ವಿಪರೀತ ಜನ, ಸಮಯದ ಅಭಾವ. ಎರಡು ಮೂರು ದಿನಗಳಾದರೂ ಈ ಅರಮನೆಯನ್ನು ಸುತ್ತಿನೋಡಬೇಕು. ವಿಧಿಯಿಲ್ಲದೆ ಸಾಧ್ಯವಾದಷ್ಟು ನೋಡುತ್ತಾ ಹೊರಟೆವು. ಇದರಲ್ಲಿ ಪ್ರತಿಯೊಬ್ಬರೂ ಎಲ್ಲಾ ಕಡೆ ನಿಂತುಕೊಂಡು ಫೋಟೋಗಳನ್ನು ಹಿಡಿಯುವ ಹಿಂಸೆ ಬೇರೆ. ಜೊತೆಯಲ್ಲಿದ್ದ ನಮ್ಮ ಬೆಂಗಳೂರಿನ ಮಹಿಳೆಯೊಬ್ಬರನ್ನು `ಅಲ್ಲಮ್ಮ ತಮ್ಮ ತಮ್ಮ ಮುಖಗಳನ್ನ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಇಲ್ಲಿಗೆ ಬರಬೇಕೆ?’ ಎಂದಾಗ, `ಅಲ್ಲಣ್ಣ ನಾವು ಇಲ್ಲಿಗೆ ಬಂದಿದ್ದೀವಿ ಅಂತ ಗೊತ್ತಾಗಬೇಕಲ್ಲ, ಜನರಿಗೆ’ ಎಂದರು. ಅದೂ ಸರಿಯೇ ಎಂದುಕೊಂಡೆ.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಎರಡನೇ ಭಾಗ ನಿಮ್ಮ ಓದಿಗೆ

2023, ಅಕ್ಟೋಬರ್ 11ರಂದು ಬೆಳಿಗ್ಗೆ ತಿಂಡಿ ತಿಂದು 9.30ಕ್ಕೆ ಚಳಿ ಮತ್ತು ನವಿರು ಬಿಸಿಲಿನಲ್ಲಿ ನಾವು 26 ಜನರು ಸಾಲಿನಲ್ಲಿ ನಿಂತುಕೊಂಡಿದ್ದೆವು. ಅರಮನೆಯ ಬಾಗಿಲುಗಳು, ಕಾಂಪೌಂಡು ಎಲ್ಲವೂ ಚಿನ್ನದ ಬಣ್ಣದಿಂದ ಬಿಸಿಲಿನಲ್ಲಿ ಹೊಳೆಯುತ್ತಿತ್ತು. ನಮ್ಮ ಇಂಡಿಯನ್ ಗೈಡ್, ವಯಸ್ಸಾದ ಅಲ್ಲಿನ ಮಹಿಳೆಯೊಬ್ಬರನ್ನು ಪರಿಚಯಿಸಿ, ಆಕೆ ತಂತಿರಹಿತ ಫೋನ್‌ಗಳನ್ನು ನಮ್ಮೆಲ್ಲರ ಕಿವಿಗಳಿಕೆ ಹಾಕಿ, `ನಾನು ಬಾವುಟ ಹಿಡಿದುಕೊಂಡು ಮುಂದೆಹೋಗುತ್ತೇನೆ. ನಾನು ಮಾತನಾಡುವುದನ್ನು ಕೇಳಿಸಿಕೊಂಡು ನನ್ನ ಹಿಂದೆಯೇ ಬನ್ನಿ, ನನ್ನ ಮಾತು ಕೇಳಲಿಲ್ಲವೆಂದರೆ ನೀವು ತಪ್ಪಿಸಿಕೊಂಡಂತೆ. ಆ ಮೇಲೆ ಹುಡುಕುವುದು ತುಂಬಾ ಕಷ್ಟ’ ಎನ್ನುತ್ತಾ ಅಲ್ಲಲ್ಲಿ ನಿಂತು ಎಲ್ಲವನ್ನೂ ಇಂಗ್ಲಿಷ್‌ನಲ್ಲಿ ವಿವರಿಸುತ್ತಾ ನಡೆದಳು. ನಮ್ಮ ಜೊತೆಗೆ ಬಂದಿದ್ದ ವಯಸ್ಸಾದ ಮಂಡ್ಯ ದಂಪತಿ ನಡೆಯಲು ಸಾಧ್ಯವಾಗದೆ ಅವರನ್ನು ಒಂದು ಕಡೆ ಕೂರಿಸಿ ಎಲ್ಲೂ ಹೋಗದಂತೆ ಹೇಳಲಾಯಿತು.

