ಹಿಂದಿರುಗಿ ಬರುತ್ತಿದ್ದಾಗ ಮರದಿಂದ ಕೆಳಗೆ ದೂರದಲ್ಲಿ ನೆಲದ ಮೇಲೆ ಬಿದ್ದಿದ್ದ ಗೂಡಿನ ಸುತ್ತ ಕಾಗೆಯೊಂದು ಕಾ… ಕಾ… ಎನ್ನುತ್ತ ಸುತ್ತು ಹಾಕುತ್ತಿತ್ತು. ಹತ್ತಿರಕ್ಕೆ ಹೋಗಿ ನೋಡಿದರೆ ಗೂಡಿಂದ ಹೊರಗೆ ಬಿದ್ದು ಒಡೆದ ಮೊಟ್ಟೆಯಿಂದ ಮಾಂಸದ ಮುದ್ದೆಯಂತಿದ್ದ ಮರಿಯೊಂದು ಹೊರಬಿದ್ದಿತ್ತು. ಇನ್ನು ಒಂದೆರಡು ದಿನಗಳಲ್ಲಿ ಪೂರ್ಣ ಜೀವ ಪಡೆದು ಹೊರ ಬರಬೇಕಾಗಿದ್ದ ಆ ಮರಿ ಈ ಜಗತ್ತನ್ನು ಇನ್ನು ಕಾಣದಂತಾಗಿತ್ತು. ಸಂಜೆ ಸೂರ್ಯನು ತನ್ನ ಕಣ್ಣೆದುರು ನಡೆಯುತ್ತಿರುವ ಕ್ರೌರ್ಯವನ್ನು ನೋಡಿ ಸಹಿಸಲಾಗದೆ ಕತ್ತು ಹಿಸುಕಿಕೊಂಡು ಸಾಯುತ್ತಿರುವವನಂತೆ ಕಳೆಗುಂದಿದ್ದನು.
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರಮೇಶ್ ಆರ್ ಅಕ್ಕರಕಿ ಬರೆದ ಕತೆ “ಮಾನವೀಯ ಮೂರ್ತಿ” ಈ ಭಾನುವಾರದ ಬಿಡುವಿನ ಓದಿಗೆ
೩೦ ವರ್ಷಗಳಿಂದಲೂ ದೇವದುರ್ಗದಲ್ಲಿ ಪೋಸ್ಟ್‌ಮ್ಯಾನ್ ಆಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನೀಲಕಂಠಪ್ಪನವರು ಶಾಂತಿನಗರ, ಚಿಪತ್‌ಗೇರ ಮತ್ತು ಗೌರಂಪೆಟ ಸೇರಿದಂತೆ ಇಡೀ ದೇವದುರ್ಗ ಪಟ್ಟಣಕ್ಕೆ ಚಿರ ಪರಿಚಿತರು. ವಿಧವೆಯರಿಗೆ, ದೇವದಾಸಿಯರಿಗೆ, ವಯೋವೃದ್ಧರಿಗಂತು ನೀಲಕಂಠಪ್ಪ ಪೋಸ್ಟ್‌ಮಾಸ್ಟರ್ ಎಂದರೆ ೧ನೇ ತಾರೀಕಿನಂದು ತಮ್ಮ ಬವಣೆಗಳನ್ನು ತೀರಿಸಲು ಧರೆಗಿಳಿದು ಬರುವಂತ ದೇವದೂತನೇ ಸರಿ.
