ಸಂಸಾರ ತಾಪತ್ರಯದಲ್ಲಿ ಸಿಲುಕಿದವರಿಗೆ ಮುಂಚಿತವಾಗಿ ಸಾವಿರದ ಲೆಕ್ಕದಲ್ಲಿ ಹಣವನ್ನು ನೀಡುವ ಅವನು ಸಮಯ ನೋಡಿ ಮನೆಯಲ್ಲಿರುವ ಹುಡುಗರನ್ನು ಕೆಲಸಕ್ಕೆಂದು ಪೇಟೆಗೆ ಕರೆದುಕೊಂಡು ಹೋಗತೊಡಗಿದ. ಭಾಷೆ, ಬಸ್ಸು ಏನೊಂದೂ ತಿಳಿಯದ ಪುಟ್ಟ ಮಕ್ಕಳು ನಗರದ ಮೂಲೆಯಲ್ಲಿರುವ ಯಾವುದೋ ಹೋಟೆಲಿನಲ್ಲಿ ತಟ್ಟೆ, ಲೋಟ ತೊಳೆಯುತ್ತ, ಪೆಟ್ಟು ಕೊಟ್ಟರೆ ತಿನ್ನುತ್ತ, ಕಾರಿಡಾರಿನ ಮೂಲೆಯಲ್ಲಿಯೇ ಮಲಗುತ್ತ ದಿನಕಳೆಯತೊಡಗಿದರು. ಮೊದಲೆಲ್ಲ ಯಾವಾಗ ಮತ್ತೆ ಹೊಳೆಸಾಲಿಗೆ ಹೋಗುವೆವೋ ಎಂದು ಕನಸು ಕಾಣುತ್ತಿದ್ದವರು ದಿನಕಳೆದಂತೆ ನಗರದ ಮಾಯೆಗೆ ಮನಸೋಲುತ್ತಿದ್ದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

ಹೊಳೆಸಾಲಿನಲ್ಲಿ ನೀಲಿಯ ತೀರ ಹತ್ತಿರದ ಗೆಳೆಯನೆಂದರೆ ಕೃಷ್ಣ. ಹೊಳೆಸಾಲಿನ ಗಂಡು ಸಂಕುಲವೆಲ್ಲ ಅವನನ್ನು ‘ಕೂಸ’ ಎಂದು ಸುಲಭವಾಗಿ ಕರೆಯುತ್ತಿದ್ದರು. ಹೊಳೆಸಾಲಿನ ಹೆಂಗಳೆಯರು ಅವನ ಕ್ಲಿಷ್ಟವಾದ ಹೆಸರನ್ನು ಉಚ್ಛರಿಸಲಾಗದೇ “ಕಿರಿಸನ’, ‘ಕಿಟ್ಟ’, ‘ಕುಟ್ಟು’ ಎಂದೆಲ್ಲ ಕರೆಯುವುದನ್ನು ನೋಡಿ ನೀಲಿ ಸದಾ ಅವನನ್ನು ಗೇಲಿ ಮಾಡುತ್ತಿದ್ದಳು. ಆದರೆ ಕೃಷ್ಣ ಮಾತ್ರ ತನ್ನಪ್ಪ ಆ ಹೆಸರನ್ನು ತನಗಿಡಲು ಇದ್ದ ಕಾರಣವನ್ನು ಕಥೆಯಾಗಿ ಹೇಳಿ ನೀಲಿಯನ್ನು ನಿಬ್ಬೆರಗಾಗಿಸಿದ್ದ. ಕೃಷ್ಣನ ತಂದೆಯ ಹೆಸರು ದೇವ. ಪುರಾಣದ ಪ್ರಕಾರ ವಸುದೇವನ ಮಗ ಕೃಷ್ಣನಾದ್ದರಿಂದ ದೇವನ ಮಗನಾದ ನಾನೂ ಕೃಷ್ಣ ಎಂಬುದು ಅವನ ವ್ಯಾಖ್ಯಾನವಾಗಿತ್ತು. ಅವನ ವ್ಯಾಖ್ಯಾನಕ್ಕೆ ತಕ್ಕಂತೆ ಅವನಪ್ಪ ದೇವನು ಸದಾ ಊರ ವೈದಿಕರ ಮನೆಯ ಹೊರಾಂಗಣದಲ್ಲಿ ಕುಳಿತು ದೂರದಿಂದಲೇ ಅವರೊಂದಿಗೆ ಪುರಾಣದ ಬಗ್ಗೆ ಚರ್ಚೆ ನಡೆಸುವುದನ್ನು ನೀಲಿ ನೋಡಿದ್ದಳು. ದೇವನ ಹೆಂಡತಿ ಮಾದೇವಿ ಅನೇಕ ಶಿಶುಗಳನ್ನು ಹೆತ್ತು ಕಳಕೊಂಡ ನಂತರ ಹುಟ್ಟಿದ ಮಗನಾದ್ದರಿಂದ ಅವನಿಗೆ ಈ ಹೆಸರು ಇನ್ನಷ್ಟು ಹೊಂದುತ್ತಿತ್ತು. ಅವಳಿಗೆ ಅರ್ಥವಾಗದ ವಿಷಯವೆಂದರೆ ಇಷ್ಟೆಲ್ಲ ತಿಳುವಳಿಕೆ ಹೊಂದಿರುವ ದೇವನ ಮನೆಯವರೆಲ್ಲರೂ ಊರಿನ ಯಾವುದೇ ಮನೆಯ ಅಂಗಳದವರೆಗೂ ಯಾಕೆ ಬರಬಾರದು? ಎಂಬುದಾಗಿತ್ತು. ಅವರಿಗೆ ತಿನ್ನಲು, ಕುಡಿಯಲು ಕೊಡುವ ವಿಧಾನಗಳೂ ಬೇರೆಯೇ ಆಗಿದ್ದವು. ತಿಂದನಂತರ ತಿಪ್ಪೆಗೆ ಎಸೆಬಹುದಾದ ಬಾಳೆಲೆಯಲ್ಲಿ ತಿಂಡಿ, ತೆಂಗಿನ ಕರಟದಲ್ಲಿ ಚಹಾವನ್ನು ಅವರಿಗೆ ಪ್ರತ್ಯೇಕವಾಗಿ ನೀಡುತ್ತಿದ್ದರು. ಹಾಗೆಂದು ಅವರ ಮನೆಯೇನೂ ಊರಿನ ಹೊರಗೆ ಪ್ರತ್ಯೇಕವಾಗಿ ಇರಲಿಲ್ಲ. ಹೊಳೆಯ ದಂಡೆಯುದ್ದಕ್ಕೂ ಹಬ್ಬಿದ ಹೊಳೆಸಾಲಿನ ವ್ಯಾಪ್ತಿ ಒಳಹೊರಗೆಂಬ ಬೇಧವಿರುವಷ್ಟು ವಿಸ್ತಾರವಾಗಿಲ್ಲದಿರುವುದೇ ಇದಕ್ಕೆ ಕಾರಣವಿರಬಹುದು.

ಕೃಷ್ಣನ ಅಕ್ಕ ಕುಮಾರಿ ಶಾಲೆಗೀಲೆಯ ಸುದ್ದಿಗೂ ಹೋದವಳಲ್ಲ. ಮನೆಯಲ್ಲಿರುವ ದನಗಳನ್ನು ಕಾದುಕೊಂಡು, ಅಜ್ಜಿ ಕರಿಯಮ್ಮನ ಜತೆ ಊರೂರು ತಿರುಗಿಕೊಂಡು ಹಾಗೆಯೇ ಬೆಳೆದುಬಿಟ್ಟಿದ್ದಳು. ಆದರೆ ಕೃಷ್ಣನಿಗೆ ಆರು ವರ್ಷ ತುಂಬಿದಾಗ ಅವನು ಊರಿನ ಎಲ್ಲ ಮಕ್ಕಳೊಂದಿಗೆ ಪಾಟಿಚೀಲ ಹಾಕಿಕೊಂಡು ಶಾಲೆಗೆ ಹೊರಟಿದ್ದ. ದಾರಿಯಲ್ಲಿ ನಡೆಯುವಾಗಲೂ ಯಾರನ್ನೂ ಮುಟ್ಟದಂತೆ ಎಚ್ಚರವಹಿಸುತ್ತಿದ್ದ. ಅವನ ಬ್ಯಾಗಿನಲ್ಲಿ ಸದಾ ಒಂದು ಗೋಣಿಯ ಚೀಲವಿರುತ್ತಿತ್ತು. ಶಾಲೆಯೊಳಗೆ ಹೋದವನೇ ಕೋಣೆಯ ಮೂಲೆಯೊಂದರಲ್ಲಿ ಚೀಲವನ್ನು ಹಾಸಿ ಕುಳಿತುಕೊಳ್ಳುತ್ತಿದ್ದ. ಗೌಡಾ ಮಾಸ್ರ‍್ರು ಎಲ್ಲರೊಂದಿಗೆ ಬೆಂಚಿನಲ್ಲಿ ಕುಳಿತುಕೊಳ್ಳುವಂತೆ ಕರೆದರೂ ಬರುತ್ತಿರಲಿಲ್ಲ. ತಾನು ಬರೆದುದನ್ನು ಅವರಿಗೆ ತೋರಿಸುವಾಗಲೂ ದೂರದಿಂದಲೇ ತೋರಿಸುತ್ತಿದ್ದ. ನೀಲಿಯನ್ನು ಸೇರಿದಂತೆ ಶಾಲೆಯ ಮಕ್ಕಳೆಲ್ಲರಿಗೂ ಅವನೆಂದರೆ ರಾಶೀ ಪ್ರೀತಿ. ಅದಕ್ಕೆ ಕಾರಣ ಮುತ್ತು ಪೋಣಿಸಿದಂತೆ ಪಾಟಿಯಲ್ಲಿ ಬರೆಯುವ ಅವನ ಅಕ್ಷರಗಳು ಮತ್ತು ಲೆಕ್ಕ ಬಿಡಿಸುವಾಗ ಮಾಸ್ತರಿಗೆ ತಿಳಿಯದಂತೆ ಎಲ್ಲರಿಗೂ ಅವನು ಮಾಡುತ್ತಿದ್ದ ಸಹಾಯ. ಇದರಿಂದಾಗಿಯೇ ತಿಂಗಳು ಕಳೆಯುತ್ತಿದ್ದಂತೆ ಗೋಣಿಚೀಲ ಮಾಯವಾಗಿ ಎಲ್ಲರೊಂದಿಗೆ ಬೆಂಚಿನಲ್ಲಿ ಕುಳಿತಿದ್ದ. ಹುಲಿ-ದನ ಆಟವಾಡುವಾಗ ದೂರದಲ್ಲಿ ನಿಂತು ನೋಡುತ್ತಿದ್ದವ ಈಗ ಬಾಗಿಲಾಗಿ ನಿಂತು ದನವನ್ನು ಹುಲಿಯಿಂದ ತುಂಬ ಹೊತ್ತು ಬಚಾವು ಮಾಡುತ್ತಿದ್ದ.

