ಕ್ಯಾಲಿಫೋರ್ನಿಯ ರಾಜ್ಯದಲ್ಲಿರುವ ಲಾಸ್ ಏಂಜಲೀಸ್, ಅಮೆರಿಕಾದ ಎರಡನೇ ಹೆಚ್ಚು ಜನಸಂಖ್ಯೆ ಇರುವ ನಗರ. ಇಲ್ಲಿ ಸುಮಾರು ಮೂವತ್ತೊಂಬತ್ತು ಲಕ್ಷ ಜನ ವಾಸಿಸುತ್ತಿದ್ದಾರೆ. ಲಾಸ್ ಏಂಜಲೀಸ್ ಸಿನೆಮಾ ಮತ್ತು ಟಿವಿ ಜಗತ್ತಿನ ಕೇಂದ್ರಬಿಂದು. ಇಲ್ಲಿನ ಸಿನಿಮಾ ಜಗತ್ತನ್ನು ಹಾಲಿವುಡ್ ಎಂದು ಕರೆಯಲಾಗುತ್ತದೆ. ಇಲ್ಲಿನ ಹಾಲಿವುಡ್ ಹೆಸರಿಂದ ಸ್ಪೂರ್ತಿಗೊಂಡು ಭಾರತದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಮುಂತಾದ ಹೆಸರುಗಳು ಹುಟ್ಟಿಕೊಂಡಿವೆ. ಇಲ್ಲಿ ಪ್ಯಾರಾಮೌಂಟ್, ಯೂನಿವರ್ಸಲ್ ಸ್ಟುಡಿಯೋಸ್, ಮತ್ತು ವಾರ್ನರ್ ಬ್ರದರ್ ನಂತಹ ಪ್ರತಿಷ್ಠಿತ ಸಂಸ್ಥೆಗಳಿವೆ, ಇಲ್ಲಿನ ಸ್ಟುಡಿಯೋಗಳಲ್ಲಿ ತೆರೆಯ ಹಿಂದೆ ನಡೆಯುವ ಸಂಗತಿಗಳ ಬಗ್ಗೆ ಟೂರ್ ನೀಡಲಾಗುತ್ತದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

ಅಮೇರಿಕಾ ಹಲವಾರು ಮಹಾ ನಗರಗಳನ್ನು, ನಗರಗಳನ್ನು, ಪಟ್ಟಣಗಳನ್ನು, ಸಣ್ಣ ಪಟ್ಟಣಗಳನ್ನೂ ಹೊಂದಿದೆ. ಅಮೆರಿಕಾದ ನಗರಗಳು ವಿಶ್ವದಲ್ಲೆಲ್ಲಾ ಪ್ರಸಿದ್ಧಿ ಪಡೆದಿವೆ. ಅಮೆರಿಕಾದ ನಗರಗಳ ವೀಕ್ಷಣೆಗೆ ಪ್ರಪಂಚದ ಹಲವಾರು ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಗಗನಚುಂಬಿ ಕಟ್ಟಡಗಳೂ, ವಸ್ತು ಸಂಗ್ರಹಾಲಯಗಳು, ಆರ್ಟ್ ಗ್ಯಾಲರಿಗಳೂ, ಪ್ರಾಣಿ ಸಂಗ್ರಹಾಲಯಗಳೂ, ಸಮುದ್ರ ದಂಡೆಗಳೂ ಮುಂತಾದವು ಬಹುತೇಕ ಎಲ್ಲಾ ನಗರಗಳಲ್ಲೂ ಇವೆ. ಪ್ರತಿಯೊಂದು ನಗರವೂ ತನ್ನದೇ ಆದ ಹೆಗ್ಗುರುತನ್ನು ಹೊಂದಿದೆ. ಯಾವುದೋ ಅನನ್ಯವಾದ ಒಂದು ಸಂಗತಿ, ಸ್ಥಳ ಪ್ರತಿ ನಗರದಲ್ಲೂ ಇದೆ. ಪ್ರತಿಯೊಂದು ನಗರಕ್ಕೂ ತನ್ನದೇ ಆದ ಇತಿಹಾಸವಿದೆ. ಪ್ರಪಂಚದ ಎಲ್ಲಾ ನಗರಗಳಂತೆ ಜನ ದಟ್ಟಣೆ ಇದ್ದರೂ, ನಗರಗಳ ಮೂಲ ಸೌಕರ್ಯಗಳ ಕೊರತೆ ಇಲ್ಲದಿರುವುದರಿಂದ, ಯಾವುದೇ ತೊಂದರೆ ಆಗುವುದು ಕಡಿಮೆ. ಆದರೂ ಜನಸಂಖ್ಯೆ ಹೆಚ್ಚಿರುವ ನಗರಗಳಲ್ಲಿ ಎಲ್ಲಾ ದೇಶಗಳಲ್ಲಿ ಇರುವಂತೆ ಅಮೆರಿಕದಲ್ಲೂ ನಗರಗಳ ಕೆಲವು ಕಡೆ ಕಳ್ಳತನ, ಹಿಂಸೆ ನಡೆಯುವುದು ಉಂಟು.

