“ನೀವು ತಿಂದದ್ದಕ್ಕೆ ಹಣ ಕೊಡಬೇಕಿಲ್ಲ ಎಂಥಾ ಸೌಲಭ್ಯವಿದು? ಪುಕ್ಕಟೆಯೇ? ಎಂದು ನೀವು ಕೇಳಬಹುದು ಇಲ್ಲ ಇದಕ್ಕೆ ಉದ್ರಿ ಎನ್ನುವರು. ಕೌಂಟರ್ ಮುಂದೆ ‘ನನ್ನ ಹೆಸರ್ಲೆ ಹಚ್ರಿ ಎಂದು ಹೇಳಿದರೆ ಸಾಕು ಹಚ್ಚುವುದೊಂದೇ ಹಳ್ಳಿ ಫಳಾರದಂಗಡಿಯ ಮಾಲಿಕನ ಕರ್ಮ. ಸುಗ್ಗಿಗೊಮ್ಮೆ ನಾಲ್ಕುಚೀಲ ಜೋಳ ತಂದು ಹೋಟೆಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯ್ತು. ವರ್ಷದವರೆಗೂ ಪೂರಿ, ಬಜಿಗಳನ್ನು ತಿನ್ನುತ್ತಾ ಊರಸುದ್ದಿಯನ್ನು, ಮಾತನಾಡುತ್ತಾ ಎದುರಿಗಿರಲಾರದವರ ಗೇಲಿ ಮಾಡುತ್ತಾ ಹೊತ್ತನ್ನು ಕಳೆಯಬಹುದು” ಎಂಬ ಸಾಲುಗಳು ವೀರೆಂದ್ರ ಸಿಂಪಿಯವರ ‘ಹಳ್ಳಿಯ ಚಹಾ ಹೋಟೆಲುಗಳು’ ಲಲಿತ ಪ್ರಬಂಧದ ಸಾಲುಗಳು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಒಂಭತ್ತನೆಯ ಬರಹ ನಿಮ್ಮ ಓದಿಗೆ

“ಅತ್ಯಂತ ಹೆಚ್ಚು ಕನ್ನಡ ಮಾತನಾಡುವ ಸೀಮೆ ಯಾವುದು” ಎಂದರೆ ‘ಗಂಡು ಸೀಮೆ ಮಂಡ್ಯ’ ಎನ್ನುತ್ತಾರೆ. ಮಂಡ್ಯವನ್ನು ‘ಸಕ್ಕರೆ ಸೀಮೆ’ ಎಂದೂ ಕರೆಯುತ್ತಾರೆ. ಅಂಥ ಗಂಡುಸೀಮೆಯಲ್ಲಿ ಇದೀಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗೊ.ರು.ಚ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಇದು ಸಾಹಿತ್ಯ ಮತ್ತು ಸಂಸ್ಕೃತಿಯ ಮಿಲನವೂ ಹೌದು. ಇದರಲ್ಲಿ ಬೇರೆ ಬೇರೆ ಸೀಮೆಯ ಆಹಾರ ಸಂಸ್ಕೃತಿಯ ಸಮ್ಮಿಲನವೂ ಆಗಿದೆ. ಹಾಗಿದ್ದರೆ ‘ಸೀಮೆ’ ಪದದ ಕುರಿತು ಒಂದಷ್ಟು ಚರ್ಚೆ ಸೂಕ್ತ ಅನ್ನಿಸುತ್ತದೆ.

ಈ ‘ಸೀಮೆ’ ಎನ್ನುವುದನ್ನು ಕನ್ನಡದಲ್ಲಿ ಪ್ರದೇಶ ‘ಸ್ಥಳ’, ‘ನಾಡು’, ‘ದೇಶ’, ‘ವಿದೇಶ’ ಎನ್ನುವ ವಿವಿದಾರ್ಥದಲ್ಲಿ ಬಳಸಲಾಗುತ್ತದೆ, ಕರ್ನಾಟಕದಲ್ಲಿ ಆಯಾ ಭೌಗೋಳಿಕ ವೈವಿಧ್ಯತೆಗೆ ತಕ್ಕಂತೆ ಬಯಲು ಸೀಮೆ (ಮಧ್ಯ ಕರ್ನಾಟಕ ಜಿಲ್ಲೆಗಳು), ಮೂಡುಸೀಮೆ (ಹಾಸನ, ಪಿರಿಯಾಪಟ್ಟಣ, ಕೆ.ಆರ್ ನಗರ ತಾಲ್ಲೂಕುಗಳು), ಮಲಸೀಮೆ (ಚಿಕ್ಕಮಗಳುರು, ಶಿವಮೊಗ್ಗ ಜಿಲ್ಲೆಗಳು) ಎಂದು ರೂಢಿಯಲ್ಲಿ ಕರೆಯುವುದಿದೆ. ಉತ್ತರಕರ್ನಾಟಕವೇ ಬಯಲುಸೀಮೆ, ಮಲೆಗಳಿಂದ ಆವೃತವಾಗಿರುವುದೇ ಮಲಸೀಮೆ…. ಹೀಗೆ. ಅತ್ಯಂತ ಹೆಚ್ಚು ತೆಂಗಿನಕಾಯಿ ಇಳುವರಿಯನ್ನು ಪಡೆಯುವ ತಿಪಟೂರು, ಚನ್ನರಾಯಪಟ್ಟಣ ಇವು ಕಾಯಿ ಸೀಮೆ ಇತ್ಯಾದಿ ಇತ್ಯಾದಿ. ‘ಸೀಮೆ’ ಎಂದರೆ ‘ನಾಡು’ ಎಂದಿಟ್ಟುಕೊಳ್ಳೋಣ.
