ಈಚೀಚೆಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ತೆಗೆದುಕೊಂಡು ಪ್ರವಾಸ ಮಾಡುವ ಭಾರತೀಯರು/ಏಷ್ಯನ್ನರು ಹೆಚ್ಚಾಗುತ್ತಿದ್ದಾರೆ. ನಾನು ಕೇಳಿದಂತೆ ಹೀಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ಪಡೆದು ಪ್ರವಾಸ ಮಾಡುವ ಭಾರತೀಯರು ಒಳ್ಳೆ ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರತಿದಿನವೂ ಅಡುಗೆ ಮಾಡಲು ಬೇಕಾಗುವ ದಿನಸಿ ಸಾಮಗ್ರಿಯಿಂದ ಹಿಡಿದು ದಿನನಿತ್ಯದ ಕಾರ್ಯಕ್ರಮದ ವೇಳಾಪಟ್ಟಿಯನ್ನೂ ಹೊಂದಿಸಿಕೊಂಡಿರುತ್ತಾರೆ. ಆಸ್ಟ್ರೇಲಿಯಾದ ಭಾರತೀಯರಿಗೆ ಟಾಸ್ಮೆನಿಯಾ ರಾಜ್ಯದ ಸುತ್ತಾಟ ಬಲುಪ್ರಿಯವಾದದ್ದು ಎಂದು ಕೇಳಿದ್ದೀನಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

Kia Ora. Kiwi ನಾಡಲ್ಲಿ ಒಂದಷ್ಟು ದಿನ ಸುತ್ತಾಡಿ ಬಂದೆ. ಅವರ ನಾಡಿನಲ್ಲಿ Kia Ora ಅನ್ನುತ್ತಾ ಸ್ವಾಗತ ಕೋರುತ್ತಾರೆ. ಆಸ್ಟ್ರೇಲಿಯನ್ನರಿಗೆ ಕೀವೀಗಳ ನ್ಯೂ ಝಿಲ್ಯಾಂಡ್ ಅಂದರೆ ಬಲುಪ್ರಾಣ. ನಾನು ಇದೇ ಮೊದಲಬಾರಿ ನ್ಯೂ ಝಿಲ್ಯಾಂಡ್‌ಗೆ ಹೋಗಲಿದ್ದೀನಿ ಅನ್ನೋದನ್ನ ಕೇಳಿದವರು ಅರೇ, ಇಷ್ಟು ವರ್ಷ ಆಸ್ಟ್ರೇಲಿಯಾದಲ್ಲಿ ವಾಸವಿರುವವಳು ನೀನು ಇನ್ನೂ ನ್ಯೂ ಝಿಲ್ಯಾಂಡ್ ನೋಡಿಲ್ಲವಾ, ಎಂದು ಆಶ್ಚರ್ಯಪಟ್ಟರು. ದಕ್ಷಿಣ ದ್ವೀಪ (South Island) ಬಲು ಸುಂದರ, ಅಲ್ಲಿಗೆ ಹೋಗುವುದನ್ನ ಮಾತ್ರ ತಪ್ಪಿಸಬೇಡ ಎಂದಿದ್ದರು. ಹೌದು, ನಾನು ಹೋಗಲಿರುವುದೇ ದಕ್ಷಿಣ ದ್ವೀಪಕ್ಕೆ ಎಂದಾಗ ವೆರಿ ನೈಸ್, ಅಲ್ಲಿನ ಪೆಂಗ್ವಿನ್, ಆಲ್ಬಾಟ್ರಾಸ್, Queenstown, ಹಿಮಪರ್ವತಗಳು, ಮ್ಯೂಸಿಯಂಗಳು, ಸರೋವರಗಳು, ನದಿಗಳು ಎಲ್ಲವನ್ನೂ ನೋಡಿಬಿಡು, ಯಾವುದನ್ನೂ ಬಿಡಬೇಡ ಅಂದಾಗ ಮಾತ್ರ ಗಾಬರಿಯಾಗಿತ್ತು. ಎರಡು ದಿನಗಳ ಕಾನ್ಫೆರೆನ್ಸ್ ಮುಗಿಸಿಕೊಂಡು ನಂತರದ ಎಂಟು ದಿನಗಳಲ್ಲಿ ಎಷ್ಟಾಗುವುದೋ ಅಷ್ಟು ಸುತ್ತಾಡುವುದು ಅನ್ನೋ ಪ್ಲಾನ್ ಇತ್ತು.

