ಗುಲ್ಜಾರ್ ನಿರ್ಜೀವ ವಸ್ತುಗಳನ್ನು ಹೇಗೆ ರೂಪಕಗಳಿಂದ ನಿರೂಪಿಸುತ್ತಾರೆ ಎಂಬುದನ್ನು ಇಲ್ಲಿ ಕಾಣಬಹುದು. ರಸ್ತೆಗಳು ನಡೆಯುತ್ತಲೇ ಇರುತ್ತವೆ… ಆದರೆ ವಾಸ್ತವವಾಗಿ ಎಲ್ಲಿಯೂ ಹೋಗುವುದಿಲ್ಲ… “ಖಾಲಿ ಪಾತ್ರೆಗಳಂತೆ ದಿನಗಳು ಉರುಳುತ್ತವೆ, ರಾತ್ರಿಗಳು ತಳವಿಲ್ಲದ ಬಾವಿಗಳು. ಕಣ್ಣುಗಳು ಕಣ್ಣೀರಿನ ಬದಲು ಹೊಗೆಯನ್ನು ಸೂಸುತಿವೆ. ಜೀವಿಸಲು ಕಾರಣಗಳಿಲ್ಲ, ಹೀಗಾಗಿ ಸಾಯಲು ಕಾರಣಗಳನ್ನು ಹುಡುಕುತ್ತಿರುವೆ. ಜೀವನಕ್ಕಿಂತ ಉದ್ದವಿರುವ ಈ ರಸ್ತೆಗಳು ಗುರಿ ಇಲ್ಲದೆ ಗುರಿಯನ್ನು ತಲುಪದೇ ಚಲಿಸುತ್ತಿವೆ.. ಈ ಅಪರಿಚಿತ ನಗರದಲ್ಲಿ ಪರಿಚಿತ ಮುಖಗಳನ್ನು ಹುಡುಕುತ್ತಿದ್ದೇನೆ… ದಿಲ್ ಖಾಲಿ ಬರ್ತನ್ ಹೈ, ರಾತ್ ಜೈಸೆ ಅಂದಾ ಕುವಾನ್…
ಗುಲ್ಜಾರ್‌ ಅವರ ಬರಹಗಳ ಕುರಿತು ಗೊರೂರು ಶಿವೇಶ್‌ ಬರಹ

ಹೀಗಿರುತ್ತಿರಲಾಗಿ ಅಂತೂ ಇಂತೂ ನಾನು ಹೊಳೆನರಸೀಪುರಕ್ಕೆ ಡಿಗ್ರಿ ಸೇರಿದೇನು. ಊರಿನಿಂದ ಸಮರ್ಪಕ ಬಸ್ಸುಗಳಿಲ್ಲದ ಕಾರಣ ಓಡಾಡಿಕೊಂಡು ಸೈನ್ಸ್ ಅನ್ನು ಪಾಸ್ ಮಾಡಲಾಗದು ಎಂಬ ನಂಬಿಕೆಯು ಇದ್ದ ಕಾರಣ ನಮ್ಮ ತಂದೆಯೊಡನೆ ಓಡಾಡಿ ಒಂದು ರೂಮನ್ನು ಹುಡುಕಿದ್ದಾಯಿತು. ಸರ್ಕಾರಿ ಆಸ್ಪತ್ರೆ ಹಿಂಭಾಗ ಕಾಲುವೆ ಪಕ್ಕದಲ್ಲಿ ಒಬ್ಬರು ಆಗಲೇ ತಲೆ ಓಡಿಸಿ ಶೌಚಾಲಯ ವ್ಯವಸ್ಥೆ ಇಲ್ಲದ ಬರೀ ರೂಮನ್ನು ನಿರ್ಮಿಸಿದ್ದರು.. ಸ್ವಯಂ ಅಡಿಗೆ ಮಾಡಿಕೊಂಡು ಊಟ ತಿಂಡಿ ಮಾಡಿಕೊಳ್ಳುವ ಕಾರಣಕ್ಕೆ ಪೂಜ್ಯ ತಂದೆಯವರು ಹಾಸನಕ್ಕೆ ಹೋಗಿ ಮಸಾಲೆ ಅರೆಯಲೆಂದು ಒಂದು ಕುಂದವನ್ನು ತಂದಿದ್ದಲ್ಲವೇ ಪಾತ್ರೆಗಳ ಸಮೇತ ನನ್ನನ್ನು ತಾವೇ ಸ್ವಯಂ ನರಸಿ ಪುರಕ್ಕೆ ಬಂದು ಕೊಠಡಿಯಲ್ಲಿ ಪ್ರತಿಷ್ಠಾಪಿಸಿ ಮರಳಿದರು.

