‘ಗುಟ್ಟು’
ಕೌದಿಯಲ್ಲಿ ಬೆಚ್ಚಗೆ ಜಾಗೃತ ನಿದ್ದೆಯಲ್ಲಿರುವ
ಮಗು ಎಚ್ಚರಗೊಂಡು
ಅರಳಿರದ ಮೊಗ್ಗಿನ ದಳಗಳಂತಿರುವ
ತನ್ನ ಕಾಲ ಬೆರಳುಗಳನ್ನು ಸಣ್ಣಗೆ ನಡುಗಿಸುತ್ತೆ
ಪುಟ್ಟ ಕೈಗಳನ್ನು ಹಾಗೇ-
ಪಿಳಿ ಪಿಳಿಸುತ್ತಾ ಅಚ್ಚರಿಯ ಕಣ್ಣುಗಳಲ್ಲಿ
ಪುಟ್ಟ ಪ್ರಪಂಚ ಹಿಡಿದಿಡುತ್ತಾ
ಇದೇನು ಎಂದು ಅರ್ಥವಾಗದೆ,
ಉರುಳಿ
ತನ್ನ ಹೊಟ್ಟೆಯನ್ನು ನೆಲಕ್ಕೆ
ಭಾರ ಬಿಟ್ಟು ಅದುವರೆಗೂ ಸಂಭೂತ ಪುಟ್ಟ
ಶಕ್ತಿಯನ್ನು ಕೊಡವಿ ಹಾಗೇ-
ಮೊದಲ ಬಾರಿ ಕೌದಿಯಿಂದ ಆಚೆಗೆ
ತೆವಳಿದ್ದಕ್ಕೆ,
ಅದರ ಸೂಕ್ಷ್ಮ ಶುಭ್ರ ತ್ವಚೆಯಿಂದ
ಭೂಮಿಗೆ ತನ್ನನ್ನು ಪ್ರೀತಿಯೇ ದೇವರಾಗಿ
ದೇವರೇ ಈ ಮಗುವಾಗಿ ಬಂದು ಸವರಿದಂತಾಗಿ,
ಕಂಪಿಸಿತು ಸೂಕ್ಷ್ಮವಾಗಿ ನೆಲ
ಯಾರಿಗೂ ಗೊತ್ತಾಗದಂತೆ
ನಿಷ್ಕಾರುಣ್ಯ ಹಿರಿಯರ ಒರಟು ಪಾದಗಳಿಂದ
ತರಚಿಸಿಕೊಂಡು ಗಾಯಗೊಂಡಿದ್ದ ನೆಲಕ್ಕೆ
ಸಿಹಿನೀರ ಬಿಸಿ ಶಾಖ ಗಾಯದ ಮೇಲೆ ಸಿಕ್ಕಂತಾಗಿ
ಹಾ ಎಂದು ಉದ್ಗರಿಸಿತು ಮೌನವಾಗಿ
ಅದಕ್ಕೇ ಇರಬೇಕು-
ಮನೆಯ ಮುಂದಿನಲ್ಲಿದ್ದ ಮಲ್ಲಿಗೆಯ ಗಿಡ
ಸಣ್ಣಗೆ ಅತ್ತಿತ್ತ ಆಡಿತು
ಸಣ್ಣಗೆ ಗಾಳಿ ಬೀಸಿತು
ಮೊಗ್ಗು ಮಲ್ಲಿಗೆ ಸುಗಂಧ
ಮಗುವಿನ ಪ್ರೀತಿಯ ಗಂಧ
ಮತ್ತು
ದೇವರು ಸಹಸ್ರಪಾತ್ ಮಗುವಿನ ತ್ವಚೆ
ಎಂಬ ಗುಟ್ಟು ತಿಳಿಯಿತೇನೋ
ನೆಲಕ್ಕೆ
ಅರ್ಜುನ್ ಎಂ.ಎಸ್. ಮೂಲತಃ ಮೈಸೂರಿನವರು.
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ B.E ವಿದ್ಯಾರ್ಥಿ.
‘ಇರುವೆ’ ಇವರು ಹತ್ತನೇ ತರಗತಿಯಲ್ಲಿದ್ದಾಗ ಪ್ರಕಟಿತ ಕವನ ಸಂಕಲನ
(ಕಲಾಕೃತಿ: ಮೇರಿ ಕೆಸೆಟ್ಟಾ)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