“ಚಲಿಸುವ ಹಿಮದಂತೆ ಕಾಣುವ ಫ್ಲೆಮಿಂಗೊ ಪಕ್ಷಿಯ ಉತ್ಸಾಹ, ಕಳ್ಳಿಗಿಡದ ಸಸ್ಯಜನ್ಯ ಮಾನವದ್ವೇಷ, ಮರದಲ್ಲಿ ಕಂಬಳಿಹುಳಗಳು ನಡೆಸುವ ಗುಪ್ತಕಾರ್ಯ – ಇವೆಲ್ಲ ನನ್ನನ್ನು ಪಕ್ಷಿಗಳ ವರ್ಣಮಾಲೆಯನ್ನು ಅರ್ಥಮಾಡಿಕೊಳ್ಳಲು
ಬ್ರಹ್ಮಾಂಡದ ಏಣಿಯ ಮೇಲೆ ಏರಲು ಕರೆದೊಯ್ದವು; ಇವು ಈ ಗ್ರಹದ ಆಧ್ಯಾತ್ಮಿಕ ಕ್ರಮವನ್ನು ಕಾಪಾಡುವ ಉಚ್ಛ ಸಂಕೇತಗಳಾಗಿವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಎಕ್ವಡೋರ್ (Ecuador) ದೇಶದ ಕವಿ ಹೊರ್ಹೆ ಕರ್ರೆರಾ ಅಂದ್ರಾದೆಯವರ (Jorge Carrera Andrade, 1903-1978) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಮೈಕ್ರೊಗ್ರಾಮ್‌ಗಳ ನಿಮ್ಮ ಓದಿಗೆ
ಎಕ್ವಡೋರ್ ದೇಶದ ಕವಿ ಹೊರ್ಹೆ ಕರ್ರೆರಾ ಅಂದ್ರಾದೆಯವರನ್ನು ಲ್ಯಾಟಿನ್ ಅಮೆರಿಕಾದ ಇಪ್ಪತ್ತನೇ ಶತಮಾನದ ಪ್ರಮುಖ ಕವಿಗಳಲ್ಲಿ ಒಬ್ಬರೆಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ. ಅವರು ಎಕ್ವಡೋರ್-ನ ಕ್ವಿಟೊ ನಗರದಲ್ಲಿ 1902-ರಲ್ಲಿ ಜನಿಸಿದರು ಹಾಗೂ ತಮ್ಮ ಹದಿಹರೆಯದಲ್ಲೇ ಕವಿತೆಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. ಅವರು ಎಕ್ವಡೋರ್-ನ ರಾಯಭಾರಿಯಾಗಿ ಹಲವು ದೇಶಗಳಲ್ಲಿ ಕೆಲಸ ಮಾಡಿದರು ಹಾಗೂ ಪೆರು, ಫ್ರಾನ್ಸ್, ಜಪಾನ್ ಮತ್ತು ಅಮೇರಿಕಾದಲ್ಲಿ ರಾಯಭಾರ ನೇಮಕಾತಿಗಳನ್ನು ನಿರ್ವಹಿಸುತ್ತಿದ್ದಾಗ ಅನೇಕ ಸಾಹಿತ್ಯ ಸಮುದಾಯಗಳನ್ನು ಭೇಟಿಯಾದರು. ಈ ವಿದೇಶದ ಅನುಭವಗಳು ಅವರ ಸಾಹಿತ್ಯಕ್ಕೆ ಒಂದು ತರಹದ ‘ಅಂತರ್‌ರಾಷ್ಟ್ರೀಯ’ ದೃಷ್ಟಿಕೋನ ಕೊಟ್ಟಿತ್ತು. ಖ್ಯಾತ ಕವಿಯಲ್ಲದೆ, ಅವರು ಪ್ರಬಂಧಕಾರರು ಹಾಗೂ ಪತ್ರಕರ್ತರೂ ಆಗಿದ್ದರು ಹಾಗೂ ಅವರ ವಿಶಿಷ್ಟವಾದ ಸಾಹಿತ್ಯಿಕ ವೃತ್ತಿಜೀವನವು ಸಂಪಾದಕತ್ವ ಮತ್ತು ಅನುವಾದದಿಂದ ಹಿಡಿದು ವಿಮರ್ಶೆ ಮತ್ತು ಕಾವ್ಯದವರೆಗೆ ವ್ಯಾಪಕವಾಗಿ ಹರಡಿತ್ತು.