ಮನೆಯಿಂದ ಹೊರಟು ಶಾಲೆಗೆ ತಲುಪಿ, ಅಲ್ಲಿಂದ ಮರಳುವವರೆಗೂ ನೆನಪಿಲ್ಲದ ಕೃಷ್ಣನ ಬಗೆಗಿನ ‘ಮುಟ್ಟು’ತನ ಅವನು ತನ್ನ ಮನೆಯ ದಾರಿ ಹಿಡಿದೊಡನೆಯೆ ಎಲ್ಲರಲ್ಲಿ ಜಾಗ್ರತವಾಗಿಬಿಡುತ್ತಿತ್ತು. ಮನೆಗೆ ಹೋದೊಡನೇ ಶಾಲೆಯ ಅಂಗಿಯನ್ನು ಬಚ್ಚಲು ಮನೆಯಲ್ಲಿ ತೆಗೆದಿಟ್ಟು ಮನೆಯ ಅಂಗಿಯನ್ನು ತೊಡುತ್ತಿದ್ದರು. ಮರುದಿನ ಮತ್ತೆ ಶಾಲೆಯಂಗಿಯನ್ನು ತೊಟ್ಟು ಹೋಗುತ್ತಿದ್ದರು. ಕೃಷ್ಣನ ಅವ್ವ ಮಾತ್ರ ಪ್ರತಿದಿನವೂ ಅವನು ತೊಡುವ ಅಂಗಿಯನ್ನು ಹೊಳೆಯಂಚಿಗೆ ಹೋಗಿ ಸೀಗೆಕಾಯಿಯ ಪುಡಿಯಲ್ಲಿ ನೆನೆಸಿ, ಹುಷ್…..ಹುಷ್ ಎಂದು ಕುಸುಬಿ ಒಣಗಿಸುವುದರಿಂದ ಅವನ ಅಂಗಿಯು ಇವರ ಶಾಲೆಯಂಗಿಗಿಂತಲೂ ಸದಾ ಮಡಿಯಾಗಿರುತ್ತಿತ್ತು. ಇವೆಲ್ಲವೂ ಕೇವಲ ತಿಂಗಳು, ಎರಡು ತಿಂಗಳ ಮಾತು ಮಾತ್ರವಾಗಿತ್ತು. ದಿನವೂ ಮನೆಗೆ ಹೋಗಿ ಆಟವಾಡಲು ಓಡುವ ಅವಸರದ ನಡುವೆ ಈ ಅಂಗಿಯ ಬದಲಾವಣೆಯೆಲ್ಲ ತೀರ ರೇಜಿಗೆಯೆಂದು ಎಲ್ಲರಿಗೂ ಅನಿಸತೊಡಗಿತು. ಮಕ್ಕಳ ತಂಡದ ಕಿಟ್ಟಣ್ಣ ಇದ್ದಕ್ಕಿದ್ದಂತೆ ಒಂದುದಿನ ಹೀಗೆಲ್ಲ ಮಾಡುವ ಬದಲು ಮನೆಗೆ ಹೋಗುವ ದಾರಿಯಲ್ಲಿ ಸಗಣಿಯನ್ನು ಮೆಟ್ಟಿದರೆ ಎಲ್ಲವೂ ಸರಿಯಾಗುವುದೆಂದು ಫರ್ಮಾನು ಹೊರಡಿಸಿಬಿಟ್ಟ. ಹಸಿಸೆಗಣಿಯನ್ನು ತುಳಿಯಲು ಹೇಸಿಗೆಯೆನಿಸಿ ಒಣಗಿದ ಕುರುಳಿನ ಮೇಲೆ ಕಾಲಿಟ್ಟು ಎಲ್ಲರೂ ಅಂಗಿಯ ಸಮೇತ ಮಡಿಯಾಗಿಬಿಡತೊಡಗಿದರು. ದಿನಕಳೆದಂತೆ ಅದೂ ಮರೆತುಹೋಗಿ ಕೃಷ್ಣ ಅವರ ಗುಂಪಿನಲ್ಲಿ ಒಬ್ಬನಾಗಿಹೋದ. ಅವನು ಬೋರ್ಡಿನಲ್ಲಿ ಲೆಕ್ಕವನ್ನು ಸರಿಯಾಗಿ ಬಿಡಿಸಿದಾಗಲೆಲ್ಲ ಗೌಡಾ ಮಾಸ್ರ‍್ರು ಅವನನ್ನು ತಮ್ಮ ತೋಳಿನಲ್ಲಿ ಬಳಸಿ ಕೆನ್ನೆ ಹಿಂಡುತ್ತಿದ್ದುದನ್ನು ನೋಡಿದ ಮಕ್ಕಳೆಲ್ಲರೂ ಅವನು ತಮಗಿಂತಲೂ ಮೇಲೆಂಬ ಗೌರವದಲ್ಲಿ ನೋಡತೊಡಗಿದ್ದರು. ಆದರೆ ಮನೆಗಳಲ್ಲಿ ಮಾತ್ರ ಮೊದಲಿನ ಪದ್ಧತಿಯೇ ಚಾಲ್ತಿಯಲ್ಲಿತ್ತು.