ಕಾಲೇಜಿಗೆ ಹೋಗಲು ತಯಾರಿಯೇನೊ ಆದೆ. ಆದರೆ ಕಾಲೇಜಿಗೆ ನಾನು ಹೋಗುವ ಮುನ್ನವೇ ಸ್ಥಳೀಯ ಜೂನಿಯರ್ ಕಾಲೇಜ್‌ನಲ್ಲಿ ನಡೆದ ವಿದ್ಯಾರ್ಥಿಗಳ ಘರ್ಷಣೆ ಹಾಗೂ ಮುಷ್ಕರದ ಪರಿಣಾಮವಾಗಿ ತಿಂಗಳಿಡಿ ಕಾಲೇಜು ಸ್ಥಗಿತವಾಯಿತು. ಯಾರೂ ಪರಿಚಯವಿಲ್ಲದ ಊರಿನಲ್ಲಿ ದಿನ ಕಳೆಯುವುದೇ ಕಷ್ಟವಾಯಿತು. ಏಕೈಕ ಮನೋರಂಜನೆಯ ಮಾಧ್ಯಮವಾಗಿದ್ದು ಸಿನಿಮಾಗಳು. ಇದ್ದ ಎರಡು ಥಿಯೇಟರ್‌ಗಳಲ್ಲಿ ಬಂದ ಸಿನಿಮಾಗಳೆಲ್ಲವು 15 -20 ದಿನಗಳ ಕಾಲ ನಡೆಯುತ್ತಿದ್ದವು. ಹೀಗಾಗಿ ಕಾಲವೆಂಬುದು ಕಾಲಡಿಯ ಕಸವಾಗಿ ಬಿದ್ದು ಸಮಯ ನೂಕುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಬೇಸರ ಕಳೆಯಲೆಂದು ಹೋಗಿ ನೋಡಿದ ಸಿನಿಮಾ “ಕೋಶಿಶ್”.

ಸಾಹಸ ಪ್ರಧಾನ ಹಿಂದಿ ಚಿತ್ರಗಳನ್ನು ಶೋಲೆ, ಜಂಜೀರ್, ಧರ್ಮಾತ್ಮ ಮುಂತಾದ ಚಿತ್ರಗಳನ್ನು ನೋಡಿದೆನಾದರು ಸಾಂಸಾರಿಕ ಚಿತ್ರಗಳನ್ನು ನೋಡಿದ್ದು ಇಲ್ಲ. ಕಾರಣ ಭಾಷೆ ಬಾರದು. ವಿಧಿ ಇಲ್ಲದೆ ನೋಡಿದ ಚಿತ್ರವೊಂದು, ಚಿತ್ರ ನೋಡಿ 40 ವರ್ಷ ಕಳೆದರೂ ಆ ಚಿತ್ರ ನೆನಪಿನ ಹಳಿಯಲ್ಲಿ ಪಯಣಿಸುತ್ತಲೆ ಇದೆ. ಕನ್ನಡದ “ನಾಂದಿ” ಚಿತ್ರ ವನ್ನು ನೆನಪಿಸುವ ಚಿತ್ರ ಆರ್ವೊ ಕಲರ್‌ನಲ್ಲಿದೆ. ಕಪ್ಪು ಬಿಳುಪು, ಕಲರ್, ಈಸ್ಟ್‌ಮನ್ ಕಲರ್‌ನಂತೆ ಮತ್ತೊಂದು ಬಗೆ ಆರ್ವೊ ಕಲರ್. ಪ್ರತಿ ದೃಶ್ಯಗಳು ಫ್ರೇಮಿನಲ್ಲಿಟ್ಟ ಚಿತ್ರದಂತೆ ಕಾಣುತ್ತಿದ್ದದ್ದು ವಿಶೇಷ.

