ನೆದರ್‌ಲ್ಯಾಂಡ್ಸ್ ಯುರೋಪಿನ ಭಾಗ. ಇಂಗ್ಲೆಂಡಿಗೆ ಹತ್ತಿರ. ರೈಲಿನಲ್ಲಿ ಕೂಡ ಕೇವಲ ನಾಲ್ಕು ಘಂಟೆಗಳ ಪ್ರಯಾಣ. ಯುರೋಪಿನಲ್ಲಿ ಬಹು ಭಾಷಾ ಸಂಸ್ಕೃತಿ ಇದೆ. ಬಹುಪಾಲು ಯುರೋಪಿಯನ್ನರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸುತ್ತಾರೆ, ಅಥವಾ ಬಳಸಲು ಬಲ್ಲರು. ಆದರೂ ಕೆಲ ದೇಶಗಳಲ್ಲಿ ಪ್ರವಾಸಿಗಳ ಜೊತೆ, ಅದರಲ್ಲೂ ಶ್ವೇತವರ್ಣೀಯರಲ್ಲದವರ ಜೊತೆ ತಮ್ಮ ಮಾತೃ ಭಾಷೆಯಲ್ಲೇ ಮಾತನಾಡುವ ಹಠ ಹಿಡಿಯುತ್ತಾರೆ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ನಿಮ್ಮನ್ನು ಅವರ ಭಾಷಾ ಬಳಕೆ ಮತ್ತು ಧೋರಣೆಯಿಂದ ಉದ್ದೇಶಪೂರ್ವಕವಾಗಿಯೇ ಹಿಂಸಿಸುತ್ತಾರೆ. ತೊಂದರೆಗೆ, ಮುಜುಗರಕ್ಕೆ ಸಿಕ್ಕಿಸುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ನಾಲ್ಕನೆಯ ಬರಹ

ಮಕ್ಕಳು ಕಲಿಯುವ ರೀತಿ, ಅವರಿಗೆ ಕಲಿಸುವ ರೀತಿ, ಭಾಷೆಗೆ ಸಂಬಂಧಪಟ್ಟಂತೆ ಸಮಾಜದ, ಪೋಷಕರ, ಆಡಳಿತಗಾರರ ನಿಲುವು, ಈ ಆಯಾಮಗಳನ್ನು ನಾನು ಪ್ರವಾಸ ಹೋದ ಕಡೆಯೆಲ್ಲ ಗಮನಿಸುತ್ತಿರುತ್ತೇನೆ. ಸಾಧ್ಯವಾದಾಗ ಸಂಬಂಧಪಟ್ಟವರೊಡನೆ ಮಾತು ಕತೆ ಕೂಡ ನಡೆಸುತ್ತೇನೆ. ವಿದೇಶಿ ಪ್ರವಾಸದ ಸಂದರ್ಭದಲ್ಲಿ ಮಾತ್ರವಲ್ಲ, ಭಾರತದೊಳಗೆ ಬೇರೆ ಬೇರೆ ರಾಜ್ಯಗಳಲ್ಲಿ ಪ್ರವಾಸ ಮಾಡುವಾಗಲೂ ಈ ವಲಯದ ಬಗ್ಗೆ ನನ್ನ ಗಮನವಿದ್ದೇ ಇರುತ್ತದೆ. ನನಗನಿಸುವ ಹಾಗೆ ಭಾರತೀಯರ ನಿಲುವು, ಮನೋಧರ್ಮದಲ್ಲಿ ಪ್ರಾಮಾಣಿಕತೆ, ಹೃತ್ಪೂರ್ವಕತೆ ಕಡಿಮೆ. ಯಾವುದು ತಮ್ಮ ಮಕ್ಕಳಿಗೆ, ತಮ್ಮ ಕುಟುಂಬಕ್ಕೆ, ಜಾತಿ-ವರ್ಗಕ್ಕೆ ತಕ್ಷಣಕ್ಕೆ ಅನುಕೂಲವಾಗುವುದೋ ಆ ನಿಲುವಿನ ಪರವಾಗಿಯೇ ಯೋಚಿಸುತ್ತಾರೆ, ವಾದ ಮಾಡುತ್ತಾರೆ, ಸುಳ್ಳುಗಳನ್ನು ಕೂಡ ಹೇಳುತ್ತಾರೆ. ಹೀಗೆ ಸ್ವಾರ್ಥಮಯವಾಗಿ ಯೋಚಿಸುವಾಗಲೂ ದೂರದೃಷ್ಟಿ ಇರುವುದಿಲ್ಲ. ಈ ಕ್ಷಣಕ್ಕೆ, ಈವತ್ತಿಗೆ ಏನು ಅನುಕೂಲಕರ ಎಂಬುದರ ಬಗ್ಗೆ ಮಾತ್ರ ಗಮನವಿರುತ್ತದೆ. ನಾಳೆ, ನಾಳಿದ್ದಿನ ಬಗ್ಗೆ ಕೂಡ ಚಿಂತೆ ಇಲ್ಲ. ರಾಜಕಾರಣಿಗಳು, ಆಡಳಿತಗಾರರು, ಶಾಲಾ ಮ್ಯಾನೇಜ್‌ಮೆಂಟ್‌ನವರು ಈ ಗೊಂದಲ, ಅಪ್ರಾಮಾಣಿಕತೆಯ ಲಾಭವನ್ನು ಪಡೆದುಕೊಳ್ಳುತ್ತಾರೆ.

ನೆದರ್‌ಲ್ಯಾಂಡ್ಸ್ ಯುರೋಪಿನ ಭಾಗ. ಇಂಗ್ಲೆಂಡಿಗೆ ಹತ್ತಿರ. ರೈಲಿನಲ್ಲಿ ಕೂಡ ಕೇವಲ ನಾಲ್ಕು ಘಂಟೆಗಳ ಪ್ರಯಾಣ. ಯುರೋಪಿನಲ್ಲಿ ಬಹು ಭಾಷಾ ಸಂಸ್ಕೃತಿ ಇದೆ. ಬಹುಪಾಲು ಯುರೋಪಿಯನ್ನರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸುತ್ತಾರೆ, ಅಥವಾ ಬಳಸಲು ಬಲ್ಲರು. ಆದರೂ ಕೆಲ ದೇಶಗಳಲ್ಲಿ ಪ್ರವಾಸಿಗಳ ಜೊತೆ, ಅದರಲ್ಲೂ ಶ್ವೇತವರ್ಣೀಯರಲ್ಲದವರ ಜೊತೆ ತಮ್ಮ ಮಾತೃ ಭಾಷೆಯಲ್ಲೇ ಮಾತನಾಡುವ ಹಠ ಹಿಡಿಯುತ್ತಾರೆ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ನಿಮ್ಮನ್ನು ಅವರ ಭಾಷಾ ಬಳಕೆ ಮತ್ತು ಧೋರಣೆಯಿಂದ ಉದ್ದೇಶಪೂರ್ವಕವಾಗಿಯೇ ಹಿಂಸಿಸುತ್ತಾರೆ. ತೊಂದರೆಗೆ, ಮುಜುಗರಕ್ಕೆ ಸಿಕ್ಕಿಸುತ್ತಾರೆ. ಹಾಗೆ ನೋಡಿದರೆ ಪ್ಯಾರಿಸ್, ಐತಿಹಾಸಿಕ ಜಗತ್‌ಪ್ರಸಿದ್ಧ ಕೇಂದ್ರ. ಅನ್ಯ ಭಾಷಿಕರನ್ನು ವ್ಯಾಪಾರ, ಪ್ರವಾಸೋದ್ಯಮದ ಕಾರಣಗಳಿಗಾಗಿ ಸಹಿಸಬಹುದು. ಇಲ್ಲವೇ ಇಲ್ಲ. ಇಂಗ್ಲಿಷ್‌ನಲ್ಲಿ ಮಾತನಾಡ ಹೊರಟರೆ, ನಿಮ್ಮೊಡನೆ ಮಾತನಾಡುವುದೇ ಇಲ್ಲ. ಆ ಕಡೆ ಮುಖ ತಿರುಗಿಸುತ್ತಾರೆ.

ಯುರೋಪಿನ ಬೇರೆ ಬೇರೆ ಭಾಗಗಳಲ್ಲಿ ಪ್ರವಾಸ ಮಾಡುವಾಗ ಇನ್ನೊಂದು ಅಂಶ ನಮ್ಮ ಗಮನಕ್ಕೆ ಬಂದು ಮನಸ್ಸಿಗೆ ನೋವಾಗುತ್ತದೆ. ಅಂತರರಾಷ್ಟ್ರೀಯ ಭಾಷೆಗಳೆಂದು ಪ್ರತಿಷ್ಠಿತವಾಗಿರುವ ಫ್ರೆಂಚ್, ಜರ್ಮನ್, ರಷ್ಯನ್, ಇಟಾಲಿಯನ್ ಭಾಷೆಗಳಿಗಿಂತ ನಮ್ಮ ಹಿಂದಿ, ತೆಲುಗು, ಬಂಗಾಳಿ, ಕನ್ನಡ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೂ ನಮ್ಮ ಭಾಷೆಗಳು ಅಂತರರಾಷ್ಟ್ರೀಯವಲ್ಲ. ಭಾರತದಲ್ಲಿ ಕೂಡ ಇವು ಸಂಪರ್ಕ ಭಾಷೆಗಳಲ್ಲ.

16 ದಶಲಕ್ಷ ಜನಸಂಖ್ಯೆ ಇರುವ ನೆದರ್‌ಲ್ಯಾಂಡ್ಸ್‌ನಲ್ಲಿ ಡಚ್ ಭಾಷೆ ಗೊತ್ತಿಲ್ಲದವರೇ ಸುಮಾರು ಎರಡೂವರೆ ದಶಲಕ್ಷ ಜನರಿದ್ದಾರೆ. ಶೇಕಡ 91ರಿಂದ 93 ಜನಕ್ಕೆ ಇಂಗ್ಲಿಷ್ ಭಾಷೆ ಚೆನ್ನಾಗಿ ಬರುತ್ತದೆ. ಪೇಟೆ ಬೀದಿಯಲ್ಲಿ, ಹೋಟೆಲಿನಲ್ಲಿ, ರೈಲು ನಿಲ್ದಾಣದಲ್ಲಿ ನಿಮ್ಮನ್ನು ಯಾರಾದರೂ ಡಚ್ ಭಾಷೆಯಲ್ಲಿ ಮಾತನಾಡಿಸಲು ಶುರು ಮಾಡಿದ ತಕ್ಷಣ ನೀವು “ಇಂಗ್ಲಿಷ್” ಎಂದು ಉಸುರಿದರೆ, ನಂತರ ಎಲ್ಲ ಸಂಭಾಷಣೆಯೂ ಇಂಗ್ಲಿಷ್‌ನಲ್ಲೇ ನಡೆಯುತ್ತದೆ. ಸರ್ಕಾರ ಕೂಡ ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸಿದೆ.

ಇಂಗ್ಲೆಂಡಿಗೆ ಸಮೀಪದಲ್ಲಿರುವುದು, ಅಂತರರಾಷ್ಟ್ರೀಯ ವ್ಯಾಪಾರ, ಹಣಕಾಸು ವಲಯಗಳಿಂದ ದೇಶದ ಬಹುಭಾಗದ ಆದಾಯ ಬರುವುದು, ಚಾರಿತ್ರಿಕವಾಗಿ ಕೂಡ ಬೇರೆ ಬೇರೆ ಭಾಷೆಗಳಿಗೆ ತೆರೆದುಕೊಳ್ಳುವ ಮುಕ್ತ ಮನೋಭಾವ ಇವುಗಳಿಂದಾಗಿ ಇಂಗ್ಲಿಷ್ ಇಲ್ಲಿ ಮೊದಲಿನಿಂದಲೂ ಬಳಕೆಯಲ್ಲಿದೆ. ಕಳೆದ ಮೂರು ದಶಕಗಳಲ್ಲಿ ಜಾಗತೀಕರಣದ ವಿದ್ಯಮಾನ, ಈ ಪ್ರಕ್ರಿಯೆಯನ್ನು ಇನ್ನೂ ಚುರುಕಾಗಿಸಿದೆ. ಇಲ್ಲಿ ಇಂಗ್ಲಿಷ್ ಬಳಕೆ ಚೆನ್ನಾಗಿದೆ ಎಂಬ ಕಾರಣಕ್ಕೇ ಕೆಲವು ಬಹು ರಾಷ್ಟ್ರೀಯ ಕಂಪನಿಗಳು ತಮ್ಮ ಕಛೇರಿಗಳನ್ನು ತೆರೆಯುತ್ತಾರೆ. ವಲಸಿಗರಿಗಂತೂ ಇದೇ ದೊಡ್ಡ ಆಕರ್ಷಣೆ. ಆಮ್‌ಸ್ಟರ್‌ಡ್ಯಾಂನ ಜಗತ್‌ಪ್ರಸಿದ್ಧ ಸ್ಕಿಪೋಲ್ ವಿಮಾನ ನಿಲ್ದಾಣದಲ್ಲಿ ಇಂಗ್ಲಿಷ್ ಮಾತ್ರವೇ ಬಳಸುತ್ತಾರೆ. ವಲಸಿಗರ/ಪ್ರವಾಸಿಗರ ಮಳಿಗೆ, ಕಛೇರಿಗಳಲ್ಲಿ ವ್ಯವಹಾರ, ಪ್ರವಾಸಿಗಳ ಚುಡಾಯಿಸುವಿಕೆಯೆಲ್ಲ ಇಂಗ್ಲೀಷ್‌ನಲ್ಲೇ ನಡೆಯುತ್ತದೆ.

