ಇವಳ ಜತೆಯಲ್ಲಿ ನಡೆಯುವ ಗೆಳತಿಯರು ಮೈ ಕೈ ತಾಗಿಸಿಕೊಳ್ಳದೇ ದೂರದೂರವೇ ನಡೆಯುವಾಗ ನೀಲಿಗೆ ಅಳುವೇ ಬಂದಂತಾಗಿತ್ತು. “ನಾ ಹೇಳದಿದ್ರೆ ನಿಮಗೆಲ್ಲ ನಾ ಮುಟ್ಟು ಅಂತ ಗೊತ್ತಾಗ್ತಾನೇ ಇರಲಿಲ್ಲ. ದಿನಾ ಶಾಲೇಲಿ ಅದೆಷ್ಟು ಹುಡುಗಿರು ಮುಟ್ಟಾಗಿ ಬರ್ತಾರೋ ಗೊತ್ತಿದ್ಯಾ?” ಎಂದು ಅವರನ್ನು ತಿದ್ದಲು ನೋಡಿದಳು. ಅದಕ್ಕವರು ಜಗ್ಗದೇ, “ಗೊತ್ತಾಗದಿದ್ರೆ ದೋಷ ಇಲ್ಲಾಂತ ನಮ್ಮಜ್ಜಿ ಹೇಳಿದಾರೆ. ಗೊತ್ತಾಗಿಯೂ ಮೈಲಿಗೆಯಾದ್ರೆ ಅದು ನಮ್ಮ ತಪ್ಪು.” ಎಂದು ಬೇರೆಯದೇ ವಾದ ಹೂಡಿದರು. ಬಸ್ ಹತ್ತಿದಾಗಲೂ ತನ್ನ ಸೀಟಿನಲ್ಲಿ ಪರಚಯದವರ‍್ಯಾರೂ ಕುಳಿತುಕೊಳ್ಳದಿದ್ದಾಗ ನೀಲಿ ಈ ಹುಡುಗಿಯರೆಲ್ಲ ಇಡಿಯ ಶಾಲೆಗೆ ಈ ವಿಷಯವನ್ನು ಡಂಗೂರ ಸಾರದಿದ್ದರೆ ಸಾಕೆಂದುಕೊಂಡಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ನೀಲಿಯ ಹೊಸಶಾಲೆಯಲ್ಲಿ ಅಂದು ಹೆಣ್ಣುಮಕ್ಕಳು ಮಾತ್ರವೇ ಶಾಲೆಗೆ ಬರಬೇಕೆಂದು ಹೇಳಿದ್ದರು. ಭಾನುವಾರವಾದರೂ ಇಡೀ ದಿನ ಶಾಲೆಯಲ್ಲಿರಬೇಕೆಂದೂ, ಊಟದ ವ್ಯವಸ್ಥೆಯನ್ನು ಶಾಲೆಯಲ್ಲಿಯೇ ಮಾಡುವರೆಂದು ತರಗತಿಯ ಉಪಾಧ್ಯಾಯರು ಹತ್ತಾರು ಸಲ ಹೇಳಿದ್ದರು. ಹುಡುಗರೆಲ್ಲ ಏನೋ ಸುಳಿವು ಸಿಕ್ಕಂತೆ ಹುಡುಗಿಯರ ಮುಖ ನೋಡಿ ನಕ್ಕಿದ್ದರು. ಹುಡುಗಿಯರೂ ಇದೇನು ಹೊಸಪರಿಯೆಂದು ಅರಿಯದೇ ಕಕ್ಕಾಬಿಕ್ಕಿಯಾಗಿ ಹುಡುಗರ ದೃಷ್ಟಿಯನ್ನೆದುರಿಸಲಾಗದೇ ತಲೆ ತಗ್ಗಿಸಿದ್ದರು. ನೀಲಿ ಮಾತ್ರ ಭಾನುವಾರದ ಬೆಳಗು ಎಂದು ಬಂದೀತೋ ಎಂದು ಕಾಯುತ್ತಿದ್ದಳು. ಹುಡುಗಿಯರು ಮಾತ್ರ ಕುಳಿತು ಇಡೀ ದಿನ ಕಲಿಯುವ ಹೊಸ ವಿಷಯವೇನಿದ್ದೇತೆಂದು ತಿಳಿಯಲು ಕಾತರಳಾಗಿದ್ದಳು. ಭಾನುವಾರದ ಬೆಳಗು ಎಂದಿನಂತೆ ಸಮವಸ್ತ್ರ ಧರಿಸದೇ ಬಣ್ಣದ ಫ್ರಾಕೊಂದನ್ನು ಹಾಕಿಕೊಂಡು ಜಿಗಿಯುತ್ತಲೇ ಬಸ್ಸನ್ನೇರಿ ಶಾಲೆಯ ಅಂಗಳಕ್ಕೆ ಕಾಲಿಟ್ಟಳು.