ಬೆಳಗಿನ ಸ್ನಾನ ಮುಗಿಸಿಕೊಂಡು ತಿಂಡಿತಿಂದು ೮:೩೦ ಕ್ಕೆ ಮನೆ ಬಿಟ್ಟರೆಂದರೆ ನೀಲಕಂಠಪ್ಪ ೯:೦೦ ಕ್ಕೆ ಪೋಸ್ಟ್ ಆಫೀಸಿನಲ್ಲಿ ಹಾಜರ್. ತಾವು ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ ಸರ್ಕಾರದಿಂದ ಕೊಟ್ಟದ್ದೋ ಅಥವ ತಾವೇ ಕೊಂಡುಕೊಂಡಿರಬಹುದಾದ ಹಳೆಯ ತೊಗಲಿನ ಬ್ಯಾಗ್ ಒಂದರಲ್ಲಿ ಆ ದಿನದಂದು ಹಂಚಬಹುದಾದ ಕಾಗದ ಪತ್ರಗಳನ್ನೆಲ್ಲ ತುಂಬಿಸಿಕೊಂಡು ಕೆಲವು ಹತ್ತಿರದಲ್ಲೇ ಕೊಡುವ ಪತ್ರಗಳನ್ನು ಕೈಯಲ್ಲಿ ಹಿಡಿದು, ಬಿಸಿಲು ಮಳೆಯನ್ನು ತಡೆಯಲು ಉಪಯುಕ್ತವಾಗುವ ಕೊಡೆಯನ್ನು ತಾವು ತೊಟ್ಟ ಶರ್ಟಿನ ಹಿಂಬದಿಯ ಕಾಲರಿಗೆ ಸಿಕ್ಕಿಸಿ ಬೆನ್ನಿಗೆ ನೇತು ಬಿಟ್ಟು ಚಪ್ಪಲಿಯ ಟಪ್, ಟಪ್ ಸದ್ದಿನೊಂದಿಗೆ ದೇವದುರ್ಗದ ಬೀದಿಗಳಲ್ಲಿ ಹೆಜ್ಜೆ ಹಾಕಿದರೆಂದರೆ ದೇವದುರ್ಗದ ನೌಕರಸ್ಥ ವರ್ಗದ ಜನಕ್ಕೆ ಕಛೇರಿ ಕೆಲಸಕ್ಕೆ ಸಮಯವಾಗಿರುವುದು ಖಚಿತವಾಗುತ್ತದೆ.
ದಿನದಲ್ಲಿ ಎಂಟತ್ತು ಕಿಲೋ ಮೀಟರ್ ಕಾಲ್ನಡಿಗೆಯಲ್ಲೆ ಸಂಚರಿಸಿ ಕಾಗದ, ಪತ್ರಗಳನ್ನು ಮನೆ, ಮನೆಗೆ ಹಂಚುವ ನೀಲಕಂಠಪ್ಪನವರು ಕೈಯಲ್ಲಿರುವ ಪತ್ರಗಳ ವಿಳಾಸವನ್ನು ನೋಡುತ್ತಾ ಒಂದೊಂದಾಗಿ ಆಯಾ ವಿಳಾಸಗಳಿಗೆ ತಲುಪಿಸುತ್ತಾ ಹೊರಟವರು, ರಂಗರಾಯರನ್ನು ಕಂಡು ತಮ್ಮ ನಡಿಗೆಗೆ ಬ್ರೇಕ್ ಹಾಕಿ, ರಂಗರಾಯರೆ ನಾನು ನಿಮ್ಮ ಮನೆಕಡೆಗೆ ಹೊರಟಿದ್ದೆ, ನೀವು ಇಲ್ಲಿಯೇ ಸಿಕ್ಕಿದ್ದು ಒಳ್ಳೆಯದಾಯಿತು; ತಗೊಳ್ಳಿ ನಿಮಗೊಂದು ಪತ್ರ ಬಂದಿದೆ ಎಂದು ಪತ್ರ ಒಂದನ್ನು ರಂಗರಾಯರ ಕೈಯಲಿಟ್ಟರು. ಪತ್ರವನ್ನು ಕೈಗೆತ್ತಿಕೊಂಡು ನೋಡಿದ ರಂಗರಾಯರು ಓ…….. ಇದು ನನ್ನ ಕಿರಿಯ ಮಗ ಬೆಂಗಳೂರಿನಲ್ಲಿ ಇಂಜಿನೀಯರಿಂಗ್ ಓದುತ್ತಿದ್ದಾನಲ್ಲ ಅವನು ಬರೆದಿದ್ದಾನೆ. ಅಂದ ಹಾಗೆ ನಿಮ್ಮ ಮಗನಿಗೆ ಸ್ಕೂಲ್ ಮೇಸ್ಟ್ರ ನೌಕರಿ ಸಿಕ್ಕಿತಂತೆ ಕೇಳಿ ತುಂಬಾ ಖುಷಿಯಾಯ್ತು ಎಂದು ಅಭಿನಂದಿಸಿದರು. ಹೌದು ಸ್ವಾಮಿ ನಿಮ್ಮಂತ ಸಜ್ಜನರ ಹಾರೈಕೆ ಮತ್ತು ಆಶೀರ್ವಾದ ನಾನು ನಿವೃತ್ತಿ ಹೊಂದುತ್ತಿರುವುದಕ್ಕೂ ಅವನು ಕೆಲಸಕ್ಕೆ ಸೇರಿಕೊಳ್ಳುತ್ತಿರುವುದಕ್ಕು ನಮ್ಮ ಸಂಸಾರಕ್ಕೆ ಹೊಸತೊಂದು ಚೈತನ್ಯ ಬಂದಂತಾಯಿತು, ಸರಿ ನಾನಿನ್ನು ಪತ್ರ ಹಂಚುವುದಿದೆ ಬರುತ್ತೇನೆ ಎಂದು ಹೇಳಿ ಬಾಪೂಜಿ ಓಣಿಯತ್ತ ಹೆಜ್ಜೆ ಬೆಳೆಸಿದರು. ನೀಲಕಂಠಪ್ಪನವರು ಹನುಮವ್ವನ ಮನೆಯ ಮುಂದೆ ನಿಂತು ಹನುಮವ್ವ, ಹನುಮವ್ವಾ ಬಾರಮ್ಮಾ ನಿನಗೆ ರೋಕ್ಕಾ ಬಂದೈತೆ ಎಂದು ಕರೆದರು.