(ವರ್ಸೈಲ್ಸ್ ಅರಮನೆ ಒಳಗಿನ ಕಲಾಕೃತಿಗಳು)

ವರ್ಸೈಲ್ಸ್ ಅರಮನೆ ಪ್ಯಾರಿಸ್‌ನಿಂದ 19 ಕಿ.ಮೀ. ಪಶ್ಚಿಮಕ್ಕಿದ್ದು, ಪ್ರಸ್ತುತ ಈ ಅರಮನೆ ಉದ್ಯಾನವನಗಳು/ವಸ್ತುಸಂಗ್ರಹಾಲಯಗಳನ್ನು ಹೊಂದಿದ್ದು ಪ್ರತಿವರ್ಷ ಒಂದೂವರೆ ಕೋಟಿ ವೀಕ್ಷಕರು ಅರಮನೆ ನೋಡಲು ಬರುತ್ತಾರೆ. ವರ್ಸೈಲ್ಸ್ ಅರಮನೆ ಜಗತ್ತಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. 1623ರಲ್ಲಿ ರಾಜಾ ಲೂಯಿಸ್-13 ಅರಮನೆ ಇರುವ ಸ್ಥಳದಲ್ಲಿ ವನ್ಯಪ್ರಾಣಿಗಳನ್ನು ಬೇಟೆಯಾಡುವ ವಸತಿಗೃಹವನ್ನು ನಿರ್ಮಿಸಿದ್ದನು. ಈತನ ಮರಣದ ನಂತರ ಲೂಯಿಸ್-14 ಅರಮನೆಯನ್ನು ಕಟ್ಟಲು ಪ್ರಾರಂಭಿಸಿ ಅದು 1661 ರಿಂದ 1715 ರವರೆಗೆ ನಡೆಯುತ್ತಲೇ ಇತ್ತು. ನಂತರ ಇದು ಫ್ರಾನ್ಸ್‌ನ ರಾಜಧಾನಿಯಾಯಿತು. 1789ರಲ್ಲಿ ಫ್ರೆಂಚ್ ಕ್ರಾಂತಿಯ ನಂತರ ರಾಜಮನೆತನ ಅರಮನೆಯನ್ನು ಬಿಟ್ಟು ಪ್ಯಾರಿಸ್‌ಗೆ ಹಿಂದಿರುಗಿತು. ನೆಪೋಲಿಯನ್ ಚಕ್ರವರ್ತಿಯ ಪಟ್ಟಾಭಿಷೇಕದ ನಂತರ ವರ್ಸೈಲ್ಸ್ಅನ್ನು 1810-1814 ರವರೆಗೆ ಬೇಸಿಗೆ ನಿವಾಸವಾಗಿ ಬಳಸಲಾಯಿತು. ನಂತರ ಇದನ್ನು ಫ್ರೆಂಚ್ ಇತಿಹಾಸದ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಯಿತು. 1979ರಲ್ಲಿ ಇದನ್ನು ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿ ಘೋಷಿಸಲಾಯಿತು. 17 ಮತ್ತು 18ನೇ ಶತಮಾನ ಫ್ರಾನ್ಸ್ ಕಲೆ ಮತ್ತು ವಿಜ್ಞಾನದ ಶಕ್ತಿ ಕೇಂದ್ರವಾಗಿತ್ತು.

1789ರಲ್ಲಿ ಫ್ರೆಂಚ್ ಕ್ರಾಂತಿಯ ವೇಳೆ ಅಕ್ಟೋಬರ್ 5ರಂದು ಸಾವಿರಾರು ಪುರುಷರು ಮತ್ತು ಮಹಿಳೆಯರ ಗುಂಪು ಹೆಚ್ಚು ತೆರಿಗೆ, ಬೆಲೆ ಹೆಚ್ಚಿದ ಬ್ರೆಡ್ಡು ಮತ್ತು ಆಹಾರ ಕೊರತೆಯನ್ನು ವಿರೋಧಿಸಿ ಪ್ಯಾರಿಸ್ ಮಾರುಟ್ಟೆಯಿಂದ ಅರಮನೆಯ ಕಡೆಗೆ ಮೆರವಣಿಗೆ ಹೊರಟಿತು. ಅವರು ದಾರಿಯಲ್ಲಿ ಶಸ್ತಾçಗಾರದಿಂದ ಶಸ್ತಾçಸ್ತçಗಳನ್ನು ಕಸಿದುಕೊಂಡು ಅರಮನೆಯನ್ನು ಮುತ್ತಿಗೆ ಹಾಕಿದರು. ರಾಜ ಮತ್ತು ರಾಣಿ ಅವರ ಪರಿವಾರ ಅಲ್ಲಿಂದ ಓಡಿಹೋಗಿಲು ಪ್ರಯತ್ನಿಸಿದರೂ 1793 ಜನವರಿ 21ರಂದು ಕ್ರಾಂತಿಕಾರಿ ಗಿಲ್ಲೊಟಿನ್‌ನಿಂದ ರಾಜ ಲೂಯಿಸ್-15 ನನ್ನು ಹಿಡಿದು ಗಲ್ಲಿಗೇರಿಸಲಾಯಿತು. ನಿರಂತರ 1000 ವರ್ಷಗಳ ಇತಿಹಾಸ ಉಳ್ಳ ರಾಜಪ್ರಭುತ್ವ ಕೊನೆಗೊಂಡಿತು. 1793ರಲ್ಲಿ ಬಂದ ಹೊಸ ಕ್ರಾಂತಿಕಾರಿ ಸರ್ಕಾರ ಎಲ್ಲಾ ವರ್ಣಚಿತ್ರ ಮತ್ತು ಶಿಲ್ಪಗಳನ್ನು ಪ್ಯಾರಿಸ್ ವರ್ಸೈಲ್ಸ್ ಅರಮನೆಯಿಂದ ಲೂವ (Louvre) ಅರಮನೆಗೆ ವರ್ಗಾಯಿಸಲು ಆದೇಶಿಸಿತು. ಅರಮನೆಯಲ್ಲಿದ್ದ ಉಳಿದ ಎಲ್ಲಾ ವಸ್ತುಗಳನ್ನು ಮಾರಾಟಮಾಡಲಾಯಿತು. ಅರಮನೆ ಮೇಲಿದ್ದ ಲಾಂಛನಗಳನ್ನು ಕತ್ತರಿಸಲಾಯಿತು.