ಅಂದು ಶಾಲೆಯಲ್ಲಿ ಮಹಿಳಾ ಶಿಕ್ಷಕರು ಮಾತ್ರವೇ ಬಂದಿದ್ದರು. ಜತೆಯಲ್ಲಿ ಇವರಿಗೆಲ್ಲ ಅಪರಿಚಿತರಾದ ಅನೇಕರು ಸೇರಿದ್ದರು. ಶಾಲೆಯ ಹುಡುಗಿಯರನ್ನು ಮೈದಾನದಲ್ಲಿ ನಿಲ್ಲಿಸಿ ಚಂದದ ಆಟಗಳನ್ನು ಆಡಿಸಿದರು. ಮತ್ತೆ ನಾಲ್ಕು ತಂಡಗಳಾಗಿ ವಿಭಾಗಿಸಿ ಒಂದೊಂದು ತಂಡವನ್ನು ಒಂದೊಂದು ತರಗತಿಯಲ್ಲಿ ಕೂಡ್ರಿಸಿದರು. ನಿಧಾನವಾಗಿ ಅವರ ಬಾಲ್ಯದ ಕತೆಗಳೆಲ್ಲವನ್ನು ಕೇಳುತ್ತಾ, ನಿಮ್ಮಲ್ಲಿ ಎಷ್ಟು ಜನರಿಗೆ ತಿಂಗಳ ಮುಟ್ಟು ಆಗುತ್ತಿದೆ? ಎಂದು ಪ್ರಶ್ನಿಸಿದರು. ಹುಡುಗಿಯರೆಲ್ಲ ನಾಚಿಕೊಂಡು ತಲೆಕೆಳಗೆ ಹಾಕಿದರು. ಆದರೆ ಪಾಠ ಮಾಡುತ್ತಿದ್ದ ಬಿಳಿಯಂಗಿಯ ಮೇಡಂ ಒಂದಿನಿತೂ ಮುಜುಗರವಿಲ್ಲದೇ ತಾವು ಜೋಳಿಗೆಯಲ್ಲಿ ತಂದಿದ್ದ ಚಿತ್ರಪಟಗಳನ್ನು ತೋರಿಸುತ್ತಾ ಮುಟ್ಟಿನ ಬಗ್ಗೆ ಅನೇಕ ಸಂಗತಿಗಳನ್ನು ಹೇಳತೊಡಗಿದರು. ಇಡೀ ದಿನ ಹುಡುಗರು, ಹುಡುಗಿಯರ ದೇಹದ ರಚನೆ, ಹದಿಹರೆಯಕ್ಕೆ ಕಾಲಿಟ್ಟಾಗ ಅದರಲ್ಲಾಗುವ ಬದಲಾವಣೆಗಳ ಬಗ್ಗೆ ತಿಳುವಳಿಕೆ ನೀಡಿದರು. ನಿಮ್ಮಲೊಬ್ಬ ಹುಡುಗಿಯ ಬಾಡಿಮ್ಯಾಪಿಂಗ್ ಮಾಡೋಣ ಎಂದಾಗ ಯಾರೂ ಮುಂದೆ ಬರದಿದ್ದರೂ ನೀಲಿ ಎದ್ದು ಬಂದು ನೆಲದ ಮೇಲೆ ಮಲಗಿ ತನ್ನ ದೇಹದ ಚಿತ್ರವನ್ನು ಬಿಡಿಸಿಕೊಂಡಿದ್ದಳು. ಮುಂದೆ ಹುಡುಗಿಯರೆಲ್ಲ ಆ ಚಿತ್ರದ ಸುತ್ತಲೂ ನಿಂತು ಇನ್ನೊಂದು ವರ್ಷದಲ್ಲಿ ನೀಲಿಯ ದೇಹದ ಅಂಗಗಳೆಲ್ಲ ಹೇಗಿರುತ್ತವೆಯೆಂಬ ಚಿತ್ರವನ್ನು ಅದರೊಳಗೆ ಬಿಡಿಸಿದ್ದರು. ಆಗೆಲ್ಲ ನೀಲಿಗೆ ತಾನು ಎಲ್ಲರೆದುರು ಬೆತ್ತಲೆಯಾದಂತೆನಿಸಿ ನಾಚಿಕೆಯಾಗಿತ್ತು. ಅದನ್ನು ಗಮನಿಸಿದ ಬಿಳಿಯಂಗಿಯ ಮೇಡಂ ನೀಲಿಗೊಂದು ಚಪ್ಪಾಳೆ ಹೊಡೆಸಿ, ಮೈದಡವಿ ಅವಳ ಹಿಂಜರಿಕೆಯನ್ನು ಹೋಗಲಾಡಿಸಿದರು.

ಮಧ್ಯಾಹ್ನ ಅವರೆಲ್ಲ ಸೇರಿ ಮಾಡಿದ್ದ ಊಟದ ವ್ಯವಸ್ಥೆಯೂ ವಿಶೇಷವಾಗಿತ್ತು. ತಿಂಗಳ ಸ್ರಾವದಿಂದ ರಕ್ತವನ್ನು ಕಳೆದುಕೊಳ್ಳುವ ಹುಡುಗಿಯರು ಸೇವಿಸಲೇಬೇಕಾದ ಎಲ್ಲ ರೀತಿಯ ಪೌಷ್ಟಿಕ ಆಹಾರವನ್ನು ಊಟದಲ್ಲಿ ಸೇರಿಸಿದ್ದರು. ಅವುಗಳ ಸೇವನೆಯಿಂದ ಸಿಗುವ ಪೋಷಕಾಂಶಗಳನ್ನು ಅಲ್ಲಿಯೇ ವಿವರಿಸಿದರು. ಊಟದ ನಂತರ ಬಿಳಿಯಂಗಿಯ ಸರ್ ಬಂದು ತಮಾಷೆಯ ಕತೆಗಳನ್ನು ಹೇಳುತ್ತಾ, ದೊಡ್ಡವರಾದ ಮೇಲೆ ಅಮ್ಮ, ಅಜ್ಜಿಯರಲ್ಲದೇ ಬೇರೆಯವರು ಮುಟ್ಟಬಾರದ ದೇಹದ ಭಾಗಗಳ ಬಗ್ಗೆ ಗೊಂಬೆಯೊಂದನ್ನು ಎದುರಿಗಿಟ್ಟುಕೊಂಡು ಪ್ರಾತ್ಯಕ್ಷಿಕೆಯನ್ನು ಮಾಡಿದರು. ನಮ್ಮ ಇಚ್ಛೆಗೆ ವಿರುದ್ಧವಾಗಿ ದೇಹವನ್ನು ಯಾರಾದರೂ ಮುಟ್ಟಿದರೆ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಯ ಅವಧಿಯಲ್ಲಿ ಬೆಳಗಿನಿಂದ ಚರ್ಚಿಸಿದ ವಿಷಯಗಳ ಬಗ್ಗೆ ಹುಡುಗಿಯರಿಗಿರುವ ಸಂಶಯಗಳನ್ನು ಪರಿಹರಿಸಲಾಯಿತು. ಟೇಬಲ್ ಮೇಲಿರುವ ಪ್ರಶ್ನೆ ಪೆಟ್ಟಿಗೆಯಲ್ಲಿ ಹೆಸರನ್ನು ಬರೆಯದ ಚೀಟಿಯಲ್ಲಿ ಬರೆದ ಪ್ರಶ್ನೆಗಳನ್ನು ಎಷ್ಟಾದರೂ ಹಾಕಬಹುದಾದ ಅವಕಾಶವಿತ್ತು. ನೇರವಾಗಿ ಪ್ರಶ್ನಿಸಲು ನಾಚಿಕೊಂಡಿದ್ದ ಹುಡುಗಿಯರು ಪ್ರಶ್ನೆ ಪೆಟ್ಟಿಗೆಯನ್ನು ಮಾತ್ರ ಚೀಟಿಗಳಿಂದ ತುಂಬಿಸಿಬಿಟ್ಟಿದ್ದರು. ಬಿಳಿಯಂಗಿಯ ಮೇಡಂ ಎಲ್ಲವನ್ನೂ ಓದಿ ಚುಟುಕಾದ ಉತ್ತರಗಳನ್ನು ನೀಡಿದರು. ಆ ಇಡಿಯ ದಿನ ಕಳೆದದ್ದೇ ಗೊತ್ತಾಗದೇ ಶಾಲೆಯಿಂದ ಹೊರಬಿದ್ದ ಹುಡುಗಿಯರು ದಾರಿತುಂಬಾ ತಾವು ಇದುವರೆಗೂ ಯಾರಲ್ಲಿಯೂ ಮಾತನಾಡದ ಅನೇಕ ವಿಷಯಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಮನೆಗೆ ಮರಳಿದರು. ಮುಂದೆಯೂ ಇಂತಹ ವಿಷಯಗಳನ್ನು ಚರ್ಚಿಸಲು ವಿಜ್ಞಾನ ಅಧ್ಯಾಪಕರ ನೇತೃತ್ವದಲ್ಲಿ ಗುಂಪೊಂದನ್ನು ರಚಿಸಲಾಗಿತ್ತು. ನೀಲಿ ನಿರ್ಬಿಡೆಯಿಂದ ತನಗಿನ್ನೂ ತಿಂಗಳ ಮುಟ್ಟು ಬಂದಿಲ್ಲವೆಂಬುದನ್ನು ಗೆಳತಿಯರೊಂದಿಗೆ ಹಂಚಿಕೊಂಡಳು.

ಮನೆಗೆ ಬಂದ ನೀಲಿಯ ಎದುರು ಪ್ರಶ್ನೆಗಳ ಮಹಾಪೂರವೇ ಹರಡಿಕೊಂಡಿತ್ತು. ಮೊದಲಾದರೆ ತನ್ನ ಅಮ್ಮನಲ್ಲಿ ಎಲ್ಲವನ್ನೂ ಹಂಚಿ ಹಗುರಾಗುತ್ತಿದ್ದಳು. ಆದರೆ ಈ ವಿಷಯದಲ್ಲಿ ಅಮ್ಮನ ತಿಳುವಳಿಕೆ ಬೇರೆಯೇ ಆಗಿತ್ತು. ಹೊಳೆಸಾಲಿನ ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳು ತಿಂಗಳ ಸ್ರಾವದ ದಿನಗಳಲ್ಲಿ ತಮ್ಮ ಚಾಪೆ, ದಿಂಬು, ತಟ್ಟೆ, ಲೋಟಗಳನ್ನು ಬೇರೆಯೇ ಇಟ್ಟುಕೊಂಡು ಪ್ರತ್ಯೇಕವಾಗಿ ಮಲಗುತ್ತಿದ್ದರು. ಹಾಗೆಂದು ಅವರಿಗೆ ಮಲಗಲು ವಿಶೇಷವಾದ ಕೋಣೆಯೇನೂ ಯಾರ ಮನೆಯಲ್ಲಿಯೂ ಇರಲಿಲ್ಲ. ಎಷ್ಟೇ ಶ್ರೀಮಂತರಾಗಿದ್ದರೂ ಹೊಸಿಲು ಬಾಗಿಲಾಚೆಗೆ ಮುಟ್ಟಾದ ಹೆಂಗಸರು ಹೋಗಬಾರದು, ಮಾಳಿಗೆಯೇರಿ ದೇವರ ಮನೆಗಿಂತ ಎತ್ತರದಲ್ಲಿ ಕಾಲು ತಾಗಿಸಬಾರದು ಎಂದೆಲ್ಲ ಶಾಸ್ತ್ರಗಳಿದ್ದರಿಂದ ಅವರ ವಾಸವೇನಿದ್ದರೂ ಜಗುಲಿಯ ಮೂಲೆ, ಹೊರಗಿನ ಕೋಣೆ, ಬಚ್ಚಲ ಮನೆ ಇಷ್ಟಕ್ಕೆ ಸೀಮಿತವಾಗಿತ್ತು. ಅಪ್ಪಿತಪ್ಪಿಯೆಲ್ಲಾದರೂ ಅವರ ಹಾಸಿಗೆಯನ್ನೋ, ಬಟ್ಟೆಯನ್ನೋ ಯಾರಾದರೂ ಮುಟ್ಟಿದರೆ ಸ್ನಾನ ಮಾಡಿಯೇ ಮನೆಯೊಳಗೆ ಬರಬೇಕಿತ್ತು. ಹೊರಗೆ ಚಾವಡಿಯ ಮೇಲೆ ಒಳಗಿನವರು ತಂದು ಬಡಿಸಿದ ಊಟ, ತಿಂಡಿಗಳನ್ನು ತಿಂದು ದಿನಗಳೆಯಬೇಕಿತ್ತು. ಒಂಟಿ ಹೆಂಗಸರಿರುವ ಮನೆಯ ಪಾಡಂತೂ ಯಾರಿಗೂ ಹೇಳತೀರದು. ಗಂಡಸರು ಅಡುಗೆ ಮನೆಗೆ ಹೋಗುವುದೇ ಅವಮಾನವೆಂದು ತಿಳಿದಿದ್ದರಿಂದ ಆ ಮೂರು ದಿನ ಮನೆಯ ಒಲೆ ಹೊತ್ತಿಸಲು ಯಾರನ್ನಾದರೂ ಕರೆತರಬೇಕಾದ ಅನಿವಾರ್ಯತೆ ಅವರದ್ದು. ಯಾರೂ ಸಿಗದಿದ್ದರೆ ಮನೆಮಂದಿಯೆಲ್ಲ ಉಪವಾಸ ಬೀಳುವ ಭಯ. ಈ ಮೂರು ದಿನಗಳು ಯಾಕಾದರೂ ಬರುತ್ತವೆಯೋ ಎಂದು ಹೆಂಗಸರು ಸೇರಿದಾಗಲೆಲ್ಲ ಮಾತಾಡುವುದನ್ನು ನೀಲಿ ಕೇಳಿಸಿಕೊಂಡಿದ್ದಳು.