ನನ್ನ ಕಾನ್ಫೆರೆನ್ಸ್ ಇದ್ದದ್ದು Dunedin ನಗರದಲ್ಲಿ. ಅದು ಮುಗಿಸಿದ ಮೇಲೆ ಸುತ್ತಾಟಕ್ಕಾಗಿ ಗಂಡ, ಮಕ್ಕಳು ಸೇರಿಕೊಂಡರು. ಅವರೆಲ್ಲಾ ದಕ್ಷಿಣ ದ್ವೀಪದ Christchurch ನಗರದ ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು, ಮುಂಚಿತವಾಗಿಯೆ ಬುಕ್ ಮಾಡಿದ್ದ ಕ್ಯಾಂಪರ್ ವ್ಯಾನ್ ಅನ್ನು ತೆಗೆದುಕೊಂಡು ಅಲ್ಲಿಂದ ಇನ್ನೂ ಕೆಳಗಡೆ ಪೂರ್ವ-ದಕ್ಷಿಣಕ್ಕಿದ್ದ Dunedin ನಗರಕ್ಕೆ ಬಂದು, ಅಲ್ಲಿ ನಾನವರನ್ನು ಸೇರಿಕೊಂಡು ಅಲ್ಲಿಂದ ನಮ್ಮ ಸುತ್ತಾಟ ಶುರುವಾಗಲಿತ್ತು.

ಸಾಮಾನ್ಯವಾಗಿ ಸೌತ್ ಐಲ್ಯಾಂಡ್‌ಗೆ ಬರುವ ಅಂತಾರಾಷ್ಟ್ರೀಯ ಪ್ರವಾಸಿಗರು ಪೂರ್ವತೀರದ Christchurchನಲ್ಲಿಳಿದು ಅಲ್ಲಿಂದ ನೇರ ಪಶ್ಚಿಮತೀರಕ್ಕೆ ಹೊರಡುತ್ತಾರೆ. ಸೂಜಿಗಲ್ಲಿನಂತೆ ಅವರನ್ನು ಪಶ್ಚಿಮತೀರಕ್ಕೆ ಸೆಳೆಯುವುದು ಅಲ್ಲಿರುವ ಮನಮೋಹಕ ಹಿಮಪರ್ವತಗಳು-Southern Alps. ದಕ್ಷಿಣಗೋಳದಲ್ಲಿ ಇದೊಂದೇ ಕಡೆ ಇರುವ ಈ ಹಿಮಾಚ್ಚಾದಿತ ಪರ್ವತಗಳಲ್ಲಿ glacier ಹೊದಿಕೆಗಳು, ಸ್ಕೀಯಿಂಗ್ ತಾಣಗಳು, ಪರ್ವತಾರೋಹಣ, ಮನಸೂರೆಗೊಳ್ಳುವ ಇಂದ್ರನೀಲ ವರ್ಣದ ಹಿಮನದಿಗಳು, ಮಳೆಕಾಡುಗಳು, ಸರೋವರಗಳು ಇವೆ. ಪರ್ವತಶ್ರೇಣಿಯನ್ನಿಳಿದರೆ ಸಮುದ್ರ. ಹಾಗೇ ಪಶ್ಚಿಮತೀರದ ಗುಂಟ ಸಾಗಿದರೆ ಸ್ವಲ್ಪ ಒಳನಾಡಿನಲ್ಲಿದೆ ಎಲ್ಲರಿಗೂ ಪ್ರಿಯವಾದ, ನೋಡಲೇಬೇಕಾದ Queenstown- ರಾಣಿಗೆ ಹೇಳಿಮಾಡಿಸಿದಂಥಾ ಸುಂದರ ನಗರ. ಇಲ್ಲಿನ ಉದ್ದಾನುದ್ದದ ವಾಕಾಟಿಪು ಸರೋವರ, The Remarkables ಹಿಮಪರ್ವತಗಳು ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವಗಳನ್ನು