ನನಗೆ ಹಲವಾರು ಬಾರಿ ನಮ್ಮನೆ ಕಂಡೀಶನ್‌ಗೆ ಚೆನ್ನಾಗಿ ಓದಬೇಕು ಆದರೆ ಈ ರೀತಿ ಯಾಕೆ ಮಾಡ್ತಾ ಇದೀನಿ ಅನಿಸೋದು. ಆದರೆ ನಾನು, ಲಿಂಗರಾಜ, ಸುಧಾಕರ ಅಕ್ಟೋಬರ್ ವೇಳೆಗಾಗಲೇ ಈ ವರ್ಷ ರಿಜೆಕ್ಟ್ ಮಾಡಬೇಕು ಅಂತಾ ತೀರ್ಮಾನ ಮಾಡಿದ್ವಿ. ನಾನೂ ಈ ತೀರ್ಮಾನಕ್ಕೆ ಬರೋದಿಕ್ಕೂ ಒಂದು ಕಾರಣ ಇತ್ತು. ನಾನು ಮೊದಲ ಪಿಯೂಸಿಯಿಂದ ದ್ವಿತೀಯ ಪಿಯೂಸಿಗೆ ಕಾಲೇಜ್ ಬದಲಾಯಿಸಬೇಕು ಅಂತಾ ಹೋದಾಗ 2 ರಿಂದ 3 ತಿಂಗಳು ಬೋರ್ಡ್‌ಗೆ ಓಡಾಟದ ಮೂಲಕ ಸಮಯ ವ್ಯರ್ಥವಾಗಿ ಹೋಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

‘ವಿದ್ಯಾರ್ಥಿ ಜೀವನ ಬಂಗಾರದ ಜೀವನ’ ಅನ್ತಾರೆ. ಇದನ್ನು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ?! ಯಾಕೆಂದರೆ ವಿದ್ಯಾರ್ಥಿ ಜೀವನದಲ್ಲಿ ನಾವು ಕಷ್ಟಪಟ್ಟು ಓದಬೇಕು. ಈ ಸಮಯದಲ್ಲಿ ನಾವು ಸುಖೀಜೀವನವನ್ನು ಹಲವು ಸಲ ತ್ಯಾಗ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಾವು ಅಂದುಕೊಂಡಂತೆ ಸಾಧಿಸೋಕೆ ಆಗೋಲ್ಲ. ಇದಕ್ಕೆಂದೇ ಸಂಸ್ಕೃತದಲ್ಲಿ ‘ಸುಖಾರ್ಥಿ ಚೇತ್ ತ್ಯಜೇತ್ ವಿದ್ಯಾಂ, ವಿದ್ಯಾರ್ಥಿ ಚೇತ್ ತ್ಯಜೇತ್ ಸುಖಂ’ ಎಂದಿರುವುದು. ಇದರ ಅರ್ಥ ‘ಸುಖ ಬೇಕಾದವನು ವಿದ್ಯೆ ತ್ಯಜಿಸಬೇಕು, ವಿದ್ಯೆ ಬೇಕಾದವನು ಸುಖ ತ್ಯಜಿಸಬೇಕು’ ಎಂದು! ನಾವು ನಮ್ಮ ಭಾವೀ ಬದುಕನ್ನು ಬಂಗಾರದಂತೆ ಮಾಡಿಕೊಳ್ಳಲು ನಮಗೆ ಸಿಕ್ಕ ಬಂಗಾರದಂತಹ ಅವಕಾಶ ಈ ವಿದ್ಯಾರ್ಥಿ ಜೀವನ ಎಂದೇ ಭಾವಿಸಿ ಇದಕ್ಕೆ ‘ಬಂಗಾರದ ಜೀವನ’ ಎಂದು ಹೇಳಿರಬೇಕು ಅನಿಸುತ್ತೆ. ಆದರೆ ಬಹುತೇಕರು ಇದನ್ನು ತಪ್ಪು ಭಾವಿಸಿ ವಿದ್ಯಾರ್ಥಿ ಜೀವನದಲ್ಲಿ ಎಂಜಾಯ್ ಮಾಡಲು ಹೋಗುತ್ತಾರೆ. ಇದರ ಪ್ರತಿಫಲ ಮುಂದೆ ಅವರು ಅನುಭವಿಸಬೇಕಾಗಬಹುದು. ನಾನೂ ಸಹ ಓದುವಾಗ ಕೆಲವೊಮ್ಮೆ ಸೀರಿಯಸ್ ಆಗಿ ಓದಲು ಕುಳಿತರೆ ನಮ್ ಹಾಸ್ಟೆಲ್ ಫ್ರೆಂಡ್ಸ್ ಬಂದು ‘ಮಗಾ ಲೈಫ್ ಜೀವನದ ಮೇಲಿನ ಗುಳ್ಳೆ ಇದ್ದಂಗೆ.. ಎಂಜಾಯ್ ಮಾಡಬೇಕು… ಈಗ ಎಂಜಾಯ್ ಮಾಡದೇ ಮತ್ತಿನ್ಯಾವಾಗ ಎಂಜಾಯ್ ಮಾಡ್ತೀಯ’ ಎಂದು ಹೇಳಿ ನನ್ನನ್ನು ಡೈವರ್ಟ್ ಮಾಡುತ್ತಿದ್ದರು. ನಂಗೂ ‘ಹೌದಲ್ವಾ’ ಎಂದು ಅವರು ಹೇಳೋದು ಸರಿಯೆನಿಸಿ ಅವರ ಜೊತೆಗೆ ಹೋಗಿಬಿಡುತ್ತಿದ್ದೆ!

ಹೀಗೆ ಹಾಸ್ಟೆಲ್ಲಿನಲ್ಲಿ ನಾವು ಕೆಲವೊಂದು ಟಾಸ್ಕ್ ಕೊಡೋದು, ಆ ಟಾಸ್ಕಿನಲ್ಲಿ ಗೆಲ್ಲೋದು ಅಥವಾ ಸೋತವರು ತಿಂಡಿ ಪಾರ್ಟಿ ಕೊಡಿಸಲು ಹೇಳುವುದನ್ನು ಮಾಡ್ತಿದ್ವಿ. ಒಂದು ಸಲ ನಾನು, ಲಿಂಗರಾಜ ರೂಮಲ್ಲಿರುವ ಸ್ಟೌವಿನಲ್ಲಿ ಕೇಸರೀಬಾತ್ ಮಾಡಿ ಅದನ್ನು ತಿನ್ನೋ ಸ್ಪರ್ಧೆ ಇಟ್ಟಿದ್ವಿ. ಈ ಟಾಸ್ಕ್ ಸ್ವೀಕರಿಸಿದ ಸುಧಾಕರ ತಿನ್ನಲು ಸಾಧ್ಯವಾಗದೇ ಸೋತಿದ್ದ. ನಾವು ಅವನು ತಿನ್ನಲು ಆಗದಂತೆ ರವೆಗೆ ಬೇಕರಿಯ ಬಿಳಿಯ ಸ್ವೀಟ್ ಸೇರಿಸಿ ಜೊತೆಗೆ ಜಾಸ್ತಿ ಸಕ್ಕರೆ ಹಾಕಿ ತಿನ್ನೋಕೆ ಆಗದಂತೆ ಮಾಡಿದ್ವಿ. 100 ಎಣಿಸುವುದರೊಳಗಾಗಿ 3 ಪಾರ್ಲೇಜಿ ಬಿಸ್ಕತ್ತನ್ನು ತಿನ್ನೋ ಸ್ಪರ್ಧೆ, ನೀರು ಕುಡಿಯುವ ಸ್ಪರ್ಧೆ ಮಾಡ್ತಿದ್ವಿ. ನಾವು ವಿಜ್ಞಾನ ವಿಭಾಗ ತೆಗೆದುಕೊಂಡಿರೋ ವಿದ್ಯಾರ್ಥಿಗಳು ಓದೋದು ಜಾಸ್ತಿ ಇರುತ್ತೆ, ಓದಬೇಕು ಅನ್ನೋ ಯೋಚನೆ ಕೂಡ ಮಾಡ್ತಾ ಇರಲಿಲ್ಲ. ನಮ್ಮ ಹಾಸ್ಟೆಲ್ಲಿನಲ್ಲಿ ಸರಿಸುಮಾರು 15 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದವರಿದ್ದರು. ಅದರಲ್ಲಿ ಒಬ್ಬ ಮಾತ್ರ ಯಾವಾಗ್ಲೂ ಓದುತ್ತಾ ಕೂರುತ್ತಿರುತ್ತಿದ್ದ. ಯಾಕೆಂದರೆ ಅವನು ನಮ್ಮ ಜೊತೆ ಸೇರಿರಲಿಲ್ಲ!

ಇನ್ನು ನಮ್ಮ ರೂಮಿನಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕಾಲೇಜಿಗೆ ರಜೆಯಿದ್ದ ದಿನ ಕನ್ನಡಿ ತೆಗೆದುಕೊಂಡು ರೂಮಿನೊಳಗೆ ಕಿಟಕಿಯಿಂದ ಬರುತ್ತಿದ್ದ ಬೆಳಕಿಗೆ ಅದನ್ನು ಹಿಡಿದು ಅದರ ಪ್ರತಿಬಿಂಬವನ್ನು ಹಾಸ್ಟೆಲ್ ಹಿಂಭಾಗದಲ್ಲಿದ್ದ ಒಂದು ಮನೆಯೊಳಗೆ ಬಿಡುವ ತರಲೆ ಕೆಲಸವನ್ನು ಯಾರೋ ಬಹಳ ಹೊತ್ತು ಮಾಡಿದ್ದಾರೆ. ಆ ಮನೆಯವರಿಗೆ ಸಾಕಾಗಿ ಹಾಸ್ಟೆಲ್ಲಿಗೆ ಬಂದು ಕಂಪ್ಲೇಂಟ್ ಮಾಡಿ ವಾರ್ಡನ್ ಎಷ್ಟೇ ಇದರ ಬಗ್ಗೆ ವಿಚಾರಿಸಿದರೂ ಯಾರೂ ಬಾಯಿ ಬಿಡಲಿಲ್ಲ. ಕೊನೆಗೆ ಅವರು ಇನ್ನೊಮ್ಮೆ ಹೀಗಾದರೆ ‘ಈ ಭಾಗದವರನ್ನು ಹಾಸ್ಟೆಲ್ ಬಿಟ್ಟು ಓಡಿಸುತ್ತೇವೆ’ ಎಂಬ ವಾರ್ನಿಂಗ್ ಕೊಟ್ಟರು. ಮುಂದೆ ಈ ತಪ್ಪು ಮರುಕಳಿಸಲಿಲ್ಲ. ಆದರೆ ಓದೋ ವಿಷಯದಲ್ಲಿ ಮಾತ್ರ ಸೀರಿಯಸ್ ಯಾರೂ ಆಗಲಿಲ್ಲ.

ನನಗೆ ಹಲವಾರು ಬಾರಿ ನಮ್ಮನೆ ಕಂಡೀಶನ್‌ಗೆ ಚೆನ್ನಾಗಿ ಓದಬೇಕು ಆದರೆ ಈ ರೀತಿ ಯಾಕೆ ಮಾಡ್ತಾ ಇದೀನಿ ಅನಿಸೋದು. ಆದರೆ ನಾನು, ಲಿಂಗರಾಜ, ಸುಧಾಕರ ಅಕ್ಟೋಬರ್ ವೇಳೆಗಾಗಲೇ ಈ ವರ್ಷ ರಿಜೆಕ್ಟ್ ಮಾಡಬೇಕು ಅಂತಾ ತೀರ್ಮಾನ ಮಾಡಿದ್ವಿ. ನಾನೂ ಈ ತೀರ್ಮಾನಕ್ಕೆ ಬರೋದಿಕ್ಕೂ ಒಂದು ಕಾರಣ ಇತ್ತು. ನಾನು ಮೊದಲ ಪಿಯೂಸಿಯಿಂದ ದ್ವಿತೀಯ ಪಿಯೂಸಿಗೆ ಕಾಲೇಜ್ ಬದಲಾಯಿಸಬೇಕು ಅಂತಾ ಹೋದಾಗ 2 ರಿಂದ 3 ತಿಂಗಳು ಬೋರ್ಡ್‌ಗೆ ಓಡಾಟದ ಮೂಲಕ ಸಮಯ ವ್ಯರ್ಥವಾಗಿ ಹೋಗಿತ್ತು. ಆಗ ಕಾಲೇಜು ಬದಲಾಯಿಸಲು ಪಿಯು ಬೋರ್ಡಿಗೆ ಹೋಗಬೇಕಾಗಿತ್ತು. ಈ ಸಮಯದಲ್ಲಿ ಮಾಡಿದ ಪಾಠಗಳು ನನಗೆ ಅರ್ಥ ಆಗಿರಲಿಲ್ಲ. ನಾನು ಅರ್ಥ ಮಾಡಿಕೊಳ್ಳೋಕೂ ಹೋಗಿರಲಿಲ್ಲ. ಇನ್ನೊಂದು ಮುಖ್ಯ ಕಾರಣವೆಂದರೆ ನನಗೆ ದನದ ಡಾಕ್ಟ್ರು ಆಗಬೇಕು ಎಂಬ ಆಸೆ ಇತ್ತು. ನನಗೆ ಚಿಕ್ಕಂದಿನಿಂದಲೂ ದನಗಳೆಂದರೆ ತುಂಬಾ ಇಷ್ಟವಿತ್ತು. ನಾನು ಚಿಕ್ಕವನಿದ್ದಾಗ ನಮ್ಮನೆಯಲ್ಲಿದ್ದ ಚಿಕ್ಕ ಕರುವಿನ ಮೇಲೆ ಹುಳಗಳು ಇದ್ದರೆ ಅವನ್ನು ತೆಗೆದು ಹಾಕುತ್ತಿದ್ದೆ. ದನ ಕಾಯಲು ಹೋದಾಗ ಅವನ್ನು ಕೆರೆಯಲ್ಲಿ ಬಿಟ್ಟು ಅವುಗಳ ಮೈಯನ್ನು ಉಜ್ಜಿ ಉಜ್ಜಿ ತೊಳೆಯುತ್ತಿದ್ದೆ. ಸಂಜೆ ಆದಂತೆ ಸೊಳ್ಳೆಗಳು ದನಗಳಿಗೆ ಕಚ್ಚಬಾರದೆಂದು ಹೊಗೆ ಹಾಕುತ್ತಿದ್ದೆ. ಹುಲ್ಲಿಗೆ ಬೆಂಕಿ ಹಾಕಿ ಅದರ ಮೇಲೆ ಹಸಿ ಹುಲ್ಲು ಹಾಕಿ ಹೊಗೆ ಬರುವಂತೆ ಮಾಡುತ್ತಿದ್ದೆ. ಮೂಕಪ್ರಾಣಿಗಳ ಅದರಲ್ಲೂ ದನಗಳ ಸೇವೆ ಮಾಡುವುದು ಅಂದ್ರೆ ನನಗೆ ತುಂಬಾ ಒಲವು. ಅಲ್ಲದೇ ಚಿಕ್ಕವನಿದ್ದಾಗ ನಾನು ಓದಿದ್ದ ಬಹುತೇಕ ಕಥೆಗಳಲ್ಲಿ ಮನುಷ್ಯ ದುಷ್ಟ ಪ್ರಾಣಿ ಎಂಬ ಚಿತ್ರವು ನನ್ನ ಮನದಲ್ಲಿ ಮೂಡಿದ್ದರಿಂದ ನನಗೆ ದನದ ಡಾಕ್ಟ್ರು ಆಗಬೇಕು ಉತ್ಕಟ ಇಚ್ಚೆಯು ಪ್ರಬಲವಾಗಿತ್ತು. ಆ ಸಮಯದಲ್ಲಿ ಆ ಕೋರ್ಸಿನ ಸೀಟು ಸಿಗುವುದು ಕಷ್ಟವಾದ್ದರಿಂದ ಜೊತೆಗೆ ಈ ಕೋರ್ಸ್ ಓದಿದರೆ ಸರ್ಕಾರಿ ಕೆಲಸ ಬೇಗ ಸಿಗುತ್ತದೆ ಎಂದು ಹಲವರು ಹೇಳಿದ್ದರಿಂದ ನಾನು ಬಿವಿಎಸ್ಸಿ ಕೋರ್ಸನ್ನು ಓದಲೇಬೇಕು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ!!

ನಾನು ನೋಟ್ಸನ್ನು ಕಲೆಕ್ಟ್ ಮಾಡೋದು, ಮುಂದಿನ ವರ್ಷ ಹೆಚ್ಚು ಅಂಕಗಳನ್ನು ತೆಗೆಯಲು ಯಾವ ರೀತಿಯಾಗಿ ಓದಬೇಕು ಎಂಬ ಯೋಜನೆ ಮಾಡುತ್ತಿದ್ದೆವೇ ಹೊರತು ಪ್ರಸಕ್ತ ವರ್ಷ ಆ ಸಾಧನೆ ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ನನಗೆ ಯಾರೂ ಬಿತ್ತಲಿಲ್ಲ. ನಾನು ದ್ವಿತೀಯ ಪಿಯುಸಿಯ ಪೂರ್ವಸಿದ್ಧತಾ ಪರೀಕ್ಷೆ ಬರೋವರೆಗೂ ಈ ರೀತಿ ಮಾಡಿದೆ. ಈ ಪರೀಕ್ಷೆಯಲ್ಲಿ ನಾನು ಸಿಂಗಲ್ ಡಿಜಿಟ್ ಅಂಕ ಪಡೆದ ಮೇಲೆ ನನಗೆ ಭಯ ಶುರುವಾಗಿ ನಮ್ಮ ಮನೆಯವರ ಹತ್ತಿರ ಇದರ ಬಗ್ಗೆ ಹೇಳೋಕೆ ಊರಿಗೆ ಹೋದೆ. ಆದರೆ ಫಲಿತಾಂಶ ಮಾತ್ರ ಶೂನ್ಯ! ಮನೆಯಲ್ಲಿ ಈ ವರ್ಷವೇನಾದ್ರೂ ಫೇಲಾದರೆ ಕಾಲೇಜನ್ನು ಬಿಡಿಸುತ್ತೇವೆ, ಮುಂದೆ ಓದೋಕೆ ಕಳಿಸೋಲ್ಲ ಎಂದು ಹೇಳಿದರು. ಆಗ ನನಗೆ ತಲೆ ಕೆಟ್ಟೋಯ್ತು. “ಪರೀಕ್ಷೆಗೆ ಉಳಿದಿರೋದು ಇನ್ನು ಕೇವಲ 1 ತಿಂಗಳು. ಈಗ ಹೋಗಿ ಹೇಗಪ್ಪ ಓದೋದು?” ಎಂಬ ಪ್ರಶ್ನೆಯೊಂದಿಗೆ ಹಾಸ್ಟೆಲ್ಲಿಗೆ ಹೋದೆ.

ಇಂತಹ ಸಂದಿಗ್ಧ ಸಮಯದಲ್ಲಿ ನಾನು ಹೆದರಿ ಕಡೇ ಪಕ್ಷ ‘ಪಾಸಾದರೂ ಆಗಲಿ’ ಅಂತಾ ಓದುತ್ತಾ ಕುಳಿತೆ. ಆದರೆ ಸುಧಾಕರನ ವಿಷಯದಲ್ಲಿ ಹೀಗೆ ಮಾಡಲು ಆಗುತ್ತಿರಲಿಲ್ಲ. ಏಕೆಂದರೆ ಅವನ ಅಣ್ಣ ಡಾಕ್ಟ್ರ ಕೋರ್ಸ್ ಓದುತ್ತಿದ್ದನಾದ್ದರಿಂದ ಅವನಿಗೂ ಸಹ ಉತ್ತಮ ಅಂಕ ಪಡೆಯುವ ಬಗ್ಗೆ ಸಿಕ್ಕಾಪಟ್ಟೆ ಒತ್ತಡವಿತ್ತು. ಅದಕ್ಕವನು ಪರೀಕ್ಷೆ ತಪ್ಪಿಸಲು ಏನೋನೋ ಹೊಸ ಐಡಿಯಾಗಳನ್ನು ರೂಪಿಸಿದ. ಅಂತಹ ಒಂದು ಐಡಿಯಾವೇ ‘ಕಳ್ಳೀ ಹಾಲು ಐಡಿಯಾ’!! ಇದೇನಪ್ಪ ಅಂದ್ರೆ ಬಯಲು ಸೀಮೆಯ ಬೇಲಿ ಸಾಲಿನಲ್ಲಿ ಬೆಳೆಯೋ ಕಳ್ಳೀ ಗಿಡ ಎಂಬ ಗಿಡದಲ್ಲಿ ಕಾಂಡ ಮುರಿದಾಗ ಬಿಳಿಯ ಹಾಲಿನಂತಹ ದ್ರವ ಸುರಿಯುತ್ತೆ. ಅದಕ್ಕೆ ‘ಕಳ್ಳೀ ಹಾಲು’ ಅನ್ತಾರೆ. ಅದು ನಮ್ಮ‌ ದೇಹದ ಮೇಲೆ ಬಿದ್ದರೆ ತುಸು ಮಟ್ಟಿನ‌ ಗಾಯವಾಗುತ್ತೆ. ಇಂತಹ ಹಾಲನ್ನು ಸಿರಂಜಿನಲ್ಲಿ‌‌ ಸುಧಾಕರ ಸಂಗ್ರಹ ಮಾಡಿ ತರುತ್ತಾನಂತೆ. ಅದನ್ನು ನಾನು ಅವನ ಕಣ್ಣಿನಲ್ಲಿ ಹಾಕಬೇಕಂತೆ. ಇಂತಹ ಒಂದು ಪ್ಲ್ಯಾನನ್ನು ನನಗೆ ಸುಧಾಕರ ಹೇಳಿದಾಗ ಮೊದಲೇ ಕಳ್ಳೀಹಾಲಿನ‌ ಮಹಿಮೆಯನ್ನು ತಿಳಿದಿದ್ದ ನಾನು, ಇದಕ್ಕೆ ಬಿಲ್ ಕುಲ್ ಒಪ್ಪಲಿಲ್ಲ. ಇದೇ ವಿಷಯಕ್ಕೆ ಸಿಟ್ಟಾಗಿ ಅವನು ಮಾತಾಡಿಸುವುದನ್ನೇ ಬಿಟ್ಟ. ಮಾರನೇ ದಿನ ಗಣಿತ ಪರೀಕ್ಷೆ ಇರುವ ಸಮಯದಲ್ಲಿ ಯಾರ ಸಹಾಯವನ್ನೂ ಪಡೆಯದೇ ತಾನೊಬ್ಬನೇ ರೂಮಿಗೆ ಚಿಲಕ ಹಾಕಿಕೊಂಡು, ಕಳ್ಳೀಹಾಲನ್ನು ಸಿರಂಜಿನಲ್ಲಿ ತುಂಬಿ ತನ್ನ ಕಣ್ಣಿಗೆ ಹಾಕಿಕೊಂಡ! ಅದರ ಉರಿಯನ್ನ ತಾಳಲಾರದೇ ‘ಉರಿ ಉರಿ’ ಅಂತಾ ರೂಮಿನಿಂದ ಓಡುತ್ತಾ ಬಂದ. ಅವರಣ್ಣ ಕಣ್ಣಿನ ತಜ್ಞರ ಬಳಿ ಕರೆದೊಯ್ದು ಅವರು ‘ಏನಾಯಿತು?’ ಅಂತ ಕೇಳಿದಾಗ ಸುಧಾಕರ “ಹಾಸ್ಟೆಲಿನಲ್ಲಿ ಮೇಲಿನಿಂದ ಯಾರೋ ಸಾಂಬಾರನ್ನು ಚೆಲ್ಲಿದರು” ಅಂತಾ ಹೇಳಿದನಂತೆ. ಕಣ್ಣ ಸುತ್ತ ಸುಟ್ಟ ಸೂಕ್ಷ್ಮವನ್ನು ಗಮನಿಸಿದ ವೈದ್ಯರು ಇದನ್ನು ನಂಬಲಿಲ್ಲವಂತೆ. ಚಿಕಿತ್ಸೆ ಕೊಟ್ಟು ಒಂದು ತಿಂಗಳ ವಿಶ್ರಾಂತಿಯನ್ನು ಸೂಚಿಸಿದರಂತೆ. ಅದೃಷ್ಟಕ್ಕೆ ಅವನು ಹೆಚ್ಚೇನೂ ಹಾಕಿಕೊಂಡಿರಲಿಲ್ಲವಾದ್ದರಿಂದ ಕಣ್ಣಿಗೂ ಹೆಚ್ಚೇನೂ ಹಾನಿಯಾಗಿರಲಿಲ್ಲ. ಅಂತೂ ಇಂತೂ ಅವನು ಪರೀಕ್ಷೆ ತಪ್ಪಿಸಿಕೊಂಡು ತನ್ನ ಉಪಾಯದಲ್ಲಿ ಯಶಸ್ವಿಯಾಗಿದ್ದ!!

ಇಡೀ ಹಾಸ್ಟೆಲ್ಲಿಗೆ ಈ ಸುದ್ಧಿ ಕಾಡ್ಗಿಚ್ಚಿನಂತೆ ಹಬ್ಬಿ‌ ಎಲ್ಲರೂ ಸುಧಾಕರನ ವಿಷಯದಲ್ಲಿ ಕನಿಕರ ವ್ಯಕ್ತಪಡಿಸುತ್ತಿದ್ದರು. ಅಷ್ಟೇ ಅಲ್ಲ ಸಾಂಬಾರು ಯಾರು ಚೆಲ್ಲಿರಬಹುದು ಎಂಬುದರ ಬಗ್ಗೆ ತಮ್ಮ ತಮ್ಮಲ್ಲೇ ಚರ್ಚೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಹಾಸ್ಟೆಲ್ ವಾರ್ಡನ್ನೂ ಸಹ “ಸಾಂಬಾರ್ ಚೆಲ್ಲಿದವರು ಯಾರು?” ಅಂತಾ ಕಂಡುಹಿಡಿಯಲು ಪ್ರತೀ ರೂಮಿನ ಹುಡುಗರನ್ನು ವಿಚಾರಣೆ ಮಾಡುತ್ತಿದ್ದುದ್ದನ್ನು ನೋಡಿ ನಂಗೆ ಒಳಗೊಳಗೆ ನಗು‌ ಬರುತ್ತಿತ್ತು. ಆದರೆ ಯಾರಿಗೂ ಇದನ್ನು ಹೇಳುವಂತಿರಲಿಲ್ಲ. ಇಂದಿಗೂ ಗಣಿತ ಪರೀಕ್ಷೆ ಎಂದರೆ ಈ ಘಟನೆ ನೆನಪಿಗೆ ಬರುತ್ತೆ. ಮುಖದಲ್ಲಿ ಭಯಸಮೇತ ಮಂದಹಾಸ ಮೂಡುತ್ತೆ.