ಹೊಳೆಸಾಲಿನ ಹತ್ತಿರವಿರುವ ದೊಡ್ಡಶಾಲೆಗೆ ಬಸ್ಸಿನಲ್ಲಿ ಹೋಗಿಬರುವ ವ್ಯವಸ್ಥೆಯಾಗಿರುವುದರಿಂದ ಗೌಡಾ ಮಾಸ್ರ‍್ರು ಕೃಷ್ಣನನ್ನು ದೊಡ್ಡ ಶಾಲೆಗೆ ಹಚ್ಚುವಂತೆ ಅವನ ತಂದೆಗೆ ತಿಳಿಹೇಳಿದ್ದರು. ಎಷ್ಟು ದಿನಗಳಾದರೂ ಶಾಲೆಯಿಂದ ಬಿಡುಗಡೆ ಪ್ರಮಾಣಪತ್ರ ತೆಗೆದುಕೊಂಡು ಹೋಗಲು ಬಾರದ್ದರಿಂದ ಅವನ ತಂದೆಯನ್ನು ಕರೆದು ಮಾತಾಡಿಸಿದ್ದರು. ಆಗ ದೇವ, “ನೀವು ಹೇಳಿದ್ದು ಸರಿ ಮಾಸ್ರ‍್ರೇ, ಅವನನ್ನು ಮುಂದೆ ಓದಿಸಬೇಕೆಂದು ನನಗೂ ಆಸೆ. ಆದರೆ ಸಧ್ಯಕ್ಕೆ ಮನೆಯ ಎದುರಿಗಿರುವ ಗದ್ದೆಯನ್ನು ಹುಗಿದು ತೋಟ ಮಾಡಬೇಕು ಅನಿಸಿದೆ. ಹೊಳೆಗೆ ಕಟ್ಟು ಹಾಕುವುದು ನಿಲ್ಲಿಸಿದ ಮೇಲೆ ಗದ್ದೆ ಹಾಗೆಯೇ ಹಡೀಲು ಬಿದ್ದಿದೆ. ಒಂದಿಷ್ಟು ಅಡಿಕೆ, ತೆಂಗು ಹಾಕಿಕೊಂಡರೆ ಐದಾರು ವರ್ಷಗಳಲ್ಲಿ ಮನೆಗೊಂದು ಆಧಾರ ಆಗ್ತದೆ. ಅದಕ್ಕೆಲ್ಲ ಹಣ ಬೇಕಲ್ಲ, ಹಾಗಾಗಿ ಅವನನ್ನು ಕೆಲಸಕ್ಕೆ ಕಳಿಸುವ ಅಂತಿದ್ದೇನೆ.” ಎಂದು ರಾಗ ತೆಗೆದ. ಅವನ ಮಾತನ್ನು ಅಷ್ಟಕ್ಕೇ ತುಂಡರಿಸಿದ ಮಾಸ್ರ‍್ರು, “ನೋಡು ದೇವಾ, ಮಕ್ಕಳು ಓದೋ ಕಾಲಕ್ಕೆ ಅವರನ್ನು ಓದಿಸಿಬಿಡಬೇಕು. ಸರಕಾರಕ್ಕೆ ಬರೆದು ಹಾಕಿದರೆ ಅವನ ಓದುವ ಖರ್ಚು ಅವನಿಗೆ ಬರ್ತದೆ. ನೀನೇನೂ ನಿನ್ನ ಕಿಸೆಯಿಂದ ಹಣ ಕೊಡೋದು ಬೇಡ. ಹುಡುಗ ಚುರುಕಿದ್ದಾನೆ. ಶಾಲೆಗೆ ಕಳಿಸು.” ಎಂದು ದೃಢವಾಗಿ ಹೇಳಿದರು. ಅದಕ್ಕೆ ದೇವ, “ಅಯ್ಯೋ, ಅವನನ್ನು ಓದಿಸದೇ ಬಿಡೂದಿಲ್ಲ ಮಾಸ್ರ‍್ರೇ. ಇದೊಂದು ವರ್ಷ ಕೆಲಸಕ್ಕೆ ಕಳಿಸ್ತೆ. ಈಗಲೇ ಆ ಕೆಲಸದ ಏಜೆಂಟ್ ಹತ್ತಿರ ಒಂದು ವರ್ಷದ ಹಣ ತೆಗೊಂಡಾಗಿದೆ. ಅವನ ಸರ್ಟಿಫಿಕೇಟ್ ಎಲ್ಲ ಶಾಲೆಯಲ್ಲಿಯೇ ಇರಲಿ. ಮುಂದಿನ ವರ್ಷ ಅವನನ್ನು ದೊಡ್ಡ ಶಾಲೆಗೆ ಸೇರಿಸಿಯೇ ಸಿದ್ದ.” ಎಂದವನೇ ಮತ್ತೆ ಮಾತನಾಡಲು ಸಮಯವಿಲ್ಲದವನಂತೆ ಅಲ್ಲಿಂದ ಹೊರಟುಹೋಗಿದ್ದ. ಶಾಲೆಗೆ ಹಾಕಿಕೊಂಡು ಬರುತ್ತಿದ್ದ ನೀಲಿ ಚಡ್ಡಿ ಮತ್ತು ಬಿಳಿಯಂಗಿಯನ್ನು ಹಾಕಿದ ಕೃಷ್ಣ ತನ್ನ ಕೈಯ್ಯಲ್ಲಿ ಅಂಗಿಗಳನ್ನು ತುಂಬಿದ ನೈಲಾನ್ ಚೀಲವೊಂದನ್ನು ಹಿಡಿದು ತನ್ನೆಡೆಗೆ ಕೈಬೀಸುತ್ತ ಬಿಳಿಯಂಗಿ ತೊಟ್ಟ ಕೆಲಸದ ಏಜೆಂಟನ ಹಿಂದೆ ಹೋಗುವುದನ್ನು ನೀಲಿ ಸುಮ್ಮನೆ ನಿಂತು ನೋಡುತ್ತಿದ್ದಳು.

ಹಾಗೆ ಹೋದ ಕೃಷ್ಣ ಮತ್ತೆ ಊರಿಗೆ ಬಂದದ್ದು ವರ್ಷ ಕಳೆದ ಮೇಲೆಯೆ. ಈಗ ಅವನ ಚಡ್ಡಿ ಹೋಗಿ ಜೀನ್ಸ್‌ ಪ್ಯಾಂಟ್ ಬಂದಿತ್ತು. ತುಂಬು ತೋಳಿನ ಕೋಟಿನಂತಹ ಅಂಗಿಯನ್ನೂ ಅವನು ಹಾಕಿದ್ದ. ಕಿವಿಯಲ್ಲಿ ಅದೆಂಥದ್ದೋ ಕಪ್ಪು ವೈಯ್ಯರಿನಂತದ್ದನ್ನು ಸದಾ ತುರುಕಿಕೊಂಡಿರುತ್ತಿದ್ದ. ಕೇಳಿದವರಿಗೆಲ್ಲ ಅದನ್ನು ಕಿವಿಯಲ್ಲಿ ತುರುಕಿ ಪುಟ್ಟ ಟೇಪರೆಕಾರ್ಡರ್ ನಂತಿರುವ ವಾಕ್‌ಮನ್‌ನಿಂದ ಹೊರಬರುವ ಹಿಂದಿ ಹಾಡುಗಳನ್ನು ಕೇಳಿಸುತ್ತಿದ್ದ. ಬಾಯಲ್ಲಿ ಅದೆಂಥದ್ದೋ ಅಂಟಿನಂತಹ ವಸ್ತುವನ್ನಿಟ್ಟು ಸದಾ ಜಗಿಯುತ್ತಿದ್ದ. ಒಮ್ಮೆ ಶಾಲೆಗೆ ಹೋಗುವ ದಾರಿಯಲ್ಲಿ ಸಿಕ್ಕ ನೀಲಿ, “ಕೃಷ್ಣಾ, ಈ ವರ್ಷ ಶಾಲೆಗೆ ಬರ್ತಿಯಾ?” ಎಂದು ಕೇಳಿದ್ದಕ್ಕೆ ನಗುತ್ತಾ, “ಎಂಥಕ್ಕೆ ಸಾಲಿಗೆ ಬಪ್ದು? ಯಾರನ್ನಾದರೂ ಲವ್ ಮಾಡೂಕಾ? ನೀವೆಲ್ಲ ಓದಿ ಜಗತ್ತನ್ನು ಉದ್ದಾರ ಮಾಡಿ. ನಾನು ಸೀದಾ ಕಾಲೇಜಿಗೆ ಹೋಗ್ತೆ ನೋಡು.” ಎನ್ನುತ್ತಾ ಒಂಥರಾ ನಕ್ಕಿದ್ದ. ಕೃಷ್ಣ ಬಹಳ ಬೇಗ ದೊಡ್ಡವನಾಗಿದ್ದಾನೆ ಎಂದು ನೀಲಿಗೆ ಅನಿಸಿತು.

