ನಿಸರ್ಗವನ್ನು ಆಧಾರವಾಗಿಟ್ಟುಕೊಂಡ ಜೀವನಶೈಲಿಯನ್ನು ಈಗಲೂ ಉಳಿಸಿಕೊಂಡಿರುವ ಅಲ್ಲಿನ ಹಲವು ಸಮುದಾಯಗಳು ಬದುಕನ್ನು ನಡೆಸುವುದರ ಜೊತೆಗೆ ಪ್ರಕೃತಿಯನ್ನೂ ಉಳಿಸಿ, ಬೆಳೆಸುತ್ತಿವೆ. ಇದರಿಂದಾಗಿ ನಮೀಬಿಯಾದ ಪ್ರವಾಸೋದ್ಯಮವೂ ಸಹ ಅಭಿವೃದ್ಧಿ ಕಂಡಿದೆ. ಪ್ರವಾಸೋದ್ಯಮಕ್ಕೆ ದೊರಕಿರುವ ಉತ್ತೇಜನದಿಂದಾಗಿ ಈ ಬುಡಕಟ್ಟು ಸಮುದಾಯಗಳು ಸಶಕ್ತಗೊಳ್ಳುತ್ತಿವೆ. ನಮೀಬಿಯಾದ ಬುಡಕಟ್ಟು ಸಮುದಾಯಗಳು ಅಲ್ಲಿನ ನಿಸರ್ಗವನ್ನು ಸಂರಕ್ಷಿಸಲು ನೀಡಿರುವ ಕೊಡುಗೆಯನ್ನು ವಿಶ್ವ ವನ್ಯಜೀವಿ ನಿಧಿ ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಗುರುತಿಸಿದೆ. 2013ರಲ್ಲಿ ಈ ಸಂಘಟನೆಯಿಂದ ನಮೀಬಿಯಾಕ್ಕೆ ಗಿಫ್ಟ್ ಟು ದಿ ಅರ್ಥ್ ಹೆಸರಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನಮೀಬಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ದೇಶವೊಂದರ ಇತಿಹಾಸವನ್ನು ಅವಲೋಕಿಸುವಾಗ ದೇಶದ ಪ್ರಾಚೀನತೆ, ಅಲ್ಲಿ ಮೊದಲಿಗೆ ನೆಲೆನಿಂತ ಜನಾಂಗಗಳು, ದೇಶದ ಪರಿಶೋಧಕರು, ಆಗಮಿಸಿದ ವ್ಯಾಪಾರಿಗಳು, ಯುದ್ಧ-ಗೆಲುವು-ಸೋಲು, ಆಡಳಿತ, ಆರ್ಥಿಕತೆ, ಸಮಾಜ ಈ ಎಲ್ಲಾ ಸಂಗತಿಗಳು ಮುಖ್ಯವಾಗುತ್ತವೆ. ನಮೀಬಿಯಾದ ಪ್ರಾಚೀನ ಕಾಲಘಟ್ಟದ ಇತಿಹಾಸದ ಬಗ್ಗೆ ಸ್ಪಷ್ಟತೆಯಿಲ್ಲ. ಮಾಹಿತಿಗಳು ಸಿಗುತ್ತವಾದರೂ ಅವುಗಳಿಗೆ ಸಂಬಂಧಪಟ್ಟಂತೆ ನಿಖರತೆಯಿಲ್ಲ; ನಿರ್ದಿಷ್ಟವಾದ ದಾಖಲೆಗಳಿಲ್ಲ. ಈ ಕಾರಣದಿಂದಾಗಿ ನಮೀಬಿಯಾ ದೇಶದ ಇತಿಹಾಸವು ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ. ನಂಬಿಕೆಗೆ ಅರ್ಹ ಎನಿಸಿಕೊಳ್ಳುವುದಿಲ್ಲ. ನಮೀಬಿಯಾ ಉಳಿದ ದೇಶಗಳಿಗಿಂತ ಪ್ರತ್ಯೇಕವಾಗಿದ್ದುದರಿಂದ ಈ ಬಗೆಯ ಅಸ್ಪಷ್ಟತೆ ಉಂಟಾಗಿರಬಹುದು. ಹೊರಗಿನ ಪ್ರಪಂಚದ ಜೊತೆಗೆ ಅದರ ಸಂಪರ್ಕ ಬೆಳೆದದ್ದು ಹತ್ತೊಂಬತ್ತನೇ ಶತಮಾನದ ನಂತರ. ನಮೀಬಿಯಾದ ಇತಿಹಾಸ ಅಚ್ಚುಕಟ್ಟಾಗಿ ರಚನೆಯಾಗಿರುವುದು 1960ರ ಬಳಿಕ. ಈ ಅವಧಿಯಲ್ಲಿ ಅಲ್ಲಿಯ ಇತಿಹಾಸವು ಬರವಣಿಗೆಯ ರೂಪವನ್ನು ಪಡೆದುಕೊಂಡಿತು. ಅಲ್ಲಿಯ ರಾಜಕೀಯ ವಿದ್ಯಮಾನಗಳ ಆಧಾರದಲ್ಲಿ ಸಮಾಜವನ್ನು ಹಲವು ಆಯಾಮಗಳಲ್ಲಿ ಐತಿಹಾಸಿಕವಾಗಿ ವಿಶ್ಲೇಷಿಸುವ ಪ್ರವೃತ್ತಿ ಆರಂಭಗೊಂಡಿತು. ಈ ಮೂಲಕ ನಿರ್ದಿಷ್ಟ ನೆಲೆಯಲ್ಲಿ ನಮೀಬಿಯಾದ ಇತಿಹಾಸ ರೂಪುಗೊಳ್ಳುವಂತಾಯಿತು.