ಹಬ್ಬ, ಹರಿದಿನಗಳು, ಪೂಜೆ, ದೇವಾಲಯಗಳ ಭೇಟಿಯೂ ಆ ದಿನಗಳಲ್ಲಿ ನಿಷಿದ್ಧ. ಅನಿವಾರ್ಯವಾಗಿ ಮದುವೆ, ದೇವಕಾರ್ಯಗಳೆಲ್ಲ ಇದ್ದರೆ ಬೇಗ ಮುಟ್ಟು ಬರುವಂತೆ ಔಷಧಿ ಕೊಡುವ ಪಕ್ಕದೂರಿನ ಪಾರ್ವತಮ್ಮನವರಲ್ಲಿಗೆ ದೌಡಾಯಿಸುತ್ತಿದ್ದರು. ಅವರು ಕೊಡುವ ಹಸಿರೌಷಧವನ್ನು ನುಂಗಿ ಮುಟ್ಟು ಮೊದಲೇ ಬರುವಂತೆ ಮಾಡಿಕೊಳ್ಳುತ್ತಿದ್ದರು. ಕೆಲವರಂತೂ ಮುಟ್ಟು ಮುಂದೆ ಹೋಗಲೆಂದು ಮನೆಯ ದೇವರಲ್ಲಿ ಹರಕೆ ಹೊರುತ್ತಿದ್ದುದೂ ಉಂಟು. ಮುಟ್ಟಿನ ಹೆಂಗಸರ ನಡೆಯನ್ನು ಕಾಯುವ ಕೆಲಸವನ್ನು ಊರಿನ ಎಲ್ಲ ಹಿರಿಯರು ಚಾಚೂ ತಪ್ಪದೇ ಮಾಡುತ್ತಿದ್ದರು. ಊರಿನಲ್ಲಿರುವ ಯಾವುದೇ ಹುಡುಗಿ ಒಂದು ತಿಂಗಳು ಮುಟ್ಟಾಗದಿದ್ದರೂ ಲೆಕ್ಕ ತೆಗೆದು, ಪ್ರಶ್ನಿಸಿ ಮುಜುಗರಕ್ಕೆ ಈಡುಮಾಡುತ್ತಿದ್ದರು. ಅದರಲ್ಲಿಯೂ ಕೆಲವರ ಬಂಡಾಯದ ಹೆಜ್ಜೆಗಳನ್ನು ನೀಲಿ ಗುರುತಿಸಿದ್ದಳು. ಅತ್ತೆಯೊಂದಿಗೆ ದನ ಮೇಯಿಸಲು ಗುಡ್ಡಕ್ಕೆ ಹೋದ ಒಂದು ದಿನ ನೀಲಿ ಅತ್ತೆ ಮುಟ್ಟೆಂಬುದನ್ನು ಮರೆತು ಅವಳನ್ನು ಮುಟ್ಟಿಬಿಟ್ಟಿದ್ದಳು. ನೀಲಿಯನ್ನು ಗದರಿದ ಅತ್ತೆ, “ಮನೆಗೋಗಿ ನನ್ನ ಮುಟ್ದೆ ಅಂತ ಹೇಳಬೇಡ ಕೂಸೆ. ಮೊದಲೇ ನಿಂಗೆ ಹಸಿವೆಯಾಗಿದೆ. ಸ್ನಾನ ಮಾಡಿ ಬರದೇ ಊಟವನ್ನೂ ಕೊಡೋದಿಲ್ಲ ಮತ್ತೆ. ನಂಗೂ ಹಸಿವೆಯಾಗಿದೆ. ನಿನ್ನ ಬಟ್ಟೆಯೆಲ್ಲ ತೊಳೆಯಲು ನನಗಂತೂ ಸಾಧ್ಯವಿಲ್ಲ.” ಎಂದಿದ್ದಳು. ನೀಲಿ ಅತ್ತೆಗೆ ಹೆದರಿ ಒಪ್ಪಿದ್ದಳಾದರೂ ಮನೆಯೊಳಗೆ ಹೋಗುವಾಗ ಒಂದು ರೀತಿಯ ಅಳುಕಾಗಿತ್ತು. ಇಂದು ಬಿಳಿಯಂಗಿಯ ಮೇಡಂ ಎಲ್ಲವನ್ನೂ ವಿವರಿಸಿದ ಮೇಲೆ ಮನಸ್ಸೆಲ್ಲ ನಿರಾಳವಾಗಿತ್ತು.

