ಇನ್ನೊಂದು ಪ್ರಚಲಿತ ಇದ್ದ ಗಾಳಿಮಾತು ಎಂದರೆ ಅವರು ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಬೇಕು ಅಂದರೆ ಸಿಮೆಂಟ್ ಕಾರ್ಖಾನೆಯನ್ನು ಶುರುಮಾಡುತ್ತಾರೆ, ಕಬ್ಬಿಣ ಬೇಕು ಅಂದರೆ ಕಬ್ಬಿಣ ತಯಾರಿಕೆ ಫ್ಯಾಕ್ಟರಿ ಶುರುಮಾಡ್ತಾರೆ ಎನ್ನುವಂತಹ ರೆಕ್ಕೆ ಪುಕ್ಕ ಹುಟ್ಟಿಸಿಕೊಂಡ ಸುದ್ದಿಗಳು. ಬಿಲ್ಡಿಂಗ್ ಕಟ್ಟಲು ಇಟ್ಟಿಗೆ ಬೇಕು ತಾನೇ ಇವರದ್ದು ಇಟ್ಟಿಗೆ ಉದ್ಯಮ ಇತ್ತು ಮತ್ತು ಇದರಿಂದ ಈ ಸುದ್ದಿ ಹುಟ್ಟಿತೋ ತಿಳಿಯದು. ಇದಕ್ಕೆ ಪರ್ಯಾಯವಾಗಿ ಒಂದು ಜೋಕು ಹುಟ್ಟಿತ್ತು. ರಾಮಯ್ಯ ಅವರ ಮಕ್ಕಳನ್ನು ಡಾಕ್ಟರು ಎಂಜಿನಿಯರು ಮಾಡಬೇಕು ಅವರ ಸೀಟುಗಳಿಗೆ ಕಷ್ಟ ಪಡುವಂತಹ ಪರಿಸ್ಥಿತಿ ಬಾರದಿರಲಿ ಎಂದು ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸ್ವತಃ ತೆರೆದರು ಎನ್ನುವುದು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ

ಕಳೆದ ಸಂಚಿಕೆಗೆ ಹೀಗೆ ಮುಕ್ತಾಯ ಹೇಳಿದ್ದೆ…

ರಾಮಯ್ಯ ಅವರ ಈ ವಿದ್ಯಾ ಸೌಧದಲ್ಲಿ ಈಗ ಇರುವ ಶೈಕ್ಷಣಿಕ ಸಂಸ್ಥೆಗಳು ಅಂದರೆ ಒಟ್ಟು ೨೯ ಮತ್ತು ಈ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಮುಂದಿನ ಕತೆ ಹೇಳುವ ಮುನ್ನ ಕೆಲವು ವಿಶೇಷಗಳು. ಒಬ್ಬ ವ್ಯಕ್ತಿ ಒಂದು ಜೀವಮಾನದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವೇ ಎಂದು ಆಶ್ಚರ್ಯ ಪಡುವ ಮಟ್ಟಿಗೆ ಇವರ ಸಾಧನೆ ಎದ್ದು ಕಾಣುತ್ತದೆ. ಇಡೀ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಒಬ್ಬ ವ್ಯಕ್ತಿ ಅಷ್ಟೇನೂ ಒಳ್ಳೆಯ ವಿದ್ಯಾಭ್ಯಾಸದ ಹಿನ್ನೆಲೆ ಇಲ್ಲದೆಯೂ ದೊಡ್ಡ ಹೆಸರು ಮಾಡಿರುವುದು ನಮಗೆ ಹೆಮ್ಮೆ ತರಿಸುತ್ತದೆ.

ಮತ್ತಿ ಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ. ಕರೊಡೋ ಮೇ ಏಕ್ ಅಂತಾರಲ್ಲಾ ಹಾಗೆ…. ಇದು ಸೌ ಕರೊಡೋ ಮೇ ಏಕ್ ಕಹಾನಿ!

ಸಪ್ನ ಬುಕ್ ಹೌಸ್‌ನ ನೀತಿನ ಷಾ ಅವರು ಮೊದಲು ರೈಲಿನ ಪೋರ್ಟರ್ ಆಗಿದ್ದರು ಮತ್ತು ಪುಸ್ತಕ ಮಾರಾಟ ಹಾಗೂ ಪ್ರಕಾಶನ ಸಂಸ್ಥೆ ಹುಟ್ಟುಹಾಕಿ ಈಗ ಹತ್ತೋ ಹದಿನೈ ದೋ ಮಳಿಗೆಗಳನ್ನು ಹೊಂದಿದ್ದಾರೆ ಎಂದು ಓದಿದ್ದೆ. ಆದರೆ ಅಲ್ಲಿನ ಕತೆಗೂ ಇಲ್ಲಿನದಕ್ಕೂ ಅಜಗಜಾಂತರ.

