ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಐದನೆಯ ಕಂತು

ಅಷ್ಟಕ್ಕೆ ಮುಗಿಯಲಿಲ್ಲ ವ್ಯಾಕ್ಸಿನ್ ಕಥೆ.. ವ್ಯಾಕ್ಸಿನ್ನುಗಳನ್ನು ಹಾಕಿಸಿಕೊಂಡು ಮನೆಗೆ ಬಂದ ಮೇಲೆ ಕೂರಾ ಹುಷಾರಾಗಿಯೇ ಇದ್ದ. ವಾಂತಿಯೇನಾದರು ಆದರೆ ಕರೆದುಕೊಂಡು ಬನ್ನಿ ಎಂದು ಆಸ್ಪತ್ರೆಯವರು ಹೇಳಿದ್ದರಾದರು ಅಂತಹದ್ದೇನು ಆಗಲಿಲ್ಲ. ಅವನ ಕಕ್ಕ ತೆಗೆದುಕೊಂಡು ಬನ್ನಿ ಎಂತಲೂ ಹೇಳಿದ್ದರು. ಮಾರನೇ ದಿನ ಅದನ್ನು ತೆಗೆದುಕೊಂಡು ಹೋಗಿ ಆಸ್ಪತ್ರೆಗೆ ಕೊಟ್ಟು ಬಂದದ್ದು ಆಯಿತು. ಅದರ ಪರೀಕ್ಷೆಯೂ ನಡೆದು ಅವನು ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ಹೇಳಿದಾಗ ನಮಗೂ ಸಮಾಧಾನ. ಅದಾದ ಮೇಲೆ ಕೂರಾನಿಗೆ ಒಂದು ವರ್ಷವಾಗುವವರೆಗು ಪ್ರತಿ ಮೂರು ತಿಂಗಳಿಗೊಮ್ಮೆ ವ್ಯಾಕ್ಸಿನ್ ಶ್ಕೆಡ್ಯೂಲ್ ಇದ್ದಿದ್ದರಿಂದ ಮೂರು ತಿಂಗಳಿನ ನಂತರ ಮತ್ತೆ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ತೂಕ ನೋಡುವ, ಅವನ ಹೊಟ್ಟೆ, ಕಿವಿ ಇತ್ಯಾದಿಗಳ ಬೇಸಿಕ್ ಪರೀಕ್ಷೆ ಆದ ಮೇಲೆ ವ್ಯಾಕ್ಸಿನ್ ಹಾಕಿಸುವ ಸರದಿ ಬಂತು. ಆದರೆ ಈ ಬಾರಿ ನಮ್ಮ ಮುಂದೆ ಕೊಡಲಿಲ್ಲ. ಬದಲಾಗಿ ಕೂರಾನನ್ನು ಒಳಗಡೆ ಕರೆದುಕೊಂಡು ಹೋಗಿ ವ್ಯಾಕ್ಸಿನ್ ಕೊಡುವುದಾಗಿ ಹೇಳಿದಳು. ಅದು ಯಾಕೆ ಹಾಗೆ ಹೇಳಿದಳೋ.. ಮೊದಲ ಸಲ ಅವಳು ನಯವಾಗಿ, ಕೂರಾನಿಗೆ ನೋವಾಗದ ಹಾಗೆ ಕೊಟ್ಟಿದ್ದನ್ನು ನೋಡಿ ನಮಗೆ ಅವಳ ಮೇಲೆ ಧೈರ್ಯ ಬಂದಿದ್ದರಿಂದ ಆಗಲಿ ಎಂದೆವು. ಒಳಗೆ ಕರೆದುಕೊಂಡು ಹೋದಾಗ ಕೂರಾ ನಮ್ಮತ್ತ ತಿರುಗಿ ನೋಡುವನೇನೋ ಎಂದು ನಾವು ಕಾಯುತ್ತಿದ್ದರೆ ಅವನು ಮಾತ್ರ ತಾನು ಬರಿ ಟ್ರೀಟ್‌ಗಳು ತುಂಬಿಕೊಂಡಿರುವ ಜಗತ್ತಿಗೆ ಹೋಗುತ್ತಿದ್ದೇನೆ ಎಂಬಂತೆ ಆಸೆಯಿಂದ ಅವಳ ಜೊತೆಯಲ್ಲಿ ಹೋದ. ಇತ್ತ ನಾವು ಅವನಿಗಾಗಿ ಕಾಯುತ್ತ ಕೂತೆವು. ಸ್ವಲ್ಪ ಹೊತ್ತಿನಲ್ಲಿ ಒಳಗಡೆಯಿಂದ ಜೋರಾದ ಕುಂಯ್ಯ ಕುಂಯ್ಯ ಸದ್ದು ಕೇಳಿಸಿತು. ಅದು ಕೂರಾನೇ ಎಂದು ಗೊತ್ತಾಗಿ ಅದೇನು ಮಾಡುತ್ತಿದ್ದಾರೋ ಎಂದು ಚಿಂತೆಯಾಯಿತು. ಹೊರಗಡೆ ಬಂದಾಗ ಅವನ ಕತ್ತಿನಲ್ಲಿ ನಾವು ಹಾಕಿದ ನೀಲಿಯ ಹಗ್ಗದ (ಲೀಶ್) ಬದಲಾಗಿ ಆಸ್ಪತ್ರೆಯವರ ಹಳದಿ ಬಣ್ಣದ ಲೀಶ್ ಇತ್ತು. ಬಾಲ ಮುದುರಿಸಿಕೊಂಡು ನಮ್ಮತ್ತ ಬಂದ ಅವನನ್ನು ನೋಡಿ ಅವನು ಹೆದರಿಕೊಂಡಿದ್ದಾನೆಂದು ಅರ್ಥವಾಗಿತ್ತು.