ವಿಶ್ವದಲ್ಲಿ ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಪ್ರಪಂಚದ ರಾಷ್ಟ್ರಗಳ ಪೈಕಿ ನಮೀಬಿಯಾಕ್ಕೆ ಎರಡನೇ ಸ್ಥಾನ. ಇಲ್ಲಿ ಪ್ರತೀ ಕಿಲೋಮೀಟರ್ನಲ್ಲಿ ಬದುಕುತ್ತಿರುವುದು ಮೂರು ಜನರು ಮಾತ್ರ. ನಮೀಬಿಯಾದಲ್ಲಿ ಮರುಭೂಮಿಯು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಜನರ ಸಂಖ್ಯೆ ಕಡಿಮೆ. ನಮೀಬಿಯಾದಲ್ಲಿ ಬದುಕುತ್ತಿರುವ ಜನರ ಸಂಖ್ಯೆ ಕಡಿಮೆಯಿರಬಹುದು. ಆದರೆ ಜನರು ಮಾತನಾಡುವ ಭಾಷೆಗಳು ಹಲವು. ಭಾಷಾ ವೈವಿಧ್ಯತೆಯನ್ನು ಇಲ್ಲಿ ನೋಡಬಹುದು. ಬಂಟು, ಜರ್ಮನಿಕ್ ಮತ್ತು ಖೋಯಿಸನ್ ಭಾಷಾ ಕುಟುಂಬಗಳಿಗೆ ಸೇರಿದ ಭಾಷೆಗಳು ಇಲ್ಲಿವೆ. ನಮೀಬಿಯಾದಲ್ಲಿ ದಕ್ಷಿಣ ಆಫ್ರಿಕಾದ ಆಳ್ವಿಕೆಯಿದ್ದ ಕಾಲಘಟ್ಟದಲ್ಲಿ ಇಂಗ್ಲಿಷ್, ಜರ್ಮನ್ ಮತ್ತು ಆಫ್ರಿಕನ್ ಭಾಷೆಗಳು ಅಧಿಕೃತ ಭಾಷೆಗಳು ಎನಿಸಿಕೊಂಡಿದ್ದವು. ಸ್ವಾತಂತ್ರ್ಯದ ನಂತರ ನಮೀಬಿಯಾದ ಸಂವಿಧಾನವು ಇಂಗ್ಲಿಷ್ ಭಾಷೆಯನ್ನು ಮಾತ್ರವೇ ಅಧಿಕೃತ ಭಾಷೆಯಾಗಿ ಉಳಿಸಿಕೊಂಡಿತು. ಜರ್ಮನ್ ಮತ್ತು ಆಫ್ರಿಕನ್ ಭಾಷೆಗಳನ್ನು ತಿರಸ್ಕರಿಸುವುದಕ್ಕೆ ಸ್ಪಷ್ಟವಾದ ಕಾರಣವಿತ್ತು. ಈ ಎರಡು ಭಾಷೆಗಳು ವಸಾಹತುಶಾಹಿ ಆಳ್ವಿಕೆಯ ಸಂಕೇತಗಳೆನಿಸಿಕೊಂಡಿದ್ದವು. ಈ ಕಾರಣಕ್ಕೆ ನಮೀಬಿಯಾವು ಅವುಗಳಿಗೆ ಯಾವ ಸ್ಥಾನಮಾನವನ್ನೂ ಕೊಡಲಿಲ್ಲ. ಇಂಗ್ಲಿಷ್ ಭಾಷೆಯನ್ನೇ ನಮೀಬಿಯಾ ಯಾಕೆ ಅಧಿಕೃತ ಭಾಷೆಯನ್ನಾಗಿಸಿಕೊಂಡಿತು ಎನ್ನುವುದಕ್ಕೂ ಬಲವಾದ ಕಾರಣವಿತ್ತು.
ನೆಲ್ಸನ್ ಮಂಡೇಲಾ ಅವರ ನೇತೃತ್ವದಲ್ಲಿ ಯೂತ್ ಲೀಗ್ ಹುಟ್ಟಿಕೊಂಡಿತ್ತು. 1951ರಲ್ಲಿ ವರ್ಣಭೇದ ನೀತಿಯ ವಿರುದ್ಧ ಡಿಫೈಯನ್ಸ್ ಕ್ಯಾಂಪೇನ್ ಹೆಸರಿನ ಅಭಿಯಾನ ಆರಂಭಗೊಂಡಿತ್ತು. ಈ ಕಾರಣಕ್ಕೆ ನಮೀಬಿಯಾವು ಇಂಗ್ಲಿಷ್ ಭಾಷೆಯನ್ನೇ ಅಧಿಕೃತ ಭಾಷೆಯಾಗಿಸುವ ಮೂಲಕ ದೇಶದ ಜನಸಾಮಾನ್ಯರಲ್ಲಿ ಇಂಗ್ಲಿಷ್ ಭಾಷೆಯನ್ನು ಹರಡುವ ಕ್ರಾಂತಿಕಾರಿ ಪ್ರಯತ್ನಕ್ಕೆ ಮುನ್ನುಡಿ ಬರೆಯಿತು. ಈ ಪ್ರಯತ್ನದ ಹೊರತಾಗಿಯೂ ಇಂಗ್ಲಿಷ್ ಸಾಮಾನ್ಯ ಜನರ ಭಾಷೆಯಾಗಿ ಅಷ್ಟೇನೂ ಮನ್ನಣೆ ಪಡೆದಿಲ್ಲ ಎನ್ನುವುದೇ ವಾಸ್ತವ. ಒಟ್ಟು ಜನರಲ್ಲಿ ಮೂರು ಶೇಕಡಾಕ್ಕಿಂತ ತುಸು ಹೆಚ್ಚು ಪ್ರಮಾಣದಲ್ಲಿ ಮಾತ್ರವೇ ಇಂಗ್ಲಿಷ್ ಮಾತನಾಡುವ ಜನರಿದ್ದಾರೆ. ಇಂಗ್ಲಿಷ್ ಹೊರತಾಗಿ ಅನೇಕ ಉಪಭಾಷೆಗಳು ನಮೀಬಿಯಾದಲ್ಲಿ ಅಸ್ತಿತ್ವದಲ್ಲಿವೆ. ಓಶಿವಾಂಬೊ ಎನ್ನುವುದು ವ್ಯಾಪಕವಾಗಿ ಮಾತನಾಡಲ್ಪಡುವ ಉಪಭಾಷೆಯಾಗಿದ್ದು, ನಲುವತ್ತೊಂಬತ್ತು ಶೇಕಡಾ ಜನರು ಇದನ್ನು ಮಾತನಾಡುತ್ತಾರೆ. ಖೋಖೋಗೋವಾಬ್, ರುಕ್ವಾಂಗಲಿ, ಒಟ್ಜಿಹೆರೆರೊ, ಸಿಲೋಜಿ, ಜಿಸಿರಿಕು, ಫ್ವೆ, ಕುಹಾನೆ, ಕುಂಗ್ ಎಕೋಕಾ ಮೊದಲಾದ ಉಪಭಾಷೆಗಳೂ ಚಾಲ್ತಿಯಲ್ಲಿವೆ. ನಮೀಬಿಯಾದ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಗಳಲ್ಲಿಯೇ ನೀಡಲಾಗುತ್ತದೆ. ಮಾಧ್ಯಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ನಮೀಬಿಯಾದ ಉತ್ತರ ಭಾಗದಲ್ಲಿ ಇಂಗ್ಲಿಷ್ ಭಾಷೆಯ ಪ್ರಾಬಲ್ಯವಿದ್ದರೆ, ದಕ್ಷಿಣದಲ್ಲಿ ಆಫ್ರಿಕನ್ ಭಾಷೆ ಶಕ್ತಿಯುತವಾಗಿದೆ.
