ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ. ಸುತ್ತಲೂ ನಿಂತಿದ್ದ ಕೆಲಸದವರು ಗೊಳ್ ಅಂತ ಖೋರಸ್ಸಿನಲ್ಲಿ ಕೇಕೆ ಹಾಕಿದರು. ಅಪ್ಪನ ಮುಖದಲ್ಲೂ ನಗು ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ಮೂರನೆಯ ಕಂತು ನಿಮ್ಮ ಓದಿಗೆ

ಹೋದ ಸಂಚಿಕೆಯಲ್ಲಿ ಯಶವಂತಪುರದ ಕತೆ ಶುರು ಹಚ್ಚಿದ್ದೆ ಮತ್ತು ಅದಕ್ಕೆ ಹೆಸರು ಬಂದದ್ದು ಹೇಳಿದ್ದೆ. ನನ್ನ ಗೆಳೆಯ ವೆಂಕಟೇಶ್ ಪ್ರಸಾದ್ ಅವರು ಯಶವಂತಪುರ ಹೆಸರು ಯಶವಂತ ರಾವ್ ಘೋರ್ಪಡೆ (ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಆಪ್ತರು)ಅವರ ನೆನಪಿಗೆ ಇರಬಹುದು ಅಂತ ವಿವರ ತಿಳಿಸಿದರು. ಆದರೆ ಯಶವಂತಪುರ ಪ್ರದೇಶಕ್ಕೆ ಸುಮಾರು ಮೂರೂವರೆ ಶತಮಾನದ ಇತಿಹಾಸ ಇದೆ. ಶ್ರೀ ಘೋರ್ಪಡೆ ಅವರು ಈಚಿನ ಪೀಳಿಗೆ(೧೯೦೮_೧೯೯೬)ಅದರಿಂದ ಅವರ ನೆನಪಿಗೆ ಈ ಹೆಸರು ಬಂದಿರಲಾರದು.

ಅಂದಹಾಗೆ ನಾನು ಬೆಳೆದ ರಾಜಾಜಿನಗರ ಮತ್ತು ಯಶವಂತಪುರ ನಡುವೆ ಹತ್ತು ಕಿಮೀ ಅಂತರ ಅಷ್ಟೇ. ಅಂತಹ ಯಶವಂತಪುರ ನನ್ನ ಭೇಟಿ ಎಪ್ಪತ್ತರ ದಶಕದ ವರೆಗೆ ಒಂದೈದಾರು ಸಲ ಅಷ್ಟೇ. ಈ ಭೇಟಿ ಸಹ ಕೆಲವು ಇನ್ನೂ ಮಾಸಿಲ್ಲ. ಅದರ ಹಿನ್ನೆಲೆ ಅಂದರೆ ನಾನು ಮೊದಲು ಭೇಟಿ ಮಾಡಿದ್ದು ಇನ್ನೂ ಹಸಿರು ಹಸಿರು.

ನಮ್ಮ ತಂದೆ ಕಂಟ್ರಾಕ್ಟರ್‌ಗೆ ಕಾಂಟ್ರಾಕ್ಟ್ ಕೆಲಸ(sub contractor to main contractor)ಮಾಡ್ತಾ ಇದ್ದರು ಅಂತಾ ಹೇಳಿದ್ದೆ. ಆಗ ಅಂದರೆ ಅರವತ್ತರ ದಶಕದ ಆರಂಭ, ಯಶವಂತಪುರದ ರೈಲ್ವೆ ಸ್ಟೇಷನ್ನಿನ ಒಂದು ಪ್ಲಾಟ್‌ಫಾರಂ ಕೆಲಸ ಆಗುತ್ತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸದವರನ್ನ ಮನೇಲಿ ಕೊಂಚ ರಿಪೇರಿ ಕೆಲಸ ಇದೆ ಅಂತ ನಮ್ಮಪ್ಪ ಕಳಿಸಿದ್ದರು. ಕೆಲಸಕ್ಕೆ ಬಂದವನು ಕೆಲಸ ಮುಗಿಸಿದ ನಂತರ ಮನೆಯಲ್ಲಿ ಇದ್ದ ಒಂದು ಹಳೆಯ ಆದರೆ ಚೆನ್ನಾಗಿದ್ದ ಒಂದು ಹತ್ತು ಅಡಿ ನಲ್ಲಿ ಪೈಪ್ ಕೈಲಿ ಹಿಡಕೊಂಡು ಹೋದ. ಅದು ಗಟ್ಟಿ ಮುಟ್ಟಾಗಿದ್ದ ಕಬ್ಬಿಣದ ಪೈಪ್, ಒಂದು ತುದಿಯಲ್ಲಿ ಒಂದೂವರೆ ಅಡಿಗೆ ಬಾಗಿಸಿದ್ದರು. ಆ ಪೈಪ್‌ನಿಂದ ತೊಟ್ಟಿಗೆ ನಲ್ಲಿಯಿಂದ ನೀರು ಬಿಡ್ತಾ ಇದ್ದೆವು. ನಲ್ಲಿ ತೊಟ್ಟಿ ಪಕ್ಕ ಒಂದು ಆರಡಿ ದೂರದಲ್ಲಿ ನಲ್ಲಿ ಕೊಂಚ ಮೇಲಿತ್ತು. ಇಂತಹ ಸರ್ವೀಸ್ ಕೊಡುತ್ತಿದ್ದ ಪೈಪ್ ಹೋದರೆ ನೀರು ಹಿಡಿಯೋದು ಹೇಗೆ? ನೀರು ಬಕೇಟ್‌ನಲ್ಲಿ ಹಿಡಿದು ಅದನ್ನ ತೊಟ್ಟಿಗೆ ಸುರಿಯುವ ಕೆಲಸ ನಾನು ಮಾಡಬೇಕಾಗುತ್ತೆ…. ಹೀಗೆ ನನ್ನ ತಲೆ ಓಡಿತು.

ಸರಿ ಸೀದಾ ಅವರ ಹಿಂದೆ ಹೋದೆ ನಾ.. ಅವರಿಗೆ ನಾನು ಹಿಂದೆ ಹೋಗಿದ್ದು ಗೊತ್ತಿಲ್ಲ. ಸಂಜೆ ನಾಲ್ಕರ ಸಮಯ. ಸೀದಾ ಕೆಲಸದ ತಾಣಕ್ಕೆ ಹೋದರು. ಅದಕ್ಕೆ ಮೊದಲು ಪೈಪ್‌ನ ಅಲ್ಲೇ ಪಕ್ಕದಲ್ಲಿ ಮರಳು ಸರಿಸಿ ಅದರಲ್ಲಿ ಮುಚ್ಚಿಟ್ಟರು. ಅವರು ಅಪ್ಪನ ಮುಂದೆ ನಿಂತು ಮನೆ ರಿಪೇರಿ ವಿಷಯ ಹೇಳ್ತಿದ್ದಾರೆ. ಅಪ್ಪ ಅದನ್ನ ವಿಚಾರಿಸ್ತಾ ಪಕ್ಕಕ್ಕೆ ನೋಡಿದರೆ ನಾನು! ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ. ಸುತ್ತಲೂ ನಿಂತಿದ್ದ ಕೆಲಸದವರು ಗೊಳ್ ಅಂತ ಖೋರಸ್ಸಿನಲ್ಲಿ ಕೇಕೆ ಹಾಕಿದರು. ಅಪ್ಪನ ಮುಖದಲ್ಲೂ ನಗು ಕಾಣಿಸಿತು. ಬಾ ಅಂತ ಕೈಹಿಡಿದು ಪಕ್ಕ ಕೂರಿಸಿಕೊಂಡರು. ತಲೆ ಸವರುತ್ತಾ ಅಷ್ಟು ದೂರದಿಂದ ಬಂದ್ಯಾ ಅದೂ ನಡಕೊಂಡು…. ಅಂತ ವಿಚಾರಿಸಿದರು. ಪಕ್ಕದಲ್ಲಿದ್ದ ಅವರ ಚೀಲದಿಂದ ಕಡ್ಲೆ ಪುರಿ ತಿನ್ನು ಅಂತ ಕೊಟ್ಟರು. ಅಪ್ಪನಿಗೆ ಕಡ್ಲೆ ಪುರಿ ಅಂದರೆ ಒಂದು ರೀತಿ ಅಡಿಕ್ಷನ್. ಅವರ ಬ್ಯಾಗ್‌ನಲ್ಲಿ ಕಡಲೆ ಪುರಿ ಕಾರಾಸೇವು, ಬೆಲ್ಲದುಂಡೆ ಯಾವಾಗಲೂ ಸ್ಟಾಕ್ ಇರ್ತಾ ಇತ್ತು. ಕಡಲೆ ಪುರಿ ಕಾರಾಸೇವೆ ಬೆಲ್ಲದುಂಡೆ ಇದರ ಕಾಂಬಿನೇಶನ್ ನೀವು ರುಚಿ ನೋಡಿಲ್ಲ ಅಂದರೆ ನೀವು ಜೀವನದಲ್ಲಿ ಅದೇನೋ ಕಳೆದುಕೊಂಡಿದ್ದೀರಿ ಅಂತ ನನ್ನ ಅಚಲವಾದ ನಂಬಿಕೆ. ಒಮ್ಮೆ ಈ ಕಾಂಬೋ ರುಚಿ ನೋಡಿ. ಹಾಗೆ ನೋಡಿದರೆ ನನಗೆ ಈ ಕಾಂಬೊ ಹೆಚ್ಚೆಚ್ಚು ಪ್ರಿಯ ಆಗಿದ್ದು ನಾನು ಕೆಲಸಕ್ಕೆ ಸೇರಿದ ಮೇಲೆ. ಅಲ್ಲಿ ಪ್ರತಿ ಶುಕ್ರವಾರ ಮತ್ತು ಆಯುಧ ಪೂಜೆ ದಿವಸ ಪೂಜೆ ಪ್ರಸಾದ ಅಂದರೆ ಈ ಕಾಂಬೋ..! ಸುಮಾರು ನಲವತ್ತು ವರ್ಷ ಇದರ ರುಚಿ ಸವೀದೋನು ನಾನು. ಈಗಲೂ ಮಧ್ಯರಾತ್ರಿ ಈ ನೆನಪು ಉಕ್ಕಿಬಂದು ಆಗ ಪೂರಿ ಕಾರಸೇವೆ ಬೆಲ್ಲ ಬೆರೆಸಿ ತಿನ್ನುತ್ತೇನೆ ಮತ್ತು ಈ ಕಾರಣದಿಂದ ಇಡೀ ಕುಟುಂಬದಲ್ಲಿ ಅದರಲ್ಲೂ ನನ್ನ ಅರ್ಧಾಂಗಿ ಬಂಧುಗಳಲ್ಲಿ ಒಂದು ನಗೆ ಪಾಟಲಿನ ವಿಷಯ ಆಗಿದ್ದೇನೆ. ನಮ್ಮನೇಲಿ ಇದೇ ಕಾರಣಕ್ಕೆ ಪುರಿ, ಕಾರಾಸೆವೆ ಮತ್ತು ಬೆಲ್ಲ ಸ್ಟಾಕ್ ಇರುತ್ತೆ. ಇದು ಹಾಗಿರಲಿ ಈ ಕಾಂಬೋ ಮುಗಿಸಬೇಕಾದರೆ ಮೆಲ್ಲಗೆ ಅಪ್ಪನಿಗೆ ಮಾತ್ರ ಕೇಳಿಸುವ ಹಾಗೆ ಪೈಪ್ ಕದ್ದು ತಂದಿರುವ ವಿಷಯ ತಿಳಿಸಿದೆ. ಮನೆ ಕೆಲಸಕ್ಕೆ ಬಂದಿದ್ದ ಕೂಲಿ ಅವರಿಗೆ ಅಪ್ಪ ಚೆನ್ನಾಗಿ ತಮಿಳು ತೆಲುಗಿನಲ್ಲಿ ಬೈದರು. ಅಂತಹ ಬೈಗುಳ ಅಪ್ಪನಿಗೆ ಬರುತ್ತೆ ಅಂತ ಅವತ್ತೇ ನನಗೆ ಗೊತ್ತಾಗಿದ್ದು. ಪೈಪ್ ಮರಳ ಅಡಿಯಿಂದ ಆಚೆ ತೆಗೆಸಿದರು. ಇದನ್ನ ಮನೆಗೆ ಕೊಟ್ಟು ಬಂದ ಮೇಲೇನೆ ನಿಮಗೆ ಬಟವಾಡೆ, ಪೈಪ್ ಮನೇಲಿ ಇಟ್ಟು ಚೀಟಿ ತಗೊಂಡು ಬಾ…. ಅಂತ ವಾರ್ನ್ ಮಾಡಿ ಪೈಪ್ ಮನೆಗೆ ಕಳಿಸಿದರು. ಆಗ ಫೋನು ಇರಲಿಲ್ಲ ಮತ್ತು ಮೊಬೈಲ್ ಹೆಸರೇ ಕೇಳಿರಲಿಲ್ಲ. ಅವರು ವಾಪಸ್‌ ಬಂದ ಮೇಲೆ ಚೀಟಿ ನೋಡಿ ಅವರಿಗೆ ಬಟವಾಡೆ ಮಾಡಿ ಜಟಕದಲ್ಲಿ ನನ್ನೂ ಕೂಡಿಸಿಕೊಂಡು ಮನೆ ಸೇರಿದರು. ಈ ಸುದ್ದಿ ವಾಯುವೇಗದಲ್ಲಿ ನಮ್ಮ ಬಳಗದವರಿಗೆ ಪ್ರಸಾರ ಆಯಿತು. ಅವತ್ತಿಂದ ಕೆಲವು ವರ್ಷ ನಮ್ಮ ವಂಶದಲ್ಲಿ ನನ್ನ ಪತ್ತೇದಾರ ಪುರುಷೋತ್ತಮ ಅಂತ ಕೂಗುತ್ತಾ ಇದ್ದರು…