ಈಗ ಮುಂದೆ….
ರಾಮಯ್ಯ ಆಸ್ಪತ್ರೆಯ ರಸ್ತೆ ಮುಂದುವರೆದು ನೇರ ಹೋದರೆ ಎಡಭಾಗದಲ್ಲಿ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ಕೇಂದ್ರ ಸರ್ಕಾರದ ಪರೀಕ್ಷಾಲಯ. ೧೯೬೦ ರಲ್ಲಿ ಇದರ ಸ್ಥಾಪನೆ. ವಿದ್ಯುಚ್ಛಕ್ತಿ ಮತ್ತು ವಿದ್ಯುತ್ ಉಪಕರಣಗಳ ಬಗ್ಗೆ ಈ ಸಂಸ್ಥೆ ಸಂಶೋಧನೆ ಮಾಡುತ್ತದೆ. ಇದು ನಿರ್ಮಿತವಾಗಿರುವುದು ಸರ್ಕಾರದ ಜಾಗ. ವಿದ್ಯುತ್ ಬಗ್ಗೆ ಇದರ ಸಂಶೋಧನೆ. ತೊಂಬತ್ತರ ದಶಕದ ಅಂತ್ಯದಲ್ಲಿ ಇದರ ಆವರಣದಲ್ಲಿಯೇ ಒಂದು ಅಯ್ಯಪ್ಪನ ದೇವಸ್ಥಾನ ಆರಂಭವಾಯಿತು. ಮುಖ್ಯ ರಸ್ತೆಯ ಕಾಂಪೌಂಡ್ ಕೆಡವಿ ದೇವಸ್ಥಾನಕ್ಕೆ ಪ್ರವೇಶ ಮಾಡಲು ದಾರಿ ಮಾಡಲಾಯಿತು. ಹೇಳಿಕೇಳಿ ಅಯ್ಯಪ್ಪ ದೇವರು ಕೇರಳದ್ದು. ಕೇರಳದ ಕೆಲಸಗಾರರು ತಮ್ಮ ಆಡಳಿತವರ್ಗದ ಮನ ಒಲಿಸಿ ಅಲ್ಲೊಂದು ದೇವಸ್ಥಾನ ಕಟ್ಟಿದರು ಎನ್ನುವುದು ಆಗ ನಮಗೆ (ನಮಗೆ ಎಂದು ಒತ್ತಿ ಹೇಳಿದೆ, ಕಾರಣ ನಾನು ಒಂದು ಸಾರ್ವಜನಿಕ ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ಇಂತಹ ನಡಾವಳಿ ನಮಗೆ ಸಂಪೂರ್ಣ ಹೊಚ್ಚ ಹೊಸದು. ನಾವು ಕಲ್ಪಿಸಲು ಸಹ ಆಗದ್ದು) ಒಂದು ರೀತಿಯ ಆಶ್ಚರ್ಯ ಹಾಗೂ ಭಯ ಮೂಡಿಸಿತ್ತು. ಆಶ್ಚರ್ಯ ಯಾಕೆ ಅಂದರೆ ಸರ್ಕಾರದ ಜಾಗವನ್ನು ಹೀಗೆ ಒಂದು ದೇವಸ್ಥಾನ ನಿರ್ಮಿಸಲು ಉಪಯೋಗಿಸಿಕೊಂಡಿದ್ದು ಮತ್ತು ಇದರ ನಿರ್ಮಾಣ ಮಾಡಲು ಆಡಳಿತ ವರ್ಗದ ಅನುಮತಿ ಹೇಗೆ ಪಡೆದರು ಎಂದು. ಭಯ ಯಾಕೆ ಅಂದರೆ ನಾಳೆ ಅಂದರೆ ಮುಂದೆ ಹತ್ತಾರು ಕೋಮಿನ ಲೀಡರ್‌ಗಳು ಸೇರಿ ಅಲ್ಲಿ ಬೇರೆ ಬೇರೆ ದೇವಸ್ಥಾನಗಳು ಬಂದರೆ ಗತಿ ಏನು ಅಂತ. ಹೇಗಿದ್ದರೂ ಬೇಕಾದಷ್ಟು ಜಾಗ ಇದೆ ಅಂತ ಅಯ್ಯಪ್ಪ ದೇವರ ಪಕ್ಕದಲ್ಲಿ ಒಂದು ರಾಘವೇಂದ್ರ ಸ್ವಾಮಿ, ಒಂದು ಆಂಜನೇಯ ಸ್ವಾಮಿ, ಒಂದು ರಾಮ ದೇವರು, ಒಂದು ಕೃಷ್ಣನ ದೇವಾಲಯ, ಒಂದು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಒಂದು ಮಸೀದಿ, ಒಂದು ಚರ್ಚು….. ಹೀಗೆ ಬಂದರೆ CPRI ರಿಸರ್ಚ್ ಇನ್ಸ್ಟಿಟ್ಯೂಟ್ ಆಗಿರುವ ಬದಲು ಸರ್ವ ದೇವಾಲಯಗಳ ಕಾಂಪ್ಲೆಕ್ಸ್ ಆಗಿಬಿಡಬಹುದೇ…? ಸರ್ವ ಧರ್ಮಗಳ ಶಾಂತಿಯ ತೋಟ ಆಗಬಹುದೇ…? ಅಂತ.

ಸದ್ಯ ಹಾಗಾಗಲಿಲ್ಲ. ಅಯ್ಯಪ್ಪ ದೇವಸ್ಥಾನ ಅಭಿವೃದ್ಧಿ ಹೊಂದಿ ಹೊಂದಿ ಹೊಂದಿ ಈಗ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತಿದೆ! ಸದ್ಯಕ್ಕೆ ಬೇರೆ ದೇವರುಗಳ ಭಕ್ತರುಗಳು ತಮಗೂ ಒಂದು ದೇವಸ್ಥಾನ ಕಟ್ಟಲು ಅವಕಾಶ ಕೊಡಿ ಅಂತ ಧರಣಿ, ಮುಷ್ಕರ ಹೂಡಿಲ್ಲ. ಇದು ಒಂದು ಸಮಾಧಾನದ ಸಂಗತಿ.

ಈ ಸಿ ಪಿ ಆರ್ ಐ ಅಯ್ಯಪ್ಪ ದೇವಸ್ಥಾನದ ಹತ್ತಿರ ಅಂದರೆ ಸುಮಾರು ಐದು ಕಿಮೀ ದೂರದಲ್ಲಿ ಮತ್ತೊಂದು ಅಯ್ಯಪ್ಪನ ದೇವಸ್ಥಾನ ಇದೆ. ಕೆಲವು ಹಳಬರ ಪ್ರಕಾರ ಇದು ಬೆಂಗಳೂರಿನ ಮೊಟ್ಟ ಮೊದಲ ಅಯ್ಯಪ್ಪ ದೇವಸ್ಥಾನ. ಇದೂ ಸಹ ಕೇರಳದ ಭಕ್ತರೇ ನಿರ್ಮಿಸಿದ್ದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ.