ಮಹಾ ನಗರಗಳಿಗೆ ಹೋಗುವ ಮುಂಚೆ ಸುರಕ್ಷಿತ ಪ್ರದೇಶಗಳು ಮತ್ತು ಸೂಕ್ಷ್ಮ ಪ್ರದೇಶಗಳ ಅವಗಾಹನೆ ಮುಖ್ಯ. ಈಗ ಬೇಕಾದ ವಿಷಯಗಳು ಇಂಟರ್ನೆಟ್‌ನಲ್ಲಿ ಸಿಗುವುದರಿಂದ ಸ್ವಲ್ಪ ಸಂಶೋಧನೆ ಮಾಡಿಕೊಂಡು ಹೋಗುವುದು ಒಳಿತು. ಬಹುತೇಕ ಎಲ್ಲಾ ನಗರಗಳನ್ನು ಅಮೆರಿಕಾದ ಪೊಲೀಸ್ ವ್ಯವಸ್ಥೆ ಸುರಕ್ಷಿತವಾಗಿ ಇರಿಸಿದೆ. ಸಂಚಾರ ವ್ಯವಸ್ಥೆ ಬಹುತೇಕ ಎಲ್ಲಾ ನಗರಗಳಲ್ಲೂ ಅದ್ಭುತವಾಗಿದೆ. ಹಣ ಒಂದಿದ್ದರೆ ಅಮೆರಿಕಾದಲ್ಲಿ ಸ್ವರ್ಗ ಕಾಣಬಹದು. ಪ್ರಪಂಚದ ಇತರೆ ದೇಶಗಳ ನಗರಗಳಂತೆ ಇಲ್ಲಿಯೂ ನಗರಗಳಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚು. ಆದ್ದರಿಂದ ಸ್ವಾಭಾವಿಕವಾಗಿ ಜನ ಸಂದಣಿ ಹೆಚ್ಚು.

ಈಗ ಅಮೆರಿಕಾದ ಕೆಲವು ನಗರಗಳ ಪರಿಚಯ ಮಾಡಿಕೊಳ್ಳೋಣ

ನ್ಯೂಯಾರ್ಕ್:

