ಗಣಿತ ವರ್ಕ್ ಮಾಡಲಿಕ್ಕೆ, ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆಂದು ಬಂದವರ ಬಳಿ ‘ನಾನು ಹಂಚುತ್ತೇನೆ’ ಎಂದು ಹಿಂಬದಿ ಖಾಲಿ ಇರುತ್ತಿದ್ದ ಪಾಂಪ್ಲೀಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಅವನ್ನೆಲ್ಲಾ ಸೇರಿಸಿ ಒಂದು ಬುಕ್ ರೀತಿ ಮಾಡಿಕೊಂಡು ಖಾಲಿ ಬದಿಯ ಹಾಳೆಯನ್ನು ಬರೆಯಲಿಕ್ಕೆ ಬಳಸುತ್ತಿದ್ದೆ. ಇನ್ನು ಕೆಲವೊಮ್ಮೆ ನಮ್ಮ ಹಾಸ್ಟೆಲ್‌ನಲ್ಲಿ ಇದ್ದವರ ಹಾಗೂ ಶಾಲೆಯಲ್ಲಿ ಇದ್ದವರ ಬಳಿ ‘ಒಂದು ಹಾಳೆ ಕೊಡು’ ಎಂದು ತೆಗೆದುಕೊಂಡು ಅವನ್ನೆಲ್ಲಾ ಸೇರಿಸಿ ಒಂದು ಬುಕ್ ಮಾಡಿಕೊಳ್ಳುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಹಾಸ್ಟೆಲ್ಲಿನಲ್ಲಿ ಇದ್ದಾಗ ಆಟ, ಪಾಠ, ಗೆಳೆಯರು ಅಂತಾ ಹೇಳಿ ಸಮಯ ಕಳೆಯೋದು ಅಷ್ಟು ಬೇಸರ ಆಗ್ತಾ ಇರಲಿಲ್ಲ. ಆದರೆ ಮೂರ್ನಾಲ್ಕು ದಿನ ರಜೆ ಬಂದ್ರೆ ಊರಿಗೆ ಹೋಗಿ ವಾಪಸ್ಸು ಬರುವಾಗ ತುಂಬಾ ನೋವು ಆಗ್ತಿತ್ತು. ಇದೊಂಥರ ‘ಬಾವಿಯಲ್ಲಿ ನೀರು ಸೇದಲು ಹಾಕಿದ ಕೊಡಪಾನದಂತೆ’ ಆಗ್ತಿತ್ತು. ಊರಿಗೆ ಹೋಗಬೇಕಾದರೆ ಎಷ್ಟು ಖುಷಿ ಆಗ್ತಿತ್ತು ಅಂದ್ರೆ ನಾಳೆ ಊರಿಗೆ ಹೋಗಬೇಕು ಅಂದಾಗ ರಾತ್ರಿಯೆಲ್ಲಾ ಫುಲ್ ಜೋಶ್‌ನಲ್ಲಿ ಬಟ್ಟೆಬರೆ ಜೋಡಿಸಿಕೊಳ್ಳೋದು, ಹೋಮ್‌ವರ್ಕ್ ಇಟ್ಕೋಳ್ಳೋದು, ಯಾವ ಬಸ್ಸಿಗೆ ಹೋಗಬೇಕು ಅಂತಾ ಪ್ಲ್ಯಾನ್ ಮಾಡಿಕೊಂಡು ಅದೇ ಗುಂಗಲ್ಲಿ ಮಲಗಿ, ಶಾಲೆ ಮುಗಿಸ್ಕೊಂಡು ಹೋಗ್ತಿದ್ವಿ. ಆದರೆ ವಾಪಸ್ಸು ಬರೋ ಹಿಂದಿನ ದಿನ ರಾತ್ರಿ ನಾನಂತೂ ಮಲಗಿದ್ದಾಗ ಯಾರಿಗೂ ಗೊತ್ತಾಗದಂತೆ ಅಳ್ತಾ ಇದ್ದೆ! ಊರಿನ ಶಾಲೆಗೆ ಸೇರಿದ್ದ ಗೆಳೆಯರನ್ನು ನೋಡಿದಾಗ ನಾವೂ ಇಲ್ಲೇ ಓದಬೇಕಾಗಿತ್ತು ಅಂತಾ ಅಂದ್ಕೊಳ್ತಾ ಇದ್ದೆ. ನಾನು ಊರಿಗೆ ಹೋಗೋದಾದ್ರೂ ಅಜ್ಜಿ ಮನೆಗೆ ಹೋಗ್ತಾ ಇದ್ದೆ. ವಾಪಸ್ಸು ಹೊರಟಾಗ ನಮ್ಮಜ್ಜಿ ನನ್ನ ಕೈಲಿ ಹತ್ತು ರೂಪಾಯಿ ಕೊಟ್ಟು ‘ಹುಶಾರಾಗಿ ಇಟ್ಕೋ’ ಅಂತಾ ಹೇಳೋದು. ನಾಗರಪಂಚಮಿ ಸಮಯದಲ್ಲಿ ಊರಿಗೆ ಹೋದ್ರೆ ಕಡಲೇ ಉಂಡೆ, ಶೇಂಗಾ ಉಂಡೆ, ಕರ್ಜಿಕಾಯಿಯನ್ನು ಬ್ಯಾಗಲ್ಲಿ ಇಟ್ಟು ಕಳಿಸೋರು. ಇವನ್ನು ಹಾಸ್ಟೆಲ್ಲಿನಲ್ಲಿ ನನ್ನ ರೂಮ್‌ಮೇಟ್‌ಗಳಿಗೆ ಹಂಚಿಕೊಂಡು ತಿನ್ತಾ ಇದ್ದೆ. ಕಡಲೇ ಉಂಡೆಯಂತೂ ಕಾರ್ಕ್ ಬಾಲ್ ಇದ್ದಂಗೆ ಇರೋದು! ಇಂತಹ ಸೈಜಿನ ಉಂಡೆಗಳು ಬಹುಷಃ ನಮ್ಮಜ್ಜಿ ಕಾಲಕ್ಕೆ ಅಂತ್ಯವಾದವೇನೋ. ಈಗಿನವರೂ ಈ ಹಬ್ಬದ ಸಮಯದಲ್ಲಿ ಮಾಡುತ್ತಾರಾದರೂ ಅವುಗಳ ಗಾತ್ರ ಚಿಕ್ಕದಾಗಿರುತ್ತದೆ. ಬರೆಯಲೆಂದು ತೆಗೆದುಕೊಂಡು ಹೋದ ಹೋಮ್‌ವರ್ಕ್ ಮುಗಿಸದೇ ಬರೀ ಸ್ನೇಹಿತರ ಜೊತೆ ಅಲ್ಲಿ ಇಲ್ಲಿ ತಿರುಗಾಡಿ ವಾಪಸ್ಸು ಬರುವ ಹಿಂದಿನ ದಿನ ರಾತ್ರಿಯಿಡೀ ಬರೆಯುತ್ತಿದ್ದೆ.

ನಮ್ಮ ಜೊತೆಗೆ ಬರುತ್ತಿದ್ದ ಸುನೀಲ ಮಾತ್ರ ವಾಪಾಸ್ ಹಾಸ್ಟೆಲ್ಲಿಗೆ ಹೇಳಿದ ದಿನ ಬರ್ತಾ ಇರಲಿಲ್ಲ. ನಾವು ಒಂದು ಪ್ಲ್ಯಾನ್ ಮಾಡಿಕೊಂಡಿದ್ವಿ. ಹಾಸ್ಟೆಲ್ಲಿನಲ್ಲಿ ಪ್ರತೀ ಕೊಠಡಿವಾರು ಮಲ್ಲಪ್ಪ ವಾರ್ಡನ್ ಅಟೆಂಡೆನ್ಸ್ ಕೇಳ್ದಾಗ ನಾವು ಒಕ್ಕೊರಲಿನಿಂದ “ಎಲ್ಲರೂ ಇದ್ದೇವೆ ಸರ್” ಅಂತಾ ಸುಳ್ಳು ಹೇಳ್ತಿದ್ವಿ! ನಾವು ಆತ್ಮವಿಶ್ವಾಸದಿಂದ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಿದ್ವಿ! ಆಗ ಅವರು ‘ಆಯ್ತು’ ಅಂತಿದ್ರು. ಹೀಗೆ ಪ್ರತೀ ಬಾರಿಯೂ ಒಬ್ಬೊಬ್ಬರನ್ನು ರಕ್ಷಣೆ ಮಾಡೋ ಒಂದು ಕರಾರು ಮಾಡ್ಕೊಂಡಿದ್ವಿ! ಅಪ್ಪಿ ತಪ್ಪಿ ನಾವು ಸಿಕ್ಕಿ ಹಾಕಿಕೊಂಡಿದ್ರೆ ನಮ್ಮ ಕಥೆ ಅಷ್ಟೇ. ಆದರೆ ದೇವರ ದಯೆಯಿಂದ ನಾವು ಎಂದೂ ಹಾಗೆ ಸಿಕ್ಕಿ ಹಾಕಿಕೊಳ್ಳಲಿಲ್ಲ. ನನ್ನ ಹುಟ್ಟಿದ ಊರು ಹಾಸ್ಟೆಲ್ಲಿನಿಂದ ತುಂಬಾ ಹತ್ತಿರ ಇದ್ದಿದ್ರಿಂದ ನಾನು ಗೊತ್ತಿಲ್ಲದಂತೆ ಭಾನುವಾರ ಬೆಳಗ್ಗೆ ಹೋಗಿ ಸಂಜೆ ವಾಪಾಸ್ಸು ಬರ್ತಿದ್ದೆ. ಅದರಲ್ಲೂ ಆಶ್ರಮದ ಮುಂಭಾಗದ ಗೇಟಿನಿಂದ ಹೋಗಲು ಶಿವಕುಮಾರ್ ವಾರ್ಡನ್ ಕಣ್ತಪ್ಪಿಸಿ ಹೋಗುವುದು ಕಷ್ಟವಿತ್ತು. ಈ ಕಾರಣ ನಾನು ಆಶ್ರಮದ ಹಿಂದೆ ಹೊರವಲಯದಲ್ಲಿದ್ದ ಆಯುರ್ವೇದಿಕ್ ಆಸ್ಪತ್ರೆಯ ಹತ್ತಿರವಿದ್ದ ಗೇಟಿನ ಸಂಧಿಯಿಂದ ಹೋಗುತ್ತಿದ್ದೆ. ವಾಪಾಸ್ಸೂ ಸಹ ಅಲ್ಲೇ ಬಂದಿದ್ದೆ. ನಾನು ಹೋಗಿಬರೋದನ್ನು ಸದ್ಯ ಯಾರೂ ನೋಡಿಲ್ಲ ಎಂದು ಭಾವಿಸಿದ್ದೆ. ಆದರೆ ಸಂಜೆ ಭಜನೆ ವೇಳೆಯಲ್ಲಿ ಶಿವಕುಮಾರ್ ವಾರ್ಡನ್ “ಬಸವನಗೌಡ ನೀನು ಅಪ್ಸರ ಬಸ್ಸಿಗೆ ಬಂದ್ಯಾ? ಅಥವಾ ಬೇರೆ ಬಸ್ಸಿಗೆ ಬಂದ್ಯಾ?” ಅಂತಾ ಕೇಳಿದಾಗ ನನಗೆ ಶಾಕ್ ಆಗಿತ್ತು. ಈ ರೀತಿ ನಮ್ಮ ಹಾಸ್ಟೆಲ್ಲಿನಿಂದ ತಪ್ಪಿಸಿಕೊಂಡು ಹೋಗೋದು ಅದು ಸಾಧ್ಯಾನೆ ಇಲ್ಲ ಎಂಬ ವಾತಾವರಣ ಇತ್ತು.