“ಮಾನವ ಅಸ್ತಿತ್ವದ ರಹಸ್ಯ ಲೋಕ” ಎಂದು ಕರ್ರೆರಾ ಅಂದ್ರಾದೆ ಕರೆಯುವ ಅವರ ಕಾವ್ಯಾತ್ಮಕ ಪರಿಶೋಧನೆಯಲ್ಲಿ, ಪ್ರಪಂಚದ ಸೌಂದರ್ಯವನ್ನು ಕಂಡು ಅವರು ಆಶ್ಚರ್ಯಪಡುತ್ತಾರೆ. ಮತ್ತು ಈ ಅದ್ಭುತವನ್ನು ಬೆರಗುಗೊಳಿಸುವ, ವರ್ಣನಾತ್ಮಕ ರೂಪಕಗಳ ಮೂಲಕ ತಿಳಿಸುತ್ತಾರೆ. ಕರ್ರೆರಾ ಅಂದ್ರಾದೆಯವರು ಬಹುಶಃ ಯಾವಾಗಲೂ ಜಗತ್ತನ್ನು ದೃಷ್ಟಿಗೋಚರವಾಗಿಯೇ ಅರ್ಥೈಸುತ್ತಾರೆ ಎಂದು ಹೇಳಬಹುದು, ಆದರೆ ಅವರ ದೃಶ್ಯ ಪ್ರತಿಮೆಗಳು ಕೇವಲ ಒಂದು ರೂಪಕ ತಂತ್ರವಾಗಿದ್ದು, ಅವರು ಕವಿತೆಗಳನ್ನು ಅದರ ಸುತ್ತಲೂ ನಿರ್ಮಿಸುತ್ತಾರೆ. ಜೀವನದ ಅಸ್ಥಿರತೆ ಮತ್ತು ವಿಶ್ವದಲ್ಲಿ ಮನುಷ್ಯನ ಒಂಟಿತನವನ್ನು ಅವರು ತಮ್ಮ ಶಾಬ್ದಿಕ ವಿನ್ಯಾಸಗಳಲ್ಲಿ ವ್ಯಕ್ತಪಡಿಸುತ್ತಾರೆ. ತನ್ನ ತಾಯ್ನಾಡು ಎಕ್ವಡೋರ್-ನಲ್ಲಿನ ಜೀವನವನ್ನು ವಿವರಿಸುತ್ತಾರೆ, ತನ್ನ ದೇಶದ ಮೂಲನಿವಾಸಿಗಳ ಅವಸ್ಥೆಯನ್ನು ಸಹಾನುಭೂತಿಯಿಂದ ಯೋಚಿಸುತ್ತಾರೆ, ಮತ್ತು ಸಾಮಾಜಿಕ ಅನ್ಯಾಯಗಳನ್ನು ಖಂಡಿಸುತ್ತಾರೆ.
“ಇಂದ್ರಿಯಗಳ ಮತ್ತು ಬುದ್ಧಿಶಕ್ತಿಯ ನಿಕಟ ಸಂಯೋಗದ” ಫಲಿತಾಂಶ ಎಂದು ಕರ್ರೆರಾ ಅಂದ್ರಾದೆ ತಮ್ಮ ಕಾವ್ಯದ ಬಗ್ಗೆ ಹೇಳಿದ್ದಾರೆ. ಹೀಗಿದ್ದೂ, ಅವರ ಕವಿತೆಗಳು “ಪಾರದರ್ಶಕ”ವಾಗಿವೆ. ಅಸ್ಪಷ್ಟತೆ ಮತ್ತು ಸಂಕೀರ್ಣತೆಯನ್ನು ತಿರಸ್ಕರಿಸುತ್ತಾ, ಸರಳತೆ ಮತ್ತು ಸ್ಪಷ್ಟತೆಯನ್ನು ಆಯ್ದುಕೊಳ್ಳುತ್ತಾರೆ. “ಇತರ ಮನುಜರೊಂದಿಗೆ ಭಾವನೆಗಳನ್ನು, ಅನಿಸಿಕೆಗಳನ್ನು ಹಂಚಿಕೊಳ್ಳುವುದು ಕಾವ್ಯದ ಅತ್ಯವಶ್ಯಕ ಗುರಿಗಳಲ್ಲಿ ಮುಖ್ಯವಾದದ್ದು,” ಎಂದು ಅವರು ಪರಿಗಣಿಸುತ್ತಾರೆ. ಕರ್ರೆರಾ ಅಂದ್ರಾದೆಯವರ ಪ್ರಕಾರ ಅವರ ಕಾವ್ಯ “ಅದರ ಭಾವನಾತ್ಮಕ ಮತ್ತು ಸಂವೇದನಾತ್ಮಕ ವಿಷಯವನ್ನು ಸಂವಹನ ಮಾಡಲು ಸಾಧ್ಯವಾಗದಿದ್ದರೆ, ಅದು ತನ್ನ ಧ್ಯೇಯವನ್ನು ಸಾಧಿಸಲು ವಿಫಲವಾಗಿದೆ ಎಂದರ್ಥ. ಪ್ರಪಂಚ ಇದನ್ನು ಹೀಗೆಂದು ವ್ಯಾಖ್ಯಾನಿಸುತ್ತೆ.”