ಪೋಸ್ಟ್‌ಮಾಸ್ಟರ್ ಧ್ವನಿ ಕೇಳಿ ಮುಖವನ್ನು ಅರಳಿಸಿಕೊಂಡು ತನ್ನ ಬೊಕ್ಕಬಾಯಿಯನ್ನು ಊರಗಲ ತೆರೆದು ದೇಶಾವರಿ ನಗು ನಗುತ್ತಾ ಬಂದಳು ಹನುಮವ್ವ. ಹಿಂದೇನೆ ಬಂದ ಬಸ್ಸಮ್ಮ ಎಪ್ಪಾ ನನಗ ರೊಕ್ಕಾ ಬಂದಿಲ್ಲೇನ್ರಿ ಎಂದು ಕೇಳಿದಳು. ಇಲ್ಲ ಬಸ್ಸಮ್ಮ ಹನುಮವ್ವನಿಗೆ ಮಾತ್ರ ರೊಕ್ಕಾ ಬಂದಿರೋದು, ನಿನಗ ಒಂದೆರಡು ದಿನ ತಡವಾಗಿ ಬರಬಹುದು ಎಂದು ಹೇಳಿ ಹನುಮವ್ವನಿಂದ ಹೆಬ್ಬೆಟ್ಟಿನ ಗುರುತಿನ ಸಹಿ ಪಡೆದು ಸರ್ಕಾರದಿಂದ ಪ್ರತಿ ತಿಂಗಳು ವೃದ್ಧರಿಗೆ ಕೊಡಲಾಗುವ ವೃದ್ದಾಪ್ಯ ವೇತನದ ಹಣವನ್ನು ಆಕೆಗೆ ಕೊಟ್ಟು ಹೊರಟರು. ಹನುಮವ್ವಾ ಗರಿ, ಗರಿ ನೊಟುಗಳನ್ನು ಎಣಿಸುತ್ತ ಜಗತ್ತನ್ನೆ ಗೆದ್ದವಳಂತೆ ನಿಂತಿದ್ದರೆ, ಪಕ್ಕದಲ್ಲಿದ್ದ ಬಸ್ಸಮ್ಮ ಹನುಮವ್ವನಲ್ಲಿ ಸಾಲಕ್ಕೆ ಹೇಗೆ ಪೀಠಿಕೆ ಹಾಕುವುದು ಎಂದು ಆಲೋಚಿಸುತ್ತಿದ್ದಳು.
ಅಲ್ಲಿಂದ ಮುಂದೆ ನಡೆದುಕೊಂಡು ಹೊರಟಿದ್ದ ನೀಲಕಂಠಪ್ಪನವರು ಹಿಂದಿನಿಂದ ಯಾರೋ ತಮ್ಮನ್ನು ಕರೆಯುತ್ತಿರುವುದು ಕೇಳಿ ನಿಂತುಕೊಂಡರು. ಸಾರ್, ಸಾರ್ ಎನ್ನುತ್ತ ಹತ್ತಿರಕ್ಕೆ ಓಡಿ ಬಂದ ರಮೇಶನು ಸಾರ್ ನನಗೊಂದು ಲೆಟರ್ ಬರುವುದಿತ್ತು ಬಂದಿದೆಯಾ ನೋಡಿ ಎಂದು ಕೇಳಿದನು. ನೀಲಕಂಠಪ್ಪನವರು ಇಲ್ಲ ಬಾಬು ನಿನಗೆ ಲೆಟರ್ ಬಂದಿದ್ದರೆ ನಾನು ಕೊಡುತ್ತಿರಲಿಲ್ಲವೆ, ನಾನೇನು ಅದನ್ನ ಮನೆಗೆ ತಗೊಂಡು ಹೊಗ್ತೆನಾ. ಲೆಟರ್ ಬಂದರೆ ಖಂಡಿತ ತಂದು ಕೊಡುತ್ತೇನೆ ಅನ್ನುತ್ತ ಮುಂದೆ ನಡೆದರು. ಯಾವುದೋ ಪತ್ರದ ನಿರೀಕ್ಷೆಯಲ್ಲಿದ್ದ ಯುವ ಸಾಹಿತಿ ಬೆಪ್ಪಾಗಿ ನಿಂತುಕೊಂಡ.