ಅಲ್ಲಿಂದ ಮುಂದೆ ಬಿಳಿಯಂಗಿಯ ಏಜೆಂಟ್ ಹೊಳೆಸಾಲಿಗೆ ಬರುವುದು ಹೆಚ್ಚಾಗುತ್ತಲೇ ಹೋಯಿತು. ಸಂಸಾರ ತಾಪತ್ರಯದಲ್ಲಿ ಸಿಲುಕಿದವರಿಗೆ ಮುಂಚಿತವಾಗಿ ಸಾವಿರದ ಲೆಕ್ಕದಲ್ಲಿ ಹಣವನ್ನು ನೀಡುವ ಅವನು ಸಮಯ ನೋಡಿ ಮನೆಯಲ್ಲಿರುವ ಹುಡುಗರನ್ನು ಕೆಲಸಕ್ಕೆಂದು ಪೇಟೆಗೆ ಕರೆದುಕೊಂಡು ಹೋಗತೊಡಗಿದ. ಭಾಷೆ, ಬಸ್ಸು ಏನೊಂದೂ ತಿಳಿಯದ ಪುಟ್ಟ ಮಕ್ಕಳು ನಗರದ ಮೂಲೆಯಲ್ಲಿರುವ ಯಾವುದೋ ಹೋಟೆಲಿನಲ್ಲಿ ತಟ್ಟೆ, ಲೋಟ ತೊಳೆಯುತ್ತ, ಪೆಟ್ಟು ಕೊಟ್ಟರೆ ತಿನ್ನುತ್ತ, ಕಾರಿಡಾರಿನ ಮೂಲೆಯಲ್ಲಿಯೇ ಮಲಗುತ್ತ ದಿನಕಳೆಯತೊಡಗಿದರು. ಮೊದಲೆಲ್ಲ ಯಾವಾಗ ಮತ್ತೆ ಹೊಳೆಸಾಲಿಗೆ ಹೋಗುವೆವೋ ಎಂದು ಕನಸು ಕಾಣುತ್ತಿದ್ದವರು ದಿನಕಳೆದಂತೆ ನಗರದ ಮಾಯೆಗೆ ಮನಸೋಲುತ್ತಿದ್ದರು. ಕೈಯ್ಯಲ್ಲಿ ಓಡಾಡುವ ಪುಡಿಗಾಸು, ತಿಂಗಳಿಗೊಮ್ಮೆ ನೋಡುವ ಪೋಲಿ ಸಿನೆಮಾಗಳು, ಪುಟಪಾತಿನಲ್ಲಿ ಖರೀದಿಸಿ ತೊಡುವ ಹೊಸಬಗೆಯ ದಿರಿಸುಗಳು, ಅವರು ತರುವ ಹಣದಿಂದಾಗಿ ಊರಿನಲ್ಲಿ ಸಿಗುವ ಮರ್ಯಾದೆ ಎಲ್ಲವೂ ಸೇರಿ ಕಷ್ಟವಾದರೂ ಸರಿಯೆಂದು ಮತ್ತೆ ನಗರದೆಡೆಗೆ ಮುಖಮಾಡುತ್ತಿದ್ದರು. ಜತೆಯಲ್ಲಿ ಸದಾ ಅಗಿಯುವ ಗುಟಕಾ, ಅಪರೂಪಕ್ಕೊಮ್ಮೆ ಸೇದುವ ಸಿಗರೇಟು, ಸಿರಿವಂತರು ಆಗಾಗ ನೀಡುವ ಟಿಪ್ಸ್ ಹೀಗೆಲ್ಲ ಸೇರಿ ಬದುಕಿನ ಹದವನ್ನು ಅನುಭವಿಸತೊಡಗಿದರು.

ಆ ಏಜೆಂಟ್ ಎಷ್ಟೇ ಒತ್ತಾಯಿಸಿದರೂ ಮಂಜನ ಅಮ್ಮ ಮಾತ್ರ ಅವನನ್ನು ದೂರದೂರಿಗೆ ಕಳಿಸಲು ಒಪ್ಪಲಿಲ್ಲ. ಊರಿನಲ್ಲಿಯೇ ದನಕರುಗಳನ್ನು ಮೇಯಿಸಿಕೊಂಡು, ಗದ್ದೆ ಬೇಸಾಯ ಮಾಡುತ್ತಾ ನೆಮ್ಮದಿಯಿಂದ ತಮ್ಮ ಕಣ್ಣೆದುರೇ ಜೀವನ ಕಳೆಯಲಿ ಎಂಬುದು ಅವಳ ಹಠವಾಗಿತ್ತು. ತನ್ನ ಮನೆಯ ದನಗಳೊಂದಿಗೆ ಊರಿನ ಇನ್ನೂ ಹಲವರ ಮನೆಯ ದನಗಳನ್ನೂ ಮೇಯಿಸುವ ಕಾಯಕವನ್ನು ಅವನು ಮಾಡುತ್ತಿದ್ದುದರಿಂದ ಒಂದಿಷ್ಟು ಕಾಸು ಕೂಡ ಅವನಿಗೆ ಸಿಗುತ್ತಿತ್ತು. ಮೊದಲೆಲ್ಲ ಮಂಜನಿಗೆ ತನ್ನನ್ನು ಅಮ್ಮ ಕೆಲಸಕ್ಕೆ ಕಳಿಸುತ್ತಿಲ್ಲವೆಂದು ಬಹಳ ಸಂತೋಷವಾಗುತ್ತಿತ್ತು. ಬರಬರುತ್ತ ನಗರದಿಂದ ಬರುವವರ ಶೋಕಿಯನ್ನು ಕಂಡು ತಾನೂ ಅಲ್ಲಿಗೆ ಹೋದರೆ ಹೇಗೆ? ಎಂದು ಅನಿಸತೊಡಗಿತು. ಅಮ್ಮನೆದುರು ತನ್ನ ಮನಸ್ಸಿನ ಆಸೆಯನ್ನು ಹೇಳಿಯೂ ನೋಡಿದ. ಆದರೆ ಅವನಮ್ಮ ಮಾತ್ರ ಹಠಕ್ಕೆ ಬಿದ್ದವಳಂತೆ, “ನೋಡು ಮಂಜಾ, ನನಗಿರೋದು ನೀನೊಬ್ಬನೇ ಮಗ. ಹಿಂದಿಲ್ಲ, ಮುಂದಿಲ್ಲ. ನಿನ್ನಪ್ಪ ಸಾಯೋವಾಗ ಹೇಳಿದ್ದು ಒಂದೇ ಮಾತು. ಮಗನನ್ನು ಜೋಪಾನ ಮಾಡು ಎಂದು. ಕೆಟ್ಟು ಪಟ್ಟಣ ಸೇರು ಅಂತ ಗಾದೇನೆ ಇದೆ. ಅವರೆಲ್ಲ ಕುಣಿತಾರೆ ಅಂತ ನೀನೂ ಕುಣಿಬೇಡ. ಮನೆಯಲ್ಲಿಯೇ ಇದ್ದು ಕೆಲಸಮಾಡಿದ್ರೆ ಸಾಕು.” ಎಂದು ಗದರಿದ್ದಳು.