ಅದಾದ ಮೇಲೆ ಮನೆಗೆ ಬಂದು ಅವನ ಲೀಶ್ ತೆಗೆದು ಮಾಮೂಲಿಯಂತೆ ಮನೆಯ ತುಂಬ ಓಡಾಡಲು ಬಿಟ್ಟೆವು. ಸಂಜೆಯ ವಾಕಿಂಗ್ ಸಮಯಕ್ಕೆ ಲೀಶ್ ಹಾಕಲು ಹೋದರೆ ಮೊದಲಿನ ಹಾಗೆ ಸುಮ್ಮನೆ ಕತ್ತು ಬಗ್ಗಿಸಿ ಹಾಕಿಸಿಕೊಳ್ಳಲೇ ಇಲ್ಲ! ಲೀಶ್ ಕಂಡರೆ ಸಾಕು ಓಡಿ ಹೋಗುವುದು, ನಾವು ಹಿಂದೆಯಿಂದ ಹೋದರೆ ಮೂಲೆಗೆ ಹೋಗಿ ಹೆದರಿಕೊಂಡವರ ಹಾಗೆ ನಿಲ್ಲುವುದು, ಕಚ್ಚುತ್ತೇನೆ ಎಂದು ಸಕ್ಕರೆ ಹಲ್ಲುಗಳನ್ನು ತೆಗೆದು ಹೆದರಿಸುವುದು ಎಲ್ಲ ನಡೆಯಿತು. ಆಸ್ಪತ್ರೆಯಿಂದ ಬಂದ ಮೇಲೆ ಹೀಗೆ ಆಡುತ್ತಿದ್ದಾನೆ ಎಂಬುದು ಗಮನಕ್ಕೆ ಬಂತು. ಅಲ್ಲಿ ಅವರು ಒಳಗೆ ಕರೆದುಕೊಂಡು ಹೋದಾಗ ಅದೇನು ನಡೆದಿತ್ತೋ.. ಪ್ರತಿ ಸಲ ಲೀಶ್ ಹಾಕಬೇಕಾದಾಗ ಅವನ ಜೊತೆ ಒಂದು ಸಣ್ಣ ಯುದ್ಧವನ್ನು ಮಾಡಿದಂತಾಗುತ್ತಿತ್ತು. ಹೊರಗಡೆ ಹೋದರೆ ಕಡ್ಡಾಯವಾಗಿ ಲೀಶ್ ಹಾಕಲೇಬೇಕು ಎಂಬ ನಿಯಮವಿರುವಾಗ ಇವನು ಲೀಶ್ ಹಾಕಿಸಿಕೊಳ್ಳಲು ಇಷ್ಟು ಹೆದರಿಕೊಂಡರೆ ಹೇಗೆ ಎಂದು ಚಿಂತೆ ನಮಗೆ. ಕುಕಿ ಎಂದ ಕೂಡಲೇ ಎಲ್ಲಿದ್ದರು ಓಡಿ ಬಂದು ಕಾಲಡಿಯಲ್ಲಿ ಕೂತು ಮಿಕ ಮಿಕ ನೋಡುತ್ತ ಇನ್ನೇನು ಕೊಡುತ್ತಾರೆ ಎಂಬ ಆಸೆಯಲ್ಲಿ ಜೊಲ್ಲು ಸೋರಿಸುತ್ತ ಕೂತು ಬಿಡುತ್ತಿದ್ದ ಕೂಸಿಗೆ ಈಗ ಕೈಯ್ಯಲ್ಲಿ ಲೀಶ್ ಇದ್ದದ್ದನ್ನು ನೋಡಿದರೆ ಓಡಿ ಹೋಗಿ ಬಿಡುವಷ್ಟು ಭಯ ತುಂಬಿಕೊಂಡು ಬಿಟ್ಟಿತ್ತು.

ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ. ಪ್ರತಿಯೊಂದು ಜೀವದಲ್ಲಿ ದೇವರಿದ್ದಾನೆ ಎಂದು ಹೇಳುತ್ತಾರಲ್ಲ.. ಅದು ನಾವು ಇನ್ನೊಂದು ಜೀವಿಯನ್ನು ಗೌರವ ಮತ್ತು ಪ್ರೀತಿಯಿಂದ ಕಾಣಲಿ ಎಂಬ ಕಾರಣಕ್ಕೆ. ದೇವರ ಹಾಗೆ ನೋಡದೇ ಇದ್ದರೂ ಕನಿಷ್ಟ ಇನ್ನೊಬ್ಬ ಮನುಷ್ಯನಿಗೆ ಕೊಡುವಂತಹ ಬೇಸಿಕ್ ಕಾಳಜಿಯನ್ನು ಈ ಪ್ರಾಣಿಗಳಿಗೆ ತೋರಿಸಿದರೆ ಸಾಕು. ಈಗೀಗ ಯಾರು ಹೀಗೆ ಮಾಡುವುದಿಲ್ಲವಾದರು, ಮನುಷ್ಯರನ್ನೇ ಪ್ರಾಣಿಗಳ ಹಾಗೆ ನಡೆಸಿಕೊಳ್ಳುವ ಕೆಲವು ಮೃಗಗಳಿಗೆ ಪ್ರಾಣಿಗಳು ಯಾವ ಲೆಕ್ಕ.

ಹೀಗೆ ವ್ಯಾಕ್ಸಿನೇಷನ್ ನಂತರ ನಾಯಿಗಳ ವರ್ತನೆಯಲ್ಲಿ ಬದಲಾವಣೆಗಳಾಗುವುದು ಸಹಜ. ಅದು ಮನಸ್ಸಿನಲ್ಲಿ ಕಟ್ಟಿಕೊಂಡ ಭಯದ ಕಾರಣಕ್ಕು ಇರಬಹುದು ಅಥವಾ ಹಾಕಿರುವ ವ್ಯಾಕ್ಸಿನ್‌ನಿಂದ ಆದ ಪರಿಣಾಮವು ಇರಬಹುದು. ಬಹಳಷ್ಟು ನಾಯಿ ಪೋಷಕರು ವ್ಯಾಕ್ಸಿನ್ ಹಾಕಿಸುವುದೆಂದರೆ ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ತಮ್ಮ ಪುಟಾಣಿಗಳನ್ನು ಕರೆದುಕೊಂಡು ಹೋಗುತ್ತಾರೆ. ನಾಯಿಗಳು ಅಷ್ಟೇ.. ವೆಟ್ ಎಂದರೆ ಸಾಕು ಓಡಿ ಹೋಗುತ್ತವೆ. ಇಂಟರನೆಟ್‌ನಲ್ಲಿ ವ್ಯಾಕ್ಸಿನೇಶನ್ Dos Don’ts ಎಂಬ ಪುಟಗಟ್ಟಲೇ ಬರೆದ ಮಾಹಿತಿಗಳು ಸಿಕ್ಕುತ್ತವೆ. ಯಾವ ವ್ಯಾಕ್ಸಿನ್ ಹಾಕಿಸದೇ ತಮ್ಮ ನಾಯಿಗಳ ಆರೋಗ್ಯವನ್ನು ಕಡೆಗಣಿಸುವ ಜನರೂ ಇರುತ್ತಾರೆ. ಆದರೆ ವ್ಯಾಕ್ಸಿನ್ ಹಾಕಿಸಿ ಸರಿಯಾಗಿ ನೋಡಿಕೊಂಡರೆ ನಾಯಿಗಳು ದೀರ್ಘಕಾಲ ಬದುಕುತ್ತವೆ.