ಎಂ ಎಸ್ ರಾಮಯ್ಯ ಕಾಲೇಜಿಗೆ ಯಶವಂತಪುರ ಟೋಲ್‌ಗೇಟ್ ಕಡೆಯಿಂದ ಬಂದು ಸುಬೇದಾರ್ ಪಾಳ್ಯ ಆದಮೇಲೆ ರಸ್ತೆ ಕವಲು, ನೇರ ಹೋಗಿ ಕಾಲೇಜು ಒಳಗೆ ಸೇರಿದ್ದೆವು. ಬಲಕ್ಕೆ ತಿರುಗಿದರೆ ನಿಮಗೆ ಮತ್ತಿಕೆರೆ, ಎಚ್ ಎಂ ಟಿ ರಸ್ತೆ. ಅರವತ್ತರ ದಶಕದ ಕೊನೆಯಲ್ಲಿ ಇದು ಜನನಿಬಿಡ ಸ್ಥಳ ಅಲ್ಲ. ಇನ್ನೂ ಹೊಲಗಳು ಇದ್ದವು. ಅದಕ್ಕೂ ಮೊದಲು ಅಂದರೆ ಕೆಲವು ದಶಕಗಳ ಹಿಂದೆ ಅಲ್ಲಿ ಒಂದು ಕೆರೆ ಇತ್ತು ಅಂತ ಅವತ್ತಿನ ಅಜ್ಜಂದಿರು ಹೇಳುತ್ತಿದ್ದರು. ಇದಕ್ಕೆ ಪೂರಕವಾಗಿ ಮಳೆ ಬಂದಾಗ ರಸ್ತೆಯ ಎರಡೂ ಪಕ್ಕ ಒಂದೆರೆಡು ಅಡಿ ನೀರು ನಿಲ್ಲುತ್ತಿತ್ತು. ಅದರಿಂದಾಗಿ ಮತ್ತಿಕೆರೆ ಎನ್ನುವ ಹೆಸರು ಬಂದಿತ್ತು. ಎಪ್ಪತ್ತರ ದಶಕದ ಆರಂಭದಲ್ಲಿ ಮತ್ತಿಕೆರೆ ದಾಟಿ ಅಲ್ಲಿದ್ದ ರೈಲ್ವೆ ಲೆವೆಲ್ ಕ್ರಾಸಿಂಗ್ ದಾಟಿ ಕೊಂಚ ಮುಂದೆ ಬಂದರೆ ಎಡಕ್ಕೆ ಗೋಕುಲ. ಅದರ ಎದುರಿನ ಜಾಗ ಸುಂದರ ನಗರ. ಸುಂದರ ನಗರ ರಾಮಯ್ಯ ಅವರು ಮಾಡಿದ್ದರು. ಅಲ್ಲಿನ ನಿವೇಶನಗಳನ್ನು ಎರಡು ಮೂರು ನೂರು ರೂಪಾಯಿಗೆ ಕಂತಿನ ಲೆಕ್ಕದಲ್ಲಿ ಮಾರಾಟ ಮಾಡಿದರು. bel ಮತ್ತು hmt ಯ ಸುಮಾರು ಉದ್ಯೋಗಿಗಳು ಸೈಟ್ ಕೊಂಡು ಮನೆ ಕಟ್ಟಿಸಿಕೊಂಡರು. ರಾಮಯ್ಯ ಮೆಡಿಕಲ್ ಕಾಲೇಜಿನ ಪಕ್ಕದಲ್ಲಿ ಎಂ ಎಸ್ ರಾಮಯ್ಯ ನಗರ ಹುಟ್ಟಿತು. ಅಲ್ಲಿಯೂ ಸಹ ನಿವೇಶನ ಕಂತಿನ ಲೆಕ್ಕದಲ್ಲಿ ನೌಕರರು ಕೊಂಡರು. ಈಗಲೂ ಅಲ್ಲಿ ಅಂದರೆ ಸುಂದರ ನಗರ ಮತ್ತು ಎಂ ಎಸ್ ರಾಮಯ್ಯ ನಗರದಲ್ಲಿ bel ಹಾಗೂ hmt ಯ ನಿವೃತ್ತ ನೌಕರರನ್ನು ಕಾಣಬಹುದು. ಅವರ ಮುಖದಲ್ಲಿ ಸಂತೃಪ್ತಿ ಎದ್ದು ಕಾಣುತ್ತದೆ.

IslBG

ಎಡಭಾಗದಲ್ಲಿ ಗೋಕುಲ ಅಂತ ಹೇಳಿದೆ ಅಲ್ಲವೇ? ಈ ಗೋಕುಲದ ಹಿನ್ನೆಲೆಗೆ ಈಗ..