ಕಿವುಡ ಮೂಕ ಪ್ರೇಮಿಗಳು, ಜೀವನದಲ್ಲಿ ಅವರಿಗೆ ಎದುರಾಗುವ ಸಮಸ್ಯೆಗಳು, ಅವರ ಇಷ್ಟಾನಿಷ್ಟಗಳು ಕುರಿತ ಚಿತ್ರ ಗೋಳಿನ ಚಿತ್ರವಾಗದಂತೆ ಅದನ್ನು ನಿರೂಪಿಸಿರುವ ರೀತಿ ಮನೋಜ್ಞವಾಗಿದೆ. ಅದರಲ್ಲಿನ ಎರಡು ದೃಶ್ಯಗಳು ಕಣ್ಣಿಗೆ ಕಟ್ಟಿದಂತಿದೆ. ಕಿವುಡಮುಖ ದಂಪತಿಗಳಿಗೆ ಮಗುವಾಗಿದ್ದಾಗ, ಆ ಮಗುವಿನ ಬೆಳವಣಿಗೆಯನ್ನು ಆತಂಕದಿಂದ ಗಮನಿಸುತ್ತಿರುವ ಅವರಿಗೆ, ಮಗುವಿನ ಬಳಿ ಗಿಲಿಕಿ ಆಡಿಸಿದಾಗ ಮಗು ಆ ಕಡೆ ಹೊರಳದಿರುವುದನ್ನು ಕಂಡು ಆತಂಕ ದುಃಖದಿಂದ ಡಾಕ್ಟರ್ ಬಳಿ ಓಡುತ್ತಾರೆ. ಪರೀಕ್ಷಿಸಿ ಕೊನೆಗೆ ಅಲ್ಲಿ ಗಿಲಿಕೆ ಒಳಗೆ ಸದ್ದು ಮಾಡಲೆಂದು ಹಾಕಿರುವ ಕಲ್ಲುಗಳು ಇಲ್ಲದಿರುವುದನ್ನು ಡಾಕ್ಟರ್ ತೋರಿಸುತ್ತಾರೆ. ಆದರೆ ಮಳೆಗಾಲದ ರಾತ್ರಿ ಮಗು ಎಚ್ಚರವಾಗಿ ಅತ್ತರು ಅವರಿಗೆ ಗೊತ್ತಾಗದೆ ಮಗು ಸಾವಿಗೀಡಾಗುವುದು. ಮುಂದೆ ಮತ್ತೆ ಮಗುವಾದಾಗ ಪಕ್ಕದ ಕೊಠಡಿಯಲ್ಲಿ ವಾಸಿಸುತ್ತಿದ್ದ ಅಂಧ ಮುದುಕ ಮಗು ಅಳುವ ಸದ್ದಾದಾಗ ನಾಯಕನ ಕಾಲಿಗೆ ಕಟ್ಟಿದ ಹಗ್ಗವನ್ನು ಎಳೆದು ಆತನನ್ನು ಎಚ್ಚರಿಸುವುದರ ಮೂಲಕ ನೆರವಾಗುತ್ತಾನೆ. ಸಂಜೀವ್ ಕುಮಾರ್‌ದು ಮನೋಜ್ಙ ಅಭಿನಯ( ಈ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ಕೂಡ ಬಂದದ್ದು ನಂತರ ತಿಳಿದ ವಿಷಯ). ಸಿನಿಮಾ ನೋಡಿ ಹೊರಬರುವಾಗ ಚಿತ್ರದ ನಿರ್ದೇಶಕ ಯಾರೆಂದು ಗಮನಿಸಿದೆ. ಅದು ಅದುವರೆಗೂ ನನಗೆ ಗೊತ್ತಿಲ್ಲದ ಗುಲ್ಜಾರ್.