ಚಿಪತಗೇರಾ, ಗೌರಂಪೇಟಗಳಲ್ಲಿ ಪತ್ರಗಳನ್ನು ಹಂಚಿದ ನೀಲಕಂಠಪ್ಪನವರು ಉಳಿದ ಪತ್ರಗಳನ್ನು ಹಂಚಲು ಹೊಸ ಬಸ್‌ಸ್ಟ್ಯಾಂಡ್ ಕಡೆಗೆ ಇರುವ ಮನೆಗಳತ್ತ ಹೊರಟರು. ನೆತ್ತಿ ಮೇಲೆ ಬಂದ ಸೂರ್ಯನ ಝಳ ಹೆಚ್ಚಾಗುತ್ತಿತ್ತು. ಶರ್ಟಿನ ಕಾಲರಿಗೆ ಸಿಕ್ಕಿಸಿಕೊಂಡಿರುವ ಕೊಡೆಯ ನೆನಪಾಯಿತು, ಆದರು ಕೊಡ ಅದನ್ನು ಬಿಡಿಸಿ ನೆರಳಿಡಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಕಾರಣ ತಾವು ಹೊರಟಿರುವ ರಸ್ತೆಯ ಎರಡೂ ಬದಿಗಳಲ್ಲು ಬೃಹದ್ದಾಕಾರವಾಗಿ ಬೆಳೆದು ನಿಂತಿರುವ ಆಲದ ಮರಗಳು ಬಿಸಿಲಿನ ಬೇಗೆಯು ಕಿಂಚಿತ್ತು ಧರೆಗೆ ತಾಕದಂತೆ ತಮ್ಮ ತೋಳುಗಳನ್ನು ರಸ್ತೆಯ ಉದ್ದಗಲಕ್ಕೂ ವಿಶಾಲವಾಗಿ ಚಾಚಿಕೊಂಡು ಸಾಲಾಗಿ ನಿಂತು ಭೂ ದೇವಿಗೆ ನೆರಳಿನ ಚಪ್ಪರವನ್ನೆ ಹಿಡಿದಂತಿತ್ತು. ಬಿಸಿಲಿನಲ್ಲಿ ದಣಿದು ಬಸವಳಿದು ಬಂದ ಜನರು ಆ ಮಾರ್ಗವಾಗಿ ಹಾದು ಹೊಗಬೇಕಾಗಿ ಬಂದರೆ, ಕ್ಷಣಕಾಲ ನಿಂತು ಆಹ್ಲಾದಕರವಾದ ಅನುಭವವನ್ನು ಆಸ್ವಾದಿಸದೆ ಹೋಗುತ್ತಿರಲಿಲ್ಲ. ಆದ್ದರಿಂದ ನೀಲಕಂಠಪ್ಪನವರು ಧೈರ್ಯವಾಗಿ ಬಿಸಿಲಿಗೆ ಎದೆಯೊಡ್ಡಿ ನಡೆದರು. ಸ್ವಲ್ಪ ದೂರ ಚಲಿಸಿದ ನಂತರ ಗಕ್ಕನೆ ನಿಂತು ಬೆರಗಾಗಿ ನೋಡತೊಡಗಿದರು. ಮನಸ್ಸಿನಲ್ಲೊಂದು ಅವ್ಯಕ್ತ ನೋವು ಉಂಟಾಯಿತು ಅವರಿಗೆ ತಿಳಿಯದಲೆ ಕೈಗಳು ಕೊಡೆಯನ್ನು ಬಿಡಿಸಿ ನೆರಳಿಡಿದುಕೊಂಡಿತ್ತು.