ಮತ್ತೊಂದು ಭೇಟಿ ಅಂದರೆ ಆಲ್ಲಿ ಆಯುಧಪೂಜೆ ದಿವಸ ಅಪ್ಪನ ಜತೆ ಹೋಗಿದ್ದು. ಹಾರೆ ಗುದ್ದಲಿ ಪಿಕಾಸಿ ಮಮ್ಮಟಿ ಮಂಕರಿ ಅಳೆಯೋ ಟೀಪು.. ಇನ್ನೂ ಏನೇನೋ ಹಂತ ಹಂತವಾಗಿ ಮೆಟ್ಟಿಲ ಮೇಲೆ ಜೋಡಿಸಿ ಅದಕ್ಕೆ ಅರಿಶಿನ ಕುಂಕುಮ ಧಾರಾಳವಾಗಿ ರಾಶಿ ರಾಶಿ ಹಾಕಿ ಅದರ ಮೇಲೆ ಶಾವಂತಿಗೆ ಚೆಂಡು ಹೂವು ಹಾರಗಳನ್ನು ಹಾಕಿದ್ದರು. ಮಂಟಪದಲ್ಲಿ ಇವೆಲ್ಲಾ ಇದ್ದು ಮಂಟಪಕ್ಕೆ ಬಾಳೆ ದಿಂಡು, ಮಾವಿನ ಸೊಪ್ಪಿನ ಅಲಂಕಾರ. ಧೂಪ ಊದಿನ ಕಡ್ಡಿ ಮತ್ತು ಕರ್ಪೂರ ಹಾಗೂ ಸಾಂಬ್ರಾಣಿ ಹೊಗೆ.. ಒಂದು ರೀತಿ ಬೇರೆಲೋಕದ ಅನುಭವ ಅದು. ವಿಶೇಷ ಅಂದರೆ ಅಪ್ಪನದ್ದೇ ಪೂಜೆ. ಮನೆಯಲ್ಲಿ ಪೂಜೆ ಮಾಡಿದ ಹಾಗೆ ಇಲ್ಲಿಲ್ಲ. ಇಲ್ಲಿ ಪಂಚೆ ಶರಟು ಧರಿಸಿ ಪೂಜೆ ಮತ್ತು ಮಂತ್ರಗಳೂ ಸಹ ಬೇರೆ. ಮಡಿ ಮತ್ತು ಮಡಿ ತುಂಬಾ ದೂರ. ಎಲ್ಲಾ ಕೆಲಸದವರು ಬಂದು ದೇವರಿಗೆ ಅಡ್ಡ ಬಿದ್ದು ಅಪ್ಪನಿಗೂ ಅಡ್ಡ ಬಿದ್ದು ಮೈ ಕೈ ಮುಟ್ಟಿಸಿಕೊಂಡು ಪ್ರಸಾದ ಸ್ವೀಕಾರ ಮಾಡುತ್ತಿದ್ದರು. ಎಷ್ಟೋ ದಿವಸ ಆದಮೇಲೆ ಈ ಆಯುಧ ಪೂಜೆ ಕೂಲಿ ಕಾರ್ಮಿಕರ ಹಬ್ಬ ಅಂತ ಅನಿಸಿತ್ತು. ನಿಧಾನಕ್ಕೆ ಈ ಪೂಜೆಗಳಿಗೂ ಒಬ್ಬರು ಪೂಜಾರಿ ಬರುತ್ತಿದ್ದರು.

ನಮ್ಮ ಅಣ್ಣಂದಿರು ಇಬ್ಬರೂ ಯಶವಂತಪುರ ದಾಟಿ ಹೋದರೆ ಸಿಗುವ ಎಚ್ಎಂಟಿ ಕಾರ್ಖಾನೆಲಿ ಕೆಲಸದವರು. ದೊಡ್ಡಣ್ಣ ಮೊದಲು ಸೇರಿದ್ದು. ನಂತರ ಹತ್ತು ಹನ್ನೆರೆಡು ವರ್ಷದ ನಂತರ ಎರಡನೇ ಅಣ್ಣ ವಾಚ್ ಫ್ಯಾಕ್ಟರಿ ಸೇರಿದ್ದು. ಎಚ್ಎಂಟಿ ಕಾರ್ಖಾನೆ ಆಗಲಿ ವಾಚ್ ಫ್ಯಾಕ್ಟರಿ ಆಗಲಿ ನಾನು ನೋಡಿರಲಿಲ್ಲ. ಒಮ್ಮೆ ಮಾತ್ರ ಅದರ ಹತ್ತಿರ ಹೋಗಿದ್ದೆ ಅಷ್ಟೇ. ನಾವು ಎಚ್ಎಂಟಿ ಕ್ವಾರ್ಟರ್ಸ್‌ನಲ್ಲಿ ಇದ್ದೆವು. ನಮ್ಮ ಪಕ್ಕದಲ್ಲಿ ರಹೀಂ ಸಾಬ್ ಅಂತ ಡ್ರೈವರು, ಅವರ ಪಕ್ಕ ಚನ್ನಯ್ಯ ಅಂತ ಅವರೂ ಡ್ರೈವರು. ಇವರಿಬ್ಬರ ಮಕ್ಕಳು ನನಗಿಂತ ಸುಮಾರು ಚಿಕ್ಕವರು, ಆದರೂ ನನಗೆ ಸ್ನೇಹಿತರು. ಕೆಲವು ಸಲ ಎಚ್ಎಂಟಿ ಕಾರ್ಖಾನೆ ಬಸ್ಸನ್ನು ತಂದು ಮನೆ ಮುಂದೆ ನಿಲ್ಲಿಸುತ್ತಿದ್ದರು. ಬಸ್ಸಿನಲ್ಲಿ ಕೂತು ಅದರ ಡ್ರೈವರ್ ಆಗಿ ಅದರಲ್ಲಿನ ಪ್ರಯಾಣಿಕರಾಗಿ ಮತ್ತು bts ನಲ್ಲಿನ ಕಂಡಕ್ಟರ್ ತರಹ ನಮ್ಮ ಆಟ. ಫ್ಯಾಕ್ಟರಿ ಬಸ್ಸಿನಲ್ಲಿ ಕಂಡಕ್ಟರ್ ಇರೋಲ್ಲ. ಒಮ್ಮೆ ಹೀಗೆ ಆಡ್ತಾ ಇರಬೇಕಾದರೆ ರಹೀಂ ಸಾಹೇಬರು ನಮ್ಮನ್ನು ಫ್ಯಾಕ್ಟರಿ ತನಕ ಕರಕೊಂಡು ಹೋಗಿದ್ದರು! ನಾನು ಅದೇ ಜಾಲಹಳ್ಳಿ ವ್ಯಾಪ್ತಿಯಲ್ಲಿ ಬರುವ ಕೆಲಸಕ್ಕೆ ಸೇರಿದೆ ನೋಡಿ ಅಲ್ಲಿಂದ ನನ್ನ ಮತ್ತು ಯಶವಂತಪುರದ ನಂಟು ಇನ್ನೂ ಗಾಢವಾಯಿತು.
ಹಿಂದಿನ ಸಂಚಿಕೆಗೆ ಹೀಗೆ ಮುಕ್ತಾಯ ಹಾಡಿದ್ದೆ….

ಇವತ್ತಿನ ಯಶವಂತಪುರ ಅಂದರೆ ಎಲ್ಲಾ ರೀತಿಯ ವಾಣಿಜ್ಯ, ವ್ಯವಹಾರ, ವಹಿವಾಟು ಮತ್ತು ಕೈಗಾರಿಕೆ ಹೊಂದಿರುವ ಜನ ಸಾಮಾನ್ಯರ ವಾಸಸ್ಥಳ ಸೇರಿದ ಪ್ರದೇಶ. ಇಲ್ಲಿನ ರೈಲ್ವೆ ಸ್ಟೇಶನ್ ನಗರದ ಒಂದು ದೊಡ್ಡ ರೈಲ್ವೆ ಟರ್ಮಿನಲ್. ಇನ್ನು ಕೆಲವೇ ವರ್ಷದಲ್ಲಿ ಇಲ್ಲಿನ ರೈಲ್ವೆ ಸ್ಟೇಶನ್ ದೇಶದ ಪ್ರಮುಖ ನಿಲ್ದಾಣ ಆಗುವತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರಕವಾಗಿ ಬಿರುಸಿನ ಕಾಮಗಾರಿ ನಡೆಯುತ್ತಿದೆ.

ಇದೇ ರಸ್ತೆಯಲ್ಲಿ ಒಂದು ನೂರೈವತ್ತು ಮೀಟರ್ ಮುಂದೆ ಹೋಗಿ. ಇಲ್ಲೊಂದು ಸೈನಿಕರ ನೆಲೆ ಇದ್ದ ಸ್ಥಳ ಉಂಟು. ಅದೇ ಸುಬೇದಾರ್ ಪಾಳ್ಯ. ಸುಬೇದಾರ್ ಹೆಸರಿಗೆ ಲಿಂಕ್ ಇರುವ ಮತ್ತೊಂದು ಬೆಂಗಳೂರಿನ ಸ್ಥಳ ಮೆಜೆಸ್ಟಿಕ್ ಏರಿಯಾದ ಸುಬೇದಾರ್ ಛತ್ರ…. ಯಶವಂತಪುರದ ಈ ಜಾಗ ನನಗೆ ಹೆಚ್ಚು ಆಪ್ತವಾಗಿದ್ದು ಎಪ್ಪತ್ತರ ದಶಕದಲ್ಲಿ. ಅಲ್ಲಿಯವರೆಗೆ ಒಂದೈದು ಸಲ ಇಲ್ಲಿಗೆ ಬಂದಿರಬಹುದೇನೋ..
ಇದರ ಕತೆಗೆ ಮುಂದಕ್ಕೆ ಬರುತ್ತೇನೆ.

ಯಶವಂತಪುರದ ನಂಟು ಹೇಳಿದೆ ತಾನೇ. ಇನ್ನೂ ಸಾಕಷ್ಟು ಇದೆ. ಅದಕ್ಕೆ ಹಾಯುವ ಮುನ್ನ ಸುಬೇದಾರ ಪಾಳ್ಯದ ಬಗ್ಗೆ.. ಸೈನಿಕರಿಗೆ ನೆಲೆ ಒದಗಿಸಲು ಕುಂಪನಿ ಸರಕಾರ ಈ ಪ್ರದೇಶ ಆಯ್ಕೆ ಮಾಡಿತ್ತು. ಇಲ್ಲಿ ಸೈನಿಕರ ವಾಸಕ್ಕೆ ಎಂದೇ ಮನೆಗಳು ನಿರ್ಮಾಣವಾಗಿದ್ದವು. ವಾಸಕ್ಕೆ ಎಂದು ಸೈನಿಕರು ಬಂದಾಗ ಸಹಜವಾಗಿ ಅವರ ಸಂಸಾರಗಳು ಅವರ ಜತೆ ಬಂದವು. ಇದು ಹದಿನೆಂಟನೇ ಶತಮಾನದ ಅಂಚಿನಲ್ಲಿ. ವಸತಿ ಪ್ರಾರಂಭದ ನಂತರ ಅಲ್ಲಿ ಅಂಗಡಿ ಮುಂಗಟ್ಟು ಮಾರುಕಟ್ಟೆ ಮುಂತಾದ ಪ್ರತಿನಿತ್ಯದ ಅವಶ್ಯಕತೆಗಳು ಸಹ ಬೆಳೆದವು. ಎಪ್ಪತ್ತರ ದಶಕದ ಆರಂಭದಲ್ಲಿ ಇಲ್ಲಿ ಸುಮಾರು ಮಾಂಸ ಮಾರಾಟದ ಅಂಗಡಿ ಇದ್ದವು. ನಿಧಾನಕ್ಕೆ ಅವು ಯಶವಂತಪುರ ಮಾರುಕಟ್ಟೆಯ ಭಾಗ ಆಯಿತು. ಬೆಂಗಳೂರಿನಲ್ಲಿ ಸೈನಿಕರ ವಸತಿಗಾಗಿ ಎಂದೇ ಹಲವು ಸ್ಥಳಗಳು ಇವೆ. ನೇರ ಮಿಲಿಟರಿ ಅಧೀನದಲ್ಲಿರುವ ವಸತಿ ಮತ್ತು ಔದ್ಯೋಗಿಕ ಸ್ಥಳಗಳಿಗೆ ಸಾರ್ವಜನಿಕರ ಭೇಟಿಗೆ ಆಸ್ಪದ ಇಲ್ಲ.

