ಹೆಸರು ಕಲಿತ ಮಂಜಣ್ಣ ಸಂಬಳವಿದ್ದ ಮನೆಗೆ ಹೋಗಿ ದನಗಳನ್ನೆಲ್ಲಾ ಕಟ್ಟಿ ಹಾಕಿ ಎಣ್ಣೆ ಅಂಗಡಿಗೆ ಹೋಗಿ, ಹೆಸರು ಕಲಿತ ಖುಷಿಗೆ ತುಸು ಹೆಚ್ಚೇ ಕುಡಿದಿದ್ದಾನೆ. ಮನೆ ಓಣಿಯಾಗೆಲ್ಲಾ ತೂರಾಡುತ್ತಾ ‘ನಂಗೆ ಇಂಗ್ಲೀಸ್ನ್ಯಾಗೆ ಹೆಸ್ರು ಬರೆಯೋಕೆ ಬರುತ್ತೆ’ ಎಂದು ಕೂಗಾಡುತ್ತಾ ಹೋಗಿದ್ದಾನೆ. ಮನೆಗೆ ಹೋಗಿ ಮಣ್ಣ ನೆಲದ ಮೇಲೆ ಕಲ್ಲಲ್ಲಿ ಮನೆ ತುಂಬಾ ಕೆತ್ತಿದ್ದಾನೆ. ಅಷ್ಟು ಸಾಲದೆಂಬಂತೆ ಮಣ್ಣ ಗೋಡೆಯ ಮೇಲೂ ಕಲ್ಲಲ್ಲಿ ಬರೆದಿದ್ದಾನೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ
ನಾನಾಗ ಒಂಬತ್ತನೇ ತರಗತಿ ಓದುತ್ತಿದ್ದ ಸಮಯ. ರಜೆ ಸಿಕ್ಕರೆ ಸಾಕು ಊರ ಹೊರಗಿನ ಪ್ರೌಢಶಾಲೆಯ ಹತ್ತಿರ ಓದಲೆಂದು ಹೋಗುತ್ತಿದ್ದೆ. ಒಮ್ಮೆ ಹೀಗೆ ಹೋದಾಗ ದನ ಕಾಯಲು ಬಂದ ಒಬ್ಬ ನಾನಿರುವ ಜಾಗಕ್ಕೆ ಬಿಸಿಲಿನ ಧಗೆ ತಾಳಲಾರದೇ ಬಂದನು. ಅವನ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ನನಗೆ ತಿಳಿದ ವಿಷಯವೇನೆಂದರೆ ಅವನ ಹೆಸರು ಮಂಜಪ್ಪ, ಅವನು ಓದಿಯೇ ಇಲ್ಲ ಎಂಬುದು! ಅವರಪ್ಪ ಚಿಕ್ಕಂದಿನಿಂದಲೂ ಬೇರೆಯವರ ಮನೆಯಲ್ಲಿ ಅವನನ್ನು ಸಂಬಳಕ್ಕೆ ಇಟ್ಟಿದ್ದನಂತೆ! ತನ್ನ ಹೆಸರನ್ನೂ ಸಹ ಬರೆಯಲು ಅವನಿಗೆ ಬರುವುದಿಲ್ಲವೆಂಬುದು! “ವಿದ್ಯಾ ದಾನ ಶ್ರೇಷ್ಠ ದಾನ, ಕಲಿತ ಋಣವನ್ನು ಕಲಿಸಿ ತೀರಿಸಬೇಕು, ನಾವು ಮತ್ತೊಬ್ಬರಿಗೆ ಕಲಿಸಿದರೆ ನಮಗೆ ಒಳ್ಳೆಯದಾಗುತ್ತದೆ” ಎಂದು ಹೇಳುತ್ತಿದ್ದ ನಮ್ಮ ಶಿಕ್ಷಕರ ಮಾತು ಪಾಲಿಸಲೋಸುಗ ಅವನಿಗೆ ಹೆಸರು ಬರೆಯುವುದನ್ನು ಕಲಿಸಲು ಬಯಸಿದೆ.
