಪ ದೂರದಿಂದ ಬಂದಿದ್ದೇನೆ ದಯವಿಟ್ಟು ನನ್ನ ಪಾರ್ಸೆಲ್ ಬೇಗ ಕೊಡಬೇಕೆಂದು ಮಾಣಿಗೆ ಅಂಗಲಾಚಿದೆ. ಆಯ್ತು ಸರ್ ಹತ್ತು ನಿಮಿಷ ಕೊಟ್ಟುಬಿಡ್ತೀನಿ ಕೂತ್ಕೋಳಿ ಎಂದು ಚೇರಿನ ಕಡೆಗೆ ಕೈ ಮಾಡಿದ. ಚೇರಿನಲ್ಲಿ ಕುಳಿತು ಹತ್ತು ನಿಮಿಷದವರೆಗೆ ಕಾದೆ, ನಂತರ ಮಾಣಿ ನನ್ನ ಕರೆದು, ಸರ್ ೩೧೦ ರೂಪಾಯಿ ಆಗಿದೆ ಎಂದ, ನಾನು ಗೂಗಲ್ ಪೆ ಮಾಡಿದೆ. ಸರ್, ಅಂದಹಾಗೆ ನೀವು ಎಲ್ಲಿಂದ ಬಂದಿರೋದು? ಕೇಳಿದ ಮಾಣಿ ಹೊರಡುವ ಮುನ್ನ. ನಾನು ಗೊಟ್ಟಿಗೆರೆ ಮಾರ್ಗದಿಂದ ಬಂದಿದ್ದೇನೆಂದೆ. ಅವನು ಸ್ವಲ್ಪ ಕಸಿವಿಸಿಯಿಂದ, ಸರ್ ಹಾಗಾದರೆ ನೀವು ಇಷ್ಟೋತ್ತಿನಲ್ಲಿ ಕಬಾಬ್ ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ? ಬಿರಿಯಾನಿ ಸಾಕಲ್ಲವೇ ಎಂದು ನನ್ನೆಡೆಗೆ ಆಶ್ಚರ್ಯದಿಂದ ನೋಡಿದ. ಇದೊಳ್ಳೆ ಕಥೆಯಾಯಿತಲ್ಲ, ಯಾಕೆ ಗುರು ಹೀಗೆ ಕೇಳ್ತಿದಿಯ ನನ್ನಿಷ್ಟ ಎಂದೆ. ಅಯ್ಯೋ ಹಾಗಲ್ಲ ಸರ್ ಅದು ಎಂದು ಹೇಳುವ ಮೊದಲೇ ಮಾಲೀಕ ಅವನಿಗೆ ಟೇಬಲ್ ನಂಬರ್ ೫ ಗೆ ಕುಷ್ಕ ಕೊಡಲು ಕಳುಹಿಸಿದ. ಮೊದಲೇ ಮನೆಗೆ ತಡವಾದ್ದರಿಂದ ಇದೇನನ್ನು ತಲೆಗೆ ಅಂಟಿಸಿಕೊಳ್ಳದೆ ಹೆಲ್ಮೆಟ್ ಹಾಕಿಕೊಂಡು ಬಂದ ದಾರಿಗೆ ಹೊರಟೆ.

