ಜೀವನದ ಘಟನೆಗಳು ನಮ್ಮಿಬ್ಬರಲ್ಲಿ ಸಾಮ್ಯವನ್ನು ತೋರಿಸಿದ್ದರೂ, ಮಾನಸಿಕವಾಗಿ ನಾವಿಬ್ಬರೂ ಒಂದೊಂದು ಧ್ರುವ. ಆದರೂ ಯಾವದೋ ಆಕರ್ಷಣ ಶಕ್ತಿ ನಮ್ಮಿಬ್ಬರನ್ನು ಬಂಧಿಸಿಬಿಟ್ಟಿದೆ. ಇವನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ ಎಂದು ಎಷ್ಟೋ ಸಲ ಅನ್ನಿಸಿದ್ದರೂ; ಡಾಕ್ಟರರ ಔಷಧದಂತೆ, ನನ್ನ ಕಣಕಣದಲ್ಲಿ ತನ್ನ ಪ್ರಭಾವ ಬೀರಿ, ನನ್ನ ಒಳಗಿನ ಕೋಟೆಯನ್ನು ನನಗರಿಯದಂತೆಯೇ ತನ್ನ ವಶಪಡಿಸಿಕೊಂಡಿದ್ದಾನೆ. ಕೊನೆಗೊಂದು ದಿನ ಎಲ್ಲಿ ಅವನ ವಿಚಾರ ಪ್ರವಾಹಗಳ ಸೆಳವಿನಲ್ಲಿ ಸಿಕ್ಕು ನಾನು ಕೊಚ್ಚಿ ಹೋಗುವೆನೋ ಎಂದು ಭಯಪಡುತ್ತೇನೆ.
ಮೊನ್ನೆ ಶುಕ್ರವಾರದಂದು ತೀರಿಕೊಂಡ ಕನ್ನಡದ ಅಪರೂಪದ ಕತೆಗಾರ ಡಾ. ರಾಜಶೇಖರ ನೀರಮಾನ್ವಿ ಅವರ ಪ್ರಸಿದ್ಧ ಕತೆ “ಹಂಗಿನರಮನೆಯ ಹೊರಗೆ” ನಿಮ್ಮ ಓದಿಗೆ

ನೋವು ಹೆಚ್ಚಾಗಿ ಅದೇ ಜೊಂಪು ಹತ್ತಿದ್ದ ನನಗೆ ಎಚ್ಚರವಾಯಿತು. ಕಣ್ಣು ತೆರೆದು ನೋಡಿದೆ. ಯಾರೂ ಇರಲಿಲ್ಲ. ಮಗ್ಗುಲಿಗೆ ಹೊರಳಿ ಕಣ್ಣುಮುಚ್ಚಿದೆ. ಅಪ್ಪ ಹೊರಗೆ ಯಾರೊಡನೆಯೋ ಮೆಲುದನಿಯಲ್ಲಿ ಮಾತನಾಡುತ್ತಿದ್ದಂತಿತ್ತು.

“ಏನನ್ನ ಅನ್ನಿ ಈ ಜಡ್ಡು ಇಷ್ಟು ಬಲಕೊಂಬೋತನಕ ಬಿಡಬಾರದಿತ್ತು.” ಕೇಳುತ್ತಿದ್ದ ವ್ಯಕ್ತಿ “ನಾ ಇನ್ನ ಏನು ಮಾಡ್ಲಿರಿ, ತನ ಬ್ಯಾನಿ ತನಗೆ ಗೊತ್ತಾಗ್ದಾರ್ದ ಇರುವಾತಗ ನಾವೇನು ಮಾಡಬೇಕು? ಕಲತೋರು ನಮಗಿಂತ ಶಾಣ್ಯರು ಅಂಬೋದೇ ತಲೆತುಂಬ ತುಂಬಿಕೊಂಡಿರೋರಿಗೆ ಏನು ಹೇಳಬಹುದು? ಇವನ ಕಾಳಿಜ್ಯಾಗ ಇತ್ತಿತ್ತಾಗ ನಿದ್ದಿನ ಇಲ್ಲ, ಊಟ ಇಲ್ಲ…”

ಅಪ್ಪನ ಮಾತು ಕೇಳಿ ಆತನ ಮೇಲೆ ಮರುಕ ಇನ್ನೂ ಹೆಚ್ಚಿತು.

“ಅಪ್ಪ ಈ ಪರಿಸ್ಥಿತಿಗೆ ನನ್ನನ್ನು ತಂದಾತನೇ ನೀನು” ಎಂದು ಜೋರಾಗಿ ಕೂಗಬೇಕೆನಿಸಿತು. ಯಾವಾಗಲೂ ತನ್ನ ಹಿರಿಮೆಯನ್ನೇ ಮೆರೆಸುವ ಅಪ್ಪ, ನನಗೆ ಜಡ್ಡಾದ ಈಗಲೂ ಅದನ್ನೇ ಮಾಡುತ್ತಿದ್ದಾನೆ. ಹುಟ್ಟಿದ ದಿನದಿಂದ ಇಲ್ಲಿಯವರೆಗೆ ನನ್ನನ್ನು ಧೂಳಿಯ ಕಣಕ್ಕಿಂತಲೂ ಕಡೆಯಾಗಿ ಕಂಡ ಅಪ್ಪ, ಈಗ ಕೊನೆಯಂಕದ ಪಾತ್ರವನ್ನು ಚೆನ್ನಾಗಿ ಆಡಿ ಎಲ್ಲರಿಂದಲೂ ಶಹಬಾಷ್‌ ಗಿರಿ ಪಡೆದುಕೊಳ್ಳುತ್ತಿದ್ದಾನೆ.

ಯಾಕೋ ಏನೋ ಅಪ್ಪನಿಗೂ ನನಗೂ ಮೊದಲಿನಿಂದಲೂ ಸರಿ ಬರಲಿಲ್ಲ. ಹುಡುಗನಿದ್ದಾಗ ಬೆತ್ತದಿಂದ ಬಡಿದು, ಕಿವಿಹಿಂಡಿ, ಮೂಲ ದಂಡಿಗೆಗೆ ಹಾಕಿ ಓನಾಮ ಕಲಿಸಿದ ಅಯ್ಯನವರ ಚಿತ್ರ ನನ್ನ ಬಗೆಗಣ್ಣಿನೆದುರು ಬದಲಾದರೂ; ಅಪ್ಪನ ಚಿತ್ರ ಮಾತ್ರ ಬದಲಾಗಲಿಲ್ಲ. ಅಕಾರಣ ಕೋಪ, ಯಾವುದು ಮಾಡಿದರೆ ಸರಿ, ಯಾವುದ ಮಾಡಿದರೆ ತಪ್ಪು ಎಂದು ಪ್ರತಿಯೊಂದು ಕೆಲಸವನ್ನು ವಿಚಾರಮಾಡಿ, ಮಾಡಿ ಮುಗಿಸಿದ ಮೇಲೂ ಅದರ ಪರಿಣಾಮ ಈತನ ಮೇಲೆ ಇಂತಹುದೇ ಆಗುವದೆಂದು ಹೇಳಲು ಬರುವದೇ ಇಲ್ಲ. ಕೆಲವು ಸಲ ಹೊಗಳಿ ಕೊಂಡಾಡಿದರೆ, ಬಹಳ ಸಲ ಬೈದು ಮೂದಲಿಸುತ್ತಾನೆ. ಇತ್ತೀಚೆಗೆ ಆದ ಬದಲಾವಣೆ ಎಂದರೆ ಮೊದಲು ಬಡಿಯುತ್ತಿದ್ದ, ದೊಡ್ಡವನಾಗಿರುವೆನೆಂದು ಈಗ ಬೈಯುತ್ತಾನೆ ಅಷ್ಟೆ.

ಇಂತಹ ವಿಚಾರಗಳನ್ನು ಅಪ್ಪನ ಬಗೆಗೆ ಮಾಡುವದು ಕ್ಷುಲ್ಲಕತನವಲ್ಲವೇ ಅನಿಸುತ್ತದೆ. ಈಗಲ್ಲ ನನಗೆ ತಿಳುವಳಿಕೆ ಬಂದಾಗಿನಿಂದ ಈ ಕ್ಷುಲ್ಲಕತನದೊಂದಿಗೆ ಹೋರಾಡುತ್ತಿದ್ದೇನೆ. ನಾನು ಗೆದ್ದಿಲ್ಲ. ಅದು ಸೋತಿಲ್ಲ. “ಅಪ್ಪ ನಿನ್ನೆ ಕನಸಿನಲ್ಲಿ ನಿನ್ನ ಹೆಣ ಕಂಡಿದ್ದೆ” ಎಂದು ಯಾರೋ ಬರೆದ ಕವನ ಓದಿದಾಗ, ಈ ರೀತಿಯ ಹೋರಾಟ ನಡೆಸಿದವನು ನಾನೊಬ್ಬನೇ ಅಲ್ಲ ಎಂದುಕೊಂಡು ಸಮಾಧಾನಪಟ್ಟಿದ್ದೇನೆ. ನಾನು ಬೆಳೆದಂತೆಲ್ಲಾ, ನನ್ನಲ್ಲಿಯ ನಾನು ಬೆಳೆಂದತೆಲ್ಲಾ; ಯಾವದಾದರೂ ದೊಡ್ಡದನ್ನು ತೋರಿಸಿ ನನ್ನನ್ನು, ನನ್ನಲ್ಲಿಯವನನ್ನು ಸಣ್ಣವನನ್ನಾಗಿ ಮಾಡುತ್ತಾನೆ ಅಪ್ಪ. ಅದಾವದೂ ಸಿಕ್ಕದಿದ್ದಾಗ ಯಾವದೋ ತಪ್ಪು ಹುಡುಕಿ, “ಓದಿ, ಕಲಿತು ನಮಗಿಂತಲೂ ತಿಳುವಳಿಕೆ ಪಡೆದವರು ನೀವು” ಎಂದು ಮೂದಲಿಕೆ. ತನಗಿಂತಲೂ ನಾನು ಹೆಚ್ಚು ಓದಿದ್ದು ತಪ್ಪೇನು? ಇದ್ದದ್ದನ್ನು ನೋಡಿ ಸಂತೋಷಪಡುವುದಕ್ಕಿಂತ ಇಲ್ಲದ್ದನ್ನು ಕಂಡು ಕರುಬುವದೇ ಹೆಚ್ಚಾಯಿತು…

ಜನರಲ್ ವಾರ್ಡಿನಲ್ಲಿದ್ದ ಯಾವನೋ ನೋವು ಹೆಚ್ಚಿ ಕಿರುಚಲಾರಂಭಿಸಿದ್ದ… ನರ್ಸ್ ಬಂದು ಟೆಂಪರೇಚರ್ ನೋಡಿ ಚಾರ್ಟಿನಲ್ಲಿ ಬರೆದು ಮುಗುಳುನಕ್ಕು ಹೋದಳು. ಈ ಮುಗುಳು ನಗೆಯೂ ಅವಳ ಡ್ಯೂಟಿಯ ಒಂದು ಭಾಗ.

ಅವಳ ನಗೆ ಯಾವದೋ ಒಂದು ಭಾವನೆಯನ್ನು ಬಡಿದೆಬ್ಬಿಸಿತು. ಎಲ್ಲವೂ ಒಂದು ವ್ಯಾಪಾರ. ಯಾಕೋ ತಿಳುವಳಿಕೆ ಮೂಡಿದಾಗಿನಿಂದ ದಿನಕ್ಕೆಷ್ಟು ಅಂಜುಗುಳಿತನ ಹೆಚ್ಚುತ್ತಿದೆ. ನಾನು ಇನ್ನು ಒಂದೆರಡು ಶತಮಾನ ತಡೆದು ಹುಟ್ಟಿದ್ದರಾಗುತ್ತಿತ್ತೇನೋ.

ಸ್ವಾತಂತ್ರ್ಯವಿಲ್ಲದ ಜೀವ ಬದುಕಿದ್ದರೆಷ್ಟು, ಬಿಟ್ಟರೆಷ್ಟು, ಒಂದು ವ್ಯಕ್ತಿಯ ಸುತ್ತಲೂ ಯಾಕಿಷ್ಟು ಬಂಧನ? ತಾನು, ತನ್ನದು, ತನ್ನವರು, ತನ್ನವರೆಂದುಕೊಂಡಿರುವವರು, ಒಂದೇ…

ಹೊರಗೆ ಜನರ ಗದ್ದಲ ಹೆಚ್ಚಾಯಿತು. ನಾಲ್ಕು ಗಂಟೆಯಾಗಿರಬೇಕು. ಇನ್ನು ಎರಡು ತಾಸು ದಿನದ ಮಾಮೂಲು ಜಾತ್ರೆ. ಬಂದ ಜನ ತಮ್ಮ ಯೋಗ್ಯತೆಗೆ ತಕ್ಕಮಟ್ಟಿಗೆ ಕಣ್ಣೀರು ಸುರಿಸಿ, ಅನುಕಂಪ ತೋರಿಸಿ ತಮ್ಮ ಸಜ್ಜನಿಕೆಗೆ ತಾವೇ ಭೂತಕನ್ನಡಿ ಹಿಡಿದು ಸಂತೋಷ ಪಡುವ ಸುಯೋಗ.

ಅಮ್ಮ ತಮ್ಮನೊಡನೆ ಬಂದಳು. ತಮ್ಮ ಫ್ಲಾಸ್ಕು, ಹಣ್ಣುಗಳನ್ನು ಇಟ್ಟು, ಚಾರ್ಟ್ ನೋಡಿ “ಎಲ್ಲಾ ನಾರ್ಮಲ್ ಐತಲ್ಲಣ್ಣ” ಮೆಚ್ಚಿಕೆಯ ಧ್ವನಿಯಲ್ಲಿ ಅಂದ. ಅವನು ಫೈನಲ್ ಎಂ.ಬಿ.ಬಿ.ಎಸ್.

ಅಮ್ಮ ಮಾಮೂಲಿನಂತೆ ಒಂದು ಬಕೀಟು ಕಣ್ಣೀರು ಸುರಿಸಿದಳು. ಅಪ್ಪ ಅದೇ ನೆಪದಿಂದ ಪ್ರತಿದಿನದಂತೆ ಒಳಗೆ ಬಂದು-
“ಆಪರೇಷನ್‌ಗೆ ಇಷ್ಟು ಅಂಜಿಕೊಂತಾರೇನು? ಈಗ ಹೃದಯದ ಅಪರೇಷನ್‌ಗಳೇ ನಡೀತಾವಂತ ಇದಲ್ಲ ಏನು?” ಎಂದು ಹೇಳಿ ಸಮಾಧಾನ ಮಾಡಲೆತ್ನಿಸಿದ. ಆತನಲ್ಲಿ ತನ್ನ ಮಗ ಸಾಯಲಿಕ್ಕಿಲ್ಲ ಎನ್ನುವ ಭಾವನೆಯಿತ್ತು.

“ನಾಳೆ ಮುಂಜಾನೆ ಎಂಟು ಗಂಟೆಗೇನಣ್ಣ ಆಪರೇಶನ್” ಎಂದ ತಮ್ಮ.

ಹೌದೆನ್ನುವಂತೆ ತಲೆಹಾಕಿದೆ.

ಅಮ್ಮನ ಕಣ್ಣಿನ ನೀರಾವರಿ ಇನ್ನು ಮುಂದುವರಿದಿತ್ತು.

ಡಾಕ್ಟರ್ ದಿನ ಭೆಟ್ಟಿಗಾಗಿ ಒಳಗೆ ಬಂದಾಗ, ನೀರು ಹಾಕಿದ ಕೂಡಲೇ ಕಡಿಮೆಯಾಗುವ ಹಾಲಿನ ಉಕ್ಕಿನಂತೆ, ಅಮ್ಮನ ಅಳು ಕಡಿಮೆಯಾಯಿತು.

ಡಾಕ್ಟರ್ ಚಾರ್ಟ್ ನೋಡಿ, ಎದೆ, ಹೊಟ್ಟೆ, ಬೆನ್ನುಗಳ ಮೇಲಿಟ್ಟು ತಮ್ಮ ಸ್ವತಾಸ್ಕೋಪು ಚೆನ್ನಾಗಿ ಕೆಲಸ ಮಾಡುತ್ತಿದೆಯೆಂದು ಖಾತ್ರಿಮಾಡಿಕೊಂಡು-

“Tomorrow by this time you will be all right Mr….” ಅಮ್ಮನಿಗೆ ಧೈರ್ಯಕೊಟ್ಟು ಹೊರಟು ಹೋದರು.

ಅಮ್ಮನ ಅಳು ಹೆಚ್ಚಾದುದರಿಂದಲೋ, ಬಹಳ ಹೊತ್ತು ಆಸ್ಪತ್ರೆಯಲ್ಲಿದ್ದ ಬೇಸರದಿಂದಲೋ ಅಪ್ಪ ಅಮ್ಮನನ್ನು ಕರೆದುಕೊಂಡು ಮನೆಗೆ ಹೋಗುವದಾಗಿ ಹೇಳಿ, ತಮ್ಮನಿಗೆ ಅಷ್ಟು ಹೊತ್ತು ಇರಲು ಸೂಚಿಸಿ ಹೋದ.

“ಅಣ್ಣ ಅತ್ತಿಗಿ ಬಂದಾಳ” ಹೊಸ ಸುದ್ದಿ ಹೇಳುವವನಂತೆ, ತಮ್ಮ, “ಈಗ್ಯಾಕ ಬಂದ್ಲು.”

“ಇದೇನಣ್ಣ ಹಿಂಗ ಕೇಳಿದ್ದೆ. ಇಂಥಾ ಹೊತ್ತಿನ್ಯಾಗ ಇಲ್ಲದ್ರೆ ಮತ್ಯಾವಾಗ ಬರಬೇಕು.”

“ಪೇಣಿ, ಬಂಧು ಬಳಗ ಅಂದ್ರೆ ಸಾಯುವಾಗ ಭೆಟ್ಟಿ ಕೊಡೋದರ ಸಲುವಾಗಿಯೇ ಇದ್ದಾರೇನು? ನಾನು ಸತ್ತದ್ದು ಖಾತ್ರಿ ಮಾಡಿಕೊಂಡು ಹೋಗಬೇಕಂತ…”

ತಮ್ಮ ಬಾಯಿಯ ಮೇಲೆ ಕೈಯಿಟ್ಟು ಮಾತಿಗೆ ತಡೆ ಹಾಕಿದ. ಅವನಿಗೂ ಹಿಂದಿನದೆಲ್ಲಾ ನೆನಪಾಗಿರಬೇಕು, ಹೊರಗೆ ಹೋಗಿಬಿಟ್ಟ.

ಯಾಕೋ ಒಂದು ರೀತಿಯ ಸಂತೋಷದ ಭಾವ ಮನಸ್ಸಿನಲ್ಲಿ ಹಾದು ಹೋಯಿತು. ತಮ್ಮನ ಮನಸ್ಸು ನೋಯಿಸಿದ್ದರೂ ‘ನೋಡಿದೆಯಾ ಹೇಗೆ ಸೇಡು ತೀರಿಸಿಕೊಂಡೆ’ ಎನ್ನುವ ಒಂದು ರೀತಿಯ ವಿಕಟ ಸಂತೋಷವಾಗಿರಬೇಕು. ಅವಳ ಮೇಲಿನ ಸಿಟ್ಟಿನಿಂದ ತಮ್ಮನ ಮನಸ್ಸು ನೋಯಿಸಬೇಕಾಯಿತಲ್ಲಾ ಎಂದು ಒಂದು ಮನಸ್ಸು ಹೇಳಿತು.

ಹೌದು ಇದರಲ್ಲಿ ನನ್ನದೇನು ತಪ್ಪು? ನನಗನ್ನಿಸಿದ್ದನ್ನು ಈ ರೀತಿ ಮುಖಕ್ಕೆ ಹೊಡೆದಂತೆ ಹೇಳಬಾರದು ಎಂದು ಎಷ್ಟು ಪ್ರಯತ್ನಿಸಿದರೂ ಅದು ಹೇಗೋ ನುಸುಳಿ ಮಾತಾಗಿ ಹೊರಬೀಳುತ್ತವೆ ನನ್ನ ಭಾವನೆಗಳು. ನಾನು ಜೀವಿಸುತ್ತಿರುವ ಪರಿಸರದಲ್ಲಿ ನನಗನಿಸಿದಂತೆ ನುಡಿಯಲು, ನಡೆಯಲು ಬದುಕಲು ಸಾಧ್ಯವಿಲ್ಲವೆಂದು ಮನವರಿಕೆಯಾಗಿಯೇ ನಾನು ಈ ಸಮಾಜದಲ್ಲಿ, ಜಗತ್ತಿನಲ್ಲಿ ಬದುಕಲು ಅನರ್ಹ ಎನ್ನುವ ನಿರ್ಣಯಕ್ಕೆ ಬಂದದ್ದು. ಮನಸ್ಸಿನ ಹೃದಯದ ಅನಿಸಿಕೆಗಳಿಗೆ ಓಗೊಡದೆ ಯಾರದೋ ಬಂಧನ, ಯಾವುದೋ ಭಿಡೆಗೊಳಗಾಗಿ ತನ್ನತನವನ್ನು ಅದುಮಿಟ್ಟುಕೊಂಡು; ಯಾರದೋ ನಾಲಿಗೆ, ಯಾವದೋ ಕಣ್ಣು, ಎಂಥದೋ ಕಿವಿಯಾಗಿ, ಮನುಷ್ಯ ತನ್ನತನವನ್ನು ಹಂಚಿಕೊಂಡು ಬಾಳುವವರ ಘಟಕವಾದ ಈ ಜಗತ್ತು, ಸಮಾಜ ನನ್ನ ಪಾಲಿಗಂತೂ ಎಂದೋ ಸತ್ತಂತಾಗಿಬಿಟ್ಟಿದೆ. ಅದಕ್ಕೇ ಈ ಸತ್ತ ಜನಜಂಗುಳಿಯಲ್ಲಿ ಬದುಕಿದವನಾಗಿರುವದಕ್ಕಿಂತ, ಮುಂದೆ ಬದುಕಿರುವ ಸಮಾಜ ನಿರ್ಮಿಸಲು ಸಾಯುವುದು ಲೇಸು…

“ಅತ್ತಿಗಿ ಬರ್ತಾಳಂತ, ಮತ್ತೆ ನನಗಂದಂಗ ಆಕಿಗೂ ಅಂದು ಬಿಟ್ಟಿಯಣ್ಣಾ” ಒಳಗೆ ಬಂದು ತಮ್ಮ ಹೇಳಿದ. ಮುಗುಳ್ನಗುತ್ತಾ ಅವನ ಮುಖ ನೋಡಿದೆ. ತನ್ನಣ್ಣ ಯಾವ ಪರಿಸ್ಥಿತಿಯಲ್ಲಿಯೂ ಹಾಗೆ ಮಾಡಲಾರ ಎನ್ನುವ ಭರವಸೆ ಈ ನೋಟದಿಂದ ಮತ್ತಷ್ಟು ಸ್ಥಿರಪಟ್ಟಿರಬೇಕು. ಯಾವೊದೋ ಔಷಧಿ ತರುವೆನೆಂದು ಹೇಳಿ ಹೋದ.

ನನ್ನನ್ನು ಸಾಯಹಚ್ಚುವ ಕಾರಸ್ಥಾನದಲ್ಲಿ ಈ ಹೆಂಡತಿಯೊಬ್ಬಳು ಮುಖ್ಯ ಪಾತ್ರಧಾರಿ. ಪ್ರೀತಿಸಿದವಳನ್ನು ಬಿಟ್ಟರೂ, ಇದ್ದವಳನ್ನಾದರೂ ಪ್ರೀತಿಸಬೇಕು ಎಂದುಕೊಂಡು ಲಗ್ನವಾದ ತರುಣದಲ್ಲಿಯೇ ನನ್ನ ಹಿಂದಿನ ಕತೆಯನ್ನು ಹೇಳಿದೆ. ಮುಂದೆ ಅದೇ ದೊಡ್ಡ ಗುಡ್ಡವಾಗಿ ನಮ್ಮಿಬ್ಬರ ನಡುವೆ ನಿಲ್ಲಬಾರದೆಂದುಕೊಂಡು, ಅಷ್ಟೇ ಸಾಕಾಯಿತವಳಿಗೆ. ಆಗ ಕೂದಲೆಳೆಗಿಂತಲೂ ಸಣ್ಣದಾಗಿ ಪ್ರಾರಂಭವಾದ ಬಿರುಕು ಬರುಬರುತ್ತಾ ದೊಡ್ಡದಾಗಿ, ದೊಡ್ಡ ಪ್ರಪಾತವೇ ಆಗಿ ಅವಳು ಆ ದಂಡೆ ನಾನು ಈ ದಂಡೆಯಲ್ಲಿರುವಂತೆ ಮಾಡಿತ್ತು. ಈಗ ಆಸ್ಪತ್ರೆಯಲ್ಲಿ ಮಲಗಿರುವಾಗ ನನ್ನ ಮರಣದ ಛಾಯೆ ಸೇತುವೆಯಾಗಿ ಅವಳನ್ನು ಇಲ್ಲಿಗೆ ಕರೆತಂದಿದೆ. ನೋಡಬೇಕು ಇವಳು ತನ್ನ ಪಾತ್ರವನ್ನು ಹೇಗೆ ನಿರ್ವಹಿಸುವಳೋ!

ಈಗ ಅವಳಿಗೆ ಕೊನೆಯ ಸಲ ಹೇಳಿಬಿಡುತ್ತೇನೆ. ಮೊದಲು ಹೇಳಬಾರದ್ದನ್ನೇ ಹೇಳಿದ ಮೇಲೆ, ಈಗ ಹೇಳಲೇಬೇಕಾದುದನ್ನು ಹೇಳದೆ ಬಿಟ್ಟರೆ ಹೇಗೆ. ಕೊನೆಗೂ ಸತ್ಯಸಂಗತಿ ಗೊತ್ತಾಗಿ, ತನ್ನ ಕಿಮ್ಮತ್ತು ಎಷ್ಟು ಎನ್ನುವುದರ ಅರಿವು ಅವಳಿಗಾಗಲಿ.

‘ಎಲೆ ಹೆಣ್ಣೆ, ನಿನ್ನನ್ನು ಮದುವೆಯಾದದ್ದು ನಿನ್ನ ಮುಖ, ಅಂತಸ್ತು ನೋಡಿಯಲ್ಲ. ನಿನ್ನ ಮೇಲಿನ ಪ್ರೀತಿಯಿಂದಲೂ ಅಲ್ಲ. ನೀನು ಈ ಮನೆಗೆ ಕಾಲಿಟ್ಟದ್ದನ್ನು ಮನೆಯ ಹಿರಿಯ ಸೊಸೆಯಾಗಿಯೋ ಅಥವಾ ನನ್ನ ಹೆಂಡತಿಯಾಗಿಯೋ ನಿನ್ನ ಮಾವನನ್ನೇ ಕೇಳಿನೋಡು. ಗಂಡನಾಗಿ ನನ್ನೆಲ್ಲಾ ಕರ್ತವ್ಯಗಳನ್ನು ನಿರ್ವಂಚನೆಯಿಂದ ನಿರ್ವಹಿಸಿದ್ದೇನೆ. ಹಿಂದೆ ಅವಳನ್ನು ಪ್ರೀತಿಸಿದ್ದ, ಇವಳನ್ನು ಒಲಿದಿದ್ದ ಎಂದುಕೊಂಡು, ಗಂಟೆಯ ಶಬ್ದ ಕೇಳಿ ಜೊಲ್ಲು ಸುರಿಸುವ ಪಾವ್ಲೋವನ ನಾಯಿಯಂತೆ ಕುಂಯ್ಗುಟ್ಟಿ ನೀನಾಗಿಯೇ ಮೈಪರಚಿಕೊಂಡರೆ ನಾನೇನು ಮಾಡಲಿ…?’

ಅವಳು ಬಂದಳು. ಒಬ್ಬಳೆ ಬಂದರೆ ಮತ್ತೇನಾಗುವದೋ ಅನ್ನುವ ಅಂಜಿಕೆಯಿಂದ ಗೆಳತಿಯರ ಹಿಂಡನ್ನು ಕಟ್ಟಿಕೊಂಡು ಬಂದಿದ್ದಳು. ಅವರಲ್ಲಿ ಕೆಲವರು ನನ್ನ ಕ್ಲಾಸುಮೇಟುಗಳೂ ಇದ್ದರು. ಯಥಾಪ್ರಕಾರ ಎಲ್ಲರೂ ತಮ್ಮ ಶಕ್ತಾನುಸಾರ ಅನುಕಂಪ, ದುಃಖಗಳನ್ನು ಸೂಚಿಸಿ ಅವಳೊಬ್ಬಳನ್ನೇ ಬಿಟ್ಟು ಹೊರಗೆ ಹೋದರು. ಅವಳು ತನ್ನ ಕರ್ತವ್ಯ ಪೂರೈಸಲೆಂಬಂತೆ ಬದಿಯಲ್ಲಿ ಕುಳಿತು, ಹಣೆಮುಟ್ಟಿ, ಜ್ವರ ಅಳೆದಳು. ಹೊಟ್ಟೆಯ ಮೇಲೆ ಕೈಯಾಡಿಸುತ್ತಾ…

“ನೋವು ಭಾಳ ಐತೇನು?” ಅವಳು ಬಸಿರಿಯರಿಗನ್ನುವಂತೆ.

“ಅಷ್ಟೇನಿಲ್ಲ” ನಾನೂ ಸ್ವಲ್ಪದರಲ್ಲೇ ರಸೀತಿಕೊಟ್ಟೆ.

ಮಲಗಿದ್ದ ನನ್ನ ತಲೆಗೂದಲನ್ನು ನೇವರಿಸುತ್ತಿದ್ದವಳು, ಸ್ವಲ್ಪ ಹೊತ್ತಿನ ನಂತರ ಎದೆಯ ಮೇಲೆ ತಲೆಯಿಟ್ಟು ಅಳಲಾರಂಭಿಸಿದಳು. ನನಗೆ ನಗು ಬಂದಿತು.

“ಬಹಳ ಅಳಬೇಡ ಮನೆಗೆ ಹೋಗಬೇಕಾದರೆ ಮತ್ತೆ ಸ್ನೋ, ಪೌಡರ್ ಹಚ್ಚಬೇಕಾದೀತು” ಎಂದು ಹೇಳಬೇಕೆನಿಸಿತು. ಮುಖದ ತುಂಬ ಬಣ್ಣ ಬಡಿದುಕೊಂಡು ಸಿನಿಮಾದಲ್ಲಿ ಅಳುತ್ತಿರುವ ಮೀನಾಕುಮಾರಿಯ ನೆನಪಾಯಿತು.