ವಿದ್ವಾಂಸರು ಮತ್ತು ವಿಮರ್ಶಕರು ಕರ್ರೆರಾ ಅಂದ್ರಾದೆ ಅವರ ಕಾವ್ಯ ಮತ್ತು ಅಮೇರಿಕನ್ ಇಮೆಜಿಸಮ್ (imagism), ಸ್ಪ್ಯಾನಿಷ್ ಅಲ್ಟ್ರಾಯಿಸಮ್ (ultraism), ಲ್ಯಾಟಿನ್ ಅಮೇರಿಕದ ಸ್ಥಳೀಯ ಸಂಪ್ರದಾಯ ಮತ್ತು ಜಪಾನಿನ ಹಾಯ್ಕು ರೂಪಗಳ ನಡುವೆ ಹೋಲಿಕೆಗಳನ್ನು ಮಾಡಿದರೂ, ಅವರು ವರ್ಗೀಕರಿಸಲು ಕಷ್ಟಕರವಾದ ಕವಿಯಾಗಿದ್ದಾರೆ.
“ಸಮಯದ ಕಕ್ಷೆಯಲ್ಲಿರುವ ಒಬ್ಬ ಸಾಮಾನ್ಯ ಮನುಷ್ಯನ ಸಾಕ್ಷಿಯಾಗಲು ಪ್ರಯತ್ನಿಸುತ್ತೇನೆ. ಮೊದಲಿಗೆ, ಬದಲಾಗುತ್ತಿರುವ ಪ್ರಪಂಚದ ಮಧ್ಯೆ ತಾನು ಒಬ್ಬ ಅಪರಿಚಿತನಂತೆ ಅವನಿಗೆ ಭಾಸವಾಗುತ್ತದೆ, ಆದರೆ ನಂತರ ತನ್ನ ಜೀವನದೊಳಗೆ ಪ್ರೀತಿಯನ್ನು ಸ್ವಾಗತಿಸುತ್ತಾನೆ ಮತ್ತು ಗ್ರಹದ ಎಲ್ಲ ಜನರೊಂದಿಗೆ ಐಕ್ಯತೆಯ ಭಾವನೆಯನ್ನು ಆಳವಾಗಿ ಕಂಡುಕೊಳ್ಳುತ್ತಾನೆ. ಈ ಅರ್ಥದಲ್ಲಿ ನಾನು ವಿವಿಧ ಖಂಡಗಳಲ್ಲಿ ಹೊಸ ದೇಶಗಳಿಗೆ ಪಯಣಿಸಿದ್ದೇನೆ ಮತ್ತು ಇತರ ಪರಿಚಿತ ದೇಶಗಳಿಗೆ ಹಿಂದಿರುಗಿದ್ದೇನೆ… ಒಬ್ಬ ಕುತೂಹಲಕಾರಿ ಪಯಣಿಗನಾಗಿರುವುದಕ್ಕಿಂತ ಹೆಚ್ಚಾಗಿ ಒಬ್ಬ ಭಾವೋದ್ರಿಕ್ತ ವೀಕ್ಷಕನಾಗಿ ಈ ತೀರ್ಥಯಾತ್ರೆಯಲ್ಲಿ ನಡೆದಿದ್ದೇನೆ,” ಎಂದು ತಮ್ಮ ದೃಷ್ಟಿಕೋನದ ಬಗ್ಗೆ ಅಂದ್ರಾದೆಯವರು ಹೇಳುತ್ತಾರೆ.