ಸ್ಯಾನ್ ಸಮುದಾಯಕ್ಕೆ ಸೇರಿದವರು ನಮೀಬಿಯಾದಲ್ಲಿ ಕಂಡುಬಂದ ಮೊದಲ ಜನರು. ಇವರು ಬೇಟೆಗಾರಿಕೆ ನಡೆಸುತ್ತಿದ್ದರು. ಜೊತೆಗೆ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಇವರು ಒಂದೇ ಕಡೆ ನೆಲೆನಿಂತವರಲ್ಲ. ಆಹಾರದ ಲಭ್ಯತೆ, ಋತುಮಾನದ ಬದಲಾವಣೆ, ಪ್ರಕೃತಿ ವಿಕೋಪ ಮೊದಲಾದ ಅಂಶಗಳಿಂದ ಪ್ರಭಾವಿತರಾಗಿ ಅಲೆಮಾರಿಗಳಾಗಿ ಹೋಗುವ ಸಮುದಾಯದವರಾಗಿದ್ದರು. ಇವರದ್ದು ಸಣ್ಣ ಸಣ್ಣ ಗುಂಪು. ಕೆಲವು ಸಮಯಗಳಲ್ಲಿ ಹಲವಾರು ಗುಂಪುಗಳು ಒಂದಾಗಿ ಬದುಕುತ್ತಿದ್ದದ್ದೂ ಇತ್ತು. ರಕ್ಷಣೆಯ ವಿಚಾರದಲ್ಲಿ ತೀರಾ ಹಿಂದುಳಿದ ಸಮುದಾಯವಿದು. ಈ ಕಾರಣದಿಂದಲೇ ಇವರು ಅನೇಕ ಆಕ್ರಮಣಗಳಿಗೆ, ದಬ್ಬಾಳಿಕೆಗಳಿಗೆ ತುತ್ತಾದರು. ಯುರೋಪಿಯನ್ನರು ನಮೀಬಿಯಾಕ್ಕೆ ಆಗಮಿಸುವುದಕ್ಕೂ ಮೊದಲೇ ಸ್ಯಾನ್ ಸಮುದಾಯದವರು ಮರುಭೂಮಿಯೆಡೆಗೆ ತಳ್ಳಲ್ಪಟ್ಟಿದ್ದರು. ವಾಯುವ್ಯ ನಮೀಬಿಯಾದಲ್ಲಿ ಟ್ವೈಫೆಲ್ ಫಾಂಟೈನ್ ಹೆಸರಿನ ಪ್ರದೇಶವಿದೆ. ಇಲ್ಲಿನ ಕಲ್ಲುಬಂಡೆಗಳ ಮೇಲೆ ವಿಶಿಷ್ಟ ವಿನ್ಯಾಸದ ಕೆತ್ತನೆಗಳು ಮತ್ತು ಚಿತ್ರಗಳು ಕಂಡುಬಂದಿವೆ. ಮನುಷ್ಯರ ಆಕೃತಿಗಳನ್ನು, ಜಿರಾಫೆ, ಘೇಂಡಾಮೃಗ, ಜೀ಼ಬ್ರಾ ಮೊದಲಾದ ಪ್ರಾಣಿಗಳ ಆಕೃತಿಗಳನ್ನು ಕೆತ್ತಲಾಗಿದೆ. ಈ ಪ್ರದೇಶದಲ್ಲಿ ಸ್ಯಾನ್ ಸಮುದಾಯದವರು ನೆಲೆನಿಂತಿದ್ದರು. ಇದನ್ನು 2007ರಲ್ಲಿ ವಿಶ್ವ ಪರಂಪರೆಯ ತಾಣವಾಗಿ ಯುನೆಸ್ಕೋ ಗುರುತಿಸಿದೆ. ಸ್ಯಾನ್ ಸಮುದಾಯದವರು ಅಲೆಮಾರಿಗಳಾಗಿದ್ದರೆ, ಒಂದೇ ಕಡೆ ನಿರ್ದಿಷ್ಟವಾಗಿ ನೆಲೆನಿಲ್ಲುವುದರ ಕಡೆಗೆ ಗಮನಕೊಟ್ಟು, ಅಂತೆಯೇ ಬದುಕಿದ ಜನರು ನಾಮ ಸಮುದಾಯಕ್ಕೆ ಸೇರಿದವರು. ಇವರು ದಕ್ಷಿಣ ನಮೀಬಿಯಾದಲ್ಲಿ ಕೇಂದ್ರೀಕೃತರಾಗಿದ್ದರು. ದೊಡ್ಡದಾದ ಕುಲ ವ್ಯವಸ್ಥೆಯನ್ನು ಹೊಂದಿದ್ದ ಇವರು ಗ್ರಾಮೀಣ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದರು. ಬೇರೆ ಬೇರೆ ಕುಲಗಳ ಮಧ್ಯೆ ಸ್ನೇಹಸಂಬಂಧ ಇತ್ತು. ಈ ಸಮುದಾಯದವರ ಮೇಲೆ ಅವಲಂಬಿತರಾಗಿ ಬದುಕುತ್ತಿದ್ದವರು ಡಮಾರಾ ಸಮುದಾಯದವರು. ಇವರು ಮಧ್ಯ ಆಫ್ರಿಕಾದ ಜನರು. ಬೇಟೆಗಾರಿಕೆಯ ಬಗೆಗೆ ಒಲವನ್ನಿರಿಸಿಕೊಂಡಿದ್ದ ಇವರು ಪಶುಪಾಲನೆಯನ್ನೂ ನಡೆಸುತ್ತಿದ್ದರು. ತಾಮ್ರವನ್ನು ಕರಗಿಸುವ ಕೌಶಲ್ಯ ಈ ಸಮುದಾಯದವರಿಗೆ ಕರಗತವಾಗಿತ್ತು.
ಹೆರೆರೊ ಎನ್ನುವುದು ಇನ್ನೊಂದು ಸಮುದಾಯ. ಇವರು ಮಧ್ಯ ಆಫ್ರಿಕಾದ ಗ್ರಾಮೀಣ ಪ್ರದೇಶಕ್ಕೆ ಸೇರಿದವರು. ಈಶಾನ್ಯ ಮತ್ತು ಮಧ್ಯ ನಮೀಬಿಯಾದಲ್ಲಿ ವಾಸವಿದ್ದ ಸಮುದಾಯವಿದು. ಹಲವು ಕುಲಗಳ ಮಧ್ಯೆ ಸಂಬಂಧ ಏರ್ಪಡಿಸಿ, ಬೇರೆ ಬೇರೆ ಕುಲಗಳನ್ನು ಒಂದೇ ವ್ಯವಸ್ಥೆಯಡಿ ಒಗ್ಗೂಡಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಹಲವು ಕುಲಗಳನ್ನು ಹೊಂದಿದ್ದ ವ್ಯವಸ್ಥೆಗೆ ಒಬ್ಬ ಮುಖ್ಯಸ್ಥರನ್ನು ನೇಮಿಸಲಾಗಿತ್ತು. ಹೀಗೆ ಕುಲದ ವ್ಯವಸ್ಥೆಗೆ ಆಡಳಿತ ಸ್ವರೂಪ ಒದಗಿಬಂತು. ಆದರೆ ಹೆರೆರೊ ಸಮುದಾಯದವರ ನಡುವೆ ಏಕತೆ ಎನ್ನುವುದು ಅಷ್ಟಾಗಿ ಇರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ವಿಭಜನೆಗೆ ಒಳಗಾಗುತ್ತಿದ್ದರು. ಉತ್ತರ ನಮೀಬಿಯಾದಲ್ಲಿ ಓವಾಂಬೋ ಸಮುದಾಯದವರ ಪ್ರಾಬಲ್ಯವಿತ್ತು. ಇವರು ನದೀತಟದಲ್ಲಿ ನೆಲೆನಿಂತಿದ್ದ ಜನ. ಕುನೆನೆ ನದಿಯ ಎರಡೂ ತೀರಗಳಲ್ಲಿ ವಾಸವಿದ್ದ ಇವರು ಹಲವು ಪ್ರದೇಶಗಳನ್ನು ಬೆಳೆಸಿದರು. ಇವರ ಕಾಲಘಟ್ಟಕ್ಕೆ ಕೃಷಿ ಚಟುವಟಿಕೆ ರೂಪುಗೊಂಡಿತ್ತು. ನದೀತೀರದ ಪ್ರದೇಶ ಮಿಶ್ರ ಬೆಳೆಗಳಿಗೆ ಸೂಕ್ತವಾದ ಕಾರಣ ಹಲವು ಬೆಳೆಗಳನ್ನು ಬೆಳೆಸುವುದರೆಡೆಗೆ ಇವರು ಗಮನ ಕೊಟ್ಟರು. ತಾಮ್ರವನ್ನು ಕರಗಿಸುವ ಕೆಲಸವನ್ನೂ ಇವರು ನಿರ್ವಹಿಸಿದರು. ಹೀಗೆ ಕೃಷಿ ಮತ್ತು ಕರಕುಶಲ ಕಲೆ ಎರಡರ ಕಡೆಗೂ ಗಮನ ಕೊಟ್ಟ ಸಮುದಾಯವಿದು. ಏಕರೂಪವಾದ ಆಡಳಿತ ವ್ಯವಸ್ಥೆಯನ್ನು ರೂಪಿಸಿದವರು ಕವಾಂಗೊ ಸಮುದಾಯಕ್ಕೆ ಸೇರಿದವರು. ಇವರು ನಮೀಬಿಯಾದ ಪೂರ್ವ ಭಾಗದಲ್ಲಿ ವಸಾಹತು ರೂಪಿಸಿಕೊಂಡಿದ್ದರು. ಇವರ ಆಡಳಿತ ಒಂದೇ ರೀತಿಯಲ್ಲಿದ್ದರೂ ಸಹ ಪ್ರಬಲವಾಗಿರಲಿಲ್ಲ.