ಈ ಅಳು ಹೆಣ್ಣಿನ ದೈವದತ್ತ ಕಲೆ. ಕೆಲವರಿಗೆ ಅದೊಂದು ಫ್ಯಾಷನ್, ಇನ್ನುಳಿದವರಿಗೆ ಅದೊಂದು ರೋಗ.

ಅಮ್ಮ ಎರಡನೇ ಜಾತಿಗೆ ಸೇರಿದವಳು. ಅತ್ತೂ, ಅತ್ತೂ ಕಣ್ಣೀರಿನಲ್ಲಿಯೇ ಎಲ್ಲವನ್ನು ಕರಗಿಸಿಬಿಡುತ್ತಾಳೆ. ಕೆಲವೊಮ್ಮೆ ಅಪ್ಪನು ಕರಗಿ ನನ್ನನ್ನು ಶಿಕ್ಷಿಸದೆ ಬಿಟ್ಟದ್ದೂ ಉಂಟು. ಈ ಅಮ್ಮ ಒಂದು ಕಿರಿ ಕಿರಿ. ಯಾವುದರಲ್ಲಿಯೂ ಬಲು ಅತಿ. ಆಕೆ ನನ್ನನ್ನು ಅಷ್ಟು ಪ್ರೀತಿಸಿ ಮುದ್ದು ಮಾಡಿ ಬೆಳೆಸಿರದಿದ್ದರೆ ನನ್ನಲ್ಲಿ ಇಷ್ಟು ಮೊಂಡುತನವೇ ಬರುತ್ತಿರಲಿಲ್ಲ. ಅಪ್ಪನ ಪ್ರೀತಿಯನ್ನು, ಅಮ್ಮನ ಪ್ರೀತಿಯನ್ನು ಕೂಡಿಸಿ ಸರಾಸರಿ ತೆಗೆದರೆ, ಒಬ್ಬ ಮನುಷ್ಯನಲ್ಲೆಷ್ಟಿರಬೇಕೋ ಅದಕ್ಕಿಂತಲೂ ಹೆಚ್ಚಾಗಿಯೇ ಬರುತ್ತದೆ ಇಬ್ಬರಿಗೂ. ಆದರೆ ಅಮ್ಮ ಈ ವಿಷಯದಲ್ಲಿ ಕ್ಯಾಪಿಟಲಿಸ್ಟ್, ಆಕೆ ಎಲ್ಲವನ್ನೂ ತನ್ನ ಪಾಲಿಗೆ ತೆಗೆದುಕೊಂಡಿದ್ದರಿಂದಲೋ ಏನೋ ಅಪ್ಪ ಯಾವಾಗಲೂ ಕಮ್ಯುನಿಸ್ಟನಂತೆ ಮನೆಯಲ್ಲಿ ಎಲ್ಲರ ವಿರುದ್ಧ ಚಳುವಳಿ ಹೂಡುತ್ತಾನೆ…

ಎದೆಯ ಮೇಲಿನ ತನ್ನ ಮುಖವನ್ನು ತೆಗೆದು ನನ್ನ ಎದೆಭಾರವನ್ನು ಕಡಿಮೆ ಮಾಡಿದಳು. ಅಳುವ ಸ್ಟಾಕು ಮುಗಿದಿರಬೇಕು. ವಿಚಾರಗಳ ಸುಳಿಯಲ್ಲಿ ಅವಳ ಅಸ್ತಿತ್ವ ಕೊಚ್ಚಿಹೋಗಿತ್ತು. ಇವಳಲ್ಲಿ ಆಕರ್ಷಣೆ ನನ್ನ ಎಣಿಕೆಗೆ ಮೀರಿ ಕಡಿಮೆ ಇದೆ ಎಂದಾಯಿತು. ಈ ಅಳುವ ಮುಖವಾಡ ಅವಳ ವ್ಯಕ್ತಿತ್ವಕ್ಕೆ ಎಷ್ಟು ಕಳೆ ತಂದಿದೆಯಲ್ಲಾ ಎಂದುಕೊಂಡೆ. ಅವಳ ತಲೆಯ ಮೇಲೆ ಕೈಯಾಡಿಸಿ, ಕಣ್ಣೀರೊರೆಸಿದೆ.

“ಇವತ್ತೊಂದೇ ದಿನ. ನಾಳೆ ಮುಂಜಾನೆ ಆಪರೇಷನ್ ಆದ್ರೆ ಎಲ್ಲಾ ಸರಿಹೋಗ್ತದ.” “ಈ ಎಲ್ಲದಕ್ಕೂ ನಾನೇ ಕಾರಣ. ನಾನು ಬಿಟ್ಟು ಹೋಗದಿದ್ರೆ ನಿಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಅಂದಳು ಅಳುತ್ತಾ.

ವ್ಹಾರೆ ಹುಡುಗಿ! ನಿನ್ನನ್ನು ಅಷ್ಟು ಪ್ರೀತಿಸುತ್ತೇನೆನ್ನುವ ಭ್ರಮೆ ಹೇಗೆ ಹುಟ್ಟಿತು ನಿನ್ನ ತಲೆಯಲ್ಲಿ? ಅಷ್ಟು ಪ್ರೀತಿಸಲು ಯೋಗ್ಯಳು ನೀನು ಎನ್ನುವ ಅಹಂಭಾವವಾದರೂ ಇದೆಯಲ್ಲ ನಿನ್ನಲ್ಲಿ. ಈಗ ನಿನ್ನಲ್ಲಿರುವ ಭಾವನೆಗಳೆಲ್ಲಾ ಹೃದಯದಾಳದಿಂದ ಬಂದಿರುವವೆಂದು ತಿಳಿದಿರುವಿಯೇನು? ಅದು ನಿಜವೇ ಇದ್ದರೆ, ಸಾವು ಎನ್ನುವ ಶಬ್ದ ಎಲ್ಲರನ್ನಲ್ಲದಿದ್ದರೂ ಕೆಲವರನ್ನಾದರೂ ದಾರಿಗೆ ತರುತ್ತದೆ ಅಂದಂತಾಯ್ತು. ಅಕಸ್ಮಾತ್ ಆಪರೇಷನ್ ಯಶಸ್ವಿಯಾಗಿ ನಾನು ಬದುಕಿ ಉಳಿದು; ಈ ಪ್ರೀತಿ, ಈ ವಿಶ್ವಾಸ ಆಮೇಲೆಯೂ ಉಳಿಯುವಂತಿದ್ದರೆ ನಾನು ಬದುಕಲಡ್ಡಿಯಿಲ್ಲ.

ಇವೆಲ್ಲಾ ವಿಚಾರಗಳು ನನ್ನ ನಿರಾಳವಾದ ಪ್ರಾಂಜಲ ಮನಸ್ಸಿನಿಂದ ಹೊರಬಿದ್ದವೋ, ಅಥವಾ “ಬದುಕಬೇಕು” ಎನ್ನುವ ಆಸೆಯುಳ್ಳ ನಾನು ದ್ವೇಷಿಸುತ್ತಿರುವ ಈ ಜಗತ್ತಿನ ಗೂಢಚಾರಿಯಾಗಿ ಕೆಲಸ ಮಾಡುತ್ತಿರುವ ನನ್ನದೇ ಮನಸ್ಸಿನ ಇನ್ನೊಂದು ಮುಖವೋ? ಎನ್ನುವ ವಿಚಾರ ತಲೆ ತಿನ್ನಹತ್ತಿತು.

“ನಿಮ್ಮನ್ನು ಬಿಟ್ಟು, ಈ ಎರಡು ವರ್ಷ ಹೆಂಗ ಕಳದೆ ಅನ್ನೋದು ಆ ದೇವರಿಗೆ ಗೊತ್ತು. ನೀವು ಕರಕೊಂಡು ಹೋಗಾಕ ಬರ್ತೀರಂತ ದಾರಿ ನೋಡದ ದಿವಸವೇ ಇರ್ಲಿಲ್ಲ. ನನ್ನ ಕಷ್ಟ ಯಾವ ವೈರಿಗೂ ಬರಬಾರದು” ಅಂದಳು ಅಳುತ್ತಾ.

ಈ ಹೆಣ್ಣು ಜಾತಿಯೇ ಹೀಗೆ. ಅದರಲ್ಲೂ ಈ ಇವಳಿಗಂತೂ ತನ್ನ ಕಣ್ಣೀರಿನ ಬೆಲೆ ಚೆನ್ನಾಗಿ ಗೊತ್ತು. ಜಿಪುಣ ಕೋಮಟಿಗನಂತೆ ಅತಿ ಅಗತ್ಯವಿದ್ದಾಗಲಷ್ಟೇ ತನ್ನ ಕಣ್ಣೀರನ್ನು ಖರ್ಚು ಮಾಡುತ್ತಾಳೆ. ಸಂದರ್ಭಕ್ಕೆ ತಕ್ಕ ಅಭಿನಯ. ಆ ಅಭಿನಯದಲ್ಲಿ ಬರುವ ಮಾತುಗಳೆಲ್ಲವೂ ತನ್ನ ಎದೆಯಾಳದಿಂದ ಬಂದಿವೆಯೋ ಎನ್ನುವಷ್ಟು ಅಭಿನಯ ಪರಿಣಿತಿ, ಇದೆಲ್ಲಾ ನನಗೆ ಗೊತ್ತು.

ಆದರೆ ಇದೆಲ್ಲಕ್ಕೆ ಅಪವಾದವಾಗಿ ಒಬ್ಬಳಿದ್ದಳು. ಅಳುವ ಸರದಿ ಬಂದಾಗ ನಗುವವಳು. ಎಲ್ಲರೂ ನಗುವಾಗ ಗಂಭೀರವಾಗಿರುವವಳು. ಜೀವನದ ಒಂದು ತಿಟ್ಟಿನಲ್ಲಿ ಸಂಧಿಸಿ, ಸ್ವಲ್ಪಕಾಲ ನನ್ನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟವಳು. ಆಗ ನನ್ನವರಿಗಾಗಿ, ತಮ್ಮ ಅಂತಸ್ತು ಗೌರವಗಳನ್ನು ಕಾಯ್ದುಕೊಳ್ಳಬೇಕೆನ್ನುವವರ ಒತ್ತಾಯಕ್ಕೆ ಕಟ್ಟು ಬಿದ್ದು ಇದೊಂದು ವಿಷಯದಲ್ಲಿ ರಿಯಾಯಿತಿ ತೋರಿಸಿದ್ದಿದ್ದರೆ, ನಾನು ಎಂದೋ ಅವಳ ಗುಲಾಮನಾಗಿ ಸೇವೆ ಮಾಡುತ್ತಿದ್ದೆ.

ತಮ್ಮ ಬಂದ. ಇಷ್ಟರವರೆಗಿನ ಅಭಿನಯದಲ್ಲಿ ಕೆಟ್ಟುಹೋಗಿದ್ದ ತನ್ನ ಮೇಕಪ್ಪನ್ನು ಅಷ್ಟರ ಮಟ್ಟಿಗೆ ಸರಿಪಡಿಸಿಕೊಂಡು ಅವನ ಅತ್ತಿಗೆ ಸಾವರಿಸಿಕೊಂಡು ಕುಳಿತಳು.

“ಅತ್ತಿಗೆ, ನಿಮ್ಮ ಗೆಳತೀರು ಕರೀತಾರ, ವಿಜಿಟಿಂಗ್ ಹೊತ್ತೂ ಮುಗೀತು, ನೀವು ಮನೆಕಡೆ ನಡೀರಿ ನಾನೂ ಬರ್ತೀನಿ” ಅಂದ, ಅವಳು ಎದ್ದು

“ಮುಂಜಾನೆ ಬರ್ತೀನಿ” ಎಂದು ಹೇಳಿ ಹೋದಳು. ಅವಳು ಹೊರಟು ಹೋದಮೇಲೆ, ತಮ್ಮ ಅವಳು ಈ ಎರಡು ವರ್ಷ ನನ್ನನ್ನು ಬಿಟ್ಟು ಇದ್ದ ವಿಷಯವನ್ನು ತೆಗೆದುಕೊಂಡು ಅವಳನ್ನು ಬಯ್ದ.

ಅವನು ಯಾವಾಗಲೂ ತನ್ನ ಅಣ್ಣನಿಗೆ ಯಾರಿಂದ ಅನ್ಯಾಯವಾದರೂ ಸಹಿಸುವುದಿಲ್ಲ. ತಾನೂ ಅವರ ಜಾಗೆಯಲ್ಲಿ ನಿಂತುಕೊಂಡು ವಿಚಾರಮಾಡಿ, ಅವರು ಮಾಡಿದ್ದು ತಾನಾಗಿದ್ದರೆ ಮಾಡುತ್ತಿದ್ದೆನೋ ಇಲ್ಲವೋ ಎಂದು ವಿಚಾರಿಸುವ ಗೊಡವೆಗೆ ಎಂದೂ ಹೋಗುವುದಿಲ್ಲ. ಎಷ್ಟೋ ಸಲ ಇದರ ಬಗ್ಗೆ ತಿಳಿಹೇಳಿದಾಗ-

“ನಿನಗೇನಣ್ಣ ಸಮುದ್ರ ಇದ್ದಂಗಿದ್ದಿ. ಏನು ಎಷ್ಟು ಹಾಕಿದರೂ ಕಾಣದಂಗ ಹೋಗೈತೋ ಹೊರ್ತು, ಅದರ ಸುಳಿವೂ ಹತ್ತಗೊಡೋದಿಲ್ಲ. ತಡಕಂಬೋದೂ ಅಂದ್ರೆ ಅದಕೂ ಒಂದು ಮಿತಿ ಮ್ಯಾರೆ ಇರಬೇಕು. ನನ್ನ ಕೈಲೆ ಇದೆಲ್ಲಾ ನೋಡಿಕೊಂತ ಸುಮ್ಮೆ ಇರೋದಾಗೋದಿಲ್ಲ ನೋಡಪ್ಪ” ಅನ್ನುತ್ತಿದ್ದ.

ನನ್ನಲ್ಲಿ ಏನು ಕಂಡಿದ್ದನೋ, ಮನೆಯಲ್ಲಿ ಅಪ್ಪನಾದಿಯಾಗಿ ಎಲ್ಲರ ಮೇಲೂ ಅಧಿಕಾರ ಚಲಾಯಿಸುವ ಇವನು ಮಾತ್ರ ನನ್ನೊಂದಿಗೆ ಬಲು ನಯವಾಗಿರುತ್ತಾನೆ. ತಮ್ಮನ ಮಾತು ಮುಂದುವರಿದೇ ಇತ್ತು. ವಿಷಯ ಬದಲಾಯಿಸಲೆಂದು-

“ರವಿ ಯಾವಾಗ ಬರ್ತಾನಂತ, ಇವತ್ತೂ ತಡ ಆಯ್ತಲ್ಲ.”

“ಅಂದಂಗ ಹೇಳೋದೆ ಮರ್ತುಬಿಟ್ಟಿದ್ದೆ. ಅವರ ಮನೆಗೆ ಯಾರೋ ಬಂದಾರಂತ ಅದಕ್ಕೆ ತಡ ಆಗ್ತದ ಅಂತ ಹೇಳು ಅಂದಿದ್ದ ಈಗ ಬಾಜಾರದಾಗ.”

