ಕಿಚ್ಚಿನಲ್ಲಿ ಕೋಲ ಬೈಚಿಟ್ಟಾಗ ಎರಡೂ ಕೋಲುಗಳು ಕಿಚ್ಚಿನಿಂದಾಗಿ ನಿಗಿನಿಗಿ ಕೆಂಡಗಳಾಗುತ್ತವೆ. ಅವು ನಿಗಿನಿಗಿ ಕೆಂಡವಾದ ನಂತರ ಒಂದೇ ತೆರನಾದಂತೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಂಡಾಗ ಆ ಎರಡೂ ದೀಪಗಳು ಒಂದೇ ರೀತಿಯ ಬೆಳಕು ಕೊಡುತ್ತವೆ. ಹೀಗೆ ಬಸವಣ್ಣನವರು ಗುರು-ಶಿಷ್ಯ ಸಂಬಂಧದ ಕುರಿತು ಹೇಳಿದ್ದಾರೆ. ಕೆಂಡಗಳ ಶಾಖ, ದೀಪಗಳ ಬೆಳಕು ಒಂದೇ ರೀತಿಯವು ಆಗುತ್ತವೆ. ಈ ಸಂಬಂಧದ ಪ್ರಜ್ಞೆಯೆ ಅರಿವು. ಅದುವೇ ಸರ್ವರಿಗೂ ಗುರು. ಇಂಥ ಅರಿವಿನ ಗುರುಗಳ ಕೈಯಲ್ಲಿ ಕಲಿತದ್ದು ನನ್ನ ಸೌಭಾಗ್ಯ ಎಂದೇ ಭಾವಿಸಿರುವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 81ನೇ ಕಂತು ನಿಮ್ಮ ಓದಿಗೆ
ನೋಡು ನೋಡುವುದರೊಳಗಾಗಿ ೫೦ ವರ್ಷಗಳು ಕಳೆದುಹೋದವು. ಆದರೆ ೫೦ ವರ್ಷಗಳ ಹಿಂದೆ ವಿಜಾಪುರದ ಎಸ್.ಬಿ. ಆರ್ಟ್ಸ್ ಕಾಲೇಜು ವಿದ್ಯಾರ್ಥಿಯಾಗಿದ್ದಾಗಿನ ಆಪ್ಯಾಯಮಾನವಾದ ಕ್ಷಣಗಳು ಇಂದಿಗೂ ಮನಕ್ಕೆ ತಂಪನ್ನೀಯುತ್ತಿವೆ. ಪ್ರೊ. ಬಿ.ಬಿ. ನಾಡಗೌಡ, ಪ್ರೊ. ಎ.ಎಸ್. ಹಿಪ್ಪರಗಿ, ಪ್ರೊ. ಪಿ.ವಿ. ವಜ್ರಮಟ್ಟಿ, ಪ್ರೊ. ಬಿ.ಎಸ್. ಸಾರಂಗಮಠ ಮುಂತಾದ ವಿದ್ಯಾರ್ಥಿಪ್ರೇಮಿ ಪ್ರೊಫೆಸರುಗಳು ನನ್ನಂಥ ಅನೇಕ ವಿದ್ಯಾರ್ಥಿಗಳ ಬದುಕಿನಲ್ಲಿ ನೆಲೆಯನ್ನು ಕಂಡುಕೊಳ್ಳಲು ಸಹಾಯ ಮಾಡಿದವರಾಗಿದ್ದಾರೆ. ವಿದ್ಯಾರ್ಥಿಗಳನ್ನು ಮಿತ್ರರಂತೆ ಕಾಣುವುದು ಇವರೆಲ್ಲರ ಗುಣಧರ್ಮವಾಗಿತ್ತು.