ಪತ್ರ ಹಂಚುವುದೆಲ್ಲ ಮುಗಿದ ನಂತರ ಭಾರವಾದ ಮನಸ್ಸಿನಿಂದ ಮನೆಗೆ ಹಿಂದಿರುಗಿದ ನೀಲಕಂಠಪ್ಪನವರು ಕೈಕಾಲುಗಳನ್ನು ತೊಳೆಯದೆ ಹೋಗಿ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡವರು ಹಾಗೆ ನಿದ್ರೆಗೆ ಜಾರಿದರು. ಸ್ವಲ್ಪ ಸುಧಾರಿಸಿಕೊಂಡ ನಂತರ ಎದ್ದು ಮುಖ ತೊಳೆದುಕೊಂಡಾಗ ಅವರ ಶ್ರೀಮತಿಯವರು ಕಾಫಿ ಲೋಟವನ್ನು ತಂದು ಕೈಗೆ ಕೊಡುತ್ತ ಯಾಕೆ ಇವತ್ತು ತುಂಬಾ ಮಂಕಾಗಿದ್ದೀರಿ. ಮಧ್ಯಾಹ್ನ ಊಟನೂ ಮಾಡಿಲ್ಲ, ಮೈಲಿ ಹುಷಾರಿಲ್ವಾ ಎಂದು ಕೇಳಿದರು. ನೀಲಕಂಠಪ್ಪನವರು ಹಾಗೇನಿಲ್ಲ ಬಿಸಿಲಲ್ಲಿ ಸುತ್ತಾಡಿ ಬಂದದ್ದರಿಂದ ಸ್ವಲ್ಪ ತಲೆನೋವಿತ್ತು, ಕಾಫಿ ಕುಡಿದೆನಲ್ಲಾ ಸರಿಹೋಗುತ್ತೆ ಬಿಡು. ಹಾಗೆ ಸ್ವಲ್ಪ ಸುತ್ತಾಡಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟರು. ಮಾರು ದೂರ ನಡೆದ ನಂತರ ಶಾಮಣ್ಣನವರು ಸಿಕ್ಕಿದರು. ಇಬ್ಬರೂ ಸೇರಿ ಪ್ರತಿ ದಿನ ಸಂಜೆ ವಾಯುಸೇವನೆಗೆ ತೆರಳುವುದು ಅವರ ದಿನಚರಿಯಾಗಿತ್ತು. ಶಾಮಣ್ಣನವರು ಮಾತಿಗೆ ಪೀಠಿಕೆ ಹಾಕುತ್ತಾ ನೋಡಿದಿರಾ ಆ ಘೋರವನ್ನು ಹೈವೇ ರೋಡ್ ಆಗುತ್ತಂತೆ ಬಹಳ ವರ್ಷಗಳಿಂದ ಬೆಳೆದು ನಿಂತಿದ್ದ ಮರಗಳನ್ನೆಲ್ಲ ನೆಲಕ್ಕೆ ಉರುಳಿಸಿದ್ದಾರೆ.
ನೀಲಕಂಠಪ್ಪನವರು ಶೂನ್ಯವನ್ನೇ ದೃಷ್ಠಿಸುತ್ತ ಹೌದು ಶಾಮಣ್ಣ ಮಧ್ಯಾಹ್ನ ಆ ಘೋರವನ್ನು ಕಣ್ಣಾರೆ ನೋಡಿ ಮನಸ್ಸಿಗೆ ತುಂಬಾ ಕಷ್ಟವಾಯಿತು ಕಣಯ್ಯ. ಏನ್ ಮಾಡೋಕಾಗುತ್ತೆ. ಹಿಂದೆ ಬಹಳಷ್ಟು ಸಲ ಈ ಯೋಜನೆ ಬಂದಿತ್ತಾದರೂ ಕಾರ್ಯಗತಗೊಂಡಿರಲಿಲ್ಲ. ಆದರೆ ಈ ಬಾರಿ ರಸ್ತೆಯ ಮೇಲೆ ಬಂದ ಕಟ್ಟಡಗಳನ್ನು, ಮರಗಳನ್ನು ಉರುಳಿಸಿಬಿಟ್ಟಿದ್ದಾರೆ. ಕಟ್ಟಡವನ್ನು ಉರುಳಿಸಿದರೆ ತಿಂಗಳಿಲ್ಲ ಆರು ತಿಂಗಳಲ್ಲಿ ಮೊದಲಿಗಿಂತಲು ಉತ್ತಮವಾಗಿ ಕಟ್ಟಬಹುದು. ಆದರೆ ಮರ ಹಾಗಲ್ಲ ನೋಡು