ಆಗ ಪವರ್ ಕಟ್ ಸಮಯ. ಯಾವಾಗ ಹೋಗಿ ಯಾವಾಗ ಬರುತ್ತದೆ ಎಂದು ಹೇಳಲಾಗುತ್ತಿರಲಿಲ್ಲ. ಬೆಳಗಿನ ಸಮಯವಲ್ಲದೆ ಸಂಜೆಯಾದೊಡನೆ ಹೋದ ಕರೆಂಟು ಒಂದೆರಡು ಗಂಟೆಯಾದ ಮೇಲೆ ಬರುತ್ತಿತ್ತು.

ಅಂಥದ್ದೇ ರಾತ್ರಿ. ಏಕಾಂಗಿಯಾಗಿ ಕತ್ತಲ ಕೋಣೆಯಲ್ಲಿ ಕುಳಿತಿದ್ದೆ. ಆಗ ಮೂರನೇ ಕೊಠಡಿಯಲ್ಲಿದ್ದಾತ ಹಾಕಿದ ರೇಡಿಯೋ ಇಂದ ಹಿಂದಿ ಹಾಡುಗಳು ಬರುತ್ತಿದ್ದವು. (ಬಹುಶಃ ಬುಧವಾರ ಶುಕ್ರವಾರ ಬರುತ್ತಿದ್ದ ಬಿನಾಕ ಗೀತ್ ಮಾಲಾ). ನೋವು ಚಿಗುಪ್ಸೆ ಬೇಸರವೇ ಮನೆ ಮಾಡಿದ ದನಿಯಲ್ಲಿದ್ದ ಗೀತೆಯೊಂದು ಕಿವಿ ಸೇರಿತು. “ಏಕ್ ಅಖೆಲಾ ಇಸು ಶಹರ್ ಮೇ.” ಹಿಂದಿ ಹೆಚ್ಚು ಬರದಿದ್ದ ನನಗೆ ಏಕ್ ಅಖೆಲ, ಶಹರ್ ಪದಗಳ ಒಬ್ಬನೇ ಏಕಾಂಗಿ, ನಗರವಷ್ಟೆ ಅರ್ಥವಾಗಿ.. ಈ ನಗರದಲ್ಲಿ ನಾನೊಬ್ಬ ಏಕಾಂಗಿ.. ಆ ಹಾಡಿನ ದಾಟಿ ಏಕಾಂಗಿತನದ ಹಾಡಿರಬಹುದು ಅಂದುಕೊಂಡೆ. ಅದೇಕೋ ಆ ಸನ್ನಿವೇಶದಲ್ಲಿ ಆ ಹಾಡು ತುಂಬಾನೇ ಮನಸಿಗೆ ತಟ್ಟಿತು.