ಮೊದ ಮೊದಲು ಇಂಗ್ಲೀಷ್ ಮೀಡಿಯಂನ ಭಯ ಇದ್ದುದದ್ರಿಂದ ನಾನು ನಮ್ಮ ತರಗತಿಯವರನ್ನು ಬಿಟ್ಟು ನನಗಿಂತ ಸೀನಿಯರ್ ಹುಡುಗರ ಸಹವಾಸ ಮಾಡೋಕೆ ಶುರು ಮಾಡಿದೆ. ಅದರಲ್ಲೂ ರ್ಯಾಂಕ್ ಬಂದ ಹತ್ತನೇ ತರಗತಿಯ ಸೀನಿಯರ್ಸ್ ಜೊತೆ ಇರ್ತಿದ್ದೆ. ಅವರು ಓದೋ ಟಿಪ್ಸ್ ಹೇಳಿಕೊಡುವುದರ ಜೊತೆ ಅವರ ಜೊತೆಯಲ್ಲೇ ಓದೋಕೆ ಕರೆದುಕೊಂಡು ಹೋಗ್ತಾ ಇದ್ರು. ಅದರಲ್ಲೂ ಯಶವಂತಣ್ಣ ಅನ್ನೋರು ತುಂಬಾ ಮೋಟಿವೇಷನ್ ಮಾಡಿ ಓದಿಸಿ, ನಾನೂ ಇಂಗ್ಲೀಷ್ ಮೀಡಿಯಂನಲ್ಲಿ ಓದಬಲ್ಲೆ ಓದಿ ಒಳ್ಳೇ ಅಂಕ ಪಡೆಯಬಲ್ಲೆ ಎಂಬ ಭಾವನೆ ಬೆಳೆಸಿದರು. ಹೀಗೆ ಓದೋ ಹಂಬಲ ಬೆಳೆಸಿದಾಗ ಅವರಂತೆ ಆಶ್ರಮದಲ್ಲಿದ್ದ ವನದ ಮರದ ಕೆಳಗೆ ಓದೋಕೆ ಹೋಗ್ತಿದ್ದೆ. ಅದೇ ರೀತಿ ಆಯುರ್ವೇದಿಕ್ ಆಸ್ಪತ್ರೆಯಲ್ಲೂ ವಿಧ ವಿಧದ ಔಷಧೀಯ ಸಸ್ಯಗಳು ಇದ್ದಿದ್ದರಿಂದ ಅಲ್ಲಿ ಕುಳಿತು ಓದೋಕೆ ಹೋಗ್ತಿದ್ದೆ. ನನಗೆ ರ್ಯಾಂಕ್ ಬರಬೇಕು ಎಂಬ ದೊಡ್ಡ ಗುರಿ ಇರಲಿಲ್ಲ. ಆದರೆ ಪರೀಕ್ಷಾ ಫಲಿತಾಂಶ ಬಂದಾಗ ನನಗೆ ಮೂರನೇ ರ್ಯಾಂಕ್ ಲಭಿಸಿತ್ತು! ಇದಕ್ಕಾಗಿ 9 ನೇ ತರಗತಿಯಲ್ಲಿ ನನಗೆ ನಮ್ಮ ಕ್ಲಾಸಿನಲ್ಲಿ ಗುರುಗಳಿಂದ ಹೆಚ್ಚಿನ ಗೌರವ ಸಿಗುತ್ತಿತ್ತು. ನಾನು ಹೆಚ್ಚು ಸ್ನೇಹ ಬೆಳೆಸಿದ್ದ ಸೀನಿಯರ್ ‘ಬಿಜಿ ಚಂದ್ರಶೇಖರಯ್ಯ’ 10 ನೇ ತರಗತಿಗೇ ಟಾಪರ್ ಆಗಿ ಹೊರಹೊಮ್ಮಿದ್ದ!

ಹಾಸ್ಟೆಲ್‌ನಲ್ಲಿ ನಮಗೆ ಸ್ಟಡಿ ಪಿರಿಯಡ್ ಅಂತಾ ಇತ್ತು. ಇದು ಹಾಸ್ಟೆಲ್ ಹುಡುಗರಿಗೆ ಮಾತ್ರ. ನಮ್ಮ ಶಾಲಾ ಮೇಷ್ಟ್ರುಗಳೇ ನಮಗೆ ಓದಿಸೋಕೆ ಬರ್ತಾ ಇದ್ರು. ಆಗ ಕೆಲ ಹುಡುಗರು ತಿನ್ನೋಕೆ ಏನಾದ್ರೂ ಬೇಕು ಅಂತಾ ಆಸೆ ಪಟ್ಟರೂ ಅಲ್ಲಿ ಏನೂ ಸಿಕ್ತಾ ಇರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಚಂದ್ರಶೇಖರ ಎಂಬ ನಮ್ಮ ಕ್ಲಾಸ್ ಮೇಟ್ ಅದ್ಹೇಗೋ (?!) ಹಾಸ್ಟಲ್ ವಾರ್ಡನ್ ಕಣ್ತಪ್ಪಿಸಿ ಆಶ್ರಮದ ಹೊರಗಿದ್ದ ‘ಜಿತೇಂದ್ರಿಯ ಬೇಕರಿ’ಯಲ್ಲಿ ದಿಲ್‌ಕುಷ್, ಅನಾರ್ಕಲಿ, ಶೇಂಗಾ ಚಿಕ್ಕಿ, ಬನ್ ತರ್ತಾ ಇದ್ದ. ತರುತ್ತಿದ್ದುದು ಅವನು ತಿನ್ನಲಿಕ್ಕಲ್ಲ; ಆದರೆ ಮಾರಲಿಕ್ಕೆ! ಇದರಿಂದ ಅವನಿಗೇನು ಲಾಭ? ಎಂದರೆ ಅವನು ದಿಲ್ ಕುಷ್, ಅನರ್ಕಲಿಯನ್ನು ಬೇಕರಿಯವರಿಗಿಂತ ಚಿಕ್ಕದಾಗಿ ಕತ್ತರಿಸಿ ಬೆಲೆ ಮಾತ್ರ ಬೇಕರಿಯವರಷ್ಟೇ ಪೀಸ್ ಲೆಕ್ಕದಲ್ಲಿ ಮಾರುತ್ತಿದ್ದನಲ್ಲದೇ ಶೇಂಗಾ ಚಿಕ್ಕಿಯಲ್ಲಿ ಒಂದೆರಡು ಪೀಸ್ ಕಡಿಮೆ ಕೊಡುತ್ತಿದ್ದ. ನನಗೂ ತಿನ್ನಲು ಆಸೆಯಾಗುತ್ತಿದ್ದಾದರೂ ‘ವಿಟಮಿನ್ ಎಂ’(ಹಣ) ಕೊರತೆಯ ಕಾರಣ ತಿನ್ನುತ್ತಿರಲಿಲ್ಲ. ಕೆಲ ಹುಡುಗರು ಇವನ ಬಳಿ ಕೊಂಡು ತಿಂದು ತಂದಿದ್ದೆಲ್ಲವನ್ನೂ ಖಾಲಿ ಮಾಡುತ್ತಿದ್ದರು! ಆಗಲೇ ಅಷ್ಟು ಬ್ಯೂಸಿನೆಸ್ ಮೈಂಡ್ ಇದ್ದ ಚಂದ್ರಶೇಖರ ಈಗ ಏನು ಮಾಡುತ್ತಿದ್ದಾನೆಂದು ತಿಳಿಯದು.

ಆಗ ನಮ್ಮ ಹಾಸ್ಟೆಲಿನಲ್ಲಿ ಪಟ್ಟಣದಿಂದ ಬಂದಿದ್ದ ಹುಡುಗರಲ್ಲಿ ಕೆಲವರು ಮುಂಭಾಗದ ಕೂದಲಿಗೆ ಕಡುಕೆಂಪನೆಯ ಬಣ್ಣ ಬಳಿದುಕೊಳ್ಳಲು ಶುರು ಮಾಡಿದರು. ಇದು ನೋಡೋಕೆ ಫ್ಯಾಷನಬಲ್ ಆಗಿ ಇದ್ದಿದ್ರಿಂದ ಬಹುತೇಕ ಹುಡುಗರು ಇದನ್ನೇ ಅನುಸರಿಸೋಕೆ ಶುರು ಮಾಡಿದರು. ನಮಗೆ ಸಮವಸ್ತ್ರವಾಗಿ ಗಾಂಧೀ ಟೋಪಿ ಇದ್ದದ್ದರಿಂದ ಬಣ್ಣ ಹಚ್ಚಿಕೊಂಡವರು ತಮ್ಮ ಬಣ್ಣ ಹಚ್ಚಿದ ಕೂದಲು ಕಾಣಲೆಂದು ಆ ಕೂದಲನ್ನು ಕಾಣುವಂತೆ ಹೊರಗಡೆ ಬಿಟ್ಟು ಟೋಪಿ ಹಾಕಿಕೊಳ್ಳುವ ರೂಢಿ ಇಟ್ಟುಕೊಂಡಿದ್ದರು. ಇದು ನಮ್ಮ ಪಿಇ ಮಾಸ್ಟರ್ ಭೈರಪ್ಪ(ಸಿಬಿಎನ್) ನವರಿಗೆ ಗೊತ್ತಾಗಿ ಅವರನ್ನು ಪ್ರಾರ್ಥನಾ ಸಮಯದಲ್ಲಿ ಮುಂದೆ ನಿಲ್ಲಿಸಿ “ನಮ್ಮ ಶಾಲೆಗೆ ಕೋತಿಗಳು ಬಂದಿದ್ದಾವೆ. ಅವು ಇವೇ ಎಂದು ತೋರಿಸಿ” ಮರ್ಯಾದೆ ಕಳೆಯುವುದರ ಜೊತೆಗೆ ಅವರನ್ನು ಚೆನ್ನಾಗಿ ದಂಡಿಸಿದರು. ಅಂದಿನಿಂದ ಈ ರೀತಿ ಮಾಡುವುದನ್ನು ಎಲ್ಲರೂ ನಿಲ್ಲಿಸಿದರು.