ಹತ್ತೊಂಬತ್ತನೇ ಶತಮಾನದವರೆಗೂ ಸಹ ನಮೀಬಿಯಾ ಆಗಾಗ ಯುರೋಪಿಯನ್ ಸಂಪರ್ಕಕ್ಕೆ ಒಳಗಾಯಿತು. ನಮೀಬಿಯಾವನ್ನು ಅತಿಕ್ರಮಿಸುವ ಪ್ರಯತ್ನಗಳೂ ನಡೆದವು. ಹದಿನೈದನೇ ಶತಮಾನದ ಕೊನೆಗೆ ಕೇಪ್ ಆಫ್ ಗುಡ್ ಹೋಪ್ನಿಂದ ಹಿಂದಿರುಗುತ್ತಿದ್ದ ಪರಿಶೋಧಕರಾದ ಬರ್ಟೊಲೋಮಿಯು ಡಯಾಸ್ ಮತ್ತು ಡಿಯೊಗೊ ಕಾವೊ ಇವರಿಬ್ಬರು ನಮೀಬಿಯಾ ಕರಾವಳಿಯನ್ನು ತಲುಪಿದ್ದರು. ಆದರೆ ಯಾವುದೇ ರೀತಿಯ ಸಂಪರ್ಕ ಬೆಳೆಯಲಿಲ್ಲ. ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ನಮೀಬಿಯಾವು ಆಫ್ರಿಕಾದಿಂದ ಪರಿಶೋಧನೆಗೆ ಒಳಗಾಯಿತು. 1670ರ ನಂತರದ ಅವಧಿಯಲ್ಲಿ ಆಫ್ರಿಕನ್ ಪರಿಶೋಧಕರು ಇಲ್ಲಿಗೆ ಬಂದರು. ಮುಂದಿನ ಶತಮಾನದಲ್ಲಿ ಆಫ್ರಿಕನ್ ವ್ಯಾಪಾರಿಗಳು ಮತ್ತು ವಸಾಹತುಗಾರರು ನಮೀಬಿಯಾದೆಡೆಗೆ ಮುಖ ಮಾಡಿದರು. ಇವರೆಲ್ಲರೂ ಬಂದದ್ದು ದಕ್ಷಿಣ ನಮೀಬಿಯಾ ಮೂಲಕವಾಗಿ. ಇಲ್ಲಿ ಓವಾಂಬೋ ಸಮುದಾಯದವರ ಆಳ್ವಿಕೆಯಿತ್ತು. ಹೀಗೆ ಬಂದ ಆಫ್ರಿಕನ್ನರು ನಮೀಬಿಯಾದ ಜೊತೆಗೆ ವ್ಯಾಪಾರ ಸಂಪರ್ಕ ಬೆಳೆಸುವುದಕ್ಕೆ ಆದ್ಯತೆ ನೀಡಿದರು. ದಂತ ವ್ಯಾಪಾರದ ಮೂಲಕ ಆರಂಭಗೊಂಡ ವ್ಯವಹಾರವು ಜಾನುವಾರುಗಳ ವ್ಯಾಪಾರದ ಮೂಲಕ ಇನ್ನಷ್ಟು ಬೆಳವಣಿಗೆ ಕಂಡಿತು. ಬಂದೂಕುಗಳ ಪರಿಚಯವನ್ನು ನಮೀಬಿಯಾದ ಜನರಿಗೆ ಮಾಡಿಕೊಟ್ಟವರು ಇವರೇ.
ಇವರ ನಂತರ ಬಂದವರು ಊರ್ಲಾಮ್ ನಾಮ ಕುಲಕ್ಕೆ ಸೇರಿದವರು. ಇವರು ನಮೀಬಿಯಾಕ್ಕೆ ಬಂದದ್ದೇ ಸಂಘರ್ಷದ ಉದ್ದೇಶವನ್ನು ಹೊತ್ತುಕೊಂಡು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿಯೇ ನಮೀಬಿಯಾಕ್ಕೆ ಕಾಲಿರಿಸಿದ ಇವರು ನಮೀಬಿಯನ್ ಸಮುದಾಯಗಳ ಮೇಲೆ ಪ್ರಾಬಲ್ಯ ಸಾಧಿಸುವ ಪ್ರಯತ್ನ ನಡೆಸಿದರು. ರಕ್ಷಣೆಯ ವಿಷಯದಲ್ಲಿ, ಆಯುಧಗಳ ವಿಚಾರದಲ್ಲಿ ಮುಂದುವರಿದಿದ್ದ ಇವರು ನಾಮಾ ಮತ್ತು ಡಮಾರಾ ಸಮುದಾಯದವರ ಮೇಲೆ ಪಾರಮ್ಯ ಸಾಧಿಸಲು ತಮ್ಮ ಈ ಹೆಚ್ಚುಗಾರಿಕೆಯನ್ನೇ ಬಳಸಿಕೊಂಡರು. ಕುದುರೆಗಳ ಬಳಕೆ ಇವರಿಗೆ ತಿಳಿದಿತ್ತು. ಬಂದೂಕುಗಳನ್ನು ಹೊಂದಿದ್ದರು. ಹೆಚ್ಚು ಕಡಿಮೆ ಐವತ್ತು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಇವರು ತಮ್ಮ ಸಾಮರ್ಥ್ಯದ ಕಾರಣದಿಂದ ನಾಮಾ, ಹೆರೆರೊ, ಡಮಾರಾ ಸಮುದಾಯದವರ ಬೆಂಬಲವನ್ನೂ ಗಳಿಸಿಕೊಂಡಿದ್ದರು. ಮಧ್ಯ ನಮೀಬಿಯಾದಲ್ಲಿ ಪ್ರಮುಖ ಎರಡು ಸಮುದಾಯಗಳ ಮಧ್ಯೆ ಸಂಘರ್ಷವಿತ್ತು. ಹೆರೆರೊ ಸಮುದಾಯದವರು ನಮೀಬಿಯಾದ ದಕ್ಷಿಣ ಭಾಗದ ಕಡೆಗೆ ದೃಷ್ಟಿ ನೆಟ್ಟಿದ್ದರು. ನಾಮಾ ಸಮುದಾಯದವರು ಉತ್ತರದ ಕಡೆಗೆ ಗಮನ ಹರಿಸಿದ್ದರು. ಈ ಕಾರಣದಿಂದಾಗಿ ಇವರ ಮಧ್ಯೆ ಮನಸ್ತಾಪವಿತ್ತು.