ಈ ‘ಲೌಕಿಕ’ ದೃಷ್ಟಿಕೋನದಿಂದ ಮತ್ತು ಪ್ರಭಾವದಿಂದ ಅಂದ್ರಾದೆಯವರ ಬರವಣಿಗೆ ಹೊರಹೊಮ್ಮಿತು. ಬಹುಶಃ ಅವರ ಕೃತಿಗಳಲ್ಲಿ ಅತ್ಯಂತ ಆಕರ್ಷಕವಾದದ್ದು ಅವರು ರಚಿಸಿದ, ಅವರು “ಮೈಕ್ರೊಗ್ರಾಮ್”ಗಳು ಎಂದು ಹೆಸರಿಟ್ಟ ಕಿರುಗವನಗಳು. ಜಪಾನಿ ಕಾವ್ಯರೂಪ ‘ಹಾಯ್ಕು’-ವಿನ ಹಾಗೆ ಕಾಣುವಂತಹ ಚುಟುಕಾದ ಕವನಗಳು ಇವು. ಅಂದ್ರಾದೆ-ಯವರ ‘ಮೈಕ್ರೊಗ್ರಾಮ್’-ಗಳನ್ನು ಸ್ಪ್ಯಾನಿಷ್ ಭಾಷೆಯಿಂದ ಇಂಗ್ಲಿಷ್-ಗೆ ಅನುವಾದ ಮಾಡಿದ ಅಲೆಹಂದ್ರೊ ಡಿ ಅಕೊಸ್ತ (Alejandro de Acosta) ಮತ್ತು ಜಾಷುವಾ ಬೆಕ್ಮನ್-ರವರು (Joshua Beckman) ಈ ಕಾವ್ಯರೂಪವನ್ನು ಹೀಗೆ ವರ್ಣಿಸುತ್ತಾರೆ:
“ಸಾಮಾನ್ಯವಾಗಿ ಮೂರರಿಂದ ಆರು ಸಾಲುಗಳ ನಡುವಿನ ಚಿಕ್ಕ ಕವಿತೆಯಾಗಿರುವ ಮೈಕ್ರೊಗ್ರಾಮ್, ಈ ಲೋಕದಲ್ಲಿ ಬದುಕಿರುವ ಸಣ್ಣ-ಪುಟ್ಟ ಜೀವಿಗಳ ಬಗ್ಗೆಯಾಗಿರುತ್ತೆ. ಸಸ್ಯಗಳು ಹಾಗೂ ಪ್ರಾಣಿಗಳು, ಎರಡೂ ತರಹದ ಜೀವಿಗಳು ಮೈಕ್ರೊಗ್ರಾಮ್-ಗಳ ವಸ್ತುವಾಗುತ್ತವೆ. ರಚನಾತ್ಮಕವಾಗಿ ವಿಶಿಷ್ಟವಾಗಿದ್ದರೂ, ಮೈಕ್ರೊಗ್ರಾಮ್-ಗಳು ತಮ್ಮ ಹೊಸತನವನ್ನು ಸೌಮ್ಯತೆ ಹಾಗೂ ಔಚಿತ್ಯದಿಂದ ಪ್ರಸ್ತುತಪಡಿಸುತ್ತೆ. ಅತ್ಯಂತ ವ್ಯಕ್ತಿನಿಷ್ಠವಾದ ವೈಯಕ್ತಿಕ ಚರಿತ್ರೆಗಳನ್ನು ಬಳಸುತ್ತಾ, ಅಂದ್ರಾದೆಯವರು ಅಲ್ಲಿ ವಸ್ತುನಿಷ್ಟತೆಯನ್ನು ಕಾಣುತ್ತಾರೆ ಹಾಗೂ ಕೋರುತ್ತಾರೆ – ಒಂದು ವೈಯಕ್ತಿಕ-ರೂಪದ ಉದಾರವಾದ ವಸ್ತುನಿಷ್ಟತೆ.”