ನ್ಯೂಯಾರ್ಕ್ ರಾಜ್ಯದಲ್ಲಿರುವ ನ್ಯೂಯಾರ್ಕ್ ನಗರ ಅಮೆರಿಕಾದ ಎಲ್ಲ ನಗರಗಳಿಗಿಂತ ದೊಡ್ಡದು. ಅತೀ ಹೆಚ್ಚು ಜನಸಂದಣಿ ಇರುವ ನಗರ. ಬ್ರಾಂಕ್ಸ್, ಬ್ರೂಕ್ಲಿನ್, ಮ್ಯಾನ್ಹಟನ್, ಕ್ವೀನ್ಸ್, ಸ್ಟಾಟೆನ್ ಐಲ್ಯಾಂಡ್ ಎಂಬ ಐದು ಉಪನಗರಗಳನ್ನು ಹೊಂದಿರುವ ನ್ಯೂಯಾರ್ಕ್ ನಗರ ಸುಮಾರು ನಾಲ್ಕು ನೂರಾ ಎಪ್ಪತ್ತೆರಡು ಚದುರ ಮೈಲಿಗಳಷ್ಟು ವಿಸ್ತೀರ್ಣ ಹೊಂದಿದೆ. ಇದರಲ್ಲಿ ಮುನ್ನೂರು ಚದುರ ಮೈಲಿಗಳು ಭೂ ಪ್ರದೇಶವಾದರೆ, ನೂರಾ ಎಪ್ಪತ್ತೆರಡು ಮೈಲಿಗಳು ನೀರಿನ ಪ್ರದೇಶವಾಗಿದೆ. ಸುಮಾರು ಎಂಬತ್ತೈದು ಲಕ್ಷ ಜನ ನ್ಯೂಯಾರ್ಕ್ ನಗರದಲ್ಲಿ ನೆಲೆಸಿದ್ದಾರೆ. ಸುಮಾರು ಎಂಟನೂರು ಭಾಷೆಗಳನ್ನು ಮಾತನಾಡುವ ಜನ ನ್ಯೂಯೋರ್ಕ್‌ನಲ್ಲಿ ಇದ್ದು, ಇದು ಪ್ರಪಂಚದಲ್ಲೇ ಅತೀ ಹೆಚ್ಚಿನ ಭಾಷೆಗಳನ್ನು ಆಡುವ ಜನರನ್ನು ಹೊಂದಿರುವ ನಗರ. ನ್ಯೂಯೋರ್ಕಿನ ಮೆಟ್ರೋ ವ್ಯವಸ್ಥೆ, ಇದನ್ನು ಸಬ್ ವೇ ಎಂದು ಕರೆಯುತ್ತಾರೆ, ಪ್ರಪಂಚದಲ್ಲೇ ಅತೀ ಹೆಚ್ಚು ನಿಲ್ದಾಣಗಳು ಇರುವ ರೈಲು ವ್ಯವಸ್ಥೆ. ದಿನದ ಇಪ್ಪತ್ತು ನಾಲ್ಕು ಗಂಟೆಗಳೂ ಸಂಚಾರ ವ್ಯವಸ್ಥೆ ಇರುತ್ತದೆ. ಇದಲ್ಲದೆ ಬಸ್ಸುಗಳೂ, ಹಡಗುಗಳು, ಟ್ಯಾಕ್ಸಿಗಳೂ, ಟ್ರಾಮ್‌ಗಳೂ ನ್ಯೂಯೋರ್ಕ್‌ನಲ್ಲಿ ಸಂಚಾರಕ್ಕೆ ಸಿಗುತ್ತವೆ.

ನ್ಯೂಯೋರ್ಕ್‌ನ ಟೈಮ್ ಸ್ಕ್ವೇರ್ ಪ್ರಸಿದ್ಧವಾದ ಪ್ರವಾಸಿ ತಾಣ. ಇಲ್ಲಿ ಬ್ರಾಡ್ ವೇ ಷೋಗಳು ನಡೆಯುತ್ತವೆ. ಝಗಮಗಿಸುವ ದೊಡ್ಡದಾದ ಪರದೆಗಳಿಂದ ಸುತ್ತುವರೆದಿರುವ ಈ ಪ್ರದೇಶದಲ್ಲಿ ಡಿಸೆಂಬರ್ ಮೂವತ್ತೊಂದನೇ ತಾರೀಕು ಬಾಲ್ ಡ್ರಾಪ್ ಮಾಡುವ ಮೂಲಕ ಹೊಸ ವರುಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತದೆ. ಆದಿನ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿ ಹೊಸ ವರುಷದ ಆಚರಣೆ ಮಾಡುತ್ತಾರೆ. ಇಲ್ಲಿ ಶಾಪಿಂಗ್ ಮಾಡಲು ತರಾವರಿ ಅಂಗಡಿಗಳಿದ್ದು, ತಿಂಡಿ, ಊಟಕ್ಕೆ ತರಾವರಿ ರೆಸ್ಟಾರೆಂಟ್‌ಗಳೂ ಇವೆ.