ಅವನಿಗೆ “ನಿನಗೆ ಹೆಸರು ಬರೆಯಲು ಕಲಿಸಲಾ?” ಎಂದು ಕೇಳಿದೆ. ಅದಕ್ಕವನು ಖುಷಿಯಿಂದ ‘ಆಯ್ತು’ ಎಂದು ಒಪ್ಪಿದ. ನಾನು “ಇಂಗ್ಲೀಷಿನಲ್ಲಿ ಕಲಿಸಲಾ ಅಥವಾ ಕನ್ನಡದಲ್ಲಿ ಕಲಿಸಲಾ?” ಎಂದದ್ದಕ್ಕೆ ಅವನು ‘ಇಂಗ್ಲೀಸಿನಲ್ಲೇ ಕಲಿಸಿ’ ಎಂದ. ನಾನು ಅವನ ಹೆಸರನ್ನು ಇಂಗ್ಲೀಷಿನಲ್ಲಿ ಕಡಪದ ಕಲ್ಲ ಮೇಲೆಯೇ ಬರೆದೆ. ಅವನು ಕಲಿಯಲು ಎಷ್ಟು ಆಸಕ್ತಿ ತೋರಿಸಿದನೆಂದರೆ ಕಲಿಯಲು ತಕ್ಷಣ ಕಾರ್ಯಪ್ರವೃತ್ತನಾಗಿ ಬರೆದು ಬರೆದು practice makes man perfect ಎಂಬಂತೆ ಹೆಸರು ಬರಿಯೋದನ್ನ ಕಲಿತೇ ಬಿಟ್ಟ! ಆಗ ಅವನ ಮುಖದಲ್ಲಿ ಸಂತಸ ಎಷ್ಟಿತ್ತೆಂದರೆ, ತಾನು ಮಹತ್ತರವಾದುದನ್ನು ಸಾಧಿಸಿದ ಭಾವ ಅವನ ಕಣ್ಣಿನಲ್ಲಿ ಎದ್ದು ಕಾಣುತ್ತಿತ್ತು! ನಾನು ಸಂಜೆಯವರೆಗೂ ಅಲ್ಲೇ ಇದ್ದು ಓದಿಕೊಂಡು ವಾಪಸ್ ಮನೆಗೆ ಬಂದೆ. ಮಂಜಣ್ಣನೂ ಸಹ ದನಗಳನ್ನು ಕಾಯುವುದರ ಜೊತೆಯಲ್ಲಿ ಬಿಡುವಿನಲ್ಲಿ ಇಂಗ್ಲೀಷಿನಲ್ಲಿ ಹೆಸರನ್ನು ಬರೆಯುತ್ತಾ ಸಂಜೆಯವರೆಗೂ ತಾಲೀಮು ನಡೆಸಿ ಮನೆ ಕಡೆ ಅವನೂ ತೆರಳಿದನು.