ಹೋಟೆಲ್ನಿಂದ ಸ್ವಲ್ಪ ಮುಂದೆ ಸಾಗಿ ಗೊಟ್ಟಿಗೆರೆ ರಸ್ತೆಯನ್ನು ತಲುಪಿದೆ. ಅಲ್ಲಿಂದ ಒಂದೇ ನೇರ ರಸ್ತೆ. ನನ್ನ ಗಾಡಿ ಕತ್ತಲೆಯ ನೀರವ ಮೌನವನ್ನು ತನ್ನ ಶಬ್ದದಿಂದ ಸೀಳುತ್ತಾ ಸಾಗುತಿತ್ತು. ಅಲ್ಲಲ್ಲಿ ಗೂಬೆಗಳು ಕೂಗುವ ಶಬ್ದ ರಸ್ತೆಯ ಅಕ್ಕ ಪಕ್ಕದಿಂದ ಕೇಳಿಬರುತ್ತಿತ್ತು ಮತ್ತು ಬಾವಲಿಯ ಮರಿಗಳು ಹಾರಾಡುತ್ತಿದ್ದವು. ಯಾರೋ ಸ್ವಲ್ಪ ದೂರದಿಂದ ನನಗೆ ಕೈ ಮಾಡಿದ ಹಾಗೆ ಅನಿಸಿತು. ನನ್ನ ಗಾಡಿಯ ಬೆಳಕಿನಿಂದ ಆ ವ್ಯಕ್ತಿಯನ್ನು ಸಮೀಪಿಸುತ್ತಿದ್ದಂತೆಯೆ ಗೊತ್ತಾಯಿತು ಆತನೊಬ್ಬ ವೃದ್ಧನೆಂದು. ಬಿಳಿಯ ಪಂಚೆ, ಅಂಗಿ ತೊಟ್ಟಿದ್ದ. ತಲೆಯ, ಗಡ್ಡದ ಕೂದಲೆಲ್ಲಾ ಬೆಳ್ಳಗಾಗಿದ್ದವು. ಕಣ್ಣಿನಲ್ಲಿಯೇ ಜೀವ ತುಂಬಿಕೊಂಡಂತೆ ಎದ್ದು ಕಾಣುವ ಕಣ್ಣುಗಳು ಹಾಗು ಸಣಕಲು ದೇಹವ ಹೊಂದಿದ್ದ. ಏನು ಯಜಮಾನರೇ..? ಇಷ್ಟೊತ್ತಲ್ಲಿ.. ? ಈ ಕತ್ತಲಲ್ಲಿ.. ? ಒಬ್ರೇ ಎಲ್ಲಿ ಹೋಗ್ತಿದ್ದೀರಿ? ಎಂದು ಕೇಳಿದೆ. ಅದಕ್ಕೆ ಏನು ಉತ್ತರ ಕೊಡದೆ ನನ್ನ ಮುಖ ನೋಡಿ ಒಮ್ಮೆ ನಕ್ಕ. ಇಲ್ಲೇ ಸ್ವಲ್ಪ ಮುಂದೆ ಬಿಟ್ಟು ಬಿಡಯ್ಯಾ, ಎಂದು ಗಾಡಿಯ ಮೇಲೆ ಕುಳಿತೇಬಿಟ್ಟ. ಸರಿ ಯಜಮಾನರೇ, ಎಂದು ಮತ್ತೆ ನನ್ನ ಪ್ರಯಾಣ ಶುರು ಮಾಡಿದೆ. “ಏನಯ್ಯಾ..? ನವ್ಯ ಮಿಲಿಟರಿ ಹೋಟೆಲ್ನಿಂದ ಬರ್ತಿದೀಯಾ?” ಎಂದು ನಡುಗುವ ದನಿಯಲ್ಲಿ ನನ್ನ ಕೇಳಿದ. ಒಂದು ಕ್ಷಣ ಕಕ್ಕಾಬಿಕ್ಕಿಯಾದೆ. ಹೌದು ಯಜಮಾನರೇ. ನಿಮಗೆ ಹೆಂಗೆ ಗೊತ್ತು ಎಂದು ಮರು