ಮುಂದೆ ಗೀತೆಯನ್ನು ಕುರಿತು ಹುಡುಕಿದಾಗ ಗೊತ್ತಾದದ್ದು ಆ ಗೀತೆಯನ್ನು ರಚಿಸಿದವರು ಕೂಡಾ ಗುಲ್ಜಾರ್. ಗೀತೆ ಘರೊಂಡ(ಗೂಡು )ಚಿತ್ರದ್ದು. ದೋ ದಿವನೆ ಶಹರುಮೆ ಎಂಬ ಇನ್ನೊಂದು ಸುಮಧುರ ಗೀತೆ ಆ ಚಿತ್ರದಲ್ಲಿ ಇದ್ದು ಆ ಗೀತೆಯ ರಚನೆಗೆ ಗುಲ್ಜಾರರಿಗೆ ಮೊಟ್ಟಮೊದಲ ಫಿಲಂ ಪೇರ್ ಪ್ರಶಸ್ತಿ ದೊರಕಿತ್ತು. ಭೂಪಿಂದರ್ ಹಾಡಿದ ಮತ್ತು ಅಮೋಲ್ ಪಾಲೇಕರ್ ಅವರ ಮೇಲೆ ಚಿತ್ರಿಸಲಾದ “ಏಕ್ ಅಕೆಲಾ ಈಸ್ ಶೆಹರ್ ಮೇ” ಹಾಡು, ಬಾಂಬೆಯಲ್ಲಿ ತಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಭಾವಿಸುವ ವ್ಯಕ್ತಿಗೆ ಒಂಟಿತನ ಮತ್ತು ನಿರ್ಜನತೆಯನ್ನು ಸೂಚಿಸುವ ಹಾಡು. ಚಿತ್ರದಲ್ಲಿ ಮೊದಲು, ಅಮೋಲ್ ಮತ್ತು ಜರೀನಾ ಅವರು ಮದುವೆಯಾಗಿ ಒಟ್ಟಿಗೆ ಸಂತೋಷದಿಂದ ಬದುಕುವ ಕನಸುಗಳನ್ನು ಹೊಂದಿರುವಾಗ ಸಂತೋಷದ ಹಾಡಾಗಿ “ದೋ ದೀವಾನೆ ಶೆಹರ್ ಮೇ”. ಮೂಡಿದರೆ ಈಗ, ಅವರ ಕನಸುಗಳು ಛಿದ್ರಗೊಂಡು ಮತ್ತು ಅಮೋಲ್ ಏಕಾಂಗಿಯಾಗಿರುವಾಗ, ಆಶಾ ಭಂಗವಾದ ಅವನ ಜೀವನವು ಏನಾಯಿತು ಎಂಬುದನ್ನು ಈ ಗೀತೆ ಪ್ರತಿಬಿಂಬಿಸುತ್ತದೆ.

ಗುಲ್ಜಾರ್ ನಿರ್ಜೀವ ವಸ್ತುಗಳನ್ನು ಹೇಗೆ ರೂಪಕಗಳಿಂದ ನಿರೂಪಿಸುತ್ತಾರೆ ಎಂಬುದನ್ನು ಇಲ್ಲಿ ಕಾಣಬಹುದು. ರಸ್ತೆಗಳು ನಡೆಯುತ್ತಲೇ ಇರುತ್ತವೆ… ಆದರೆ ವಾಸ್ತವವಾಗಿ ಎಲ್ಲಿಯೂ ಹೋಗುವುದಿಲ್ಲ… “ಖಾಲಿ ಪಾತ್ರೆಗಳಂತೆ ದಿನಗಳು ಉರುಳುತ್ತವೆ, ರಾತ್ರಿಗಳು ತಳವಿಲ್ಲದ ಬಾವಿಗಳು. ಕಣ್ಣುಗಳು ಕಣ್ಣೀರಿನ ಬದಲು ಹೊಗೆಯನ್ನು ಸೂಸುತಿವೆ. ಜೀವಿಸಲು ಕಾರಣಗಳಿಲ್ಲ, ಹೀಗಾಗಿ ಸಾಯಲು ಕಾರಣಗಳನ್ನು ಹುಡುಕುತ್ತಿರುವೆ. ಜೀವನಕ್ಕಿಂತ ಉದ್ದವಿರುವ ಈ ರಸ್ತೆಗಳು ಗುರಿ ಇಲ್ಲದೆ ಗುರಿಯನ್ನು ತಲುಪದೇ ಚಲಿಸುತ್ತಿವೆ.. ಈ ಅಪರಿಚಿತ ನಗರದಲ್ಲಿ ಪರಿಚಿತ ಮುಖಗಳನ್ನು ಹುಡುಕುತ್ತಿದ್ದೇನೆ… ದಿಲ್ ಖಾಲಿ ಬರ್ತನ್ ಹೈ, ರಾತ್ ಜೈಸೆ ಅಂದಾ ಕುವಾನ್…

ಸಂದರ್ಭಕ್ಕಾಗಿ ರಚಿಸಿದ ಚಿತ್ರಗೀತೆಯಾದರೂ ಮನೋಜ್ಞ ಕಾವ್ಯವಾಗಿ ಹೊರಹೊಮ್ಮಿದೆ.