ಹೆರೆರೊ ಸಮುದಾಯದವರು 1870ರಲ್ಲಿ ಜರ್ಮನ್ನರ ಜೊತೆಗೆ ಶಾಂತಿ ಒಪ್ಪಂದವನ್ನು ಮಾಡಿಕೊಂಡರು. ಯುದ್ಧದ ಒತ್ತಡವಿದ್ದ ಸಮಯದಲ್ಲಿಯೇ ಹೆರೆರೊ ಸಮುದಾಯದ ಮುಖ್ಯಸ್ಥರಾಗಿ ರೂಪುಗೊಂಡವರು ಮಹೆರೆರೊ. ಇದೇ ಸಮಯದಲ್ಲಿ ದಕ್ಷಿಣ ಆಫ್ರಿಕಾದ ರೆಹೋಬೋತ್ ಬಾಸ್ಟರ್ಸ್ ಸಮುದಾಯದವರು ನಮೀಬಿಯಾಕ್ಕೆ ವಲಸೆ ಬಂದರು. ಸೈನಿಕ ವ್ಯವಸ್ಥೆಯಲ್ಲಿ ಮುಂದುವರಿದಿದ್ದ ಇವರು ಜರ್ಮನಿ ಮತ್ತು ಹೆರೆರೊ ಸಮುದಾಯದವರ ನಡುವಿನ ಮಧ್ಯವರ್ತಿಗಳಂತೆ ಕೆಲಸ ಮಾಡಿದರು.
ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ನಮೀಬಿಯಾವು ಜರ್ಮನಿ ಮತ್ತು ಬ್ರಿಟೀಷ್ ದಬ್ಬಾಳಿಕೆಗೆ ಸಿಲುಕಿಕೊಂಡಿತು. ಮುಖ್ಯವಾಗಿ ತಾಮ್ರದ ಗಣಿಗಾರಿಕೆ ಮತ್ತು ವಜ್ರಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶಗಳನ್ನಿಟ್ಟುಕೊಂಡಿದ್ದ ಜರ್ಮನ್ನರು ನಮೀಬಿಯಾದ ಮೂಲನಿವಾಸಿಗಳನ್ನು ಶೋಷಣೆಗೀಡುಮಾಡಿದ ಪರಿ ಅಮಾನವೀಯತೆಯ ಅತಿರೇಕದ ಸ್ಥಿತಿಯಾಗಿತ್ತು. ಪ್ರತಿರೋಧ ಒಡ್ಡಿದವರನ್ನು ಬಂಧಿಸಲಾಯಿತು. ನೇಣಿಗೆ ಹಾಕಲಾಯಿತು. ಜರ್ಮನ್ನರು ಮತ್ತು ನಮೀಬಿಯನ್ ಸಮುದಾಯದವರ ಮಧ್ಯೆ ಮೊದಲ ಹಂತದ ಯುದ್ಧ ನಡೆದ ಬಳಿಕ ಹೆರೆರೊ ಸಮುದಾಯದ ತೊಂಬತ್ತು ಪ್ರತಿಶತ ಜನರು ಇನ್ನಿಲ್ಲವಾದರು. ಈ ಒಂದು ವಿಚಾರವೇ ಸಂಘರ್ಷ ಅದೆಷ್ಟರಮಟ್ಟಿನ ತೀವ್ರತೆಯನ್ನು ಹೊಂದಿತ್ತು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಯುದ್ಧದ ನಂತರದಲ್ಲಿ ಪುನರ್ವಸತಿ ಶಿಬಿರಗಳಲ್ಲಿ ಉಳಿದುಕೊಂಡಿದ್ದ ನಮೀಬಿಯನ್ನರು ಹಸಿವಿನಿಂದಾಗಿಯೇ ಜೀವ ಕಳೆದುಕೊಂಡರು. ಯುದ್ಧದೆದುರು ಮಾನವೀಯತೆ ಸೋಲನ್ನಪ್ಪುವ ಪರಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದ್ದರೆ ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ನಡೆದ ನಮೀಬಿಯಾ ಮತ್ತು ಜರ್ಮನ್ ಸಂಘರ್ಷವನ್ನು ಗಮನಿಸಿಕೊಂಡರೆ ಸಾಕು. ಮೊದಲ ಮಹಾಯುದ್ಧದ ನಂತರ ಜರ್ಮನಿಯ ಪ್ರಾಬಲ್ಯ ಕುಸಿಯಿತು. ಯುದ್ಧಾನಂತರದ ವ್ಯವಸ್ಥೆಯನ್ನು ಸಮರ್ಪಕಗೊಳಿಸುವುದಕ್ಕಾಗಿ ರಚನೆಯಾಗಿದ್ದ ಲೀಗ್ ಆಫ್ ನೇಶನ್ಸ್ ಸಂಸ್ಥೆಯು ನಮೀಬಿಯಾವನ್ನು ಬ್ರಿಟೀಷ್ ಮೇಲುಸ್ತುವಾರಿಗೆ ಒಳಪಡಿಸಿತು. ದಕ್ಷಿಣ ಆಫ್ರಿಕಾವು ನಮೀಬಿಯಾದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದಾಗಿ ನಮೀಬಿಯಾಕ್ಕೆ ಯಾವ ಪ್ರಯೋಜನವೂ ದೊರಕಲಿಲ್ಲ. ನಮೀಬಿಯನ್ನರನ್ನು ಶೋಷಿಸುವ ಪ್ರವೃತ್ತಿ ಹಿಂದಿನಂತೆಯೇ ಮುಂದುವರಿಯಿತು. ಶೋಷಣೆ ಮಾಡುವ ಜನರು ಬದಲಾಗಿದ್ದರು ಅಷ್ಟೇ. ಇದರ ಮಧ್ಯೆಯೂ ನಮೀಬಿಯಾದ ಆರ್ಥಿಕತೆ ಬೆಳವಣಿಗೆ ಹೊಂದತೊಡಗಿತು. ಮುಖ್ಯವಾಗಿ ವಜ್ರದ ವ್ಯಾಪಾರದಿಂದಾಗಿ ಉತ್ತಮ ಆದಾಯ ಬರತೊಡಗಿತು.