ರಾಮಯ್ಯ ಅವರ ತಂದೆ ಸಂಪಂಗಪ್ಪ ಅವರು ಪೂರ್ಣಾಪುರದ ಮನೆಗೆ ಗಾರೆ ಕೆಲಸ ಮಾಡಿದ್ದರು. ಅದರ ಮಾಲೀಕ ಯುರೋಪಿಯನ್. ಹೆಸರು ಮಥಾಯ್ಸ್, ಅದೇ ಬಂಗಲೆಯಲ್ಲಿ ಈತನ ವಾಸ. ಸುತ್ತಲೂ ಇದ್ದ ಅರಣ್ಯ ಪ್ರದೇಶದಿಂದ ಬಂದ ಹುಲಿಯೊಂದು ಈ ಜಾಗದಲ್ಲಿ ಅಡಗಿರುತ್ತೆ. ಮಥಾಯ್ಸ್ ಅವನ ಕೋವಿಯಿಂದ ಗುಂಡು ಹಾರಿಸಿದ ಮತ್ತು ಗುರಿ ತಪ್ಪಿತು ಮತ್ತು ಹುಲಿ ಇವನ ಮೇಲೆರಗಿ ಇವನ ಪ್ರಾಣ ತೆಗೆಯಿತು. ಹುಲಿ ಇವನ ಪ್ರಾಣ ತೆಗೆದ ನಂತರ ಮನೆ ಪಾಳು ಬಿದ್ದಿತ್ತು. ಅದು ಮಾರಾಟಕ್ಕೆ ಇದೆ ಅಂತ ಗೊತ್ತಾದಾಗ ರಾಮಯ್ಯ ಅದನ್ನು ಕೊಂಡುಕೊಂಡರು. ಹದಿನೈದು ಎಕರೆಯ ಈ ಜಾಗ ತೋಟ ಮತ್ತು ಬೆಳೆದ ಮರಗಳ ಜತೆ ಇವರ ಸುಪರ್ದಿಗೆ ಬಂತು. ಅಲ್ಲಿ ಪಶು ಸಂಗೋಪನೆಗೆ ಹೇಳಿ ಮಾಡಿಸಿದ ಜಾಗ. ಅದರಿಂದ ಪಶು ಸಂಗೋಪನೆ ಶುರು ಮಾಡಿದರು. ಪಶು ಸಂಗೋಪನೆ ಸ್ಥಳ ಆದ್ದರಿಂದ ಅದಕ್ಕೆ ಗೋಕುಲ ಅಂತ ಹೆಸರಿಟ್ಟರು. ಇದೇ ಹೆಸರು ಈಗಲೂ ಉಳಿದುಕೊಂಡು ಹಳೇ ಹೆಸರು ಪೂರ್ಣಪುರ ಸಂಪೂರ್ಣ ಮರೆಯಾಗಿದೆ. ಈ ಗೋಕುಲ ಹೆಸರು ಅರವತ್ತರ ದಶಕದ ಆರಂಭದ ಸುಮಾರಿಗೆ ಈ ಪ್ರದೇಶಕ್ಕೆ ಬಂತು. ಇದರ ಮುಂದಿನ ರಸ್ತೆ hmt ಕಾರ್ಖಾನೆಗೆ ಸಂಪರ್ಕ ಆದರೆ ಕೊಂಚ ಬಲಕ್ಕೆ ಹೊರಳಿದರೆ bel ಕಾರ್ಖಾನೆ. ಈ ಎರಡೂ ಕಾರ್ಖಾನೆಗಳಿಗೆ. ಅದರ ಆರಂಭದ ದಿನಗಳಲ್ಲಿ ಮತ್ತು ಮುಂದುವರೆದ ಕೆಲವು ವರ್ಷಗಳು ಹೊರರಾಜ್ಯಗಳಿಂದ ಕಾರ್ಮಿಕರು ಬಂದು ಸೇರಿದರು. ಕೇಂದ್ರ ಸಾರ್ವಜನಿಕ ಉದ್ದಿಮೆ ಅದರಿಂದ ಅದರ ನೇಮಕಾತಿ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಹೊಣೆ ಇರದು, ನಾವೇನೂ ಮಾಡುವ ಹಾಗಿಲ್ಲ ಎಂದು ಅಂದಿನ ಸರ್ಕಾರ ತಟಸ್ಥ ಧೋರಣೆ ತಳೆಯಿತು. ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಇರಲಿ ಎನ್ನುವ ಯೋಚನೆ ಆಗಿನ್ನೂ ಹುಟ್ಟಿರಲಿಲ್ಲ. ಇದರ ಸದುಪಯೋಗ ಪಡೆದುಕೊಂಡು ಅಲ್ಲಿನ ಹೊರ ರಾಜ್ಯಗಳ ನೇಮಕಾತಿ ಅಧಿಕಾರಿಗಳು ಅವರ ಪ್ರದೇಶಗಳಿಂದ ಕೆಲಸಗಾರರನ್ನು ತಂದು ತಂದು ತುಂಬಿದರು, ಸ್ಥಳೀಯರನ್ನು ಸಂಪೂರ್ಣ ಕಡೆಗಣಿಸಲಾಯಿತು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸ್ಥಳೀಯರಿಗೆ ಕೆಲಸ ಬಾರದು, ಸೋಂಬೇರಿಗಳು ಎಂದು ಬಿಂಬಿಸಲಾಯಿತು. ಈ ಸಂಗತಿಯನ್ನು ನಮ್ಮ ಮಾಧ್ಯಮಗಳು ಹೆಚ್ಚು ಪ್ರಚಾರದಿಂದ ಮುಂದೆ ತಂದವು. ಕನ್ನಡಿಗ ಸೋಂಬೇರಿ ಎನ್ನುವ ಪ್ರಚಾರ ಈಗಲೂ ಸಹ ಮುಂದುವರೆದಿದೆ.