ನ್ಯೂಯಾರ್ಕಿನ ಲಿಬರ್ಟಿ ಪ್ರತಿಮೆ, ಪ್ರಾಣಿ ಸಂಗ್ರಹಾಲಯ, ಸೆಂಟ್ರಲ್ ಪಾರ್ಕ್, ಗ್ರೌಂಡ್ ಜೀರೋ (ಸೆಪ್ಟೆಂಬರ್ ೧೧ ೨೦೦೧ ರಲ್ಲಿ ನೆಲಸಮವಾದ ನ್ಯೂಕಾರ್ಕಿನ ಅತಿ ಎತ್ತರದ ವರ್ಲ್ಡ್ ಟ್ರೇಡ್ ಸೆಂಟರ್ ಎಂದು ಕರೆಸಿಕೊಳ್ಳುತ್ತಿದ್ದ ಕಟ್ಟಡಗಳು ಇದ್ದ ಜಾಗ), ಎಂಪೈರ್ ಸ್ಟೇಟ್ ಬಿಲ್ಡಿಂಗ್, ವಿಶ್ವ ಸಂಸ್ಥೆ, ಬ್ರೂಕ್ಲಿನ್ ಬ್ರಿಡ್ಜ್ ಮುಂತಾದವು ಪ್ರೇಕ್ಷಣೀಯ ಸ್ಥಳಗಳು. ನ್ಯೂಯಾರ್ಕಿನ ಒಂದೊಂದು ಹಾದಿಯಲ್ಲೂ ಏನಾದರೂ ಕಾಣ ಸಿಗುತ್ತದೆ. ಇಡೀ ರಾತ್ರಿ ಎದ್ದಿರುವ ನ್ಯೂಯಾರ್ಕ್ ನಗರವನ್ನು “ಸಿಟಿ ನೆವರ್ ಸ್ಲೀಪ್ಸ್” ಎನ್ನುತ್ತಾರೆ.

ಲಾಸ್ ಏಂಜಲೀಸ್:

ಕ್ಯಾಲಿಫೋರ್ನಿಯ ರಾಜ್ಯದಲ್ಲಿರುವ ಲಾಸ್ ಏಂಜಲೀಸ್, ಅಮೆರಿಕಾದ ಎರಡನೇ ಹೆಚ್ಚು ಜನಸಂಖ್ಯೆ ಇರುವ ನಗರ. ಇಲ್ಲಿ ಸುಮಾರು ಮೂವತ್ತೊಂಬತ್ತು ಲಕ್ಷ ಜನ ವಾಸಿಸುತ್ತಿದ್ದಾರೆ. ಲಾಸ್ ಏಂಜಲೀಸ್ ಸಿನೆಮಾ ಮತ್ತು ಟಿವಿ ಜಗತ್ತಿನ ಕೇಂದ್ರಬಿಂದು. ಇಲ್ಲಿನ ಸಿನಿಮಾ ಜಗತ್ತನ್ನು ಹಾಲಿವುಡ್ ಎಂದು ಕರೆಯಲಾಗುತ್ತದೆ. ಇಲ್ಲಿನ ಹಾಲಿವುಡ್ ಹೆಸರಿಂದ ಸ್ಪೂರ್ತಿಗೊಂಡು ಭಾರತದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಮುಂತಾದ ಹೆಸರುಗಳು ಹುಟ್ಟಿಕೊಂಡಿವೆ. ಇಲ್ಲಿ ಪ್ಯಾರಾಮೌಂಟ್, ಯೂನಿವರ್ಸಲ್ ಸ್ಟುಡಿಯೋಸ್, ಮತ್ತು ವಾರ್ನರ್ ಬ್ರದರ್ ನಂತಹ ಪ್ರತಿಷ್ಠಿತ ಸಂಸ್ಥೆಗಳಿವೆ, ಇಲ್ಲಿನ ಸ್ಟುಡಿಯೋಗಳಲ್ಲಿ ತೆರೆಯ ಹಿಂದೆ ನಡೆಯುವ ಸಂಗತಿಗಳ ಬಗ್ಗೆ ಟೂರ್ ನೀಡಲಾಗುತ್ತದೆ.