ಪ್ರೊ. ಬಿ.ಬಿ. ನಾಡಗೌಡ ಅವರನ್ನು ‘ತಾಯಿʼ ಎಂದು ಮತ್ತು ಪ್ರೊ. ಎ.ಎಸ್. ಹಿಪ್ಪರಗಿ ಅವರನ್ನು ‘ತಂದೆʼ ಎಂದು ನಾನು ಮತ್ತು ಶ್ರೀನಿವಾಸ ಕುಲಕರ್ಣಿ ಭಾವಿಸಿದ್ದೆವು. ನಮಗೆ ನಮ್ಮ ಪ್ರಾಧ್ಯಾಪಕರೇ ತಾಯಿ-ತಂದೆಗಳಾಗಿದ್ದರು. ಅಂಥ ಘನವಾದ ಗುರು-ಶಿಷ್ಯ ಸಂಬಂಧ ನಮ್ಮಲ್ಲಿತ್ತು.
ಪ್ರೊ. ನಾಡಗೌಡರು ಶಿಸ್ತಿನ ಪ್ರತೀಕವಾಗಿದ್ದರು. ಅವರಿಗೆ ಎಲ್ಲದರಲ್ಲೂ ಶಿಸ್ತೇ ಮುಖ್ಯವಾಗಿತ್ತು. ಬಿಳಿ ಮತ್ತು ತಿಳಿನೀಲಿ ಬಣ್ಣ ಅವರಿಗೆ ಪ್ರಿಯವಾಗಿದ್ದವು. ಅವರ ‘ಪುಣ್ಯಕೋಟಿʼ ಮನೆ, ಸ್ಕೂಟರ್ ಮುಂತಾದವುಗಳ ಬಣ್ಣಗಳಲ್ಲಿ ನೀಲಿಗೇ ಪ್ರಾಧಾನ್ಯ. ಅವರ ಉಡುಪು, ಮಾತು ಅವರ ಸುಂದರ ಅಕ್ಷರಗಳು ಹೀಗೆ ಎಲ್ಲವೂ ಶಿಸ್ತಿನ ಪ್ರತೀಕವಾಗಿವೆ. ಸೂಟು, ಬೂಟು, ಮತ್ತು ಕನ್ನಡಕದಲ್ಲಿ ಘನವ್ಯಕ್ತಿತ್ವದ ಅವರು ವಿದೇಶಿ ಚಲನಚಿತ್ರ ನಾಯಕನ ನೆನಪು ತರುವಹಾಗೆ ಕಾಣುತ್ತಿದ್ದರು. ಅವರದು ಕುಟುಂಬಪ್ರೇಮಿ ಮತ್ತು ಶಿಷ್ಯಪ್ರೇಮಿ ವ್ಯಕ್ತಿತ್ವ. ಹಿತಮಿತ ಮೃದು ಮಾತುಗಳು, ಅಧ್ಯಯನಶೀಲ ಮನಸ್ಸು, ಹಾಗೂ ಕನ್ನಡ ಭಾಷೆ ಮತ್ತು ವ್ಯಾಕರಣದ ಬಗ್ಗೆ ಅವರಿಗಿರುವ ಕಾಳಜಿ, ನನ್ನಂಥ ಅನೇಕರಿಗೆ ಮಾರ್ಗದರ್ಶಿಯಾಗಿವೆ.
ಅವರ ಮನೆಮಂದಿಯೆಲ್ಲ ಸುಸಂಸ್ಕೃತರು. ಒಬ್ಬಳೇ ಮಗಳು ಅಕ್ಕಮಹಾದೇವಿಯನ್ನು ಎಲ್ಲರೂ ‘ಅವ್ವಿʼ ಎಂದು ಕರೆಯುತ್ತಿದ್ದರು. ಅವರ ಹಿರಿಯ ಮಗ ಶಿವಯೋಗಿ, ಇತರ ಮಕ್ಕಳಾದ ಸಿದ್ಧರಾಮ, ಚನ್ನಬಸವ, ಶರಣಬಸವ, ಸಂಗನಬಸವ ಮತ್ತು ನಾವೆಲ್ಲ ಕೂಡ ಹಾಗೇ ಕರೆಯುತ್ತಿದ್ದೆವು. ಅವರ ಶ್ರೀಮತಿ ಗುರುದೇವಿಯವರು ಸೌಜನ್ಯದ ಸಾಕಾರ ಮೂರ್ತಿಯಾಗಿದ್ದರು. ಅವರ ಇಡೀ ಮನೆತನ, ಜಾತಿ ಮತಗಳ ಎಲ್ಲೆಯನ್ನು ಮೀರಿ ಮಾನವೀಯ ಸ್ಪಂದನಗಳಿಂದ ಕೂಡಿದ್ದಾಗಿತ್ತು. ಅವರ ಮನೆ, ಅಲ್ಲಿನ ಪರಿಸರ, ಅವರ ಪರಿವಾರ ಹೀಗೆ ಎಲ್ಲವೂ ಸೇರಿ ಒಂದು ಸುಂದರ ಕಾವ್ಯವಾಗಿ ಮನದಲ್ಲಿ ಉಳಿದಿದೆ.
ನಾಡಗೌಡ ಸರ್ ಗೃಹಗ್ರಂಥಭಂಡಾರ ನನಗೆ ಅತ್ಯಾಕರ್ಷಕ ಕೇಂದ್ರವಾಗಿತ್ತು. ವಿವಿಧ ವಿದ್ವಾಂಸರು ಪ್ರತ್ಯೇಕವಾಗಿ ಸಂಪಾದಿಸಿ ವಿವರಿಸಿದ ಕೇಶಿರಾಜನ ಶಬ್ದಮಣಿದರ್ಪಣ ಗ್ರಂಥಗಳು, ವಿವಿಧ ವಿಶ್ವವಿದ್ಯಾಲಯಗಳ ನಿಯತಕಾಲಿಕೆಗಳು, ಮಹಾಕಾವ್ಯಗಳು, ಕನ್ನಡ ಸಾರಸ್ವತ ಲೋಕದ ಮಹತ್ವವನ್ನು ಹೆಚ್ಚಿಸಿದ ಸಾವಿರಾರು ಗ್ರಂಥಗಳು, ಟಿ.ಬರೋ ಮತ್ತು ಎಂ.ಬಿ. ಎಮಿನೊ ಅವರು ಸಂಪಾದಿಸಿದ ದ್ರಾವಿಡಿಯನ್ ಎಟಿಮಾಲೊಜಿಕಲ್ ಡಿಕ್ಷನರಿ, ಹೀಗೆ ಎಲ್ಲವೂ ನಮಗೆ ಅಲ್ಲಿ ಲಭ್ಯವಾಗುತ್ತಿದ್ದವು. ಸಾಹಿತ್ಯ ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ಪುಟ್ಟ ಮಾಸಪತ್ರಿಕೆಗಳನ್ನು ನಾಡಗೌಡ ಸರ್ ಅವರು ಗಂಭೀರವಾಗಿ ಓದುತ್ತ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ಗುರುತುಹಾಕುತ್ತಿದ್ದರು. ಅಲ್ಲದೆ ಅಂಥ ತಪ್ಪುಗಳ ಕುರಿತು ನಮಗೆ ಎಚ್ಚರಿಸುತ್ತಿದ್ದರು. ಅವರು ಅಧ್ಯಯನ ಮತ್ತು ಅಧ್ಯಾಪನವನ್ನು ಬೇರೆಬೇರೆಯಾಗಿ ನೋಡಲಿಲ್ಲ. ಪ್ರತಿ ಪಿರಿಯಡ್ ಅನ್ನು ಅವರು ಪರೀಕ್ಷೆಯಂತೆ ಭಾವಿಸುತ್ತಿದ್ದರು. ಕ್ಲಾಸಿಗೆ ಬರುವ ಮುನ್ನ ಗಂಭೀರ ಅಧ್ಯಯನದೊಂದಿಗೆ ಬರುತ್ತಿದ್ದರು.
ಅವರ ಮನೆಯಲ್ಲಿ ಯಾವುದೇ ಹಬ್ಬ ಬಂದರೂ ನನ್ನನ್ನು ಬಿಟ್ಟು ಊಟ ಮಾಡುತ್ತಿರಲಿಲ್ಲ. ಅವರು ಯಾವ ಸ್ವಾಮಿಗಳನ್ನೂ ಕರೆಸುತ್ತಿರಲಿಲ್ಲ. “ನೀನೇ ನಮ್ಮ ಸ್ವಾಮಿ” ಎಂದು ತಮಾಷೆ ಮಾಡಿದ್ದು ನನಗಿನ್ನೂ ನೆನಪಿದೆ. ಹೀಗಿತ್ತು ನಮ್ಮ ಗುರು-ಶಿಷ್ಯ ಸಂಬಂಧ.