ಅಂದಿನಿಂದ ನೀಲಿ ಹೆಂಗಸರು ಹೇಳುವ ಕತೆಗಳನ್ನೆಲ್ಲ ಪಕ್ಕದಲ್ಲಿಯೇ ನಿಂತು ಆಲಿಸತೊಡಗಿದಳು. ತಿಂಗಳ ದಿನಗಳಲ್ಲಿ ದೇಹದಿಂದ ಹೋಗುವ ರಕ್ತ ಕೆಟ್ಟ ರಕ್ತವೆಂದೂ, ಅದು ದೇಹದಲ್ಲಿಯೇ ಉಳಿದರೆ ನಂಜಾಗುವುದೆಂದೂ ಅವರೆಲ್ಲ ತಿಳಿದಿದ್ದರು. ಆ ದಿನಗಳಲ್ಲಿ ವೈದ್ಯರು ನೀಡಿದ ಎಲ್ಲ ರೀತಿಯ ಟಾನಿಕ್‌ಗಳನ್ನೂ ನಿಲ್ಲಿಸಿಬಿಡುತ್ತಿದ್ದರು. ಮುಟ್ಟಿನ ದಿನಗಳಲ್ಲಿ ಬಳಸುವ ಬಟ್ಟೆಗಳನ್ನು ಗಂಡಸರಿಗೆ ಕಾಣದಂತೆ ಹಾಸಿಗೆಯಡಿಯಲ್ಲಿ, ಬಚ್ಚಲ ಗೋಡೆಯ ಹಿಂಭಾಗದಲ್ಲಿ ಒಣಗಿಸುತ್ತಿದ್ದರು. ಆ ದಿನಗಳಲ್ಲಿ ಬಚ್ಚಲಿಗೂ ಪ್ರವೇಶವಿಲ್ಲದ್ದರಿಂದ ಸ್ನಾನವಂತೂ ಇರಲೇ ಇಲ್ಲ. ಸಂಜೆಗತ್ತಲಿನಲ್ಲಿ ಹೊಳೆಗೆ ಹೋಗಿ ತಮ್ಮ ರಕ್ತದ ಬಟ್ಟೆಗಳನ್ನು ಗುಟ್ಟಾಗಿ ತೊಳೆದು ಬರುತ್ತಿದ್ದರು. ಹೊಳೆಯು ಇಲ್ಲದ ಊರುಗಳಲ್ಲಿ ಅವುಗಳನ್ನು ತೊಳೆಯಲೆಂದೇ ಊರಿನ ಹೊರಗೆ ಗುಂಡಿಯೊಂದನ್ನು ತೋಡಲಾಗುತ್ತಿತ್ತು. ಮೂತ್ರ ವಿಸರ್ಜನೆಗೂ ಅದೇ ಸ್ಥಳವನ್ನು ಬಳಸಬೇಕಿತ್ತು. ಕತ್ತಲಾದ ಮೇಲೆ ಅಷ್ಟು ದೂರದ ಗುಂಡಿಯವರೆಗೆ ಹೋಗುವ ಉಸಾಬರಿ ಬೇಡವೆಂದು ಅದೆಷ್ಟೋ ಹೆಣ್ಣುಮಕ್ಕಳು ಸಂಜೆಯಾದ ಮೇಲೆ ನೀರನ್ನೇ ಕುಡಿಯದೇ ದಿನ ಕಳೆಯುತ್ತಿದ್ದರು. ಅದೇ ರಕ್ತ ಮಾಂಸದ ಮಡುವಿನಲ್ಲಿ ಪುಟ್ಟ ಮಗುವೊಂದು ಬೆಳೆಯುವ ಕೌತುಕವನ್ನು ತರಬೇತಿಯಲ್ಲಿ ಕೇಳಿದ ಮೇಲೆ ನೀಲಿಗೆ ಇವರು ಹೇಳುವುದೆಲ್ಲವೂ ಅಸತ್ಯವೆನಿಸತೊಡಗಿತ್ತು. ಅದನ್ನು ಅವಳು ಹೇಳಿದಾಗಲೆಲ್ಲ, “ಪುಸ್ತಕದ ಬದನೆಕಾಯಿ ಕೆಲಸಕ್ಕೆ ಬರೋದಿಲ್ಲ ಕೂಸೆ. ಅವರಿಗೇನು ದೇವ್ರಾ, ದಿಂಡ್ರಾ? ಅವರು ಹೇಳ್ತಾರಂತ ಮೈಲಿಗೆ ಮಾಡಿದ್ರೆ ಊರಿನ ದೇವತೆಗಳು ಮುನಿಸ್ಕೋತವೆ. ಮುಟ್ಟಾದ ಬಟ್ಟೇನಾ ಸ್ನಾನ ಮಾಡೋ ದಿನ ನೆಲದಲ್ಲಿ ಯಾರೂ ಮುಟ್ಟದಂತೆ ಹುಗೀಬೇಕು. ಎಲ್ಲಿಯಾದರೂ ಹರಿದಾಡೋ ನಾಗದೇವತೆಗಳು ಅವುಗಳನ್ನು ನೆಕ್ಕಿದರೆ ನಾಗಶಾಪ ಬರ್ತದೆ ಗೊತ್ತಾ?” ಎಂದು ನೀಲಿಯನ್ನೇ ಹೆದರಿಸಲು ಬರುತ್ತಿದ್ದರು.

