ಹಿಂಸೆ- ಅಹಿಂಸೆಗಳ ನಡುವೆ

ನಡೆಯುವಾಗ ಕಾಲ ಕೆಳಗೆ
ಬರುವ ಸಹಸ್ರೋಪಾದಿಯಲ್ಲಿ
ಚಿಕ್ಕ ಚಿಕ್ಕ ದೇಹ ಹೊತ್ತು
ಅತಿ ಸೂಕ್ಷ್ಮಜೀವಿ ಇರುವೆ
ಕೊಲ್ಲಲು ನಮ್ಮ ಕಾಲೇ
ಬೇಕೆಂದಿಲ್ಲ, ಕಿರುಬೆರಳಾದರೂ
ಸಾಕು, ಕ್ಷಣಕ್ಕೆ ಹೋಗುವ ಪ್ರಾಣ

ಯಾವುದೋ ಲೋಕದಲ್ಲಿ ತೇಲಾಡುವ
ಮನ, ಹಿಂಸಿಸುವ ಉದ್ದೇಶವಿಲ್ಲ
ಗೊತ್ತಾಗದೇ ನಡೆದು ಹೋಗುವ
ಅನಿರೀಕ್ಷಿತ ವಿದ್ಯಮಾನ
ಸತ್ತದ್ದು ಕಂಡು ಮರಗುವ ನಮ್ಮ ಜೀವ

ಅಹಿಂಸಾ ಬಟ್ಟೆ ತೊಟ್ಟು, ಹಿಂಸಿಸುವ
ಪರಿ ಹುಲು ಮಾನವನಿಗೆ ಅಪರಿಚಿತ
ಕಳುವು, ಮೋಸ, ಕೊಲೆಗಳು
ತೆಗಳುವ, ಅವಮಾನಿಸುವ,
ಟೀಕೆಗಳ ಕಟು ವಿಮರ್ಶೆಗಳು
ಗೊತ್ತಿಲ್ಲದಂತೆ ಕತ್ತಲೆ ನಾಟಕ

ಮಾತಿನ ಹಿಂಸೆಗೆ ಒಳಗಾದವರೆಷ್ಟೋ
ತಮ್ಮದೇ ಆದರ್ಶಗಳಿಗೆ ಸಿಲುಕಿ
ಹೊರಬರಲಾರದವರೆಷ್ಟೋ
ಕಂಡ ಕನಸಿನ ಭಂಗವಾದವರೆಷ್ಟೋ
ಮಾನಸಿಕ ಹಿಂಸೆ ಅತಿ ಘೋರ
ಅಮಾನುಷ, ವರ್ಣಿಸಲಾರದ ಯಾತನೆ

ಗೊತ್ತಿಲ್ಲದೆ ಆಗುವ ಹಿಂಸೆಗೂ
ಗೊತ್ತಿದ್ದೂ ಆಗುವ ಹಿಂಸೆಗೂ
ವ್ಯತ್ಯಾಸವಿಲ್ಲ
ಉಸಿರು ಪಕ್ಷಿಯಾಗುತ್ತದೆ ಅಷ್ಟೇ