ತೀರಾ ಈಚೆಗೆ ತಾನೇ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬಂದದ್ದು. ಇದಕ್ಕಿಂತ ಮುಂಚೆ ಇಂಗ್ಲಿಷ್, ಯುರೋಪಿಯನ್ ಒಕ್ಕೂಟದ ಅಧಿಕೃತ ಭಾಷೆಯಾಗಿತ್ತು, ಆಡಳಿತ ಭಾಷೆಯಾಗಿತ್ತು. ಇದು ಕೂಡ ಇಂಗ್ಲಿಷ್‌ನ ಹೆಚ್ಚು ಬಳಕೆಗೆ ಕಾರಣ. ಒಕ್ಕೂಟದ ಕೇಂದ್ರ ಆಡಳಿತ ಕಛೇರಿ ಇದ್ದದ್ದೇ ನೆದರ್‌ಲ್ಯಾಂಡ್ಸ್ ಪಕ್ಕದ ಬ್ರಸೆಲ್ಸ್‌ನಲ್ಲಿ. ಹೀಗಾಗಿ ಇಂಗ್ಲಿಷ್ ಅನ್ನು ಉಳಿದ ಯುರೋಪಿಯನ್ ಭಾಷೆಗಳ ಜೊತೆ ಒಂದಾಗಿ ಪರಿಗಣಿಸುತ್ತಾರೆ. ಹಾಗೆಯೇ ಕಲಿಯುತ್ತಾರೆ, ಕಲಿಸುತ್ತಾರೆ.

ಶಿಕ್ಷಣ, ಉದ್ಯೋಗ, ಸಂಶೋಧನಾ ಕ್ಷೇತ್ರಗಳಲ್ಲಿ ಡಚ್ ಭಾಷೆಗೆ ಪ್ರಮುಖ ಸ್ಥಾನವಿದೆ, ಅಗ್ರಸ್ಥಾನವಿದೆ. ಸ್ನಾತಕೋತ್ತರ ಪದವಿ, ಸಂಶೋಧನೆಯ ವಲಯದಲ್ಲೂ ನೀವು ಡಚ್ ಭಾಷೆಯನ್ನು ಬಳಸಬಹುದು. ಡಚ್ ಮನೆ ಮಾತಾಗಿ, ಸಾಹಿತ್ಯಿಕ, ಸಾಂಸ್ಕೃತಿಕ ಭಾಷೆಯಾಗಿ ಮಾತ್ರವಲ್ಲ, ವ್ಯಾವಹಾರಿಕ, ವಾಣಿಜ್ಯ ಭಾಷೆಯಾಗಿ, ಜ್ಞಾನ-ಸಂಶೋಧನೆಯ ಭಾಷೆಯಾಗಿಯೂ ಇತರ ಯುರೋಪಿಯನ್ ಭಾಷೆಗಳಿಗೆ ಸಮಾನವಾಗಿ ಬೆಳೆದಿದೆ. ಬೇರೆ ದೇಶಗಳನ್ನು ವಸಾಹತಾಗಿ ಹೊಂದಿದ್ದರಿಂದಲೂ ಈ ದೃಷ್ಟಿಯಿಂದ ಅನುಕೂಲವಾಗಿದೆ. ವಸಾಹತುಗಳನ್ನು ಆಳುವ ಅಗತ್ಯಕ್ಕಾಗಿ ಕೂಡ ಡಚ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಸಮಾನವಾಗಿ ಬಳಸುತ್ತಲೇ ಬಂದಿದ್ದಾರೆ.