ಈಗ ಸಸಿ ನೆಟ್ಟರೆ ಆ ಸಸಿ ಗಿಡವಾಗಿ, ಗಿಡದಿಂದ ಮರವಾಗಿ. ಆ ಮರ ಹೆಮ್ಮರವಾಗಿ ಬೆಳೆದು ಬೃಹದಾಕಾರ ಪಡೆದು ಪ್ರಾಣಿ, ಪಕ್ಷಿಗಳಿಗೆಲ್ಲ ನೆರಳು ನೀಡುವಂತಾಗಬೇಕಾದರೆ ನೂರಾರು ವರ್ಷಗಳೆ ಗತಿಸಬೇಕಾಗುತ್ತದೆ. ನಮ್ಮ ಊರಿಗೆ ಹೈವೇ ರೋಡ್ ಆಗ್ತಾ ಇದೆ, ನಮ್ಮ ಊರು ಪ್ರಗತಿ ಹೊಂದುತ್ತದೆ ಅನ್ನೋ ಖುಷಿ ಒಂದು ಕಡೆಯಾದರೆ, ಬಹಳ ವರ್ಷಗಳಿಂದ ಬೇರೂರಿ ಬೃಹದಾಕಾರವಾಗಿ ತಲೆ ಎತ್ತಿ ನಿಂತಿದ್ದ ಮರಗಳು ಬುಡಸಮೇತ ನೆಲಕ್ಕುರುಳಿರುವುದು ಕಂಡರೆ ಕರುಳು ಕಿತ್ತು ಬರುತ್ತದೆ.
ಹೀಗೆ ಮಾತಾಡುತ್ತ ಹೊರಟಿರುವಾಗ ರಸ್ತೆಯ ಎರಡೂ ಬದಿಗಳಲ್ಲಿ ಜೀವ ಕಳೆದುಕೋಡು ನೆಲಕ್ಕುರುಳಿದ್ದರೂ ಸಹ ಜೀವವನ್ನು ಇನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಮರಗಳು ಇದೋ ಕೊನೆಯದಾಗಿ ಒಮ್ಮೆ ನಮ್ಮನ್ನು ಕಣ್ತುಂಬ ನೋಡಿಕೊಳ್ಳಿ ಎಂದು ಅಣಕಿಸುತ್ತಿರುವಂತಿತ್ತು. ಅಲ್ಲೆ ಸ್ವಲ್ಪ ದೂರದಲ್ಲಿ ಅತ್ತಿಂದಿತ್ತ ತಿರುಗಾಡುತ್ತಿದ್ದ ದನ ಕರುಗಳನ್ನು ನೋಡಿದ ನೀಲಕಂಠಪ್ಪನವರು ಶಾಮಣ್ಣನತ್ತ ತಿರುಗಿ ನೋಡು ಶಾಮಣ್ಣ ಮರದ ನೆರಳಿನಲ್ಲಿ ಹಾಯಾಗಿ ವಿಶ್ರಮಿಸುತ್ತಿದ್ದ ಆ ಮೂಕ ಪ್ರಾಣಿಗಳಿಗೂ ಸಹ ನಾಳಿನ ಭೀಕರತೆಯ ಅರಿವಾದಂತಿದೆ. ಆದ್ದರಿಂದಲೇ ಅವು ಕಂಗಾಲಾಗಿ ತಿರುಗುತ್ತಿವೆ. ಹಿಂದೆ ಸಸಿಗಳನ್ನು ತಂದು ಬೇಲಿ ಹಚ್ಚಿ ನೀರೆರೆದು ಬೆಳೆಸಿದವರ ಮಕ್ಕಳೋ ಮೊಮ್ಮಕ್ಕಳೋ ಇಂದು ಮರಗಳನ್ನು ಕಡಿಯುತ್ತಿರುವವರ ಗುಂಪಿನಲ್ಲಿರಬಹುದಲ್ಲವೇ ಎಂದು ನಿಟ್ಟುಸಿರು ಬಿಟ್ಟರು. ಚಿಪ್ಕೋ ಚಳುವಳಿ ಮಾಡಿ ಮರಗಳನ್ನು ರಕ್ಷಿಸುವವರಿಲ್ಲ, ರಕ್ಷಿಸುವ ಹಾಗೆಯೂ ಇಲ್ಲ. ಕಾರಣ ಇದು ಸರಕಾರ ಕೈಗೊಂಡಿರುವ ಕಾರ್ಯ. ಅಭಿವೃದ್ದಿಯ ಹೆಸರಿನಲ್ಲಿ ಕೈಗೊಂಡಿರುವ ಕಾರ್ಯ ಎನ್ನುತ್ತಾ ಭಾವುಕರಾದ ನೀಲಕಂಠಪ್ಪನವರ ಕಣ್ಣುಗಳು ತುಂಬಿಕೊಂಡವು.