ನಾವು ವಿದೇಶವನ್ನೂ ಬೇರೆ ದೇಶವೆಂದೇ ಅಲ್ಲ ಬೇರೆಯ ‘ಸೀಮೆ’ ಎಂದು ಕರೆಯುವುದು ಸಾಮಾನ್ಯವೆ. ಫಾರಿನ್ ಎಂದರೆ ಫಾರ್ ಅರ್ಥಾತ್ ದೂರದ ಸೀಮೆ, ವಿದೇಶ ಎಂದಲ್ವ! ಅಂತೆಯೇ ನಾವು ಅನ್ಯದೇಶಿಗರೊಡನೆ ಸಂಪರ್ಕ ಹೊಂದಿದ ನಂತರ ಅವರಾಡುವ ಮಾತಿನೊಂದಿಗೆ ಅವರು ಬಳಸುವ ಕೆಲ ವಸ್ತುಗಳನ್ನೂ ಬಳಕೆ ಮಾಡಲು ರೂಢಿ ಮಾಡಿಕೊಂಡೆವು. ಅವುಗಳಲ್ಲಿ ಸೀಮೆಎಣ್ಣೆ, ಸೀಮೆ ಬದನೆಕಾಯಿ, ಸೀಮೆಸುಣ್ಣ, ಸೀಮೆ ಅಕ್ಕಿ ಇತ್ಯಾದಿ. ‘ಸೀಮೆ ಅಕ್ಕಿಯನ್ನು’ (ಸಬ್ಬಕ್ಕಿ) ಮುಂತಾದವು. ಸೀಮೆ ಅಕ್ಕಿಯನ್ನು ಉತ್ತರಕರ್ನಾಟಕದವರು ಹೆಚ್ಚು ಬಳಸುತ್ತಾರೆ. ಅದು ಬಯಲುಸೀಮೆಯಿಂದ ದಕ್ಷಿಣ ಸೀಮೆಗೆ ಬಂದಿರಬಹುದು ಹಾಗಾಗಿ ‘ಸೀಮೆ ಅಕ್ಕಿ’ ಎಂದು ಕರೆದಿರಬಹುದು. ‘ಸೀಮೆಎಣ್ಣೆ’, ‘ಸೀಮೆ ಬದನೆಕಾಯಿ’, ‘ಸೀಮೆಸುಣ್ಣ’ ಬೇರೆಯದೆ ನಾಡಿನವು. ಅವುಗಳಿಗೆ ಸರಿಯಾಗಿ ಹೆಸರಿಡಲು ಬಾರದೆ ಇರುವ ಕಾರಣ ಜೊತೆಗೆ ನಮ್ಮ ಸೀಮೆಯ ವಸ್ತುಗಳನ್ನು ಹೋಲುವ ಆಧಾರದ ಮೇಲೆ ನಾವು ಹೆಸರುಗಳನ್ನು ಇಟ್ಟಿದ್ದೇವೆ ಎನಿಸುತ್ತದೆ. (ಸೀಮೆ ಪದಕ್ಕೆ ಸೀಮಿತವಾಗಿ ಪದಗಳನ್ನು ತೆಗೆದುಕೊಂಡಿದೆ)

ಈ ಪದಗಳ ವೈಚಿತ್ರ್ಯ ಅಧ್ಯಯನ ಮಾಡ್ಕೊತಾ ಹೋದ್ರ ಮುಗಿಯೋವಲ್ದು ಅಗದಿ ಪದ ಭಂಡಾರವೇ ಸಿಗ್ತೈತಿ ನೋಡ್ರಿ! ಹೀಗೆ ನಮ್ಮ ದಕ್ಷಿಣದ ಮಂದಿ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತಾ ಖಾನಾವಳಿಯೊಂದಕ್ಕೆ ಹೋದರಂತೆ. ಅಲ್ಲಿ “ಉದ್ರಿ ಬಂದ ಅದ’’ ಎಂದು ಬೋರ್ಡ್ ಇತ್ತಂತೆ. ಬಹುಶಃ ಇಂಥದೆ ಅರ್ಥಗಳು ಇರಬಹುದು ಎಂದು ಊಹೆ ಮಾಡತೊಡಗಿದಾಗ ಅವರಿಗೆ ‘ಬಂದ >ಬಂದು’, ‘ಅದೆ> ಇದೆ’ ಎಂಬ ಅರ್ಥಗಳು ಸಿಕ್ಕಿವೆ ಆದರೆ ‘ಉದ್ರಿ’ ಪದಕ್ಕೆ ಪದ ಸಿಗದೆ ‘ಉದ್ರಿ’ ಬಂದದ ಯಾಕ? ಬಂದದ ಹ್ಯಾಂಗ? ಬಂದದ ಉದ್ರಿ? ಎಂದೆಲ್ಲ ಅದೆ ಪದವನ್ನು ತಿರುಚಿ ಮಾತನಾಡಿಕೊಳ್ಳುತ್ತಾ ಕಡೆಗೆ ‘ಉದ್ರಿ’ ಎಂದರೆ ಸ್ಥಳಿಯ ಅಡುಗೆ ಇಲ್ಲವೆ ವಿಶೇಷ ಪಾಕ ಇರಬಹುದು ಎಂದು ಚರ್ಚಿಸುತ್ತಿರಬೇಕಾದರೆ ಸ್ಥಳೀಯರೊಬ್ಬರು ‘ರೀ ಅದರ್ಥ ಸಾಲ ಕೊಡುವುದನ್ನು ನಿಲ್ಲಿಸಿದೆ ಎಂದು ಅರ್ಥಾತ್ no credits’ ಎಂದರಂತೆ. ಸ್ಥಳಿಯರ ವಿವರಣೆ ಪಡೆದ ಪ್ರವಾಸಿಗರು ನಿರಾಳರಾದರಂತೆ. ಭಾಷೆ ತಿಳಿಯದೆ ಇದ್ದರೆ ಎಂಥ ಪೇಚುಗಳು ಆಗುತ್ತವೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.

ಸಂಸ್ಕೃತದ ‘ಉದಾರ’ ಮರಾಠಿ, ಹಿಂದಿ ಭಾಷೆಗಳಲ್ಲಿ ‘ಉದ್ರಿ’ ಆಗಿ ವಿಜಾಪುರ ಕನ್ನಡದಲ್ಲಿ ಬಂದಿದೆ. ‘ಬಂದ’ ಅನ್ನುವುದು ‘ಬಂದ್’ ಎಂಬ ಪಾರ್ಸಿ ಭಾಷೆಯ ಪದವಾಗಿದ್ದು ‘ಅದ’ ಎಂಬುವುದು ‘ನಿಲ್ಲಿಸಿದೆ’ ಎಂದರ್ಥವನ್ನು ಕೊಡುತ್ತದೆ. ವಿಜಾಪುರ, ಧಾರವಾಡ, ಬೆಳಗಾವಿ ಪ್ರದೇಶದ ಜನರು ವ್ಯಂಜನಾಂತ ಪದಗಳನ್ನು ಸ್ವರಾಂತವಾಗಿ ಬರೆದರೂ ಉಚ್ಚಾರಣೆಯಲ್ಲಿ ವ್ಯಂಜನವನ್ನೆ ಬಳಸುತ್ತಾರೆ.