“ಮೈಕ್ರೊಗ್ರಾಮ್-ನ ಮೂಲ ಮತ್ತು ಭವಿಷ್ಯ” ಎಂಬ ಪ್ರಬಂಧದಲ್ಲಿ ಅಂದ್ರಾದೆಯವರು ಸ್ಪ್ಯಾನಿಷ್ ಕವಿ ಫ್ರಾನ್ಸಿಸ್ಕೊ ಡಿ ಕ್ವೆವೆಡೊ ಇ ವಿಲ್ಲೆಗಾಸ್ (Francisco de Quevedo y Villegas) ಅಥವಾ ನಂತರ ಬಂದ ಮ್ಯಾನುಯೆಲ್ ಮಚಾಡೊ (Manuel Machado) ರಚಿಸಿದ ಕ್ಯಾಸ್ಟಿಲಿಯನ್ ಎಪಿಗ್ರಾಮ್-ನ (Castilian epigram) ಕಾವ್ಯಾತ್ಮಕ ಸಂಬಂಧಿ ಎಂದು ತಮ್ಮ ಮೈಕ್ರೊಗ್ರಾಮ್-ಅನ್ನು ವರ್ಣಿಸಿದ್ದಾರೆ. ಮುಂದೆ ವಿವರಿಸುತ್ತಾ, ಮೈಕ್ರೊಗ್ರಾಮ್-ಗಳು “ಮೂಲಭೂತವಾಗಿ ಚಿತ್ರಿತ (graphic),” “ಭಾವನಾತ್ಮಕ,” “ಚಿತ್ರಾತ್ಮಕ” ಕವಿತೆಗಳಾಗಿದ್ದು, ಅವು “ಅಮುಖ್ಯ ಜೀವಗಳ ಅಂಗಸನ್ನೆ”ಯನ್ನು ಸೆರೆಹಿಡಿಯುತ್ತವೆ. ಭಾಷೆ ಮತ್ತು ಮೌಖಿಕ ಶುದ್ಧೀಕರಣದ ರೂಪಕ ಬಳಕೆಯಲ್ಲಿ ಮೈಕ್ರೊಗ್ರಾಮ್-ಗಳು ಸ್ಪ್ಯಾನಿಷ್ ವ್ಯಾನ್‌ಗಾರ್ಡ್ಸ್ (Spanish Vanguards), ಕ್ರಿಯೇಷನಿಸಂ ಮತ್ತು ಅಲ್ಟ್ರಾಯಿಸ್ಮೋ (Creationism and Ultraísmo) ಚಳುವಳಿಗಳು ಮತ್ತು ಜಪಾನಿನ ಹಾಯ್ಕು ರೂಪದ ಸ್ಪೂರ್ತಿ ಮತ್ತು ಪ್ರಭಾವದೊಂದಿಗೆ ಆಳವಾದ ಸಂಪರ್ಕ ಹೊಂದಿದ ಕವನ ಶೈಲಿಯಾಗಿದೆ, ಎಂದು ಅಂದ್ರಾದೆಯವರು ವಿವರಿಸುತ್ತಾರೆ.
ಅಂದ್ರಾದೆಯವರದೇ ಮಾತುಗಳಲ್ಲಿ, “ಅಂದವಿಲ್ಲದ ಜೀವಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಸುಂದರವಾದ ಕೆಲಸವನ್ನು ಪೂರೈಸುತ್ತವೆ ಹಾಗೂ ನೆಲಗಪ್ಪೆ, ದೊಡ್ಡಕಣಜ, ಹುಳಗಳಂತಹ ಜೀವಿಗಳು ಬ್ರಹ್ಮಾಂಡದ ರಹಸ್ಯವನ್ನು ಅರ್ಥಮಾಡಿಕೊಳ್ಳಲು ಇರುವ ಇತರ ಬಹುಬಗೆಯ ಗುಪ್ತಲಿಪಿಗಳಾಗಿವೆ ಎಂದು ನಾನು ಕಂಡುಕೊಂಡೆ. ಚಲಿಸುವ ಹಿಮದಂತೆ ಕಾಣುವ ಫ್ಲೆಮಿಂಗೊ ಪಕ್ಷಿಯ ಉತ್ಸಾಹ, ಕಳ್ಳಿಗಿಡದ ಸಸ್ಯಜನ್ಯ ಮಾನವದ್ವೇಷ, ಮರದಲ್ಲಿ ಕಂಬಳಿಹುಳಗಳು ನಡೆಸುವ ಗುಪ್ತಕಾರ್ಯ – ಇವೆಲ್ಲ ನನ್ನನ್ನು ಪಕ್ಷಿಗಳ ವರ್ಣಮಾಲೆಯನ್ನು ಅರ್ಥಮಾಡಿಕೊಳ್ಳಲು
ಬ್ರಹ್ಮಾಂಡದ ಏಣಿಯ ಮೇಲೆ ಏರಲು ಕರೆದೊಯ್ದವು; ಇವು ಈ ಗ್ರಹದ ಆಧ್ಯಾತ್ಮಿಕ ಕ್ರಮವನ್ನು ಕಾಪಾಡುವ ಉಚ್ಛ ಸಂಕೇತಗಳಾಗಿವೆ.”