ಇಲ್ಲಿಯೇ ಮಕ್ಕಳ ಮನಸನ್ನು ಅರಳಿಸುವ ಡಿಸ್ನಿ ಲ್ಯಾಂಡ್ ಇದೆ. ಡಿಸ್ನಿ ಲ್ಯಾಂಡ್ ಪಾರ್ಕ್ ಒಳ ಹೊಕ್ಕರೆ ಹೊಸತೊಂದು ಲೋಕಕ್ಕೆ ಹೊಕ್ಕಂತೆ ಭಾಸವಾಗುತ್ತದೆ. ಅನೇಕ ತರಾವರಿ ಬಣ್ಣದ ಕಟ್ಟಡಗಳು, ಪ್ರಾಣಿಗಳ ವಿಗ್ರಹಗಳು, ರೈಡ್‌ಗಳು ಮಕ್ಕಳಿಗೆ ಖುಷಿಕೊಡುತ್ತವೆ.

ಇಲ್ಲಿನ ವ್ಯಾಕ್ಸ್ ಸಂಗ್ರಹಾಲಯದಲ್ಲಿ ಮೇಣದಿಂದ ಮಾಡಿದ ಸಿನಿಮಾ ನಟ ನಟಿಯರ ಪ್ರತಿಮೆಗಳಿವೆ.

ಕ್ಯಾಲಿಫೋರ್ನಿಯಾದ ಮತ್ತೊಂದು ಮಹಾ ನಗರ ಸ್ಯಾನ್ ಫ್ರಾನ್ಸಿಸ್ಕೋ. ಇಲ್ಲಿನ ಗೋಲ್ಡನ್ ಗೇಟ್ ಬ್ರಿಡ್ಜ್ ವಿಶ್ವ ಪ್ರಸಿದ್ಧ. ಇದಲ್ಲದೆ ಗೋಲ್ಡನ್ ಗೇಟ್ ಪಾರ್ಕ್, ವಸ್ತು ಸಂಗ್ರಹಾಲಯಗಳು, ಸಮುದ್ರ ತೀರಗಳು ಹೀಗೆ ಅನೇಕ ನೋಡಬಹುದಾದ ಸ್ಥಳಗಳಿವೆ. ಕ್ಯಾಲಿಫೋರ್ನಿಯಾದಲ್ಲಿ ಸ್ಯಾಂಡಿಯಾಗೋ ಎಂಬ ಮತ್ತೊಂದು ನಗರವಿದೆ.