ರಾತ್ರಿ ನನ್ನೊಡನೆ ರವಿ ತಪ್ಪಿದರೆ ತಮ್ಮ ಇರುತ್ತಿದ್ದರು.

“ಅಣ್ಣ ಒಂದಿಷ್ಟು ಕೆಲ್ಲ ಐತೆ ಹೋಗಿ ಎಂಟು ಎಂಟೂವರೆಗೆ ಬರ್ತೀನಿ,” ಸಮ್ಮತಿ ಪಡೆದು ತಮ್ಮ ಹೊರಟು ಹೋದ.

ನನ್ನ ಇಷ್ಟು ವರ್ಷದ ಬಾಳುವೆಯಲ್ಲಿ ಯಾರಾದರೂ ನನ್ನನ್ನು ಅರ್ಥ ಮಾಡಿಕೊಂಡು, ನನ್ನಂತರಂಗದ ಸಂಗಾತಿಗಳಾಗಿದ್ದರೆ ಅವರು ಈ ರವಿ; ಜನಕ್ಕಂಜಿ ತಾನು ತಲೆಮರೆಸಿಕೊಂಡು ಪರದೇಶಿಯನ್ನಾಗಿ ಮಾಡಿಬಿಟ್ಟಿದ್ದ ಆ ಇನ್ನೊಬ್ಬಳು.

ಈ ರವಿ ನನ್ನಂತೆಯೇ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದವನು. ಯಾವುದೋ ಮಾತಿಗಾಗಿ ಮನೆಯವರೊಡನೆ ವ್ಯತ್ಯಾಸವಾಗಿ, ತುಂಬಿದ ಮನೆಯನ್ನು ಬಿಟ್ಟು ಬಂದು, ನನ್ನ ಜೊತೆಯಲ್ಲಿ ತನ್ನ ಸ್ವಂತ ಪರಿಶ್ರಮದಿಂದ ಅಭ್ಯಾಸ ಮುಗಿಸಿದ. ಈಗ ಅವನು ಕಾಲೇಜಿನಲ್ಲಿ ಲೆಕ್ಚರರ್.

ಅವನ ದುಃಖಗಳನ್ನು ಕಷ್ಟ-ನಷ್ಟಗಳನ್ನು ನೋಡಿದರೆ ನನ್ನವೆಲ್ಲಾ ತೃಣಸಮಾನ. ಆದರೆ ಅವಾವುಗಳನ್ನು ಅವನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಯಾವಾಗಲೂ ಪ್ರತಿಯೊಂದರ ಒಳ್ಳೆಯ ಮುಖವನ್ನು ಕಾಣುವನೇ ಹೊರತು, ಕೆಟ್ಟದು ಅವನ ಮನಸ್ಸಿನಲ್ಲಿಯೇ ಸುಳಿಯದು. ಜೀವನದ ಕಹಿಯನ್ನು ಸಿಹಿಯಷ್ಟೇ ತುಂಬು ಮನಸ್ಸಿನಿಂದ ಸ್ವೀಕರಿಸುತ್ತಾನೆ.

ಒಂದು ರೀತಿಯಲ್ಲಿ ಅವನು ಸುಖ, ಅವನ ಎಣಿಕೆಯಂತೆ ಇಲ್ಲಿ ಸಂಭವಿಸುವ ಎಲ್ಲ ಸಂಗತಿಗಳೂ ಘಟಿಸಲೇಬೇಕಾದವಾದ್ದರಿಂದ ಅವುಗಳಿಂದ ನಮಗೆ ಬಿಡುಗಡೆಯಿಲ್ಲ. ಇಲ್ಲೇ ಬರುವುದು ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯ.

ನಾವು ಮಾಡಿದ ಒಳ್ಳೆ-ಕೆಟ್ಟವುಗಳಿಗೆ ನಾವೇ ಹೊಣೆ. ನಮಗೆ ಸಂಬಂಧವಿಲ್ಲದ ವಿಷಯಗಳನ್ನು, ಬೇರೆಯವರು ಏನೇನನ್ನೋ ತಂದು ಹಾಕಿ ನಮಗೆ ಹೊಣೆಗಾರಿಕೆಯ ಪಟ್ಟವನ್ನೇಕೆ ಕಟ್ಟಬೇಕು? ಎಂದು ನನ್ನ ಕೇಳಿಕೆ. ಅದಕ್ಕೆ ಏನೇನೋ ಪುರಾಣ ಹೇಳಿ ನನಗೆ ಮನಸ್ಸಿಲ್ಲದಿದ್ದರೂ ತನ್ನ ತರ್ಕವನ್ನು ಒಪ್ಪುವಂತೆ ಮಾಡಿಬಿಡುತ್ತಾನೆ.

ಜೀವನದ ಘಟನೆಗಳು ನಮ್ಮಿಬ್ಬರಲ್ಲಿ ಸಾಮ್ಯವನ್ನು ತೋರಿಸಿದ್ದರೂ, ಮಾನಸಿಕವಾಗಿ ನಾವಿಬ್ಬರೂ ಒಂದೊಂದು ಧ್ರುವ. ಆದರೂ ಯಾವದೋ ಆಕರ್ಷಣ ಶಕ್ತಿ ನಮ್ಮಿಬ್ಬರನ್ನು ಬಂಧಿಸಿಬಿಟ್ಟಿದೆ. ಇವನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ ಎಂದು ಎಷ್ಟೋ ಸಲ ಅನ್ನಿಸಿದ್ದರೂ; ಡಾಕ್ಟರರ ಔಷಧದಂತೆ, ನನ್ನ ಕಣಕಣದಲ್ಲಿ ತನ್ನ ಪ್ರಭಾವ ಬೀರಿ, ನನ್ನ ಒಳಗಿನ ಕೋಟೆಯನ್ನು ನನಗರಿಯದಂತೆಯೇ ತನ್ನ ವಶಪಡಿಸಿಕೊಂಡಿದ್ದಾನೆ. ಕೊನೆಗೊಂದು ದಿನ ಎಲ್ಲಿ ಅವನ ವಿಚಾರ ಪ್ರವಾಹಗಳ ಸೆಳವಿನಲ್ಲಿ ಸಿಕ್ಕು ನಾನು ಕೊಚ್ಚಿ ಹೋಗುವೆನೋ ಎಂದು ಭಯಪಡುತ್ತೇನೆ.

ಆದರೂ ಯಾಕೋ ಒಂದೊಂದು ಸಲ ಅವನಲ್ಲಿಯೂ ನಿರ್ವಿಣ್ಣತೆ ತಲೆ ಹಾಕುತ್ತಿರುತ್ತದೆ. ಆಗ ನಾನೇ; ಇವನೂ ನನ್ನಂತೆಯೇ ಆದರೆ ನನ್ನನ್ನು ಈ ಜಾರುಬಂಡೆಯಿಂದ ಉಳಿಸುವರಾರು ಎನ್ನುವ ಅವ್ಯಕ್ತ ಭಯದಿಂದಲೋ ಏನೋ; ಅವನಿಗೆ ಧೈರ್ಯ ತುಂಬಿ, ಅನಿವಾರ್ಯದ ಈ ಜೀವನವನ್ನು ಇದ್ದಷ್ಟು ದಿನ ಸರಿಯಾಗಿ ಅಭಿನಯಿಸಿ ಮಣ್ಣು ಮರೆಯಾಗೋಣವೆಂದು ಹೇಳಿದ್ದೇನೆ, ಏನೇ ಆದರೂ…

ಹೊರಗೆ ಓಡಾಟ ಹೆಚ್ಚಾದಂತಾಯಿತು. ನನ್ನ ಕೋಣೆಯ ಮುಂದೆ ಹಾದು ಹೊರಟಿದ್ದ ನರ್ಸ್‌ಳನ್ನು ಕರೆದು ಕೇಳಿದೆ. ಯಾರೊ ಹುಡುಗಿ Tik-20 ತೆಗೆದುಕೊಂಡಿದ್ದಾಳೆಂದು ಹೇಳಿದಳು.

“ಯಾರು ಆ ಹುಡುಗಿ.”

“ಶ್ರೀ… ರ ಮಗಳು. ಕಾಲೇಜು ಓದಿದ್ಳಂತ.”

“ಅಂಥ ಶ್ರೀಮಂತರ ಮಗಳಿಗೆ ಏನಾಗಿತ್ತೋ ಸಾಯ್ತಿಕ್ಕೆ?”

“ಏನಾಗಿತ್ತೇನ್ರೀ ಸಾರ್, ಈ ಕಾಲದಾಗ ಸಾಯ್ಲಾಕೂ ಯಾಕ ಕಾರಣಗಳು ಬೇಕಾಗ್ತಾವರಿ.

ಅದೂ ಕಾಲೇಜಿನ್ಯಾಗ…”

“ಸಿಸ್ಟರ್, ಡಾಕ್ಟರ್ ಕರೀತಾರ” ಚಪಾರಸಿ ಕೂಗಿದ. ನರ್ಸ್ ಹೊರಟು ಹೋದಳು.

ಕಾಲೇಜು ಹುಡುಗಿಯರೆಂದರೆ ಮತ್ತೇನಿರುತ್ತದೆ. ಪರೀಕ್ಷೆಯಲ್ಲಿ ಫೇಲಾಗಿರಬಹುದು.

ಹುಡುಗರು ಸಾಯುವುದು ಹೆಚ್ಚಾಗಿದೆಯೆಂದು ವಿಶ್ವವಿದ್ಯಾಲಯದವರು ಸ್ವಲ್ಪ ಬರೆದರೂ ಪಾಸು ಮಾಡಿ ಸಾಯುವವರ ಸಂಖ್ಯೆ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿಯೂ ಸಾಯವುವವರಿದ್ದಾರೆ! ಫೇಲಾದರೂ ಏನಂತೆ, ಅಷ್ಟು ಶ್ರೀಮಂತರ ಮಗಳು ಈ ಇವಳಿಗೇನಾಗಿತ್ತು ಧಾಡಿ. ಅದೂ ಅಲ್ಲದೇ ಫೇಲುಗಳಿಗೆ ಹೊಂದಿಕೊಂಡ ಅವರೇ ಸತ್ತರೆ?

ಇಲ್ಲದಿದ್ದರೆ ಹೀಗಿರಬೇಕು. ಇವಳು ಶ್ರೀಮಂತರ ಹುಡುಗಿ. ಅದಕ್ಕೆ ಅಪವಾದವಾಗಿ ಚೆಂದವೂ ಇರಬೇಕು. ಒಬ್ಬ ಹುಡುಗ, ಬಡವ, ಬುದ್ದಿವಂತ, ಚುರುಕು ಬುದ್ದಿ: ಡಿಬೇಟಿಂಗ್, ನಾಟಕ, ಓದುಗಳಲ್ಲಿ ಮೊದಲಿಗ. ಇವಳ ಮದುಡು ಬುದ್ದಿಗೆ ಅವನು ಮೆಚ್ಚಿಕೆಯಾಗಿರಬೇಕು. ಮುಂದಿನದಂತೂ ಹೇಳಬೇಕಾಗಿಯೇ ಇಲ್ಲವಲ್ಲ.

ಪ್ರೇಮ.

ಇವರಪ್ಪ ಖಳನಾಯಕ.

ಯಾವನೊಂದಿಗೋ ಇವಳ ಮದುವೆ ನಿಶ್ಚಯ.

ಆತ್ಮಹತ್ಯೆಗೆ ಇದಕ್ಕಿಂತ ಹೆಚ್ಚಿಗಿನ್ನೇನು ಬೇಕು?

ಅಥವಾ ಇವಳೇನಾದರೂ…

ತಾಯಿಯಾಗಲಿದ್ದಳೋ ಏನೋ…

ಛೇ! ಅದೂ ಅಲ್ಲ.

ಏಕೆಂದರೆ ಇದು ಇದರ ವಿರುದ್ಧವಾದ ಪ್ರಸಂಗದಲ್ಲಿ ಸಾಧ್ಯ. ಶ್ರೀಮಂತ ಹುಡುಗ. ಬಡ ಹುಡುಗಿ; ಇವರಿಬ್ಬರ ಪ್ರೇಮ, ಆಗ ಆ ಹುಡುಗಿ ತಾಯಿಯಾಗುತ್ತಾಳೆ. ಮದುವೆಯೇ ಇಲ್ಲ. ಆಗ ಆತ್ಮ ಹತ್ಯೆ. ಈಗ ಸರಿ.

ಹಾಗಾದರೆ ನಮ್ಮಿಬ್ಬರಲ್ಲಿ ಒಬ್ಬರೂ ಆ ವಿಚಾರಕ್ಕೆ ಮನಸೋಲಲಿಲ್ಲವಲ್ಲ. ನಾನು ಅವಳನ್ನು ಈ ರೀತಿ ಕೈಬಿಟ್ಟರೆ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಎನ್ನುವ ವಿಚಾರ ನನಗೇಕೆ ಬರಲಿಲ್ಲ. ಆದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ಆ ಮಾತು ಬೇರೆ.

ಯಾಕೋ ಒಂದು ರೀತಿಯ ಸಂತೋಷದ ಭಾವ ಮನಸ್ಸಿನಲ್ಲಿ ಹಾದು ಹೋಯಿತು. ತಮ್ಮನ ಮನಸ್ಸು ನೋಯಿಸಿದ್ದರೂ ‘ನೋಡಿದೆಯಾ ಹೇಗೆ ಸೇಡು ತೀರಿಸಿಕೊಂಡೆ’ ಎನ್ನುವ ಒಂದು ರೀತಿಯ ವಿಕಟ ಸಂತೋಷವಾಗಿರಬೇಕು. ಅವಳ ಮೇಲಿನ ಸಿಟ್ಟಿನಿಂದ ತಮ್ಮನ ಮನಸ್ಸು ನೋಯಿಸಬೇಕಾಯಿತಲ್ಲಾ ಎಂದು ಒಂದು ಮನಸ್ಸು ಹೇಳಿತು.

ನನಗೆ ತಿಳುವಳಿಕೆ ಮೂಡಿದಂದಿನಿಂದ ಇಂಥ ನೂರಾರು ಪ್ರಸಂಗಗಳು ನನ್ನೆದುರು ಘಟಿಸಿ ಈ ಜಗತ್ತಿನ ವಿರುದ್ಧ, ಈ ಜನಜಂಗುಳಿಯ ವಿರುದ್ಧ ನನ್ನನ್ನು ಎತ್ತಿಕಟ್ಟಿ ಚಳುವಳಿ ಹೂಡುವಂತೆ ಮಾಡುತ್ತವೆ. ಇಷ್ಟು ಮುಂದುವರಿದ ಜಗತ್ತಿನಲ್ಲಿ ಇನ್ನೂ ಶಿಲಾಯುಗದಲ್ಲಿಯಂತೆ, ಮನುಷ್ಯನ ಪ್ರತಿಯೊಂದು ಚಲನವಲನವೂ ಬೊಂಬೆಯಂತೆ ಸೂತ್ರಬದ್ಧವಾಗಿರಬೇಕೆಂದರೆ ಹೇಗೆ, ಮನುಷ್ಯ ಜೀವಿಸಲು, ಅವನು ತನ್ನ ಮನಸ್ಸಿಗೆ ತಕ್ಕಂತೆ ಬಾಳಲು ಜಗತ್ತಿನ ಯಾವ ಸಂಗತಿಯೂ ಅಡ್ಡಬರಬಾರದು. ಈ ರೀತಿ ಅಡ್ಡ ಬಂದು, ವಿಷಯಗಳು ಕ್ರಿಮಿಕೀಟಗಳ ಮೇಲೆ ಪ್ರಯೋಗವಾಗುವದಕ್ಕಿಂತ ಹೆಚ್ಚಾಗಿ ಮನುಷ್ಯ ತನ್ನ ಮೇಲೆ ತಾನೇ ಪ್ರಯೋಗಪಡಿಸಿಕೊಳ್ಳುವಂತೆ ಒತ್ತಾಯಪಡಿಸಬಾರದು.

