ಶಾಲೆಯ ಮಕ್ಕಳ ಮೊಗದಲ್ಲೂ ಈಗ ಮೊದಲಿನ ಗೆಲುವಿರಲಿಲ್ಲ. ದಿನದಿನವೂ ಪೋಲೀಸರು ಬರುವುದು, ಅವರಿವರನ್ನು ವಿಚಾರಿಸದೇ ಕರೆದುಕೊಂಡು ಹೋಗುವುದು, ಜೈಲಿನಲ್ಲಿ ವಿಚಾರಣೆಯ ನೆಪದಲ್ಲಿ ಹೊಡೆಯುವುದು, ಬಡಿಯುವುದು, ಅವರನ್ನು ಬಿಡಿಸಲು ಮನೆಮಂದಿಯೆಲ್ಲರೂ ಮನೆಯೊಳಗಿದ್ದ ಚೂರುಪಾರು ಭತ್ತ, ಅಕ್ಕಿ, ತೆಂಗಿನಕಾಯಿಗಳ ದಾಸ್ತಾನುಗಳನ್ನು ಬಿಡಿಗಾಸಿಗೆ ಮಾರಿ ದುಡ್ಡು ಹೊಂದಿಸುವುದು ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು. ಎಲ್ಲವನ್ನೂ ಸಂಯಮದಿಂದ ನೋಡುತ್ತಿದ್ದ ಗೌಡಾ ಮಾಸ್ರ‍್ರು ಮಾತ್ರ ‘ಕಡೆಗಣಿಸಿದ ಕಿಡಿ ಮನೆಯನ್ನೇ ಸುಟ್ಟಿತು’ ಎಂಬ ಪಾಠವನ್ನು ಮನಮುಟ್ಟುವಂತೆ ಮಕ್ಕಳಿಗೆ ಮಾಡುತ್ತಿದ್ದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ
ಹೊಳೆಸಾಲಿನಲ್ಲಿ ಹಿಂಸೆಯೆಂಬುದು ಅನೂಚಾನವಾಗಿ ನಿಷೇಧಿಸಲ್ಪಟ್ಟ ವಿಷಯವಾಗಿತ್ತು. ಗದ್ದೆ ಊಳಲು ಕೊಸರುವ ಎತ್ತುಗಳಿಗೆ ಬಾಸುಂಡೆ ಬರುವಂತೆ ಹೊಡೆದರೂ ಮನೆಗೆ ಮರಳಿದ ಕೂಡಲೇ ತೆಂಗಿನ ಎಣ್ಣೆ ಸವರಿ ತಮ್ಮ ಕೆಲಸಕ್ಕೆ ಪಶ್ಚಾತ್ತಾಪ ಪಡುತ್ತಿದ್ದರು. ಅಲ್ಲೆಲ್ಲೋ ತಮ್ಮ ಹೊಲದ ಪೈರನ್ನು ತಿಂದಿತೆಂದು ಎತ್ತಿನ ಬಾಲ ಕಡಿದ ಕೈಗಳಿಗೆ ದಿನವೂ ಶಾಪ ಹಾಕುತ್ತಿದ್ದರು. ಬೇಲಿ ಹಾರುವ ತುಡುಗು ಗೂಳಿಗಳ ಕಾಟಕ್ಕೆ ಕಡಿವಾಣ ಹಾಕಲು ಅವುಗಳ ಕುತ್ತಿಗೆಗೊಂದು ಕುಂಟೆಯನ್ನು ಕಟ್ಟುತ್ತಿದ್ದರಾದರೂ ಅದರ ಸ್ವಭಾವ ಒಂಚೂರು ಮೆದುವಾಯಿತೆಂದು ಅನಿಸಿದರೂ ಸಾಕು, ಕಟ್ಟಿದ ಕುಂಟೆಯನ್ನು ಬಿಚ್ಚುತ್ತಿದ್ದರು. ಹೀಗೆಲ್ಲ ಇರುವ ಊರಿನಲ್ಲಿ ಹಾಡುಹಗಲೇ ಕೊಲೆಯೊಂದು ನಡೆದುಹೋಗುವುದೆಂದು ಯಾರೊಬ್ಬರೂ ಊಹಿಸಿರಲಿಲ್ಲ, ಅದೂ ಒಂದು ಕ್ಷುಲ್ಲಕ ಕಾರಣಕ್ಕಾಗಿ.
