ಬಾಹುಗಳ ಸ್ವರ್ಗ

ಮಣಭಾರ ದಾರಿ ಸವೆಸಿ,
ಸುಸ್ತೆಂಬ ರಾಕ್ಷಸ ಮೈಯೆಲ್ಲಾ ಆರಾಮಾಗಿ ಅಡಗಿ
ಕೇಕೆ ಹಾಕಿ, ಕಲ್ಲು ತುಂಬಿದ ಕಾಲನ್ನು ಒಂದೊಂದೇ
ಎತ್ತುವಾಗ, ಮರಿ ಜಿಂಕೆಗಿಂತಲೂ ಸುಲಲಿತವಾಗಿ
ಜಿಗಿಯುವ, ಮನಸೆಳೆಯುವ, ಅಮೃತದ ಕೊಡ,
ಪ್ರೀತಿ ವಾತ್ಸಲ್ಯದ ಪ್ರಾಣ ವಾಯುವಾಗಿ, ಬಿಡಿಸಲಾರದ
ಅಪ್ಪುಗೆಯನ್ನು ಕೊಡುವ ಮಗು ಅದೆಷ್ಟು ಚೆಂದ!

ದಿನದ ಒತ್ತಾಯದ ಡೊಂಬರಾಟದಲಿ
ಜನ, ಕಚೇರಿ, ಮೇಲಧಿಕಾರಿಗಳ ಕಡ್ಡಾಯ
ಹಾಜರಿಯೊಂದಿಗೆ, ಒಂದೊಂದು ಕ್ಷುಲ್ಲಕ ಮಾತು
ಬೆಟ್ಟವಾಗಿ ಪರಿಣಮಿಸಿ, ಯಾವುದು ಸರಿ ಯಾವುದು ತಪ್ಪೆಂದು ವಿಚಾರಮಂಥನದ ಸಮುದ್ರವೇಳಲು
ನಿಷ್ಕಲ್ಮಶ ಮಗು, ನನ್ನ ಹುಟ್ಟಿಸಿದ ತಾಯಿಯೇ

ಗುಲಾಬಿ ಹೂ ಪಕಳೆಗಳ ಗಲ್ಲ, ಸಾಗರದಾಳದ ಕಣ್ಣು,
ಉದ್ದನೆಯ ಕಿವಿ, ಪ್ರೀತಿಯನ್ನೇ ಹೊತ್ತ ಬಾಯಿ, ತುಟಿ
ಲತೆಗಳಾಕಾರದಿ ಮೃದುವಾದ ಪುಟ್ಟ ಪುಟ್ಟ ಬಾಹುಗಳ ಬಂಧನವನ್ನು ಮೈತುಂಬ ನೀಗಿದಷ್ಟು ಹರವಿ,
ಸುತ್ತಲೂ ಆವರಿಸಲು ಪ್ರಯತ್ನಿಸುವ ಆ ಮಗು

ಮನಸ್ಸು ಆ ಅಪ್ಪುಗೆಗೆ ಅಂತ್ಯವೇ ಬೇಡವೆಂದು
ಸಣ್ಣಗೆ ಆ ಪರಮಾತ್ಮನಲ್ಲಿ ಬೇಡಿಕೊಳ್ಳಲು
ಕಣ್ಣಿಂದುದುರುವ ಆ ಹನಿಗಳ ಲಕ್ಷ್ಯವೇ ಇಲ್ಲ
ಮತ್ತೆ ಮತ್ತೆ ಅಪ್ಪುಗೆ ಬೇಕೆನ್ನುವ ಹಪಹಪಿ
ನನಗೆ ಮಾತ್ರವೋ…. ಇಲ್ಲಾ ಎಲ್ಲರಿಗೋ

ತಾಯಿಯಲ್ಲದಿದ್ದರೂ, ತಾಯಿಯಷ್ಟೇ
ಅದಕ್ಕೂ ಹೆಚ್ಚು ಪ್ರೀತಿಯೆರೆವ
ಆ ದೇವರೇ ಕಾಯುವಂತೆ ದಿನವೂ ನನ್ನ
ಬರುವಿಕೆಯ ಕಾಯುವ ಚಿಕ್ಕ ಆತ್ಮದಲ್ಲಿ
ನಿರೀಕ್ಷೆಗಳಾದರೂ ಏನು?…. ಏನೂ ಇಲ್ಲ
ಬರೀ ಪ್ರೀತಿ ಪ್ರೀತಿ ಪ್ರೀತಿ!

ಸ್ವರ್ಗವಂತೂ ಗೊತ್ತಿಲ್ಲ… ಗೊತ್ತಾಗುವುದೂ ಬೇಡ
ಬಹುಶಃ ಇದೇ ಸ್ವರ್ಗ
ಮತ್ತಿನ್ನೇಕೆ ಸಿಗಲಾರದ……. ಅಲ್ಲ ಅಲ್ಲ
ಇರಲಾರದ ಸ್ವರ್ಗದ ಬಯಕೆ
ಅದು ಸಿಕ್ಕಾಗ
ಮಗುವಿನ ಅಪ್ಪುಗೆಯಲ್ಲಿ