Advertisement
ಕೂರಾಪುರಾಣ ೯: ಕಾರು ಪ್ರಯಾಣವೆಂದರೆ ಮೇಲೇಳುತ್ತವೆ ಕಿವಿಗಳು..

ಕೂರಾಪುರಾಣ ೯: ಕಾರು ಪ್ರಯಾಣವೆಂದರೆ ಮೇಲೇಳುತ್ತವೆ ಕಿವಿಗಳು..

ಸುಖವಾಗಿ ಮಲಗಲು ಬೆಡ್, ದಾರಿಯಲ್ಲಿ ನೀರು ಕುಡಿಯಲು ನಾಯಿಗಳಿಗೆಂದೇ ಇರುವ ವಿಶೇಷವಾದ ನೀರಿನ ಬಾಟಲಿ, ಬೀಚ್ ಪಾರ್ಕ್ ಇತ್ಯಾದಿ ಜಾಗಗಳಿಗೆ ಹೋದರೆ ಆಟವಾಡಲು ಚೆಂಡು ಮತ್ತಿತರ ಆಟದ ಸಾಮಾನುಗಳನ್ನು ಹೊತ್ತ ಒಂದು ಡಬ್ಬಿ – ಎಲ್ಲವು ಈಗ ಕಾರಿನಲ್ಲಿವೆ. ಕೂರಾ ಇಲ್ಲದಿದ್ದಾಗ ತರಕಾರಿ, ಕಿರಾಣಿ, ಮತ್ತಿತರೆ ಸಾಮಾನುಗಳನ್ನು ಹಿಂದಿನ ಸೀಟಿನಲ್ಲಿ ತುಂಬುತ್ತಿದ್ದ ನಾವು ಈಗ ಅವೆಲ್ಲವನ್ನು ಡಿಕ್ಕಿಯಲ್ಲಿ ಹೇರಿ ಅಲ್ಲಿ ಜಾಗ ಸಾಲದಾದರೆ ನಮ್ಮ ಕಾಲ ಬಳಿಯೇ ಇಟ್ಟುಕೊಂಡು ಇಕ್ಕಟ್ಟು ಮಾಡಿಕೊಳ್ಳುತ್ತೆವೆಯೇ ಹೊರತು ಹಿಂದೆ ಪವಡಿಸುವ ನಮ್ಮ ಮಹಾರಾಜರಿಗೆ ಒಂದಿನಿತು ಅಸೌಕರ್ಯ ಮಾಡುವುದಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಒಂಭತ್ತನೆಯ ಕಂತು