ಇದಲ್ಲದೆ ಅಮೆರಿಕಾದಲ್ಲಿ, ಫಿಲಡೆಲ್ಫಿಯಾ, ಷಿಕಾಗೊ, ಸೀಯಾಟಲ್, ವಾಷಿಂಗ್ಟನ್ ಡಿ.ಸಿ, ಹೂಸ್ಟನ್, ಲಾಸ್ ವೇಗಸ್, ಫಿನಿಕ್ಸ್, ಚಾರ್ಲೆಟ್, ಅಟ್ಲಾಂಟಾ, ಬಾಸ್ಟನ್, ಹೀಗೆ ನಲವತ್ತಕ್ಕೂ ಹೆಚ್ಚು ಮಹಾ ನಗರಗಳಿವೆ. ಎಲ್ಲಾ ನಗರಗಳಲ್ಲೂ ನೋಡ ಸಿಗಲು ಅನೇಕ ಸ್ಥಳಗಳಿವೆ. ಎಲ್ಲಾ ನಗರಗಳಲ್ಲಿಯೂ ಜನ ಸಂದಣಿ ಹೆಚ್ಚಿದ್ದರೂ ಬಹುತೇಕ ನಗರಗಳು ಕಸರಹಿತವಾಗಿವೆ. ಎಲ್ಲಾ ನಗರಗಳಿಗೂ ಒಳ್ಳೆಯ ಆದಾಯವಿದೆ. ಆದ್ದರಿಂದ ಎಲ್ಲ ನಗರಗಳೂ ಚನ್ನಾಗಿ ಬೆಳೆದಿವೆ.

ನಗರಗಳು ಅಲ್ಲದೆ ಅಮೇರಿಕಾದಲ್ಲಿ ನೋಡಲು ಬೇರೆ ಬೇರೆ ಉತ್ತಮ ಸ್ಥಳಗಳಿವೆ, ಅವುಗಳಲ್ಲಿ ದೊಡ್ಡ ದೊಡ್ಡ ಪಾರ್ಕ್‌ಗಳು, ನಯಾಗರದಂತಹ ದೊಡ್ಡ ಜಲಪಾತಗಳೂ, ಲೆಕ್ಕ ವಿಲ್ಲದಷ್ಟು ಸಮುದ್ರ ತೀರಗಳೂ, ಪರ್ವತ ಪ್ರದೇಶಗಳು, ವಸ್ತು ಸಂಗ್ರಹಾಲಯಗಳು ಹೀಗೆ ಹತ್ತು ಹಲವಾರು. ಎಲ್ಲ ನಗರಗಳು ದುಬಾರಿ. ಆದರೂ ಅಮೆರಿಕಾದ ಜನ ತುಂಬಾ ಪ್ರವಾಸ ಮಾಡುತ್ತಾರೆ, ಅಮೇರಿಕಾ ಅಲ್ಲದೆ ವಿದೇಶಗಳಿಗೂ ಹೋಗುತ್ತಾರೆ. ಬೇಸಿಗೆಯಲ್ಲಿ ಪ್ರತಿ ವಾರಾಂತ್ಯ ಒಂದಿಲ್ಲೊಂದು ಸ್ಥಳಕ್ಕೆ ಪ್ರವಾಸ ಹೋಗುತ್ತಾರೆ. ಹೀಗೆ ಪ್ರವಾಸೋದ್ಯಮ ದೊಡ್ಡದಾಗಿ ಬೆಳೆದು ನಿಂತಿದೆ.

ಭಾರತದಲ್ಲಿಯೂ ವೀಕ್ಷಿಸಲು ಈಗಾಗಲೇ ಪ್ರಸಿದ್ಧಿ ಹೊಂದಿರುವ ಜಾಗಗಳ ಜೊತೆ ಮತ್ತೂ ಒಳ್ಳೆಯ ಪ್ರದೇಶಗಳು ಇರುವುದರಿಂದ, ಸರ್ಕಾರ ಅವುಗಳನ್ನು ಅಭಿವೃದ್ಧಿ ಪಡಿಸಿದರೆ ಸರ್ಕಾರದ ಆರ್ಥಿಕತೆಗೂ ಸಹಾಯವಾಗುತ್ತದೆ, ಜನರ ಪ್ರವಾಸಕ್ಕೆ ಒಳ್ಳೆಯ ಸ್ಥಳಗಳೂ ಸಿಗುತ್ತವೆ.