ಭಾರತದಲ್ಲಿ ನಮ್ಮ ಕೈಗಾರಿಕಾ, ವಣಿಕ ವಲಯ ಈ ಬಗ್ಗೆ ಸಂಪೂರ್ಣ ಉದಾಸೀನ ತಾಳಿದೆ. ಸರ್ಕಾರಕ್ಕಿಂತ ಹೆಚ್ಚಾಗಿ ಉದ್ಯಮಪತಿಗಳೇ ಹೆಚ್ಚಾಗಿ ಬೇರೆ ದೇಶಗಳ ಆರ್ಥಿಕ, ಕೈಗಾರಿಕಾ ನಾಯಕರೊಡನೆ ವ್ಯವಹರಿಸುತ್ತಾರೆ. ದಿನನಿತ್ಯದ ವ್ಯವಹಾರ, ಕೊಡು ಕೊಳ್ಳುವಿಕೆಯೂ ಇರುತ್ತದೆ. ಈ ವಲಯದವರು ಯಾವ ಭಾಷೆಯಲ್ಲಿ ವ್ಯವಹಾರ ಮಾಡಲು ಇಷ್ಟಪಡುತ್ತಾರೋ ಆ ಭಾಷೆಗೆ ಗೌರವ ಬರುತ್ತದೆ, ಕಿಮ್ಮತ್ತು ಇರುತ್ತದೆ. ಸಹಜವಾಗಿ, ಸಕಾರಣವಾಗಿ ಹೊರ ದೇಶಗಳವರಿಗೆ ನಮ್ಮ ಭಾಷೆಗಳ ಪರಿಚಯವಾಗುತ್ತದೆ. ಅದರ ಬಗ್ಗೆ ಗೌರವ ಮೂಡುತ್ತದೆ. ಇದನ್ನೆಲ್ಲ ಮಾಡುವುದು ಸುಲಭ ಕೂಡ. ಕಳೆದ ಮೂರು-ನಾಲ್ಕು ದಶಕಗಳಲ್ಲಿ ಹೀಗೆ ಮಾಡಿದ್ದರೂ, ನಮ್ಮ ಭಾಷೆಗೆ ಒಳ್ಳೆಯ ಪ್ರಚಾರ, ಗೌರವ ಸಿಗುತ್ತಿತ್ತು. ಜಗತ್ತಿನ ವಾಣಿಜ್ಯ, ಕೈಗಾರಿಕಾ ವಲಯದಲ್ಲಿ ಅಗ್ರಸ್ಥಾನ ಪಡೆದಿರುವ ಉದ್ಯಮಿಗಳು ಬೆಂಗಳೂರಿನಲ್ಲೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಯಾರೊಬ್ಬರೂ ಈ ನೆಲೆಯಲ್ಲಿ ಮನಸ್ಸು ಮಾಡಲಿಲ್ಲವೆಂಬುದು ಬೇಸರದ ಸಂಗತಿ.

ನಾಳಿನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಗಿರುವ ಪ್ರಾಮುಖ್ಯತೆಯನ್ನು ಇಲ್ಲಿನವರು ಒಪ್ಪಿರುವುದರಲ್ಲಿ ಪ್ರಾಮಾಣಿಕತೆಯಿದೆ. ಹತ್ತನೇ ವರ್ಷದಿಂದ ಎಲ್ಲ ಸರ್ಕಾರಿ ಡಚ್ ಮಾಧ್ಯಮದ ಶಾಲೆಗಳಲ್ಲೂ ಇಂಗ್ಲಿಷ್ ಕಲಿಸುತ್ತಾರೆ. ಹೈಸ್ಕೂಲಿನ ಅಂತಿಮ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾಗಬೇಕಾದರೆ ಶೇಕಡ 55ರಷ್ಟು ಅಂಕಗಳನ್ನು ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ ಪಡೆಯುವುದು ಕಡ್ಡಾಯ. ಇಂಗ್ಲಿಷ್ ಅನ್ನು ನಾನಾ ಸ್ತರಗಳಲ್ಲಿ ಹೇಳಿಕೊಡಬಲ್ಲ ಉಪಾಧ್ಯಾಯರುಗಳಿಗೆ ತುಂಬಾ ಬೇಡಿಕೆಯಿದೆ. ಇಂಗ್ಲಿಷ್ ಹೇಳಿಕೊಡುವ ಉಪಾಧ್ಯಾಯರ ಮತ್ತು ತರಬೇತಿ ಸಂಸ್ಥೆಗಳ ಗುಣಮಟ್ಟವನ್ನು ಕೂಡ ಸರ್ಕಾರ ನಿಯಂತ್ರಿಸುತ್ತದೆ, ಪರೀಕ್ಷಿಸುತ್ತದೆ. ಡಚ್ ಭಾಷೆ/ಮಾಧ್ಯಮವನ್ನು ಪ್ರೋತ್ಸಾಹಿಸುವ ರೀತಿ ಬೇರೆಯಿದೆ. ಡಚ್ ಭಾಷಾ ಮಾಧ್ಯಮದಲ್ಲಿ ಓದುವವರಿಗೆ ಎಲ್ಲ ಹಂತದಲ್ಲೂ ಶಿಕ್ಷಣ ಉಚಿತ. ಅಂತರರಾಷ್ಟ್ರೀಯ ಶಾಲೆಗಳಲ್ಲಿ ನೀವು ಮಕ್ಕಳನ್ನು ಓದಿಸುವುದಾದರೆ, ಶಿಕ್ಷಣದ ವೆಚ್ಚವನ್ನು ನೀವೇ ಭರಿಸಬೇಕು. ಆದರೆ ಅಂತರರಾಷ್ಟ್ರೀಯ ಶಾಲೆಗಳಲ್ಲೂ ಡಚ್ ಭಾಷೆಯನ್ನು ನೀವು ಕಡ್ಡಾಯವಾಗಿ ಕಲಿಯಲೇ ಬೇಕು. ಜಾಗತಿಕ ಉದ್ಯೋಗ ವಲಯದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇಷ್ಟಪಡುವ ಮಕ್ಕಳು, ಅವರ ಪೋಷಕರು ಸಹಜವಾಗಿ ಅಂತರರಾಷ್ಟ್ರೀಯ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಾರೆ. ಆದರೆ ಡಚ್ ಭಾಷೆಯನ್ನು ಕಲಿಯುವುದರಲ್ಲಿ ಯಾವುದೇ ವಿನಾಯತಿ ಇಲ್ಲ. ಡಚ್ ಭಾಷೆಗೆ ಇನ್ನೊಂದು ರೀತಿಯ ಪ್ರಾಮುಖ್ಯತೆಯೂ ಇದೆ. ಸಾರ್ವಜನಿಕ ಜೀವನದಲ್ಲಿ, ಸರ್ಕಾರಿ ಉದ್ಯೋಗ ವಲಯದಲ್ಲಿ ನೀವು ಕೆಲಸ ಮಾಡಬೇಕಾದರೆ ಡಚ್ ಭಾಷೆಯಲ್ಲಿ ಪರಿಣತರಾಗಿರಲೇ ಬೇಕು. ವಕೀಲರು, ವೈದ್ಯರು, ದಾದಿಯರು, ಇಂತಹ ಕೆಲಸವನ್ನು ಮಾಡಲು ಸರ್ಕಾರಕ್ಕೆ ಸೇರಬಯಸುವವರು, ಡಚ್ ಭಾಷೆಯನ್ನು ಕಲಿಯಲೇ ಬೇಕು. ಡಚ್ ಮಾಧ್ಯಮದಲ್ಲಿ ಓದಿರಲೇ ಬೇಕು.