ಅಮೇರಿಕದ ಖ್ಯಾತ ಕವಿ ವಿಲಿಯಮ್ ಕಾರ್ಲೋಸ್ ವಿಲಿಯಮ್ಸ್ ಅವರು ಕರ್ರೆರಾ ಅಂದ್ರಾದೆ ಅವರ ರೂಪಕಗಳನ್ನು ಹೀಗೆ ವರ್ಣಿಸಿದ್ದಾರೆ: “ಅಸಾಧಾರಣವಾಗಿ ತಿಳಿಯಾಗಿರುವ ರೂಪಕಗಳು ಇವು, ಆದಿಯುಗದ ಮೂಲದೊಂದಿಗೆ ಎಷ್ಟು ನಿಕಟವಾಗಿವೆಯೆಂದರೆ ಒಬ್ಬ ಮೂಲನಿವಾಸಿಯ ಕಣ್ಗಳಿಂದ ನಾನು ನೋಡುತ್ತಿದ್ದೇನೆ ಮತ್ತು ಪ್ರಪಂಚದ ಕಳೆದುಹೋದ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ಇದು ಒಂದು ತರಹದ ವಿಷಾದಭರಿತ ಆನಂದ, ಆದರೆ ಅದ್ಭುತವಾದ ಆನಂದ.”
ಅವರ ಜೀವಮಾನದಲ್ಲಿ ಮತ್ತು ಅವರ ನಿಧನದ ನಂತರ ಕೂಡ ಅವರನ್ನು ಇಪ್ಪತ್ತನೇ ಶತಮಾನದ ಪ್ರಮುಖ ಲ್ಯಾಟಿನ್ ಅಮೇರಿಕನ್ ಕವಿಗಳಲ್ಲಿ ಒಬ್ಬರಾಗಿ ಹೊರ್ಹೆ ಲೂಯಿಸ್ ಬೋರ್ಹೆಸ್ (Jorge Luis Borges), ವಿಸೆಂತೆ ಹುಯಿದೋಬ್ರೊ (Vicente Huidobro), ಗಾಬ್ರಿಯೆಲಾ ಮಿಸ್ತ್ರಾಲ್ (Gabriela Mistral), ಪಾಬ್ಲೋ ನೆರುಡಾ (Pablo Neruda), ಒಕ್ಟಾವಿಯೊ ಪಾಜ಼್ (Octavio Paz) ಮತ್ತು ಸೆಸರ್ ವಯ್ಯೆಹೊ (Cesar Vallejo) ಅವರೊಂದಿಗೆ ಗುರುತಿಸಲ್ಪಟ್ಟಿದ್ದಾರೆ.
ನನ್ನ ಕನ್ನಡ ಅನುವಾದದಲ್ಲಿ ಇಲ್ಲಿ ಪ್ರಕಟವಾಗಿರುವ ಹೊರ್ಹೆ ಕರ್ರೆರಾ ಅಂದ್ರಾದೆಯವರ ಎಲ್ಲಾ ಮೈಕ್ರೊಗ್ರಾಮ್-ಗಳನ್ನು ಅಲೆಹಂದ್ರೊ ಡಿ ಅಕೊಸ್ತ (Alejandro de Acosta) ಮತ್ತು ಜಾಷುವಾ ಬೆಕ್ಮನ್-ರವರು (Joshua Beckman) ಮೂಲ ಸ್ಪ್ಯಾನಿಷ್ ಭಾಷೆಯಿಂದ ಇಂಗ್ಲಿಷ್-ಗೆ ಅನುವಾದಿಸಿರುವರು. (Jorge Carrera Andrade, Micrograms; Translated into English by Alejandro de Acosta and Joshua Beckman; Wave Books, Seattle and New York, 2011.)