ನಾನು ಪ್ರೌಢ ಶಾಲೆಯಲ್ಲಿದ್ದಾಗ ನಮಗೆ ಪಠ್ಯಪುಸ್ತಗಳನ್ನು ಉಚಿತವಾಗಿ ಕೊಡುತ್ತಿರಲಿಲ್ಲ. ಇದಕ್ಕಾಗಿ ನಾವು ಹಣ ಕೊಟ್ಟು ಖರೀದಿ ಮಾಡಬೇಕಾಗಿತ್ತು. ಹಣ ಉಳಿಸಲೆಂದು ನಾನು ಸೆಕೆಂಡ್ ಹ್ಯಾಂಡ್ ಪುಸ್ತಕ ಖರೀದಿ ಮಾಡುತ್ತಿದ್ದೆ. ಇದೇ ರೀತಿ ನಮ್ಮ ಸೀನಿಯರ್ ಒಬ್ಬನಿಗೆ ಮುಂಗಡ ಹಣ ಕೊಟ್ಟು ಪುಸ್ತಕ ಕಾಯ್ದಿರಿಸಿದ್ದೆ. ಆದರೆ ಅವನು ಒಂದೆರಡು ಪುಸ್ತಕ ಕೊಟ್ಟಂತೆ ಮಾಡಿ ನನಗೆ ಯಾಮಾರಿಸಿ ಟೀಸಿ ತೆಗೆದುಕೊಂಡು ಹೋಗಿದ್ದ!! ಇದು ಮೊದಲ ಬಾರಿಗೆ ನಾನು ನನ್ನ ಜೀವನದಲ್ಲಿ ಯಾಮಾರಿದ್ದು. ಇನ್ನು ಪುಸ್ತಕಗಳಿಗೆ ಬೈಂಡ್ ಹಾಕಲೆಂದು ಈಗಿನವರ ರೀತಿ ಅಂಗಡೀಲಿ ಕೊಂಡು ತಂದು ಬೈಂಡ್ ಹಾಕ್ತಾ ಇರಲಿಲ್ಲ. ಬದಲಿಗೆ ಹಳೇ ನ್ಯೂಸ್ ಪೇಪರ್ ಸಿಕ್ರೆ ಇದನ್ನೇ ಬೈಂಡ್ ಆಗಿ ಹಾಕ್ತಾ ಇದ್ದೆವು! ಇನ್ನು ಗಣಿತ ವರ್ಕ್ ಮಾಡಲಿಕ್ಕೆ, ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆಂದು ಬಂದವರ ಬಳಿ ‘ನಾನು ಹಂಚುತ್ತೇನೆ’ ಎಂದು ಹಿಂಬದಿ ಖಾಲಿ ಇರುತ್ತಿದ್ದ ಪಾಂಪ್ಲೀಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಅವನ್ನೆಲ್ಲಾ ಸೇರಿಸಿ ಒಂದು ಬುಕ್ ರೀತಿ ಮಾಡಿಕೊಂಡು ಖಾಲಿ ಬದಿಯ ಹಾಳೆಯನ್ನು ಬರೆಯಲಿಕ್ಕೆ ಬಳಸುತ್ತಿದ್ದೆ. ಇನ್ನು ಕೆಲವೊಮ್ಮೆ ನಮ್ಮ ಹಾಸ್ಟೆಲ್‌ನಲ್ಲಿ ಇದ್ದವರ ಹಾಗೂ ಶಾಲೆಯಲ್ಲಿ ಇದ್ದವರ ಬಳಿ ‘ಒಂದು ಹಾಳೆ ಕೊಡು’ ಎಂದು ತೆಗೆದುಕೊಂಡು ಅವನ್ನೆಲ್ಲಾ ಸೇರಿಸಿ ಒಂದು ಬುಕ್ ಮಾಡಿಕೊಳ್ಳುತ್ತಿದ್ದೆ. ಇಲ್ಲಿ ಒಬ್ಬರ ಹತ್ರ ತೆಗೆದುಕೊಂಡ ಹಾಳೆಯ ಮಾಹಿತಿ ಮತ್ತೊಬ್ಬರಿಗೆ ಗೊತ್ತಾಗದ ರೀತಿಯಲ್ಲಿ ಎಚ್ಚರಿಕೆ ವಹಿಸುತ್ತಿದ್ದೆ. ಹೀಗೆಲ್ಲಾ ಯಾಕೆ ಮಾಡಿತ್ತಿದ್ದೆನಪ್ಪಾ ಅಂದ್ರೆ ಆಗ ನಮ್ಮ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದಿದ್ದರಿಂದ, ಬರೆದೂ ಬರೆದೂ ಕಲೀಬೇಕು ಎಂದು ನಮ್ಮ ಮೇಷ್ಟ್ರು ಒತ್ತಿ ಒತ್ತಿ ಹೇಳುತ್ತಿದ್ದರಿಂದ, ಹಾಳೆಯ ಬೇಡಿಕೆ ಪೂರೈಸಿಕೊಳ್ಳಲು ಈ ರೀತಿ ಮಾಡೋ ಅನಿವಾರ್ಯತೆ ಎದುರಾಗಿತ್ತು. ನಮ್ಮ ಮನೆಯಲ್ಲಿ ವರ್ಷಕ್ಕೆ ವಿಷಯಕ್ಕೊಂದಂದರಂತೆ 6 ವಿದ್ಯಾ ಲೇಖಕ್‌ನ 200 ಪುಟದ ನೋಟ್ ಬುಕ್ಕುಗಳು, ಆರು 100 ಪುಟದ ನೋಟ್ ಬುಕ್ಕುಗಳನ್ನಷ್ಟೇ ಕೊಡಿಸುತ್ತಿದ್ದರು. ಸಮಾಜ ವಿಜ್ಞಾನ ನೋಟ್ಸಿನಲ್ಲಿ ಹಿಸ್ಟರಿ, ಸಿವಿಕ್ಸ್, ಜಿಯೋಗ್ರಫಿ ಎಂದು ಭಾಗ ಮಾಡಿಕೊಂಡು ಒಂದೇ ಪುಸ್ತಕದಲ್ಲೇ ಬರೆದುಕೊಳ್ಳುತ್ತಿದ್ದೆನು.

ನಾವು 9 ನೇತರಗತಿಯಲ್ಲಿದ್ದಾಗ ಅಜೇಯ್ ಕುಮಾರ್ ಎಂಬಾತ ನಮಗೆ ಕ್ರಾಫ್ಟ್ ಟೀಚರ್ ಆಗಿದ್ದ ಕೆಎಸ್ಎಸ್ (ಕೆ.ಎಸ್. ಶ್ರೀಕಂಠಯ್ಯ) ಬಳಿ “ಸಾರ್, ಹುಡುಗ ಹುಡುಗೀರನ್ನ ಪಿಇ ಪಿರಿಯಡ್‌ನಲ್ಲಿ ಜೊತೆಗೆ ಆಡಲು ಬಿಡಿ’ ಎಂದು ಕೇಳಿದ. ಅದಕ್ಕವರು ಒಪ್ಪಿ ಆಡಲು ಬಿಟ್ಟರು. ಆಗ ಶುರುವಾಗ್ತಿತ್ತು ನೋಡಿ ಹುಚ್ಚುಖೋಡಿ ಮನಸ್ಸಿನ ಆಟಗಳು!! ಒಬ್ಬ(ಹೆಸರು ಬೇಡ) ಒಬ್ಬಳ ಬಳಿಯೇ ಥ್ರೋಬಾಲ್ ಎಸೆದು ಎಸೆದೂ ಹಾಸ್ಟೆಲ್ಲಿನಲ್ಲಿ ಅವಳ ಹೆಸರಿನೊಡನೆ ಗಾಸಿಪ್ ಮಾಡಿಕೊಂಡಿದ್ದ. ಆಗ ನಮ್ಮ ಕ್ಲಾಸಿನಲ್ಲಿದ್ದದ್ದು ಬರೀ ಏಳೇ ಜನ ಹುಡುಗೀರು. ಒಮ್ಮೆ ಎ.