ತನ್ನ ವೈರಿಗೂ ಕನಸಿನಲ್ಲಿಯೂ ಸಹ ಕೇಡನ್ನು ಬಯಸದ ಮಾನವೀಯ ಮೌಲ್ಯವುಳ್ಳ ನೀಲಕಂಠಪ್ಪನಂತವರು ಗಿಡ, ಮರಗಳಲ್ಲೂ ಸಹ ಜೀವಕಳೆ ಕಂಡು ಅದರ ಜೀವಿತದ ಬೆಲೆ ಅರಿತುಕೊಂಡು ನೊಂದುಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ ಎಂದು ತಮ್ಮ ಮನಸ್ಸಿನಲ್ಲೆ ಅಂದುಕೊಳುತ್ತಾ ಶಾಮಣ್ಣ ನೀಲಕಂಠಪ್ಪನವರಿಗೆ ಸಾಂತ್ವನ ಹೇಳುತ್ತ ಹೋಗಲಿ ಬಿಡಿ ಅದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸರಕಾರದವರು ಚಿಂತಿಸಬೇಕು. ನಮ್ಮ ನಿಮ್ಮಂತವರಿಂದ ಏನು ತಾನೇ ಮಾಡಲು ಸಾಧ್ಯವಾದೀತು. ನಡೆಯಿರಿ ಮಸುಕಾಗುತ್ತಿದೆ ಮನೆಕಡೆ ಹೊರಡೋಣ ಎಂದು ಮನೆಯ ಕಡೆಗೆ ಹಿಂದಿರುಗಿದರು.
ಹಿಂದಿರುಗಿ ಬರುತ್ತಿದ್ದಾಗ ಮರದಿಂದ ಕೆಳಗೆ ದೂರದಲ್ಲಿ ನೆಲದ ಮೇಲೆ ಬಿದ್ದಿದ್ದ ಗೂಡಿನ ಸುತ್ತ ಕಾಗೆಯೊಂದು ಕಾ… ಕಾ… ಎನ್ನುತ್ತ ಸುತ್ತು ಹಾಕುತ್ತಿತ್ತು. ಹತ್ತಿರಕ್ಕೆ ಹೋಗಿ ನೋಡಿದರೆ ಗೂಡಿಂದ ಹೊರಗೆ ಬಿದ್ದು ಒಡೆದ ಮೊಟ್ಟೆಯಿಂದ ಮಾಂಸದ ಮುದ್ದೆಯಂತಿದ್ದ ಮರಿಯೊಂದು ಹೊರಬಿದ್ದಿತ್ತು. ಇನ್ನು ಒಂದೆರಡು ದಿನಗಳಲ್ಲಿ ಪೂರ್ಣ ಜೀವ ಪಡೆದು ಹೊರ ಬರಬೇಕಾಗಿದ್ದ ಆ ಮರಿ ಈ ಜಗತ್ತನ್ನು ಇನ್ನು ಕಾಣದಂತಾಗಿತ್ತು. ಸಂಜೆ ಸೂರ್ಯನು ತನ್ನ ಕಣ್ಣೆದುರು ನಡೆಯುತ್ತಿರುವ ಕ್ರೌರ್ಯವನ್ನು ನೋಡಿ ಸಹಿಸಲಾಗದೆ ಕತ್ತು ಹಿಸುಕಿಕೊಂಡು ಸಾಯುತ್ತಿರುವವನಂತೆ ಕಳೆಗುಂದಿದ್ದನು.