ಮಾರನೇ ದಿನ ಮಂಜಣ್ಣ ಹೆಂಡತಿ ನಮ್ಮ ಮನೆ ಹುಡುಕಿಕೊಂಡು ಬಂದು ನನ್ನ ಅಮ್ಮನ ಹತ್ತಿರ “ನನ್ನ ಗಂಡನಿಗೆ ಇಂಗ್ಲೀಸ್ನ್ಯಾಗೆ ಹೆಸರನ್ನ ನಿನ್ನ ಮಗ ಕಲಿಸಿದ್ನಂತೆ, ಆ ರೀತಿ ಮಾಡಬಾರ್ದಿತ್ತು ಕಣಕ್ಕ” ಎಂದು ಒಂದೇ ಸಮನೇ ಮಾತಾಡುತ್ತಾ ತನ್ನ ರೋಧನೆ ಹೇಳಿಕೊಂಡಳು. ಒಳಗಿದ್ದ ನನಗೆ “ಇದೇನಪ್ಪಾ ಇದು ನಾನು ಮಾಡಿದ್ದು ಒಳ್ಳೇ ಕೆಲಸವಲ್ಲವ?” ಎಂದು ನನ್ನೊಳಗೆ ಪ್ರಶ್ನಿಸಿಕೊಂಡು ಅವನ ಹೆಂಡತಿಯ ಬಳಿ ಬಂದು “ಅಕ್ಕಾ, ಅದರಲ್ಲೇನು ತಪ್ಪು? ಹೆಸರು ಬರೆಯಲು ಕಲಿಸಿದ್ದು ಒಳ್ಳೆಯದಲ್ವಾ?” ಎಂದು ಮರುಪ್ರಶ್ನಿಸಿದೆ. ಅವನ ಹೆಂಡತಿ “ಹೌದಣ್ಣಾ ನೀನು ಮಾಡಿದ್ದು ಸರಿ, ಆದರೆ ನನ್ನ ಗಂಡ ಹೆಸರು ಬರೆಯಲು ಕಲಿತ ಖುಷಿಗೆ ಮನೆ ನೆಲ, ಗೋಡೆಯನ್ನೆಲ್ಲಾ ಹಾಳು ಮಾಡಿದ್ದಾನೆ ಎಂದಳು!” ನಂಗೆ ಆಶ್ಚರ್ಯವಾಗಿ ನಡೆದ ಘಟನೆಯನ್ನು ವಿವರವಾಗಿ ಹೇಳಲು ತಿಳಿಸಿದಾಗ ಅವಳು ತಿಳಿಸಿದಳು.
ಅದು ಹೀಗಿದೆ: ಹೆಸರು ಕಲಿತ ಮಂಜಣ್ಣ ಸಂಬಳವಿದ್ದ ಮನೆಗೆ ಹೋಗಿ ದನಗಳನ್ನೆಲ್ಲಾ ಕಟ್ಟಿ ಹಾಕಿ ಎಣ್ಣೆ ಅಂಗಡಿಗೆ ಹೋಗಿ, ಹೆಸರು ಕಲಿತ ಖುಷಿಗೆ ತುಸು ಹೆಚ್ಚೇ ಕುಡಿದಿದ್ದಾನೆ. ಮನೆ ಓಣಿಯಾಗೆಲ್ಲಾ ತೂರಾಡುತ್ತಾ ‘ನಂಗೆ ಇಂಗ್ಲೀಸ್ನ್ಯಾಗೆ ಹೆಸ್ರು ಬರೆಯೋಕೆ ಬರುತ್ತೆ’ ಎಂದು ಕೂಗಾಡುತ್ತಾ ಹೋಗಿದ್ದಾನೆ. ಮನೆಗೆ ಹೋಗಿ ಮಣ್ಣ ನೆಲದ ಮೇಲೆ ಕಲ್ಲಲ್ಲಿ ಮನೆ ತುಂಬಾ ಕೆತ್ತಿದ್ದಾನೆ. ಅಷ್ಟು ಸಾಲದೆಂಬಂತೆ ಮಣ್ಣ ಗೋಡೆಯ ಮೇಲೂ ಕಲ್ಲಲ್ಲಿ ಬರೆದಿದ್ದಾನೆ. ಅಷ್ಟೂ ಸಾಲದೆಂಬಂತೆ ಅವನ ಮಡದಿಗೆ ರಾತ್ರಿಯೆಲ್ಲಾ ಮಲಗೋಕೆ ಬಿಟ್ಟಿಲ್ಲ. ‘ಏಯ್ ನೋಡೇ ಇಲ್ಲಿ ಇಂಗ್ಲೀಸ್ನ್ಯಾಗೆ ಹೆಸರು ಬರೆಯೋಕೆ ಬರುತ್ತೆ ನಂಗೆ, ನಾ ಬರೆಯೋದ ನೋಡು’ ಅಂತಾ ಅವಳನ್ನು ಪದೇ ಪದೇ ಪೀಡಿಸಿದ್ದಾನೆ. ಮನೆಯ ಅಕ್ಕಪಕ್ಕದವರಿಗೂ ಅವನ ಚೀರಾಟಗಳಿಂದ ತೊಂದರೆ ಕೊಟ್ಟಿದ್ದಾನೆ. ಅವಳ ಈ ಮಾತುಗಳನ್ನು ಕೇಳಿ ನನಗೂ ಯಾಕಾದ್ರೂ ಹೆಸರು ಬರೆಯೋದು ಕಲಿಸಿದ್ನಪ್ಪ ಅನ್ನಂಗೆ ಆಯ್ತು. ‘ಅವನು ಸಿಕ್ಕರೆ ಇನ್ಮುಂದೆ ಹೀಗೆ ಮಾಡ್ಬೇಡ’ ಅಂತಾ ಹೇಳ್ತಿನಿ ಎಂದು ಹೇಳಿ ಆವಕ್ಕನಿಗೆ ನಮ್ಮಮ್ಮ ಕುಡಿಯೋಕೆ ‘ಚಾ’ ಹಾಕ್ಕೊಳಕೆ ಎಲೆ ಅಡಿಕೆ ಕೊಟ್ಟು ಸಮಾಧಾನ ಮಾಡಿ ಕಳಿಸಿದರು.