ಇವಳು ಅವನನ್ನು ಲಗ್ನವಾದರೆ ಜೀವನವನ್ನು ಬಡತನದಲ್ಲಿಯೇ ಕಳೆಯುತ್ತಾಳೆ. ಇವನು ಅವಳನ್ನು ಮದುವೆಯಾದರೆ ತಮ್ಮ ಮನೆತನ, ಅಂತಸ್ತು, ಶ್ರೀಮಂತಿಕೆಗಳಿಗೆ ಕುಂದು. ನಮ್ಮಲ್ಲಿ ಕುಂದುಕೊರತೆಗಳು ಇವೆಯೆಂದು ನಮಗರಿವಾಗಕೊಟ್ಟರೆ ನಮ್ಮ ತನಕ್ಕೇ ಅವಮಾನ.

ಇನ್ನೊಬ್ಬನಲ್ಲಿ ಬುದ್ಧಿವಂತಿಕೆಯಿದೆಯೆಂದು ಒಪ್ಪಿಕೊಂಡರೆ ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಅಡ್ಡಿ. ಇಂತಹ ಇನ್ನೆಷ್ಟೋ ಸಾವಿರಾರು ಪೂರ್ವಗ್ರಹಗಳಿಂದ ದೂಷಿತವಾದ ಮನಸ್ಸು ಪ್ರತಿಯೊಂದು ವಿಷಯದಲ್ಲಿಯೂ, ಪಾವ್ಲೋವನ ನಾಯಿಯಂತೆ, ಕಂಡೀಷನ್ಸ್ ರಿಫ್ಲಕ್ಸ್ (Conditioned Reflux)ನಲ್ಲಿ ಬದುಕುತ್ತಿದೆ.

ನಿಜವಾಗಿ ಹೇಳಬೇಕಾದರೆ ನನ್ನ ಚಳುವಳಿ ಇಂತ ಪಾವ್ಲೋವನ ನಾಯಿಗಳ ವಿರುದ್ಧವಲ್ಲದೆ ಈ ಜಗತ್ತಿನ ವಿರುದ್ಧವಲ್ಲ. ನಾನೊಬ್ಬ ಮನುಷ್ಯ. ನನಗೆ ವ್ಯಕ್ತಿತ್ವವಿದೆ. ನನ್ನನ್ನು ನನ್ನಂತೆಯೇ ಬಾಳಗೊಡಿರಿ. ನಾನು ಒಳ್ಳೆಯವನಾಗಿ ಗಾಂಧಿ, ಲಿಂಕನರಂತೆ ದೊಡ್ಡವನಾಗ ಬೇಕಿಲ್ಲ. ಕೆಟ್ಟವನಾಗಿ ಗೋಡ್ಸೆಯಾಗುವುದೂ ಬೇಕಾಗಿಲ್ಲ. ಅವರು ಅದಾಗಿದ್ದಾರೆ, ಇವರು ಇದಾಗಿದ್ದಾರೆ. ನನಗೆ ಇದೊಂದೂ ಬೇಕಿಲ್ಲ. ನಾನು ನಾನೇ ಆಗಬೇಕಾಗಿದೆ. ಅದಕ್ಕಾಗಿ ಪೇಟೆಯಲ್ಲಿ ನನಗೆಷ್ಟು ಧಾರಣೆ ನಿಜವಾಗಿ ಬರಬೇಕಾಗಿದೆಯೋ ಅಷ್ಟು ಬೆಲೆ ಕೊಡಿರಿ. ಅದೆಲ್ಲಾ ಬಿಟ್ಟು ನಮ್ಮ ಮಾಲೇ ಶ್ರೇಷ್ಠವೆಂದು ನನ್ನ ಮನುಷ್ಯತ್ವವನ್ನು ಅಣಕಿಸಿ, ಘಂಟೆಯ ಶಬ್ದ ಕೇಳಿ ಜೊಲ್ಲು ಸುರಿಸುವ ನಾಯಿಗಳಾಗುವುದು ನಿಮಗೆ ಸಲ್ಲದು, ಏಕೆಂದರೆ ಇಂಥ ಜಗತ್ತಿನಲ್ಲಿ ಬದುಕಲು ನನಗಿಷ್ಟವಿಲ್ಲ. ನಾನು ಮನುಷ್ಯರಿದ್ದ ಜಗತ್ತಿನಲ್ಲಿ ಬದುಕಬೇಕಾಗಿದೆ, ಅದಕ್ಕೇ ನೀವೂ ಮನುಷ್ಯರಾಗಿರಿ ಎಂದು ಹೇಳುತ್ತಿರುವುದು, ಅಲ್ಲದೆ…

“ಆ ಹುಡುಗಿ ಸತ್ತುಹೋಯ್ತು ಸಾರ್ ಪಾಪ,” ಅದೇ ನರ್ಸು.

“ಯಾಕೆ ಸಿಸ್ಟರ್, ಯಾಕೆ ಸತ್ತಳು. ಏನಾದರೂ ಲವ್-ಗಿವ್?” ನನ್ನ ನಿರೀಕ್ಷೆ ಸುಳ್ಳಾಗದಿರಲೆಂದು ಕೇಳಿದೆ.

“ಹೌದಂತೆ ಸರ್, ಆತಗೆ ಬ್ಯಾರಲ್ಲೋ ಲಗ್ನ ಆಗಿಬಿಟ್ಟಿತ್ತಂತೆ ಅದಕ್ಕೆ…”

“ಯಾಕ, ಆ ಹುಡುಗ ಇವ್ರಿಗಿಂತ ಶ್ರೀಮಂತನೇನು?”

“ಅಲ್ಲಂತ ಸರ್, ಪೂರ್ತಿ ಬಡವರಂತೆ.”

“ಅದಕ್ಕ ಈ ಹುಡುಗಿ ಅಪ್ಪ ಲಗ್ನ ಸಾಧ್ಯವಿಲ್ಲ ಅಂದಿರಬೇಕು.”

“ಅದೂ ಅಲ್ಲ ಸರ, ಹುಡುಗಿ ಮನೆಯವ್ರ ಎಲ್ಲೂ ಒಪ್ಪಿದ್ರಂತೆ.”

“ಮತ್ತೇನಂತ, ಬಂದದ್ದು ಅವ್ನಿಗಿ?”

“ಆದ್ರೆ ಈ ವಿಷಯ ಈ ಹುಡುಗ್ಗ ಗೊತ್ತಿರ್ಲಿಲ್ಲಂತ ಸರ, ಆಕೆ ಆತಗ ಗೊತ್ತಾಗ್ಲಾರ್ದಂಗ ಮನೆಯವರ ಒಪ್ಪಿಸಿದ್ದು ಅದನ್ನು ತಿಳಿಸುವಷ್ಟರೊಳಗೆ, ಆತನ ಮದಿವಿ ಆಗಿ ಹೋಗಿತ್ತು.”

“ಅಂಥಾ ಅವಸರ ಏನಿತ್ತಮ್ಮ ಆತಗ.”

“ಗುಪ್ತ ಪ್ರೇಮ ಅಂತಾರಲ್ಲ ಸರ್ ಅದು. ಒಬ್ರಿಗೊಬ್ರು ತಿಳಿಸೋದು ಆಗಿಲ್ಲ. ಮದಿವಿ ಆದಮ್ಯಾಲೆ ಆತ ಪತ್ರ ಬರದ. ಅದನ್ನ ನೋಡಿ ಈಕಿ ವಿಷ ತಗೊಂಡು ಬಿಟ್ಟು.”

“ಹಿಂಗೈತೇನು ಸಮಾಚಾರ!”

ಮನುಷ್ಯ ಯಾವಾಗಲೂ ಭಾವನೆಗಳ ಕೈಯಲ್ಲಿ ಬುದ್ಧಿಯನ್ನು ಕೊಡಬಾರದು. ಅದರ ಪರಿಣಾಮಗಳೇ ಈ ಆತ್ಮಹತ್ಯೆಗಳು, ಯುದ್ಧಗಳು; ಯಾವಾಗಲೂ ಬುದ್ಧಿಯ ಹಿಡಿತದಲ್ಲಿ ಹೃದಯವಿರಬೇಕು. ಈ ಜಗತ್ತು ಕೊಟ್ಟ ಪೆಟ್ಟುಗಳನ್ನು ಸಹಿಸಿಕೊಳ್ಳುವ ವಸ್ತುವಷ್ಟೇ; ಈ ಪೆಟ್ಟುಗಳನ್ನು ತಾಳಿಕೊಂಡು ಅವುಗಳಿಗೆ ಶರಣಾಗದೆ ಉಳಿಯುವದಷ್ಟೇ ಬಾಳುತ್ತದೆ. ಅದನ್ನೇ ಡಾರ್ವಿನ್ Survival of Fittest ಎಂದು ಹೇಳಿದ್ದು.

ನರ್ಸ್ ಯಾವಾಗಲೋ ಲೈಟು ಹಾಕಿ ಹೋಗಿದ್ದಳು
ಬಹಳ ಹೊತ್ತು ಹಾಸಿಗೆಯಲ್ಲೇ ಬಿದ್ದುಕೊಂಡಿದ್ದರಿಂದ ಬೇಸರ ಬಂದಿತ್ತು. ಹೊರಗೆ ನಿಂತಿದ್ದ ಚಪರಾಸಿಯನ್ನು ಕರೆದು, ಅವನ ಸಹಾಯದಿಂದ ಕಕ್ಕಸದತ್ತ ನಡೆದೆ. ರೂಮಿನಲ್ಲಿಯೇ ಕ್ಯಾನು ಇದ್ದರೂ, ಅದರಲ್ಲಿ ಮೂತ್ರ ವಿಸರ್ಜಿಸಲು ಮನಸ್ಸಾಗಲಿಲ್ಲ. ಕಕ್ಕಸದಿಂದ ತಿರುಗಿಬಂದು ಸ್ಟೂಲಿನ ಮೇಲೆ ಕುಳಿತು, ಚಪರಾಸಿಗೆ ಹೇಳಿ ಮಗ್ಗಲು ಹಾಸಿಗೆ ಬದಲಾಯಿಸಿದೆ, ಅವನು ಅಷ್ಟು ಮಾಡಿ ನನ್ನನ್ನು ಮಂಚದ ಮೇಲೆ ಕುಳ್ಳಿರಿಸಿ ಹೊರಟುಹೋದ.

ಇಷ್ಟು ಹೊತ್ತಾದರೂ ಈ ರವಿ ಯಾಕೆ ಬರಲಿಲ್ಲ? ಅವನ ಮನೆಗೆ ಅಂಥ ಬಂಧುಗಳು ಯಾರು ಬಂದಿರಬಹುದು? ಯೋಚಿಸಿ. ಯೋಚಿಸಿ ತಲೆ ಬಿಸಿಯಾಗಿಬಿಟ್ಟಿದೆ.

ಚಪರಾಸಿ ಯಾರೊಡನೆಯೋ ಮಾತನಾಡಹತ್ತಿದ. ರವಿ ಬಂದಂತಿದೆ. ಇಲ್ಲಿಗೆ ಬರುವಷ್ಟೂ ತಾಳ್ಮೆಯಿಲ್ಲ ಅವನಲ್ಲಿ. ನನ್ನ ಆರೋಗ್ಯದ ಎಲ್ಲ ವಿವರಗಳನ್ನು ಸಂಗ್ರಹಿಸಿಕೊಂಡೇ ಇಲ್ಲಿಗೆ ಬರುತ್ತಾನೆ. ಇನ್ನೂ ಎಷ್ಟು ಹೊತ್ತು ಮಾತನಾಡುತ್ತಾ ನಿಲ್ಲುತ್ತಾನೋ ಮಹರಾಯ.

ಇವನು ಈ ಚಪರಾಸಿ ದಾರಿಯಲ್ಲೇಕೆ ನಿಲ್ಲಬೇಕಾಗಿತ್ತು. ಮಾತು ಮುಗಿದಂತಾದವು. ಇತ್ತಲೇ ಬರುತ್ತಿದ್ದಂತಿದೆ.

“ಅಂತೂ ಬಂದೆಯಲ್ಲ. ಅವನ್ನೋಡಿ ಮಾತಾಡಿ ಹಂಗಿಂದಂಗ ಹೋಗ್ತಿ ಅಂತಿದ್ದೆ.” “ಯಾಕ ಎಂದೂ ಇಲ್ಲದ ಅಪನಂಬಿಕೆ ಇವತ್ಯಾಕ?” ನಗುತ್ತಾ ಕೇಳಿದ. “ನಂಬಿಕೆ ಎಲ್ಲ ಹಾರಿ ಹೋಗತೈತೋ ಅನಸ್ತದ. ಇಷ್ಟಾಕ ತಡ? ಮನಿಗೆ ಯಾರೋ ಬಂದಾರಂತ ಹೇಳಿದ ತಮ್ಮ. ಅವರ ಸಲುವಾಗಿ ತಡ ಆದದ್ದೇನು?”

“ಅವರ ಸಲುವಾಗಿ ಅಲ್ಲ, ನಿನ ಸಲುವಾಗಿ.”

“ನನ ಸಲುವಾಗಿ ಯಾಕಪ್ಪ?”

“ಬಂದವು ಯಾರು ಗೊತ್ತಾ? ಕಿರಣ ಬಂದ್ಲು. ಬರುತ್ಲೇ ಇಲ್ಲಿಗೇ ಬತ್ತೀನೀ ಅಂತ ಕುಂತಿದ್ಲು, ಆಕಿಗೆ ಅದೂ ಇದೂ ಹೇಳಿ ಒತ್ತಾಯ ಮಾಡಿ, ವಿಶ್ರಾಂತಿ ತಗೊಳ್ಳಲಿ ಅಂತಂದು ಬಿಟ್ಟು ಬರಬೇಕಾದ್ರೆ ಸಾಕು ಸಾಕಾಯ್ತು.”

ಅವನ ಮಾತು ಕೇಳಿ ಏನು ಹೇಳಬೇಕೋ ಗೊತ್ತಾಗಲಿಲ್ಲ. ಯಾವಳನ್ನು ಇಷ್ಟು ದಿನ ಪರದೇಸಿಯನ್ನಾಗಿ ಮಾಡಿ ಮರೆತುಬಿಟ್ಟಿದ್ದೆನೋ, ಅವಳು ಈ ದಿನ ಬಂದ ಸುದ್ದಿ ಕೇಳಿ ಗರಹೊಡೆದಂತಾಯಿತು ನನ್ನ ಸ್ಥಿತಿ.

“ಯಾಕ ಸುಮ್ಕಾದೆಲ್ಲಲ್ಲಾ. ಆಕೆ ಬರಬಾರದಾಗಿತ್ತೇನು?'”