ನೆಪೋಲಿಯನ್ ಬೋನಪಾರ್ಟೆ (1769-1821), ಫ್ರೆಂಚ್ ಚಕ್ರವರ್ತಿ ಮತ್ತು ಮಿಲಿಟರಿ ಕಮಾಂಡರ್ ಆಗಿದ್ದು ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಪ್ರಾಮುಖ್ಯತೆ ಹೊಂದಿದ್ದನು. 1799-1804 ರವರೆಗೆ ಫ್ರೆಂಚ್ ಗಣರಾಜ್ಯದ ನಾಯಕನಾಗಿದ್ದನು, ನಂತರ 1804-1814 ರವರೆಗೆ ಫ್ರೆಂಚ್ ಚಕ್ರವರ್ತಿಯಾಗಿದ್ದನು. ನೆಪೋಲಿಯನ್ ಸತ್ತಮೇಲೆ, ಲೂಯಿಸ್-16 ರಾಜನಾದನು ಮತ್ತು ಅವನು ತಾನು ಜನಿಸಿದ ವರ್ಸೈಲ್ಸ್ ಅರಮನೆಗೆ ಹಿಂದಿರುಗಲು ಯೋಚಿಸಿದನು. 1830ರಲ್ಲಿ ಫ್ರೆಂಚ್ ಕ್ರಾಂತಿಯ ನಂತರ ಹೊಸ ದೊರೆ ಲೂಯಿಸ್-ಫಿಲಿಪ್ ಅಧಿಕಾರಕ್ಕೆ ಬಂದು ಅರಮನೆಗೆ ಹೊಸ ಆಕಾಂಕ್ಷೆಯನ್ನು ತಂದನು. ಈತ ಫ್ರಾನ್ಸ್‌ನ ಇತಿಹಾಸ ಸಂಗ್ರಹಾಲಯವನ್ನು ರಚಿಸಲು ಪ್ರಾರಂಭಿಸಿದನು. ಅದು 1933ರಲ್ಲಿ ಪ್ರಾರಂಭವಾಗಿ 1837ಕ್ಕೆ ಮುಗಿಯಿತು. 1630-1780 ರವರೆಗಿನ ಫ್ರೆಂಚ್ ಇತಿಹಾಸದ ವಾಸ್ತುಶಿಲ್ಪದ ದೃಶ್ಯವನ್ನು ಇಲ್ಲಿ ಸೃಷ್ಟಿಸಲಾಗಿದೆ.