ಈ ಸಂಗತಿಗೆ ಮತ್ತು ಇದರಿಂದ ಆದ ಪರಿಣಾಮಗಳಿಗೆ ಮುಂದೆ ಬರುತ್ತೇನೆ. ಈ ಎರಡೂ ಕೇಂದ್ರ ಸಾರ್ವಜನಿಕ ಉದ್ದಿಮೆಗಳು ಬೆಳೆಯುತ್ತಾ ಹೋದಂತೆ ಅಲ್ಲಿನ ವರ್ಕ್ ಫೋರ್ಸ್‌ಗೆ ವಸತಿ ಸೌಕರ್ಯ ಕಲ್ಪಿಸಲು ಗೋಕುಲದಲ್ಲಿ ಸುಮಾರು ವಸತಿ ಗೃಹಗಳು ನಿರ್ಮಾಣ ಆದವು. ಅವುಗಳಲ್ಲಿ ಬಂದು ನೆಲೆಸಿ ತಮ್ಮ ಜೀವನ ಕಟ್ಟಿಕೊಂಡ ಹೊರರಾಜ್ಯಗಳಿಂದ ಬಂದ ಜನರು ಗೋಕುಲವನ್ನು ತಮ್ಮ ಬೇರು ಆಳಕ್ಕೆ ಬಿಡಲು ಅವಕಾಶ ಮಾಡಿಕೊಟ್ಟಿತು ಎಂದು ನೆನೆಯುತ್ತಾರೆ. ಈ ವಸತಿ ಗೃಹಗಳು ಒಂದು ಪುಟ್ಟ ಸಂಸಾರ ನಡೆಸಲು ಸಾಕಷ್ಟು ಸೌಕರ್ಯ ಹೊಂದಿದ್ದು ಎರಡೂ ಸಾರ್ವಜನಿಕ ಉದ್ದಿಮೆಗಳಿಗೆ ತುಂಬಾ ಹತ್ತಿರ ಇತ್ತು. ಬೈಸಿಕಲ್ ಮೇಲೋ ಅಥವಾ ಕಾಲ್ನಡಿಗೆಯಲ್ಲಿ ಸೇರುವಷ್ಟು ಹತ್ತಿರ. ಜತೆಗೆ ಬಾಡಿಗೆ ಸಹ ಅಂದಿನ ಸಂಬಳಕ್ಕೆ ಸರಿತೂಗಿಸುವಷ್ಟು. ಎರಡೂ ಕಾರ್ಖಾನೆಯ ಸುತ್ತ ಮುತ್ತ ಅಂಗಡಿ ಮುಂಗಟ್ಟುಗಳು ಇರಲಿಲ್ಲ. ತನ್ನ ಬಾಡಿಗೆದಾರರು ಇದಕ್ಕೋಸ್ಕರ ದೂರ ಹೋಗಬಾರದು ಎಂದು ಮುಖ್ಯ ರಸ್ತೆಯಲ್ಲಿ ದಿನನಿತ್ಯದ ಅವಶ್ಯಕತೆಗಳಿಗೆ ಅನುವಾಗುವ ಹಾಗೆ ಅಂಗಡಿ ಸಾಲು ಹುಟ್ಟಿದವು. ತರಕಾರಿ, ದಿನನಿತ್ಯದ ದಿನಸಿ, ಟೈಲರ್, ಬಾರ್ಬರ್, ಪುಟ್ಟ ಹೋಟೆಲ್, ಸಣ್ಣಪುಟ್ಟ ರಿಪೇರಿ ಅಂಗಡಿ, ಪುಟ್ಟ ಗ್ಯಾರೇಜು, ಸೈಕಲ್ ಶಾಪ್….. ಇವುಗಳು ಬಂದವು. ತೊಂಬತ್ತರ ದಶಕದ ಅಂತ್ಯದವರೆಗೂ ಈ ಪ್ರದೇಶ ತನ್ನ ಸೊಬಗನ್ನು ಕಾಪಾಡಿಕೊಂಡಿತ್ತು. ಅದಲ್ಲದೆ ಒಂದು ಪುಟ್ಟ ದೇವಸ್ಥಾನ ಆಗ ಶುರು ಆಗಿದ್ದು ಈಗ ನಗರದ ಒಂದು ಪ್ರತಿಷ್ಠಿತ ವೆಂಕಟೇಶ್ವರ ದೇವಾಲಯ ಎನ್ನುವ ಖ್ಯಾತಿ ಪಡೆದಿದೆ. ಇದು ಹಿಂದುಗಳಿಗಾದರೆ ಮುಸ್ಲಿಮರಿಗೆ ಒಂದು ಮಸೀದಿ ಸಹ ಇಲ್ಲಿ ಮುಖ್ಯ ರಸ್ತೆಯಲ್ಲಿದೆ. ಎಂಬತ್ತರ ದಶಕದ ಮಧ್ಯ ಭಾಗದಲ್ಲಿ ಗೋಕುಲಕ್ಕೆ ಸಾಮಾನು ಸರಂಜಾಮು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಸುತ್ತ ಮುತ್ತಲಿನ ನಿವಾಸಿಗಳು ಲಗ್ಗೆ ಇಡುತ್ತಿದ್ದರು. ಎಂಬತ್ತರ ದಶಕದ ಮಧ್ಯ ಭಾಗದಲ್ಲಿ ಸಂಜೆ ಹೊತ್ತು ಸಮೋಸ ಸವಿಯಲು ದೊಡ್ಡ ಬೊಮ್ಮಸಂದ್ರದಿಂದ ಗೋಕುಲವರೆಗೆ ಸುಮಾರು ನಾಲ್ಕು ಕಿಮೀ ನಾನು ಹೆಂಡತಿ ಮಗುವಿನ ಸಂಗಡ ಸೈಕಲ್ ಟ್ರಿಬಲ್ ರೈಡ್ ಹೊಡೆದಿದ್ದು ಇನ್ನೂ ನೆನಪಿದೆ. ಅಲ್ಲಿನ ನಿವಾಸಿಗಳ ಮನರಂಜನೆಗೆ ಎಂದೇ ಮುರಳಿ ಎನ್ನುವ ಒಂದು ಟೆಂಟ್ ಸಿನೆಮಾ ಥಿಯೇಟರ್ ಸುಮಾರು ವರ್ಷ ಇತ್ತು. ಈ ಗೋಕುಲದಲ್ಲಿಯೇ ರಾಮಯ್ಯ ಅವರ ಮನೆ ಆಗಿನಿಂದಲೂ ಇದೆ.