ಪ್ರೊ. ನಾಡಗೌಡ ಅವರು ಸೂಕ್ಷ್ಮಮತಿಗಳು ಮತ್ತು ಅಹಿಂಸಾವಾದಿಗಳು. ಒಂದು ಸಲ ಪತ್ರಿಕೆಯಲ್ಲಿ ಇಬ್ಬರು ಬಾಕ್ಸರ್ಗಳ ಚಿತ್ರ ಪ್ರಕಟವಾಗಿತ್ತು. ಒಬ್ಬ ಬಾಕ್ಸರ್ನ ಹೊಡೆತಕ್ಕೆ ಇನ್ನೊಬ್ಬ ಕೆಳಗೆ ಬಿದ್ದಿದ್ದ. ಅವನ ಮುಖದಲ್ಲಿ ನೋವು ತುಂಬಿತ್ತು. ಈ ಚಿತ್ರವನ್ನು ನೋಡಿದ ಕೂಡಲೆ ಸರ್ ನೊಂದುಕೊಂಡರು. ಯಾವುದೇ ಕ್ರೀಡೆಯಲ್ಲಿ ಹಿಂಸೆ ಇರಬಾರದು. ಇಂಥ ಹಿಂಸಾತ್ಮಕ ಕ್ರೀಡೆಗಳನ್ನು ನಿಷೇಧಿಸಬೇಕು ಎಂದು ಅವರು ಹೇಳಿದರು. ನಾವು ಇಂಥ ಗುರುಗಳಿಂದ ಬರಿ ಜ್ಞಾನ ಸಂಪಾದಿಸಲಿಲ್ಲ; ಬದುಕಲು ಕಲಿತೆವು.
“ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ;
ಹಿಂದ ಬಿಟ್ಟು ಮುಂದ ಹಿಡಿಯಲೇಬೇಕು.
ಕೂಡಲಸಂಗಮದೇವ ಕೇಳಯ್ಯಾ,
ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.”
ಕಿಚ್ಚಿನಲ್ಲಿ ಕೋಲ ಬೈಚಿಟ್ಟಾಗ ಎರಡೂ ಕೋಲುಗಳು ಕಿಚ್ಚಿನಿಂದಾಗಿ ನಿಗಿನಿಗಿ ಕೆಂಡಗಳಾಗುತ್ತವೆ. ಅವು ನಿಗಿನಿಗಿ ಕೆಂಡವಾದ ನಂತರ ಒಂದೇ ತೆರನಾದಂತೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಂಡಾಗ ಆ ಎರಡೂ ದೀಪಗಳು ಒಂದೇ ರೀತಿಯ ಬೆಳಕು ಕೊಡುತ್ತವೆ. ಹೀಗೆ ಬಸವಣ್ಣನವರು ಗುರು-ಶಿಷ್ಯ ಸಂಬಂಧದ ಕುರಿತು ಹೇಳಿದ್ದಾರೆ. ಕೆಂಡಗಳ ಶಾಖ, ದೀಪಗಳ ಬೆಳಕು ಒಂದೇ ರೀತಿಯವು ಆಗುತ್ತವೆ. ಈ ಸಂಬಂಧದ ಪ್ರಜ್ಞೆಯೆ ಅರಿವು. ಅದುವೇ ಸರ್ವರಿಗೂ ಗುರು. ಇಂಥ ಅರಿವಿನ ಗುರುಗಳ ಕೈಯಲ್ಲಿ ಕಲಿತದ್ದು ನನ್ನ ಸೌಭಾಗ್ಯ ಎಂದೇ ಭಾವಿಸಿರುವೆ.