ಆಗ ಟೈಮ್ಸ್ ಆಫ್ ಇಂಡಿಯಾ, ಡೆಕನ್ ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಗಳಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಕುಶ್ವಂತ್ ಸಿಂಗ್‌ರವರ ಸ್ವೀಟ್ ಅಂಡ್ ಸೋರ್ (ಸಿಹಿ- ಕಹಿ) ಅಂಕಣ ಬರುತ್ತಿತ್ತು. ಸಣ್ಣ ಸಣ್ಣ ಐದಾರು ಕಾಲಂಗಳಲ್ಲಿ ಅಂದಿನ ಸನ್ನಿವೇಶಗಳನ್ನು ಅಲ್ಲಿ ವ್ಯಾಖ್ಯಾನಿಸಲಾಗುತ್ತಿತ್ತು. ನಾನು ಅಂಕಣವನ್ನು ಓದುತ್ತಿದ್ದ ಉದ್ದೇಶ ಅಂಕಣದ ಕೊನೆಯಲ್ಲಿ ವಿಶೇಷ ಘಟನೆಗಳು, ಜೋಕುಗಳು ಇಲ್ಲವೇ ನಗೆಯ ಸಂದರ್ಭಗಳಿಗಾಗಿ… ವಿಭಜನೆಯ ಸಂದರ್ಭದ ಒಂದೆರಡು ಘಟನೆಗಳನ್ನು ದಾಖಲಿಸಿದ್ದನ್ನು ಅಲ್ಲಿ ಓದಿದ್ದೆ.

ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಘಟನೆಗಳನಾದರಿಸಿದ ಟ್ರೈನ್ ಟು ಪಾಕಿಸ್ತಾನ್ ಕುಶ್ವಂತ್ ಸಿಂಗ್ ಬರೆದಿದ್ದರೆ, ಅದೇ ರೀತಿ ವಿಭಜನೆಯ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದಿದ್ದ ಗುಲ್ಜಾರ್‌ರವರು ವಿಭಜನೆಯ ಸಂದರ್ಭದ ಘಟನೆಗಳನ್ನು ಕಥೆಯಾಗಿಸಿದ್ದಾರೆ.

ವಿಭಜನೆಯ ಸಂದರ್ಭ. ಕೋಮು ದಳ್ಳುರಿಯಿಂದ ಊರುಗಳು ಹತ್ತಿ ಉರಿಯುತ್ತಿವೆ. ಹಗಲಿನಲ್ಲಿ ಅಮಾನುಷವಾಗಿ ನಡೆಯುತ್ತಿರುವ ದಾಳಿಯಿಂದಾಗಿ ಟ್ರೈನುಗಳು ರಾತ್ರಿ ಸಂಚರಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಹಿಳೆ ಒಬ್ಬಳು ತನ್ನ ಇಬ್ಬರು ಸಣ್ಣ ಮಕ್ಕಳೊಂದಿಗೆ ಪಯಣಿಸುತ್ತಿದ್ದಾಳೆ. ಅದರಲ್ಲೊಂದು ಮಗು, ದಾರಿಯಲ್ಲಿ ಅಸುನೀಗಿದೆ. ಕೆಳಗಿಳಿದು ಮಣ್ಣು ಮಾಡಲು ಸಮಯವಿಲ್ಲ, ಸನ್ನಿವೇಶವು ಸರಿ ಇಲ್ಲ. ಆಗ ರೈಲಿನಲ್ಲಿ ಇದ್ದವರು ಮುಂದೆ ರಾವಿ ನದಿ ಬಂದಾಗ ಅಸು ನೀಗಿದ ಮಗುವನ್ನು ನದಿಗೆ ಎಸೆಯಲು ತಿಳಿಸುತ್ತಾರೆ. ದಡ ದಡ ಸದ್ದು ನದಿಯ ಮೇಲೆ ಸಂಚರಿಸುತ್ತಿದೆ ಎಂಬ ಅರಿವು ಮೂಡಿಸುತ್ತಿದೆ. ಮನಸ್ಸನ್ನು ಬಿಗಿಹಿಡಿದು ಮಗುವನ್ನು ನದಿಗೆ ಎಸೆಯುತ್ತಾಳೆ. ಬೀಳುವ ಜೊತೆ ಜೊತೆಯಲಿ ಜೋರಾಗಿ ಮಗು ಅಳುವ ಸದ್ದು ಕೇಳಿಸುತ್ತದೆ. ಎಸೆಯುವ ಗಡಿಬಿಡಿ ಯಲ್ಲಿ ಆಕೆ ಸತ್ತ ಶಿಶುವನ್ನು ಬಿಟ್ಟು ಬದುಕಿರುವ ಮಗುವನ್ನು ಎಸೆದಿರುತ್ತಾಳೆ.