1947ರ ವೇಳೆಗೆ ನಮೀಬಿಯಾದ ಜನರು ಸ್ವಾತಂತ್ರ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸತೊಡಗಿದರು. 1980ರ ದಶಕದಲ್ಲಿ ನಮೀಬಿಯಾದ ಆರ್ಥಿಕ ಸ್ಥಿತಿ ಹದಗೆಡಲಾರಂಭಿಸಿತು. ಇದರಿಂದಾಗಿ ಜನರ ಆಕ್ರೋಶ ತೀವ್ರಗೊಂಡಿತು. ಇದೇ ಸಂದರ್ಭದಲ್ಲಿ ಅಂಗೋಲಾದಲ್ಲಿ ದಕ್ಷಿಣ ಆಫ್ರಿಕನ್ನರಿಗೆ ಎದುರಾದ ಸೋಲು ಅವರನ್ನು ನಮೀಬಿಯಾಕ್ಕೆ ಸ್ವಾತಂತ್ರ್ಯ ನೀಡುವ ಕಡೆಗೆ ಪ್ರೇರೇಪಿಸಿತು. ಅಂತಿಮವಾಗಿ 1990ರ ಮಾರ್ಚ್ 21ರಂದು ನಮೀಬಿಯಾ ದಕ್ಷಿಣ ಆಫ್ರಿಕಾದಿಂದ ಸ್ವಾತಂತ್ರ್ಯ ಗಳಿಸಿಕೊಂಡಿತು.
ನೈಸರ್ಗಿಕವಾಗಿ ಅದ್ಭುತವಾಗಿರುವ, ರೋಚಕವಾಗಿರುವ ಹಲವು ತಾಣಗಳು ನಮೀಬಿಯಾದಲ್ಲಿವೆ. ಇವುಗಳಲ್ಲಿ ಫಿಶ್ ರಿವರ್ ಕ್ಯಾನ್ಯನ್ ಕೂಡಾ ಒಂದು. ಇದು ಆಫ್ರಿಕಾದ ಅತೀ ದೊಡ್ಡ ಕಣಿವೆ ಎನಿಸಿಕೊಂಡಿದೆ. ಈ ಕಣಿವೆಯು ಬರೋಬ್ಬರಿ ನೂರಾ ಅರುವತ್ತು ಕಿಲೋಮೀಟರ್ಗಳಷ್ಟು ಉದ್ದವಾಗಿದ್ದು, ಇಪ್ಪತ್ತೇಳು ಕಿಲೋಮೀಟರ್ ಅಗಲವಾಗಿದೆ. ಇದರ ಆಳ ಐನೂರೈವತ್ತು ಮೀಟರ್ಗಳು. ಗ್ರ್ಯಾಂಡ್ ಕ್ಯಾನ್ಯನ್ ಎನ್ನುವುದು ಪ್ರಪಂಚದ ಅತೀ ದೊಡ್ಡ ಕಣಿವೆಯಾಗಿದೆ. ಅದರ ನಂತರದ ಸ್ಥಾನ ನಮೀಬಿಯಾದ ಈ ಕಣಿವೆಯದ್ದಾಗಿದೆ. ನಮೀಬಿಯಾ ದೇಶವು ಅಟ್ಲಾಂಟಿಕ್ ಮಹಾಸಾಗರವನ್ನು ಸಂಧಿಸುತ್ತದೆ. ಹೀಗೆ ಸಂಧಿಸುವ ಸ್ಥಳವನ್ನು ಸ್ಕೆಲಿಟನ್ ಕೋಸ್ಟ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮೀಬಿಯಾದ ಉತ್ತರ ಭಾಗದಲ್ಲಿ ಈ ಪ್ರದೇಶ ಕಂಡುಬರುತ್ತದೆ. ಇದು ನಿಜಕ್ಕೂ ತೀರಾ ಅಪಾಯಕಾರಿಯಾದ ಪ್ರದೇಶವಾಗಿ ಹಿಂದಿನ ಕಾಲಘಟ್ಟದಿಂದಲೂ ಗುರುತಿಸಿಕೊಂಡಿದೆ. ಇಲ್ಲಿ ಹಡಗುಗಳನ್ನು ದಡದಿಂದ ಸಾಗರಕ್ಕೆ ಹೋಗುವಂತೆ ಮಾಡುವುದೇ ಅಸಾಧ್ಯವಾಗಿತ್ತು. ವಿಶಾಲವಾದ ಜೌಗು ಪ್ರದೇಶದ ಮೂಲಕ ಮಾತ್ರವೇ ಹಡಗುಗಳನ್ನು ಸಾಗರದ ಕಡೆಗೆ ಹೋಗುವಂತೆ ಮಾಡಬಹುದಾಗಿತ್ತು. ಶುಷ್ಕ ಮರುಭೂಮಿಯ ಮೂಲಕವೂ ಪ್ರತ್ಯೇಕವಾಗಿ ನೌಕೆಗಳು ಸಾಗರವನ್ನು ಸೇರುವುದಕ್ಕೆ ಸಾಧ್ಯವಿತ್ತು. ಬಹುತೇಕ ಸಂದರ್ಭಗಳಲ್ಲಿ ಹೀಗೆ ಸಾಗರಕ್ಕಿಳಿದ ನೌಕೆಗಳು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿವೆ. ದುರಂತಗಳನ್ನು ಕಂಡಿವೆ. ಆದರೂ ಸಹ ಮನುಷ್ಯರ ಅಂತರಂಗದಲ್ಲಿರುವ ಸಾಹಸ ಪ್ರವೃತ್ತಿ ಅವರನ್ನು ಸುಮ್ಮನಿರುವುದಕ್ಕೆ ಬಿಡುವುದಿಲ್ಲ. ಇದರಿಂದಾಗಿ ಈ ಸ್ಥಳವು ಮತ್ತೆ ಮತ್ತೆ ಅಪಾಯಕಾರಿ ಎಂಬ ಗುರುತಿಸುವಿಕೆಗೆ ಒಳಗಾಗುವಂತಾಗಿದೆ.