ಇಲ್ಲಿಯ ಜನಸಂಖ್ಯೆಯಲ್ಲಿ ವಯಸ್ಸಾದವರು, ಹಿರಿಯ ನಾಗರಿಕರೇ ಹೆಚ್ಚಾಗಿದ್ದಾರೆ. ಹಾಗಾಗಿ ವಲಸಿಗರಿಗೆ ಬೇಡಿಕೆಯಿದೆ. ತಾತ್ಕಾಲಿಕ ಉದ್ಯೋಗ/ವೀಸಾ ಪಡೆಯಲು ಡಚ್ ಭಾಷೆಯ ಜ್ಞಾನ, ಪರಿಣತಿ ಕಡ್ಡಾಯವಲ್ಲ. ಆದರೆ ಸೀಮಿತ ಪೌರತ್ವ ಪಡೆಯಲು, ಪೂರ್ಣ ಪ್ರಮಾಣದ ಪೌರತ್ವ ಪಡೆಯಲು, ದೀರ್ಘ ಕಾಲದ ಔದ್ಯೋಗಿಕ ವೀಸಾ ಪಡೆಯಲು, ಡಚ್ ಭಾಷೆಯನ್ನು ಕೇವಲ ವ್ಯಾವಹಾರಿಕವಾಗಿ ಕಲಿತರೆ ಮಾತ್ರ ಸಾಲದು, ಸರ್ಕಾರವೇ ನಡೆಸುವ ವಿವಿಧ ಹಂತಗಳ ಡಚ್ ಭಾಷಾ ಪರೀಕ್ಷೆಯನ್ನು ಪಾಸ್ ಮಾಡಬೇಕು. ಮೊದಲ ಹಂತದ ಪರೀಕ್ಷೆಗಳು ಸ್ವಲ್ಪ ಸುಲಭವಾಗಿರುತ್ತದೆಂದು, ಮಧ್ಯಮ ಮತ್ತು ಉನ್ನತ ಹಂತದ ಪರೀಕ್ಷೆಗಳು ಕಠಿಣವಾಗಿರುತ್ತದೆಂದು ಭಾರತೀಯರು ಮಾತ್ರವಲ್ಲ, ಯುರೋಪಿಯನ್‌ರು ಕೂಡ ಹೇಳುತ್ತಾರೆ. ಭಾರತದಲ್ಲಿ ಪೌರತ್ವ ಪಡೆಯಲು ಈ ರೀತಿಯ ಭಾಷಾ ಪರೀಕ್ಷೆ, ತಿಳುವಳಿಕೆ ಕಡ್ಡಾಯವಲ್ಲ. ನಾವು ಆ ದಿಕ್ಕಿನಲ್ಲಿ ಯೋಚಿಸುವುದು ಕೂಡ ಸಾಧ್ಯವಿಲ್ಲ.

ಡಚ್ ಮಾಧ್ಯಮದ ಶಾಲೆಗಳಿಗೂ, ಅಂತರರಾಷ್ಟ್ರೀಯ ಶಾಲೆಗಳಿಗೂ ಗುಣಮಟ್ಟದಲ್ಲಿ ತುಂಬಾ ವ್ಯತ್ಯಾಸವಿಲ್ಲವಂತೆ. ಅಂತರರಾಷ್ಟ್ರೀಯ ಶಾಲೆಗಳ ಕುರಿತು ಇರುವ ಒಂದೇ ಒಂದು ಆಕರ್ಷಣೆಯೆಂದರೆ, ಪಠ್ಯಕ್ರಮ ಸಾಕಷ್ಟು ಅಂತರರಾಷ್ಟ್ರೀಯವಾಗಿರುವುದು. ಇಂಗ್ಲೆಂಡ್, ಅಮೆರಿಕದ ಪಠ್ಯಕ್ರಮಗಳ ಕಡೆ ಮುಖ ಮಾಡಿರುವುದು.

ಇದನ್ನೆಲ್ಲ ಸ್ಥಳೀಯರು, ವಲಸಿಗರು ಬೇರೊಂದು ರೀತಿಯಲ್ಲಿ ನೋಡುತ್ತಾರೆ. ಏನೇ ಆದರೂ ಅಂತರರಾಷ್ಟ್ರೀಯ ಶಾಲೆಗಳಲ್ಲಿ ಓದಿಸುವುದು ಹೆಚ್ಚು ಖರ್ಚಿನ ಮಾತಾದ್ದರಿಂದ, ಎಷ್ಟೋ ಪೋಷಕರು ಶಾಲಾ ವಿದ್ಯಾಭ್ಯಾಸದ ಮಧ್ಯದಲ್ಲೇ ಮಕ್ಕಳು ಕಲಿಯುವ ಮಾಧ್ಯಮವನ್ನು ಬದಲಾಯಿಸಿಬಿಡುತ್ತಾರೆ. ಡಚ್ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಉಚಿತವಾದ್ದರಿಂದ, ಅಲ್ಲಿಗೇ ಸೇರಿಸುತ್ತಾರೆ. ಡಚ್ ಶಾಲೆಗಳಲ್ಲೂ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ತುಂಬಾ ಚೆನ್ನಾಗಿ ಕಲಿಸುವುದರಿಂದ, ಮುಂದೆ ಮತ್ತೆ ಇಂಗ್ಲಿಷ್ ಮಾಧ್ಯಮಕ್ಕೆ ಹೊರಳಿಕೊಳ್ಳುವ ಅಗತ್ಯ ಬಿದ್ದರೆ ತುಂಬಾ ಕಷ್ಟವಾಗುವುದಿಲ್ಲವಂತೆ.