ಅಂದು ಸಂಜೆ ನೀಲಿ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಹೊಳೆಯಂಚಿನ ಗದ್ದೆಯ ತುಂಬಾ ಜನರು ಸೇರಿದ್ದರು. ನೂಕು ನುಗ್ಗಲಿನ ನಡುವೆ ಏರು ದನಿಯಲ್ಲಿ ಜಗಳ ನಡೆಯುತ್ತಿದ್ದುದು ಕೇಳುತ್ತಿತ್ತು. ಶಾಲೆಯಿಂದ ಬರುತ್ತಿದ್ದ ಹುಡುಗರೆಲ್ಲರೂ ಆ ಕಡೆಗೆ ನಡೆದರಾದರೂ ಅಲ್ಲಿ ಏನು ನಡೆಯುತ್ತಿದೆಯೆಂಬುದು ಕಾಣದಷ್ಟು ಜನಸಂದಣಿ ತುಂಬಿತ್ತು. ನೀಲಿ ಅಲ್ಲಿಯೇ ನಿಂತಿದ್ದ ಜಟ್ಟಿಯ ಅಂಗಿಯನ್ನು ಜಗ್ಗಿ, “ಏನಾಗ್ತಿದೆ ಇಲ್ಲಿ?” ಎಂದು ಕಣ್ಣರಳಿಸಿ ಕೇಳಿದಳು. ಯಾವಾಗಲೂ ಪ್ರೀತಿಯಿಂದ ಮಾತಾಡುವ ಜಟ್ಟಿ ಆ ದಿನ ಮಾತ್ರ, “ಸಾಲಿ ಮಕ್ಕಳಿಗೆಲ್ಲ ಊರಿನ ಉಸಾಬರಿ ಯಾಕೆ? ಸುಮ್ಮನೆ ಮನೆಗೋಗಿ” ಎಂದು ಗದರಿದ್ದ. ಇಲ್ಲೇನೋ ಬೇಡವಾದದ್ದು ನಡೆಯುತ್ತಿದೆಯೆಂದು ಅರಿವಾದ ನೀಲಿ ಅಲ್ಲಿಂದ ಮನೆಯ ದಾರಿ ಹಿಡಿದಿದ್ದಳು.
“ನೀನು ನಿನ್ನ ಅಪ್ಪನಿಗೆ ಹುಟ್ಟಿದವನೇ ಆದರೆ ನಮ್ಮ ಕಾದಗೆಯ ನೀರನ್ನು ಮುರಿ ನೋಡುವ” ಎಂದು ಅಬ್ಬರಿಸಿದ್ದ ಮಂಜು. “ಅಪ್ಪನಿಗೆ ಹುಟ್ಟಿದ್ನೋ ಇಲ್ವೋ ಇವತ್ತು ತೋರಿಸಿಯೇಬಿಡ್ತೆ.” ಎನ್ನುತ್ತಾ ಹಾರೆ ಹಿಡಿದು ನೀರನ್ನು ತಮ್ಮ ಕೇರಿಯ ಕಾದಗೆಗೆ ಮುರಿಯಲು ಮುಂದಾದ ಚಂದ್ರು. “ಬ್ಯಾಡಾ, ನೀರು ಮುರಿದ್ರೆ ನಿನ್ನಿವತ್ತು ಹುಟ್ಟಲಿಲ್ಲ ಅನಿಸಿಬಿಡ್ತೆ.” ಎಂದು ಎಚ್ಚರಿಸಿದ ಮಂಜು. ಕುಡಿದ ಮತ್ತಿನಲ್ಲಿದ್ದ ಇವನೇನು ಮಾಡಿಯಾನೆಂದು ಬಗ್ಗಿ ನೀರಿನ ಹರಿವನ್ನು ತಿರುಗಿಸಲು ಮುಂದಾದ ಚಂದ್ರುವಿನ ತಲೆಗೆ ಕೈಯ್ಯಲ್ಲಿರುವ ದೊಣ್ಣೆಯಿಂದ ಲಟ್ ಎಂದು ಬಾರಿಸಿದ ಮಂಜು. ಕ್ಷಣಮಾತ್ರದಲ್ಲಿ ಅವನ ತಲೆಯೆರಡು ಹೋಳಾಗಿ ಕಾದಗೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಆ ಕ್ಷಣದಲ್ಲಿ ಸುತ್ತ ನಿಂತು ನೋಡುತ್ತಿದ್ದವರೆಲ್ಲ ಅವಾಕ್ಕಾಗಿ ಕೈಗೆ ಸಿಕ್ಕ ವಸ್ತುಗಳಿಂದ ಮಂಜುವಿಗೆ ಬಾರಿಸಿದ್ದರು. ನೀರಿನಲ್ಲಿ ಬಿದ್ದು ಹೊರಳಾಡುತ್ತಿದ್ದ ಅವನೂ ಇನ್ನೇನು ಗಳಿಗೆಯಲ್ಲಿ ಗೊಟಕ್ ಎನ್ನುವಂತಿದ್ದಾಗ ಅಲ್ಲಿಗೆ ಬಂದ ಬೀಣಜ್ಜ ಹೊಡೆಯುತ್ತಿದ್ದವರಿಗೆ ಅಡ್ಡ ನಿಂತು ಅವನನ್ನು ಬಚಾವ್ ಮಾಡಿದ್ದ.
ಮೊದಲಬಾರಿಗೆ ಹೊಳೆಸಾಲಿಗೆ ಪೋಲೀಸರ ಪಡೆಯೇ ಬಂದಿಳಿಯಿತು. ತಲೆಯೊಡೆದು ಬಿದ್ದಿದ್ದ ಚಂದ್ರುವಿನ ಹೆಣವನ್ನು ಮನೆಯವರಿಗೂ ಕೊಡದೇ ಹೊತ್ತುಕೊಂಡು ಹೋದಾಗ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಶತಾಯಗತಾಯ ತಮ್ಮೂರಿನ ಹೆಣವನ್ನು ಇಲ್ಲಿಗೆ ತಂದೇತರುತ್ತೇವೆಂದು ಪ್ರತಿಜ್ಞೆಗೈದು ಅವರೊಂದಿಗೆ ಹೊರಟ ತರುಣಪಡೆ ಒದ್ದು ಒಳಗೆ ಹಾಕುತ್ತೇವೆಂಬ ಪೋಲೀಸರ ಬೆದರಿಕೆಗೆ ಹೆದರಿಕೊಂಡು ತಲೆತಗ್ಗಿಸಿ ಮರಳಿತ್ತು. ಗಾಯಗೊಂಡ ಮಂಜುವನ್ನೂ ಅವರೇ ಜೀಪಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಹೋಗುವವನಂತೂ ಹೋದ, ಊರ ದೆಯ್ಯ ಪರವೂರ ಪಾಲಾಗಬಾರದೆಂದು ಊರಿನ ಹಿರಿಯರೆಲ್ಲ ಸೇರಿ ಮುಂದಿನ ದಾರಿಯ ಬಗ್ಗೆ ಯೋಚಿಸಿದರು. ಕೇಸು, ಕೋರ್ಟು, ಲಾಯರು ಇದರಲ್ಲೆಲ್ಲ ಪಳಗಿದವನೆಂಬ ಹೆಸರು ಗಳಿಸಿದ್ದ ನೆರೆಯೂರಿನ ಲಕ್ಷ್ಮಣನನ್ನು ಕರೆಸಿ ಸಮಾಲೋಚನೆ ನಡೆಸಿದರು. ಹೀಗೇನಾದರೂ ಆಗಿ ಮರಣ ಹೊಂದಿದ್ದರೆ ಅವರ ಸಾವಿನ ಕಾರಣಗಳನ್ನು ತಿಳಿಯಲು ದೊಡ್ಡಾಸ್ಪತ್ರೆಗೆ ತೆಗೆದುಕೊಂಡು ಹೋಗಿ ಸತ್ತವನ ದೇಹವನ್ನು ಸಿಗಿದು ನೋಡುತ್ತಾರೆಂದು ಅವನು ಹೇಳಿದಾಗ ಎಲ್ಲರೂ “ಅಯ್ಯೋ ಸಿವನೇ” ಎಂದು ಆಕಾಶಕ್ಕೆ ಕೈ ಮುಗಿದಿದ್ದರು. ಅಂಥಹ ದೇಹಕ್ಕೆ ಮಾಮೂಲಿಯಾಗಿ ಸ್ನಾನ ಇತ್ಯಾದಿ ಸಂಸ್ಕಾರಗಳನ್ನೆಲ್ಲ ಮಾಡದೇ ಹಾಗೆಯೇ ಸುಡಬೇಕು ಎಂಬುದನ್ನೆಲ್ಲ ಲಕ್ಷ್ಮಣ ಹಿರಿಯರಿಗೆ ವಿವರಿಸಿದ. ಮೊದಲಿಗೀಗ ಸತ್ತವನಿಗೆ ನ್ಯಾಯ ಸಿಗಬೇಕು, ಅವನ ಕೊಲೆ ಮಾಡಿದವನಿಗೆ ಶಿಕ್ಷೆಯಾಗಬೇಕು, ಹಾಗಾಗಬೇಕೆಂದರೆ ವಕೀಲರನ್ನು ಕಟ್ಟಿ ನ್ಯಾಯಾಲಯದಲ್ಲಿ ದಾವೆ ಹೂಡಬೇಕು ಎಂದು ಎಲ್ಲರಿಗೂ ಮನದಟ್ಟು ಮಾಡಿದ. ತಮ್ಮ ಕೈಮೀರಿದ ಸಂಗತಿಗಳಲ್ಲಿ ತಾವೇನೂ ಮಾಡಲಾಗದೆಂದು ಊರ ಹಿರಿಯರೆಲ್ಲರೂ ಹೇಗಾದರೂ ತಮ್ಮೂರಿನ ಹುಡುಗನ ದೇಹವೊಂದು ತಮಗೆ ಸಿಕ್ಕಿದರೆ ಸಾಕೆಂದು ಹೆಣಸುಡಲು ಎಲ್ಲ ತಯಾರಿಯನ್ನು ಮಾಡಿಕೊಂಡು ಕಾಯತೊಡಗಿದರು.
ಸಂಜೆಯ ವೇಳೆಗೆ ಬಿಳಿಯ ಬಟ್ಟೆಯಲ್ಲಿ ಸುತ್ತಿಕೊಂಡಿರುವ ಚಂದ್ರುವಿನ ದೇಹ ಊರೊಳಗೆ ಬಂತು. ಪೋಲೀಸರ ಸುಪರ್ದಿಯಲ್ಲಿಯೇ ಮಂಜುವಿನ ಚಿಕಿತ್ಸೆಯೂ ಮುಂದುವರೆಯಿತು. ಅವನ ಹೇಳಿಕೆಯ ಮೇರೆಗೆ ಊರಿನ ಹತ್ತಾರು ಜನರ ಬಂಧನವೂ ಆಗಿಹೋಯ್ತು. ಭಯದ ವಾತಾವರಣವು ಮರಣಕ್ಕಾಗಿ ಅಳುವುದನ್ನೂ ಮರೆಮಾಚಿಬಿಟ್ಟಿತು. ಒಬ್ಬೊಬ್ಬರು ಒಂದೊಂದು ಬಗೆಯ ಕಥೆಯನ್ನು ಹೇಳುತ್ತಾ ನಡೆದ ವಿದ್ಯಮಾನಕ್ಕೆ ಮತ್ತಿಷ್ಟು ರಂಗು ತುಂಬತೊಡಗಿದರು. ತುಂಬಿದ ಬಸುರಿ ಚಂದ್ರುವಿನ ಹೆಂಡತಿ ಮಾತಿಲ್ಲದವಳಾಗಿದ್ದಳು. ಈಗಷ್ಟೇ ಮಾತನಾಡಲು ಕಲಿತ ಅವನ ಮಗ ದಿನವೂ ಸಂಜೆ ಅಂಗಳದ ತುದಿಯಲ್ಲಿ ನಿಂತು, “ಓ…. ಅಪೊ….. ಬಾಲೊ, ಬಾಲೋ, ಬಾಲೋ….” ಎಂದು ಕರೆಯುವಾಗ ಎಲ್ಲರ ಕರುಳು ಕಿವುಚುತ್ತಿತ್ತು. ಇದೆಲ್ಲದರ ನಡುವೆ ಚಂದ್ರುವಿನ ಪಂಚ ಸಹೋದರರು ಲಕ್ಷ್ಮಣನ ಸಹಾಯದಿಂದ ಕೋರ್ಟಿನಲ್ಲಿ ವಾದ ಮಾಡಲು ಲಾಯರೊಬ್ಬರನ್ನು ಹುಡುಕಿ ಅವನ ಸಾವಿಗೆ ನ್ಯಾಯ ಪಡೆಯಲು ಟೊಂಕ ಕಟ್ಟಿ ನಿಂತರು. ಊರಿನಲ್ಲಿ ತುಸು ಸಿರಿವಂತರಾದ ಮಂಜುವಿನ ಹೆಂಡತಿಯ ಕಡೆಯವರು ತಾವೇನು ಕಡಿಮೆಯೆಂಬಂತೆ ಸ್ವಲ್ಪ ದೊಡ್ಡ ಲಾಯರನ್ನೇ ಗೊತ್ತು ಮಾಡಿ ಮೀಸೆ ತಿರುವಿದರು. ಹೊಳೆಸಾಲಿನ ಜನರೆಲ್ಲರೂ ತಮಗರಿವಿಲ್ಲದಂತೆ ಎರಡು ಬಣಗಳಾಗಿ ಒಡೆದುಹೋಗತೊಡಗಿದರು.
ಈ ಬಿರುಕು ಇದ್ದಕ್ಕಿದ್ದಂತೆ ಬಂದುದಲ್ಲವಾಗಿತ್ತು. ಊರಿನ ಗದ್ದೆಗಳೆಲ್ಲ ಹಂಚಿನ ಮಣ್ಣಿನ ದಾಸ್ತಾನುಗಳಾಗಿ ಕಾಣುವ ಮೊದಲು ಕೃಷಿಕಾರ್ಯಗಳು ನಡೆಯಬೇಕೆಂದರೆ ಊರಿನವರೆಲ್ಲ ಒಗ್ಗಟ್ಟಿನಲ್ಲಿ ಸೇರಿ ತೀರ್ಮಾನಗಳನ್ನು ಮಾಡಬೇಕಿತ್ತು. ಹೊಳೆಗೆ ಕಟ್ಟು ಹಾಕುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಿತ್ತು. ಯಾರಾದರೊಬ್ಬರ ಬಿತ್ತನೆಯ ಬೀಜ ಕೈಕೊಟ್ಟಿತೆಂದರೆ ಉಳಿದವರೆದುರು ಅಗೆಸಸಿಗಾಗಿ ಕೈಯ್ಯೊಡ್ಡಲೇಬೇಕಿತ್ತು. ಇನ್ಯಾರದ್ದೋ ಎತ್ತು ಖಾಯಿಲೆ ಬಿದ್ದು ಸತ್ತಿತೆಂದರೆ ಬೇರೆಯವರಿಂದ ಹೂಟಿಯ ಎತ್ತುಗಳನ್ನು ಎರವಲು ಪಡೆಯಬೇಕಿತ್ತು. ಇಡೀ ಬಯಲಲ್ಲಿ ಒಂದೆರಡು ಗದ್ದೆ ಬರಡು ಬಿಡಬಾರದೆಂದು ಅಸಹಾಯಕರ ಗದ್ದೆಗಳನ್ನೂ ತಾವೇ ಹೂಟಿಮಾಡಿ ನೆಟ್ಟಿಗೆ ಸಿದ್ಧಗೊಳಿಸುವ ಉದಾರತೆ ಎಲ್ಲರಲ್ಲಿಯೂ ಇತ್ತು. ಕೊಯ್ಲಿನ ಸಮಯದಲ್ಲಿ ಅನಿರೀಕ್ಷಿತವಾಗಿ ಮಳೆ ಬಂದರಂತೂ ಪೈರು ಒದ್ದೆಯಾಗದಂತೆ ಎಲ್ಲರೂ ಬಂದು ಸಹಕರಿಸುತ್ತಿದ್ದರು. ಭತ್ತದ ಬೇಸಾಯವೆಂದರೆ ಅದು ಒಗ್ಗಟ್ಟಿನ ಕೆಲಸವಾಗಿತ್ತು. ಯಾವಾಗ ಕೃಷಿ ಕೆಲಸಗಳು ನಿಂತುಹೋದವೋ ಆಗಲೇ ಎಲ್ಲರನ್ನೂ ಬೆಸೆದ ಕೊಂಡಿಯೊಂದು ಕಳಚಿಕೊಂಡಿತ್ತು.
ಹೆಂಚಿನ ಮಣ್ಣಿನ ಲಾರಿಗಳು ಗದ್ದೆಯ ಅಂಟು ಮಣ್ಣನ್ನು ಮಾತ್ರವಲ್ಲ, ಜನರ ನಡುವಿನ ಬಂಧವನ್ನೂ ಕಿತ್ತುಕೊಂಡು ಹೋಗಿದ್ದರು. ಹೆಚ್ಚಿನ ಮನೆಯ ಛಾವಣಿಯೆಲ್ಲ ಈಗ ಹೆಂಚಿನದಾಗಿದ್ದು ಮಾಡು ಹೊದೆಸಲೆಂದು ಜನರೆಲ್ಲ ಸೇರುವುದೂ ನಿಂತುಹೋಗಿತ್ತು. ಮಣ್ಣು ಸಾಗಿಸಿದ ನಂತರ ಗುಡ್ಡದ ಮಣ್ಣನ್ನು ತುಂಬಿಸಿ ಗದ್ದೆಯನ್ನು ಮೊದಲಿನಂತೆ ಮಾಡುತ್ತೇನೆಂದು ಭರವಸೆ ನೀಡಿದವರು ಮಾತಾಡಿದವರ ಕೈಗಿಷ್ಟು ಕಾಸು ತುರುಕಿ ಮಾಯವಾಗಿದ್ದರು. ಒಗ್ಗಟ್ಟಾಗಿ ಪ್ರಶ್ನಿಸಿದವರಿಗೆ ಅವರ ಮೇಲೆ ಇವರು, ಇವರ ಮೇಲೆ ಅವರು ಗೂಬೆ ಕೂರಿಸಿ ಪಾರಾಗಿದ್ದರು. ಫಲವತ್ತಾದ ಮೇಲುಮಣ್ಣನ್ನು ಕಳಕೊಂಡ ಭೂಮಿಯಲ್ಲಿ ಇನ್ನು ಭತ್ತ ಬೆಳೆಯುವುದಂತೂ ಕನಸಿನ ಮಾತಾಗಿತ್ತು. ಜತೆಯಲ್ಲಿ ಊರಿಗೆ ಬಂದ ಕರೆಂಟು ಹೊಳೆಯಿಂದ ನೀರನ್ನು ಹೀರಿ ಊರತುಂಬಾ ಹರಿಸತೊಡಗಿತ್ತು. ಪರವೂರಿನ ಸೊಗಸನ್ನು ನೋಡಿ ಬಂದ ಯುವಕರ ಪಡೆ ತಮ್ಮ ಪಾಡಿಗೆ ತಾವು ಬೆಳೆಸಿಕೊಂಡು ಆರಾಮವಾಗಿರಬಹುದಾದ ಅಡಿಕೆ ತೋಟದ ಕನಸಿನಲ್ಲಿ ಮುಳುಗಿತ್ತು. ಹಾಗಾಗಿ ಅವರಿಗರಿವಿಲ್ಲದೇ ದ್ವೀಪದಂತಿರುವ ಹೊಳೆಸಾಲಿನ ಮನೆಗಳೆಲ್ಲವೂ ನಡುನೀರಿನಲ್ಲಿ ತೇಲುವ ನಡುಗಡ್ಡೆಗಳಾಗತೊಡಗಿದವು.
