ಇಷ್ಟ ರೋಗ

ನಿಶ್ಚಿತವಾಗಿಯೂ
ಇದೊಂದು ರೋಗ
ಅವಳೇ ಇಷ್ಟ ಪಟ್ಟು
ಹಚ್ಚಿಕೊಂಡದ್ದು

ಎಲ್ಲೆಂದರಲ್ಲಿ ತುರಿಕೆ
ಪರಚಿಕೊಂಡು ಮೈ ಎಲ್ಲ
ಗಾಯ
ಅವಳಿಗೆ ಹುಚ್ಚು
ಹಿಡಿಯುವುದೊಂದೆ ಬಾಕಿ

ಪ್ರತಿ ಬಾರಿಯೂ ಕೆರೆದಾಗ
ಆಹಾ ಎಂಥ ಸುಖವಾಗುತ್ತಿತ್ತು
ಆದರೆ
ಹಿತವಾಗಿದ್ದು ಎಲ್ಲಿಗೆ
ಉರಿಯುವ ದೇಹದ ಪದರಕ್ಕೊ
ಅಥವಾ
ಹೀಗೆ ಮಾಡೆಂದು
ಹೇಳಿದ ಮನಸ್ಸಿಗೊ

ಮೊದಮೊದಲು
ಹಿತವೆಂದುಕೊಂಡವಳಿಗೆ
ಕಂಡೂ ಕಂಡೂ
ಹಗಲು ಬಾವಿಗೆ ಬಿದ್ದ ಅನುಭವ
ಪರಚಿಕೊಂಡಲೆಲ್ಲ
ಹೆಪ್ಪುಗಟ್ಟಿದ ರಕ್ತದ ಕಲೆ
ಮೈ ತುಂಬ ಗಾಯ

ಹೀಗೇ
ಪರಚಿಕೊಂಡು ಗಾಯ
ಮಾಡಿ ಕೊಳ್ಳುವುದರಲ್ಲಿ
ಮತ್ತು
ಗಾಯಗಳನ್ನು ಕೆದಕುವುದರಲ್ಲಿ
ಸುಖವಿಲ್ಲ
ಎಂದು ಅವಳಿಗೆ
ಗೊತ್ತಾಗುವ ಹೊತ್ತಿಗೆ
ಗಾಯಗಳು ಅವಳನ್ನು
ಆಳತೊಡಗಿದ್ದವು
ಆಳವಾಗಿ ಬೇರೂರಿ.

ವೀಣಾ ನಿರಂಜನ ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯವರು.
ಅಂಚೆ ಇಲಾಖೆಯಲ್ಲಿ ಸುಮಾರು ಇಪ್ಪತ್ನಾಲ್ಕು ವರ್ಷ ಸೇವೆ ಸಲ್ಲಿಸಿದ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ಇವರು ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.
ಸಾಹಿತ್ಯದಲ್ಲಿ ಆಸಕ್ತಿ. ಕಾವ್ಯವೆಂದರೆ ಪ್ರೀತಿ.
ವೀಣಾ ಅವರ ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