ನಾವು ನಮ್ಮ ಮನೆಯಲ್ಲಿ ಇರುವುದಕ್ಕಿಂತ ಹೆಚ್ಚಿಗೆ ನಮ್ಮ ವಿವಿಧ ವಿಷಯಗಳ ಗುರುಗಳ ಮನೆಯಲ್ಲಿ ಇರುತ್ತಿದ್ದೆವು. ಅವರ ಮನೆಗಳಿಗೆ ಹೋಗಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು. ಹಾಗಲ್ಲ ಹೀಗೆ ಎಂದು ವಾಗ್ವಾದ ಮಾಡುತ್ತಿದ್ದೆವು.
ಒಂದು ಸಲ ಕ್ಲಾಸಿನಲ್ಲಿ ಶಬ್ದಮಣಿದರ್ಪಣದ ಒಂದು ಸೂತ್ರದ ಮೇಲೆ ನಾಡಗೌಡ ಸರ್ ಕೂಡ ಬಹಳ ಚರ್ಚೆ ಮಾಡಿದೆ. ಅವರು ನನ್ನ ವಿಶ್ಲೇಷಣೆಯನ್ನು ಮನ್ನಿಸಿದರು. ಕ್ಲಾಸುಗಳು ಮುಗಿದ ನಂತರ ಮನೆಗೆ ಬಂದ ಮೇಲೆ ಮರುಯೋಚಿಸಿದೆ. ಅವರ ವಿಶ್ಲೇಷಣೆಯೆ ಸರಿ ಎನಿಸಿತು. ಮರುದಿನ ಅವರು ಕ್ಲಾಸಿಗೆ ಬಂದ ಕೂಡಲೆ ನನ್ನ ವಿಶ್ಲೇಷಣೆ ತಪ್ಪಾಗಿದೆ ಎಂದೂ ತಮ್ಮ ವಿಶ್ಲೇಷಣೆ ಸರಿಯಾಗಿದೆ ಎಂದೂ ತಿಳಿಸಿದೆ. ಅವರು ಅದು ಹೇಗೆ ಎಂದು ಕೇಳಿದರು. ನಾನು ಎಲ್ಲಿ ತಪ್ಪು ಮಾಡಿದೆ ಎಂದು ವಿವರಿಸಬೇಕಾಯಿತು. ಹೀಗಿತ್ತು ಅಂದಿನ ಗುರು-ಶಿಷ್ಯ ಸಂಬಂಧ!
ಇಂದಿನ ಆನ್ಲೈನ್ ಪಾಠಗಳ ಬಗ್ಗೆ ಕೂಡ ನನಗೆ ಬೇಸರವಿಲ್ಲ. ಅಲ್ಲಮಪ್ರಭುಗಳು ಹೇಳುವ ಹಾಗೆ ಕಾಲದ ಕಟ್ಟಳೆಯ ಕಲಿತನಕ್ಕೆ ಬೆರಗಾಗಲೇಬೇಕು. ಬೇಸರದ ವಿಷಯವೆಂದರೆ ವಿದ್ಯಾಲಯದ ಕೋಣೆಯಲ್ಲಿ ನಡೆಯುವ ಕ್ಲಾಸುಗಳು ಗೌಣವಾಗಿ ಕೋಚಿಂಗ್ ಕ್ಲಾಸುಗಳು ಕುರಿದೊಡ್ಡಿಗಳ ಹಾಗೆ ಬೆಳೆಯುತ್ತಿರುವುದು. ಆ ಮೂಲಕ ಕಾಲೇಜುಗಳು ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿರುವುದು. ಇದರಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ. ಸಾಹಿತ್ಯ, ಕಲೆ, ತತ್ತ್ವಜ್ಞಾನ ಮತ್ತು ಮೂಲಭೂತ ವಿಜ್ಞಾನವನ್ನು ಶಿಕ್ಷಣದ ವಾಣಿಜ್ಯೀಕರಣ ಮೂಲೆಗುಂಪಾಗಿಸುತ್ತಿದೆ. ಭಾಷೆಗಳು ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಿವೆ. ಮಾನವ ತನ್ನೊಳಗೆ ಹೋಗುವುದನ್ನು ಕಲಿಸುವಂಥ ಶಿಕ್ಷಣ ವ್ಯವಸ್ಥೆ ವಿನಾಶದ ಹಾದಿ ಹಿಡಿದಿದೆ. ಹೀಗಾಗಿ ಜ್ಞಾನದ ಧ್ಯಾನಸ್ಥ ಸ್ಥಿತಿಯನ್ನು ತಲುಪಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಚಿಂತನ-ಮಂಥನಕ್ಕೆ ಬೆಲೆಯೆ ಇಲ್ಲದಂತಾಗಿದೆ. ಇಡೀ ವ್ಯವಸ್ಥೆಯೆ ರೇಸ್ಕೋರ್ಸ್ ಹಾಗೆ ಆಗುತ್ತಿದೆ. ಎಲ್ಲರೂ ಓಡುತ್ತಲೇ ಇದ್ದಾರೆ ಎಂಬ ಭಾವ ಮೂಡಿದೆ.
