ಅಲ್ಲಿ ಇರೋದೇ ಬೇಡ, ನನ್ನ ದೇಶವೇ ನನಗೆ ಚಂದ, ಅಲ್ಲಿಯೇ ಸುಖ ಇದೆ, ವಾಪಸ್ಸು ಹೋಗಿಯೇ ತೀರುತ್ತೇನೆ ಅಂತೆಲ್ಲ ಬಡಬಡಿಸುತ್ತಿದ್ದ ನನಗೆ, ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಅಲ್ಲಿದ್ದು, ತಾವು ಅಲ್ಲಿ ಸುಖವಾಗಿ ಇದ್ದೇವೆ, ಯಾವುದೇ ವಿಷಾದ ಇಲ್ಲ ಅಂತ ಮಾತು ಹಾಗೂ ಕೃತಿಯಿಂದ ತೋರಿಸಿದ ನನ್ನ ಅಕ್ಕ ಬೆರಗು ಮೂಡಿಸಿದ್ದಳು! ಆ ಕ್ಷಣದಿಂದ ಬೇರೆಯವರಿಗೆ, ನೀವ್ಯಾಕೆ ಅಮೆರಿಕೆಯಲ್ಲಿಯೇ ಇರಲು ಬಯಸುತ್ತೀರಿ? ಭಾರತಕ್ಕೆ ಯಾಕೆ ವಾಪಸ್ಸು ಬರೋದಿಲ್ಲ? ಎಂಬಿತ್ಯಾದಿ ಅಧಿಕಪ್ರಸಂಗಿ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ಮೂರನೆಯ ಬರಹ

ನಾವೆಲ್ಲ ವಿದ್ಯಾಳ ಮನೆಯಲ್ಲಿ ಇದ್ದ ಒಂದು ವಾರ ಬಹಳ ಖುಷಿಯಿಂದ ಕಳೆದೆವು. ಅವರ ಜೊತೆಗೆ ಸಂವಹನ ಮಾಡಿದಂತೆಲ್ಲ, ತುಂಬಾ ವರ್ಷಗಳ ಹಿಂದೆ ಬಂದು ಅಲ್ಲಿ ನೆಲೆಸಿರುವ ಭಾರತೀಯರ ಜೀವನಶೈಲಿಯ ಬಗ್ಗೆ ತುಂಬಾ ಅರಿವು ಮೂಡಿತು. ಅಲ್ಲಿ ಇರೋದೇ ಬೇಡ, ನನ್ನ ದೇಶವೇ ನನಗೆ ಚಂದ, ಅಲ್ಲಿಯೇ ಸುಖ ಇದೆ, ವಾಪಸ್ಸು ಹೋಗಿಯೇ ತೀರುತ್ತೇನೆ ಅಂತೆಲ್ಲ ಬಡಬಡಿಸುತ್ತಿದ್ದ ನನಗೆ, ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಅಲ್ಲಿದ್ದು, ತಾವು ಅಲ್ಲಿ ಸುಖವಾಗಿ ಇದ್ದೇವೆ, ಯಾವುದೇ ವಿಷಾದ ಇಲ್ಲ ಅಂತ ಮಾತು ಹಾಗೂ ಕೃತಿಯಿಂದ ತೋರಿಸಿದ ನನ್ನ ಅಕ್ಕ ಬೆರಗು ಮೂಡಿಸಿದ್ದಳು! ನೆಮ್ಮದಿ ಇಲ್ಲೆ ಇದೆ.. ಅಲ್ಲೇ ಇದೆ ಅಂತ ಹುಡುಕೋದಕ್ಕಿಂತ ಇದ್ದಲ್ಲಿಯೇ ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂಬ ಬೆಳಕು ಕೂಡ ಅವತ್ತೇ ಮೂಡಿತು. ಹಾಗಂತ ಅಲ್ಲಿಯೇ ಇದ್ದುಬಿಡೋಣ ಅಂತ ನನಗೇನು ಅನಿಸಲಿಲ್ಲ ಬಿಡಿ. ಆದರೆ ಆ ಕ್ಷಣದಿಂದ ಬೇರೆಯವರಿಗೆ, ನೀವ್ಯಾಕೆ ಅಮೆರಿಕೆಯಲ್ಲಿಯೇ ಇರಲು ಬಯಸುತ್ತೀರಿ? ಭಾರತಕ್ಕೆ ಯಾಕೆ ವಾಪಸ್ಸು ಬರೋದಿಲ್ಲ? ಎಂಬಿತ್ಯಾದಿ ಅಧಿಕಪ್ರಸಂಗಿ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದೆ!

ನಾವು ಭಾರತಕ್ಕೆ ಮರಳುವುದರ ಒಳಗೆ ನೀವಿಬ್ಬರೂ ಓಮಾಹಕ್ಕೆ ಬನ್ನಿ ಅಂತ ಅವರಿಗೆ ಆಹ್ವಾನಿಸಿ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟೆವು. ಅದೇ ಸಮಯದಲ್ಲಿ ನನ್ನ ಮಿತ್ರ ರಮೇಶ ಅನ್ನುವವರು ಕೂಡ ಭಾರತದಿಂದ ಅಲ್ಲಿಗೆ ಬಂದಿದ್ದರು. ಅಲ್ಲಿ ಮೂರು ದಿನಗಳು ತಿರುಗಾಡಿ ಓಮಾಹಕ್ಕೆ ಮರಳಿ ಹೋಗುವ ಯೋಜನೆ ಇತ್ತು. ಮತ್ತದೇ ಲೋಕಲ್ ವಿಮಾನದಲ್ಲಿ ದೊರೆತ ಫ್ರೀ ಶೇಂಗಾ ಪೊಟ್ಟಣವನ್ನು ಒಡೆದು ತಿಂದು ಮುಗಿಯುತ್ತಲೆ, ಕ್ಯಾಪ್ಟನ್ ವಿಮಾನವನ್ನು ಭೂಸ್ಪರ್ಶ ಮಾಡಿಸಲು ತಯಾರಿ ನಡೆಸಿದ್ದ! ಅಷ್ಟು ಹತ್ತಿರದ ಪಟ್ಟಣ ಅದು!

ರಮೇಶ ತಮ್ಮ ಪತ್ನಿ ಹಾಗೂ ಮಗಳ ಸಮೇತ ವಿಮಾನ ನಿಲ್ದಾಣದಿಂದ ನಮ್ಮನ್ನು ಕರೆತರಲು ಬಂದಿದ್ದರು. ನಾವು ಹೋದಾಗ ಕ್ರಿಸ್ಮಸ್ ಇತ್ತು. ಹೀಗಾಗಿ ಇಡೀ ನಗರದಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ಝಗಮಗಿಸುವ ವಿದ್ಯುತ್ ದೀಪಗಳು, ತಹರೆವಾರಿ ಅಲಂಕಾರಗಳು ಮನಮೋಹಕವಾಗಿದ್ದವು. ಅಮೆರಿಕೆಯವರಿಗೆ ಇರೋದೇ ಬೆರಳೆಣಿಕೆಯಷ್ಟು ಹಬ್ಬಗಳು. ಅದರಲ್ಲಿ ಈ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತಾರೆ. ಅವತ್ತು ಸಂಜೆ ಪಟ್ಟಣದಲ್ಲಿ ಅಲ್ಲಲ್ಲಿ ಸುತ್ತಾಡಿದೆವು. ಮಾಲ್‌ಗಳಲ್ಲಿ ಎಲ್ಲಿ ನೋಡಿದರೂ ಕ್ರಿಸ್ಮಸ್ ಟ್ರೀ ಗಳು ಅಲಂಕಾರಗೊಂಡಿದ್ದವು.