ಅರಮನೆಯನ್ನು ಆರಂಭದಲ್ಲಿ ಅಮೃತಶಿಲೆ ಮತ್ತು ಸ್ಲೇಟ್ ಕಲ್ಲುಗಳಲ್ಲಿ ಕಟ್ಟಲಾಯಿತು. 1660ರ ದಶಕದಲ್ಲಿ ಲೆವಾವು ಎಂಬಾತ ಇಟಾಲಿಯನ್ ವಿಲ್ಲಾಗಳೊಂದಿಗೆ ವಿಶಾಲವಾದ ಕಾಂಪೌಂಡನ್ನು ನಿರ್ಮಿಸಿದನು. 1770ರಲ್ಲಿ ನಿಯೋಕ್ಲಾಸಿಕಲ್ ಸೇರ್ಪಡೆಗಳನ್ನು ಮಾಡಲಾಯಿತು. ರಾಯಲ್ ಕೋರ್ಟ್ (ಕೋರ್ ರಾಯಲ್) ಎಂದು ಕರೆಯಲಾಗುವ ವಿಸ್ತಾರವಾದ ಕೋರ್ ಡಿ ಹಾನರ್‌ಅನ್ನು ರಚಿಸಲಾಯಿತು. ರಾಯಲ್ ಕೋರ್ಟ್‌ನ ಪಾರ್ಶ್ವವು ಎರಡು ಅಗಾಧವಾದ ಪಾರ್ಶ್ವಗಳಿಂದ ಕೂಡಿದ್ದು ಇದು 1,319 ಅಡಿಗಳ ಉದ್ದ ಮುಂಭಾಗವನ್ನು ಹೊಂದಿದೆ. 10 ಹೆಕ್ಟೇರುಗಳ ಛಾವಣಿಯಿಂದ ಆವೃತವಾಗಿರುವ ಅರಮನೆಯು 2143 ಕಿಟಕಿಗಳು, 1252 ಚಿಮಣಿಗಳು ಮತ್ತು 67 ಸ್ಟೇರ್‌ಕೇಸುಗಳನ್ನು ಹೊಂದಿದೆ. ಮೂಲವಾಗಿ ಅರಮನೆಯ ವಿಸ್ತೀರ್ಣ 37,000 ಎಕರೆಗಳಲ್ಲಿ ಹರಡಿಕೊಂಡಿತ್ತು. ಪ್ರಸ್ತುತ 2014 ಎಕರೆಗಳು ಮಾತ್ರ ಉಳಿದುಕೊಂಡಿದೆ. ಲಂಡನ್‌ನ ಬೆಕ್ಕಿಂಗ್‌ಹ್ಯಾಮ್ ಅರಮನೆಯನ್ನು ಬಿಟ್ಟರೆ ಇದು ಈಗಲೂ ಜಗತ್ತಿನ ಯಾವುದೇ ಅತಿದೊಡ್ಡ ರಾಯಲ್ ಅರಮನೆಯಾಗಿದೆ. ಅರಮನೆಯಲ್ಲಿ ಪ್ರಭಾವ ಬೀರುವ ಆಕೃತಿಗಳೆಂದರೆ ಹ್ಯಾಂಪ್ಟನ್ ಕೋರ್ಟ್ ಅರಮನೆ, ಬರ್ಲಿನ್ ಅರಮನೆ, ಲಾ ಗ್ರಂಜಾ ಅರಮನೆ, ಸ್ಟಾಕ್‌ಹೋಮ್ ಅರಮನೆ, ಲುಡ್‌ವಿಡ್ಸ್‌ಬರ್ಗ್‌ನಲ್ಲಿರುವ ಅರಮನೆ ಮತ್ತು ಲುಡ್ವರ್ಗ್ಸ್‌ಬರ್ಗ್ ಅರಮನೆಗಳು.

(ವರ್ಸೈಲ್ಸ್ ಅರಮನೆ ಒಳಗಿನ ಇನ್ನೊಂದು ಕಲಾಕೃತಿ)

ನಾವು ಅರಮನೆಯ ಒಳಗೆ ಹೊಕ್ಕಿದ್ದೆ ಯಾವುದನ್ನು ನೋಡಬೇಕು? ಯಾವುದನ್ನು ಬಿಡಬೇಕು ಒಂದೂ ಅರ್ಥವಾಗಲಿಲ್ಲ. ಅರಮನೆಯೊಂದು ಹೀಗಿರುತ್ತದೆಯೇ? ಎನ್ನುವ ಆಲೋಚನೆ ಬಂದುಬಿಟ್ಟಿತು. ಎಲ್ಲವನ್ನೂ ಸರಿಯಾಗಿ ನೋಡಬೇಕಾದರೆ ಎಷ್ಟು ದಿನಗಳು ಹಿಡಿಯಬಹುದು? ಎಂಬುದಾಗಿ ಆಲೋಚಿಸುತ್ತಾ ಹೋಗುತ್ತಿದ್ದಂತೆ ನಮ್ಮ ಲೇಡಿಗೈಡು ಯಾವುದೋ ಒಂದು ವರ್ಣಚಿತ್ರಗಳ ಗಾಜಿನ ಕೋಣೆಯ ಮುಂದೆಹೋಗಿ ನಿಂತುಕೊಂಡು ಕರೆಯುತ್ತಿದ್ದಳು. ಬಹುಶಃ ಪ್ಯಾಕೇಜ್ ಟೂರ್‌ನಲ್ಲಿ ಬರುವುದು ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಹುಟ್ಟುಕೊಂಡಿತು. ವಿಪರೀತ ಜನ, ಸಮಯದ ಅಭಾವ. ಎರಡು ಮೂರು ದಿನಗಳಾದರೂ ಈ ಅರಮನೆಯನ್ನು ಸುತ್ತಿನೋಡಬೇಕು. ವಿಧಿಯಿಲ್ಲದೆ ಸಾಧ್ಯವಾದಷ್ಟು ನೋಡುತ್ತಾ ಹೊರಟೆವು. ಇದರಲ್ಲಿ ಪ್ರತಿಯೊಬ್ಬರೂ ಎಲ್ಲಾ ಕಡೆ ನಿಂತುಕೊಂಡು ಫೋಟೋಗಳನ್ನು ಹಿಡಿಯುವ ಹಿಂಸೆ ಬೇರೆ. ಜೊತೆಯಲ್ಲಿದ್ದ ನಮ್ಮ ಬೆಂಗಳೂರಿನ ಮಹಿಳೆಯೊಬ್ಬರನ್ನು `ಅಲ್ಲಮ್ಮ ತಮ್ಮ ತಮ್ಮ ಮುಖಗಳನ್ನ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಇಲ್ಲಿಗೆ ಬರಬೇಕೆ?’ ಎಂದಾಗ, `ಅಲ್ಲಣ್ಣ ನಾವು ಇಲ್ಲಿಗೆ ಬಂದಿದ್ದೀವಿ ಅಂತ ಗೊತ್ತಾಗಬೇಕಲ್ಲ, ಜನರಿಗೆ’ ಎಂದರು. ಅದೂ ಸರಿಯೇ ಎಂದುಕೊಂಡೆ. ನನ್ನ ಪತ್ನಿ ಸುಶೀಲಮ್ಮನಿಗಂತೂ ಫೋಟೋ ಕ್ರೇಜ್‌, ಎಷ್ಟೋ ಸಲ ಅದಕ್ಕಾಗಿಯೇ ನಮ್ಮ ನಡುವೆ ಜಗಳ ನಡೆಯುತ್ತಿತ್ತು.