ಅದಾದ ಮೇಲೆ ಒಂದು ವರ್ಷದ ನಂತರ ಮತ್ತೊಮ್ಮೆ ರೇಬಿಸ್ ವ್ಯಾಕ್ಸಿನ್ ಹಾಕಿಸುವ ಸಮಯ ಬಂದಾಗ ಮತ್ತೊಂದು ಆಸ್ಪತ್ರೆಗೆ ಹೋದೆವು. ಬೇಸಿಗೆಕಾಲದ ಸುಡು ಬಿಸಿಲಿನ ದಿನವದು. ಚಿಕ್ಕ ಆಸ್ಪತ್ರೆಯಾದ್ದರಿಂದ ಎಲ್ಲರು ಹೊರಗೆ ಬಿಸಿಲಿನಲ್ಲಿಯೇ ಕಾಯಬೇಕಿತ್ತು. ನಮ್ಮ ಸರದಿ ಬಂದಾಗ ಒಳಗೆ ಹೋದರೆ ಇಬ್ಬರು ಹುಡುಗಿಯರಿದ್ದರು. ಕೂರಾನನ್ನು ಒಂದು ಮಾತು ಸಹ ಮಾತನಾಡಿಸದೇ ಆಕೆ ನೇರವಾಗಿ ಸೂಜಿ ಚುಚ್ಚಲು ಬಂದಳು. ಇವನು ಎಷ್ಟು ಬಿಗಿಯಾಗಿ ಹಿಡಿದುಕೊಂಡರು ಜಿಗಿದಾಡಲು ಶುರು ಮಾಡಿದಾಗ ಆಕೆ ತನಗೆ ಆಗುವುದಿಲ್ಲ ಎಂದು ನಮ್ಮ ಹಣವನ್ನು ರಿಫಂಡ್ ಮಾಡಿ ಕಳುಹಿಸಿ ಬಿಟ್ಟಳು! ಸಾಮಾನ್ಯವಾಗಿ ನಾಯಿಗಳ ಆಸ್ಪತ್ರೆಯವರು ನಾಯಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತ, ಒಂದೆರಡು ಟ್ರೀಟ್ ಕೊಟ್ಟು ಮನವೊಲಿಸಿಕೊಂಡು ನಂತರ ಅವುಗಳಿಗೆ ಗೊತ್ತಾಗದ ಹಾಗೆ ಸೂಜಿ ಚುಚ್ಚುತ್ತಾರೆ. ಆದರೆ ಈ ಹುಡುಗಿಯರು ಹಾಗೆ ಮಾಡದೇ ಕೂರಾನದೇ ತಪ್ಪು ಎಂಬಂತೆ ನಡೆಸಿಕೊಂಡಿದ್ದನ್ನು ನೋಡಿ ನಮಗಂತು ಬಹಳ ಸಿಟ್ಟು ಬಂದಿತ್ತು. ನಂತರ ಮತ್ತೊಂದು ಆಸ್ಪತ್ರೆಗೆ ಹೋದೆವು. ಅಲ್ಲಿದ್ದ ಪಂಜಾಬಿ ಡಾಕ್ಟರನ್ನು ನೋಡಿ ಅಚ್ಚರಿಯಾಗಿತ್ತು. ನಮ್ಮ ದೇಸಿ ಡಾಕ್ಟರುಗಳು ಇಲ್ಲಿ ಗಲ್ಲಿಗೊಬ್ಬರಂತೆ ಇದ್ದಾರಾದರು ನಾಯಿಗಳ ಡಾಕ್ಟರ್ ಅಂದರೆ ವೆಟ್ ನಮ್ಮ ದೇಸಿ ಇದ್ದದ್ದನ್ನು ನಾವು ನೋಡಿದ್ದು ಇದೇ ಮೊದಲು. ವೆಟ್ ಮತ್ತು ಅಲ್ಲಿನ ಸ್ಟಾಫ್ ಬಹಳ ಪ್ರೀತಿಯಿಂದ ಕೂರಾನನ್ನು ಮಾತನಾಡಿಸುತ್ತ ಅವನು ಬಾಲ ಅಲುಗಾಡಿಸಿದಾಗಲೆಲ್ಲ ಮತ್ತಷ್ಟು ತಲೆ ನೇವರಿಸುತ್ತ ಅವನ ನಂಬಿಕೆಯನ್ನು ಸಂಪಾದಿಸಿಕೊಂಡು ನಂತರ ವ್ಯಾಕ್ಸಿನ್ನಿಗೆಂದು ಒಳಗೆ ಕರೆದುಕೊಂಡು ಹೋದರು. ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಕೂಗುವ ಸದ್ದು ಕೇಳಿ ಬಂದಾಗ ಅದು ಕೂರಾ ಎಂದು ಗೊತ್ತಾಯಿತು. ಆದರೆ ಈ ಸಲ ಅವನು ಹಾಗೆ ಕುಂಯ್ಯಗುಡುತ್ತಿದ್ದ ಕಾರಣ ವ್ಯಾಕ್ಸಿನ್ ಆಗಿರದೇ ಮತ್ತೊಂದು ವಿಷಯವಾಗಿತ್ತು. ಅದು ಮುಂದಿನ ಸಂಚಿಕೆಯಲ್ಲಿ….

(ಮುಂದುವರೆಯುತ್ತದೆ…)
(ಹಿಂದಿನ ಕಂತು: ಸೂಜಿಗಳೆಂದರೆ ಸಂಕಷ್ಟವೇ…)