ಬೆಂಗಳೂರಿನಲ್ಲಿ ಹಲವು ವರ್ಷಗಳ ಹಿಂದೆ ಲೊಟ್ಟೆಗೊಲ್ಲ ಹಳ್ಳಿಯಲ್ಲಿ ಪರಿಚಯವಾಗಿ ಸ್ನೇಹಕ್ಕೆ ತಿರುಗಿದ್ದ ನಮ್ಮಿಬ್ಬರ ಕುಟುಂಬಗಳು ಕಾರಣಾಂತರಗಳಿಂದ ಕ್ರಮೇಣವಾಗಿ ಬೆಂಗಳೂರಿನಲ್ಲಿಯೇ ಬೇರೆ ಬೇರೆ ಕಡೆಗೆ ಹೋಗಿ ನೆಲೆಸಿದ್ದೆವು. ನಮ್ಮ ಮನೆಯಿಂದ ಅವರ ಮನೆಗೆ ಹೋಗಲು ಒಂದು ಗಂಟೆ ಸಾಕಾಗಿತ್ತಾದರೂ, ಬೆಂಗಳೂರಿನಲ್ಲಿ ನಮ್ಮ ಭೇಟಿ ಆಗಿರಲೆ ಇಲ್ಲ. ಆದರೆ ಈಗ ಎಷ್ಟೋ ಸಾವಿರ ಕಿಲೋಮೀಟರುಗಳ ಅಂತರದ ದೇಶದಲ್ಲಿ ಹೀಗೆ ಭೇಟಿಯಾಗಿದ್ದೆವು! ಮನೆಗೆ ಬಾ ಬಾ ಅಂತಿದ್ದಿರಿ, ಅದಕ ನಿಮ್ಮನ್ನ ಭೇಟಿ ಆಗಲಿಕ್ಕೆ ಅಮೆರಿಕಾಕ್ಕ ಬಂದವಿ ನೋಡ್ರಿ ಅಂತ ತಮಾಷೆ ಮಾಡಿದೆ. ಅವರೂ ಕೂಡ ನನ್ನ ಹಾಗೆಯೇ ಒಂದು ಕಂಪೆನಿಯ ಪರವಾಗಿ ಅಲ್ಲಿಗೆ ಬಂದಿದ್ದರು. ಅವರಿಗೂ ಅಲ್ಲಿಯೇ ಶಾಶ್ವತವಾಗಿ ನೆಲೆಸುವ ಅವಕಾಶ ಇತ್ತು. ಅವರ ಮನೆಯಲ್ಲೊಂದು ಬಹು ದೊಡ್ಡ ಟಿವಿ ಕೂಡ ಇತ್ತು. ಒಳ್ಳೆ ಮಿನಿ ಥೇಟರ್ ಇದ್ದ ಹಾಗೆ. ಅದನ್ನು ಅವರ ಕಂಪೆನಿಯವರೆ ಕೊಡಿಸಿದ್ದರು. ಇನ್ನೂ ಹಲವಾರು ದುಬಾರಿ ವಸ್ತುಗಳನ್ನು ಅವರ ಮನೆಯಲ್ಲಿ ಗಮನಿಸಿದೆ.

ಇಲ್ಲಿಂದ ಅಲ್ಲಿಗೆ ಹೋಗುವವರದು ಎರಡು ಮೂರು ಬಗೆಗಳಿವೆ. ನನ್ನ ಕಂಪೆನಿಯವರು ಕಳಿಸಿದ್ದ ವಿಸಾದಲ್ಲಿ ನಾನು ಅಮೆರಿಕೆಯ ಉದ್ಯೋಗಿ ಅಂತಲೇ ನಿಯುಕ್ತಗೊಂಡಿದ್ದೆ. ಅಲ್ಲಿಯೇ tax ಕೂಡ ಕಟ್ಟುತ್ತಿದ್ದೆ. ಯಾಕೆಂದರೆ ನನಗೆ ಸಂಬಳ ಡಾಲರ್ ನಲ್ಲಿ ಸಿಗುತ್ತಿತ್ತು. ಅಲ್ಲಿನ ಎಲ್ಲಾ ಖರ್ಚುಗಳನ್ನು ನಾನೇ ನೋಡಿಕೊಳ್ಳಬೇಕಿತ್ತು. ನನಗೆ ಬರುತ್ತಿದ್ದ ಸಂಬಳದಲ್ಲಿ ತುಂಬಾ ಅರಾಮದಾಯಕ ಜೀವನ ಮಾಡಿ ಕೂಡ ಒಂದಿಷ್ಟು ದುಡ್ಡು ಉಳಿಸಬಹುದಿತ್ತು, ಎಲ್ಲಿ ಬೇಕಲ್ಲಿ ಅಡ್ಡಾಡಬಹುದಿತ್ತು. ನಾವು ಎರಡನ್ನೂ ಮಾಡುತ್ತಿದ್ದೆವು! ಆದರೆ ರಮೇಶ ಅವರಿಗೆ ಅಮೆರಿಕೆಯಲ್ಲಿ ಇರುವಷ್ಟೂ ಸಮಯ, ಸಂಬಳ ಭಾರತದ ಬ್ಯಾಂಕ್‌ನಲ್ಲಿಯೇ ಜಮಾ ಆಗುತ್ತಿತ್ತು. ಅಲ್ಲಿನ ಜೀವನ ನಿರ್ವಹಣೆಗೆ ಅಂತ ಅವರು ಎಷ್ಟು ಬೇಕಾದರೂ ಖರ್ಚು ಮಾಡಲು ಸಾಧ್ಯವಾಗುವಂತೆ ಒಂದು ಕಾರ್ಡ್ ಕೊಟ್ಟಿದ್ದರು. ಅದನ್ನು ಬಳಸಿ ಅವರು ಜೀವನಾವಶ್ಯಕ ವಸ್ತುಗಳನ್ನು ಖರೀದಿಸಬಹುದಿತ್ತು. ಆದರೆ ದುಡ್ಡು ಮಾತ್ರ ಡಾಲರ್‌ಗಳಲ್ಲಿ ಸಿಗುತ್ತಿರಲಿಲ್ಲ. ಇನ್ನೂ ಕೆಲವರು ಕೆಲವೇ ತಿಂಗಳುಗಳಿಗೆ ಬಿಸಿನೆಸ್/ ಪ್ರವಾಸಿ ವೀಸಾದ ಮೇಲೆ ಕಂಪೆನಿಯ ಕೆಲಸದ ಮೇಲೆ ಬರುತ್ತಾರೆ. ಅವರಿಗೂ ಕೂಡ ಅಲ್ಲಿ ಊಟ, ತಿಂಡಿ, ವಾಸ್ತವ್ಯದ ಜೊತೆಗೆ ದಿನಕ್ಕೆ ಇಷ್ಟು ಡಾಲರ್ ಅಂತ ಕೊಡುತ್ತಾರೆ. ಭಾರತಕ್ಕೆ ಮರಳಿದ ಮೇಲೆ ಅಲ್ಲಿ ಖರ್ಚು ಮಾಡಿದ್ದ ಕೆಲವು ಬಿಲ್‌ಗಳನ್ನು ಕಂಪೆನಿಗೆ ಒಪ್ಪಿಸಿದಾಗ ಅದಕ್ಕೆ ಸಮನಾದ ದುಡ್ಡು ರೂಪಾಯಿಗಳಲ್ಲಿ ಕಂಪೆನಿ ನೀಡುತ್ತದೆ. ಎಷ್ಟೋ ಜನ ಇದರ ಲಾಭ ಪಡೆದುಕೊಂಡು, ಅಮೆರಿಕೆಯಲ್ಲಿ ಇರುವ ತಮ್ಮ ಬೇರೆ ಸಹೋದ್ಯೋಗಿಗಳ ಬಿಲ್‌ಗಳನ್ನೂ ತಂದು ಒಂದಿಷ್ಟು ದುಡ್ಡು ಮಾಡುತ್ತಿದ್ದರು!