ಕಲಹರಿ ಮರುಭೂಮಿ ನಮೀಬಿಯಾದಲ್ಲಿ ಹರಡಿಕೊಂಡಿದೆ. ಈ ಮರುಭೂಮಿಯ ಕೆಳಗೆ ಸರೋವರವೊಂದಿದ್ದು, ಇದನ್ನು ವಿಶ್ವದ ಅತೀ ದೊಡ್ಡ ಭೂಗತ ಸರೋವರವೆಂದು ಗುರುತಿಸಲಾಗಿದೆ. ಡ್ರ್ಯಾಗನ್ ಬ್ರೀತ್ ಕೇವ್ ಎಂಬ ಹೆಸರಿನ ಗುಹೆಯ ಕೆಳಗೆ ಈ ಸರೋವರ ಕಂಡುಬರುತ್ತದೆ. ಗುಹೆಯ ಬಾಯಿಯಿಂದ ವಿಚಿತ್ರವಾದ ಉಸಿರಾಟದ ಸದ್ದು ಕೇಳಿಬರುತ್ತದೆ. ಈ ಕಾರಣದಿಂದ ಈ ಗುಹೆಗೆ ಡ್ರ್ಯಾಗನ್ ಬ್ರೀತ್ ಕೇವ್ ಎಂಬ ಹೆಸರು ಬಂದಿದೆ. ಈ ಗುಹೆಯಿಂದ ನೂರು ಮೀಟರ್ಗಳಷ್ಟು ಕೆಳಕ್ಕೆ ಇಳಿದರೆ ಸರೋವರವನ್ನು ತಲುಪಬಹುದು. ಈ ಭೂಗತ ಸರೋವರದಲ್ಲಿ ಪ್ರಪಂಚದ ಅಪರೂಪದ ಮೀನುಗಳು ಕಾಣಸಿಗುತ್ತವೆ. ನಮೀಬ್ ಹೆಸರಿನ ಮರುಭೂಮಿ ನಮೀಬಿಯಾದಲ್ಲಿದೆ. ನಮೀಬ್ ಎಂದರೆ ತೆರೆದ ಸ್ಥಳಗಳ ನಾಡು ಎನ್ನುವ ಅರ್ಥವಿದೆ. ಎಲ್ಲಾ ಸಮಯಗಳಲ್ಲಿಯೂ ಭೀಕರವಾದ ಗಾಳಿ ಮತ್ತು ಸುಡು ಬಿಸಿಲಿನಿಂದ ಕೂಡಿಕೊಂಡಿರುವ ಈ ಮರುಭೂಮಿ ನಸುಕಿತ್ತಳೆ ಬಣ್ಣದಲ್ಲಿದೆ. ವಿಶ್ವದ ಅತ್ಯಂತ ಹಳೆಯ ಮರುಭೂಮಿ ಎನಿಸಿಕೊಂಡಿರುವ ಇದು ಎಂಟು ಕೋಟಿ ವರ್ಷಗಳಷ್ಟು ಹಳೆಯದು ಎಂಬ ಅಭಿಪ್ರಾಯವಿದೆ. ಪ್ರಪಂಚದ ಕೆಲವು ದೊಡ್ಡ ಮರಳು ದಿಬ್ಬಗಳು ನಮೀಬ್ ಮರುಭೂಮಿಯಲ್ಲಿ ಕಂಡುಬರುತ್ತವೆ. ಈ ಎತ್ತರದ ಮರಳು ದಿಬ್ಬಗಳು ಎದ್ದುತೋರುವಂತಿವೆ. ಇವುಗಳನ್ನು ಏರುವುದು ಬಹಳ ಖುಷಿ ಕೊಡುತ್ತವೆ. ಇಲ್ಲಿ 7383 ಮೀಟರ್ಗಳಷ್ಟು ಎತ್ತರವಿರುವ ದಿಬ್ಬವೊಂದಿದ್ದು, ಇದು ದೇಶದಲ್ಲಿಯೇ ಅತೀ ಎತ್ತರದ ಮರಳು ದಿಬ್ಬ ಎನಿಸಿಕೊಂಡಿದೆ. ನಮೀಬ್ ಮರುಭೂಮಿಯ ದಕ್ಷಿಣ ಭಾಗದಲ್ಲಿರುವ ಸೊಸ್ಸುಸ್ಲೇವ್ ಹೆಸರಿನ ಸ್ಥಳವು ದೈತ್ಯಾಕಾರದ ಮರಳು ದಿಬ್ಬಗಳಿಗೆ ಪ್ರಸಿದ್ಧವಾಗಿದೆ. ಇವುಗಳಲ್ಲಿ ಹಲವು ದಿಬ್ಬಗಳು ಇನ್ನೂರು ಮೀಟರ್ಗಳಿಗಿಂತಲೂ ಹೆಚ್ಚು ಎತ್ತರವಾಗಿರುತ್ತವೆ.
ನಮೀಬಿಯಾದ ಆರ್ಥಿಕತೆಯು ಗಣಿಗಾರಿಕೆಯನ್ನು ಪ್ರಮುಖವಾಗಿ ಆಧರಿಸಿಕೊಂಡಿದೆ. ನಮೀಬಿಯಾದ ಜಿಡಿಪಿಯ ಮೂವತ್ತು ಶೇಕಡಾ ಬರುತ್ತಿರುವುದು ಗಣಿಗಾರಿಕೆಯಿಂದಲೇ. ದೇಶದ ಹತ್ತು ಶೇಕಡಾದಷ್ಟು ಕಾರ್ಮಿಕರು ಇದರ ಮೂಲಕವೇ ಉದ್ಯೋಗ ಪಡೆದುಕೊಂಡಿದ್ದಾರೆ. ವಜ್ರಗಳು, ಯುರೇನಿಯಂ ಆಕ್ಸೈಡ್ ಮತ್ತು ಕೆಲವು ಲೋಹಗಳ ಜೊತೆಗೆ ನೈಸರ್ಗಿಕ ಅನಿಲ ಮತ್ತು ಚಿನ್ನ ಗಣಿಗಾರಿಕೆಯ ನೆಲೆಯಿಂದ ಪ್ರಾಮುಖ್ಯತೆ ಪಡೆದುಕೊಂಡಿವೆ. ಕಡಲ ತೀರದಲ್ಲಿ ಮತ್ತು ಜಲಾನಯನ ಪ್ರದೇಶಗಳಲ್ಲಿ ತೈಲ ಉತ್ಪಾದನೆ ನಡೆಯುತ್ತದೆ. ಪ್ರಪಂಚದಾದ್ಯಂತ ವಜ್ರಗಳಿಗಿರುವ ಬೇಡಿಕೆಯಲ್ಲಿ ಮೂವತ್ತು ಪ್ರತಿಶತ ಪೂರೈಕೆಯಾಗುತ್ತಿರುವುದು ನಮೀಬಿಯಾದಿಂದ. ಯುರೇನಿಯಂ ಉತ್ಪಾದನೆಯೂ ಸಹ ಗಣನೀಯ ಪ್ರಮಾಣದಲ್ಲಿದೆ. ಟ್ಸುಮೆಬ್ ಹೆಸರಿನ ಗಣಿ ಸಂಕೀರ್ಣವು ಕೆಲವು ಸಮಸ್ಯೆಗಳನ್ನು ಹೊಂದಿದೆ. ಈ ಕಾರಣದಿಂದ ಹೊಸ ಗಣಿಯನ್ನು ಆರಂಭಿಸುವುದು ಮುಖ್ಯ. 1990ರ ವೇಳೆಗೆ ನಮೀಬಿಯಾದ ಪ್ರವಾಸೋದ್ಯಮ ವಿಸ್ತರಿಸತೊಡಗಿದೆ. ಅಲ್ಲಿಯ ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವ ಉದ್ದೇಶದಿಂದ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.
ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ ದೇಶ ನಮೀಬಿಯಾ. ನಮೀಬಿಯಾ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಅದರ ಸಂವಿಧಾನವನ್ನು ರೂಪಿಸಲಾಗಿದೆ. ಈ ಸಂವಿಧಾನದಲ್ಲಿ ಪರಿಸರ ಸಂರಕ್ಷಣೆಯನ್ನೂ ಸಹ ಸೇರಿಸಿಕೊಳ್ಳಲಾಗಿದೆ. ಈ ಬಗೆಯಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆ ನಮೀಬಿಯಾದ್ದು. ವಿಶ್ವದ ಅತೀದೊಡ್ಡ ನೈಸರ್ಗಿಕ ಸಂರಕ್ಷಣಾ ಪ್ರದೇಶಗಳಲ್ಲಿ ಒಂದು ಪ್ರದೇಶ ಇರುವುದು ನಮೀಬಿಯಾದಲ್ಲಿ. ನಮೀಬ್ ನೌಕ್ಲುಫ್ಟ್ ಪಾರ್ಕ್ ಎನ್ನುವುದು ಈ ಹೆಗ್ಗಳಿಕೆಗೆ ಪಾತ್ರವಾದ ಪ್ರದೇಶವಾಗಿದೆ. ನಮೀಬ್ ಮರುಭೂಮಿಯಲ್ಲಿ ನೌಕ್ಲುಫ್ಟ್ ಪರ್ವತ ಶ್ರೇಣಿಯಲ್ಲಿ ನಮೀಬ್ ನೌಕ್ಲುಫ್ಟ್ ಪಾರ್ಕ್ ಹೆಸರಿನ ಈ ಅತೀ ದೊಡ್ಡ ಉದ್ಯಾನವನವನ್ನು ನಿರ್ಮಿಸಲಾಗಿದೆ. ಈ ರಾಷ್ಟ್ರೀಯ ಉದ್ಯಾನವನವು 8600 ಚದರ ಮೈಲುಗಳಷ್ಟು ವಿಸ್ತೀರ್ಣವಾಗಿದ್ದು, ಹೆಚ್ಚಿನ ಖನಿಜ ಮತ್ತು ಉಪ್ಪಿನೊಂದಿಗೆ ಒಣ ಸರೋವರ ಇಲ್ಲಿದೆ. ಈ ಸರೋವರ ವರ್ಷದ ಕೆಲವು ದಿನಗಳಲ್ಲಿ ಮಾತ್ರ ನೀರಿನಿಂದ ತುಂಬಿಕೊಂಡಿರುತ್ತದೆ. ಉಳಿದ ದಿನಗಳಲ್ಲಿ ಖಾಲಿಯಿರುತ್ತದೆ. ಫ್ಲೆಮಿಂಗೋಗಳನ್ನು ಇಲ್ಲಿ ಕಾಣಬಹುದು. ಹಲವು ಬಗೆಯ ಜೀವಿಗಳಿಗೆ ನೆಲೆಯಾಗಿರುವ ಪ್ರದೇಶವಿದು. ಸುಮಾರು 114 ಜಾತಿಯ ಸಸ್ತನಿಗಳು ಇಲ್ಲಿವೆ. ಅಪರೂಪದ ನರಿಗಳು, ಮರುಭೂಮಿಯ ಸಿಂಹಗಳು, ಚಿರತೆಗಳು, ಜೆಮ್ಬ್ಯಾಕ್ಸ್ಗಳು ಇಲ್ಲಿವೆ. ಜೊತೆಗೆ ಬೇರೆಲ್ಲಿಯೂ ಕಾಣಸಿಗದ ಮರುಭೂಮಿಯ ಸರೀಸೃಪಗಳು ಇಲ್ಲಿದ್ದು, ವೈಶಿಷ್ಟ್ಯತೆಯನ್ನು ಸಾರಿ ಹೇಳುತ್ತಿವೆ. ವಿಶಿಷ್ಟ ಪ್ರಭೇದದ ಹಾವುಗಳು, ಗೆಕ್ಕೋಗಳು ಈ ಬಗೆಯ ಸರೀಸೃಪಗಳು. ಗೆಕ್ಕೋಗಳು ವಿಚಿತ್ರವಾದ ಸದ್ದನ್ನು ಹೊರಡಿಸುತ್ತವೆ. ಇದು ವಿನೋದಮಯವಾಗಿರುತ್ತದೆ.
340ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣುವುದಕ್ಕೆ ಸಾಧ್ಯವಿದೆ. ನಮೀಬಿಯಾದಲ್ಲಿ ಪರಿಸರದ ರಕ್ಷಣೆ ಸಾಧ್ಯವಾಗುತ್ತಿರುವುದು ಅಲ್ಲಿಯ ಸ್ಥಳೀಯ ಸಮುದಾಯಗಳಿಂದ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಜನರು ನಿಸರ್ಗದ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ನೆಲೆಯಲ್ಲಿ ಗಮನಾರ್ಹವಾದ ಕೊಡುಗೆಯನ್ನು ನೀಡುತ್ತಿವೆ. ನಿಸರ್ಗವನ್ನು ಆಧಾರವಾಗಿಟ್ಟುಕೊಂಡ ಜೀವನಶೈಲಿಯನ್ನು ಈಗಲೂ ಉಳಿಸಿಕೊಂಡಿರುವ ಅಲ್ಲಿನ ಹಲವು ಸಮುದಾಯಗಳು ಬದುಕನ್ನು ನಡೆಸುವುದರ ಜೊತೆಗೆ ಪ್ರಕೃತಿಯನ್ನೂ ಉಳಿಸಿ, ಬೆಳೆಸುತ್ತಿವೆ. ಇದರಿಂದಾಗಿ ನಮೀಬಿಯಾದ ಪ್ರವಾಸೋದ್ಯಮವೂ ಸಹ ಅಭಿವೃದ್ಧಿ ಕಂಡಿದೆ. ಪ್ರವಾಸೋದ್ಯಮಕ್ಕೆ ದೊರಕಿರುವ ಉತ್ತೇಜನದಿಂದಾಗಿ ಈ ಬುಡಕಟ್ಟು ಸಮುದಾಯಗಳು ಸಶಕ್ತಗೊಳ್ಳುತ್ತಿವೆ. ನಮೀಬಿಯಾದ ಬುಡಕಟ್ಟು ಸಮುದಾಯಗಳು ಅಲ್ಲಿನ ನಿಸರ್ಗವನ್ನು ಸಂರಕ್ಷಿಸಲು ನೀಡಿರುವ ಕೊಡುಗೆಯನ್ನು ವಿಶ್ವ ವನ್ಯಜೀವಿ ನಿಧಿ ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಗುರುತಿಸಿದೆ. 2013ರಲ್ಲಿ ಈ ಸಂಘಟನೆಯಿಂದ ನಮೀಬಿಯಾಕ್ಕೆ ಗಿಫ್ಟ್ ಟು ದಿ ಅರ್ಥ್ ಹೆಸರಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ನಮೀಬಿಯಾದ ಬುಡಕಟ್ಟು ಸಮುದಾಯದ ಜನರ ಜೀವನಶೈಲಿಯಿಂದಾಗಿ ಪರಿಸರದ ರಕ್ಷಣೆ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಪರಿಸರದ ಅನನ್ಯತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉಳಿದ ಎಲ್ಲಾ ದೇಶಗಳಿಗೂ ಇದು ಆದರ್ಶವಾದ ಮಾದರಿಯಾಗುವುದಕ್ಕೆ ಸಾಧ್ಯವಿದೆ.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.