ರಾಮಯ್ಯ ಅವರು ತಾಯಿನಾಡು ಪತ್ರಿಕೆ ಕೊಂಡದ್ದು ಮತ್ತು ಅದರ ಮಾರನೇ ವರ್ಷ ಗೋಕುಲ ಮತ್ತು ಕೈಲಾಸ ಎನ್ನುವ ವಾರಪತ್ರಿಕೆ ಮತ್ತು ಮಾಸಪತ್ರಿಕೆ ಆರಂಭಿಸಿದ್ದು ಹೇಳಿದ್ದೆ ತಾನೇ? ಪತ್ರಿಕೆಗೆ ಗೋಕುಲ ಹೆಸರು ಈ ಗೋಕುಲ್ ಹೌಸ್ ಮೂಲ ಇರಬಹುದು. ತಾಯಿನಾಡು ಪತ್ರಿಕೆಗೆ ಖ್ಯಾತ ಚಿತ್ರ ಕಲಾವಿದ ಶ್ರೀ ರುಮಾಲೆ ಚನ್ನಬಸಪ್ಪ ಅವರು ಸಂಪಾದಕರಾಗಿದ್ದರು. ಚಂದಮಾಮ ಪತ್ರಿಕೆಯಲ್ಲಿ ಶ್ರೀ ಎಂ ಟಿ ವಿ ಆಚಾರ್ಯ ಅವರು ನಮ್ಮ ಪುರಾಣದ ಕತೆಗಳಿಗೆ ಚಿತ್ರ ಬರೆಯುತ್ತಿದ್ದರು. ಇವರಿಬ್ಬರ ವರ್ಣ ಚಿತ್ರಗಳನ್ನು ಗೋಕುಲದ ಆವರಣದಲ್ಲಿ ಬರೆಸಿದ್ದರು. ಈ ಚಿತ್ರಗಳನ್ನು ನೋಡಲು ಸುತ್ತ ಮುತ್ತಲಿನ ಜನ ಪಿಕ್ ನಿಕ್ ಬರುತ್ತಿದ್ದರು. ಎಂಬತ್ತರ ದಶಕದ ಆರಂಭದಲ್ಲಿ ಅಂದರೆ ಎಂಬತ್ತ ಎರಡರಲ್ಲಿ ನನ್ನ ವಾಸ್ತವ್ಯ ದೊಡ್ಡ ಬೊಮ್ಮಸಂದ್ರಕ್ಕೆ ಬಂತು. ಇದು ಗೋಕುಲಕ್ಕೆ ಮೂರು ನಾಲ್ಕು ಕಿಮೀ ದೂರ. ನನ್ನ ಮತ್ತು ಗೋಕುಲದ ನಂಟು ಇನ್ನೂ ಆಳವಾಯಿತು. ಒಂದು ಆಶ್ಚರ್ಯ ನನಗೆ ಆಗಾಗ ಆಗುತ್ತಾ ಇದ್ದದ್ದು ಎಂದರೆ ಗೋಕುಲದಲ್ಲಿ (ಅಂದರೆ ರಾಮಯ್ಯ ಕ್ವಾರ್ಟರ್ಸ್ ನಲ್ಲಿ)ನಾನು ಒಂದೇ ಒಂದು ಬಾರ್ ಆಗಲಿ ಸೇಂದಿ ಅಂಗಡಿ ಆಗಲಿ ನೋಡಿರಲಿಲ್ಲ. ಮಿಕ್ಕೆಲ್ಲಾ ಅಂಗಡಿಗಳು ಇದ್ದರೂ ಯಾಕೆ ಇಲ್ಲಿ ಒಂದು ಬಾರ್ ಗೆ /ಸೇಂದಿ ಅಂಗಡಿಗೆ ಸ್ಥಳ ಮಾಡಿಲ್ಲ ಇವರು.. ಮಿಕ್ಕ ಎಲ್ಲಾ ಸವಲತ್ತುಗಳ ಬಗ್ಗೆ ಯೋಚನೆ ಮಾಡಿದವರು ಅಂತ ತಲೆ ಕೆಡಿಸಿಕೊಂಡಿದ್ದೆ. ಹಾಗೆ ನೋಡಿದರೆ ಒಂದು ಬಾರ್ ಇದ್ದರೆ ನೂರು ದಿನಸಿ ಅಂಗಡಿ ಲಾಭ ಅದರಲ್ಲಿ ಬರುತ್ತೆ ಅಂತ ಕೇಳಿದ್ದೆ. ಅಲ್ಲದೆ ನನಗೆ ಕುಡಿತದ ಚಟ ಇರಲಿಲ್ಲ, ಅದರಿಂದ ಅದರ ಬಗ್ಗೆ ಅಷ್ಟು ಡೀಪ್ ಆಗಿ ಯೋಚಿಸಿರಲಿಲ್ಲ. ರಾಮಯ್ಯ ಅವರಿಗೆ ತಮ್ಮ ನಿವಾಸಿಗಳು ಕುಡಿತದ ಚಟ ಬೆಳೆಸಿಕೊಬಾರದು ಎಂದು ಬಾರ್‌ಗೆ ಈ ಸ್ಥಳದಲ್ಲಿ ಅವಕಾಶ ಕೊಟ್ಟಿರಲಿಲ್ಲ ಎಂದು ಸುಮಾರು ವರ್ಷಗಳ ತಿಳಿಯಿತು. ಅಂದ ಹಾಗೆ ರಾಮಯ್ಯ ಅವರಿಗೆ ಇದರ ಅಭ್ಯಾಸ ಇರಲಿಲ್ಲ ಎಂದು ತಿಳಿಯಿತು. ಬಹುಶಃ ಈ ಕಾರಣಕ್ಕೆ ಮತ್ತು ಕುಡಿತದಿಂದ ಸಂಸಾರ ಹಾಳು ಎನ್ನುವ ಗಾಂಧೀಜಿ ಅವರ ವಿಚಾರದ ಪ್ರಭಾವ ಇರಬಹುದು, ಗೋಕುಲದಲ್ಲಿ ಬಾರ್ ಇದ್ದಿರಲಾರದು.
ತೊಂಬತ್ತರ ದಶಕದ ಅಂಚಿನಲ್ಲಿ ಸುಂದರ ನಗರದಲ್ಲಿ ಖಾಸಗಿ ಅವರೊಬ್ಬರು ಬಾರ್ ತೆರೆದ ನೆನಪು.

ಅಲ್ಲಿದ್ದ ಒಂದು ಟೆಂಟ್ ಸಿನಿಮಾ ಥಿಯೇಟರ್ ಬಗ್ಗೆ ಹೇಳಿದೆ ತಾನೇ? ಅದರ ಪಕ್ಕವೇ ಒಂದು ಪೆಟ್ರೋಲ್ ಬಂಕ್ ಸಹ ಇತ್ತು ಮತ್ತು ಅದು ಈಗಲೂ ಇದೆ, ಜತೆಗೆ ಮತ್ತೊಂದು ಬಂದಿದೆ. ಗೋಕುಲದಲ್ಲಿ ಒಂದು ಮದುವೆ ಛತ್ರ ಸಹ ಸುತ್ತಲಿನವರ ನೆರವಿಗೆ ಇದೆ. ಅಂದರೆ ಗೋಕುಲ ಒಂದು ಸರ್ವಾನುಕೂಲ ಇರುವ ವಸತಿ ಸಮುಚ್ಚಯ ಆಗಿತ್ತು. ಈಚೆಗೆ ಅಲ್ಲಿನ ಕ್ವಾರ್ಟರ್ಸ್‌ಗಳು ನೂತನ ಬಿಲ್ಡಿಂಗ್‌ಗಳಿಗೆ ವಸತಿ ಹೋಟೆಲ್‌ಗಳಿಗೆ ದಾರಿ ಮಾಡಿಕೊಟ್ಟಿದೆಯಾದರೂ ಛತ್ರ, ದೇವಸ್ಥಾನ, ಶಾಲೆ ಮುಂತಾದವು ಇನ್ನೂ ಉಳಿದಿವೆ ಮತ್ತು ತನ್ನ ಸೇವೆ ಮುಂದುವರೆಸಿದೆ. ಇಲ್ಲಿನ ದೇವಸ್ಥಾನ ನಗರದ ಪ್ರಮುಖ ವೀಕ್ಷಣಾ ಸ್ಥಳವಾಗಿದೆ.