ಹೀಗಿರುವಾಗಲೂ ಚಂದ್ರು, ಮಂಜು ಮೊದಲಾದವರ ಕೆಲವು ಗದ್ದೆಗಳು ದಾರಿಯಿಲ್ಲದ ಕಾರಣಕ್ಕಾಗಿ ಗದ್ದೆಗಳಾಗಿಯೇ ಉಳಿದುಕೊಂಡಿದ್ದವು. ಕೃಷಿ ಮಾಡುವ ಅನಿವಾರ್ಯತೆಗಾಗಿ ನಾಲ್ಕಾರು ಮನೆಯವರು ಮಾತ್ರವೇ ಸೇರಿ ಹೊಳೆಗೆ ಒಂದೆರಡು ಕಡೆಗಳಲ್ಲಿ ತಾತ್ಕಾಲಿಕ ತಡೆಗಳನ್ನು ನಿರ್ಮಿಸಿಕೊಂಡು ನೀರಾವರಿಯನ್ನು ನಡೆಸುತ್ತಿದ್ದರು. ನೀರೆತ್ತುವ ಮಶೀನುಗಳಿಂದ ಬರಿದಾದ ಹೊಳೆಯ ಒಡಲು ತುಂಬುವುದೇ ಅಪರೂಪವಾಗಿರುವಾಗ ನೀರು ಹರಿಸುವುದಕ್ಕೆ ಜಗಳಗಳಾಗುವುದೂ ಸಾಮಾನ್ಯವಾಗಿತ್ತು. ದಿನಬೆಳಗಾದರೆ ತಮ್ಮ ನೀರನ್ನು ಅವರು ಕದ್ದರೆಂದು, ಅವರ ನೀರನ್ನು ಇವರು ಹರಿಸಿಕೊಂಡು ಹೋದರೆಂದು ತಕರಾರುಗಳು ನಡೆಯುವುದು ಮಾಮೂಲಿಯಾಗಿಹೋಗಿತ್ತು. ತೋಟ ಮಾಡಿಕೊಂಡು ಆರಾಮ ಇರುವವರೆಲ್ಲರೂ ಇವರ ನಡುವಿನ ಜಗಳಕ್ಕೆ ತಾವೊಂದಿಷ್ಟು ಮಸಾಲೆ ಬೆರಸುತ್ತ ಕಾಲಕಳೆಯುತ್ತಿದ್ದರು. ಇಂಥದ್ದೇ ಒಂದು ನೀರಿನ ಜಗಳ ಸಾವಿನಲ್ಲಿ ಅಂತ್ಯಗೊಂಡಿತ್ತು.
ಶಾಲೆಯ ಮಕ್ಕಳ ಮೊಗದಲ್ಲೂ ಈಗ ಮೊದಲಿನ ಗೆಲುವಿರಲಿಲ್ಲ. ದಿನದಿನವೂ ಪೋಲೀಸರು ಬರುವುದು, ಅವರಿವರನ್ನು ವಿಚಾರಿಸದೇ ಕರೆದುಕೊಂಡು ಹೋಗುವುದು, ಜೈಲಿನಲ್ಲಿ ವಿಚಾರಣೆಯ ನೆಪದಲ್ಲಿ ಹೊಡೆಯುವುದು, ಬಡಿಯುವುದು, ಅವರನ್ನು ಬಿಡಿಸಲು ಮನೆಮಂದಿಯೆಲ್ಲರೂ ಮನೆಯೊಳಗಿದ್ದ ಚೂರುಪಾರು ಭತ್ತ, ಅಕ್ಕಿ, ತೆಂಗಿನಕಾಯಿಗಳ ದಾಸ್ತಾನುಗಳನ್ನು ಬಿಡಿಗಾಸಿಗೆ ಮಾರಿ ದುಡ್ಡು ಹೊಂದಿಸುವುದು ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು. ಎಲ್ಲವನ್ನೂ ಸಂಯಮದಿಂದ ನೋಡುತ್ತಿದ್ದ ಗೌಡಾ ಮಾಸ್ರ‍್ರು ಮಾತ್ರ ‘ಕಡೆಗಣಿಸಿದ ಕಿಡಿ ಮನೆಯನ್ನೇ ಸುಟ್ಟಿತು’ ಎಂಬ ಪಾಠವನ್ನು ಮನಮುಟ್ಟುವಂತೆ ಮಕ್ಕಳಿಗೆ ಮಾಡುತ್ತಿದ್ದರು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.