ಆಲ್ಡಸ್ ಹಕ್ಸ್ಲೆಯ “ದ ಸೆಲ್ಫ್ ಅಂಡ್ ದ ಅದರ್” ಲೇಖನ ನೆನಪಾಗುತ್ತಿದೆ. ಅದೊಂದು ಮಾರ್ಮಿಕ ಲೇಖನ. ಮನುಷ್ಯನಿಗೆ ಸಮೀಪದಲ್ಲಿರುವ ಮಂಗನಿಗೆ ಕೂಡ ಧ್ಯಾನಸ್ಥ ಸ್ಥಿತಿಗೆ ಹೋಗಲು ಸಾಧ್ಯವಿಲ್ಲ. ಮಾನವನಿಗೆ ಮಾತ್ರ ಧ್ಯಾನಸ್ಥ ಸ್ಥಿತಿಗೆ ಹೋಗಲು ಸಾಧ್ಯ ಎಂಬುದು ಆ ಲೇಖನದ ಸಾರ. ಮಂಗನಿಗೆ ತಿನ್ನಲು ಏನಾದರೂ ಸಿಕ್ಕರೆ ಅದು ಗಿಡದ ಕೊಂಬೆಯ ಮೇಲೆ ಹೋಗಿ ಅತ್ತಿತ್ತ ನೋಡುತ್ತ ತಿನ್ನುತ್ತದೆ. ಬೇರೆ ಮಂಗ ಮುಂತಾದವು ಬಂದು ಕಸಿದುಕೊಳ್ಳುತ್ತವೆಯೆ ಎಂಬ ಎಚ್ಚರಿಕೆ ಅದಕ್ಕೆ ರೂಢಿಯಾದ ಕಾರಣ ಎಂದೂ ಧ್ಯಾನಸ್ಥ ಸ್ಥಿತಿಗೆ ಹೋಗಲು ಸಾಧ್ಯವಿಲ್ಲ.
ಇಂದು ಸ್ಪರ್ಧಾ ಜಗತ್ತಿನ ಮಾನವರಾದ ನಾವು ಅದೇ ಮಂಗನ ಸ್ಥಿತಿಗೆ ತಲುಪಿದ್ದೇವೆ. “ಜೀವನವೆಂದರೆ ಓಡುವುದು” ಎಂಬುದನ್ನು ಬಲವಾಗಿ ನಂಬಿದ್ದೇವೆ. ಈ ಚಿಂತನಾಕ್ರಮ ನಮ್ಮ ಬದುಕಿನ ಎಲ್ಲ ಸೂಕ್ಷ್ಮತೆಗಳನ್ನು ನಿರ್ನಾಮ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಮಾನವೀಯ ಸ್ಪಂದನದ ಗುರುಗಳು ನನ್ನ ಅನೇಕ ನೆನಪಾಗುತ್ತಾರೆ.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
ಗುರು ಶಿಷ್ಯರ ಸಂಬಂಧವನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ ಸರ್. ಸ್ಪರ್ಧಾ ಜಗತ್ತಿನಲ್ಲಿ ಓಡುತ್ತಿರುವ ನಾವು ಬದುಕಿನ ಎಲ್ಲ ಸೂಕ್ಷ್ಮತೆಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ನಿಮ್ಮ ಮಾತು ಮನಸ್ಸಿಗೆ ತಾಗಿತು.