ಹೆಂಡತಿಯ ಉದ್ಯೋಗವೇ ಕಾರಣವಾಗಿ, ಹೆಚ್ಚುತ್ತಿರುವ ಕೌಟುಂಬಿಕ ವೆಚ್ಚದ ಕಾರಣಕ್ಕಾಗಿ ನಾವು ಬಲ್ಲ ಒಂದು ಕುಟುಂಬದಲ್ಲಿ ನಾಲ್ಕನೇ ತರಗತಿಯ ತನಕ ಒಂದು ಮಗುವನ್ನು ಅಂತರರಾಷ್ಟ್ರೀಯ ಶಾಲೆಯಲ್ಲಿ ಓದಿಸಿ ಈಗ ಡಚ್ ಮಾಧ್ಯಮದ ತರಗತಿಗೆ ಸೇರಿಸಿದರು. ಇದನ್ನು ತಿಳಿದು ನನಗೆ ಹೆದರಿಕೆಯೇ ಆಯಿತು. ಮಗುವಿಗೆ ಹೊಂದಿಕೊಳ್ಳಲು ಎಷ್ಟು ಕಷ್ಟವಾಗುತ್ತದೆ ಎಂದು ವಾದಿಸಿದೆ. ಹಾಗೇನಿಲ್ಲ, ಇಂಗ್ಲಿಷ್‌ನಿಂದ ಡಚ್‌ಗೆ, ಡಚ್‌ನಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೊರಳಿಕೊಳ್ಳುವುದು ಸುಲಭ. ಪದಗಳ ಸ್ವರೂಪ, ಉಚ್ಛಾರ, ವಾಕ್ಯರಚನೆಯ ದೃಷ್ಟಿಯಿಂದ ಡಚ್ ಭಾಷೆಯು ಇಂಗ್ಲಿಷ್‌ಗೆ ಹತ್ತಿರವಾಗಿದೆ. ಇದು ನನ್ನ ಮಗಳ ಅಭಿಪ್ರಾಯವಾಗಿತ್ತು. ನಾನು ಮೊಮ್ಮಗನ ಹತ್ತಿರ ಕೂಡ ವಿಚಾರಿಸಿದೆ. ಏಕೆಂದರೆ, ಶಾಲೆ ಬದಲಾಯಿಸುತ್ತಿದ್ದ ಮಗು ಆತನ ಗೆಳೆಯ, ಸಹಪಾಠಿ. ಅವನೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ. ಡಚ್ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಕೂಡ ತೋರಿಸಿದ. ಸ್ವಲ್ಪ ದಿನ ಅಭ್ಯಾಸ ಮಾಡಿದರೆ ಕಷ್ಟವಾಗಲಾರದೆಂದು ನನಗೂ ಅನಿಸಿತು.

ಇನ್ನೂ ಒಂದು ಸೂಕ್ಷ್ಮವನ್ನು ಗಮನಿಸಿದೆ. ಮಕ್ಕಳು ಎರಡೂ ಭಾಷೆಗಳನ್ನು ಅಗತ್ಯ ಬಿದ್ದರೆ ಕಲಿಯುತ್ತಾರೆ, ಇಲ್ಲದಿದ್ದರೆ ಇಲ್ಲ. ಆದರೆ ಯಾವ ಭಾಷೆಯ ಬಗ್ಗೆಯೂ ಅವರಿಗೆ ಯಾವ ಧೋರಣೆಯೂ ಇರುವುದಿಲ್ಲ. ಎರಡೂ ಭಾಷಾ ಮಾಧ್ಯಮಗಳಲ್ಲೂ ಕಲಿಸುವ ವಿಧಾನದಲ್ಲಿ ವ್ಯತ್ಯಾಸವಿಲ್ಲದೇ ಇರುವುದರಿಂದ, ಯಾವುದೇ ರೀತಿಯ ಅಡ್ಡ ಪರಿಣಾಮವೂ ಆಗುವುದಿಲ್ಲ ಎಂಬ ವಿಶ್ವಾಸ ಪೋಷಕರಿಗಿದೆ.

ಡಚ್ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು, ಅಂತರರಾಷ್ಟ್ರೀಯ ಶಾಲೆಗಳಲ್ಲಿ ಡಚ್ ಭಾಷೆಯನ್ನು ಚೆನ್ನಾಗಿ, ಪರಿಣಾಮಕಾರಿಯಾಗಿ ಕಲಿಸುತ್ತಾರೆ ಎಂಬ ನಂಬಿಕೆ ಪೋಷಕರಿಗಿದೆ. ಯಾವ ಭಾಷೆಯಲ್ಲಿ ಕಲಿಸುತ್ತಾರೆ ಎನ್ನುವುದಕ್ಕಿಂತ, ಭಾಷೆಯನ್ನು ಕಲಿಸುವ ವಿಧಾನ ಯಾವುದು, ಮಕ್ಕಳ ಭಾಷಾ ಜ್ಞಾನ, ಪ್ರೌಢಿಮೆಯನ್ನು ಪರೀಕ್ಷಿಸುವ ವಿಧಾನವೇ ಮುಖ್ಯ ಎಂಬ ತಿಳುವಳಿಕೆ ಇಲ್ಲಿಯ ಶಿಕ್ಷಣ ಸಂಸ್ಕೃತಿಯ ಭಾಗವಾಗಿದೆ.

ಈ ಹಿನ್ನೆಲೆಯಲ್ಲಿ ನಾನು ಭಾಷಾ ಶಿಕ್ಷಣದಿಂದ ಮಕ್ಕಳ ಮೇಲೆ ಏನೇನು ಪರಿಣಾಮವಾಗುತ್ತದೆ, ಅದನ್ನೆಲ್ಲ ಹೇಗೆ ಮೌಲ್ಯಮಾಪನ ಮಾಡುತ್ತಾರೆ ಎಂದು ಅಧ್ಯಯನ ಮಾಡಿ ತಿಳಿದ ವಿವರಗಳು ಹೀಗಿವೆ:

ಬರೆಯುವ ಒಲವು, ಶಕ್ತಿಯನ್ನು ಪರೀಕ್ಷಿಸುವುದಕ್ಕೋಸ್ಕರ ವಾಕ್ಯ ರಚನೆ, ವ್ಯಾಕರಣ, ಪದಸಂಪತ್ತು, ತಪ್ಪುಗಳನ್ನು ತಿದ್ದಿಕೊಳ್ಳುವ ಮತ್ತು ಬರೆದದ್ದನ್ನು ಸಂಪಾದಿಸುವ, ಪರಿಷ್ಕರಿಸುವ ಮನೋಭಾವವನ್ನು ಪರಿಗಣಿಸಲಾಗುತ್ತದೆ. ನಂತರ ಹಸ್ತಾಕ್ಷರದ ಸ್ವರೂಪ ಮತ್ತು ಸ್ಪೆಲ್ಲಿಂಗ್‌ಗಳನ್ನು ಗಮನಿಸುತ್ತಾರೆ.