ಕೊಡುತ್ತವೆ. ಸ್ಕೀಯಿಂಗ್, ಸ್ನೋಬೋರ್ಡಿಂಗ್, ಹಿಮಕ್ರೀಡೆಗಳಿಗೆ, ಜಲಕ್ರೀಡೆಗಳಿಗೆ, ಚಾರಣಕ್ಕೆ, mountain bike ಸಾಹಸಗಳಿಗೆ, ಎಲ್ಲಕ್ಕೂ ಸೈ ಎನ್ನುವ ನಗರವಿದು. Queenstown ಸಮೀಪವಿರುವ ಡೀರ್ ಪಾರ್ಕ್ ಹೈಟ್ಸ್ ಎಂಬ ಸ್ಥಳದಲ್ಲಿ Lord of the Rings ಚಲನಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಇಲ್ಲಿಂದ ಮುಂದೆ ಹಾಗೇ ಸರೋವರದುದ್ದಕ್ಕೂ ಹೋದರೆ ಐವತ್ತು ಕಿಲೋಮೀಟರ್ ಆಚೆ ಇರುವ Glenorchy ಎಂಬ ಪುಟ್ಟ ಊರಿನ ಸುತ್ತಮುತ್ತ ಕೂಡ ಚಿತ್ರೀಕರಣ ಮಾಡಿದ್ದಾರೆ. ಪ್ರವಾಸಿಗರಿಗೆ ಇನ್ನೇನು ಬೇಕು?! ಎಲ್ಲವೂ ಈ ಪಶ್ಚಿಮತೀರದಲ್ಲಿದೆ. ಪ್ರವಾಸಿಗರು ಇದೆಲ್ಲದರ ರಸಾನುಭವ ಪಡೆದು ದಕ್ಷಿಣಕ್ಕೆ, ಅಲ್ಲಿಂದ ಪೂರ್ವತೀರಕ್ಕೆ ಹೋಗುತ್ತಾರೆ. ಪೆಂಗ್ವಿನ್, ಆಲ್ಬಾಟ್ರೋಸ್, ಸೀಲ್, ಡಾಲ್ಫಿನ್ಸ್, ಸುಂದರ ಉದ್ಯಾನವನಗಳು ಇಲ್ಲಿವೆ.

ನಮ್ಮವರೆಲ್ಲಾ Christchurch ನಗರದಲ್ಲಿ ಇಳಿದು, ದಕ್ಷಿಣ ದ್ವೀಪದ ಭೂಪಟ ಬಿಡಿಸಿಟ್ಟುಕೊಂಡು, ನಿಧಾನಕ್ಕೆ ಬೆಟ್ಟ-ಪರ್ವತಗಳ ದಾರಿಯಲ್ಲಿ ಕ್ಯಾಂಪರ್ ವ್ಯಾನ್ ಚಲಾಯಿಸಿಕೊಂಡು ಬರುವ ಸಂಜೆಹೊತ್ತಿನಲ್ಲಿ ಅವರಿಗೆ ‘Southerly Busters’ ಎದುರಾಗಿ ಸ್ವಾಗತ ಕೋರಿತ್ತು. ವಿಪರೀತ ಜೋರಾದ ಸುಳಿಗಾಳಿ, ಮಳೆ, ಆಲಿಕಲ್ಲು ಆವರಿಸಿ, ಸುರಿದು ಅದಾಗಲೇ ಸವೆದು ಬಡಕಲಾಗಿದ್ದ ಆ ಕ್ಯಾಂಪರ್ ವ್ಯಾನ್ ತೂಗಾಡಿ ಓಲಾಡಿತ್ತು. ನಮ್ಮವರೆಲ್ಲಾ ಬದುಕಿದರೆ ಸಾಕು ಓ ಶಿವನೇ ಎಂದು, ಜೀವ ಕೈಯಲ್ಲಿ ಹಿಡಿದುಕೊಂಡು ಆರು ಗಂಟೆಗಳ ಕಾಲ ಪಯಣಿಸಿ ಬಂದು ನನ್ನನ್ನು ಸೇರಿದಾಗ ಮಧ್ಯರಾತ್ರಿ ದಾಟಿತ್ತು.

ಈ ವರ್ಷದ ಆರಂಭದಲ್ಲಿ shoulder reconstruction ಸರ್ಜರಿ ಮಾಡಿಸಿಕೊಂಡು ರಿಪೇರಿಯಾಗಿದ್ದ ದೊಡ್ಡಮಗನ ಭುಜದಲ್ಲಿ ನೋವು ಕಾಣಿಸಿದ್ದು ಆ ನೋವು ಅವನ ಮುಖದಲ್ಲೇ ಎದ್ದು ಕಾಣುತ್ತಿತ್ತು. ವಿಮಾನ ಪ್ರಯಾಣಕ್ಕೆಂದು ಬೆಳಗ್ಗೆ ನಾಲ್ಕೂವರೆಗೆ ಎದ್ದಿದ್ದ ಸುಖಪುರುಷ ಕಿರಿಮಗನ ಮೈಕೈ ಎಲ್ಲಾ ಆ ಕ್ಯಾಂಪರ್ ವ್ಯಾನ್ ಕುಲುಕಾಟಕ್ಕೆ ಹಣ್ಣುಗಾಯಿನೀರುಗಾಯಿ ಆಗಿ ಬೆನ್ನು ಹಿಡಿದುಕೊಂಡಿತ್ತು.

ಸದ್ಯ, ಎಲ್ಲರೂ ಒಟ್ಟಾಗಿ ಸೇರಿದೆವಲ್ಲಾ ಎಂದು ಸಮಾಧಾನವಾಗಿ, ಬುಕ್ ಮಾಡಿದ್ದ Dunedin ಹಾಲಿಡೇ ಪಾರ್ಕ್ ತಲುಪಿದಾಗ ಒಂದು ಗಂಟೆ. ಜೋರುಮಳೆ, ಮೂಳೆ ಕೊರೆಯುವ ಚಳಿ, ಗಾಳಿ ಇನ್ನೂ ಇತ್ತು. ಹಿಂದೊಮ್ಮೆ ನಾವು ಬ್ರಿಟನ್ನಿನ ಉತ್ತರ ವೇಲ್ಸ್ ಪ್ರಾಂತ್ಯದಲ್ಲಿ ಇರುವ ಪ್ರಸಿದ್ಧ ಪ್ರವಾಸೀ ತಾಣ Abersoch ಎಂಬಲ್ಲಿ ಕ್ಯಾಂಪಿಂಗ್ ಮಾಡಿದ್ದೆವು. ಆ ಕ್ಯಾಂಪ್ ಸೈಟ್ ಬೆಟ್ಟದ ನೆತ್ತಿಯಲ್ಲಿತ್ತು. ಏಪ್ರಿಲ್ ತಿಂಗಳದು. ನಾವು ಹೋದ ಸಂಜೆಯೇ ಪಕ್ಕದ ಐರಿಷ್ ಸಮುದ್ರದ ಮೇಲಿಂದ ಬೀಸಿದ Northerly ಗಾಳಿ, ಚಳಿ, ಜೋರು ಮಳೆಯಿಂದ ನಮ್ಮ ಕೈಕಾಲು ಸೆಟೆದುಹೋಗಿ, waterproof ಟೆಂಟ್ ಒಳಗಡೆ ತೂರಿಕೊಂಡರೂ ಮೈನಡುಕ ನಿಂತಿರಲಿಲ್ಲ. ಆ ಕಠಿಣ ಅನುಭವದ ನೆನಪು ಈಗ ನುಗ್ಗಿ ಬಂತು.

ನಮ್ಮ ಕೀವೀ ನಾಡಿನ ಸುತ್ತಾಟದ ಆರಂಭವೇ ಹೀಗಾದರೆ ಹೇಗಪ್ಪ, ಅದೂ ಈ ಬೇಸಿಗೆಯಲ್ಲಿ, ಎಂದೆನಿಸಿತು. ಅಂತೂಇಂತೂ ಏನೋ ಮಾಡಿ ವ್ಯಾನ್ ಒಳಗಡೆ ಜಾಗ ಸರಿಮಾಡಿಕೊಂಡು, ಸ್ಲೀಪಿಂಗ್ ಬ್ಯಾಗ್ ಬಿಚ್ಚಿ ಅದರೊಳಗೆ ಮೈದೂರಿಸಿ ಮಲಗಿ ಕಾಲು ಚಾಚಿದಾಗ ಬೆಳಗಿನ ಜಾವ ಎರಡು ಗಂಟೆ. ಬೆಳಗ್ಗೆ ಹತ್ತು ಗಂಟೆಗೆ ಎದ್ದು ಆ ದಿನದ ಕಾರ್ಯಕ್ರಮವನ್ನು ನೆನಪಿಸಿಕೊಂಡು ತಯಾರಾಗಿ ನಮ್ಮ ಕ್ಯಾಂಪರ್ ವ್ಯಾನ್ ಹತ್ತಿ Dunedin ಸಮುದ್ರತೀರಕ್ಕೆ ಹೊರಟೆವು. ಸೀ ಲಯನ್ಸ್ (seal) ನೋಡಲು. ಹಿಂದಿನ ದಿನದ ಮಳೆ ಸಮುದ್ರದಲ್ಲಿ ಉಬ್ಬರ ಉಂಟುಮಾಡಿ, ಅದರಿಂದ ಸೀಲ್‌ಗಳಿಗೆ ಉತ್ಸಾಹ ಹುಟ್ಟಿ ಅವು ಬೀಚ್ ಹತ್ತಿ ಅಲ್ಲಿರುವ ಕೆಫೆಗಳಿಗೆ ಬಂದಿದ್ದವಂತೆ. ಆ ಪಾಟಿ ಜೊಯ್ಯೆನ್ನುವ ಗಾಳಿಗೆ ಮುಖಕೊಟ್ಟು ಮಳೆಯಲ್ಲಿ ಬೀಚ್ ಗುಂಟ ನಡೆದರೂ ಯಾವ ಸೀಲ್ ಮುಖವೂ ಕಾಣಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಮಳೆ ನಿಂತಿತು. ಮುಂದಿನದು ಆಲ್ಬಾಟ್ರಾಸ್ ಪಕ್ಷಿಗಳನ್ನು ನೋಡುವ ಕಾರ್ಯಕ್ರಮ. ಅದರ ಬಗ್ಗೆ ಮತ್ತೆಂದಾದರೂ ಬರೆಯುತ್ತೀನಿ.

ಮರುದಿನ ಮಳೆ ಪೂರ್ತಿ ನಿಂತು, ಬಿಸಿಲು ಬಂದು ನಾವು Steepest ಸ್ಟ್ರೀಟ್ ನೋಡಲು ಹೊರಟೆವು. Southerly wind ನಲ್ಲಿ ಡ್ರೈವ್ ಮಾಡಿದ ಸಾಹಸ ಕತೆಗಳನ್ನೆಲ್ಲಾ ನಾನು ಕೇಳಿದ್ದು ನಾವು ‘ನ್ಯೂ ಝಿಲ್ಯಾಂಡ್‌ನ steepest street’ ನಲ್ಲಿ ನಡೆಯುತ್ತಿದ್ದಾಗ. ಹೇಳಿಕೇಳಿ ಅದು steepest. ರಸ್ತೆಯ ಎತ್ತರ ಕ್ರಮೇಣ ಒಂದಡಿ, ಒಂದು ಮೀಟರ್ ಹೆಚ್ಚಾಗುತ್ತಾ ನಡೆಯುವುದಲ್ಲ, ನಾವು ಮಾತನಾಡುತ್ತಾ ಉಸಿರು ಬಿಟ್ಟುಕೊಂಡು ಉಸ್ಸಪ್ಪಾ ಎನ್ನುತ್ತಾ ಅದನ್ನು ಹತ್ತಬೇಕಿತ್ತು. ಜಪಾನ್ ದೇಶದ ಹೆಂಗಸರ ಒಂದು ಗುಂಪು ನಮ್ಮ ಜೊತೆಯಿತ್ತು. ಬೇಸರವಿಲ್ಲದೆ ಎಲ್ಲರೂ ಹತ್ತುತ್ತಿದ್ದರು. ಹಿಂದಕ್ಕೆ ವಾಲದಂತೆ ದೇಹವನ್ನು ಬ್ಯಾಲೆನ್ಸ್ ಮಾಡುವುದೇ ಎಲ್ಲರಿಗೂ ಸವಾಲಾಗಿತ್ತು. ಒಬ್ಬರನೊಬ್ಬರು ನೋಡುತ್ತಾ ಒಂದಷ್ಟು ನಗು, ಅವರ ಫೋಟೋ ಇವರು ತೆಗೆಯುವುದು ನಡೆದಿತ್ತು. ಹಿಂದಿನ ದಿನದ ಕಹಿ ಮಾಯವಾಗಿತ್ತು. ನ್ಯೂ ಝಿಲ್ಯಾಂಡ್ ದೇಶದ ಅತ್ಯಂತ ದೊಡ್ಡದಾದ ಬೊಟಾನಿಕಲ್ ಗಾರ್ಡನ್ ಭಾಗಗಳನ್ನು ನೋಡಿ ಆನಂದಿಸಿ ನಾವು ಮುಂದೆ ಸಾಗಿದೆವು. ನಮ್ಮ ವ್ಯಾನ್ ಬೆಟ್ಟ-ಬೀಚ್ ದಾರಿಯಲ್ಲಿ ಸಾಗಿತ್ತು.

ಹೀಗೆ ಒಂದು ವಾಹನವನ್ನು ಗೊತ್ತುಮಾಡಿಕೊಂಡು ತಾವೇ ಡ್ರೈವ್ ಮಾಡಿಕೊಂಡು, ತಿಂಡಿಊಟ ತಯಾರಿಸಿಕೊಂಡು, ಅಲ್ಲಲ್ಲಿ ಟೆಂಟ್ ಹಾಕಿ ರಾತ್ರಿ ಕಳೆಯುತ್ತಾ ಪ್ರವಾಸ ಮಾಡುವುದು ಬಹಳ ಸಾಮಾನ್ಯವಾದ ವಿಷಯ. ನಾವು ಹೋದೆಡೆಯಲ್ಲೆಲ್ಲಾ ಸಿಕ್ಕಿದ್ದು ಭಾರತ ಉಪಖಂಡ ದೇಶಗಳ ಜನ, ಚೀನಿಯರು, ಕೊರಿಯನ್ನರು, ಆಸ್ಟ್ರೇಲಿಯನ್ನರು, ಯೂರೋಪಿಯನ್ನರು. ಅವರಲ್ಲಿ ಜರ್ಮನಿಯವರು ತುಂಬಾ. ಆಗಾಗ ಫ್ರೆಂಚರು, ಸ್ಪೇನ್, ಬ್ರಿಟನ್, ಸೌತ್ ಆಫ್ರಿಕಾ ಮುಂತಾದ ದೇಶಗಳವರು ಸಿಕ್ಕುತ್ತಿದ್ದರು. ಈಚೀಚೆಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ತೆಗೆದುಕೊಂಡು ಪ್ರವಾಸ ಮಾಡುವ ಭಾರತೀಯರು/ಏಷ್ಯನ್ನರು ಹೆಚ್ಚಾಗುತ್ತಿದ್ದಾರೆ. ನಾನು ಕೇಳಿದಂತೆ ಹೀಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ಪಡೆದು ಪ್ರವಾಸ ಮಾಡುವ ಭಾರತೀಯರು ಒಳ್ಳೆ ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರತಿದಿನವೂ ಅಡುಗೆ ಮಾಡಲು ಬೇಕಾಗುವ ದಿನಸಿ ಸಾಮಗ್ರಿಯಿಂದ ಹಿಡಿದು ದಿನನಿತ್ಯದ ಕಾರ್ಯಕ್ರಮದ ವೇಳಾಪಟ್ಟಿಯನ್ನೂ ಹೊಂದಿಸಿಕೊಂಡಿರುತ್ತಾರೆ. ಆಸ್ಟ್ರೇಲಿಯಾದ ಭಾರತೀಯರಿಗೆ ಟಾಸ್ಮೆನಿಯಾ ರಾಜ್ಯದ ಸುತ್ತಾಟ ಬಲುಪ್ರಿಯವಾದದ್ದು ಎಂದು ಕೇಳಿದ್ದೀನಿ.