ಪ್ರಶ್ನಿಸಿದೆ. ಸಾಮಾನ್ಯವಾಗಿ ಈ ದಾರಿಲಿ ಓಡಾಡೋರೆಲ್ಲಾ ಅಲ್ಲಿಗೆ ಹೋಗ್ತಾರಲ್ಲ, ಅದಿಕ್ಕೆ ಕೇಳಿದೆ. ನಗುತ್ತ ಉತ್ತರಿಸಿದ ವೃದ್ಧ. ನೀವು ಹಳೆ ಜನ ತುಂಬಾ ಬುದ್ಧಿವಂತ್ರು ಬಿಡಿ ತಾತ ಎಂದು ನಾನು ನಕ್ಕೆ. ಏನಪ್ಪಾ ಸ್ಪೆಷಲ್.. ? ವೃದ್ಧ ಮತ್ತೆ ಪ್ರಶ್ನಿಸಿದ. ಅಯ್ಯೋ ಮಾಮೂಲು ನಡೀತಿದೆ ತಾತ ಜೀವನ, ಮುಗುಳುನಗೆ ಬೀರಿದೆ. ಅದಲ್ಲ ಕಣ್ ಮಗಾ ಹೋಟೆಲ್ನಿಂದ ಏನ್ ತಗೊಂಡು ಹೋಗ್ತಿದೀಯಾ? ಉತ್ಸಾಹದಿಂದ ಕೇಳಿದ ತಾತ. ಬಿರ್ಯಾನಿ ಮತ್ತೆ ಕಬಾಬ್ ತಗೊಂಡು ಹೋಗ್ತಿದೀನಿ ಎಂದೆ. ‘ಬೆಳ್ಳುಳ್ಳಿ ಕಬಾಬ’ ಮಗ್ನೆ? ಬಾಯಗಲಿಸಿ ಕೇಳಿದ. ಇಲ್ಲಾ.. ಬರೀ ಕಬಾಬ್. ಹಾಗಾದರೆ ನೀನು ‘ರಾಹುಲಾ’ ಅಲ್ಲ ಬಿಡು, ವ್ಯಂಗ್ಯ ಮಾಡಿದ. ಅಲ್ಲ ತಾತ ನಾನು ‘ಡ್ರಾಕುಲಾ’ ಎಂದು ಜೋರಾಗಿ ನಕ್ಕೆ. ವೃದ್ಧನಿಗೆ ಸ್ವಲ್ಪ ನಡುಕ ಉಂಟಾದಂತಾಗಿ, ಗದ್ಗದಿತ ಸ್ವರದಲ್ಲಿ, ಅಯ್ಯೋ ನಂಗೆ ಕಬಾಬು ಅಂದ್ರೆ ಬೋss ಇಷ್ಟ ಕಣಪ್ಪ, ನನ್ನ ಹೆಂಡ್ತಿ ಹತ್ರ ದಿನ ಮಾಡಿಸ್ಕೊಂಡು ತಿಂತೀನಿ ಕಣಯ್ಯಾ ಎಂದ. ಹೌದ ತಾತ, ಸೂಪರ್ ಎಂದೆ. ಆದ್ರೆ ಏನ್ ಮಾಡೋದು ಮಗಾ, ಇವತ್ತು ಅವಳಿಗೆ ಕೆಲ್ಸ ಜಾಸ್ತಿ ಅಂತ ಮಾಡಕ್ಕೆ ಆಗಿಲ್ಲ, ತುಂಬಾ ಬೇಜಾರಾಗ್ತಿದೆ, ದುಃಖದಿಂದ ಹೇಳಿದ. ಇರ್ಲಿ ಬಿಡಿ ತಾತ ಸಮಾಧಾನ ಮಾಡ್ಕೊಳಿ, ಒಂದು ದಿನ ಬಿಟ್ರೆ ಏನು ಆಗಲ್ಲ ಎಂದೆ. ಅಯ್ಯೋ ಮೂದೇವಿ! ಏನಲಾ ಹಿಂಗಂತಿ? ಅಭ್ಯಾಸ ಆಗೋಗ್ಬಿಟ್ಟೆತೆ… ! ಕೋಪದಿಂದ ಹೇಳಿದ.

