ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್‌ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು… ಹೀಗೆ ಒಂದೇ ಎರಡೇ…… ಸಂದೇಶಾವಾಂತರಗಳು!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಮೂರನೆಯ ಬರಹ
ಏನ್ ಮಾಡೋದು…..? ಯಾಕ್ ಕೊಡಬೇಕು ಮಕ್ಳಿಗೆ ಪರೀಕ್ಷೆನಾ…? ಶುದ್ಧ ಕನ್ನಡವ ಅದೂ ಅಶುದ್ಧ ಕನ್ನಡ ಎನ್ನುತ್ತಲೇ ಮೊನ್ನೆ ನಡೆದ ಕಿರು ಪರೀಕ್ಷೆಯ ಹೊಸದೊಂದು ಉತ್ತರ ಪತ್ರಿಕೆಯ ಬಂಡಲ್ ತೆರೆದರೆ ಹೊಸ ಹೊಸ ಉತ್ತರಗಳು ಇಣುಕಿದವು. ಪತಿ ಪದಕ್ಕೆ ಸಮಾನಾರ್ಥ ಕೇಳಿದ್ದಕ್ಕೆ ಯಮಾನ ಎಂದು ಮರು ಪ್ರಶ್ನೆ ಹಾಕಿದ್ದ ಪತ್ರಿಕೆ ಸಿಕ್ಕಿತು ಯಾರದ್ದು ಇದು ಪೇಪರ್ ಎಂದು ಹಾಳೆಯನ್ನು ತಿರುಗಿಸಿದರೆ ಕಿರು ಪರೀಕ್ಷೆ ಎಂದು ಬರೆಯಬೇಕಾದಲ್ಲಿ ಕೀರು ಟೇಸ್ಟ್ ಎಂದಿತ್ತು. ಅದರ ಜೊತೆಗೆ ಅಂಥಹುದೆ ಪತ್ರಿಕೆಗಳಂತರ್ಗತ ಉತ್ತರಗಳನ್ನು ವಿಷಾದದಿಂದಲೆ ಹಂಚಿಕೊಳ್ಳುವ ಪ್ರಯತ್ನವಿದು.
ರನ್ನನ ‘ಗದಾಯುದ್ಧ’ದ ಆರಿಸಿದ ಪದ್ಯ ಭಾಗ ‘ದುರ್ಯೋಧನ ವಿಲಾಪ’ ಮತ್ತು ಇತರೆ ಪದ್ಯ, ಗದ್ಯ ಪಾಠ ಮಾಢಿ ಪರೀಕ್ಷೆ ನಡೆಸಿದ ಸಂದರ್ಭವದು. ಕೇಳಿದ ಸಂದರ್ಭಕ್ಕೆ ನೀಡಿದ್ದ ಉತ್ತರವನ್ನು ಆ ವಿದ್ಯಾರ್ಥಿಯೋ… ವಿದ್ಯಾರ್ಥಿನಿಯೋ… ಬರೆದಂತೆ ಬರೆಯುತ್ತಿರುವೆ. “ಜನಕಂಗೆ ಜಲಾಂಜಲಿಯನ್ನು ತನೂಭವ ಕುಡುವುದುಚಿತ” ಎಂಬ ಸಂದರ್ಭಕ್ಕೆ ಸ್ವಾರಸ್ಯಕರ ಉತ್ತರ ಹೀಗಿತ್ತು. ಈ ಮಲಿನ ವಾಕ್ಯವನ್ನು ರನನ್ನು ರಚಿಸಿದ ಗದ್ದಯುದ್ಧದಿಂದ…… ಕರುಪತಿ 37ತ ಸಲಹೆಯನ್ನು ಪಡೆಯಲು ಸಂಜಯರ ಜೊತೆ ರಸರಂಗಕ್ಕೆ ಹೂಗುತಿರುವಾಗೆ ಮಗನ ಶವವನ್ನು ಕಾಂಡು ದುಖಃ ಕೊಂಡು. ಮಗ ಅಪ್ಪನಿಗೆ ಹಲ್ಲು ತುಪ್ಪ ಬಿಡುತ್ತಾನೆ. ಆದರೆ ನನ್ನು ನಿನಗೆ ಬೀಡುವ ಪುರಿಸ್ಥಿತಿ ಬಂತು ಮಗನ ಸವಕ್ಕೆ ಬೆಂಕಿ ಹಿಂಡುವಂತೆ ನೊವಿನಿಂದು……” ಎಂದೆಲ್ಲಾ ಇತ್ತು. ಇಷ್ಟು ಅಕ್ಷರ ತಪ್ಪು ಜೊತೆಗೆ ಪಠ್ಯದಲ್ಲಿ ಇಲ್ಲದೆ ಇರುವುದೂ ಇದೆಯಲ್ಲ ಎಂದುಕೊಂಡು ಇಡೀ ಉತ್ತರಕ್ಕೆ ಓರೆ ಗೆರೆ ಎಳೆದೆ.