ಖೌಫ್ (ಭಯ) ಗುಲ್ಜಾರ್ ಬರೆದ ಕಥೆ. ಯಾಸಿನ್ ಐದಾರು ದಿನಗಳಿಂದ ಮನೆಗೆ ಹೋಗಿಲ್ಲ, ಕೋಮು ಗಲಭೆಗಳಿಂದಾಗಿ ಕರ್ಪ್ಯೂ ವಿಧಿಸಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ಜನರಲ್ಲಿ ಆಶ್ವಾಸನೆ ಮೂಡಿಸಲು ಕರ್ಫ್ಯೂವನ್ನು ಕೆಲವೆಡೆ, ನಿರ್ದಿಷ್ಟ ಸಮಯದಲ್ಲಿ ಸಡಿಲಗೊಳಿಸಲಾಗುವುದರ ಜೊತೆಗೆ ಆ ಸಮಯದಲ್ಲಿ ರೈಲುಗಳು ಕೂಡ ಓಡಾಡುತ್ತಿವೆ. ಆದರೆ ರೈಲುಗಳು ಖಾಲಿ ಸಂಚರಿಸುತ್ತಿವೆ. ಜನರಿರುವುದಿಲ್ಲವೆಂದು ಭಾವಿಸಿ ಮನೆಗೆ ಮರಳಲು ಸ್ಟೇಷನ್‌ಗೆ ಬಂದ ಯಾಸಿನ್ ಜನ ಓಡಾಡುತ್ತಿರುವುದನ್ನು ಕಂಡು ಗಾಬರಿಯಾಗುತ್ತಾನೆ. ಕೊನೆಗಳಿಗೆ ರೈಲಿನಲ್ಲಿ ಕೊನೆಯ ಬೋಗಿಗೆ ಹತ್ತುತ್ತಾನೆ. ಆದರೆ ಅದೇ ಬೋಗಿಗೆ ಮತ್ತೊಬ್ಬ ಬಂದಾಗ ಅವನ ಭಯ ಹೆಚ್ಚಾಗುತ್ತದೆ. ಯಾಸಿನ್ ಈ ವ್ಯಕ್ತಿಯನ್ನು ಹಿಂದೂ ಎಂದು ಅನುಮಾನಿಸಲು ಪ್ರಾರಂಭಿಸುತ್ತಾನೆ. ಅವನಿಂದ ಅಡಗಿ ಕುಳಿತುಕೊಳ್ಳುತ್ತಾನೆ. ಬಂದವನಾದರೂ ಆಗಾಗೇ ಜೋಬಿಗೆ ಕೈ ಹಾಕುತ್ತಿದ್ದಾನೆ. ಅವನ ಬಳಿ ಚಾಕು ಇರಬಹುದು ಎಂದು ಯಾಸಿನ್‌ಗೆ ಭಯ ಹೆಚ್ಚುತ್ತದೆ. ಅಡಗಿ ಕುಳಿತ ತನ್ನನ್ನೇ ಗಮನಿಸುತ್ತಿದ್ದಾನೆಂದು ಅವನಿಗೆ ಅನಿಸಲಾರಂಭಿಸುತ್ತದೆ. ಮುಸಲ್ಮಾನನೆಂದು ಗುರುತಿಸಿ ಟಾರ್ಗೆಟ್ ಆಗುವ ಭಯ ಹೆಚ್ಚುತ್ತಾ ಹೋಗುತ್ತದೆ. ಬಂದವ ಬೋಗಿಯ ಒಂದೊಂದೇ ಬಾಗಿಲನ್ನು ಮುಚ್ಚುತ್ತಾ ಬರುತ್ತಾನೆ. ಒಂದೊಂದೇ ಬಾಗಿಲು ಮುಚ್ಚಿದಂತೆ ಇವನ ಭಯ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಮೂರನೇ ಹಾಗೂ ಕೊನೆಯ ಬಾಗಿಲನ್ನು ಮುಚ್ಚಲು ಹೋದಾಗ, ಹುಚ್ಚು ಆವೇಶದಿಂದ ಅವನ ಎದುರಿಗೆ ನಿಲ್ಲುತ್ತಾನೆ. ಆತ ಇವನನ್ನು ನೋಡಿ ಅವನ ಜೋಬಿಗೆ ಕೈ ಹಾಕುವಷ್ಟರಲ್ಲಿ ತನ್ನೆಲ್ಲ ಧೈರ್ಯ ಶಕ್ತಿಯನ್ನು ಒಗ್ಗೂಡಿಸಿ ಅವನ ಎರಡು ಕಾಲುಗಳನ್ನು ಹಿಡಿದು ಎಳೆದು ಸಮುದ್ರಕ್ಕೆ ನೂಕುತ್ತಾನೆ. ಆ ವ್ಯಕ್ತಿ ಬೀಳುವಾಗ “ಅಲ್ಲಾ” ಎಂದು ಕೂಗುವಾಗ ಯಾಸಿನ್ ದಿಗ್ಮೂಢನಾಗುತ್ತಾನೆ.