ಜಗತ್ತು ಇನ್ನೂ ಪೂರ್ತಿಯಾಗಿ ನಮ್ಮ ಕಣ್ಣೆದುರಿಗೆ ತೆರೆದುಕೊಂಡಿರದೇ ಹೊತ್ತಿನಲ್ಲಿ ಎಲ್ಲವು ಎಷ್ಟು ಬೆರಗಿನಿಂದ ಕೂಡಿರುತ್ತದೆ. ಎಲ್ಲೆಂದರಲ್ಲಿ ಹಾರುವ ಚಿಟ್ಟೆ, ಉರುಳುತ್ತಿರುವ ಚೆಂಡು, ಬಣ್ಣ ಬಣ್ಣದ ಪುಗ್ಗೆ, ಆಕಾಶದಿಂದ ಸುರಿಯುತ್ತಿರುವ ಮಳೆ, ರಾತ್ರಿಯ ಚಂದ್ರ, ಮರದ ಮೇಲೆ ಕುಳಿತಿರುವ ಹಕ್ಕಿ, ರಸ್ತೆಯ ಮೇಲೆ ಹಾರಿಕೊಂಡು ಹೋಗುತ್ತಿರುವ ಖಾಲಿ ಚಿಪ್ಸಿನ ಪ್ಯಾಕೆಟ್ಟು… ಎಲ್ಲವು ಅಚ್ಚರಿಯೇ. ಒಮ್ಮೆ ಅದರ ಪರಿಚಯವಾದ ಮೇಲೆ ಅದರ ಬಗೆಗಿನ ಕುತೂಹಲ ಕಡಿಮೆಯಾಗಿ ಪದೇ ಪದೇ ನೋಡಿದಂತೆಲ್ಲ ಆ ಬೆರಗು ಮಾಯವಾಗಿ ‘ಇದರಲ್ಲೇನಿದೆ’ ಎಂಬ ಅಸಡ್ಡೆ ಶುರುವಾಗುತ್ತದೆ. ಬೆಳಗಿನ ಜಾವಕ್ಕೆ ಅರಳಿದ ಹೂವಿನ ಸೌಂದರ್ಯ ಕಣ್ಸೆಳೆಯದೇ ಇದ್ದಾಗ ಮನಸ್ಸಿಗೆ ಬಹಳಷ್ಟು ವಯಸ್ಸಾಯಿತು ಎಂದೇ ಲೆಕ್ಕ. ಈ ಕುತೂಹಲದ ಬುಗ್ಗೆ ಮನುಷ್ಯರಿಗಷ್ಟೇ ಅಲ್ಲ ಎಲ್ಲಾ ಪ್ರಾಣಿಗಳಲ್ಲಿಯು ಇರುತ್ತದೆ. ಅದರಲ್ಲೂ ನಾಯಿಗಳಿಗಂತೂ ಎಲ್ಲದರ ಬಗ್ಗೆಯೂ ಕುತೂಹಲವೇ. ನಮಗು ಅವುಗಳಿಗು ಒಂದೇ ಅಂತರವೆಂದರೆ ಅವುಗಳ ಕುತೂಹಲ ಯಾವತ್ತಿಗು ಕಡಿಮೆಯಾಗುವುದಿಲ್ಲ. ಅವುಗಳಿಗೆ ವಯಸ್ಸಾದಂತೆಲ್ಲ ಉದ್ವೇಗ ಕಡಿಮೆಯಾಗುತ್ತದೆಯೇ ಹೊರತು ಅಚ್ಚರಿ ಹಾಗೆ ಉಳಿದುಕೊಂಡಿರುತ್ತದೆ.

ಕೂರಾನನ್ನು ವಾಕಿಂಗಿಗೆ ಕರೆದುಕೊಂಡು ಹೋಗುವಾಗ ಅದೇ ದಾರಿಯಲ್ಲಿ ದಿನನಿತ್ಯ ನಡೆದರೂ ಹೊಸ ದಾರಿಯಲ್ಲಿ ನಡೆಯುತ್ತಿದ್ದಾನೆ ಎನ್ನುವ ಹಾಗೆ ಎಲ್ಲವನ್ನು ಮೂಸುತ್ತಲೇ ಸಾಗುತ್ತಾನೆ. ಅದೇ ದಾರಿ, ರಸ್ತೆಯ ಪಕ್ಕದಲ್ಲಿರುವ ಅವೇ ಕಲ್ಲುಗಳು, ಅಲ್ಲಿಯೇ ಬೇರು ಬಿಟ್ಟಿರುವ ಗಿಡಗಳಿದ್ದರು ಅವನಿಗೆ ಮಾತ್ರ ಅದಾವುದು ಬೋರ್ ಹೊಡೆಸುವುದಿಲ್ಲ. ಎಂದಿಗೂ ಮುಖ ಜೋಲು ಹಾಕಿಕೊಂಡು ನಡೆದದ್ದನ್ನು ನಾ ಕಾಣೆ. ಕೆಲವು ನಾಯಿಗಳು ಅತಿಯಾಗಿ ಮೂಸುತ್ತವೆ. ಅವುಗಳಿಗೆ ಸ್ನಿಫ್ಫರ್ ಡಾಗ್ಸ್ ಎನ್ನುತ್ತಾರೆ. ಇಂತಹ ನಾಯಿಗಳು ವಾಸನೆಯನ್ನು ಬೆಂಬತ್ತಿ ನಡೆಯಬಲ್ಲವು. ಎಷ್ಟೇ ದೂರದಿಂದ ವಾಸನೆ ಬರುತ್ತಿದ್ದರು ಅದನ್ನು ಗ್ರಹಿಸುವ ಶಕ್ತಿ ಹೊಂದಿರುತ್ತವೆ. ಈ ವಿಶಿಷ್ಟ ವಾಸನಾಗ್ರಹಣದ ಶಕ್ತಿಯಿರುವ ನಾಯಿಗಳನ್ನು ಪೋಲಿಸ್ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಾರೆ. ಕೂರಾನಿಗೆ ವಾಸನೆಯನ್ನು ಗ್ರಹಿಸುವ ಶಕ್ತಿ ಎಷ್ಟಿದೆಯೆಂದು ಗೊತ್ತಿಲ್ಲ ಆದರೆ ಅವನು ಸದಾ ಮೂಸುತ್ತಲೇ ಇರುವುದನ್ನು ನೋಡಿದರೆ ಪೋಲಿಸ್ ನಾಯಿಯಾಗಬಲ್ಲ ಎನ್ನಿಸುತ್ತದೆ. ಜೀವನದಲ್ಲಿ ಏನೇನೋ ಆಗಬೇಕೆಂದುಕೊಂಡವರನ್ನು ಇಂಜಿನಿಯರ್ ಮಾಡಿದ ಹಾಗೆ ಪೋಲಿಸ್ ನಾಯಿಯಾಗಬಲ್ಲ ಸಾಮರ್ಥ್ಯ ಹೊಂದಿರುವ ಕೂರಾನನ್ನು ಮನೆಯಲ್ಲಿ ಇಟ್ಟುಕೊಂಡು ಅವನ ಕನಸನ್ನು ಹಾಳು ಮಾಡಿದೆವೇನೋ ಎನ್ನಿಸುತ್ತದೆ. ಹೀಗೆ ತಮ್ಮ ನಾಯಿಯ ಬಗ್ಗೆ ಓವರಥಿಂಕ್ ಮಾಡುವುದಕ್ಕೆ ‘ಟೂ ಮಚ್ ಡಾಗ್ ಸಿಂಡ್ರೋಮ್’ ಎಂದು ಹೆಸರು (ನಾನೇ ಹೆಸರು ಕೊಟ್ಟದ್ದು).