ಇವರೆಲ್ಲರ ಪುರಾಣಗಳಿಂಸ ಬೇಸತ್ತ ನೀಲಿ ಊರಿನ ಸಾಕ್ಷಿಪ್ರಜ್ಞೆಯಂತಿದ್ದ ನಾಗಜ್ಜಿಯಲ್ಲಿ ಇದರ ಬಗ್ಗೆ ಕೇಳಬೇಕೆಂದುಕೊಂಡು ಅವಳನ್ನು ಹುಡುಕಿ ಹೊರಟಳು. ಇವಳ ಪ್ರಶ್ನೆಗೆ ಬೊಚ್ಚು ಬಾಯಗಲಿಸಿ ನಕ್ಕ ನಾಗಜ್ಜಿ, “ಮುಟ್ಟು, ಕಿಟ್ಟು ಎಲ್ಲ ನಮ್ಮಂತ ಹುಲುಮನುಷಾರಿಗೆ ಮಗಳೇ. ನಮ್ಮೂರ ದೇವಿಯರು ಮುಟ್ಟಾದಾರೆ? ಅವರ ಕಾಲದಲ್ಲೆಲ್ಲ ಗಂಡಸರೇ ಮುಟ್ಟಾಗತಿದ್ರಂತೆ ಕಾಣು. ಮತ್ತೆ ಈ ಕಾಲಿನ ಕಿಬ್ಬೊಟ್ಟೆ ಅದೆಯಲ್ಲೆ, ಅದರಲ್ಲೇ ರಕ್ತ ಹೊರಬರೋದಂತೆ. ಕಾಲಿಗೊಂದು ಬಟ್ಟೆ ಪಟ್ಟಿ ಕಟಗೊಂಡು ಮೂರು ದಿನ ಕಳೀತಿದ್ರಂತೆ. ಒಂದಿನ ಈ ನಮ್ಮ ಹೆಂಗಸ್ರು ಮುಟ್ಟಾದ ಗಂಡಸರನ್ನ ನೋಡಿ ನಕ್ಕೇಬಿಟ್ರಂತೆ. ಅವರಿಗೂ ಭಾಳ ಬೇಜಾರಾಗಿ ಊರ ದೇವಿ ಹತ್ರ ಹೋಗಿ ದೂರು ಹೇಳಿದ್ರಂತೆ. ಊರದೇವಿಗೂ ಈ ಹೆಂಗುಸ್ರದ್ದೇ ತಪ್ಪು ಅಂತ ಅನಿಸಿ, ಇನ್ಮುಂದೆ ಮುಟ್ಟು ಹೆಂಗಸರಿಗೆ ಬರ್ಲಿ ಅಂತ ಸಾಪ ಕೊಟ್ಳಂತೆ ಕಾಣು. ಈ ಹೆಂಗಸ್ರು ಆಗ ದೇವಿ ಗುಡೀಗೋಗಿ ತಾಯೇ, ಹೀಂಗೆ ಕಾಲಿಗೆಲ್ಲ ಪಟ್ಟಿ ಕಟಗೊಂಡು ಎಲ್ಲರೆದುರು ಮುಟ್ಟಂತ ಗೊತ್ತು ಮಾಡ್ಕೊಳ್ಳೋಕೆ ನಮ್ಮಿಂದಾಗಲ್ಲ. ಅದನ್ನಾರ ಗುಟ್ಟಾಗಿಡೇ ಅಂದ್ರಂತೆ. ಅಲ್ಲಿಂದ ಮುಂದೆ ಮುಟ್ಟು ಅಂದ್ರೆ ಹೆಂಗಸಿನ ಗುಟ್ಟು ಕಾಣು. ಹೇಳದ ಹೊರತು ಬ್ಯಾರೆದೋರಿಗೆ ಗೊತ್ತೇ ಆಗೂದಿಲ್ಲ.” ಎಂದು ಬೇರೆಯೇ ಕತೆಯನ್ನು ಹೇಳಿದಳು. “ಆದರೆ ನೀನೇ ಹೇಳು ನಾಗಜ್ಜಿ, ಅದೆಷ್ಟೊಂದು ಹೆರಿಗೆ ಮಾಡಿಸಿದ್ದಿ ನೀನು. ಮುಟ್ಟಿನ ರಕ್ತದಲ್ಲೇ ಮಗು ಹುಟ್ಟೋದಲ್ವಾ? ಅದನ್ನೆಲ್ಲ ಮೈಲಿಗೆ ಅದೂ, ಇದೂ ಅಂತ ಆಚರಣೆ ಮಾಡೋದು ಎಷ್ಟು ಸರಿ?” ಎಂದು ಮರುಪ್ರಶ್ನೆ ಹಾಕಿದ್ದಳು. “ಮನುಷನ ಜೀವ ಅಂದ್ರೆ ಮೂಳೆ ಮಾಂಸದ ತಡಕೆ ನೀಲಿ. ಹೊರಚೆಲ್ಲಿದ್ರೆ ಒಂದು ಸಾವು, ಒಳಗಿದ್ರೆ ಒಂದು ಹುಟ್ಟು ಅಷ್ಟೇಯಾ. ಇಲ್ಲಿ ಚೆಲ್ಲಿದ್ದಕ್ಕೂ ಒಂದು ಸಾಸ್ತ್ರ, ನಿಂತಿದ್ದಕ್ಕೂ ಒಂದು ಸಾಸ್ತ್ರ. ನೀನು ಸಣ್ಣೋಳು ನೀಲಿ, ಎಲ್ಲಾನೂ ಬಿಡಿಸಿ ಹೇಳೂಕಾಗೂದಿಲ್ಲ. ಹೆಂಗಸರಿಗೆ ಸುಡುಗಾಡು ಸುಂಠಿ ನೂರು ತಾಪತ್ರಯಗಳಿರ್ತವೆ. ಈ ಮೈಲಿಗೆ ಗಿಯ್ಲಿಗೆ ಎಲ್ಲ ಅವರನ್ನು ಕಾಪಾಡಿಕ್ಲೆ ಅಂತಾನೇ ಮಾಡಿರೋದು. ಹೊಸಕಾಲದಲ್ಲಿ ಎಲ್ಲ ಉಲ್ಟಾ ಪಲ್ಟಾ ಆಗದೆ. ನಾವೆಲ್ಲ ಸಣ್ಣೋರಿರುವಾಗ ಮುಟ್ಟಾದೋರು ಮರಗಿಡಾ ಕಡಿಬಾರದು ಅನ್ನೋರು. ಈಗ್ನೋಡು, ಮುಟ್ಟಾದೋರ ಹತ್ರ ಮಣಗಟ್ಲೆ ಸೌದಿ ಹೊರಸ್ತ್ರು. ಈ ಸಾಸ್ತ್ರ, ಸಂಪ್ರದಾಯವಾ ಮಾಡಿರೋದೇ ಒಂದಕ್ಕೆ, ಆಗ್ತಿರೋದೇ ಇನ್ನೊಂದು.” ಎನ್ನುತ್ತಾ ಮಾತು ಮುಗಿಸಿದಳು.