ಕ್ಷಮಿಸಿ ಸಂದರ್ಭ ಸಹಿತ ಸ್ವಾರಸ್ಯ ವಿವರಿಸಿ ಎಂದರೆ ಪಠ್ಯದ ಹೊರತಾದ ಸ್ವಾರಸ್ಯ ಉತ್ತರಗಳೆ ಸಿಗುತ್ತವೆ ಇಲ್ಲಿ. ‘37ತ’ ರ ಸಲಹೆ ಏನೆಂದು ಚಿಂತಿಸಬೇಡಿ. ಅವನು ‘ತಾ’ ಅಕ್ಷರ ಬರೆದಿದ್ದ ಕ್ರಮವೇ ಹಾಗಿತ್ತು… “ಸಂಜಯರ ಜೊತೆ ರಸರಂಗಕ್ಕಲ್ಲ ದುರ್ಯೋಧನ ಹೋಗಿದ್ದು ರಣರಂಗಕ್ಕೆ” ಎಂದು ದಡ್ಡನೂ ಹೇಳುವನು…… (ಮೊದಲಿಗೆ ತಪ್ಪಾದ ಪದಗಳನ್ನು ನಂತರ ಸರಿಯಾದ ಪದಗಳನ್ನು ಬರೆದಿರುವೆ) ಮಲಿನವಾಕ್ಯ>ಮೇಲಿನವಾಕ್ಯ, ರನನ್ನು>ರನ್ನನು, ಗದ್ದಯುದ್ಧ>ಗದಾಯುದ್ಧ, ಕಾಂಡು>ಕಂಡು, ಹಲ್ಲುತುಪ್ಪ>ಹಾಲು ತುಪ್ಪ, ಬೀಡುವ>ಬಿಡುವ, ಪುರಿಸ್ಥಿತಿ>ಪರಿಸ್ಥಿತಿ, ಸವ>ಶವ, ಹಿಂಡುವಂತೆ>ಇಡುವಂತೆ, ನೊವಿನಿಂದು>ನೋವಿನಿಂದ ಇತ್ಯಾದಿ ಅಪಭ್ರಂಶಗಳು ಕೇವಲ ನಾಲ್ಕು ಸಾಲುಗಳಲ್ಲಿ ಸಿಕ್ಕವು.