ಗೋಕುಲ ಮನೆಯ ಕೆಲಸ ಯಾವಾಗಲೂ ನಡೆಯುತ್ತಲೇ ಇತ್ತು. ಇದು ಪ್ರತಿ ದಿವಸ ನಾವು ಕಾರ್ಖಾನೆ ಬಸ್ಸಿನಿಂದ ಗಮನಿಸುತ್ತಾ ಇದ್ದ ಒಂದು ಅತ್ಯಂತ ಕುತೂಹಲದ ಸಂಗತಿ. ರಾಮಯ್ಯ ಈ ಮನೆ ಕೆಲಸ ಮುಗಿಸಿಬಿಟ್ಟರೆ ಅವರ ಅಂತ್ಯ ಅಂತ ಯಾರೋ ಭವಿಷ್ಯ ನುಡಿದಿದ್ದಾರೆ, ಅದರಿಂದ ಅವರು ಈ ಕೆಲಸ ಮಾಡುತ್ತಲೇ ಇರುತ್ತಾರೆ ಎನ್ನುವ ಒಂದು ಮಾತು ಜನಜನಿತವಾಗಿತ್ತು. ಇದು ಆಧಾರ ಇಲ್ಲದ್ದು ಎಂದು ಈಚೆಗೆ ತಿಳಿಯಿತು.

ಇನ್ನೊಂದು ಪ್ರಚಲಿತ ಇದ್ದ ಗಾಳಿಮಾತು ಎಂದರೆ ಅವರು ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಬೇಕು ಅಂದರೆ ಸಿಮೆಂಟ್ ಕಾರ್ಖಾನೆಯನ್ನು ಶುರುಮಾಡುತ್ತಾರೆ, ಕಬ್ಬಿಣ ಬೇಕು ಅಂದರೆ ಕಬ್ಬಿಣ ತಯಾರಿಕೆ ಫ್ಯಾಕ್ಟರಿ ಶುರುಮಾಡ್ತಾರೆ ಎನ್ನುವಂತಹ ರೆಕ್ಕೆ ಪುಕ್ಕ ಹುಟ್ಟಿಸಿಕೊಂಡ ಸುದ್ದಿಗಳು. ಬಿಲ್ಡಿಂಗ್ ಕಟ್ಟಲು ಇಟ್ಟಿಗೆ ಬೇಕು ತಾನೇ ಇವರದ್ದು ಇಟ್ಟಿಗೆ ಉದ್ಯಮ ಇತ್ತು ಮತ್ತು ಇದರಿಂದ ಈ ಸುದ್ದಿ ಹುಟ್ಟಿತೋ ತಿಳಿಯದು.

ಇದಕ್ಕೆ ಪರ್ಯಾಯವಾಗಿ ಒಂದು ಜೋಕು ಹುಟ್ಟಿತ್ತು. ಸುಮಾರು ವರ್ಷ ಇದು ಚಾಲ್ತಿಯಲ್ಲಿ ಸಹ ಇತ್ತು. ರಾಮಯ್ಯ ಅವರ ಮಕ್ಕಳನ್ನು ಡಾಕ್ಟರು ಎಂಜಿನಿಯರು ಮಾಡಬೇಕು ಅವರ ಸೀಟುಗಳಿಗೆ ಕಷ್ಟ ಪಡುವಂತಹ ಪರಿಸ್ಥಿತಿ ಬಾರದಿರಲಿ ಎಂದು ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸ್ವತಃ ತೆರೆದರು ಎನ್ನುವುದು! ಅಂದ ಹಾಗೆ ಅವರ ಮಕ್ಕಳಲ್ಲಿ ಯಾರೂ ಡಾಕ್ಟರು ಇಲ್ಲ. ಎಲ್ಲೂ ದಾಖಲು ಆಗದಿರುವ ಒಂದು ಸಂಗತಿ ಎಂದರೆ ಅವರ ಸಂಸ್ಥೆಗಳಲ್ಲಿ ಮೇಲಿನ ಹುದ್ದೆಗಳಿಗೆ ಆಯ್ಕೆ ನೇಮಕಾತಿ ಮೊದಲಾದ ಆಡಳಿತಕ್ಕೆ ಸಂಬಂಧ ಇರುವ ಚಟುವಟಿಕೆಗಳಿಂದ ಇವರು ದೂರ. ನಾಲ್ಕನೇ ದರ್ಜೆಯ ನೌಕರಿಗಳಲ್ಲಿ ಇವರು ನೇಮಕಾತಿ ವಿಷಯದಲ್ಲಿ ಭಾಗವಹಿಸುತ್ತಿದ್ದರು. ಅದಕ್ಕೆ ಕಾರಣ ನನ್ನನ್ನು ನಂಬಿ ಎಷ್ಟೋ ಜನ ಅವಿದ್ಯಾವಂತರು ಕೆಲಸ ಹುಡುಕಿಕೊಂಡು ಬರುತ್ತಾರೆ. ಅವರಿಗೂ ಉದ್ಯೋಗಾವಕಾಶ ಸಿಗಬೇಕು… ಎನ್ನುವುದು!