೧
ಜೋಳದ ಕಾಳು
ಮೂಲ: Kernel of corn
ಪ್ರತಿ ಮುಂಜಾನೆ
ಹುಂಜದ ಕೊಕ್ಕಿನಲಿ
ಪ್ರತಿ ಕಾಳೂ
ಹಾಡಿನ ತೆನೆಯಾಗುತ್ತೆ
೨
ಸಿಂಪಿ
ಮೂಲ: Oyster
ಎರಡು ಚಿಪ್ಪುಗಳ ಮೃದ್ವಂಗಿ:
ನಿನ್ನ ಸುಣ್ಣದ ಸಂದೂಕು
ಯಾವುದೋ ಭಗ್ನನೌಕೆಯ
ದಸ್ತಾವೇಜನ್ನು ಭದ್ರವಾಗಿಟ್ಟಿದೆ.
೩
ಬೆರಳಚ್ಚು
ಮೂಲ: Typewriting
ನಡುರಾತ್ರಿಯ ನೆಲಗಪ್ಪೆ: ನಿನ್ನ ಪುಟ್ಟ
ಬೆರಳಚ್ಚುಗಳು
ಚಂದ್ರನ ಖಾಲಿ ಹಾಳೆಯ ತಟ್ಟುವುದು.
೪
ಬಸವನಹುಳು ಎಂದರೆ
ಮೂಲ: What the Snail is
ಬಸವನಹುಳು:
ದೇವರು ನೆಲವನ್ನು ಅಳೆಯುವುದಕ್ಕಾಗಿ
ಬಳಸುವ ಸಣ್ಣ ಅಳತೆಟೇಪು.
೫
ಕಡಲ್ಹಕ್ಕಿಯ ವರ್ಣನೆ
ಮೂಲ: Definition of a Seagull
ಕಡಲ್ಹಕ್ಕಿ:
ಮೌನದ ಅಲೆಯಲ್ಲಿ
ನೊರೆಯ ಹುಬ್ಬು.
ಭಗ್ನನೌಕೆಯ ಕರವಸ್ತ್ರ.
ಆಕಾಶಲಿಪಿ.
೬
ಅಕ್ಷರಮಾಲೆ
ಮೂಲ: Alphabet
ಹಕ್ಕಿಗಳು
ದೇವರ ಕೈಬರಹ
೭
ಎರೆಹುಳ
ಮೂಲ: The Earthworm
ಎಡೆಬಿಡದೆ
ಗೆರೆಯೆಳೆಯುತ್ತಿರುತ್ತೆ ಮಣ್ಣಿನಲ್ಲಿ
ನಿಗೂಢ ಅಕ್ಷರವೊಂದರ
ಉದ್ದನೆಯ ಅಪೂರ್ಣ ರೇಖೆಯನ್ನು.
೮
ಬಸವನಹುಳು
ಮೂಲ: The Snail
ಪದಾರ್ಥಗಳ ವರ್ಣಮಾಲೆಯ
ಉಪಾಂತ್ಯ ಅಕ್ಷರವನ್ನು
ಸೃಷ್ಟಿಸುವುದು
ಆ ಬಸವನಹುಳು.
೯
ತಾಳೆಮರ
ಮೂಲ: Palmtree
ಒಂದು ಮರಕ್ಕಿಂತ ಹೆಚ್ಚಾಗಿ,
ಬಿಸಿಲು ಮತ್ತು ಗಾಳಿಗಳು
ಹೊತ್ತಿರುವ ವಾಸ್ತುಶಿಲ್ಪ ಅದು,
ಕಮಾನಿತ ಆಕಾಶಕಿಂಡಿಯ
ಮುಖ್ಯ ಸ್ತಂಭ ಆ ತಾಳೆಮರ.
೧೦
ಹಮಿಂಗ್‌ಬರ್ಡ್
ಮೂಲ: Hummingbird
ಹಮಿಂಗ್‌ಬರ್ಡ್ ಹಕ್ಕಿ
ಸೂರ್ಯಕಾಂತಿ ಹೂವಿನ ಸೂಜಿ,
ಹೂವಿನಿಂದ ಹೊರಗೆಳೆದ
ಸಿಹಿ ನೂಲಿನಿಂದ
ಕಂಪಿಸುವ ಕಾಂಡದ ಮೇಲೆ
ಗುಲಾಬಿ ಬೆಳಕಿನ
ಒತ್ತು ಹೊಲಿಗೆಗಳು.