“ಹಂಗಲ್ಲ ರವಿ. ಆಕೆ ಬಗ್ಗೆ ವಿಚಾರ ಮಾಡೋ ಅಧಿಕಾರವೇ ನನಗಿಲ್ಲ. ಹಿಂದಕ ನಾನು ಮಾಡಿದ್ದೇ, ಇವೊತ್ತು ನನ್ನನ್ನು ಅತಿ ನೀಚತನಕ್ಕೆ ನೂಕಿ ಕೇಕೆ ಹೊಡೆದು ನಗುತ್ತಿದ್ದಂಗ ಆಗಿ ಬಿಟ್ಟದ. ಆಕೆ ನನ್ನ ಕ್ಷಮಿಸಿರಬಹುದು. ಆದರೆ ಅದಕ್ಕೆ ನಾನು ಅರ್ಹನೇ ಅಂತ ನನ್ನ ಮನಸೇ ಕೇಳಿದರೆ ನಾನೇನು ಹೇಳ್ಲಿ, ನಿನಗೆ ಗೊತ್ತೈತೆ ನನಗೆ ನಾನೇ ಅಂಜುವಷ್ಟು ಇನ್ಯಾರಿಗೂ ಅಂಜೋದಿಲ್ಲ ಅಂತ.”

“ಅದರಾಗ ನೀನೊಬ್ಬಾತಂದೇ ತಪ್ಪು ಅಂತ ತಿಳಕೊಂಡದ್ದೇ ನಿನ್ನ ಅಂಜಿಕೆಗೆ ಕಾರಣ. ಯಾವಾಗಲೂ ಎಲ್ಲಾ ನಿನ್ನಿಂದಲೇ ಆಗೈತಂತ ಯಾಕ ತಿಳಕೊಂಡಿದ್ದಿ? ಈ ಅತಿ ನಿನ್ನತನವೇ ಒಳ್ಳೇದಲ್ಲ ಅಂಬೋದು.”

“ನಿನಗೂ ಗೊತ್ತೈತೆ ರವಿ. ನಾನು ಅದನ್ನು ಪಳಗಸೋದಕ್ಕೆ ಎಷ್ಟು ಪ್ರಯತ್ನ ಮಾಡ್ಲಿಲ್ಲ? ಸ್ಥಿತಪ್ರಜ್ಞತೆ ಎಲ್ಲರಿಗೂ ಬರೋ ಗುಣ ಅಲ್ಲ. ಮತ್ತೆ ಅದನ್ನು ಪಡೆಯೋಕೆ ನನ್ನಿಂದಂತೂ ಸಾಧ್ಯವೇ ಇಲ್ಲ…?”

ಸಂಜೆಯಿಂದ ಇಲ್ಲಿಯವರೆಗೆ ನಡೆದ ನನ್ನ ವಿಚಾರ ದ್ವಂದ್ವವನ್ನು ವಿವರಿಸಿದೆ. ಅದಕ್ಕೆ “ಜೀವನದ ಪ್ರತಿಕ್ಷಣವನ್ನು ತುಂಬು ಮನಸ್ಸಿನಿಂದ ಅನುಭವಿಸಬೇಕು ಅನ್ನೋದು ನನ್ ಸಿದ್ಧಾಂತ. ನಿನ ಸುತ್ತಮುತ್ತ ಇಷ್ಟು ಜನರಿದ್ರೂ ನೀನು ಪರದೇಸಿ, ಅಸುಖಿ ಅಂದುಕೊಂತೀಯಲ್ಲ; ಅಸಂಖ್ಯಾತ ಪರದೇಶಿಗಳು ಹೆಂಗೆ ಬದುಕ್ತಾರ ಅಂತ ವಿಚಾರ ಮಾಡಾಕ ಎಂದನ್ನ ಹೋಗಿದ್ದೇನು?”

“ನೋಡು. ಯಾವಾಗೂ ನನ್ನಲ್ಲಿ ಇಲ್ಲದ್ದನ್ನು ಐತಿ ಅಂತ ತಿಳಕೊಳ್ಳೋ ಮೂರ್ಖತನ ಎಂದೂ ಮಾಡಿಲ್ಲ. ನೀನು ಇಷ್ಟು ಹೇಳಿದ್ದೆಲ್ಲ. ನಿಮ್ಮ ಅಪ್ಪನಲ್ಲಿಗೆ ಹೋಗಿದ್ದು ಯಾಕ ಪಿತೃಸುಖ ಅನುಭವಿಸಬಾರದು?”

“ನಿನಗ ಗೊತ್ತೈತೋ ಇಲ್ಲೋ, ಒಂದು ಕೈಯಿಂದ ಚಪ್ಪಾಳೆ ಬಾರಿಸಿಕ್ಕೆ ಬರೋದಿಲ್ಲ ಅನ್ನೋದು. ನಾನು ಬ್ಯಾರೇ ಜಾತಿ ಹುಡುಗಿನ್ನ ಮದ್ವಿ ಆದದ್ದು ಮೊದಲೇ ನನ ಮ್ಯಾಲಿದ್ದ ಅಪ್ಪನ ಸಿಟ್ಟನ್ನ ಹೆಚ್ಚಿಸಿ, ಅವು ತಮ್ಮ ಮಗ ರವಿ ಅನ್ನುವವ ಇದ್ದಾನೆ ಅನ್ನೋದೇ ಮರ್ತು ಬಿಟ್ಟಿದ್ದಾರೆ.”

“ಇರ್ಲಿ ಬಿಡು ಎಷ್ಟು ಮಾತಾಡಿದರೂ ಅದೇ ಅಲ್ಲ. ಈಗ ಕಿರಣ ಎಲ್ಲಿಂದ ಬಂದ್ಲು? ಈ ನಾಲೈದು ವರ್ಷದಾಗ ಆಕಿ ಸುದ್ದೀನೇ ಕೇಳಿಲ್ಲ. ಆಕಿ ಮದ್ವಿ ಆಯ್ತು ಅನ್ನೋದು ಮಾತ್ರ ಗೊತ್ತು.”

ಅದಕ್ಕೆ ರವಿ ಹೇಳಿದ ಸಮಾಚಾರ ಇಷ್ಟು. ಅವಳ ಲಗ್ನವಾಗಿ ಇಲ್ಲಿಗೆ ಮೂರು ವರ್ಷವಾಯಿತು. ಗಂಡನಿಗೆ ಅವಳ ಹಿಂದಿನ ಕಥೆ ಗೊತ್ತಾಗಿ, ವಿರಸ ಹೆಚ್ಚಿ, ಈಗ ಒಂದು ವರ್ಷದಿಂದೀಚೆಗೆ ಗಂಡನನ್ನು ಬಿಟ್ಟು ಬಂದು ಯಾವುದೋ ಊರಿನಲ್ಲಿ ಹೈಸ್ಕೂಲು ಮಾಸ್ತರಿಣಿಯಾಗಿದ್ದಾಳೆ. ಈಗ ತನ್ನ ಬೇನೆಯ ಸುದ್ದಿ ಕೇಳಿ ಇಲ್ಲಿಗೆ ಬಂದಿದ್ದಾಳೆ.
“ತಮ್ಮ ಬಂದಿದ್ದ. ಈ ರಾತ್ರಿ ರವಿಯೇ ಇಲ್ಲಿ ಇರುವನೆಂದು ಹೇಳಿ ಅವನನ್ನು ಕಳಿಸಿಕೊಟ್ಟೆ.

ಕಿರಣಳನ್ನು ಕಾಣಲು ಮನಸ್ಸು ಕಾತರಿಸಿತ್ತು. ರವಿ ಮನಸ್ಸಿನಿಂಗಿತ ತಿಳಿದವನಂತೆ ಕಿರಣಳನ್ನು ಕಳಿಸುವುದಾಗಿ ಹೇಳಿ ಹೊರಟುಹೋದ.

ಈ ಕಿರಣ ಈಗಿನ ಬದಲು ಆರೆಂಟು ತಿಂಗಳು ಹಿಂದೆಯಾದರೂ ಬಂದಿದ್ದರೆ ನನ್ನಲ್ಲಿ ಬದುಕುವ ಆಸೆ ಬಲವತ್ತರವಾಗಿ ನನ್ನ ಜೀವ ಉಳಿಯುವ ಸಾಧ್ಯತೆ ಇತ್ತೇನೋ. ಆಟ ನೋಡುತ್ತಿರುವವರಂತೆ ತೆರೆಯ ಮರೆಯಲ್ಲಿದ್ದು, ಎಲ್ಲರೂ ಈಗ ಒಮ್ಮೆಗೇ ಪ್ರತ್ಯಕ್ಷವಾಗಿದ್ದಾರೆ: ನನ್ನೆಲ್ಲ ಆಟಿಗೆ ಸಾಮಾನುಗಳನ್ನು ಕಟ್ಟಿಕೊಂಡು ಮನೆಗೆ ಹೋಗಲಣಿಯಾದಾಗ.

ಈಗ ಒಂದು ವರ್ಷದ ಹಿಂದೆಯೇ ಗೊತ್ತಾಗಿತ್ತು. ನನ್ನಲ್ಲಿಯ ರೋಗ ಪ್ರಬಲವಾಗಿ ಬಹಳಕಾಲ ಬದುಕಲಿಕ್ಕಿಲ್ಲ ಎನ್ನುವುದು. ಆಗಲೇ ಸರಿಯಾದ Radio Therapy ಚಿಕಿತ್ಸೆ ಮಾಡಿಸಿಕೊಂಡಿದ್ದರೆ ನನ್ನ ಕರುಳುಗಳು ಕೊಳೆತು ಹೋಗುವುದನ್ನು ತಪ್ಪಿಸಬಹುದಾಗಿದ್ದಿತು.

ಜೀವನದಿಂದ ವಿಮುಖವಾದ ಮನಸ್ಸು, ಈ ರಾಕ್ಷಸ ಹುಣ್ಣು ಅದರ ಪೂರ್ಣ ಬೆಳವಣಿಗೆಯೊಡನೆ, ನನ್ನ ಜೀವನದ ಪೂರ್ಣತೆಯನ್ನು ಪಡೆಯುವಂತೆ ಪ್ರೇರೇಪಿಸಿತ್ತು.

ತನ್ನ ಗಂಡನಿಂದ ಬಿಡುಗಡೆ ಪಡೆದೊಡನೆಯೇ ಕಿರಣಳ ಸುದ್ದಿ ತಿಳಿದಿದ್ದರೆ ಯಾವ ತೊಂದರೆಯೂ ಇರಲಿಲ್ಲ. ಇತ್ತೀಚೆಗೆ ನನಗೆ ಸರಿ ತೋರಿದುದನ್ನು ಅದು ಅಕಾರ್ಯವೆಂದು ಅನಿಸಿದರೂ, ಸಾಧಿಸುವ ಧೈರ್ಯ ನನ್ನಲ್ಲಿ ಬೆಳೆದಿದೆಯೆಂದೂ ಆಗಾಗ್ಗೆ ಅನಿಸುತ್ತಿರುತ್ತದೆ. ಆಗಲೇ ಆಗಿದ್ದರೆ, ಈ ಜಗತ್ತನ್ನು ಕಾಲ್ಚೆಂಡಿನಂತೆ ಅತ್ತ ಒದ್ದು ಅವಳೊಡನೆ ಬಾಳುವೆ ನಡೆಸುತ್ತಿದ್ದೆ.

ಬಹುಶಃ ರವಿ ಹೇಳುವುದು ನಿಜವಿರಬಹುದು. ಇಲ್ಲಿ ಪ್ರತಿಯೊಂದು ಘಟನೆಯೂ ಆಳವಾದ ಬೇರುಗಳನ್ನು ಪಡೆದುಕೊಂಡೇ ಸಂಭವಿಸುತ್ತಿರಬೇಕು. ಕಿರಣಳೊಡನೆ ಸಹಬಾಳ್ವೆ ನಡೆಸುವ ಸುಯೋಗ ಒದಗಿದಾಗ, ಈ ಜಗತ್ತನ್ನೆದುರಿಸುವ ಧೈರ್ಯ ನನಗಿರಲಿಲ್ಲ. ಈ ಧೈರ್ಯ ಬಂದಾಗ ಕಿರಣಳಿರಲಿಲ್ಲ.

ಕಿರಣಳನ್ನು ಹೇಗೆ ಎದುರಿಸಲಿ? ನನ್ನಂಥವನ ಮುಖ ನೋಡಲು ಅವಳಿಗೆ ಮನಸ್ಸಾದರೂ ಹೇಗೆ ಬಂತೋ, ಮೋಹಿಸಿ, ಪ್ರೀತಿಸಿ, ಕನಸು ಕಟ್ಟಿ ಕೊನೆಗೊಮ್ಮೆ ಈ ಕನಸಿನ ಮನೆಗೆ ಬೆಂಕಿಯಿಟ್ಟು, ಅದು ಬೂದಿಯಾಗುವಾಗ ಅವಳೊಬ್ಬಳನ್ನೇ ಬಿಟ್ಟು ಪಾರಾದ ನನಗೆ ಪ್ರಾಯಶ್ಚಿತ್ತವೆನ್ನುವದಾದರೂ ಇದೆಯೇ? ಆ ಉರಿಯಲ್ಲಿ ಅವಳ ಸೆರಗಿಗೆ ಹತ್ತಿದ ಕಪ್ಪು ಕಲೆ ಈ ರೀತಿ ಜೀವನದುದ್ದಕ್ಕೂ ಅವಳನ್ನು ಕಾಡಿ ಬಾಳುವೆಯನ್ನೇ ಹಾಳು ಮಾಡಿತು.

ಎಚ್ಚರವಾದಾಗ ಕಿರಣ ಮೃದುವಾಗಿ ತಲೆಯನ್ನು ನೇವರಿಸುತ್ತಿದ್ದಳು, ರವಿ ಮುಂಜಾನೆ ಬೇಗ ಬರುವುದಾಗಿ ಹೇಳಿ ಹೊರಟುಹೋದ. ಬಹಳ ಹೊತ್ತು ಯಾರೂ ಮಾತಾಡಲಿಲ್ಲ. ಕೊನೆಗೆ ಧೈರ್ಯವಹಿಸಿ-

“ನೀನು ಬರಬಾರದಾಗಿತ್ತು ಕಿರಣ” ಎಂದು ನಾನೇ ಮೌನ ಮುರಿದೆ.

“ಯಾಕ ಈ ಜಡ್ಡಿನ್ಯಾಗ ನಿಮಗೇನನ್ನ ಆದ್ರೆ ಅದನ್ನೂ ನನ್ನ ತಲಿಮ್ಯಾಗ ಹೊರೆಸಬೇಕಂತ ಮಾಡಿದ್ರೇನು?” ನಗುತ್ತಾ ಕೇಳಿದಳು.

“ನೋಡು ಎಲ್ಲಾ ನಗುವಿನ್ಯಾಗ ತೇಲಿಸಿ ಬಿಡಬ್ಯಾಡ, ಜೀವನದಾಗ ಇಷ್ಟು ಕೆಟ್ಟದು ಮಾಡಿದ ಮ್ಯಾಗೂ ಒಬ್ಬನ್ನ ಕ್ಷಮಿಸ್ತಾರಂದ್ರೆ…” ಮುಂದೆ ಮಾತೇ ಹೊರಡಲಿಲ್ಲ.