ಈ ‘ಉದ್ರಿ’ ಮಾತುಕತೆ ನಡುವೆ ‘ಪಾಕ’ ಎನ್ನುವ ‘ಪದ’ ಅನಾಯಾಸವಾಗಿ ಬಂತು ಆ ‘ಪಾಕ’ದ ವಿಚಾರವಾಗಿ ಚುಟುಕು ಮಾಹಿತಿ ಪಡೆದೇ ಬಿಡೋಣ! ‘ಪಾಕ’ ಎಂಬುದು ನಾಮಪದ. ಅದರ್ಥ ಅಡುಗೆ ಬೇಯಿಸುವುದು, ಸಕ್ಕರೆ ಅಥವಾ ಬೆಲ್ಲವನ್ನು ಕುದಿಸಿ ತಯಾರಿಸುವ ಮಂದವಾದ ದ್ರವ ಅದೇ ‘ಪಾಕ’. ಈ ‘ಪಾಕ’ ಪದಕ್ಕೆ ಶಾಸ್ತ್ರ ಪದವನ್ನು ಸೇರಿಸಿದರೆ ಪಾಕಶಾಸ್ತ್ರವಾಗುತ್ತದೆ; ಅಂದರೆ ಅಡುಗೆಯ ವಿಧಾನವನ್ನು ಹೇಳುವ ಶಾಸ್ತ್ರ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಮತ್ತೆ ಪಾಕ್ >ಪಾಕು ವಿಚಾರಕ್ಕೆ ಬಂದರೆ ನಮ್ಮ ಮೈಸೂರಿನ ಗುರುತು ‘ಮೈಸೂರಿನ ಪಾಕ್’ ಎನ್ನುವುದಿದೆ ಆದರೆ ಇದು ತಪ್ಪು. ಮೈಸೂರು ಪಾಕು ಮೈಸು+ಪಾಕ್ ಎಂಬ ಉರ್ದು ಮತ್ತು ಸಂಸ್ಕೃತ ಶಬ್ದಗಳಿಂದಾದ ಪದ. ಉರ್ದುವಿನಲ್ಲಿ ‘ಮೈಸು’ ಎಂದರೆ ಕಡಲೆ ಹಿಟ್ಟು;ಸಂಸ್ಕೃತದ ಪಾಕ> ಪಾಕ್ ಎಂದು ವ್ಯಂಜನಾಂತ ಪದವಾಗಿದೆ. ಎರಡೂ ಸೇರಿ ‘ಮೈಸೂಪಾಕ್’ ಆಗಬೇಕಿತ್ತು. ಅದು ತಪ್ಪಿ ಮೈಸೂಗೆ ‘ರು’ ಸೇರಿ ಮೈಸೂರು ಪಾಕ್ ಆಗಿದೆ. ‘ವಡೆ’ ಮದ್ದೂರಿನದ್ದೆ ಪ್ರಸಿದ್ಧ ಖಾದ್ಯ ಎಂದೇ ‘ಮದ್ದೂರು ವಡೆ’ ಎಂದೂ ಉಳಿದಂತೆ ಊರುಗಳ ಹೆಸರಿನೊಂದಿಗೆ ಗುರುತಿಸಿಕೊಂಡಿರುವ, ‘ಧಾರ್ವಾಡ್ ಪೇಡ’, ‘ಬೆಳಗಾಂ ಕುಂದಾ’, ಗೋಕಾಕ್ ಕರದಂಟು’ ಮೊದಲಾಗಿ ಖಾದ್ಯಗಳನ್ನು ಹೇಳುತ್ತಾರಲ್ಲ ಹಾಗೆ. ಮೈಸೂಪಾಕ್ ಆಥವಾ ಮೈಸೂರು ಪಾಕ್ ಮೈಸೂರಿನ ವಿಶಿಷ್ಟ ಸಿಹಿ ಎಂದು ಬಳಕೆಯಾಗಿದೆ. ಆದರೆ ರೂಢಿಯಲ್ಲಿ ಬಂದ ಮೇಲೆ ಯಾವ ಶಬ್ದವನ್ನೆ ಆಗಲಿ ಬದಲಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ನಮ್ಮಲ್ಲಿ ‘ನಳಪಾಕ’ ಎಂಬ ಪದವಿದೆ. ಅಂದರೆ ರುಚಿಕರ ಅಡುಗೆ ಎಂದು. ಮಹಾಭಾರತದ ನಳಮಹಾರಾಜನು ಉತ್ತಮ ಬಾಣಸಿಗನಾಗಿದ್ದನಂತೆ. ಎಷ್ಟೆಂದರೆ ಬೆಂಕಿ ಉರಿಯಿಸದೆಯೆ ಅಡುಗೆ ಮಾಡುತ್ತಿದ್ದ ಎಂಬ ಮಾತುಗಳು ಕಾವ್ಯದಲ್ಲಿ ಸಿಗುತ್ತವೆ. ಹೇಗೂ ನುರಿತ ಕವಿಗಳ ಕಾವ್ಯವೂ, ಪಳಗಿದ ಕೈಗಳ ಅಡುಗೆಯೂ ‘ನಳಪಾಕʼ ಎಂದ ಕೂಡಲೆ ‘ನಲ್ಲಪಾಕ’ ಎಂದೆನಿಸುತ್ತದೆ. ಅಂದಹಾಗೆ ‘ಪಾಕ’ ಪದ ಬಳಕೆ ವಿಶಾಲಾರ್ಥದಲ್ಲಿ ಆಗುತ್ತಿದೆ.