ಓದುವಿಕೆಯನ್ನು ಪರಿಶೀಲಿಸಲು, ಓದಿನ ಮೂಲಕ ಮಗು ಎಷ್ಟರ ಮಟ್ಟಿಗೆ ಅಭಿವ್ಯಕ್ತಿಯನ್ನು ಸಾಧಿಸುತ್ತದೆ, ಕಥನ ಮತ್ತು ಕಥನೇತರ ಪಠ್ಯಗಳ ವ್ಯತ್ಯಾಸವನ್ನು ಗುರುತಿಸಬಲ್ಲದೇ, ಓದುತ್ತಿರುವ ಪಠ್ಯದ ಜೊತೆ ತನ್ನ ವ್ಯಕ್ತಿತ್ವದ, ಮತ್ತು ಕೌಟುಂಬಿಕ ಸನ್ನಿವೇಶವನ್ನು ಗುರುತಿಸಿಕೊಳ್ಳಬಲ್ಲದೇ, ಓದಿದ್ದನ್ನು ಗ್ರಹಿಸಿ ಸಾರಾಂಶವನ್ನು ರೂಪಿಸಬಲ್ಲದೇ, ಇಂತಹ ಅಂಶಗಳನ್ನು ಪರಿಶೀಲಿಸುತ್ತಾರೆ.

ಮಾತನಾಡುವ ಮತ್ತು ಕೇಳಿಸಿಕೊಳ್ಳುವ ಕಲೆಯನ್ನು ಕೂಡ ಭಾಷಾ ಪ್ರೌಢಿಮೆಯ ಭಾಗವಾಗಿಯೇ ನೋಡುತ್ತಾರೆ. ಒಂದು ಗುಂಪಿನಲ್ಲಿರುವಾಗ ಬೇರೆ ಮಕ್ಕಳ ಭಾಷಾ ರೀತಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡಬೇಕಂತೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಮಗು ಭಾಷೆಯ ಧ್ವನಿ, ಶೈಲಿ, ಪದಗಳ ಆಯ್ಕೆಯ ಕಡೆ ಕೂಡ ಗಮನ ಕೊಡುತ್ತದೆಯೇ ಎಂಬುದನ್ನು ಕೂಡ ಪರಿಗಣಿಸಲಾಗುತ್ತದೆ.

ಇದನ್ನೆಲ್ಲ ಗಮನಿಸಿ ಯೋಚಿಸಿದಾಗ, ನನಗೇ ಒಂದು ಅಂಶ ಸ್ಪಷ್ಟವಾಯಿತು. ಭಾಷೆಯನ್ನು ಕಲಿಸುವ ರೀತಿಗೆ ಮಾತ್ರ ಇದು ಸಂಬಂಧಿಸಿದ್ದಲ್ಲ, ಒಟ್ಟು ಕಲಿಕೆಯ ವಿಧಾನಕ್ಕೆ ಸಂಬಂಧಿಸಿದ್ದು. ಹಾಗಾಗಿ, ಮಕ್ಕಳು ಯಾವ ಭಾಷಾ ಮಾಧ್ಯಮದಲ್ಲಿ ಕಲಿಯುತ್ತಾರೆ ಎಂಬುದು ಮುಖ್ಯವಲ್ಲ. ಎರಡೂ ಭಾಷಾ ಮಾಧ್ಯಮಗಳಲ್ಲೂ ಓದುವ ಮಕ್ಕಳ ಅಂತಿಮ ಪರಿಣಾಮ ಹಾಗೂ ಗುಣಮಟ್ಟ ಒಂದೇ ಸ್ವರೂಪದ್ದಾಗಿರುತ್ತವೆ. ಭಾರತದಲ್ಲೂ ಕೂಡ ನಮಗೆ ಇಂಗ್ಲಿಷ್ ಮೇಲಿರುವ ಪ್ರೀತಿ, ವ್ಯಾಮೋಹ ಪ್ರಾಮಾಣಿಕವಾದುದೇನಲ್ಲ. ಕನ್ನಡ ಮಾಧ್ಯಮದಲ್ಲಿ ನಮ್ಮ ಮಕ್ಕಳು ಕಲಿತರೆ ಸರಿಯಾದ ಪರಿಣಾಮಕಾರಿ ಶಿಕ್ಷಣ ಸಿಗದೆಹೋಗಬಹುದೆಂಬ ಆತಂಕ ಮತ್ತು ಕಲ್ಪಿತ ಭಯ.

ಭಾಷೆ ಮತ್ತು ಮಾಧ್ಯಮದ ಬಗ್ಗೆ ನನ್ನದು ಅನಗತ್ಯ ಗೀಳು ಮತ್ತು ಭಯ ಎಂದು ಕೆಲವು ಭಾರತೀಯ ಪೋಷಕರು ಟೀಕಿಸಿದರು. ನೀವು ಉಪಪ್ರಶ್ನೆಯನ್ನೇ ಮುಖ್ಯ ಪ್ರಶ್ನೆಯನ್ನಾಗಿ ಮಾಡುತ್ತಿದ್ದೀರಿ ಎಂದು ಅಭಿಪ್ರಾಯ ಪಟ್ಟರು. ಪೋಷಕರು ಭಾರತೀಯರೇ ಆಗಿರಲಿ, ಯುರೋಪಿಯನ್ನರೇ ಆಗಿರಲಿ, ತಮ್ಮ ಮಕ್ಕಳ ಶಿಕ್ಷಣ, ಭವಿಷ್ಯ ಹಸನಾಗಿರಬೇಕೆಂದೇ ಬಯಸುತ್ತಾರೆ. ಈ ಬಯಕೆಗನುಗುಣವಾಗಿ, ಅವರವರ ಸಂಪನ್ಮೂಲದ ಸಾಧ್ಯತೆಗಳಿಗನುಗುಣವಾಗಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಹೊರತು ವಿಚಾರಗಳ ideologyಗಳ ಯುಕ್ತಾಯುಕ್ತತೆ, ನೈತಿಕತೆಯ ಬಗ್ಗೆ ಅವರಿಗೆ ಯಾವುದೇ ಪೂರ್ವ ನಿರ್ಧಾರಿತ ನಿಲುವುಗಳಿರುವುದಿಲ್ಲ. ನಿಮ್ಮ ಕಾಳಜಿ ನಿಲುವುಗಳ ಯುಕ್ತಾಯುಕ್ತತೆಯ ಬಗ್ಗೆ ಇದೆಯೇ ಹೊರತು ಮಕ್ಕಳ ಭವಿಷ್ಯದ ಬಗ್ಗೆ ಅಲ್ಲ ಎಂದು ನನ್ನ ಬಾಯಿ ಮುಚ್ಚಿಸಿದರು.