“ಇಷ್ಟು ದೊಡ್ಡ ಟಿವಿ ತೊಗೊಂಡೀರಿ ಅಕಸ್ಮಾತ್ ವಾಪಸ್ಸು ಹೋದರ ಇಲ್ಲೆ ಬಿಟ್ಟು ಹೋಗತೀರಿ?” ಅಂತ ನಾನು ಕೇಳಿದೆ. ಸಧ್ಯಕ್ಕೆ ಇರಲಿ ಅಂತ 200 ಡಾಲರ್ ಟಿವಿ ಕೊಂಡಿದ್ದ ನನಗೆ ಅವರ ಅಗಾಧ ಗಾತ್ರದ, ದುಬಾರಿ ಟಿವಿ ನೋಡಿ ಆ ಪ್ರಶ್ನೆ ಬಂದಿದ್ದು ಸಹಜ ಆಗಿತ್ತು. ಅವರು ತಾನು ಅಲ್ಲಿ ತುಂಬಾ ಆರಾಮದಿಂದ ಇದ್ದೇವೆ. ವಾಪಸ್ಸು ಹೋಗುವ ವಿಚಾರ ಇಲ್ಲ. ಒಂದು ವರ್ಷದ ಬಳಿಕ ಕಂಪೆನಿಯವರು ಒಪ್ಪಿಗೆ ಕೊಟ್ಟರೆ ಇಲ್ಲಿಯೇ ಇದ್ದುಬಿಡುತ್ತೇವೆ ಅಂತ ಹೇಳುತ್ತಿದ್ದರು. ಅದಕ್ಕೆ ಅವರು ಕೊಟ್ಟ ಕಾರಣ ಕೇಳಿ ನನಗೆ ಕೂಡ ಹೌದು ಅನಿಸಿತು. ಅನುವಂಶಿಕವಾದ ಒಂದು ಸಮಸ್ಯೆಯಿಂದ ಅವರ ಒಂದು ಕೈ ಇನ್ನೊಂದು ಕೈಗಿಂತ ಗಾತ್ರದಲ್ಲಿ ಚಿಕ್ಕದಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಇದ್ದಾಗ ಅವರಿಗೆ ಸ್ವಂತದ ಕಾರ್ ಇದ್ದರೂ ಚಾಲನಾ ಪರವಾನಿಗೆ ಸಿಕ್ಕಿರಲೆ ಇಲ್ಲ. ಅದೇನು ದೊಡ್ಡ ಅಂಗ ವೈಕಲ್ಯ ಅಲ್ಲದಿದ್ದರೂ ಅವರಿಗೆ ಲೈಸೆನ್ಸ್ ನಿರಾಕರಿಸಲಾಗಿತ್ತು. ಅದು ಅವರಿಗೆ ತುಂಬಾ ಬೇಸರ ತರಿಸಿತ್ತು. ಆದರೆ ಅಮೆರಿಕೆಯಲ್ಲಿ ಅವರಿಗೆ ಲೈಸೆನ್ಸ್ ಕೊಟ್ಟಿದ್ದರು. ಅಲ್ಲಿನ ವಾಹನಗಳಲ್ಲಿ ಸ್ವಯಂ ಚಾಲಿತ ಗೇರು ಇರುವುದೂ ಒಂದು ಕಾರಣ ಇದ್ದೀತು. ಅಲ್ಲಿ ಅವರು ಸ್ವತಂತ್ರವಾಗಿ ಕಾರಿನಲ್ಲಿ ಅಡ್ಡಾಡುತ್ತಿದ್ದರು, ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದರು. ಇವೆಲ್ಲ ಕಾರಣಗಳಿಂದ ಅವರಿಗೆ ಆ ದೇಶ ಇಷ್ಟವಾಗಿತ್ತು. ಆಯಿತು ನೀವು ಇಲ್ಲೆ ಇರಿ, ನಾವು ಭಾರತದಿಂದ ಆವಾಗಾವಾಗ ಬಂದರ ನಮಗೂ ಒಂದ್ ಮನಿ ಆತು.. ಅಂತ ನಾನು ಹೇಳಿದೆ. ಅದೇನು ಹುಬ್ಬಳ್ಳಿ ಧಾರವಾಡದಷ್ಟು ಹತ್ತಿರ ಇದೆಯೋ ಏನೋ ಎಂಬಂತೆ!