೧೧
ಮೃಗಾಲಯ
ಮೂಲ: Zoo
ಫ್ಲೆಮಿಂಗೊ ಪಕ್ಷಿ:
ನೀರಗುಂಡಿಯಲ್ಲಿ ಸುಣ್ಣದಕಡ್ಡಿಯ ಮಡಕೆಕೊಂಡಿ,
ನಗ್ನ ಕಾಂಡದ ಮೇಲೆ
ಚಲಿಸುವ ನೊರೆಯ ಪುಷ್ಪ.
೧೨
ಜೇಡರ ಹುಳ
ಮೂಲ: The Spider
ನೆಲದ ಜೇಡರ ಹುಳ:
ಸಮಯದ ಹೆಗಲಿನಿಂದ ಕೆಳಗೆ ಬಿದ್ದ
ಭುಜಕೀರ್ತಿ
೧೩
ಕಳ್ಳಿಗಿಡ
ಮೂಲ: Cactus
ಅವುಗಳ ಪತ್ರಹಸಿರು ರಾಕೆಟ್ಟುಗಳು
ಮೊನಚಾದ ಕಳ್ಳಿಗಳ ಬೆಂಕಿ,
ಸಿಂಧೂರವರ್ಣದ ಸ್ಫೋಟಗಳು.
೧೪
ಹೊಲೆನೊಣ
ಮೂಲ: Blowfly
ಹೊಲೆನೊಣ: ರೆಕ್ಕೆಗಳುಳ್ಳ ದ್ರಾಕ್ಷೆ.
ನಿನ್ನ ಹಸಿ ಸಿಹಿ ಮೌನವ ಕುಡಿದು
ಹೃದಯ ಉನ್ಮತ್ತವಾಗುತ್ತದೆ.
೧೫
ಪಾಪ್ಲರ ಮರ
ಮೂಲ: Poplar
ಪಾಪ್ಲರ್ ಮರ ತನ್ನ ಕುಂಚವನ್ನು
ಆಕಾಶದ ಇಂಪಿನಲ್ಲಿ ಅದ್ದಿ
ಮಕರಂದದ ನಿಸರ್ಗದೃಶ್ಯವ ಬಿಡಿಸುತ್ತೆ.
೧೬
ಮಿಡತೆಗಳು
ಮೂಲ: Crickets
ಮಿಡತೆಗಳು ತಮ್ಮ ನೀಲಿ ಬಾವುಟಗಳನ್ನು
ಮುಸ್ಸಂಜೆಯ ನೆಲದ ಮೇಲೆ ನೆಡುತ್ತವೆ
ಪುಟ್ಟ ಗಾಜಿನ ಸುತ್ತಿಗೆಗಳಿಂದ ಬಡಿಯುತ್ತಾ.
೧೭
ಆಮೆ
ಮೂಲ: Tortoise
ತನ್ನ ಹಳದಿ ಕೋಶದಲ್ಲಿರುವ ಆ ಆಮೆ,
ಶತಮಾನಗಳ ಹಿಂದೆ ನಿಂತುಹೋದ
ಭೂಮಿಯ ಗಡಿಯಾರ.
ನೆಗ್ಗಿಹೋಗಿದೆ ಈಗ,
ಅವಿತುಕೊಂಡಿದೆ ಅದು
ಸಮಯದ ಪುಟ್ಟ ಹರಳುಗಳ ಮಧ್ಯೆ
ನೀರಿನ ನೀಲಿ ಹೊದಿಕೆಯಲ್ಲಿ.
೧೮
ಚಿಟ್ಟೆ
ಮೂಲ: Butterfly
ಗಾಯಪಟ್ಟಿ ಕಟ್ಟಿದ ಕೂಸು,
ನೀನು ನಿನ್ನ ರೆಕ್ಕೆಗಳನ್ನು ಬಿಡಿಸಿದಾಗ:
ಬಯಲಿನಲ್ಲಿ ಹಾರಾಡುವ
ಎಳೆಯೆಲೆಯಾಗುವೆ ನೀನು.
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.