ಎಲ್ಲದಕ್ಕೂ ಸರಿಯಾಗಿ ನಾವು ಪೂರ್ವಸಿದ್ಧತೆ ಮಾಡಿಕೊಂಡಿದ್ದರೆ ಪ್ರವಾಸ ಸುಖಕರವಾಗಿರುತ್ತದೆ. ವಾಹನದಿಂದ ಹಿಡಿದು ಹಾಕಿಕೊಳ್ಳುವ ಬಟ್ಟೆಯ ತನಕ ನಾವು ಗಮನ ಕೊಡಬೇಕು. ಇಬ್ಬರಾದರೆ ಕಾರ್ ಅಥವಾ ಚಿಕ್ಕದೊಂದು ವ್ಯಾನ್. ನಾಲ್ಕು-ಆರು ಪ್ರವಾಸಿಗರಿಗೆ ಹೊಂದುವ ಬೇರೆಬೇರೆ ಗಾತ್ರಗಳ ವ್ಯಾನ್‌ಗಳು ಸಿಗುತ್ತವೆ. ವ್ಯಾನ್ ಒಳಗಡೆ ಮಲಗಲು, ಕೂರಲು ಜಾಗ ಮತ್ತು ಮ್ಯಾಟ್ರೆಸ್-ದಿಂಬು, ಪುಟ್ಟದೊಂದು ಗ್ಯಾಸ್ ಸ್ಟೋವ್, ಸಿಂಕ್, ಫ್ರಿಡ್ಜ್ ಇರುತ್ತದೆ, ಸೀಟಿನ ಕೆಳಗಡೆ ಅವಿತಿರುವ ಪುಟ್ಟದೊಂದು ಟಾಯ್ಲೆಟ್ ಕಮೋಡ್ ಕೂಡ ಇರುತ್ತದೆ. ನಾವು ನಮ್ಮದೆ ಆದ ಸ್ಲೀಪಿಂಗ್ ಬ್ಯಾಗ್‌ಗಳನ್ನ ಬಳಸಿದೆವು. ನಾಲ್ಕು ಜನರಿಗೆ ಮಲಗಲು ಜಾಗ ಇಕ್ಕಾಟ್ಟಾಗಿರುತ್ತದೆ ಎಂದೆಣಿಸಿ ಚಿಕ್ಕದೊಂದು ಟೆಂಟ್ ಕೊಂಡೊಯ್ದಿದ್ದು ಒಳ್ಳೆಯದೇ ಆಯ್ತು. ಟಾಯ್ಲೆಟ್ ಕಡೆ ತಿರುಗಿಯೂ ನೋಡಲಿಲ್ಲ. ದಿನದ ಓಡಾಟದಲ್ಲಿ ಪಬ್ಲಿಕ್ ಟಾಯ್ಲೆಟ್ ಬಳಕೆ. ಸಂಜೆಹೊತ್ತಿಗೆ ಕ್ಯಾಂಪ್ ಸೈಟ್ ಸೇರಿಕೊಳ್ಳುತ್ತಿದ್ದೆವು.