ತೊಂಬತ್ತರ ಕೊನೆಯಲ್ಲಿ ಅಂತ ಕಾಣಿಸುತ್ತೆ. ಬೆಂಗಳೂರಿನ ಕಂಟೋನ್ಮೆಂಟಿನ ಅಂಗಡಿಯಲ್ಲಿ ಬೋರ್ನ್ ವಿಟಾ ರೀತಿಯ ಒಂದು ಚಾಕಲೇಟು ಡ್ರಿಂಕ್ ಹುಡುಕುತ್ತಿದ್ದೆ. ಅಮೇರಿಕನ್ ಕಂಪನಿಯ ಒಂದು ಅರ್ಧ ಕೆಜಿ ಡಬ್ಬ ಐನೂರು ಚಿಲ್ರೆ ಬೆಲೆ ಇತ್ತು. ಸುಮಾರು ಹೊರದೇಶದ ಅಂದರೆ ಅಮೆರಿಕ, ಇಂಗ್ಲೆಂಡ್ ಕಂಪನಿಗಳ ತಯಾರಿಕೆ, ಎಲ್ಲವೂ ನಮ್ಮ ಜೇಬಿಗೆ ತುಸು ದುಬಾರಿ ಅನಿಸುವ ಹಾಗಿದ್ದವು. ಬೆಲೆ ನೋಡಿ ಇದು ಬೇಡ ನಮ್ಮ ತಾತ ಇದನ್ನೇ ಕುಡಿದನಾ? ಆರೋಗ್ಯವಾಗಿ ನೂರು ವರ್ಷ ಬದುಕಿದನಲ್ಲಾ…. ಅಂತ ಅನಿಸಿ ಮನಸಿಗೆ ಸಾಂತ್ವನ ಹೇಳಿಕೊಂಡು ಅಂಗಡಿಯಿಂದ ಹೊರಬಂದೆ. ಕಂಟೋನ್ಮೆಂಟ್ ಅಂಗಡಿ, ಬೆಲೆ ಜಾಸ್ತಿ ಬೇಡ ಅಂತ ಹೇಳಲು ನಾಚಿಕೆ ಒಂದು ಕಡೆ, ಇದಕ್ಕಿಂತ ಕಡಿಮೆ ರೇಟು ದು ಇದೆಯಾ ಅಂತ ಕೇಳಲು ಇಂಗ್ಲಿಷ್ ಬರೋದಿಲ್ಲ! ನಾನು ಡಬ್ಬದ ಮೇಲೆ ಡಬ್ಬ ಹುಡುಕಿದ್ದು, ಬೆಲೆ ನೋಡಿದ್ದು, ಬೆಲೆ ನೋಡಿ ಅಲ್ಲೇ ಇಟ್ಟದ್ದು… ಅಂಗಡಿಯಾತ ಗಮನಿಸಿದ ಅಂತ ಕಾಣ್ಸುತ್ತೆ. ನಮ್ಮ ತಾತನ ಆರೋಗ್ಯದ ಬಗ್ಗೆ ನಾನು ಆಡಿದ ಮಾತು ಅದು ಸ್ವಗತ ಅಂದರೆ ಮನಸಿನಲ್ಲೇ ಹೇಳಿಕೊಂಡಿದ್ದು, ಅವನಿಗೆ ಕೇಳಿಸಿರಲಾರದು..! ಅಂಗಡಿಯಿಂದ ಆಚೆ ಒಂದು ಹತ್ತು ಹೆಜ್ಜೆ ಇಟ್ಟಿದ್ದೀನಿ. ಆತ ಕೂಗಿದ. ಸಾರ್ ಬನ್ನಿ ಅಂತ ಒಳಗೆ ಕರೆದು ಸಾರ್ ಈ ಚಾಕೋಲೆಟ್ ಡ್ರಿಂಕ್ ನೋಡಿ, ನಮ್ಮದೇ ಬೆಂಗಳೂರಿನದ್ದು… ಅಂತ ಒಂದು ಡಬ್ಬ ಕೊಟ್ಟ. ಅದರ ಹೆಸರು ಗೋಕುಲ ಅಂತ ಇದ್ದ ನೆನಪು. ಬೆಲೆ ನೂರು ರುಪಾಯಿ. ನಂತರ ಸುಮಾರು ಸಲ ಇದೇ ಬ್ರಾಂಡ್ ಉಪಯೋಗಿಸಿದ ನೆನಪು. ಇದು ರಾಮಯ್ಯ ಅವರ ಬ್ರಾಂಡ್ ಮತ್ತು ಅವರೇ ತಯಾರಿಸುತ್ತಾರೆ ಎಂದು ಅಂಗಡಿಯಾತ ವಿವರಿಸಿದ. ದೇವನಹಳ್ಳಿ ಬಳಿಯ ಅವರ ಹೊಲದಲ್ಲಿ ಇದರ ಮೂಲ ಸಸ್ಯಗಳನ್ನು ಅಂದರೆ ಕೋಕಾ ಬೆಳೆಯುತ್ತಾರೆ ಎಂದು ನಂತರ ತಿಳಿಯಿತು.

BEL ನ ಒಂದು ಮುಖ್ಯ ಪ್ರವೇಶ ಕುವೆಂಪು ವೃತ್ತದ ಕಡೆಯಿಂದ ಇದೆ. ಇದರ ಮೂಲಕವೇ ಕಾರ್ಖಾನೆಯ ವಾಹನಗಳು ಚಲಿಸುವುದು, ಈ ರಸ್ತೆಯಲ್ಲಿ ಇರುವ ನೌಕರರು ಹೋಗಿ ಬರುವುದು.. ಇತ್ಯಾದಿ. ಈ ರಸ್ತೆಯ ಉದ್ದ ಸುಮಾರು ಮೂರು ಕಿಮೀ ಇರಬಹುದು, ನಿಖರವಾಗಿ ತಿಳಿಯದು. ಈ ರಸ್ತೆಗೆ ಒಬ್ಬರು ಕರ್ನಾಟಕದ ಕಾರ್ಮಿಕ ನಾಯಕರ ಹೆಸರು ಇಡಬೇಕು ಎನ್ನುವ ದೊಡ್ಡ ಕೂಗು ಇತ್ತು. ಅದರ ಬಗ್ಗೆ ಮುಂದೆ ಹೇಳುತ್ತೇನೆ.

ನನಗೂ msr ಕಾಲೇಜಿಗೂ ಸುಮಾರು ನಾಲ್ಕು ದಶಕಗಳ ನಂಟು. ಅದರ ಬಗ್ಗೆ ಮುಂದೆ ತಿಳಿಸುತ್ತೇನೆ.

ಮುಂದುವರೆಯುವುದು….
(ಇಲ್ಲಿನ ಕೆಲವು ವಿವರಗಳನ್ನು ಶ್ರೀ ಪಾಲಾಕ್ಷ ಬಾಣದ ಅವರ ಸಂಶೋಧನೆ ಸಂಗ್ರಹ ದ ಮೂಲಕ ಧೀಮಂತ ಸಾಹುಕಾರರು (ಡಾ. ಎಂ ಎಸ್ ರಾಮಯ್ಯನವರ ವಿಜಯಗಾ ಥ)ರಚನೆ ಶ್ರೀ ಬ. ಲ. ಸುರೇಶ ಅವರ ಕೃತಿಯಿಂದ ಪಡೆದಿದ್ದೇನೆ)