ಕಮ್ಯಾಂಡ್ ಆಸ್ಪತ್ರೆ, ಮಿಲಿಟರಿ ಎಂಜಿನಿಯರಿಂಗ್ ಅಕಾಡೆಮಿ , ಆರ್ಮಿ ಸರ್ವೀಸ್ ಕಾರ್ಪ್ಸ್, ಈ ಎಂ ಈ, ಎಂ ಈ ಜಿ, ಏರ್ ಫೋರ್ಸ್ ಸ್ಟೇಶನ್, ನೇವಲ್ ಬೇಸ್ ಮೊದಲಾದ ಕಡೆ ಮಿಲಿಟರಿ ವಸತಿ ಇದ್ದು ಅದು ನೇರ ಗೇಟೆಡ್ ಕಮ್ಯೂನಿಟಿ ತರಹ ಅಲ್ಲಿನವರದ್ದೇ ಅಲ್ಲಿನ ಆಡಳಿತ. ಇಲ್ಲಿ ಹೊರಗಿನವರಿಗೆ ಪ್ರವೇಶ ನಿಷಿದ್ಧ. ಅಪರೂಪಕ್ಕೆ ಕೆಲವು ಕೆಲಸಕ್ಕೆ ಅವರು ಕೆಲವರನ್ನು ಹೊರಗಿನಿಂದ ಕರೆಸಿಕೊಳ್ಳುತ್ತಾರೆ. ನಮ್ಮ ಒಬ್ಬ ಧೋಬಿ ಮಿಲಿಟರಿ ಕ್ಯಾಂಪ್‌ಗೆ ಬಟ್ಟೆ ಐರನ್ ಮಾಡಿಕೊಡಲು ಹೋಗುತ್ತಿದ್ದ, ಅವನ ಹೆಂಡತಿ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಹೀಗಾಗಿ ಅವನಿಗೆ ಅಲ್ಲಿನ ಸೋಲ್ಜರ್ ಪರಿಚಯ. ಮಿಲಿಟರಿ ಕ್ಯಾಂಟಿನ್‌ನಲ್ಲಿ ಎಲ್ಲಾ ಸಾಮಾನೂ ತುಂಬಾ ಕಡಿಮೆ ಬೆಲೆಗೆ ಸಿಗುತ್ತೆ. ಕೆಲಸದಾಕೆ ಮೂಲಕ ಟೂತ್ ಪೇಸ್ಟ್, ಸಾಬೂನು ಮೊದಲಾದವನ್ನು ಹೆಂಗಸರು ತರಿಸಿಕೊಳ್ಳುತ್ತಿದ್ದರು. ಅವಳ ಗಂಡನ ಮೂಲಕವೇ ಸಿವಿಲ್ ಜನರು (ಅಂದರೆ ನಮ್ಮಂತಹವರು)ರಮ್ಮು ಬ್ರಾಂದಿ ಮತ್ತಿತರ ನಿಶಾ ಪದಾರ್ಥಗಳನ್ನು ಅಲ್ಲಿಂದ ತರಿಸುತ್ತಿದ್ದರು, ಮಿಲಿಟರಿ ಕ್ಯಾಂಟಿನ್‌ನಲ್ಲಿ ಇದರ ಬೆಲೆ ತುಂಬಾ ಕಮ್ಮಿ ಅಂತೆ!

ಮಿಕ್ಕಂತೆ ಸೈನಿಕರು ಮತ್ತು ಮಿಲಿಟರಿ ಅಧಿಕಾರಿಗಳಿಗೆ ಎಂದೇ ಕೆಲವು ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇಂದಿರಾ ನಗರದ ಡಿಫೆನ್ಸ್ ಕಾಲನಿ, ಕೋರಮಂಗಲದ ಸೈನಿಕ ಪುರಿ, ಬನಶಂಕರಿಯ ಮಾಜಿ ಸೈನಿಕರ ಕಾಲೋನಿ ಮುಂತಾದ ಹಲವು ವಸತಿ ಏರಿಯ ನೆನಪಿಗೆ ಬರುತ್ತದೆ.

ಸುಬೇದಾರ್ ಹೆಸರು ಬಂದಕೂಡಲೇ ನಿಮಗೆ ಥಟ್ ಅಂತ ಹೊಳೆಯುವುದು ಬೆoಗಳೂರಿನ ಹೃದಯ ಭಾಗದ ಸುಬೇದಾರ್ ಛತ್ರದ ರಸ್ತೆ. ಆನಂದ ರಾವ್ ಸರ್ಕಲ್‌ನಿಂದಾ ನೀವು ಮೆಜೆಸ್ಟಿಕ್ ಸರ್ಕಲ್ ಕಡೆ ನಡೆಯುವ ರಸ್ತೆ ಹೆಸರು ಸುಬೇದಾರ್ ಛತ್ರದ ರಸ್ತೆ. ನನ್ನ ಬಿಎಸ್ಸಿ, ಲಾ ದಿನಗಳು ಹಾಗೂ ಹಲವು ವರ್ಷ ಈ ರಸ್ತೆಯಲ್ಲಿ ಹಲವು ನೂರು ಚಪ್ಪಲಿ ಸವೆಸಿದ ಅನುಭವ ನನ್ನದು. ಈ ಛತ್ರದ ಹೆಸರು ಕೇಳಿದ್ದೇನೆಯೇ ಹೊರತು ಛತ್ರ ಕಣ್ಣಿಗೆ ಬಿದ್ದಿಲ್ಲ. ಅಲ್ಲಿನ ನಿವಾಸಿ ಒಬ್ಬರನ್ನು ತುಂಬಾ ಹಿಂದೆ ಈ ಬಗ್ಗೆ ಕೇಳಿದ್ದೆ. ಅವರು ಹೇಳಿದ್ದು ಟೀಪು ಸುಲ್ತಾನನ ಕಾಲದಲ್ಲಿ ಮಿಲಿಟರಿ ಅವರ ಊಟ ಮತ್ತು ತಾತ್ಕಾಲಿಕ ತಂಗುದಾಣವಾಗಿ ಇಲ್ಲಿ ಒಂದೋ ಎರಡೋ ಕಟ್ಟಡ ಇದ್ದವಂತೆ. ಅದು ಕಾಲ ಕ್ರಮೇಣ ನಿವಾಸಿಗಳ ತಹಬಂದಿಗೆ ಬಂತು ಮತ್ತು ನಿಧಾನಕ್ಕೆ ಅದರ ಮಾಲಿಕತ್ವ ಬದಲಾಯಿತು. ಆದರೆ ರಸ್ತೆ ಹೆಸರು ಅದೇ ಉಳಿದುಕೊಂಡಿದೆ.. ಈ ವಿವರಣೆ ನಿಜ ಇದ್ದರೂ ಇರಬಹುದು ಅಂತ ನನಗೆ ಗಾಢವಾಗಿ ಅನಿಸಿತು. ಇದಕ್ಕೆ ಕಾರಣ ನಮ್ಮದೇ (ನಿಮ್ಮದೂ ಸಹ) ಅನುಭವಗಳು. ಮೈಸೂರು ಬ್ಯಾಂಕ್ ಕಾಲೋನಿ, ಮೈಸೂರು ಬ್ಯಾಂಕ್ ರಸ್ತೆ ಈ ಹೆಸರಿನ ಬಡಾವಣೆಗಳು ಇನ್ನು ಐವತ್ತು ವರ್ಷ ಆದ ನಂತರ ಹೇಗೆ ನೆನಪಲ್ಲಿ ಇರುತ್ತೆ! ಮೈಸೂರು ಬ್ಯಾಂಕ್ ಸ್ಟೇಟ್ ಬ್ಯಾಂಕ್ ಜತೆ ಸೇರಿತು ಅವರ ಕಾಲೋನಿ ಹಳೇ ಹೆಸರಲ್ಲಿ ಮುಂದುವರಿದು ಮುಂದೆ ಏನಾಗುತ್ತೋ…!

ಬೆಂಗಳೂರಿನಲ್ಲಿ ವಿಜಯ ಬ್ಯಾಂಕ್ ಕಾಲೋನಿ ಅಂತ ಸುಮಾರು ದೊಡ್ಡದು ಅನ್ನಬಹುದಾದ ಪ್ರತಿಷ್ಠಿತ ಬಡಾವಣೆಗಳು ಹಲವು ಇವೆ. ವಿಜಯ ಬ್ಯಾಂಕ್ ಗೃಹ ನಿರ್ಮಾಣ ಸಂಘಗಳು ಅಭಿವೃದ್ಧಿ ಪಡಿಸಿರುವ ಪ್ರದೇಶಗಳು ಇವು. ಬ್ಯಾಂಕ್ ಆಫ್ ಬರೋಡ ಸಂಗಡ ವಿಜಯ ಬ್ಯಾಂಕ್ ವಿಲೀನ ಆಗಿ ಸೇರಿಕೊಂಡು ಈಗ ಬರೋಡ ಬ್ಯಾಂಕ್ ಹೆಸರಲ್ಲಿ ಗುರುತಿಸಿಕೊಳ್ಳುತ್ತಿವೆ. ನಿಧಾನಕ್ಕೆ ವಿಜಯಾ ಎನ್ನುವ ಹೆಸರು ನೆನಪಿನ ಆಳಕ್ಕೆ ಜಾರುತ್ತೆ ಮತ್ತು ಈ ಹೆಸರಿನ ಕಾಲೋನಿ ಮುಂದುವರೆಯುತ್ತಾ..? ಆಗ ಒಬ್ಬ ಸಂಶೋಧಕ ಹಿಂದೆ ಇಲ್ಲಿ ವಿಜಯಾ ಬ್ಯಾಂಕ್ ಅಂತ ಇತ್ತು ಎಂದು ಪುರಾಣ ನೆನಪಿಸ ಬೇಕಾಗುತ್ತೆ…..!

ಸುಬೇದಾರ್ ಪಾಳ್ಯ ದಾಟಿ ಮುಂದೆ ರಸ್ತೆ ಕವಲು ಒಡೆಯುತ್ತೆ. ಮುಂದೆ ಬಂದರೆ ಬಲ ತಿರುವು ಒಂದು ನೂರು ಗಜ ಮುನ್ನಡೆದರೆ ಅದೇ ಎಂ ಎಸ್ ರಾಮಯ್ಯ ಅವರ ಸಾಮ್ರಾಜ್ಯ. ಈ ಸಾಮ್ರಾಜ್ಯದ ವಿವರಣೆಗೆ ಬರುವ ಮೊದಲು ಒಂದು ಪುಟ್ಟ ನೆನಪು ಕಾಲೇಜಿಗೆ ಸಂಬಂಧ ಪಟ್ಟ ಹಾಗೆ.

ಅರವತ್ತರ ಉತ್ತರಾರ್ಧದ ಹೊತ್ತಿಗೇ ಈ ಕಾಲೇಜು ಹೆಸರು ಜನಜನಿತವಾಗಿತ್ತು. ಬೆಂಗಳೂರಿನಲ್ಲಿ ಆಗ ಇದ್ದ ಕೆಲವೇ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇದೂ ಒಂದು. ಆಗಿನ ಶೈಕ್ಷಣಿಕ ನೀತಿಗೆ ಅನುಗುಣವಾಗಿ ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ಮೂಲಕ ಪ್ರವೇಶ ಇತ್ತು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುದ್ಧಿವಂತರು ಅಂದರೆ ಮೆರಿಟ್‌ನವರು ಪ್ರವೇಶ ಪಡೆದರೆ ನಮ್ಮಂತಹ ದಡ್ಡರ ಗುಂಪು ಖಾಸಗಿ ಕಾಲೇಜು ನಂಬಿದ್ದೆವು , ಈಗಿನ ಹಾಗೆಯೇ.

ದಡ್ಡರ ಗುಂಪಿನಲ್ಲಿ ಸಹ ಏರು ಪೇರು ಇದ್ದವು. ಡೊನೇಷನ್ ತೆತ್ತು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜಿಗೆ ಸೇರಿಸಲು ತಾಖತ್ ಇರುವ ತಂದೆ ತಾಯಿಗಳು ಒಂದು ಕಡೆ ಆದರೆ ಡೋನೇಷನ್ ಕೊಡಲು ತಾಖತ್ ಇಲ್ಲದ ಬಡ ತಂದೆತಾಯಿಗಳ ಮಕ್ಕಳು ಇನ್ನೊಂದು ಗುಂಪು. ಡೋನೇಷನ್ ಕೊಡಲು ತಾಖತ್ ಇದ್ದ ತಂದೆ ತಾಯಿಗಳು ಮಕ್ಕಳನ್ನು ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿಸುತ್ತಿದ್ದರು. ಮೇಜಾರಿಟಿ ವಿದ್ಯಾರ್ಥಿಗಳು ಡೊನೇಷನ್ ಕೊಡಲು ತಾಖತ್ ಇಲ್ಲದ ಎರಡನೇ ಗುಂಪಿನವು. ಅವರಿಗೆ ಮೂರು ವರ್ಷದ ಪದವಿ ತರಗತಿಗಳೇ ಗ್ಯಾರಂಟಿ.

ಅದರಲ್ಲೂ ಕೆಲವರು ಆಗಿನ ಪ್ರತಿಷ್ಠಿತ ಕಾಲೇಜುಗಳು ಅನಿಸಿದ್ದ ಸೇಂಟ್ ಜೋಸೆಫ್‌ರ ಕಾಲೇಜಿಗೂ ಮತ್ತು ನ್ಯಾಷನಲ್ ಕಾಲೇಜಿಗೂ ಮೊಟ್ಟ ಮೊದಲ ಆದ್ಯತೆ ಕೊಡುತ್ತಿದ್ದರು. ಸೇಂಟ್ ಜೋಸೆಫ್‌ರ ಕಾಲೇಜಿನಲ್ಲಿ ಕೊಂಚ ಮಟ್ಟಿಗೆ ಪ್ರಭಾವ ಬೀರಬಹುದಿತ್ತು. ಅಲ್ಲಿ ಕಮ್ಯೂನಿಟಿ ಸೀಟು, ಪುಢಾರಿಗಳ ಕೋಟಾ ಮುಂತಾದವು ಇತ್ತು. ಸಹಜವಾಗಿ ಇದರ ಆಧಾರದ ಮೇಲೆ ಸೀಟು ಗಿಟ್ಟಿಸಲು ಬೆಂಗಳೂರಿನ ಈ ಕಡೆಯವರಿಗೆ ಸಾಧ್ಯ ಆಗುತ್ತಿರಲಿಲ್ಲ. ಹೀಗಾಗಿ ಸೇಂಟ್ ಜೋಸೆಫ್‌ರ ಕಾಲೇಜು ಅಂದರೆ ನಮಗೆ ಗಗನ ಕುಸುಮ. ಅಲ್ಲಿನ ಹುಡುಗರು ಇಂಗ್ಲಿಷ್ ಮತ್ತು ತಮಿಳು ಸೇರಿಸಿ ಮಾತಾಡೋವು. ಇಲ್ಲಿನವಕ್ಕೆ ಅದೊಂದು ರೀತಿ ಇನ್ಫಿರಿಯಾರಿಟಿ! ಕೆಲವು ಹುಡುಗರು ಹಟ ಹಿಡಿದು ಆಲ್ಲಿ ಸೇರಿ ಒಂದೆರೆಡು ತಿಂಗಳಿಗೆ ಕಾಲೇಜಿಗೆ ನಮಸ್ಕಾರ ಅನ್ನೋವು.

ಇನ್ನು ನ್ಯಾಷನಲ್ ಕಾಲೇಜು ಅಂದರೆ ಒಳ್ಳೇ ಮಾರ್ಕ್ಸ್ ಇದ್ದರೆ ಮಾತ್ರ. ವಶೀಲಿ, ಪ್ರಭಾವ ಇವೆಲ್ಲಾ ಮೀರಿದ್ದು ಮತ್ತು ಅಲ್ಲಿನ ಪ್ರಿನ್ಸಿಪಾಲ್ ನರಸಿಂಹಯ್ಯ ಅವರು ಭಾರೀ ಸ್ಟ್ರಿಕ್ಟ್ ಅಂತ ಇಡೀ ಬೆಂಗಳೂರಿಗೆ, ಕರ್ನಾಟಕಕ್ಕೆ, ಇಂಡಿಯಾಗೆ, ಭೂ ಮಂಡಲಕ್ಕೆ ಹೆಸರುವಾಸಿ…! ಸೇಂಟ್ ಜೋಸೆಫ್‌ರ ಕಾಲೇಜಿಗೆ ಚೊಟ್ಟೆ ಕಾಲೇಜು ಅಂತ ನಿಕ್ ನೇಮ್ ಆಂಗ್ಲೋ ಇಂಡಿಯನ್ ಲೋಕಲ್ ತಮಿಳರು ಇರ್ತಾರೆ ಅಂತ. ಆಂಗ್ಲೋ ಇಂಡಿಯನ್‌ಗಳಿಗೆ ಚೊಟ್ಟೆಗಳು ಅಂತ ನಾಮಕರಣ ಆಗಿತ್ತು. ಹಾಗಾಗಿ ಅಲ್ಲಿನ ತಮಿಳರೂ ಸಹ ಚೊಟ್ಟೆ ಆಗಿಬಿಟ್ಟಿದ್ದರು. ನ್ಯಾಷನಲ್ ಕಾಲೇಜಿಗೆ ಕುಡುಮಿ ಕಾಲೇಜು ಅಂತ ಹೆಸರು. ಬರೀ ರಾಂಕು ಹೈ ಮಾರ್ಕ್ಸ್ ತಗೊಂಡೊರನ್ನು ಸೇರಿಸಿಕೊಂಡು ಕಾಲೇಜಿಗೆ ರಾಂಕೂ ಪಾಂಕೂ ಬರೆಸಿಕೊಳ್ತಾರೆ ಅಂತ ಅಲ್ಲಿ ಸೀಟು ಸಿಗದ ಮಕ್ಕಳ ಅಪ್ಪ ಅಮ್ಮಂದಿರ ಪ್ರಲಾಪ. ಕಾಲೇಜು ಈ ಪ್ರಲಾಪಕ್ಕೆ ತಕ್ಕ ಹಾಗಿತ್ತು. ಮಿಕ್ಕ ಖಾಸಗಿ ಕಾಲೇಜುಗಳು ತಮ್ಮ ತಮ್ಮ ಇತಿಮಿತಿಯಲ್ಲಿ ಅವಕಾಶ ಕೊಡುತ್ತಿದ್ದವು. ಇವೆಲ್ಲವನ್ನೂ ಸಾರಾ ಸಗಟಾಗಿ ನಿವಾಳಿಸಿ ಎಸೆಯೋ ಅಂತ ಒಂದು ಕಾಲೇಜು ಇತ್ತು ಮತ್ತು ಈಗಲೂ ಇದೆ. ಅದೇ ಗರ್ಣಮೆಂಟ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು. ಪುಟ್ಟದಾಗಿ ಇದಕ್ಕೆ GAS ಕಾಲೇಜು ಎಂದು ಹೆಸರು. ಎಷ್ಟೇ ಕಮ್ಮಿ ನಂಬರು ತಗೊಂಡಿರಲಿ, ಎಷ್ಟೇ ಅಟೆಂಪ್ಟ್ ಆಗಿರಲಿ, ಇಲ್ಲಿ ಸೀಟು ಸಿಗುವ ಗ್ಯಾರಂಟಿ ನೂರಕ್ಕೆ ನೂರರಷ್ಟು ಖಾತರಿ. ಜತೆಗೆ ಆಗ ನಮಗೆ ಇದ್ದ ಚಾಯ್ಸ್ ಕೂಡ ಸೀಮಿತ, ಈಗಿನ ಹಾಗೆ ವಿಸ್ತೃತ ಅಲ್ಲ. ಆರ್ಟ್ಸ್, ಸೈನ್ಸ್ ಅಥವಾ ಕಾಮರ್ಸ್ ಇಷ್ಟೇ. ಇದರಲ್ಲಿ ಒಂದು ಆರಿಸ್ಕೋ ಅಷ್ಟೇ. ಸುಮಾರಾಗಿ ಮಾರ್ಕ್ಸ್ ತಗೊಂಡಿರುವವರು ಸೈನ್ಸ್ ಅಪ್ಪಿಕೊಂಡರೆ ನಂತರ ಮಿಕ್ಕ ದ್ದು. ಅಂದರೆ puc ಯಲ್ಲಿ ಕಾಮರ್ಸ್ ಆಯ್ಕೆ ಆಗಿದ್ದರೆ bcom ಆರ್ಟ್ಸ್ ಆಯ್ಕೆ ಆಗಿದ್ದರೆ ba…. ಅಷ್ಟೇ. ಸರ್ಕಾರದ ಕಾಮರ್ಸ್ ಕಾಲೇಜು ಅಂದರೆ ಆರ್ ಸಿ.ಕಾಲೇಜು… ರಾಮನಾರಾಯಣ ಚೆಲ್ಲಾರಾಮ್ ಕಾಲೇಜು. ಒಂದು ಜನರಲ್ ನಂಬಿಕೆ ಆಗಿನ ನಮ್ಮಲ್ಲಿ ಹೂತು ಹೋಗಿದ್ದು ಅಂದರೆ ವಿಧಾನ ಸೌಧದಲ್ಲಿ ಕ್ಲರ್ಕ್ ಆಗೋಕ್ಕೆ ಯಾವುದು ಓದಿದರೆ ಏನು ಅಂತ. ವಿಧಾನ ಸೌಧದಲ್ಲಿ ಯಾರಿಗೂ ಕೆಲಸ ಸಿಕ್ತಾ ಇರ್ಲಿಲ್ಲ, ಆದರೆ ಹೇಳೋದಿಕ್ಕೆ ಏನು?
ರಾಮಯ್ಯ ಕಾಲೇಜಿಂದ ಎಲ್ಲಿಗೋ ಹಾರಿಬಿಟ್ಟೆ ತಾನೇ?