ಕೂರಾ ಮೊದಲ ಸಲ ಮನೆಗೆ ಬಂದಾಗ ಕಾರಿನ ಹಿಂಬದಿಯಲ್ಲಿ ಕೂತು ಬಂದ ಎಂದು ಹೇಳಿದೆನಲ್ಲ. ಅದಾದ ಎರಡು ದಿನಗಳ ನಂತರ ಅವನನ್ನು ಕಾರಿನಲ್ಲಿ ಕರೆದುಕೊಂಡು ಹೋದೆವು. ಇಲ್ಲಿ ಕಾರಿನಲ್ಲಿ ನಾಯಿಗಳನ್ನು ಕರೆದುಕೊಂಡು ಹೋಗುವುದು ತೀರಾ ಸಾಮಾನ್ಯ ಸಂಗತಿ. ಕಿಟಕಿಯೊಳಗೆ ಕುತ್ತಿಗೆ ತೂರಿಸಿ ಮುಖಕ್ಕೆ ನುಗ್ಗುತ್ತಿರುವ ಗಾಳಿಯನ್ನು ಆಸ್ವಾದಿಸುತ್ತ ನಾಲಿಗೆ ಚಾಚಿಕೊಂಡು ನಿಂತಿರುವ ನಾಯಿಗಳನ್ನು ಕಾರಿನಲ್ಲಿ ನೋಡಿದಾಗಲೆಲ್ಲ ಆಶ್ಚರ್ಯವೆನ್ನಿಸುತ್ತಿತ್ತು. ಕೂರಾನನ್ನು ಕಾರಿನಲ್ಲಿ ಕೂರಿಸಿದರೆ ಅವನು ಹಾಗೆಯೇ ಮಾಡಬಹುದು ಎಂಬ ಉತ್ಸಾಹದಲ್ಲಿ ಎತ್ತಿಕೊಂಡರೆ ಎದೆ ತುಂಬುವಂತಿದ್ದ ಆ ಕಂದನನ್ನು ಹಿಂದಿನ ಸೀಟಿನ ಮೇಲೆ ಕೂರಿಸಿದೆವು. ನಾವು ಅವನನ್ನು ನರಕದ ಹೆಬ್ಬಾಲಿಗಿಗೆ ಬಿಟ್ಟು ಬರುವವರಿದ್ದೇವೆ ಎಂಬಂತೆ ಬೆದರಿದ ಜೀವಿ ಪಿಳಿ ಪಿಳಿ ಕಣ್ಣು ಬಿಡುತ್ತ ಕೂತಿತ್ತು. ಸೀಟಿನಿಂದ ಎಲ್ಲಿ ಕೆಳಗೆ ಬಿದ್ದು ಬಿಡುತ್ತದೋ ಎನ್ನುವ ಆತಂಕದಲ್ಲಿ ಮುಂದೆ ಕೂತಿದ್ದ ನಾನು ಹಿಂದೆ ತಿರುಗಿ ನೋಡುತ್ತಲೇ ಇದ್ದೆ. ಮನೆಯ ಹತ್ತಿರವೇ ಇದ್ದ ತರಕಾರಿ ಅಂಗಡಿಗೆ ಹೊರಟಿತ್ತು ನಮ್ಮ ಸವಾರಿ. ಇನ್ನೇನು ಎರಡು ನಿಮಿಷದಲ್ಲಿ ಅಂಗಡಿ ಬಂತು ಎನ್ನುವಾಗ ಹಿಂದೆಯಿಂದ ಗುಳುಕ್ ಗುಳುಕ್ ಎಂದು ಶಬ್ದ. ತಿರುಗಿ ನೋಡಿದರೆ ಒಂದು ಗಂಟೆಯ ಹಿಂದೆ ತಿಂದಿದ್ದ ಆಹಾರವೆಲ್ಲವನ್ನು ವಾಂತಿ ಮಾಡಿಕೊಂಡು ಬಿಟ್ಟಿದ್ದ. ಕಾರಿನ ಸೀಟನ್ನು ಸ್ವಚ್ಛ ಮಾಡುವ ಹೆಚ್ಚಿನ ಕೆಲಸ ಬಂದೊದಗಿ ನಮಗೆ ಕೂರಾನ ಮೊದಲ ಕಾರ್ ಪ್ರಯಾಣ ಸಂಭ್ರಮದ್ದಾಗಿರಲಿಲ್ಲ. ಅದಾದ ಮೇಲೆ ಅವನಿಗೆ ಕಾರಿನಲ್ಲಿ ಕೂರುವುದಕ್ಕೆ ಭಯ ಹುಟ್ಟಿಕೊಂಡು ಬಿಟ್ಟಿತು. ಕಾರಿನಲ್ಲಿ ಕೂತ ಸ್ವಲ್ಪ ಹೊತ್ತಿನಲ್ಲೇ ಗುಳುಕ್ ಗುಳುಕ್ ಎಂದು ಶುರು. ಕಾರ್ ಕಾರ್ ಎಲ್ನೋಡಿ ಕಾರ್ ಎಂದು ನಾಗತಿಹಳ್ಳಿಯವರ ಸಿನಿಮಾದ ಹಾಡಿನ ಹಾಗೆ ಇಲ್ಲಿ ಎಲ್ಲೇ ಹೋದರೂ ಕಾರು ಅವಶ್ಯಕವಾಗಿದ್ದರಿಂದ ಇವನ ಈ ಪರಿಯ ವಾಂತಿ ಪ್ರಹಸನಗಳನ್ನು ತಡೆದುಕೊಳ್ಳುವುದು ಕಷ್ಟವೇ ಆಯಿತು. ನಮಗಿಂತ ಹೆಚ್ಚಾಗಿ ಅವನಿಗೆ ತೊಂದರೆಯಾಗುತ್ತಿದೆ ಎಂದು ಅವನ ವರ್ತನೆಯಿಂದಲೇ ತಿಳಿಯುತ್ತಿತ್ತು. ಆ ಸಮಯದಲ್ಲಿ ಪೋಷಕರನ್ನು ಬದಲಾಯಿಸುವ ಆಯ್ಕೆ ಅವನಿಗೇನಾದರು ಇದ್ದಿದ್ದರೆ ಖಂಡಿತ ನಮ್ಮನ್ನು ಬಿಟ್ಟು ಹೊರಟು ಬಿಡುತ್ತಿದ್ದನೇನೋ.. ಇವತ್ತಿಗು ಅವನಿಗೆ ಆ ಆಯ್ಕೆಯಿಲ್ಲ. ನಮ್ಮೊಡನೆ ಏಗಲೇಬೇಕು. ಅವನ ವಾಂತಿಯನ್ನು ತಡೆಯಲು ಹೊರಗೆ ಹೋಗುವುದಾದರೆ ಅವನಿಗೆ ಊಟ ಮಾಡಿಸದೇ ಇರುವುದು, ಮುಂದೆ ಕೂರುತ್ತಿದ್ದ ನಾನು ಅವನಿಗೋಸ್ಕರ ಹಿಂದೆ ಕೂರುವುದು, ಗುಳುಕ್ ಗುಳುಕ್ ಶಬ್ದ ಕೇಳಿಸಿದ ತಕ್ಷಣ ಕೈಯ್ಯಲ್ಲಿ ಪ್ಲಾಸ್ಟಿಕ್ ಕವರನ್ನು ಅವನ ಬಾಯಿಗೆ ಹಿಡಿಯುವುದು ಹೀಗೆ ಸಕಲಪ್ರಯತ್ನಗಳನ್ನು ಮಾಡಿ ಅಂತೂ ಅವನಿಗೆ ಕಾರ್ ಪ್ರಯಾಣ ರೂಢಿಯಾಗುವಂತೆ ಮಾಡಿದೆವು.

ನಿಧಾನವಾಗಿ ಅವನಿಗು ಕಾರಿನ ಪ್ರಯಾಣ ಸುಖವೆನ್ನಿಸತೊಡಗಿತು. ಕಿಟಕಿ ತೆಗೆದರೆ ಎಲ್ಲಿ ಹಾರಿ ಹೋಗಿ ಬಿಡುತ್ತಾನೋ ಎಂದು ಭಯದಲ್ಲಿ ಚೂರೇ ಚೂರು ತೆರೆಯುತ್ತಿದ್ದ ನಾವುಗಳು ಇವತ್ತು ಪೂರ್ತಿ ಕಿಟಕಿ ತೆಗೆದು ಅವನು ತನ್ನ ಮುಖವನ್ನೆಲ್ಲ ಹೊರಗೆ ಹಾಕಿ ನಿಂತರೂ ಕೇರ್ ಮಾಡುವುದಿಲ್ಲ. ಕಾರೆಂದರೆ ಅಷ್ಟು ಒಗ್ಗಿ ಹೋಗಿದೆ ಈಗ. ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸಿದರೆ ಮಧ್ಯದಲ್ಲಿ ಇರುವ ಖಾಲಿ ಜಾಗದಲ್ಲಿ ಅವನು ಬೀಳಬಾರದೆಂದು ಅದಕ್ಕೆಂದೇ ಇರುವ ಕಾರ್ಪೆಟ್ಟಿನಂತಹ ಹಾಸನ್ನು ಹಾಸಿ ಅವನು ಆರಾಮವಾಗಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಸುಖವಾಗಿ ಮಲಗಲು ಬೆಡ್, ದಾರಿಯಲ್ಲಿ ನೀರು ಕುಡಿಯಲು ನಾಯಿಗಳಿಗೆಂದೇ ಇರುವ ವಿಶೇಷವಾದ ನೀರಿನ ಬಾಟಲಿ, ಬೀಚ್ ಪಾರ್ಕ್ ಇತ್ಯಾದಿ ಜಾಗಗಳಿಗೆ ಹೋದರೆ ಆಟವಾಡಲು ಚೆಂಡು ಮತ್ತಿತರ ಆಟದ ಸಾಮಾನುಗಳನ್ನು ಹೊತ್ತ ಒಂದು ಡಬ್ಬಿ – ಎಲ್ಲವು ಈಗ ಕಾರಿನಲ್ಲಿವೆ. ಕೂರಾ ಇಲ್ಲದಿದ್ದಾಗ ತರಕಾರಿ, ಕಿರಾಣಿ, ಮತ್ತಿತರೆ ಸಾಮಾನುಗಳನ್ನು ಹಿಂದಿನ ಸೀಟಿನಲ್ಲಿ ತುಂಬುತ್ತಿದ್ದ ನಾವು ಈಗ ಅವೆಲ್ಲವನ್ನು ಡಿಕ್ಕಿಯಲ್ಲಿ ಹೇರಿ ಅಲ್ಲಿ ಜಾಗ ಸಾಲದಾದರೆ ನಮ್ಮ ಕಾಲ ಬಳಿಯೇ ಇಟ್ಟುಕೊಂಡು ಇಕ್ಕಟ್ಟು ಮಾಡಿಕೊಳ್ಳುತ್ತೆವೆಯೇ ಹೊರತು ಹಿಂದೆ ಪವಡಿಸುವ ನಮ್ಮ ಮಹಾರಾಜರಿಗೆ ಒಂದಿನಿತು ಅಸೌಕರ್ಯ ಮಾಡುವುದಿಲ್ಲ.