ಅರ್ಧ ಅರಮನೆ ನೋಡಿಕೊಂಡು ಅರಮನೆಯ ಹಿಂದಿನ ಬಾಗಿಲಿಗೆ ಬಂದೆವು. ಎಲ್ಲೆಲ್ಲೂ ಹಸಿರು ಉದ್ಯಾನವನಗಳು ಮತ್ತು ಪ್ರತಿಮೆಗಳೆ ತುಂಬಿಕೊಂಡಿದ್ದವು. ಅದನ್ನೆಲ್ಲ ಸುತ್ತಾಡಲು ಹೋದರೆ ರಾತ್ರಿಯೇ ಆಗಬಹುದು! ಗೈಡ್ ಮುಂದೆ, ನಾವು ಹಿಂದೆ. ಅಂತೂ ಗೈಡ್ ಹೇಳಿದ್ದ ಸಮಯಕ್ಕೆ ನಾವು ಹೊರಗೆ ಬರಬೇಕಾಯಿತು. ಈ ಅರಮನೆಯಲ್ಲಿ ನೋಡಬೇಕಾದ 8 ಮುಖ್ಯ ಆಕೃತಿಗಳು ಹೀಗಿವೆ:

1. ರಾಯಭಾರಿಯ ಮೆಟ್ಟಿಲುಗಳು

(ಗ್ರ್ಯಾಂಡ್ ರಾಯಭಾರಿಯ ಅರಮನೆ ಮೆಟ್ಟಿಲುಗಳು)

ಇವು 1674-1680 ರವರೆಗೆ ಡಿ ಓರ್ಬೆ ನಿರ್ಮಿಸಿದ ಸಾಮ್ರಾಜ್ಯಶಾಹಿ ಮೆಟ್ಟಿಲುಗಳು. ಮೆಟ್ಟಿಲುಗಳು ಮತ್ತು ಕೋಣೆಯ ಗೋಡೆಗಳು ಬಹುವರ್ಣೀಯ ಅಮೃತಶಿಲೆ ಮತ್ತು ಸ್ವರ್ಣ ಲೇಪಿತ ಹೊದಿಕೆಯನ್ನು ಹೊಂದಿದ್ದವು. ಮೆಟ್ಟಿಲುಗಳ ಮೇಲಿನ ಗೋಡೆಯ ಮೇಲೆ ಜಗತ್ತಿನ ನಾಲ್ಕು ಭಾಗಗಳ ಜನರನ್ನು ಪ್ರತಿನಿಧಿಸುವ ಟ್ರೊಂಪೆ-ಎಲ್’ಎಲ್ ವರ್ಣಚಿತ್ರಗಳು ಮೆಟ್ಟಿಲು ಕಡೆ ನೋಡುತ್ತಿದ್ದವು. ಅಲ್ಲಿ ವರ್ಷದ 12 ತಿಂಗಳುಗಳ ಸಾಂಕೇತಿಕ ವ್ಯಕ್ತಿಗಳು ಮತ್ತು ಮ್ಯೂಸಸ್ ಅಂದರೆ ವಿವಿಧ ಶಾಸ್ತಿçÃಯ ಗ್ರೀಕ್ ದೇವತೆಗಳನ್ನು ಚಿತ್ರಿಸಲಾಗಿದೆ. ಜೊತೆಗೆ ಜೀನ್ ವಾರಿನ್ ಕೆತ್ತಿದ ರಾಜ ಲೂಯಿಸ್-14 ಅಮೃತಶಿಲೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

2. ರಾಜನ ಸ್ಟೇಟ್ ಅಪಾರ್ಟೆಮೆಂಟ್

1678-1686ರ ನಡುವೆ ಹಾಲ್ ಆಫ್ ಮಿರರ್ಸ್ ನಿರ್ಮಾಣದಿಂದ ಸ್ಟೇಟ್ ಅಪಾರ್ಟೆಮೆಂಟ್‌ಗಳಿಗೆ ಪ್ರಮುಖ ಬದಲಾವಣೆಗಳನ್ನು ಮಾಡಲಾಯಿತು. ಮೊದಲಿಗೆ ಇದನ್ನು ರಾಜನ ನಿವಾಸಕ್ಕಾಗಿ ಉದ್ದೇಶಿಲಾಗಿದ್ದು, ನಂತರ ಅತ್ಯುತ್ತಮ ವರ್ಣಚಿತ್ರಗಳ ಗ್ಯಾಲರಿಗಳಾಗಿ ಮಾರ್ಪಡಿಸಲಾಯಿತು ಮತ್ತು ಆಸ್ಥಾನಿಕ ಅನೇಕ ಸ್ವಾಗತಗಳ ಸ್ಥಳಗಳಾದವು. ಇಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವು.

(ರಾಜನ ಸ್ಟೇಟ್ ಅಪಾರ್ಟ್ಮೆಂಟ್‌ನ ಒಳನೋಟ)

3. ಹರ್ಕ್ಯುಲಸ್ ಸಭಾಂಗಣ

(ಹರ್ಕ್ಯುಲಸ್ ಸಭಾಂಗಣದಲ್ಲಿರುವ ಒಂದು ಕಲಾಕೃತಿ.)

ಇದು ಮೂಲತಃ ಪ್ರಾರ್ಥನಾ ಮಂದಿರವಾಗಿತ್ತು. 1712ರಲ್ಲಿ ರಾಜನ ಮೊದಲ ವಾಸ್ತುಶಿಲ್ಪಿ ರಾಬರ್ಟ್ ಡಿ ಕಾಟ್ಟೆ ಅವರ ಮೇಲ್ವಿಚಾರಣೆಯಲ್ಲಿ ಇದನ್ನು ಪುನರ್ನಿರ್ಮಿಸಲಾಯಿತು. ಪಾವೊಲೊ ವೆರೋನೀಸ್, ಎಲಿಯಾಜರ್, ರೆಬೆಕ್ಕಾ ಮತ್ತು ಮೀಲ್ ಅವರ ಎರಡು ವರ್ಣಚಿತ್ರಗಳನ್ನು ಸೈಮನ್ ದಿ ಫರಿಸೀ’ಯಲ್ಲಿ ಪ್ರದರ್ಶಿಸಲಾಯಿತು. ಇದು ರಾಜ ಲೂಯಿಸ್-15 ಅವರಿಗೆ ಬಂದ ಉಡುಗೊರೆಯಾಗಿದೆ. 1736ರಲ್ಲಿ ಫ್ರಾಂಕೋಯಿಸ್ ಲೆಮೊಯ್ನೆ ಅವರ ಛಾವಣಿಯ ಮೇಲಿನ ಚಿತ್ರಕಲೆ, ದಿ ಅಪೋಥಿಯೋಸಿಸ್ ಆಫ್ ಹರ್ಕ್ಯುಲಸ್ ಪೂರ್ಣಗೊಂಡಿತು.

4. ಸಮೃದ್ಧಿಯ ವೀನಸ್ ಸಭಾಂಗಣ

ಇಲ್ಲಿ ಲೂಯಿಸ್ 15ರ ಅಮೂಲ್ಯ ಆಭರಣಗಳು ಮತ್ತು ಅಪರೂಪದ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ರೆನೆ-ಆಂಟೊಯಿನ್ ಹೌಸ್ಸೆ ಅವರ ವರ್ಣಚಿತ್ರ `ಅಬಂಡನ್ಸ್ ಅಂಡ್ ಲಿಬರಲಿಟಿ’ (1683) ಕಿಟಿಕಿಗಳ ಎದುರು ಬಾಗಿಲಿನ ಮೇಲ್ಛಾವಣಿಯ ಮೇಲೆ ಚಿತ್ರಿಸಲಾಗಿದೆ. ಈ ಸಭಾಂಗಣವನ್ನು ಸಂಜೆಯ ಆರತಕ್ಷತೆಗೆ ಬಳಸಲಾಗುತ್ತಿತ್ತು. ರೋಮನ್ ಚಕ್ರವರ್ತಿ ವೇಷಭೂಷಣದಲ್ಲಿರುವ ಲೂಯಿಸ್-15ರ ಜೀನ್ ವಾರಿನ್ ಅವರ ಜೀವತಾವಧಿಯ ಪ್ರತಿಮೆ ಈ ಕೋಣೆಯಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅಂಡಾಕಾರದ ಚೌಕಟ್ಟಿನಲ್ಲಿ ಛಾವಣಿಯ ಮೇಲೆ ಹೂಸ್ಸೆಯ ಮತ್ತೊಂದು ಅಪೂರ್ವವಾದ ವರ್ಣಚಿತ್ರವಿದೆ. ಇದರಲ್ಲಿ ವೀನಸ್ ದೇವತೆಗೆ ಇತರ ದೇವರುಗಳು ಮತ್ತು ಶಕ್ತಿಗಳನ್ನು ಅಧೀನಗೊಳಿಸಲಾಗಿದೆ. ಟ್ರೊಂಪೆ-ಎಲ್’ಎಲ್ ವರ್ಣಚಿತ್ರಗಳು ಮತ್ತು ಛಾವಣಿಯ ಸುತ್ತಲೂ ಇರುವ ಶಿಲ್ಪವು ಪೌರಾಣಿಕ ವಿಷಯಗಳನ್ನು ಸಂಕೇತಿಸುತ್ತದೆ.

(ವೀನಸ್ ಸಭಾಂಗಣದ ಛಾವಣಿಯಲ್ಲಿರುವ ಕಲಾಕೃತಿ)

5. ಮರ್ಕ್ಯುರಿ ಸಭಾಂಗಣ

1682ರಲ್ಲಿ ಲೂಯಿಸ್-15 ಅವರು ನ್ಯಾಯಾಲಯ ಮತ್ತು ಸರ್ಕಾರವನ್ನು ಅರಮನೆಗೆ ಸ್ಥಳಾಂತರಿಸಿದಾಗ ಇದು ರಾಜನ ಕೋಣೆಯಾಗಿತ್ತು. ಇಲ್ಲಿ ಪ್ಲೆಮಿಶ್ ಕಲಾವಿದ ಜೀನ್ ಬ್ಯಾಪ್ಟಿಸ್ಟ್ ಡಿ ಚಾಂಪೇನ್ ಸೀಲಿಂಗ್‌ನಲ್ಲಿ ಮರ್ಕ್ಯುರಿ ದೇವರ ರಥವನ್ನು ಹುಂಜ ಎಳೆಯುತ್ತಿರುವಂತೆ ಚಿತ್ರಿಸಲಾಗಿದೆ. ಅಲೆಕ್ಸಾಂಡರ್ ದಿ ಗ್ರೇಟ್ ಮತ್ತು ಟಾಲೆಮಿಯನ್ನು ವಿದ್ವಾಂಸರು ಮತ್ತು ತತ್ವಜ್ಞಾನಿಗಳು ಸುತ್ತುವರಿದಿರುವಂತೆ ಚಿತ್ರಿಸಲಾಗಿದೆ. ಆಟೋಮ್ಯಾಟಿಕ್ ಗಡಿಯಾರವನ್ನು 1706ರಲ್ಲಿ ರಾಜಮನೆತನದ ಗಡಿಯಾರ ತಯಾರಕ ಆಂಟೊಯಿನ್ ಮೊರಾಂಡ್, ರಾಜನಿಗಾಗಿ ತಯಾರಿಸಿದನು. ಗಡಿಯಾರ ಪ್ರತಿ ಗಂಟೆಗೆ ಒಮ್ಮೆ ಬಾರಿಸಿದಾಗ ಲೂಯಿಸ್-15 ಮತ್ತು ಪ್ರಮುಖ ವ್ಯಕ್ತಿಗಳು ಮೋಡಗಳಿಂದ ಇಳಿದುಬರುತ್ತಾರೆ.

6. ಮಾರ್ಸ್ ಸಭಾಂಗಣ

ಇದನ್ನು 1782 ರವರೆಗೆ ರಾಯಲ್ ಗಾರ್ಡ್‌ಗಳು ಬಳಸುತ್ತಿದ್ದು ಹೆಲ್ಮೆಟ್‌ಗಳು ಮತ್ತು ಟ್ರೋಪಿಗಳೊಂದಿಗೆ ಮಿಲಿಟರಿ ಪ್ರಕಾರ ಅಲಂಕರಿಸಲಾಗಿತ್ತು. ಅದಕ್ಕೆ ಮುಂಚೆ 1684-1750ರ ನಡುವೆ ಸಂಗೀತ ಕಚೇರಿಯಾಗಿದ್ದು ಎರಡೂ ಬದಿಗಳಲ್ಲಿ ಸಂಗೀತಗಾರರಿಗೆ ಗ್ಯಾಲರಿಗಳಿದ್ದವು. ಲೂಯಿಸ್-15 ಮತ್ತು ರಾಣಿ ಮೇರಿ ಲೆಸ್ಜನ್ಸ್ಕಾ ಭಾವಚಿತ್ರಗಳು ಕೋಣೆಯಲ್ಲಿವೆ.

7. ಅಪೊಲೊ ಸಭಾಂಗಣ

(ಅಪೊಲೊ ಸಭಾಂಗಣದಲ್ಲಿರುವ ಒಂದು ಕಲಾಕೃತಿ)

ಇದು ರಾಜಸಿಂಹಾಸನದ ಕೋಣೆಯಾಗಿತ್ತು ಮತ್ತು ಔಪಚಾರಿಕ ಪ್ರೇಕ್ಷಕರಿಗೆ ವೇದಿಕೆಯಾಗಿತ್ತು. ಯುದ್ಧದ ಕಾಲದಲ್ಲಿ ಎಂಟು ಅಡಿ ಬೆಳ್ಳಿ ಸಿಂಹಾಸನವನ್ನು ಕರಗಿಸಿ ವೆಚ್ಚವನ್ನು ಭರಿಸಲಾಯಿತು. ಚಾರ್ಲ್ಸ್ ಡೆ ಲಾ ಫೋಸ್ಸೆ ಚಿತ್ರಿಸಿರುವ ವರ್ಣಚಿತ್ರ ಅಪೊಲೊದ ಸೂರ್ಯನ ರಥವಾಗಿದ್ದು ಇದು ರಾಜನ ನೆಚ್ಚಿನ ಲಾಂಛನವಾಗಿತ್ತು, ನಾಲ್ಕು ಕುದುರೆಗಳು ನಾಲ್ಕು ಋತುಗಳನ್ನು ಸಂಕೇತಿಸುತ್ತವೆ.

ಒಟ್ಟಿನಲ್ಲಿ ಪ್ಯಾರಿಸ್‌ನ ಈ ಅರಮನೆ ಅದ್ಭುತ ಮತ್ತು ಜೀವನದಲ್ಲಿ ಒಮ್ಮೆ ನೋಡುವಂತಹ ಸ್ಥಳವಾಗಿದೆ. ಆದರೆ ಕನಿಷ್ಠ ಒಂದೆರಡು ದಿನಗಳಾದರೂ ಇಲ್ಲಿನ ಕಲಾಕೃತಿಗಳನ್ನು ನೋಡಿ ಕಣ್ಣುಗಳ ಆಳಕ್ಕೆ ಇಳಿಸಿಕೊಳ್ಳಬೇಕಿದೆ. ಯುರೋಪ್ ದೇಶಗಳು ಇತರ ದೇಶಗಳ ಸಂಪತ್ತನ್ನೆಲ್ಲ ಹೇಗೆ ಗುಡ್ಡೆ ಹಾಕಿಕೊಂಡು ಅನುಭವಿಸಿದರು ಎನ್ನುವುದನ್ನು ಇಲ್ಲಿ ನೋಡಬಹುದು. ಈಗಲೂ ಜಗತ್ತಿನ ಐಶ್ವರ್ಯವಂತರು ಇದೇ ರೀತಿ ಬದುಕನ್ನು ಅನುಭವಿಸುತ್ತಿದ್ದಾರೆ. ಇತಿಹಾಸದ ಉದ್ದಕ್ಕೂ ಬಡವರ ಶ್ರಮ ಶ್ರಮವಾಗಿಯೇ ಮುಂದುವರಿದಿದೆ. ಒಂದೇ ಒಂದು ಖುಷಿಯ ವಿಷಯವೆಂದರೆ ಎಷ್ಟೇ ಸುಖ ಅನುಭವಿಸಿದರೂ ಈ ರಾಜಮಹಾರಾಜರೆಲ್ಲ ಒಂದು ದಿನ ಮಣ್ಣಿಗೆ ಸೇರಿಹೋಗುವುದು ಮಾತ್ರ ನಿಸರ್ಗ ಸೃಷ್ಟಿಸಿರುವ ರಹಸ್ಯ. ಎಲ್ಲವನ್ನೂ ಮುಗಿಸಿಕೊಂಡು ಬಂದಾಗ ಮಂಡ್ಯದ ವೃದ್ಧ ದಂಪತಿಗಳು ಅಲ್ಲೇ ಕುಳಿತಿದ್ದು ಅವರನ್ನು ಕರೆದುಕೊಂಡು ಹೊರಟೆವು. ಇಷ್ಟು ದೂರ ಬಂದರೂ ಇವರು ಅರಮನೆಯನ್ನು ನೋಡಲು ಸಾಧ್ಯವಾಗಲಿಲ್ಲವಲ್ಲ ಎಂದುಕೊಂಡೆ!

(ಹಿಂದಿನ ಕಂತು: ದೂರದ ಬೆಟ್ಟ “ಪ್ಯಾರಿಸ್”…)