“ಪಾರಾಗೋದು ಇದೂ ಒಂದು ರೀತಿ. ನನಕಿಂತ ಮೊದ್ಲೇ ನೀವು ನಿಮ್ಮನ್ನು ಬೈದುಕೊಂಡ್ರೆ ಪಾರಾಗತೀರಂತ ತಿಳದೀರೇನು?” ಮತ್ತೆ ಅದೇ ನಗು..

“ನೀನು ಹೀಗೆಲ್ಲಾ ನಕ್ಕು ನನ್ನ ಕೊಲ್ಲಬ್ಯಾಡ. ನನ್ನ ಬೈ, ನನ ಕೂಡ ಜಗಳಾಡು, ಏನಾದ್ರೂ ಮಾಡಿ ನನ್ನ ಮ್ಯಾಲಿನ ಸಿಟ್ಟು ತೀರಿಸ್ಕೋ.”

“ಅದೇ ಹುಡುಗುತನ, ಅದೇ ಮೂಗಿನ ಮ್ಯಾಲಿನ ಸಿಟ್ಟು. ಈ ನಾಲೈದು ವರ್ಷದಾಗ ಏನನ್ನ ಬದಲಾಗೀರಂತ ಮಾಡಿದ್ದೆ. ಅತಿ ಭಾವುಕತನ ಒಳ್ಳೇದಲ್ಲ. ಒಂದಿಷ್ಟು ಹಣ್ಣು ತಿಂದು ಸಮಾಧಾನ ಮಾಡಿಕೊಳ್ರಿ.”

ಇವಳೂ ಅಷ್ಟೇ ಎಷ್ಟು ವರ್ಷವಾದ್ರೂ ಬದಲಾಗುವವಳಲ್ಲ. ಇವಳ ಮುಂದೆ ವಾದಿಸುವುದು ಒಂದೇ, ಗುಂಡುಕಲ್ಲಿನ ಮುಂದೆ ನಿಂತು ಒದರುವುದು ಒಂದೇ. ಕೇಳುವವರೆಗೆ ಕೇಳಿ ತನಗೆ ತಿಳಿದದ್ದನ್ನೇ ಮಾಡಿಯಾಳು ಕೊನೆಗೆ.

ನೋವು ಕಡಿಮೆಯಾದಂತೆನಿಸಿ ಲೋಡಿಗಾತು ಕುಳಿತೆ. ನೀರು ಮತ್ತು ತಟ್ಟೆಯೊಡನೆ ಬಂದಳು. ನೀರನ್ನು ಬಾಯಿಯಲ್ಲಿ ಮುಕ್ಕುಳಿಸಿ ಉಗುಳಿದ ಮೇಲೆ ವಸ್ತ್ರದಿಂದ ಬಾಯಿ ಒರೆಸಿದಳು. ತಾನೇ ಹಣ್ಣು ತಿನ್ನಿಸಿ, ಫ್ಲಾಸ್ಕಿನಲ್ಲಿದ್ದ ಹಾಲು ಹಾಕಿಕೊಟ್ಟಳು. ಕುಡಿದೆ.

ಮೋಸ, ವಂಚನೆ, ಕುಟಿಲತೆ, ಚಂಚಲತೆ, ಅಸೂಯೆ ಇಂತಹ ಎಷ್ಟೋ ಗುಣಗಳನ್ನು ಹೆಣ್ಣಿನ ಮೇಲೆ ಆರೋಪಿಸಿದ್ದಾರೆ, ಕವಿಗಳು. ಆದರೆ ಬ್ರಹ್ಮ ಇವಳನ್ನು ಸೃಷ್ಟಿಸುವಾಗ ಹೆಣ್ಣಿನ ಆ ಮೂಲ ದ್ರವ್ಯಗಳನ್ನು ತುಂಬಲು ಮರೆತುಬಿಟ್ಟಿರಬೇಕು…

“ಹಂಗ್ಯಾಕ ದಿಟ್ಟಿಸಿ ನೋಡತೀರಿ?”

“ಹೆಣ್ಣಿನ ನೆಲೆ, ಕುದುರೆ ನೆಲೆ ಸಿಗೋದಿಲ್ಲ ಅಂತೈತೆ ಗಾದೆ. ನಿನ್ನಲ್ಲಿ ಅದನ್ನ ಹುಡುಕುತಿದ್ದೆ.”

“ಸಿಕ್ಕಿತೇನು?”

“ಅದೇನೋ ನಿನಗೇ ಗೊತ್ತು. ಹೊತ್ತೆಷ್ಟು?”

“ಒಂದು ಗಂಟೆ” ಗಡಿಯಾರ ನೋಡಿ ಹೇಳಿದಳು.

“ಯಾಕೋ ಕುದಿ ಭಾಳ ಆದಂಗ ಆಗಿ, ಉಸಿರುಗಟ್ಟಿದಂತ ಆಗೈತೆ. ಹೊರಗ ಕರಕೊಂಡು ಹೋಗ್ತಿಯಾ.”

“ಇಷ್ಟು ಕತ್ತಲದಾಗ ಹೊರಗೆ ಹೋಗ್ತಿರೇನು. ಅದೂ ಈ ನೋವಿನ್ಯಾಗ?”

“ಇನ್ನೂ ನನಮ್ಯಾಗ ಅಪನಂಬಿಕೆ ಏನು.”

“ನಿಮ್ಮ ಹುಡುಗಾಟ ಮಾಡ್ಲಿಕ್ಕೆ ಬರ್ತೈತಂತ ಮಾತಾಡ್ತೀರೇನು?”

ಮಂಚದಿಂದ ನಿಧಾನವಾಗಿ ಎಬ್ಬಿಸಿದಳು. ಆಸರೆಗಾಗಿ ಹೆಗಲ ಮೇಲೆ ತೋಳುಹಾಕಿ ನಿಂತುಕೊಂಡೆ. ಅಲಮಾರಿನೊಳಗಿದ್ದ ಬ್ಯಾಟ್ರಿ ತೆಗೆದುಕೊಂಡಳು. ನಿಧಾನವಾಗಿ ಬಾಗಿಲವರೆಗೆ ಬಂದೆವು. ಬ್ಯಾಟ್ರಿ ನನ್ನ ಕೈಯಲ್ಲಿ ಕೊಟ್ಟು ಬಾಗಿಲು ತೆರೆದಳು. ಕೋಣೆಯ ಹಿಂದೆ ಬಯಲು, ಬ್ಯಾಟ್ರಿ ಬೆಳಕಿನಲ್ಲಿ ಹೊರಗೆ ಅಂಗಳದಲ್ಲಿ ಬಂದು ಕುಳಿತೆವು.

ಅಮಾವಾಸ್ಯೆ ಹೋಗಿ ಎರಡು ಮೂರು ದಿನಗಳಾಗಿರಬೇಕು. ಎಲ್ಲೆಲ್ಲೂ ಕತ್ತಲೆಯೋ ಕತ್ತಲೆ. ಆಕಾಶದ ತುಂಬಾ ನಕ್ಷತ್ರಗಳು. ಆಕಾಶದಲ್ಲಿ ಬೆಳಕಿನ ಮೆರವಣಿಗೆ ಹೊರಟಂತಿತ್ತು…

“ಹಾ” ಎಂಥ ನೋವಿದು. ಹೊಟ್ಟೆಯಲ್ಲಿ ಅಲಗು ಆಡಿಸಿದಂತಾಗುತ್ತಿದೆ.

“ನೋವು ಹೆಚ್ಚಾಯ್ತೇನು? ಒಂದಿಷ್ಟು ಆರಾಮಾಗಿ ಕೂಡ್ರಿ” ಎಂದು ಹೇಳಿ ಕಿರಣ ನನ್ನನ್ನು ಎದೆಗೆ ಒರಗಿಸಿಕೊಂಡಳು. ಅವಳೆದೆಯ ಮೇಲೆ ತಲೆಯಿಟ್ಟು ಹಾಗೆಯೇ ಆಕಾಶ ನೋಡುತ್ತಿದ್ದೆ.

ಹುಚ್ಚು ಹಿಡಿಸುವಷ್ಟು ನಕ್ಷತ್ರಗಳು. ಅದೋ ಪಾಂಡವರ ದಾರಿ. ಅದೇ ಇರಬೇಕು ವರ್ಡ್ಸ್‌ ವರ್ತ್ ಕವಿ ಕಂಡ ಮಿಲ್ಕಿ ವೇ (Milky way). ಪ್ರತಿರಾತ್ರಿಯೂ ಎಷ್ಟೆಲ್ಲಾ ನಕ್ಷತ್ರಗಳು ಮೂಡಿ ಮುಳುಗುತ್ತವೆಯೋ ಏನೋ. ಕತ್ತಲೆಯೂ ಇಷ್ಟು ಸುಂದರವಾಗಿ ಸಿಂಗರಿಸಿಕೊಳ್ಳುವದೆಂದು ಗೊತ್ತಿರಲಿಲ್ಲ. ಜೀವನದ ಇದುವರೆಗಿನ ಎಲ್ಲಾ ರಾತ್ರಿಗಳನ್ನು ವ್ಯರ್ಥವಾಗಿಯೇ ಕಳೆದುಬಿಟ್ಟೆನಲ್ಲ. ನಿಜ. ರವಿಯೆಂದಂತೆ ಜೀವನದ ಪ್ರತಿ ಕ್ಷಣವನ್ನೂ ಬದುಕಲಿಲ್ಲ ನಾನು. ಪ್ರತಿಯೊಂದರ ವಿರುದ್ಧವೂ ಮಾನಸಿಕವಾಗಿ ಬಂಡು ಹೂಡುವುದರಲ್ಲಿಯೇ ಆಯುಷ್ಯ ಕಳೆಯಿತು. ಕೋಟ್ಯಾನುಕೋಟಿ ವರ್ಷಗಳಿಂದ ಕ್ಷಣಕ್ಷಣಕ್ಕೆ ಒಂದೊಂದು ಹೊಸತನದಿಂದ ಬೆಳಗುತ್ತಿರುವ ಈ ನಕ್ಷತ್ರಗಳಂತೆ ನಾನು ಪ್ರತಿ ಕ್ಷಣದಲ್ಲಿಯೂ ಹೊಸತನವನ್ನು ಗುರುತಿಸಬೇಕಾಗಿತ್ತು.

“ಚುಕ್ಕಿಗಳನ್ನು ನೋಡಿದೆಯಾ ಕಿರಣ?”

“ಅವನ್ನ ನೋಡ್ತಾ ಇದ್ದೆ. ಸತ್ತವು ನಕ್ಷತ್ರ ಆಗ್ತಾರಂತ ಹೇಳ್ತಿದ್ಲು ನಮ್ಮಮ್ಮ, ಅದಕ ಈಗ ಅನಸ್ತೈತೆ ಎಷ್ಟು ಜನ ಸತ್ತು ಹೋಗ್ಯಾರಲ್ಲಾ ಅಂತ. ಅಬ್ಬ! ಎಷ್ಟು ನಕ್ಷತ್ರಗಳು ತುಂಬ್ಯಾವ.”

“ನಾಳೆ ಸತ್ರೆ ನಾನೂ ಚುಕ್ಕೆ ಆಗ್ತಿನಿ ಅನ್ನು…”

“ನಾನು ಅನಬ್ಯಾಡ್ರಿ, ನಾವು ಅನ್ನಿ. ನೀವು ಸತ್ರೆ ನಾನು ಉಳಿಯಾಕ ಸಾಧ್ಯ ಅಂತ ಇನ್ನೂ ಅನಸ್ತೈತೇನು ನಿಮಗ?”

“ಇಷ್ಟೆಲ್ಲಾ ಕಷ್ಟಕೊಟ್ಟೂ, ನನ್ನಲ್ಲಿ ಏನು ಕಂಡಿದ್ದಿ ಅಂತ ಇಷ್ಟು ಇದು ಐತೆ ನನ್ಮ್ಯಾಲೆ ?”

“ಅದೇನು ಕಂಡೀನೋ ನನಗೊತ್ತಿಲ್ಲ. ಎಲ್ಲಾನೂ ತಳದ ತನಕ ಶೋಧಿಸಿಕೊಂತ ಹೋದ್ರೆ ಕೊನಿಗೆ ಸಿಗೋದು ಶೂನ್ಯsನ. ನನಗೆ ನನ್ ಜೀವನದಾಗ ಏನೂ ಗೊತ್ತಿಲ್ಲ, ಏನರ ಗೊತ್ತಿದ್ರೆ, ಅದು ನೀವು ಒಬ್ರೆs.”

“ಕಿರಣ.”

“ಹೂಂ.”

………………………………
…………………………………..

ಎಚ್ಚರವಾಗಿ ಕಣ್ಣುಬಿಟ್ಟು ನೋಡಿದೆ. ಅವಳೆದೆಯಲ್ಲಿ ಎಷ್ಟು ಹೊತ್ತು ಮುಖವಿಟ್ಟು ಮಲಗಿದ್ದೆನೋ.

“ಚಳಿ ಸುರುವಾಗೈತೆ ಒಳಗ ಹೋಗೋಣ ನಡ್ರಿ” ಎಂದು ಹೇಳಿ ನನ್ನನ್ನು ನಿಧಾನವಾಗಿ ಒಳಗೆ ನಡೆಸಿಕೊಂಡು ಬಂದು ಹಾಸಿಗೆಯ ಮೇಲೆ ಕೂಡಿಸಿದಳು.

“ಹಾಸಿಗೊಂಬಾಕ ರವಿ ಹಾಸಿಗಿ ಐದಾವ ಮಲಿಕ್ಕೊಂಡು ಬಿಡು.”

ಉತ್ತರಿಸದೆ ನನ್ನನ್ನು ಮಲಗಿಸಿ, ಸ್ಟೂಲಿನ ಮೇಲೆ ಕುಳಿತು-

“ನಿದ್ದೆ ಬಂದ್ರ ಮಲಕ್ಕೊಂತೀನಿ.”