ಕೂರಾನನ್ನು ಕಾರಿನಲ್ಲಿ ಕರೆದುಕೊಂಡು ಹೋಗಲು ಶುರು ಮಾಡಿದ ಮೇಲೆ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿತು. ಅಂಗಡಿ, ಸೂಪರ್ ಮಾರ್ಕೆಟ್ ಮುಂತಾದ ಸ್ಥಳಗಳಲ್ಲಿ ನಾಯಿಗಳಿಗೆ ಪ್ರವೇಶವಿಲ್ಲ. ಕೆಲವು ಹೋಟೆಲ್‌ಗಳು ಹೊರಗಡೆ ಕೂತು ತಿನ್ನುವುದಾದರೆ ನಾಯಿಗಳನ್ನು ಕರೆತರಬಹುದು ಎಂದು ಹೇಳಿ ನೋ ಡಾಗ್ಸ್ ನಿಯಮವನ್ನು ತುಸು ಸಡಿಲಿಸಿರುತ್ತಾರೆ. ಅವನನ್ನು ಕರೆದುಕೊಂಡು ಹೋದಾಗಲೆಲ್ಲ ಅವನನ್ನು ಎಲ್ಲಿ ಬಿಡುವುದು ಎಂದು ಸಮಸ್ಯೆಯಾಯಿತು. ಶುರುವಿನಲ್ಲಿ ಇಬ್ಬರಲ್ಲಿ ಒಬ್ಬರು ಮಾತ್ರ ಒಳಗೆ ಹೋಗಿ ಶಾಪಿಂಗ್, ಮತ್ತಿತರ ಕೆಲಸಗಳನ್ನು ಮುಗಿಸಿಕೊಂಡು ಬರುವುದಾಯಿತು. ಆದರೆ ಇದು ಎಷ್ಟು ದಿನವಂತ ನಡೆಯುತ್ತದೆ? ಹಲವರು ತಮ್ಮ ನಾಯಿಗಳನ್ನು ಕಾರಿನಲ್ಲಿಯೇ ಕಿಟಕಿಯನ್ನು ಸ್ವಲ್ಪ ಇಳಿಸಿ ಬಿಟ್ಟು ಹೋಗುವುದನ್ನು ನೋಡಿದ್ದೆವು. ಕೇವಲ ಅರ್ಧ ಮುಕ್ಕಾಲು ಗಂಟೆಯಾದರೆ ನಡೆಯುತ್ತದೆ ಎಂದು ಗೂಗಲಪ್ಪನು ಪರಿಹಾರ ತಿಳಿಸಿದ. ಮೊದಲ ಬಾರಿಗೆ ಕೂರಾನನ್ನು ಒಂಟಿಯಾಗಿ ಕಾರಿನಲ್ಲಿ ಬಿಟ್ಟು ಹೋದಾಗ ನಾವು ಏನೇನೆಲ್ಲ ಮಾಡಿದೆವು ಗೊತ್ತೇ? ಒಂದು ಫೋನನ್ನು ಕಾರಿನಲ್ಲಿಯೇ ಇಟ್ಟು ಅದರಿಂದ ಇನ್ನೊಬ್ಬರ ಫೋನಿಗೆ ವಿಡಿಯೋ ಕಾಲ್ ಮಾಡಿ ಅದರ ಮೂಲಕ ಅವನನ್ನು ಗಮನಿಸುತ್ತ ಇದ್ದೆವು. ಕಾರಿನ ಅಕ್ಕ ಪಕ್ಕ ಏನೇ ಸದ್ದಾದರು, ಯಾರೇ ನಡೆದುಕೊಂಡು ಹೋದರು ಚಂಗನೆ ಎದ್ದು ಬಿಡುತ್ತಿದ್ದ ಅವನನ್ನು ನೋಡಿ ಕಳವಳವಾಗಿ ಅವಸರದಲ್ಲಿಯೇ ಓಡಿ ಬಂದಿದ್ದೆವು. ಹೇಳಿದೆನಲ್ಲ ನಮಗೆ ‘ಟೂ ಮಚ್ ಡಾಗ್ ಸಿಂಡ್ರೋಮ್’ ಇದೆಯೆಂದು. ಮತ್ತೊಂದು ಸಲ ಅವನಿಗೆಂದು ಹಾಸಿದ್ದ ಹಾಸನ್ನೇ ಕಚ್ಚಿ ತುಂಡು ತುಂಡು ಮಾಡಿದ್ದ. ಆಗ ಪಪ್ಪಿ ಆಗಿದ್ದರಿಂದ ಎಲ್ಲವನ್ನು ಕಚ್ಚುವ, ಕಚ್ಚಿ ಬಿಸಾಕುವ ಹುಚ್ಚಿದ್ದರಿಂದ ಕಾರಿನಲ್ಲಿ ಅಂತಹ ಯಾವುದೇ ವಸ್ತುವಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡೇ ಕಾರಿನಿಂದ ಹೊರಡುತ್ತಿದ್ದೆವು.

ಅದಾದ ನಂತರ ನಿಧಾನವಾಗಿ ಸಮಯವನ್ನು ಹೆಚ್ಚಿಸುತ್ತ ಅವನಿಗೆ ಕಾರಿನಲ್ಲಿ ಕೂರುವ ರೂಢಿ ಮಾಡಿಸಿದೆವು. ಮೊದಲ ಸಲ ಬಿಟ್ಟು ಹೋದಾಗ ಅವನಿಗು ಸಹ ಪ್ಯಾನಿಕ್ ಆಗಿತ್ತೇನೋ.. ಪ್ರತಿ ಸಲ ನಾವು ಮರಳಿ ಬರುವುದನ್ನು ನೋಡಿ ನಾವು ಎಲ್ಲಿಯೇ ಹೋದರು ಮರಳಿ ಬಂದೇ ಬರುತ್ತೇವೆ ಎನ್ನುವ ನಂಬಿಕೆಯಲ್ಲಿ ಕೂರಾ ರಿಲ್ಯಾಕ್ಸ್ ಆಗಿ ನಿದ್ದೆ ಮಾಡತೊಡಗಿದ. ಈಗ ಎರಡ್ಮೂರು ಗಂಟೆಗಳ ಕಾಲ (ಬೇಸಿಗೆಕಾಲವನ್ನು ಹೊರತುಪಡಿಸಿ) ಅವನನ್ನು ಬಿಟ್ಟು ಹೋದರೂ ತನ್ನ ಪಾಡಿಗೆ ತಾನು ಮಲಗಿರುತ್ತಾನೆ. ಅದರಲ್ಲೂ ರೋಡ್ ಟ್ರಿಪ್ ಎಂದರೆ ನಮಗಿಂತ ಅವನಿಗೇ ಹೆಚ್ಚಿನ ಖುಷಿ.

.. ಮುಂದುವರೆಯುತ್ತದೆ.

(ಹಿಂದಿನ ಕಂತು: ಸ್ವಪ್ರೇಮ ಮತ್ತು ನಾಯಿಪ್ರೇಮ ಎಂಬ ಪರಿಶುದ್ಧ ಪ್ರೇಮಗಳು)

About The Author

ಸಂಜೋತಾ ಪುರೋಹಿತ

ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. 'ಸಂಜೀವಿನಿ' ಇವರ ಪ್ರಕಟಿತ ಕಾದಂಬರಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