ಒಂದು ವಾಕ್ಯದಲ್ಲಿ ಉತ್ತರಿಸಿ ಪ್ರಶ್ನೆಗಳ ಉತ್ತರ ಹೀಗಿತ್ತು.,
1 ಕರುರಾಯ ದವಣಿಗಳನ್ನು ಮೆಚ್ಚಿ ನಡೆದನು,
2 ಚೋಳದೇಶವು ಶವನಿಗೆ ನೆಲೆಯಾಗಿತ್ತು
3 ಮಾದರ ಚನ್ನನಿಂದ ಶಿವನು ಹಂಬಲಿಯನ್ನು ಸ್ವೀಕರಿಸಿದನು
4 ಗಾಂದಿ ಕತೆಯ ಕತೆಯಗಾರರು ಬಾಸರಹಳ್ಳಿ
5 ರಾಗಿಯ ಮೂಲ ಇಂಗಲ್ಯಾಂಗ್
6 ರಾಗಿಯ ಮೂಲ ಆಫರಿಕ
ಅಬ್ಬಬ್ಬಾ ಏನಿದು ಎನ್ನದಿರಿ…. ಮುಂದಿನ ಸಾಲುಗಳಲ್ಲಿ ಒಂದೊಂದನ್ನೆ ವಿಷದ ಪಡಿಸುವೆ
1 ಕುರುರಾಯ ದಡಿಂಗವೆಣಗಳನ್ನು ಮೆಟ್ಟಿ ನಡೆದನು
2 ಚೋಳದೇಶವು ಶಿವನಿಗೆ ನೆಲೆಯಾಗಿತ್ತು
3 ಮಾದರ ಚನ್ನನಿಂದ ಶಿವನು ಅಂಬಲಿಯನ್ನು ಸ್ವೀಕರಿಸಿದನು
4 “ಗಾಂಧಿ” ಕತೆಯ ಕತೆಗಾರರು ಬೆಸಗರಹಳ್ಳಿ ರಾಮಣ್ಣ
5 ರಾಗಿಯ ಮೂಲ ಇಂಗ್ಲೆಂಡ್ (ಇಥಿಯೋಪಿಯಾ ಸರಿ ಉತ್ತರ)
6 ರಾಗಿಯ ಮೂಲ ಆಫ್ರಿಕ (ಆಫ್ರಿಕ ಮೂಲದ ಇಥಿಯೋಪಿಯಾ ಎಂದಾಗಬೇಕಿತ್ತು)
ಮುಂದಿನ ಪ್ರಶ್ನೆ ಮಾದರ ಚನ್ನಯ್ಯ ಶಿವ ಲಿಂಗವನ್ನು ಹೇಗೆ ಅರ್ಚಿಸಿದ ಎಂಬ ಪ್ರಶ್ನೆಗೆ ಲಿಂಗವನ್ನು ಮರಳಿನ ದಂಡೆಯ ಮೇಲೆ ಹಿಟ್ಟು(ಇಟ್ಟು) ಶವನನ್ನು (ಶಿವನಿಗೆ) ಹಿಟ್ಟಿತ್ತಾ…… ಅನೇಕ ಪುಷ್ಪಗಳನ್ನು ಇಡುತ್ತಾ ಎಂದಾಗಬೇಕಿತ್ತು… ಇದು ಟೆಸ್ಟ್ ಪೇಪರಿನ ಮಾದರಿ ಅಷ್ಟೇ… ಇನ್ನೂ ತಮಾಷೆ ಎಂದರೆ ನಮ್ಮ ಮಕ್ಕಳಿಗೆ ಟೆಸ್ಟ್ ಎಂದು ಸರಿಯಾಗಿ ಬರೆಯಲು ಬಾರದೆ ಟೇಸ್ಟ್ ಎಂದು ಬರೆಯುತ್ತಾರೆ. ಹೋಗಲಿ ಇಂಗ್ಲಿಷ್ ಪದ ತಿಳಿಯದು ಕನ್ನಡದ ಪದವನ್ನಾದರೂ ಬರೆಯುತ್ತಾರ ಎಂದರೆ ಅದನ್ನೂ ಕೀರು ಪರಿಕ್ಷೆ ಎಂದು ಬರೆಯುತ್ತಾರೆ.
ಇಲ್ಲಿ ಒಂದಷ್ಟು ಸರಿ ಪದಗಳನ್ನು ಜೊತೆಗೆ ಅವುಗಳನ್ನು ಹೇಗೆ ತಪ್ಪು ಬರೆಯುತ್ತಾರೆ ಎಂಬ ಪಟ್ಟಿಯನ್ನು ನೀಡುತ್ತಿದ್ದೇನೆ. ಭಗವಂತ’ ಬರೆಯಲು ‘ಬೆಗ್‌ವಂತ’ ಎಂದು ಬರೆಯುತ್ತಾರೆ. ವಾಮನ (ಕಾವ್ಯ ಮೀಮಾಂಸಕರಲ್ಲಿ ಒಬ್ಬ) ಬರೆಯಲು ವಮನ (ವಾಂತಿ) ಎಂದು ಬರೆಯುತ್ತಾರೆ. ದೂರಾಲೋಚನೆಗೆ >ದುರಾಲೋಚನೆ ಎಂದು ಬರೆಯುತ್ತಾರೆ. ಮಳೆ ಧಾರಕಾರವಾಗಿ ಬರುತ್ತಿದೆ ಎಂದು ಬರೆಯಲು ದಾರಾಕಾರ (ದಾರದ ಆಕಾರ) ಬರುತ್ತಿದೆ ಎಂದು ಬರೆದು ನಮ್ಮ ಕಾರಣದಿಂದಲೇ ಹಾಳಾಗಿರುವ ಪ್ರಕೃತಿ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ ಎನಿಸುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಹೇಳಿ ಕೇಳಿ ಬರೆಯುವವರ ಸಂಖ್ಯೆ ಹೆಚ್ಚು. ಒಮ್ಮೆ ವಿಶ್ವಾಮಿತ್ರರ ಹೆಂಡತಿ ಹೆಸರು ಏನೆಂದು ಕೇಳಲಾಗಿತ್ತು. ಅದಕ್ಕಂತೂ ಆ ಕೊಠಡಿಯಲ್ಲಿದ್ದ ಶೇಖಡಾ 90 ರಷ್ಟು ವಿದ್ಯಾರ್ಥಿಗಳು ಉತ್ತರ ಬರೆದಿದ್ದರು ಆದರೆ ಕೆಲವು ಪತ್ರಿಕೆಗಳಲ್ಲಿ ‘ಮೇನಕಾ’ ಏಂದಿದ್ದರೆ ಕೆಲವು ಪತ್ರಿಕೆಗಳಲ್ಲಿ ‘ಏನಕ್ಕಾ’ ಎಂದಾಗಿತ್ತು. ಕೈ ತಪ್ಪಲ್ಲ ಅದು ಕಿವಿ ತಪ್ಪು ಎಂದುಕೊಂಡೆ. ಇನ್ನೊಮ್ಮೆ ಸೂಕ್ಷ್ಮ ಎಂದು ಬರೆಯಲು ಸುಷ್ಮ ಎಂಬ ಗೆಳತಿಯನ್ನು ಬರೆದಹಾಗಿತ್ತು. ಚಂದ್ರಮತಿಯ ಪ್ರಲಾಪದಲ್ಲಿ ಲೋಹಿತಾಶ್ವನನ್ನು ಆಕೆ “ದೆಸೆ ದೆಸೆಗೆ ಬಾಯಿಬಿಟ್ಟು ಮಗನನನ್ನು ಕರೆಕರೆದು ಅತ್ತಳು” ಎಂದು ಬರೆಯಲು ಕೆರೆಕರೆದು ಅತ್ತಳು ಎಂದು ಬರೆದಿದ್ದರು. ಇಲ್ಲಿ ಕಾಗುಣಿತದೋಷ ಆಗಿದೆ ಸರಿ; ಆದರೆ ಬರೆಯುವಾಗ ಮನಸ್ಸು ಬುದ್ದಿ ಒಟ್ಟಿಗೆ ಇರುವುದಿಲ್ಲ ಎಂಬ ತೀರ್ಮಾನಕ್ಕೆ ಬರಬೇಕಷ್ಟೆ. ಇನ್ನು ಅ>ಹ, ಶ>ಷ, ಲ>ಳ ಗಳ ಬಳಕೆಯಂತೂ ಅಯೋಮಯವೆ ಬಿಡಿ.
ಅರಸು ಪದಕ್ಕೆ ನಾನಾರ್ಥ ಬರೆಯಿರಿ ಎಂದದ್ದಕ್ಕೆ ರಾಜ ಎಂದು ಬರೆದಿದ್ದರು. ಆದರೆ ಕ್ರಿಯಾಪದದ ಅರ್ಥ ಬರೆಯುವಾಗ ಆಶೀರ್ವದಿಸು ಎಂದು ಬರೆದಿದ್ದರು. ‘ಆರು’ ಎಂಬುದಕ್ಕೆ ನಾಮಪದದಲ್ಲಿ ಒಂದು ಸಂಖ್ಯೆ ಎಂದೂ ಕ್ರಿಯಾಪದದಲ್ಲಿ ತಣ್ಣಗಾಗು ಎಂದು ಗ್ರಹಿಸುವುದರ ಬದಲು ಹಾರು ಎಂದು ಗ್ರಹಿಸಿರುತ್ತಾರೆ. ಅಕ್ಕಿ>ಆರಿಸು ಹಕ್ಕಿ>ಹಾರಿಸು. ಅರಿ ಎಂದರೆ ಶತ್ರುವನ್ನು ಏಕೆ ಕರೆಯಬೇಕು ಎಂತಲೋ ಏನೋ ಹರಿಯನ್ನು ಅರ್ಥಾತ್ ವಿಷ್ಣುವನ್ನು ಕರೆದುಬಿಡುವರು. ಕಳಿತ ಹಣ್ಣು ಕೊಳೆತಹಣ್ಣಾಗುವುದು, ಕೊಳೆ>ಕೊಲೆಯಾಗುವುದು ಹೊಸದಲ್ಲ. ಇನ್ನು ರಾಗ ಪದಕ್ಕೆ ಆಡು ಎಂದರೆ ಎಂಥ ಆಭಾಸ ಹಾಡಿಗೂ ಆಡಿಗೂ ಅಜಗಜಾಂತರ ವ್ಯತ್ಯಾಸವಿದೆಯಲ್ಲಾ… ಅಜ ಎಂಬುದಕ್ಕೆ ಆಡು ಎಂಬರ್ಥವಿದೆ. ಹಾಡು ಎಂದರೆ ರಾಗದ ಆಲಾಪವಲ್ಲವೆ “ಆಡು ಆಟ ಆಡು ಆಡು ಆಡು ಪದವಾಟ ಆಡು” ಎಂಬುದಕ್ಕೆ ಈ ವಿದ್ಯಾರ್ಥಿಗಳೆ ಸ್ಫೂರ್ತಿ. ಧುರ ಅಂದರೆ ಯುದ್ಧ ಅದರ ಬದಲು ದೂರ ಹೋಗುತ್ತಿರುವೆ ಎಂದು ಅರ್ಥವನ್ನು ವಾಕ್ಯ ಮುಖೇನ ಬರೆದು, ನಾಗಚಂದ್ರನನ್ನು ನಗಚಂದ್ರನ್ನನ್ನಾಗಿಸಿ, ರಾಮಚಂದ್ರನನ್ನು ರಮಾಚಂದ್ರನನ್ನಾಗಿಸಿ ಸಪ್ತಮಿ ವಿಭಕ್ತಿಯನ್ನು ಸಸ್ತನಿವಿಭಕ್ತಿಯನ್ನಾಗಿಸಿರುತ್ತಾರೆ. ಅವ್ವನ ಬಳಿ ಎಂದು ಬರೆಯಲು ಅವನ ಬಲಿ ಎಂದು ಬರೆದು ಮೊತ್ತಮೊದಲನ್ನು ಮತ ಮೊದಲು ಎಂದಾಗಿಸಿ ತಮಗೆ ಗೊತ್ತಿಲ್ಲದೆಯೇ ವಾಸ್ತವದ ಪರಿಪ್ರೇಕ್ಷಗಳಿಗೆ ಅಭಿಮುಖವಾಗಿರುತ್ತಾರೆ. ಕಾಂತಾರ ಪದಕ್ಕೆ ಕಾಡು ಎಂದು ಬರೆಯುವ ಬದಲು ಕಾಂತಾರ ಓದು ದಂತಕತೆ ಎಂದು ಬರೆದ ಉತ್ತರ ನೋಡಿದ ನನಗೆ ತಪ್ಪು ಉತ್ತರ ಬರೆದರೂ ಕಾಂತಾರ ಒಂದು ದಂತಕಥೆ ಎಂದೋ ಇಲ್ಲವೆ ಕಾಂತಾರ ಒಂದು ನೋಡು ದಂತಕಥೆ ಎಂದಾದರೂ ಬರೆಯಬಾರದಿತ್ತ…? ಎನ್ನಿಸಿತು.
