ಬೆಳಗು
ನಿನ್ನ ಬೊಗಸೆ ಕಂಗಳಲ್ಲಿ ಹೊತ್ತಿಕೊಂಡ
ಹಿಡಿ ಬೆಳಕು ಸಾಕಿತ್ತು
ರಿಕ್ತಗೊಂಡ ಬದುಕಿನಲ್ಲಿ
ಪ್ರೇಮದ ರಹದಾರಿಯಾದರೂ
ಕನಿಷ್ಠ
ನನ್ನ ಪಾಲಿಗೆ ತೆರೆದುಕೊಳ್ಳುತಿತ್ತು…!
ಆಗ ಕಾರ್ಮೋಡದಂತಹ
ನಿನ್ನ ಸುಳಿಮಿಂಚಿನ ಪ್ರೇಮದ ಹನಿಗಳು
ನನ್ನ ಎದೆಯಾಳದ ಬಿಕ್ಕುಗಳಿಗೆಲ್ಲಾ
ನವ ರೆಕ್ಕೆಗಳ ಮೂಡಿಸಿ
ಜಗದ ತಲ್ಲಣವಿಲ್ಲದೆ
ಬಲು ದೂರಕೆ ವಲಸೆ ಹೊರಟ
ಗೆಣೆವಕ್ಕಿಗಳಂತೆ
ಪ್ರೇಮಸಂಗದಲ್ಲಿ ವಿಹರಿಸುತ
ಮೈ ಮರೆತು ನಲಿಯುತ್ತಿದ್ದವು…!
ಆದರೆ… ಅದೆಂತಹ ವಿಪರ್ಯಾಸ
ಘನಿಸುವ ಪ್ರೇಮಭಾವಗಳ ನಡುವೆಯೂ
ಗಡಿಯ ದಾಟಲಾರದೆ ಹೋದ
ಚಾಂಡಲ ಹಕ್ಕಿಯ ಪಡಿಯಚ್ಚು ನಾನು..!
ಬೆನ್ನಿಗಂಟಿಕೊಂಡೇ ಬಂದಿದೆ
ಮೈಯ ಮೇಲಣ ಬಣ್ಣ
ಗಡಿಗಳ ಕೊರೆದು ನಿಲ್ಲಿಸಿದೆ
ಅಸ್ಪೃಶ್ಯನೆಂಬ ಕಾರಣ..!
ಹಾಗಾಗಿಯೇ ಇಲ್ಲಿ ನೆಟ್ಟಿರುವ
ಮುಳ್ಳು ಬೇಲಿಯಾಚೆಗೆ ಅರಳಲಾರದೆ
ನಿಡುಗಾಲದ ಕಗ್ಗತ್ತಲನ್ನೇ ಹೊದ್ದು ಹಗಲುಗುರಡನಾಗಿ
ಸುಂಕವಿಲ್ಲದ ಕನಸಿನಲ್ಲಿ
ವಿಷಾದದ ಕಿಡಿ ಹೊತ್ತಿಸಿಕೊಂಡು
ಜಗದ ಛಮಂಡನಂತೆ
ಬೊಗಸೆ ಬೆಳಕಿಗಾಗಿ ಎಡತಾಕುತ್ತಾ
ನಿಶಾಚರಿಯಂತೆ
ಅವಳ ಪ್ರೇಮದೂರಿನಲ್ಲಿ
ಅಲೆಯುತ್ತಿರುತ್ತೇನೆ…!