ಯೋಚನೆಗಳ ಮಹಾಪೂರದಲ್ಲಿ ಕೊಚ್ಚಿಹೋಗುವ ದಿನಗಳಲ್ಲೇ ನೀಲಿಯ ಅಂಗಿ ಕೆಂಪಾಯಿತು. ಥಟ್ಟನೆ ಬಚ್ಚಲಿಗೆ ಹೋಗಿ ತೊಳೆದು ಬಂದವಳೇ ಅಮ್ಮನಲ್ಲಿ ಇದನ್ನು ಹೇಳದಿದ್ದರೆ ಹೇಗೆ? ಎಂದು ಆಲೋಚಿಸಿದಳು. ಆದರೆ ಸುರಿಯುವ ಈ ರಕ್ತದ ಧಾರೆಯನ್ನು ಯಾರಿಗೂ ಹೇಳದೇ ಸಂಭಾಳಿಸುವ ಧೈರ್ಯ ಬರಲಿಲ್ಲ. ಮೆಲ್ಲನೆ ಅಮ್ಮನನ್ನು ಮನೆಯ ಹೊರಗೆ ಕರೆದು ವಿಷಯ ತಿಳಿಸಿದಳು. ಆಗಿನಿಂದ ಬಚ್ಚಲಲ್ಲಿ ಅಡಗಿ ಅಂಗಿಯೆಲ್ಲ ಒದ್ದೆ ಮಾಡಿ ಬಂದಾಗಲೇ ತನಗೆ ವಿಷಯ ತಿಳಿದಿತ್ತು ಎಂದ ಅಮ್ಮ ಹಂಡೆಯ ನೀರನ್ನೆಲ್ಲ ಖಾಲಿಮಾಡಿ ಬಚ್ಚಲನ್ನು ಮಡಿಗೊಳಿಸಿದಳು. ಇದೊಂದು ದಿನ ಶಾಲೆಗೆ ರಜೆಮಾಡುವಂತೆ ತಿಳಿಸಿದರೂ ನೀಲಿ ಹೋಗಿಯೇ ಹೋಗುವೆನೆಂದು ಹಠಮಾಡಿ ಹೊರಟಳು. ಅದು ಹೇಗೋ ಅವಳು ಮುಟ್ಟಾದ ವಿಷಯ ಹೊಳೆಸಾಲಿನ ತುಂಬೆಲ್ಲ ಹರಡಿಬಿಟ್ಟಿತ್ತು. ದಾರಿಯುದ್ದಕ್ಕೂ ಹೆಂಗಸರು ಕರೆಕರೆದು ಮೊದಲ ಸಲ ಮುಟ್ಟಾದಾಗ ಸಾಲಿಗೆಲ್ಲ ಹೋಗೂಕಾಗ್ವೆ ಎಂದು ಬುದ್ದಿಮಾತು ಹೇಳಿದರು. ಇವಳ ಜತೆಯಲ್ಲಿ ನಡೆಯುವ ಗೆಳತಿಯರು ಮೈ ಕೈ ತಾಗಿಸಿಕೊಳ್ಳದೇ ದೂರದೂರವೇ ನಡೆಯುವಾಗ ನೀಲಿಗೆ ಅಳುವೇ ಬಂದಂತಾಗಿತ್ತು. “ನಾ ಹೇಳದಿದ್ರೆ ನಿಮಗೆಲ್ಲ ನಾ ಮುಟ್ಟು ಅಂತ ಗೊತ್ತಾಗ್ತಾನೇ ಇರಲಿಲ್ಲ. ದಿನಾ ಶಾಲೇಲಿ ಅದೆಷ್ಟು ಹುಡುಗಿರು ಮುಟ್ಟಾಗಿ ಬರ್ತಾರೋ ಗೊತ್ತಿದ್ಯಾ?” ಎಂದು ಅವರನ್ನು ತಿದ್ದಲು ನೋಡಿದಳು. ಅದಕ್ಕವರು ಜಗ್ಗದೇ, “ಗೊತ್ತಾಗದಿದ್ರೆ ದೋಷ ಇಲ್ಲಾಂತ ನಮ್ಮಜ್ಜಿ ಹೇಳಿದಾರೆ. ಗೊತ್ತಾಗಿಯೂ ಮೈಲಿಗೆಯಾದ್ರೆ ಅದು ನಮ್ಮ ತಪ್ಪು.” ಎಂದು ಬೇರೆಯದೇ ವಾದ ಹೂಡಿದರು. ಬಸ್ ಹತ್ತಿದಾಗಲೂ ತನ್ನ ಸೀಟಿನಲ್ಲಿ ಪರಚಯದವರ‍್ಯಾರೂ ಕುಳಿತುಕೊಳ್ಳದಿದ್ದಾಗ ನೀಲಿ ಈ ಹುಡುಗಿಯರೆಲ್ಲ ಇಡಿಯ ಶಾಲೆಗೆ ಈ ವಿಷಯವನ್ನು ಡಂಗೂರ ಸಾರದಿದ್ದರೆ ಸಾಕೆಂದುಕೊಂಡಳು.

ಬಸ್ ಇಳಿದು ಶಾಲೆಯತ್ತ ನಡೆಯುತ್ತಿದ್ದಂತೆ ಎಲ್ಲರಿಗೂ ಈ ವಿಷಯ ಮರೆತೇ ಹೋಗಿತ್ತು. ಕಳೆದ ತಿಂಗಳು ತರಬೇತಿಯಲ್ಲಿ ಹೇಳಿದ ವಿಚಾರಗಳೆಲ್ಲ ಮತ್ತೆ ನೆನಪಿಗೆ ಬಂದು ಎಲ್ಲರೂ ನೀಲಿಯನ್ನು ಅವರಲ್ಲಿ ಒಬ್ಬರಾಗಿಸಿಕೊಂಡರು. ಹೊಸ ಶಾಲೆಯಲ್ಲಿ ಶೌಚಾಲಯವೆಂಬ ಕಟ್ಟಡವೊಂದು ಇದ್ದಿತ್ತಾದರೂ ಅಲ್ಲಿ ಹನಿನೀರಿನ ಪಸೆಯೂ ಇರಲಿಲ್ಲ. ಶಾಲೆಯಾಚೆಗಿನ ಬಯಲಿನಲ್ಲಿ ಗಿಡಗಂಟಿಗಳ ಮರೆಯಲ್ಲಿಯೇ ದೇಹಬಾಧೆಯನ್ನು ಕಳೆಯಬೇಕಿತ್ತು. ಅದರ ಉಸಾಬರಿಯೇ ಬೇಡವೆಂದುಕೊಂಡ ನೀಲಿ ಹೊಳೆಸಾಲಿನ ಹುಡುಗಿಯರಂತೆ ನೀರು ಕುಡಿಯದೇ ಕಾಲ ತಳ್ಳಿದಳು. ಲೆಕ್ಕದ ಮಾಸ್ರ‍್ರು ಲೆಕ್ಕ ಬಿಡಿಸಲು ಬೋರ್ಡಿಗೆ ಕರೆದಾಗಲೂ ಕುಳಿತಲ್ಲಿಂದ ಏಳದೇ ಬೈಸಿಕೊಂಡಳು. ಇತಿಹಾಸದ ಅಧ್ಯಾಪಕರು, “ಇಂದೇನು ನಮ್ಮ ಪ್ರಶ್ನೆ ಪೆಟ್ಟಿಗೆ ಮೌನವಾಗಿದೆ?” ಎಂದಾಗಲೂ ತುಟಿಬಿಚ್ಚದೇ ಕುಳಿತಳು. ದಿನವೊಂದನ್ನು ಮುಗಿಸಿ ಮನೆಗೆ ಬಂದಾಗ ಅಪ್ಪ ಯಕ್ಷಗಾನ ನೋಡಲೆಂದು ಪೇಟೆಯ ಕಡೆಗೆ ಹೊರಟಿದ್ದರು. ಬರುವ ಆಸೆಯಿಂದ ಅವರನ್ನು ದಿಟ್ಟಿಸಿದಾಗ ಅಪ್ಪ, “ಹೌದಲೇ ಮಗಾ, ಒಳ್ಳೆ ಆಟ ಇರೋವಾಗಲೇ ನಿನಗೆ ಮೈಲಿಗೆ ಬರಬೇಕಾ? ನೀನು ಕೈಕಾಲು ತೊಳೆದು ತಿಂಡಿ ತಿಂದು ಮಲಗು. ನಾಳೆ ನಿನಗೆ ಹೊಸಪ್ರಸಂಗದ ಎಲ್ಲ ಕತೆ ಹೇಳುವೆ.” ಎಂದು ಸಂತೈಸಿ ಹೊರಟುಬಿಟ್ಟರು.

ಒಳಬಟ್ಟೆಗಳನ್ನೆಲ್ಲಾ ತೊಳೆಯಲೆಂದು ಅಮ್ಮನೊಂದಿಗೆ ಹೊಳೆಯಂಚಿಗೆ ಹೋದಾಗಲೇ ಅವಳಿಗೆ ಅರಿವಾಯಿತು, ಬೆಳಗಿನಿಂದ ಬಟ್ಟೆ ಬದಲಾಯಿಸದೇ ತೊಡೆಯ ಸಂಧಿಯಲ್ಲೆಲ್ಲ ಗಾಯವಾಗಿದೆಯೆಂದು. ತಣ್ಣೀರು ತಾಗುತ್ತಿದ್ದಂತೆ ಚರ‍್ರೆಂದು ಉರಿಯುವ ಗಾಯವನ್ನು ಮತ್ತಿಷ್ಟು ಬಟ್ಟೆಗಳನ್ನಿಟ್ಟು ಕೊರೆಯುವಂತೆ ಮಾಡಿ, ಒದ್ದೆಯಾದ ಬಟ್ಟೆಯನ್ನು ತೊಳೆದುಕೊಂಡು ಪೆಚ್ಚುಮುಖ ಹೊತ್ತು ಮನೆಯ ದಾರಿ ಹಿಡಿದಳು. ದಾರಿಯಲ್ಲಿ ಬರುವಾಗ ಅಮ್ಮನೊಂದಿಗೆ ಕೇಳಿದಳು, “ಇದೆಲ್ಲ ಇನ್ನೆಷ್ಟು ದಿನ ಅಮ್ಮಾ?” ಅಮ್ಮ ಅವಳನ್ನು ಸಂತೈಸುತ್ತ ನುಡಿದಳು, “ಇದಕ್ಕೆ ಕೊನೆಯುಂಟೆ ಮಗಾ? ಹೆಣ್ಣು ಜಲ್ಮ ಅಂದಮೇಲೆ ಮುಟ್ಟು, ಕಿಟ್ಟು ಎಲ್ಲ ಅನುಭವಿಸಲೇಬೇಕು.” ನೀಲಿಗೆ ಇನ್ನು ಮುಂದೆ ತಾನು ತರಗತಿಯಲ್ಲಿ ತನ್ನೊಂದಿಗೆ ಸ್ಪರ್ಧಿಸುವ ಹುಡುಗರನ್ನು ಹಿಂದೆ ಹಾಕಲಾರೆ ಅನಿಸಿಬಿಟ್ಟಿತು. ಹೊರಜಗುಲಿಯಲ್ಲಿ ಅಮ್ಮ ಬಡಿಸಿದ್ದನ್ನು ಉಣ್ಣುವಾಗ ಓರೆನೋಟ ಬೀರಿ ನಕ್ಕ ಅಣ್ಣನ ನಗೆಯನ್ನೇ ನೆಪವಾಗಿಸಿಕೊಂಡು ಜಗಳವಾಡಿ ಊಟವನ್ನು ಅರ್ಧದಲ್ಲಿಯೇ ಬಿಟ್ಟು, ಮನೆಗೆಲಸವನ್ನೂ ಮಾಡದೇ ಮುಸುಕುಹಾಕಿ ಮಲಗಿಬಿಟ್ಟಳು. ಶಾಲೆಯಲ್ಲಿ ಬಿಳಿಯುಡುಗೆಯ ಮೇಡಂ ಹೇಳಿದ್ದಕ್ಕೂ, ಮನೆಯಲ್ಲಿ ನಡೆಯುತ್ತಿರುವುದಕ್ಕೂ ತಾಳಮೇಳವಿಲ್ಲದೇ ವಿಚಾರಗಳ ಗೊಂದಲದಲ್ಲಿ ಸಿಕ್ಕಿ ನರಳಿದಳು. ಎಷ್ಟೋ ಹೊತ್ತಿಗೆ ಕಣ್ತುಂಬಾ ನಿದ್ದೆ ಆವರಿಸಿದಾಗ ಅವಳ ಕನಸಲ್ಲಿ ಬಂದ ಹೊಳೆ ಪೂರ್ತಿ ಕೆಂಪಾಗಿ ಹರಿಯುತ್ತಿತ್ತು.