ಪರೀಕ್ಷೆಗಳಲ್ಲಿ ಹೀಗೆಲ್ಲಾ ಸಾಮಾನ್ಯವೆ ದಿನಸಿ-ತರಕಾರಿ -ಹಣ್ಣಿನಚೀಟಿ ಬರೆಯುವಲ್ಲಿಯೂ ಬೆಲೆ, ಊದಿನಬೆಲೆ, ಉರಿಕಡಲೆ, ಎಸರುಕಾಲು, ಅರಳುಉಪ್ಪು, ಬಾಲೆಅಣ್ಣು, ಕಡಳೆಪಾಪು, ಅಗಲಕಾಯಿ, ತಿಗನಕಾಯಿ, ಕಹಿಬೇವು ಸೋಪು, ಕೊತಬರಿ ಸೋಪು, ಣಿಬೆಅಣ್ಣು, ಉನಸೆಅಣ್ಣು…………. ಇತ್ಯಾದಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. (ಬೇಳೆ, ಉದ್ದಿನಬೇಳೆ, ಹುರಿಕಡಲೆ, ಹೆಸರುಕಾಳು, ಹರಳುಉಪ್ಪು, ಬಾಳೆಹಣ್ಣು, ಕಡಲೆಪಪ್ಪು ಹಾಗಲಕಾಯಿ, ತೆಂಗಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು, ಹುಣಸೆಹಣ್ಣು)
ಇಂದಿನ ವಿದ್ಯಾರ್ಥಿಗಳು ಯಾವುದನ್ನೂ ಬರೆದು ಕಲಿಯಲು ಹೋಗದೆ ಕೇವಲ ಬಾಯಿಪಾಠಮಾಡುತ್ತಾರೆ. ಬರೆದು ಅಭ್ಯಾಸವೇ ಮಾಡದೆ ಪರೀಕ್ಷೆಯಲ್ಲಿ ಸಮಯ ಸಾಕಾಗಲ್ಲ ಎಂಬ ಸಾರ್ವಕಾಲಿಕ ದೂರನ್ನು ಒಕ್ಕೊರಲಿನಿಂದ ಹೇಳುತ್ತಾರೆ. ಪೂರ್ವಾಭ್ಯಾಸವಿಲ್ಲದೆ ನೇರವಾಗಿ ಪರೀಕ್ಷೆಯಲ್ಲಿ ಬರೆಯತೊಡಗಿದರೆ ಇನ್ನೇನಾಗುತ್ತದೆ……? ಹೀಗೆ… ಒಂದಷ್ಟು ತಪ್ಪುಗಳಾಗುತ್ತವೆ ಉದಾಹರಣೆಗೆಂದು. ಇಲ್ಲಿ ಒಂದಷ್ಟು ಸರಿ ಪದಗಳನ್ನು ಜೊತೆಗೆ ಅವುಗಳನ್ನು ಹೇಗೆ ತಪ್ಪು ಬರೆಯುತ್ತಾರೆ ಎಂಬ ಪಟ್ಟಿಯನ್ನು ನೀಡುತ್ತಿದ್ದೇನೆ.
ಅಲ್ಲಿದ್ದವರು>ಅಳಿದವರು, ಅಭಿನವ>ಅಭಿನಯ, ಅವಮಾನ>ಹವಮಾನ, ಅನುಮಾನ>ಹನುಮಾನ, ಅನುಯಾಯಿ>ಅನುನಾಯಿ, ಅಧ್ಯಕ್ಷ>ಅದಕ್ಷ, ಆರೋಗ್ಯ>ಅಯೋಗ್ಯ, ಅಯ್ಯೋ ನಿಜ>ಅಯೋನಿಜ, ಅಲೆ>ಅಳೆ, ಆಸ್ಪತ್ರೆ>ಅಪ್ಪಸತ್ರೆ, ಆಗಲಿ>ಅಗಳಿ, ಅಲ್ಲಿ>ಹಲ್ಲಿ, ಆವು>ಹಾವು, ಆದರ>ಹಾದರ, ಇಲ್ಲಿ>ಇಲಿ, ಇತಿಹಾಸ>ಹಿತಿಹಾಸ, ಎದೆ>ಹೆದೆ, ಓಲೆ>ಒಲೆ, ಕದಡು>ಕಾದಾಡು, ಕಡುಪಾಪ>ಕಾಡುಪಾಪ, ಕಾಲಿಗೆ>ಕಾಳಿಗೆ, ಕಳಿತ>ಕೊಳೆತ, ಕುಂತಿ>ಕುಂಟಿ, ಕೈಮುಗಿ>ಕೈಮುರಿ, ಕೊಳೆ>ಕೊಲೆ, ಕೋಟಿ>ಕೋತಿ, ಖಚರ>ಖಚಡ, ಗದ್ದೆ>ಗೆದ್ದೆ, ಜಗ>ಜಾಗ, ಜಾಮೀನು>ಜಾಮೂನು, ಜಾಗ್ರತೆ>ಜಾತ್ರೆಗೆ, ತಪ್ಪು>ತುಪ್ಪ, ದುಃಖಿತನಾಗುತ್ತಾನೆ>ದುಃಖಿತ ನಗುತ್ತಾನೆ, ದಾನ>ದನ, ಧೀಮಂತ>ದಿವಂಗತ, ನಲಿ>ನುಲಿ, ನಾರಿ>ನರಿ, ನಲ್ಲಿ>ನಳ್ಳಿ, ಬಲೆ>ಬಳೆ, ಬಾಲೆ>ಬಾಳೆ, ಬಹುಜನ>ಭೋಜನ, ಭಕ್ತಿ>ಬತ್ತಿ, ಬಿಡಿ>ಬೀಡಿ, ಭರಿತ>ಬೆರೆತ, ಮಾನವ>ಮಾವನ, ಮುಂದಿನ>ಮುದಿಯ, ಮೆಲು>ಮೇಲು, ಮೊರೆ>ಮರೆ, ಮೆಲ್ಲುತ್ತಿದ್ದನು>ಮೇಯುತ್ತಿದ್ದನು, ಮುಸುಕು> ಮಸುಕು, ಯಜಮಾನ>ಯಮಾನ, ರಮಣ>ರಾವಣ, ಶೀತ>ಸೀತ, ಹುಲ್ಲು>ಹಲ್ಲು, ಹಕ್ಕಿ>ಅಕ್ಕಿ, ಹೋಗೇಬಿಟ್ಟರು>ಹೊಗೆಬಿಟ್ಟರು, ಹುಳಿ>ಉಳಿ, ಸರಿ>ನರಿ, ಸ್ವಾಗತಿಸಿದ>ಸ್ವ ಗತಿಸಿದ, ಸೂಕ್ಷ್ಮ>ಸುಷ್ಮ, ಹೀಗೆ……….
ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್‌ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು… ಹೀಗೆ ಒಂದೇ ಎರಡೇ…… ಸಂದೇಶಾವಾಂತರಗಳು! ಮೊಬೈಲ್ ಬಳಕೆ ಹೆಚ್ಚಾಗಿ ಹೀಗಾಯಿತು ಎನ್ನಬಹುದು. ಹೀಗೆ ಅವಲೋಕನ ಮಾಡುತ್ತಾ ಹೋದಲ್ಲಿ ಶಶಿ ಸೋಪು ಇದ್ದಲ್ಲಿ ಕೊಳೆಯ ಮಾತೆಲ್ಲಿ ಎಂಬ ಡೈಲಾಗ್ ಸಸಿ…… ಸೊಪ್ಪು…. ಇದ್ದಲ್ಲಿ ಕೊಲೆಯ ಮಾತೆಲ್ಲಿ ಎಂದೇ ಆಗುವುದು!
ವಿದ್ಯಾರ್ಥಿಗಳು ಯಾಕೆ ಹೀಗೆ ಎಂದರೆ ಪೋಷಕರ ಇಂಗ್ಲಿಷ್ ವ್ಯಾಮೋಹ, ಕನ್ನಡ ಕಷ್ಟ ಎಂಬ ಮನೋಭಾವವನ್ನು ಮೊದಲೆ ತರಿಸುವುದು, ಮೊದಲಿನಂತೆ ಪಠ್ಯಗಳು ಇಲ್ಲದೆ ಇರುವುದು, ಪರೀಕ್ಷೆಯಲ್ಲಿ ಬರವಣಿಗಾ ಕೌಶಲ್ಯ ಬಯಸುವ ಪ್ರಶ್ನೆಗಳು ಕಡಿಮೆಯಾಗಿರುವುದು. ಶಾಲೆಯಲ್ಲಿ ಮಾತೃಭಾಷೆ ಕಲಿಕೆಗೆ ಇತರ ವಿಷಯಗಳಿಗೆ ಕೊಡುವಷ್ಟು ಪ್ರಾಮುಖ್ಯತೆ ಕೊಡದೆ ಇರುವುದು. ಭಾಷಾ ಶಿಕ್ಷಕರು ಕನ್ನಡವನ್ನು ಅನ್ಯಭಾಷೆಯಲ್ಲಿ ಕಲಿಸ ಹೊರಟಿರುವುದು. ಕಾಗುಣಿತವನ್ನು ಒತ್ತು, ಇಳಿ, ಗುಣಿಸು, ದೀರ್ಘ, ಏತ್ವ, ಓತ್ವ, ಐತ್ವ ಇವುಗಳ ಸಹಿತ ಹೇಳಿ ಕೊಡುವುದರ ಬದಲು ಕಕಾ. ಕಿಕೀ ಎಂದು ಹೇಳಿಕೊಡುತ್ತಿರುವುದು.. ಮೇಲಾಗಿ ಕನ್ನಡ ಭಾಷಾ ಶಿಕ್ಷಕರು ಅವಜ್ಞೆಗೆ ಗುರಿಯಾಗಿರುವುದು. ಇವುಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸಿದರೆ ನಮ್ಮ ಮಕ್ಕಳ ಬರವಣಿಗೆಯಲ್ಲೂ ತಪ್ಪುಗಳು ಬಾರವು. ಆರಾಧಿಸುವೆ ಪದನಾರಿ ಎಂಬುದೆ ಬಹುವಾಗಿ ಕಾಡುತ್ತಿದೆ.. ಇದೇ ಶೀರ್ಷಿಕೆಯಲ್ಲಿ ಮುಂದಿನ ಕಂತು……
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.