ಸುಬೇದಾರ್ ಪಾಳ್ಯ ದಾಟಿ ಮುಂದೆ ರಸ್ತೆ ಕವಲು ಒಡೆಯುತ್ತೆ. ಮುಂದೆ ಬಂದರೆ ಬಲ ತಿರುವು ಒಂದು ನೂರು ಗಜ ಮುನ್ನಡೆದರೆ ಅದೇ ಎಂ ಎಸ್ ರಾಮಯ್ಯ ಅವರ ಸಾಮ್ರಾಜ್ಯ…. ಅಂತ ಹೇಳಿದ್ದೆ ತಾನೇ. ಮೊದಲಿಗೆ ಆಗ ಅರವತ್ತರ ದಶಕದ ಮಧ್ಯ ಭಾಗದಲ್ಲಿ ರಾಮಯ್ಯ ಎಂಜಿನಿಯರಿಂಗ್ ಕಾಲೇಜು ಆಗ ತಾನೇ ಹುಟ್ಟಿ ಎರಡು ಮೂರು ವರ್ಷ ಆಗಿತ್ತು. ಆಗ ಎಂಜಿನಿಯರಿಂಗ್‌ನಲ್ಲಿ ಮೂರು ವಿಭಾಗ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್ ಅಷ್ಟೇ. ಇನ್ನೂ ಈಗಿನ ಹಾಗೆ ಕೋರ್ಸುಗಳು ಇರುತ್ತವೆ ಎಂದು ಕಲ್ಪನೆಯೇ ಹುಟ್ಟಿರಲಿಲ್ಲ. ಆಗ ರಾಮಯ್ಯ ಕಾಲೇಜಿನಲ್ಲಿ BE ಗೆ ಮೂರು ಸಾವಿರ ಡೊನೇಷನ್ ಇತ್ತು. ಮೂರು ಸಾವಿರ ಅಂದರೆ ಆಗ ಆಗಿನ ಜೀವನದ ಮಟ್ಟಕ್ಕೆ ಮಧ್ಯಮ ವರ್ಗದವರ ಎರಡು ಎರಡೂವರೆ ತಿಂಗಳ ಸಂಬಳ! ಅದರಿಂದ ಕೆಳ ಮಧ್ಯಮ ವರ್ಗದ ಹುಡುಗರು BE ಓದುವ ಕನಸನ್ನೇ ಕಾಣುತ್ತಿರಲಿಲ್ಲ…

ರಾಮಯ್ಯ ತಮ್ಮ ಉದ್ಯೋಗ ಆರಂಭಿಸಿದ್ದು ಮಲ್ಲೇಶ್ವರದ ಒಂದು ಸಣ್ಣ ಕೈಗಾರಿಕೆಯಲ್ಲಿ ಹೆಲ್ಪರ್ ಆಗಿ. ಅವರು ಇಷ್ಟು ಎತ್ತರಕ್ಕೆ ಬೆಳೆದು ಬಂದದ್ದು, ಅತ್ಯುತ್ತಮ ದರ್ಜೆಯ ಶೈಕ್ಷಣಿಕ ಸಂಸ್ಥೆಗಳ ಸಮೂಹ ಹುಟ್ಟುಹಾಕಿದ್ದು, ಅವರ ಜೀವನ, ಮನಸು ಒಂದಿದ್ದರೆ ಏನೆಲ್ಲಾ ಸಾಧಿಸ ಬಹುದು….. ಇದೆಲ್ಲವೂ ಜನಸಾಮಾನ್ಯರು ಊಹಿಸಲೂ ಸಹ ಸಾಧ್ಯವಿಲ್ಲದ ರೋಚಕ ಪ್ರಸಂಗಗಳ ರಸದೌತಣ.
ಅದು ಮುಂದೆ ಹೇಳುತ್ತೇನೆ..

ಮುಂದುವರೆಯುತ್ತದೆ…