ಏನಪ್ಪಾ ಇದು..? ಏನೋ ಪಾಪ.. ಮುದುಕ ಅಂತ ಲಿಫ್ಟ್ ಕೊಟ್ಟ್ರೆ ಹಿಂಗೆಲ್ಲ ಮಾತಾಡ್ತಾನೆ ತಾತ ಎಂದು ಮನಸ್ಸಿನ್ನಲ್ಲಿಯೇ ಅಂದುಕೊಂಡೆ. ಯಜಮಾನರೇ ನೀವು ಎಲ್ಲಿ ಇಳ್ಕೋತೀರಾ ಅಂತಾನೆ ಹೇಳಲಿಲ್ಲಾ? ಮತ್ತೆ ಕೇಳಿದೆ. ನಾನು ಇಳ್ಕೊಳ್ಳೋ ಜಾಗ ಬಂದಾಗ ಹೇಳ್ತಿನಿ ಬಿಡು ಯಾಕೆ ಚಿಂತೆ ಮಾಡ್ತಿಯ ಎಂದ. ನೀವು ವಯಸ್ಸಾದೋರು, ರಾತ್ರಿ ಇಸ್ಟೊತ್ತೆಲ್ಲ ಓಡಾಡೋದು ಸರಿಯಲ್ಲವೆಂದು ವಿನಮ್ರತೆಯಿಂದ ಹೇಳಿದೆ. ಲೋ.. ಬಡ್ಡೇತವ ನಾನೇನು ನಿನ್ನ ಕಬಾಬು ಕೇಳಲ್ಲ ಬಿಡು, ಯಾಕೆ ಸುಮ್ಕೆ ಮಾತು ಬದಲಾಯಿಸ್ತೀಯ ಎಂದ ಕೋಪದಿಂದ. ಸಾಕು ಇನ್ನು ಏನು ಮಾತಾಡೋದು ಬೇಡವೆಂದು, ಗಾಡಿಯ ವೇಗವನ್ನು ಹೆಚ್ಚು ಮಾಡಿ ಸಾಗಿದೆ. ನಾನು ಬಿ.ಕೆ ಸರ್ಕಲ್ ಸಮೀಪಿಸುತ್ತಿದ್ದಂತೆ “ಯಜಮಾನರೇ ಇವಾಗಾದ್ರು ಹೇಳಿ ಎಲ್ಲಿ ಇಳ್ಕೋತೀರೆಂದು ಕೇಳಿದೆ, ಯಾವುದೇ ಉತ್ತರ ಬರ್ಲಿಲ್ಲ ಬರೀ ಮೌನ. ನನ್ನ ಗಾಡಿಯ ವೇಗವನ್ನು ಕಡಿಮೆ ಮಾಡಿ ಏನಪ್ಪಾ ತಾತ ಮಾತನಾಡುತ್ತಿಲ್ಲವೆಂದು ಗಾಡಿಯ ಕನ್ನಡಿಯನ್ನು ಸ್ವಲ್ಪ ನನ್ನ ಕಡೆ ತಿರುಗಿಸಿ ನೋಡಿದೆ. ಹಿಂದಿನ ಸೀಟಿನಲ್ಲಿ ಯಾರು ಇರಲಿಲ್ಲ. ಸರ್ಕಲ್ನಲ್ಲಿ ಗಾಡಿ ನಿಲ್ಲಿಸಿ ಎರಡು ಮೂರು ಬಾರಿ ಗಾಡಿಯ ಸುತ್ತ ತಿರುಗಿದೆ, ಊಹು ನಾನೊಬ್ಬನೇ!

ತಲೆಗೆ ಮಂಕು ಬಡಿದಂತಾಯಿತು, ಆದರೂ ಚೇತರಿಸಿಕೊಂಡು ಮನೆ ತಲುಪಿದೆ. ಶಶಿ, ಮಕ್ಳು ಕಾಯ್ತಾ ಇದಾರೆ, ಆಗ್ಲೇ ತುಂಬಾ ಹೊತ್ತಾಯ್ತು, ಟೈಮ್ ನೋಡಿ ೧೦:೩೦, ನಂಗು ಜೋರಾಗಿ ನಿದ್ದೆ ಬರ್ತಾ ಇದೆ. ಬೇಗ ಬನ್ನಿ ಊಟ ಮಾಡೋಣವೆಂದಳು ನಿಶಾ. ನಾನು ಏನು ಮಾತಾಡದೆ ಕೈಯಲ್ಲಿದ್ದ ಪೇಪರ್ ಬ್ಯಾಗ್ ಅನ್ನು ಅವಳ ಕೈಗೆ ನೀಡಿದೆ. ಬಿರಿಯಾನಿ ತಿನ್ನಲು ಶುರು ಮಾಡಿದೆವು. ಯಾಕೆ ಶಶಿ ಏನು ಮಾತಾಡುತ್ತಿಲ್ಲ? ಸ್ವಲ್ಪ ಸುಸ್ತಾಗಿದೀರಾ ಅನ್ಸುತ್ತೆ. ಇಲ್ಲಾ.. ವಿಷಯ ಅದು ಅಲ್ಲ, ಎಂದು ನಡೆದ ಘಟನೆಯನ್ನು ಅವಳಿಗೆ ಹೇಳಿದೆ. come on ಒಬ್ರೇ ಅಷ್ಟು ದೂರ ಹೋಗಿದ್ರಲ್ಲ ಭಯದಲ್ಲಿ ಏನೇನೋ ಊಹೆ ಮಾಡ್ಕೊಂಡಿರ್ತೀರ ಅಷ್ಟೇ ಎಂದು ನಗುತ್ತ ಸಮಾಧಾನ ಮಾಡಿದಳು. ಅಯ್ಯೋ ಅರ್ಧ ಬಿರ್ಯಾನಿನೆ ಮುಗಿಲಿಕ್ಕೆ ಬಂತು ನೀನಿನ್ನು ಕಬಾಬ್ ಪ್ಯಾಕೆಟ್ ಒಪನ್ನೇ ಮಾಡಿಲ್ಲವೆಂದು, ಸಿಟ್ಟಿನಿಂದ ಅವಳ ಮುಖ ನೋಡಿದೆ. oh! i forgot, sorry dear ಎಂದು ಓಪನ್ ಮಾಡಲು ಶುರು ಮಾಡಿದಳು.

ಎರಡು ನಿಮಿಷದ ನಂತರ, ಗಾಭರಿ ಮತ್ತು ಕಿರಿ ಕಿರಿ ತುಂಬಿದ ಮುಖದಿಂದ ಪ್ಯಾಕೆಟನ್ನು ತೋರಿಸಿದಳು. ಏನಾಯ್ತು ನಿಶಾ? ಎಂದು ಅರ್ಧ ಇಟ್ಟುಕೊಂಡಿದ್ದ ಬಿರಿಯಾನಿಯ ಕೈ ತುತ್ತನ್ನು ಪೂರ್ತಿ ಬಾಯಿಯಲ್ಲಿಟ್ಟುಕೊಂಡು ಕೆಳಗೆ ನೋಡಿದೆ, ಪ್ಯಾಕೆಟ್ನಲ್ಲಿ ತಿಂದು, ಕಚ್ಚಿ ಬಿಟ್ಟ ಕಬಾಬಿನ ಮೂಳೆಗಳು ಮಾತ್ರ ಉಳಿದಿದ್ದವು. ಗಂಟಲಿನಲ್ಲಿ ತುತ್ತು ಸಿಕ್ಕಿಕೊಂಡಿತು. ನೀರಿಗಾಗಿ ನೋಡಿದೆ, ಸಿಗಲಿಲ್ಲ. ಅವಳು, ಅಯ್ಯೋ..! ನೀರು ಇಡುವುದನ್ನು ಮರೆತಳೆಂದು ಗೊಣಗುತ್ತ, ಅವಸರದಲ್ಲಿ ಅಡುಗೆಮನೆಗೆ ಓಡಿದಳು..