ಒಂದು ದಿನ ಪ್ರಸಿದ್ಧವಾದ ಗೋಲ್ಡನ್ ಗೇಟ್‌ಗೆ ಹೋಗಿದ್ದೆವು. ಅದು ಕೋಲ್ಕತ್ತಾದ ಹೌರಾ ಬ್ರಿಡ್ಜ್ ತರಹವೆ ಅನಿಸಿತು. ಇದರ ಬಣ್ಣ ಕೆಂಪು ಅನ್ನೋದು ಬಿಟ್ಟು. ಅದಕ್ಕಿಂತ ಜಾಸ್ತಿ ಉದ್ದ ಇತ್ತೇನೋ. ಯಾಕೋ ಅಮೆರಿಕೆ ನನಗೆ ತುಂಬಾ ಕೃತ್ರಿಮ ಅನಿಸಿಬಿಡುತ್ತಿತ್ತು. ಅದು ಏನೇ ಇರಬಹುದು. ಕಾಡನ್ನು ನೋಡಿದಾಗಲೂ ಕೂಡ, ಅವರೇ ಅದನ್ನು ಬೆಳೆಸಿ, ನಿರ್ವಹಣೆ ಮಾಡಿ, ಒಪ್ಪವಾಗಿ ಜೋಡಿಸಿ ಇಟ್ಟಿದ್ದಾರೋ ಏನೋ ಎಂಬಂತೆ! ಬಹುಶಃ ಅವರು ತುಂಬಾ ಕ್ರಮಬದ್ಧ ಅನ್ನೋ ಕಾರಣಕ್ಕೂ ಇರಬಹುದು.

ಹಾಗೆ ಅನಿಸಲು ಮತ್ತೊಂದು ಕಾರಣ Mystery spot ಎಂಬ ಒಂದು ತಾಣ. ಅದು ನೋಡಲು ತುಂಬಾ ಅದ್ಭುತವಾಗಿತ್ತು. ಅಥವಾ ಅದನ್ನು ಅಮೆರಿಕನ್ನರು ಅದ್ಭುತವಾಗಿ ತೋರಿಸಿದ್ದರು! ಅಲ್ಲಿ ಗುರುತ್ವಾಕರ್ಷಣೆ ಶಕ್ತಿ ತಿರುಗುಮುರುಗು ಆಗಿದೆಯೇನೋ ಎಂಬಂತೆ ತೋರಿಸಲಾಗಿದೆ. ನಾವು ಅಲ್ಲಿ ನಿಂತರೆ ನೇರವಾಗಿ ನಿಲ್ಲಲು ಆಗುವುದೇ ಇಲ್ಲ. ಯಾವಾಗಲೂ ಒಂದು ಕೋನದಲ್ಲಿ ಮಾತ್ರ ನಿಲ್ಲಲು ಸಾಧ್ಯ. ಕೆಲವು ಕಡೆ ನೀರು ಕೆಳಗಿನಿಂದ ಮೇಲೆ ಹರಿಯುತ್ತದೆ.. ಹೀಗೇ.. ಅವರ ಮಾರ್ಕೆಟಿಂಗ್ ಕೌಶಲ್ಯವನ್ನು ಮೆಚ್ಚಲೆ ಬೇಕು. ಒಂದು ಸಣ್ಣ ಝರಿ ಹರಿಯುತ್ತಿದ್ದರೂ ಅದನ್ನು ಶೃಂಗರಿಸಿ ಅದು ವಿಶ್ವದ ಬೇರೆಲ್ಲೂ ಇಲ್ಲ ಎಂಬಂತೆ ತೋರಿಸುವಲ್ಲಿ ಅವರು ನಿಸ್ಸೀಮರು! ಲಾಸ್ ವೆಗಾಸ್‌ಗೆ ಹೋದಾಗಲೂ ಕೂಡ ಅಲ್ಲೊಂದು ಚಾಕ್ಲೆಟ್‌ನ ಕಾರಂಜಿ ನಿರ್ಮಿಸಿದ್ದರು. ಅದು ಒಂದು ಹತ್ತು feet ಇತ್ತೇನೋ. ಅದರ ಮುಂದಿನ ಫಲಕದಲ್ಲಿ ಜಗತ್ತಿನ ಅತಿ ಎತ್ತರದ ಚೊಕೊಲೇಟ್ ಕಾರಂಜಿ ಅಂತ ಬರೆದಿದ್ದನ್ನು ನೋಡಿ ನಗು ಬಂತು! ಇದ್ದರೂ ಇದ್ದೀತು, ಚೊಕೊಲೇಟ್ ಕಾರಂಜಿಯನ್ನು ಇವರ ಬಿಟ್ಟು ಬೇರೆ ಯಾರು ಮಾಡಲು ಸಾಧ್ಯ!