ಜೀವನ ನನ್ನೊಡನೆ ಹೀಗೇಕೆ ಕಣ್ಣು ಮುಚ್ಚಾಲೆಯಾಡಿತು? ಹೇಡಿತನವಾಗಿ ಕಾಡಿ ಕಿರಣಳ ಬಾಳನ್ನು ಹಾಳು ಮಾಡಿತು. ಅದೇ ಹೇಡಿತನ ಹೆಣ್ಣಾಗಿ ಬಂದು ನನ್ನ ಹೆಂಡತಿಯಾಗಿ ನನ್ನನ್ನು ಕಾಡಿತು. ಆದ ಈ ತಪ್ಪುಗಳನ್ನೆಲ್ಲಾ ತಿದ್ದಿಕೊಂಡು, ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಬರುವಂತಿದ್ದರೆ…

ಒಂದು ವೇಳೆ ನಾಳಿನ ಆಪರೇಷನ್ ಯಶಸ್ವಿಯಾಗಿ ನಾನು ಬದುಕಿ ಉಳಿದರೆ, ನನ್ನ ಮುಂದಿನ ದಾರಿ ಯಾವುದಾಗಬೇಕು? ಕೊನೆಗೂ ಕಿರಣ ಸಿಕ್ಕಳು ಎನ್ನುವಷ್ಟರಲ್ಲಿ ಹೆಂಡತಿ ಎನ್ನುವವಳು ಹದ್ದಿನಂತೆ ಬಂದು ನನ್ನ ಜೀವನದ ಮೇಲೆರಗಿದ್ದಾಳೆ. ಇಲ್ಲ ಈ ಸಲ ಅವಳನ್ನು ಶಾಶ್ವತವಾಗಿ ಕಳಿಸಿಕೊಟ್ಟು ಬಿಡಬೇಕು. ಹೆಂಡತಿಯ ಯಾವ ಕರ್ತವ್ಯವನ್ನು ಪೂರ್ತಿಗೊಳಿಸಿದ್ದಾಳೆಂದು, ಮುಂದೆಯೂ ನನ್ನ ಹೆಂಡತಿಯೆಂದು ಅವಳನ್ನು ಹೇಗೆ ಪರಿಗಣಿಸಲಿ ?…

ನಾನು, ಕಿರಣ ಇಬ್ಬರೇ ಹೊರಟಿದ್ದೆವು. ಎಷ್ಟು ಹೊತ್ತಿನಿಂದ ನಡೆಯುತ್ತಲಿದ್ದೆವೋ ತಿಳಿಯಲಿಲ್ಲ. ಒಂದು ಅಡವಿ ಬಂದಿತು. ಒಂದು ಹಾವು ಹೆಡೆಯೆತ್ತಿ ನನ್ನನ್ನು ಕಚ್ಚಬೇಕೆನ್ನುವಷ್ಟರಲ್ಲಿ ಕಿರಣ ಅದರ ಹೆಡೆಯನ್ನೇ ಹಿಡಿದಳು. ಅದು ಸೆಣಸಾಡತೊಡಗಿತು. ನಾನು ಅದರ ಬಾಲ ಹಿಡಿದೆ, ಬೀಸಿ ನೆಲಕ್ಕೆ ಬಡಿಯಬೇಕೆನ್ನುವಷ್ಟರಲ್ಲಿ ನನ್ನ ಕೈಯಿಂದ ನುಸುಳಿ ಹುಲಿಯಾಗಿ ಕಿರಣಳ ಮೇಲೆರಗಿತು. ಆ ಹುಲಿಗೆ ನನ್ನ ಹೆಂಡತಿಯದೇ ಮುಖವಿದ್ದಂತೆನಿಸಿತು. ಅದರೊಡನೆ ಹೋರಾಡಬೇಕೆಂದುಕೊಂಡೆ. ವಿಶ್ವಪ್ರಯತ್ನ ಮಾಡಿದರೂ ಕೈಕಾಲು ಒಂದಿಂಚೂ ಅಲುಗಾಡಲಿಲ್ಲ. ಅಸಹಾಯಕನಾಗಿ ಕೂಗಿದೆ.

ಒಮ್ಮೆಲೇ ಎಚ್ಚರವಾಯಿತು. ಭಯದಿಂದ ಮೈಯೆಲ್ಲಾ ಬೆವೆತು ಹೋಗಿತ್ತು. ಕಣ್ಣು ತೆರೆದು ಸುತ್ತಲೂ ನೋಡಿದೆ. ಅದೇ ಕೋಣೆ. ಸ್ಟೂಲಿನ ಮೇಲೆ ಕುಳಿತು, ಮಂಚದ ಮೇಲೆ ತಲೆಯಿಟ್ಟು ಹಾಗೆಯೇ ನಿದ್ದೆ ಹೋಗಿದ್ದಳು ಕಿರಣ. ಅವಳ ಒಂದು ಕೈ ನನ್ನ ಎದೆಯನ್ನು ಬಳಸಿತ್ತು. ಎರಡೆರಡು ಸಲ ಮುಟ್ಟಿನೋಡಿ ಅವಳೆ ಎಂದು ಖಾತ್ರಿ ಮಾಡಿಕೊಂಡೆ.

ದಣಿದಿದ್ದರೂ ಮುಖದಲ್ಲಿ ಪ್ರಶಾಂತತೆ ಲಾಸ್ಯವಾಡುತ್ತಿತ್ತು. ಎಷ್ಟೋ ಜನರು ನನ್ನವರೆ೦ದೆನಿಸಿಕೊಂಡಿದ್ದರೂ, ಜೀವನವಿಡೀ ನೀನೇ ಎಂದು ನನ್ನನ್ನು ನೆಚ್ಚಿಕೊಂಡ ಜೀವ ಇದೊಂದೇ. ನಿನ್ನಲ್ಲಿಯೂ ಮನುಷ್ಯತ್ವವಿದೆ, ನೀನೂ ಒಬ್ಬ ಮನುಷ್ಯ ಎಂದು ನನ್ನನ್ನು ನನಗೇ ಪರಿಚಯ ಮಾಡಿಸಿಕೊಟ್ಟವಳಿವಳು. ಸಮೀಪದಲ್ಲಿದ್ದಾಗ ನನ್ನ ಸುಪ್ತಚೇತನವನ್ನು ಮನದಾಳದಿಂದ ಹಿಡಿದೆತ್ತಿ, ಮನಸ್ಸಿನ ಪಾತಳಿಯಿಂದ ಆಕಾಶದತ್ತ ಹಾರಿಬಿಡುತ್ತಾಳೆವಳು, ನನ್ನೊಂದಿಗೆ ನಿಂತಳೆಂದರೆ ಜಗದಗಲ, ಮುಗಿಲಗಲ, ಮಿಗೆಯಗಲ, ವಿಶ್ವದ ಉದ್ದಗಲಗಳನ್ನು ಅಳೆಯ ಹಚ್ಚುತ್ತಾಳೆ. ಮನಸ್ಸಿನ ವೀಣೆ ಝೇಂಕರಿಸಿ ಸಾವಿರ ರಾಗಗಳನ್ನು ಒಮ್ಮೆಗೇ ಹಾಡಹಚ್ಚುತ್ತದೆ. ನೂರು ಆಸೆಗಳ ಬುದ್ಬುದಗಳನ್ನು ಸೃಷ್ಟಿಸಿ ಮನಸನುಕ್ಕಿಸುವ ಇವಳು, ವಾಸ್ತವತೆಯ ನೀರು ಹಾಕಿ ಉಕ್ಕು ಹೊರಚೆಲ್ಲದಂತೆಯೂ ಮಾಡುತ್ತಾಳೆ.

ಕಿಟಕಿಯ ಹೊರಗೆ ನೋಡಿದೆ. ಬೆಳಗಿನ ಶುಕ್ರ ಮೇಲೇರುತ್ತಿದ್ದ. ಪ್ರತಿದಿನ ಅವನ ನನ್ನಂತಹ ಎಷ್ಟು ಬಂಧಿಗಳನ್ನು ನೋಡುವನೋ. ನಾಲ್ಕು ಗೋಡೆಗಳ ಬಂಧನದಿಂದ ಹೊರಗೆ ಹೋದರೆ, ಬಯಲಿನಲ್ಲಿ ಹತ್ತು ದಿಕ್ಕುಗಳ ಬಂಧನ ಕಾದಿದೆ. ಭೂಮಿಯ ಮೇಲೆ ಹುಟ್ಟಿದ ಯಾರಿಗೂ ಈ ಹಂಗಿನರಮನೆಯ ಬಂಧನ ತಪ್ಪಿದ್ದಲ್ಲ. ಈ ಹಂಗಿನರಮನೆಯ ಹೊರಗೆ ಕ್ಷಿತಿಜದಾಚಿ ಏನಿದೆ ಎಂದು ನೋಡುವ ಹಂಬಲ, ನೋಡಲಾಗದಿದ್ದರೂ ನೋಡಿದವರನ್ನಾದರೂ ಕೇಳಬೇಕೆನ್ನುವ ಆಸೆ. ಈ ಭೂಮಿಯ ಗೋರಿಯ ಮೇಲೆ ಹೊದೆಸಿದ ಆಕಾಶದ ಪರದೆಯನ್ನು ಹರಿದು ಭೂಮವಾಗಿ ಬೆಳೆದು ನಿಲ್ಲುತ್ತೇನೆ ಒಮ್ಮೊಮ್ಮೆ. ಮರುಕ್ಷಣದಲ್ಲಿ ಧೂಳಿಯ ಕಣವಾಗುತ್ತದೆ ನನ್ನ ಅಸ್ತಿತ್ವ, ಚೆನ್ನಮ್ಮನ ದಂಡೆಯನ್ನು ನನ್ನ ಈ ಇವಳ ಸಿರಿಮುಡಿಯಲ್ಲಿ ಮುಡಿಸುವ ಕೈ ತೀಟೆ, ಕೈಗೆಟುಕದ ಅದನ್ನು ಕಿತ್ತು ಕೊಡಲು ಸಪ್ತರ್ಷಿ ಮಂಡಲಕ್ಕೆ ಮೊರೆಯಿಡುತ್ತೇನೆ.

ಯಾಕೋ ಏನೋ, ಇವಳು ತಿರುಗಿ ಬಂದಾಗಿನಿಂದ ಬದುಕಬೇಕೆನ್ನುವ ಆಕಾಂಕ್ಷೆ ಬಲಿಯುತ್ತಿದೆಯೇನೋ ಎನ್ನುವ ಸಂಶಯ ಬರಹತ್ತಿದೆ. ಅದೇ ಗಾಂಭೀರ್ಯ, ಅದೇ ನಿಷ್ಕಪಟತೆ, ಪ್ರಶಾಂತತೆ. ಅಹುದೋ ಅಲ್ಲವೋ ಎನ್ನುವಷ್ಟು ಮುಗುಳು ನಗೆಯ ಮಿಂಚು ತುಟಿಯ ಮೇಲೆ, ಮಮತೆಯುಕ್ಕಿ ಬಂತು. ಅವಳ ಕೈಯನ್ನು ನಿಧಾನವಾಗಿ ನನ್ನ ಎದೆಯ ಮೇಲಿಂದ ತೆಗೆದು, ಎದ್ದು, ಬಾಗಿ ನವಿರಾಗಿ ಚುಂಬಿಸಿದೆ.

ಎಚ್ಚರವಾಗಿ ಸಾವರಿಸಿಕೊಂಡು ಎದ್ದಳು. ಗಡಿಯಾರ ನೋಡಿಕೊಂಡು- “ಘಂಟೆ ಐದಾಯ್ತು. ಇನ್ನೂ ನಿದ್ದೆ ಬರಲಿಲ್ಲವೇನು ನಿಮಗೆ?” ಎಂದು ಹೇಳಿ ನನ್ನನ್ನು ಮಲಗಿಸಿ ಕಾವಲು ಕೂತಳು. ನನಗರಿಯದಂತೆಯೇ ನಿದ್ರೆ ನನ್ನನ್ನಾವರಿಸಿತು.

ಕಣ್ಣು ತೆರೆದು ನೋಡಿದಾಗ ಕಿಟಕಿಯಿಂದ ಬಿಸಿಲು ಬಿದ್ದಿತ್ತು. ಎದುರಿಗೆ ಕಿರಣ ನಿಂತಿದ್ದಳು. ಎಚ್ಚರಗೊಂಡದ್ದನ್ನು ನೋಡಿ ನನಗೆ ಮುಖ ತೊಳೆಸುವ ಸಿದ್ಧತೆ ಮಾಡಿದಳು. ಹೊರಗೆ ರವಿ ತಮ್ಮನೊಡನೆ ಮಾತನಾಡುತ್ತಿದ್ದಂತಿತ್ತು. ಮುಖ ತೊಳೆದ ಸ್ವಲ್ಪ ಹೊತ್ತಿನೊಳಗಾಗಿ ಅಮ್ಮ, ಅಪ್ಪ ಮತ್ತು ನನ್ನ ಹೆಂಡತಿ ತನ್ನ ಗೆಳತಿಯರೊಡನೆ, ಹಾಜರಾದರು. ಒಬ್ಬೊಬ್ಬರಾಗಿ ಮಾತನಾಡಿಸಿದರು. ಯಾಕೋ ಇವರೆಲ್ಲರನ್ನು ಹೊಸದಾಗಿ ನೋಡಿದಂತೆನಿಸುತ್ತದೆ. ಯಾರ ಮೇಲೆಯೂ ಯಾವ ಭಾವನೆಗಳೂ ಮೂಡಲಿಲ್ಲ.

ಯಾವ ಭಾವನೆಗಳನ್ನು ವ್ಯಕ್ತಪಡಿಸಿಯಾದರೂ ಪ್ರಯೋಜನವೇನು? ಸತ್ತು ಹೋದರಂತೂ ನನ್ನ ಬಯಕೆ ಈಡೇರಿದಂತಾಯಿತು. ಇಲ್ಲ ಬದುಕಿದೆನೆಂದರೆ… ಇಷ್ಟೇ, ಜೀವನವನ್ನು ಇನ್ನೂ ಅರ್ಥಪೂರ್ಣವಾಗಿ ಬದುಕಬೇಕು. ಜೀವನದ ಪ್ರತಿಯೊಂದು ಕ್ಷಣವನ್ನು ಬದುಕಬೇಕು. ಅಂದರೆ ನನ್ನಲ್ಲಿ ಬದುಕಲೇಬೇಕೆನ್ನುವ ಹಠವಿಲ್ಲ. ಸಾವಿನ ವಿಷಯವಾಗಿ ಜೀವಂತವಾಗಿದ್ದ ಇಷ್ಟು ದಿನಗಳೆಲ್ಲವೂ ವಿಚಾರ ಮಾಡಿದೆ. ಈಗ ಉಳಿದಿರುವ ಒಂದು ಕ್ಷಣ ಬದುಕಿನ ಬಗ್ಗೆ ಯೋಚಿಸಿದರೆ ಆಗುವುದಾದರೂ ಏನು?…

ಡಾಕ್ಟರು, ನರ್ಸುಗಳೊಡನೆ ಬಂದು ನನ್ನನ್ನು ಬಂಡಿಯ ಮೇಲೆ ಮಲಗಿಸಿ, ಆಪರೇಷನ್ ಥಿಯೇಟರಿಗೆ ಒಯ್ಯುವ ವ್ಯವಸ್ಥೆ ಮಾಡಿದರು. ನನ್ನನ್ನು ಬಂಡಿಯ ಮೇಲೆ ಮಲಗಿಸಲಾಯಿತು. ಎಲ್ಲರೂ ಸಾಲಾಗಿ ನಿಂತು ನೋಡುತ್ತಿದ್ದರು. ಅಮ್ಮನ ಕಣ್ಣಿನಲ್ಲಿ ನೀರು ತುಳುಕುತ್ತಿದ್ದವು. ಅಪ್ಪ ಸಮಾಧಾನಪಡಿಸುತ್ತಿದ್ದಾನೆ. ಹೆಂಡತಿ ಯಾವುದೋ ಭಾವನೆಗಳನ್ನು ಮುಖದ ಮೇಲೆ ಬಲವಂತವಾಗಿ ಎಳೆದು ತರಲು ಪ್ರಯತ್ನಿಸುತ್ತಿದ್ದಾಳೆ. ಕಿರಣ, ರವಿ ಮತ್ತು ಅಮ್ಮ ಆಪರೇಷನ್ ಥಿಯೇಟರಿನ ಬಾಗಿಲವರೆಗೂ ಬಂದರು.

ಆಯಿತು ಇನ್ನೊಂದು ಕ್ಷಣದಲ್ಲಿ ಇವರೆಲ್ಲರಿಂದ ಮರೆಯಾಗಿ ಸಾವು ಬದುಕಿನ ಚಕ್ರವ್ಯೂಹದಲ್ಲಿ ಈ ಬಂಡಿ ನನ್ನನ್ನು ದೂಡುತ್ತದೆ.

ಜನವರಿ, ೧೯೬೮