ಅವರ ಜನಪ್ರಿಯ ಕವಿತೆಯೊಂದರ ಆಯ್ದ ಸಾಲುಗಳು…

ಕಣ್ಣುಗಳಿಗೆ ವೀಸಾ ಅಗತ್ಯವಿಲ್ಲ,
ಕನಸುಗಳಿಗೆ ಗಡಿಗಳಿಲ್ಲ,
ನನ್ನ ಕಣ್ಣು ಮುಚ್ಚಿ, ಪ್ರತಿದಿನ
ನಾನು ಗಡಿಯುದ್ದಕ್ಕೂ ಹೋಗುತ್ತೇನೆ.
ಮೆಹದಿ ಹಸನ್ ಅವರನ್ನು ಭೇಟಿಯಾಗಲು
(ಗಜಲ್ ಚಕ್ರವರ್ತಿ ಎಂದು ಹೆಸರಾದ ಮೆಹದಿ ಹಸನ್ ವಿಭಜನೆಯ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಹೋದವರು).

ಉರ್ದು ಸಾಹಿತ್ಯದಲ್ಲಿ ಹೆಸರು ಮಾಡಿದ ಗುಲ್ಜಾರ್ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿದ್ದಾರೆ (ಸಂಪೂರ್ಣ್ ಸಿಂಗ್ ಕಲ್ರಾ ಅವರ ಮೂಲ ಹೆಸರು) ಹಿಂದಿಯಲ್ಲಿ ಅಷ್ಟೇ ಸಮರ್ಥವಾಗಿ ಬರೆದಿದ್ದಾರೆ. ಚಿತ್ರ ನಿರ್ದೇಶನ, ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಹೀಗೆ ಚಲನಚಿತ್ರದ ಬಹುತೇಕ ವಿಭಾಗಗಳಲ್ಲಿ ಕೆಲಸ ಮಾಡಿದ ಗುಲ್ಜಾರರಿಗೆ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಒಮ್ಮೆ ಗ್ರಾಮಿ ಪ್ರಶಸ್ತಿಯು ದೊರೆತಿದೆ. ಅವರಿಗೆ 90ನೇ ವಯಸ್ಸಿನಲ್ಲಿ( ಜನನ 18 ಆಗಸ್ಟ್ 1934) ಈ ವರ್ಷದ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಅದಕ್ಕಿಂತ ಮುಂಚೆ ಭಾರತ ಸರ್ಕಾರದ ಪದ್ಮಭೂಷಣ, ಚಲನಚಿತ್ರ ರಂಗದಲ್ಲಿ ಮಾಡಿದ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ… ಹೀಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ.