ಪ್ರತಿ ಮುಂಜಾವಿಗೂ ನಿನ್ನದೇ ಹೆಸರು

ವಯಸ್ಸಾಯಿತು ಎಂದೇಕೆ ಹಲುಬುತ್ತಿ
ಸರಿದು ಹೋಗುವ ಪ್ರತಿ ಕ್ಷಣವೂ ಮೈದುಂಬಿಕೊಂಡೆ ಸಾಗುತ್ತದೆ
ಹರೆಯ ಎಂಬುದು ತುಂಬಿಕೊಂಡ ಎದೆ ಪೃಷ್ಠಗಳಷ್ಟೇ ಅಲ್ಲ
ವಯಸ್ಸಲ್ಲದ ವಯಸ್ಸಲ್ಲಿ
ಸಿಕ್ಕುಬಿಟ್ಟೆ ನೀನು
ಮತ್ತೆ ಹರೆಯ ನೆನಪಾಗಲು
ಏನೆಲ್ಲ ಒಪ್ಪಿಸಿಬಿಟ್ಟೆ
ಕತ್ತಲಲಿ ಕೈಯಾಡಿಸದೆ ವಿಧಿ ಇರಲಿಲ್ಲ
ಮಿಂಚಿಗೆ ಹೊಳೆದಿದ್ದು ಹೊಳಪಲ್ಲ
ಹೊಂಚಿ ಕುಳಿತ ಮಿರಿಮಿರಿ ಬೆಕ್ಕು
ಕಂಡಿದ್ದು ನಿಜವಲ್ಲ
ಬೆರಳು ತಾಕಿದ್ದು ಹಿಡಿಗೆ ದಕ್ಕಿದ್ದು
ಖಂಡಿತ ಚಿತ್ರವಲ್ಲ
ನೆರಳು ನಲುಗಿದ್ದು ಕನ್ನಡಿ ನಕ್ಕಿದ್ದು
ನಾವು ಬರಿ ಪಟವಲ್ಲ

ಯೋಚಿಸಿದಷ್ಟು ಅಸ್ಪಷ್ಟ
ದೇನಿಸಿದಷ್ಟು ಸ್ಪಷ್ಟಗೊಳ್ಳುವ ನಾನು ನೀನು
ಬೇರಿಳಿಸಿ ರೆಂಬೆ ಕೊಂಬೆ ಮೂಡಿಸಿಕೊಂಡು ಹೂವರಳೋ ಹೊತ್ತಿಗೆ
ಬೆಳಗು ಕಣ್ತೆರೆಯುತ್ತದೆ

ಜಂಗುಳಿಯಲಿ ಅಚಾನಕ್ಕಾಗಿ ನೆದರಿಗೆ ಬಿದ್ದ ಅಪರೂಪವೆ
ವಯಸಿಗೂ ಹುರಿಗೆಜ್ಜೆ ಕಟ್ಟಿ ಕುಣಿದ ಹರೆಯವೇ
ನೀನು ಎರಡೇ ಎರಡು ಹಲ್ಲು ತೆರೆದು
ನಕ್ಕ ನಗುವನ್ನು ಹಾಗೆ ಬಾಚಿ ಎದೆಯಲ್ಲಿ ಕಾಪಿಟ್ಟುಕೊಂಡಿದ್ದೇನೆ
ಲೋಕದ ಕತ್ತಲೆ ಎದೆಗಳಲಿ ನಿನ್ನ ನಗುವ ದೀಪ ಹಚ್ಚಿಡುತ್ತೇನೆ
ಆ ಪ್ರತಿ ಬೆಳಗಿಗೂ ನಿನ್ನ ಹೆಸರಿಟ್ಟು ಕರೆಯುತ್ತೇನೆ
ಗತವ ತಡಕಾಡುವ ಬೆರಳುಗಳಿಗೆ ಬೆಸೆದುಕೊಂಡ ವರ್ತಮಾನ ನೀನು
ಇಬ್ಬನಿಯಾಗಿ ಮಂಜಾಗಿ
ಬಿಸಿಲಾಗಿ ಸುರಿದು
ಒಲವಾಗಿ ಆವಿಯಾಗಿ ಆರ್ದ್ರವಾಗಿ ಘನವಾಗಿ ಮಳೆಯಾಗಿ
ನದಿಯಾಗಿ ಹರಿದು
ಸರ್ವ ಋತುಮಾನವಾಗಿ ನೀನು ನನ್ನೊಳಗೆ
ಕಡಲು ಕನವರಿಕೆಯಾಗಿ
ನೀನು ನನ್ನ ಭಾಗ್ಯ ಭವಿಷ್ಯ ಎಲ್ಲವೂ ಆಗಿರಲು
ನನ್ನ ಪ್ರತಿ ಮುಂಜಾವಿಗೂ ನಿನ್ನದೇ ಹೆಸರು