ಮಿಸ್ಟರೀ ಸ್ಪಾಟ್‌ನಲ್ಲೂ ಕೂಡ ಅದರ ಹೆಸರಿನ ಹಲವಾರು ಬಗೆಯ ಸಾಮಗ್ರಿಗಳು ಅಲ್ಲಿ ಲಭ್ಯ ಇದ್ದವು. ಫ್ರಿಡ್ಜ್‌ಗೆ ಅಂಟಿಸುವ ಆಯಸ್ಕಾಂತದ ಸಣ್ಣ ಫಲಕಗಳು, ಬೀರ್ ಬೂಚನ್ನು ತೆಗೆಯವ ಒಪನರ್, ಟೀ ಶರ್ಟ್, ಬನಿಯನ್ನು, ಚಡ್ಡಿ.. ಹೀಗೆ ಏನೇನೋ ತಹರೆವಾರಿ ವಸ್ತುಗಳು! ನಮ್ಮಲ್ಲೂ ಪ್ರವಾಸಿ ತಾಣಗಳಲ್ಲಿ ಹೀಗೆಯೇ ಮಾಡಬಹುದಲ್ಲವೇ ಅನಿಸಿದ್ದು ಹೌದು. ನಮ್ಮಲ್ಲಿ ಕೂಡ ಹಲವು ಪ್ರವಾಸಿ ತಾಣಗಳಲ್ಲಿ ಆಯಸ್ಕಾಂತದ ಚಿಕ್ಕ ಸ್ಮರಣಿಕೆಗಳನ್ನು ಈಗೀಗ ನೋಡುತ್ತಿದ್ದೆವಾದರೂ ಇನ್ನೂ ಸೃಜನಾತ್ಮಕವಾಗಿ ಹತ್ತು ಹಲವು ಆಕರ್ಷಣೆಗಳನ್ನು ತರಬಹುದು ಅನಿಸುತ್ತದೆ. ಜೋಗದಲ್ಲಿ ಮನಸ್ಸು ಮಾಡಿದರೆ ಏನೇನು ಮಾಡಬಹುದು! ಆದರೆ ನಮ್ಮಲ್ಲಿ ಹಾಗೆ ದೊಡ್ಡ ಪ್ರಮಾಣದಲ್ಲಿ, ಪ್ರಕೃತಿಯ ನಾಶವಾಗದಂತೆ ಆಕರ್ಷಣೆಗಳನ್ನು ಮಾಡಲು ಜನನಾಯಕರಲ್ಲಿ ಇಚ್ಛಾಶಕ್ತಿಯ ಕೊರತೆ ಹಾಗೂ ನಮ್ಮ ಜನರಲ್ಲಿ ಅಡ್ಡಗಾಲು ಹಾಕುವ ಪ್ರವೃತ್ತಿ, ತಮ್ಮದರ ಕಡೆಗೆ ನಿರ್ಲಕ್ಷ್ಯವೆ ಕಾರಣವೇನೋ ಅನ್ನೋದು ನನ್ನ ಅಭಿಪ್ರಾಯ.

ಅಂತೂ ಕ್ಯಾಲಿಫೋರ್ನಿಯಾ ಪ್ರವಾಸವನ್ನು ಮುಗಿಸಿ ವಾಪಸ್ಸು ಓಮಾಹಾಕ್ಕೆ ಹೊರಟಾಗ ಮತ್ತದೇ ಲೋಕಲ್ ವಿಮಾನ ಹಾಗೂ ಉಚಿತ ಶೇಂಗಾ!

(ಮುಂದುವರಿಯುವುದು..)
(ಹಿಂದಿನ ಕಂತು: ಅಮೆರಿಕಾದ ಹುಡುಗ ರೈತನೇ!)