ಕೆಲಕಾಲ ಕಳೆದ ನಂತರ ಮತ್ತೆ ಮಂಜಣ್ಣ ಸಿಕ್ಕು “ಹೆಸರು ಬರೆಯಲು ಕಲಿಸಿದ ನಿನ್ನ ಉಪಕಾರವ ನಾನು ಜೀವ ಇರೋವರೆಗೂ ಮರೆಯೋಲ್ಲ ಕಣಣ್ಣಾ” ಎಂದು ಹೇಳಿದ. ಅಲ್ಲದೇ “ಚುನಾವಣೆಗೆ ನಾನು ವೋಟು ಹಾಕೋಕೆ ಹೋದಾಗ ಅಲ್ಲಿನ ಸಿಬ್ಬಂದಿ ನನ್ನ ಬಟ್ಟೆ ನೋಡಿ ನನಗೆ ಹೆಬ್ಬಟ್ಟಾ ಅಂತಾ ಕೇಳಿದ್ರು. ನಾನು ಇಲ್ಲ ಹೆಸರು ಬರೀತೇನೆ ಅಂತಾ ಇಂಗ್ಲೀಸ್ನ್ಯಾಗೆ ಹೆಸ್ರು ಬರೆದೆ. ಅವರಿಗೆಲ್ಲಾ ಆಶ್ಚರ್ಯ ಆಯ್ತು” ಅಂದ. ಅಂದಿನಿಂದ ಅವನು ಎಲ್ಲೇ ಸಿಗಲಿ ನಂಗೆ ‘ನಮಸ್ಕಾರ ಸ್ವಾಮಿ’ ಅನ್ತಿದ್ದ. ‘ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬ ಮಾತನ್ನು ಅಕ್ಷರಶಃ ಅದನ್ನು ತಿಳಿಯದೆಯೇ ಅವನು ಪಾಲಿಸಿದ್ದ. ‘ಉಪಾಧ್ಯಾಯಶ್ಚ ವೈದ್ಯಶ್ಚ ಕಾರ್ಯಂತೇ ನಿಷ್ಪ್ರಯೋಜಕ’ (ಉಪಾಧ್ಯಾಯರು, ವೈದ್ಯರು ಕಾರ್ಯವಾದ ಮೇಲೆ ನಿಷ್ಪ್ರಯೋಜಕರು) ಎಂಬ ಮಾತನ್ನು ಹಲವು ಬುದ್ಧಿವಂತರೇ ಪಾಲಿಸುತ್ತಿರುವಾಗ ಮಂಜಣ್ಣ ಈ ಮಾತನ್ನು ಸುಳ್ಳಾಗಿಸಿ ನಂಗೆ ಕಲಿಸಿದ ಖುಷಿಯ ಸಾರ್ಥಕತೆಯನ್ನು ನೀಡಿದ್ದ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Nice
ಇಂಗ್ಲಿಷ್ ಕಲಿತು ಮಾಡಿದ ಅವಾಂತರ ಚೆನ್ನಾಗಿದೆ.😄😄