ಬಿಟ್ಟು ಬಿಡು ನನ್ನನು…
ಒಂದು ಬಗೆಹರಿಯದ ಕದನ
ವಿರಾಮವಿಲ್ಲದೆ ನಡೆಯುತ್ತಿರುವಾಗ
ನೀನು ಮುಂಜಾವಿನ ಬೆಳಕಲ್ಲಿ
ಮಂಜಿನಂಥ ಹತ್ತಿಯಿಂದ ನೂಲ
ತೆಗೆಯುತ್ತಲಿದ್ದೆ
ಬೆಂದ ಬೀಜವನ್ನು ಉತ್ತು ಬೆಳೆಸುವ
ಹುಕಿ ಹುಟ್ಟಿದವನಂತೆ
ಸಂಧಾನ ಬಾವುಟದ ಬಟ್ಟೆಯ
ನೇಯುವ ಸಲುವಾಗಿ
ಬಾನಿಗೆ ತೂಗುಬಿಟ್ಟ ತೂಗುದೀಪದ
ಸೊಡರು ತುಯ್ಯುತ್ತಲಿರುವಾಗ
ಒಂದು ಜೀವಂತ ಗ್ರಹ ಮಂಡಲನ್ನು
ಬಯಸುತ್ತಿದೆ ಪ್ರತಿ ನಕ್ಷತ್ರವೂ
ಎಷ್ಟೇ ವೇಗವಿರಲಿ ಎಷ್ಟೇ ದೈತ್ಯನಿರಲಿ
ಒಂದು ಉಸಿರಿನ ಚಲನೆಯಿಲ್ಲದೆ
ಜೀವಂತವಾಗುವುದಾರೂ ಹೇಗೆ
ನಿನ್ನ ಒಂದು ಸ್ಪರ್ಶವಾದರೂ
ತಂಗಾಳಿಯ ಹೊಟ್ಟೆ ಹೊಕ್ಕು
ಮೈತಾಗದಿದ್ದರೆ…
ರೇಖೆಗಳೇ ಇಲ್ಲದ ಹಸ್ತಕ್ಕೆ ಯಾವ ಭವಿಷ್ಯ
ನೀನು ತೋರಿಸುವ ನೆತ್ತರಿನ ಕೂಪಕ್ಕೆ
ನಾ ಜಿಗಿಯಲಾರೆ..
ಬಿಟ್ಟು ಬಿಡು ನನ್ನನು ನನ್ನ ಪಾಡಿಗೆ
ಕನಸುಗಳಿಗೆ ಕನವರಿಕೆಯ ತೋರಣ ಕಟ್ಟಿ
ನಿಲುವುಗನ್ನಡಿಯ ಮುಂದೆ
ಹುಬ್ಬು ತೀಡಿಕೊಳ್ಳುತ್ತೇನೆ
ಸ್ವಲ್ಪವೇ ಲಿಪ್ಸ್ಟಿಕ್ ಹಚ್ಚಿಕೊಳ್ಳುತ್ತಾ
ಹರೆಯವನ್ನು ಹಾರಿಬಿಡುತ್ತೇನೆ
ಕ್ಷಣಕಾಲದ ಭಂಗುರವನ್ನು
ಹಿಡಿದಿಡುವ ಸಾಹಸಿಯಂತೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”