ನಮ್ಮ ಸುತ್ತಾಟದ ಅಷ್ಟೂ ದಿನಗಳಲ್ಲಿ ನಮಗೆ ಬೇಕಾದ ಸ್ಥಳಗಳಲ್ಲಿ ಹಾಲಿಡೇ ಪಾರ್ಕ್/ಕ್ಯಾಂಪ್ ಸೈಟ್ ಹುಡುಕುತ್ತಿದ್ದೆವು. ತಂಗಲು ಬಾಡಿಗೆ ಕೊಟ್ಟು, ನಮ್ಮ ವ್ಯಾನ್ ನಿಲ್ಲಿಸಿ ಅಲ್ಲಿನ ಕಿಚನ್, ಟಾಯ್ಲೆಟ್ ಮತ್ತು ಶವರ್ ಸೌಲಭ್ಯಗಳನ್ನು ಬಳಸಿದೆವು. ಎರಡು ಹಾಲಿಡೇ ಪಾರ್ಕ್ ಹೊರತುಪಡಿಸಿ ಮಿಕ್ಕವೆಲ್ಲಾ ಫೈವ್ ಸ್ಟಾರ್ ಗುಣಮಟ್ಟದ್ದು. ಅತ್ಯಂತ ಶುಚಿಯಾಗಿ, ಬಿಸಿನೀರಿಗೆ ಏನೂ ಕೊರತೆ ಇಲ್ಲದೆ, ಅಡುಗೆ ಮನೆಯಲ್ಲಿ ನಾಲ್ಕಾರು ಸ್ಟೋವ್‌ಗಳನ್ನಿಟ್ಟು, ಕೂರಲು ಟೇಬಲ್ ಕುರ್ಚಿ ಒದಗಿಸಿದ್ದರು. ಹಲವಾರು ಎಕರೆ ಪ್ರದೇಶದ ಇಡೀ ಹಾಲಿಡೇ ಪಾರ್ಕ್ ನಿರ್ವಹಣೆ ಬಹಳ ಸಮರ್ಪಕವಾಗಿತ್ತು. ನಾಲ್ಕು ಜನರ ನಮ್ಮ ವ್ಯಾನ್ ತಂಗಲು ಪ್ರತಿರಾತ್ರಿಗೆ ಅರವತ್ತರಿಂದ ತೊಂಭತ್ತು ಡಾಲರ್ ಬಾಡಿಗೆ. ಅದರಲ್ಲಿ ಎಲೆಕ್ಟ್ರಿಸಿಟಿ, ನಮ್ಮ ಜಾಗದಲ್ಲಿ ಪ್ರತ್ಯೇಕವಾಗಿದ್ದ ಕುಡಿಯುವ ನೀರಿನ ನಲ್ಲಿ, ಪಿಕ್ನಿಕ್ ಬೆಂಚ್-ಸೀಟು ಸೇರಿತ್ತು. ವಾಹನ ನಿಲ್ಲಿಸುವ ಜಾಗಕ್ಕೆ ಮರಳು-ಜಲ್ಲಿಕಲ್ಲು ಅಥವಾ ಕಾಂಕ್ರೀಟ್ ಹೊದಿಕೆಯಿತ್ತು. ಮಿಕ್ಕೆಲ್ಲಾ ಪ್ರದೇಶದಲ್ಲಿ ಹಸನಾದ ಹಸಿರುಹುಲ್ಲು. ಮಗನ ಪುಟ್ಟ ಟೆಂಟ್ ಹೊಡೆಯಲು ಹೇಳಿ ಮಾಡಿಸಿದ್ದಂಥ ಜಾಗ. ಮೊದಲೆರಡು ದಿನಗಳು ಸ್ವಲ್ಪ ಕಷ್ಟವೆನಿಸಿದರೂ ನಾವು ಕ್ಯಾಂಪರ್ ವ್ಯಾನ್ ಜೀವನಕ್ಕೆ ಹೊಂದಿಕೊಂಡೆವು. ಬಡಕಲು ಹಳೆಯದಾದರೂ ಈ ರೀತಿಯ ಸುತ್ತಾಟದಲ್ಲಿ ವ್ಯಾನ್ ಚೆನ್ನಾಗಿ ಪಳಗಿತ್ತು. ಪರ್ವತ ಏರುವಾಗ ಕುಗ್ಗದೆ, ಇಳಿಜಾರಿನಲ್ಲಿ ಅಂಜದೆ, ಪುಟ್ಟಪುಟ್ಟ ನೀರಿನ ತೊರೆಗಳನ್ನು ನೋಡಿ ನಲಿಯುತ್ತಾ ಅವನ್ನು ಜುಮ್ಮೆನ್ನುತ್ತಾ ದಾಟಿ, ಪ್ರತಿ ಹಾಲಿಡೇ ಪಾರ್ಕ್‌ನಲ್ಲೂ ತನ್ನ Jucy ಬಂಧುಗಳನ್ನು ನೋಡಿ ಹೆಮ್ಮೆಯಿಂದ ಬೀಗುತ್ತಾ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಎಂದು ನಮ್ಮತ್ತ ಕಣ್ಣು ಮಿಟುಕಿಸಿತ್ತು.