ಇದ್ದಕ್ಕಿದ್ದಂತೆ ಒಂದುದಿನ ಕೈಚೀಲ ಹಿಡಿದು ಬಸ್ ಹತ್ತಿದ ಮಂಜ ನೀಲಿಯ ಸೀಟಿನಲ್ಲಿಯೇ ಬಂದು ಕುಳಿತ. ಅವನ ಕೈ ಯಾಕೋ ನಡುಗುತ್ತಿರುವಂತೆ ನೀಲಿಗೆ ಅನಿಸಿ ವಿಚಾರಿಸಿದಳು. ಅವಳ ಕಿವಿಯೆಡೆಗೆ ಬಗ್ಗಿ ಹೇಳಿದ, “ನಾನು ಇವತ್ತು ಈ ಬಸ್ ಹತ್ತಿದೆನಲ್ಲ, ಮತ್ತೆ ಊರಿಗೆ ತಿರುಗಿ ಬರೋದಿಲ್ಲ. ಎಲ್ಲಾದ್ರೂ ಪೇಟೆಯಲ್ಲಿ ಕೆಲಸ ಹುಡುಕಿಕೊಳ್ತೇನೆ. ನಿನ್ನತ್ರ ಹೇಳಬೇಕು ಅನಿಸಿತು ಹೇಳಿದೆ. ಬೇರೆ ಯಾರಿಗೂ ಹೇಳಬೇಡ.” ಅವನ ಮಾತನ್ನು ಕೇಳಿ ನೀಲಿಗೆ ಗಾಬರಿಯಾಯಿತು. “ಅಲ್ಲಾ ಮಂಜ, ನೀನು ಹೀಂಗೆ ಹೇಳದೇ ಹೋದರೆ ನಿನ್ನವ್ವ ಎಷ್ಟು ಗಾಬರಿಯಾಗ್ತಾಳಲ್ವಾ? ಊರಿನಲ್ಲೇ ಇದ್ರೆ ನಿನಗೇನು ತೊಂದರೆ?” ಎಂದಳು. ಅದಕ್ಕೆ ಮಂಜ ನಕ್ಕು ಹೇಳಿದ, “ನೀನು ಚೆನ್ನಮ್ಮನ ಪಾತ್ರ ಮಾಡಿ ಅಬ್ಬರಿಸೂಕೆ ಅಡ್ಡಿಲ್ಲ. ಬೇರೆಂಥದ್ದೂ ನಿಂಗೆ ಗೊತ್ತಾಗೂದಿಲ್ಲ. ಶಾಲೆ ಬಿಟ್ಟು ಎರಡು ವರ್ಷ ಊರಿನಲ್ಲಿದ್ದು ನೋಡಿದೆನಲ್ಲ ಸಂಭ್ರಮವನ್ನು. ದಿನಾ ಬೆಳಗೆದ್ದು ಸಾಲಲ್ಲಿ ನಾಲ್ಕು ಮನೆಗಳ ದನ ಬಿಟ್ಟುಕೊಂಡು ಗುಡ್ಡಕ್ಕೆ ಹೋಗೂದು, ಅವ್ವ ಕೊಟ್ಟ ಊಟ ಬಿಡಿಸಿ ಅಲ್ಲಿಯೇ ಊಟ ಮಾಡೂದು, ಸಂಜೆ ಅವರವರ ಮನೆಗೆ ದನಗಳನ್ನು ಮುಟ್ಟಿಸಿ ನಮ್ಮನೆ ದನಗಳನ್ನು ಎಬ್ಬಿಕೊಂಡು ಮನೆಗೆ ಹೋಗೂದು. ಕೈಕಾಲೆಲ್ಲ ಸೋತಿದೆಯೆಂದು ಬಿಸಿನೀರು ಸ್ನಾನಮಾಡಿ, ಅವ್ವ ಬಡಿಸಿದ ಅನ್ನ ಸಾರು ಉಂಡು ಮಲಗೋದು. ಒಂದಿನ ಆದರೂ ಈ ಕೆಲಸಕ್ಕೆ ರಜೆ ಅಂಬೂದು ಇತ್ತಾ? ದನಕ್ಕೆ ದಿನವೂ ಹಸಿವಾಗ್ತದೆ, ದಿನವೂ ಮೇಯಿಸಬೇಕು. ನನ್ನ ಜೀವನ ಹೊಳೆಸಾಲಿನ ಗುಡ್ಡ ಮತ್ತು ಹೊಳೆಯ ನಡುವೆ ಕಳೆದುಹೋಗೂದಂತೂ ಗ್ಯಾರಂಟಿ. ನೀನಾದ್ರೆ ಶಾಲೆಗಾದ್ರೂ ಹೋಗ್ತಿದ್ದೆ. ಮುಂದೆ ನೌಕರಿ ಗಿವ್ಕರಿ ಮಾಡ್ಕಂಡು ನಾಲ್ಕೂರು ತಿರುಗ್ವೆ. ನನ್ನ ಕತೆ ಇಲ್ಲೇ ಮುಗೀತದಲ್ಲ. ಅವ್ವಂಗೆ ಹೇಳುವಷ್ಟು ಹೇಳ್ದೆ. ಕೇಳೂದೆ ಇಲ್ಲ ಅಂತಾಳೆ.” ಎಂದವನೇ ಕಿಟಕಿಯಾಚೆಗೆ ನೋಡತೊಡಗಿದ. “ಅಲ್ಲಾ, ಈಗ ಒಬ್ನೆ ಹೋಗಿ ಮಾಡೂದಾದರೂ ಏನು? ಎಲ್ಲಿರ್ತೆ? ಏನು ಕತೆ?” ಎಂದು ಪ್ರಶ್ನಿಸಿದಳು.

“ನಮ್ಮೂರ ಕೃಷ್ಣ ಇದ್ದ ಅಲ್ಲ, ಅವನಿಗೆ ಕಳೆದ ತಿಂಗಳೇ ಕಾಗದ ಬರ್ದಿದ್ದೆ. ಸಧ್ಯಕ್ಕೆ ಅವನಿರುವ ಹೋಟೇಲಿಗೆ ಹೋಗ್ತೆ. ಅಲ್ಲೇ ತಟ್ಟೆ ತೊಳೂದಾದ್ರೂ ಅಡ್ಡಿಲ್ಲ, ಕೆಲ್ಸ ಮಾಡ್ತೆ. ಮತ್ತೆ ಸ್ವಲ್ಪ ಅನುಭವ ಆದಮೇಲೆ ನಮಗೆ ವೇಟರ್ ಕೆಲ್ಸ ಕೊಡ್ತಾರಂತೆ. ಅಷ್ಟೊತ್ತಿಗೆ ಅಲ್ಲಿಗೆ ಬರೋ ಶ್ರೀಮಂತರೆಲ್ಲ ರಾಶೀ ರಾಶೀ ಟಿಪ್ಸ್ ಕೊಡ್ತಾರಂತೆ. ಹಾಗೆ ಸ್ವಲ್ಪ ದುಡ್ಡು ಮಾಡಕಂಡು ನಾನೇ ಒಂದು ದೊಡ್ಡ ಹೋಟೆಲ್ ಮಾಡ್ತೆ ನೋಡು.” ಎನ್ನುತ್ತಾ ಕಣ್ಣರಳಿಸಿದ. “ಮಾರಾಯ್ತಿ ನೀ ನನ್ನ ಫ್ರೆಂಡು ಅಂತ ಇದೆಲ್ಲ ಹೇಳಿದೆ. ಊರಲ್ಲೆಲ್ಲ ಎಲ್ಲರಿಗೂ ಹೇಳಿ ಗುಲ್ಲೆಬ್ಬಿಸಬೇಡ. ಒಂದು ಹತ್ತು ವರ್ಷ ಅವ್ವಂಗೂ ಕಷ್ಟ ಅನಿಸಬಹುದು. ಮತ್ತೆ ನಾ ದೊಡ್ಡ ಹೋಟೆಲ್ ಮಾಡ್ತ್ಯನಲೆ, ಆಗ ಅವ್ಳಿಗೂ ಭಾರೀ ಖುಶೀಯಾಗ್ತದೆ ನೋಡು,” ಎನ್ನುತ್ತಾ ತನ್ನ ಅಗಲವಾದ ಕಣ್ಣನ್ನು ಇನ್ನಷ್ಟು ಅಗಲಿಸಿದ. ಅವನ ಕಣ್ಣೊಳಗೆಲ್ಲಿಯಾದರೂ ಹೋಟೆಲ್ಲಿನ ಚಿತ್ರವಿರಬಹುದೆ? ಎಂದು ನೀಲಿ ಕಣ್ಣುಗಳನ್ನೇ ದಿಟ್ಟಿಸತೊಡಗಿದಳು.