ನನ್ನ ಮನಸ್ಸಿಗೆ ಸ್ವಲ್ಪ ಪಿಚ್ಚೆನ್ನಿಸುವ ಇನ್ನೂ ಒಂದು ಸಂಗತಿಯನ್ನು ಭಾರತೀಯ ಪೋಷಕರು ಹೇಳಿದರು. ನಾವೆಲ್ಲ ನೆದರ್‌ಲ್ಯಾಂಡ್ಸ್‌ಗೆ ಬಂದಿರುವುದು ಜೀವನಾವಕಾಶಗಳನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ, ಉತ್ತಮಪಡಿಸಿಕೊಳ್ಳುವುದಕ್ಕಾಗಿ. ಇಲ್ಲಿಯ ಸದ್ದುಗದ್ದಲವಿಲ್ಲದ ಬದುಕು, ಹಸಿರು ತುಂಬಿದ ವಾತಾವರಣ, ಉತ್ತಮ ಸಾಗಾಣಿಕಾ ವ್ಯವಸ್ಥೆ, ಸಾಮಾಜಿಕ ಸುರಕ್ಷತೆ, ಸುಲಭವಾಗಿ ಪೌರತ್ವ ಸಿಗುವುದು, ಸರ್ಕಾರಕ್ಕೆ, ಸಮಾಜಕ್ಕೆ ಸಾಮಾನ್ಯ ನಾಗರಿಕರ ಬಗ್ಗೆ ಇರುವ ಗೌರವ, ಕಾಳಜಿ, ಎಲ್ಲರಿಗೂ ಸಮಾನವಾಗಿ ಲಭ್ಯವಾಗುವ ಸಾರ್ವಜನಿಕ ಶಿಕ್ಷಣ, ಆರೋಗ್ಯ, ಇದೆಲ್ಲ ನಮ್ಮನ್ನು ಇಲ್ಲಿಗೆ ಬಂಧಿಸುತ್ತದೆ. ಕೇವಲ ಭಾವನಾತ್ಮಕ, ದೇಶಪ್ರೇಮದ ಕಾರಣಗಳಿಗಾಗಿಯೇ ನಾವು ಭಾರತಕ್ಕೆ ಹಿಂತಿರುಗಲಾಗುವುದಿಲ್ಲ. ಕೊನೆಗೂ ಇದು ಮುಂದಿನ ತಲೆಮಾರಿನವರ ಆಯ್ಕೆ. ಭಾರತವು ಎಂದಿದ್ದರೂ ನಾವು ಹಿಂದೆ ಬಿಟ್ಟು ಬಂದಿರುವ ದೇಶ. ಇದನ್ನು ಒಪ್ಪಿಕೊಳ್ಳಲು ನಮಗೂ ಕಷ್ಟ. ಆದರೇನು ಮಾಡುವುದು? ಹೀಗೆಲ್ಲಾ ಹೇಳುವ ಮೂಲಕ ಭಾಷಾ ಮಾಧ್ಯಮದ ಪ್ರಶ್ನೆಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಡಿ, ಒಟ್ಟು ಜೀವನ ಸಂದರ್ಭ, ಸಾಧ್ಯತೆಗಳ ಚೌಕಟ್ಟಿನಲ್ಲಿ ಪರಿಶೀಲಿಸಿ ಎಂದು ಸೂಚಿಸಿದರು.

ಇಂಗ್ಲಿಷನ್ನು ಜನಪ್ರಿಯಗೊಳಿಸಲು ಬಿಬಿಸಿ, ಸಿಎನ್‌ಎನ್ ಚಾನೆಲ್‌ಗಳ ಕಾರ್ಯಕ್ರಮಗಳನ್ನು ಡಚ್ ಭಾಷೆಯ subtitle ಸಮೇತ ತೋರಿಸುತ್ತಾರೆ. ಸಾರ್ವಜನಿಕ ಗ್ರಂಥಾಲಯಗಳಲ್ಲೂ, ಗ್ರಂಥಾಲಯಗಳ ಮಕ್ಕಳ ವಿಭಾಗದಲ್ಲೂ ಇಂಗ್ಲಿಷ್ ಪುಸ್ತಕಗಳಿಗೆ ಆದ್ಯತೆಯಿದೆ.

ಪ್ರತಿಯೊಂದು ಸಮಾಜ, ಭಾಷಿಕ ಸಮುದಾಯಕ್ಕೂ ಕಲಿಯುವ ಭಾಷೆಯ ಆಯ್ಕೆ ಮತ್ತು ಆ ಭಾಷೆಯನ್ನು ಕಲಿಯುವ, ಬೆಳೆಸುವ ವಿಧಾನವನ್ನು ಕುರಿತು ಆಯ್ಕೆ ಮಾಡುವ ಹಕ್ಕಿದೆ. ವರ್ತಮಾನದ ಒತ್ತಡಗಳಿಗೆ ಅನುಗುಣವಾಗಿ ಬೇರೆ ಬೇರೆ ಆಯ್ಕೆ ಮಾಡುತ್ತಾ ಕೂಡ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬಹುದು. ಡಚ್ಚರದು ಒಂದು ಮಾದರಿ. ಅದನ್ನು ನಾವು ಅನುಸರಿಸಬೇಕಾಗಿಲ್ಲ. ನಾವು ಕಲಿಯಬಹುದಾದ ಯಾವುದಾದರೂ ಪಾಠಗಳಿವೆಯೇ ಎಂಬುದನ್ನು ಗಮನಿಸಬೇಕು, ಅಷ್ಟೆ.

(ಹಿಂದಿನ ಕಂತು: ಏಕೆ ಇಷ್ಟೊಂದು ದ್ವೇಷ!)