ವಿ. ಸರ್ ಪಾಠ ಮಾಡುವಾಗ 7 ಇದು ಬೆಸ ಸಂಖ್ಯೆ ಈ ನಂಬರ್ ಸರಿ ಇಲ್ಲ ಅರ್ಥ ಬರುವಂತೆ “ಸೆವೆನ್ ಈಸ್ ನಾಟ್ ಎ ಗುಡ್ ಫಿಗರ್” ಎಂದು ಹೇಳಿದರು. ಆಗ ಹುಡುಗರು ಬೇರೆ ರೀತಿ ಅರ್ಥೈಸಿಕೊಂಡು ‘ಗೊಳ್’ ಎಂದು ನಕ್ಕಿದ್ದರು! ನನ್ನ ಪಕ್ಕದಲ್ಲಿ ಇದ್ದ ಒಬ್ಬ ಹುಡುಗನಂತೂ ಒಬ್ಬ ಹುಡುಗಿಯ ಬಗ್ಗೆ ಜಾಸ್ತಿ ವಿಚಾರಿಸಿ, ವಿಚಾರಿಸಿ 9 ನೇ ತರಗತಿಯಲ್ಲೇ ಫೇಲ್ ಆಗಿ ಟಿಸಿ ತೆಗೆದುಕೊಂಡು ಹೋಗಿದ್ದ!

ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಇಲ್ಲದಿದ್ದರೆ ವಯೋಮಾನಕ್ಕನುಗುಣವಾಗಿ ತಪ್ಪ ಮಾಡುವುದು ಸಹಜ. ಆದ್ದರಿಂದ ನಾವು ಈ ವಯಸ್ಸಿನಲ್ಲಿ ಅವರ ಜೊತೆ ಗೆಳೆಯರಂತೆ ವ್ಯವಹರಿಸಬೇಕು. ಮಕ್ಕಳು ಪೋಷಕರ ಬಳಿ ಮುಕ್ತವಾಗಿ ಮಾತನಾಡುವ ಅವಕಾಶ ಕಲ್ಪಿಸಬೇಕು. ಅಲ್ಲದೇ ಅವರಲ್ಲಿ ಜವಾಬ್ದಾರಿಯ ಅರಿವನ್ನು ಮೂಡಿಸಬೇಕು. ಆಗ ಮಾತ್ರ ಅವರು ಸರಿ ದಾರಿಯಲ್ಲಿ ನಡೆಯುತ್ತಾರೆ. ನಮ್ಮ ಲಿಮಿಟ್ ಮೀರಿ ಅವರಿಗೆ ಸೌಲಭ್ಯ ಕೊಡಿಸಲು ಮುಂದಾದೆವೋ, ಇದು ನಾವೇ ನಮ್ಮ ಮಕ್ಕಳನ್ನು ನಮ್ಮ ಕೈಯಾರೆ ಹಾಳು ಮಾಡಿದಂತಾಗುತ್ತದೆ ಎಂದು ಹೇಳಬಯಸುತ್ತೇನೆ. ಈ ವಯಸ್ಸಿನಲ್ಲಿ ಮಕ್ಕಳ ಸಹವಾಸದ ಬಗ್ಗೆ ಗಮನ ನೀಡುವುದು ಒಳ್ಳೆಯದು. ನನ್ನ ಅದೃಷ್ಟ, ಪ್ರೌಢಶಾಲೆಯಲ್ಲಿ ನನಗೆ ಅಂತಾ ಒಳ್ಳೆಯ ಮಾರ್ಗದರ್ಶಕರು ಸಿಕ್ಕಿದರು. ಈ ರೀತಿ ನನ್ನಲ್ಲಿ ಸ್ಪೂರ್ತಿ ತುಂಬಿ ನನ್ನ ವಿದ್ಯಾಭ್ಯಾಸದ ಪ್ರಗತಿಗೆ ಸಹಕಾರ ಮಾಡಿದ ನನ್ನ ಆ ಸೀನಿಯರ್‌ಗಳನ್ನು ಮತ್ತೊಮ್ಮೆ ಈ ಸಮಯದಲ್ಲಿ ಸ್ಮರಿಸುತ್ತೇನೆ.