ದೂರದ ಬೆಟ್ಟದ ಹೆಬ್ಬಂಡೆಯ ಮೇಲೆ ಕುಳಿತಿದ್ದ ಹದ್ದು ಊರಿನ ಜನರತ್ತ ಗೋಣು ತಿರುಗಿಸಿ ಏನನ್ನೊ ಗೊಣಗುತ್ತಿತ್ತು. ನೀವು ಕಡೆದುರುಳಿಸಿರುವ ಮರಗಳು ತಮ್ಮ ಈ ಸ್ವರೂಪ ಪಡೆದುಕೊಳ್ಳಲು ಎಷ್ಟು ವರ್ಷಗಳು ಬೇಕಾಯಿತು ಗೊತ್ತೇ ನಿಮಗೆ. ಗುಡುಗು, ಸಿಡಿಲು, ಮಳೆ ಗಾಳಿಗೆ ಅಂಜದೆ ಎದೆಯೊಡ್ಡಿ ನಮ್ಮಂತಹ ನೂರಾರು ಪಕ್ಷಿ ಸಂಕುಲಗಳಿಗೆ ಆಸರೆಯ ತಾಣವಾಗಿತ್ತು. ಮುಠ್ಠಾಳರೆ ಪರ್ಯಾಯ ಸಸಿ ನೆಡುತ್ತೇವೆ ಎನ್ನುವ ಸಬೂಬು ಹೇಳುತ್ತಿರೋ. ನೀವು ನೆಡುವ ಸಸಿಯ ಮೇಲೆ ನಾವು ಕಟ್ಟಲಾದೀತೆ ಗೂಡು, ಇಡಲಾದೀತೆ ಮೊಟ್ಟೆ. ನೀವು ಗಟ್ಟಿಗರೆ ಆಗಿದ್ದಲ್ಲಿ ಎಲ್ಲಿ ನೆಟ್ಟು ತೋರಿಸಿ ಪರ್ಯಾಯ ಮರವನ್ನು ಎನ್ನುವ ಗೊಣಗು ಅದರದು. ಅದು ಮಾನವೀಯ ಹೃದಯ ಉಳ್ಳಂತಹ ದಯಾಳುಗಳಿಗೆ ಮಾತ್ರ ಅರ್ಥವಾಗುತ್ತಿತ್ತು.
ರಮೇಶ್ ಆರ್ ಅಕ್ಕರಕಿ
ಈ ಕಥೆಯು ಕೇವಲ ಕಾಲ್ಪನಿಕ ಕಥೆಯಲ್ಲ, ನನ್ನ ಸ್ವಗ್ರಾಮವಾದ ದೇವದುರ್ಗ ಪಟ್ಟಣದಲ್ಲಿ ನಡೆದ ಘಟನೆ. ಇತ್ತೀಚೆಗೆ ರಸ್ತೆ ಅಗಲಿಕರಣದ ನೆಪದಲ್ಲಿ ರಸ್ತೆಬದಿಯಲ್ಲಿ ಬೆಳೆದು ನಿಂತಿದ್ದ ಸಾವಿರಾರು ವರ್ಷಗಳ ಕಾಲ ಹಳೆಯದಾದ ಸಾಲು ಮರಗಳನ್ನು ಕತ್ತರಿಸಿ ಹಾಕಿದರು. ಸರ್ಕಾರ ಅಭೀವೃದ್ದಿ ಹೆಸರಿನಲ್ಲಿ ಕೈಗೊಳ್ಳುವ ಕೆಲವು ನಿರ್ದಾರಗಳು ಹೇಗೆ ಒಂದು ಪರಿಸರವನ್ನು, ಒಂದು ಜೀವ ವೈಶಿಷ್ಟೈವನ್ನು ಇನ್ನಿಲ್ಲದಂತಾಗಿಸುತ್ತದೆ ಎಂಬುದನ್ನು ಈ ಕಥೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ಕಥೆಯಲ್ಲಿ ಬರುವ ನೀಲಕಂಠಪ್ಪ ಪೋಸ್ಟ್ ಮಾಸ್ಟರ್ ದೇವದುರ್ಗದಲ್ಲಿ ನಿಷ್ಠಾವಂತ ಸರ್ಕಾರಿ ನೌಕರ ಎಂದು ಗುರುತಿಸಲ್ಪಟ್ಟ ವ್ಯಕ್ತಿ. ನೀಲಕಂಠಪ್ಪನವರ ಪಾತ್ರವು ಈ ಇಡೀ ಕಥಗೆ ಜೀವ ತುಂಬುತ್ತ ಹೋಗುತ್ತದೆ. ಈ ಕಥೆಯಲಿ ಬರುವ ಪಾತ್ರಗಳಾದ ಹನುಮವ್ವ, ಬಸ್ಸಮ್ಮ ಹಾಗು ಯುವಸಾಹಿತಿ ರಮೇಶ್ ಇವು ನಮ್ಮ ಸುತ್ತಲು ದಿನ ನಿತ್ಯದಲ್ಲಿ ನಡೆಯುವ ಘಟನೆಗಳಾಗಿವೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