ಮತ್ತೆ ಉತ್ತರಕರ್ನಾಟಕದ ಕಡೆಗೆ ಹೊರಳಿದರೆ ಬಹುಶಃ ಉತ್ತರ ಕರ್ನಾಟಕದ ಹೋಟೇಲುಗಳಲ್ಲಿ ‘ಕಡ’ ಕೊಡುವ ಪದ್ಧತಿ ಹಿಂದೆ ಇದ್ದಿರಬೇಕು. (‘ಕಡ’ ಎಂದರೆ ಕನ್ನಡದಲ್ಲಿ ಹಾಗು ತಮಿಳಿನಲ್ಲಿ ‘ಸಾಲ’ ಎಂಬ ಅರ್ಥವೇ ಬರುತ್ತದೆ.) “ನೀವು ತಿಂದದ್ದಕ್ಕೆ ಹಣ ಕೊಡಬೇಕಿಲ್ಲ ಎಂಥಾ ಸೌಲಭ್ಯವಿದು? ಪುಕ್ಕಟೆಯೇ? ಎಂದು ನೀವು ಕೇಳಬಹುದು ಇಲ್ಲ ಇದಕ್ಕೆ ಉದ್ರಿ ಎನ್ನುವರು. ಕೌಂಟರ್ ಮುಂದೆ ‘ನನ್ನ ಹೆಸರ್ಲೆ ಹಚ್ರಿ ಎಂದು ಹೇಳಿದರೆ ಸಾಕು ಹಚ್ಚುವುದೊಂದೇ ಹಳ್ಳಿ ಫಳಾರದಂಗಡಿಯ ಮಾಲಿಕನ ಕರ್ಮ. ಸುಗ್ಗಿಗೊಮ್ಮೆ ನಾಲ್ಕುಚೀಲ ಜೋಳ ತಂದು ಹೋಟೆಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯ್ತು. ವರ್ಷದವರೆಗೂ ಪೂರಿ, ಬಜಿಗಳನ್ನು ತಿನ್ನುತ್ತಾ ಊರಸುದ್ದಿಯನ್ನು, ಮಾತನಾಡುತ್ತಾ ಎದುರಿಗಿರಲಾರದವರ ಗೇಲಿ ಮಾಡುತ್ತಾ ಹೊತ್ತನ್ನು ಕಳೆಯಬಹುದು” ಎಂಬ ಸಾಲುಗಳು ವೀರೆಂದ್ರ ಸಿಂಪಿಯವರ ‘ಹಳ್ಳಿಯ ಚಹಾ ಹೋಟೆಲುಗಳು’ ಲಲಿತ ಪ್ರಬಂಧದ ಸಾಲುಗಳು. ಈ ಸಾಲುಗಳು ಹೋಟೆಲಿನಲ್ಲೂ ಸಾಲದ ಖಾತೆಗಳನ್ನು ಹೊಂದಿರುತ್ತಿದ್ದರು ಎಂಬುದನ್ನು ಹೇಳುತ್ತವೆ.

ಮುಂದುವರೆದಂತೆ ಸಿಂಪಿಯವರ ಸಾಲುಗಳಲ್ಲಿ ‘ಬಜಿ’ ಪದ ಬಳಕೆಯಾಯಿತು. ‘ಬಜಿ’ ಎಂದರೆ ಕರಿದ ಪದಾರ್ಥ. ‘ಬಾಜಿ’ ಎಂದರೆ ಒಂದು ಬಗೆಯ ಮೇಲೋಗರ. ಒಂದು ಸ್ವರ ಎಷ್ಟು ಅರ್ಥ ವ್ಯತ್ಯಾಸ ಮಾಡುತ್ತದೆ ಅಲ್ವೆ? ಇನ್ನು ‘ಫಳಾರ’ ಎಂದರೆ ‘ಫಲಹಾರ’ ಗಳನ್ನು ‘ಫರಾಳ’ ಎನ್ನುವುದಿದೆ. ಫಳಾರ> ಫಲಾರ ಸ್ವಚ್ಛಂದ ಪರಿವರ್ತನಾ ಶಬ್ದಗಳು. ಉದಾಹರಣೆಗೆ ಮೊಣಕಾಲು>ಮೊಳಕಾಲು, ಚುನಮುರಿ>ಚುರುಮುರಿ,ಅಲುಗಾಡು>ಅಳುಗಾಡು, ಗಿಳಿ>ಗಿಣಿ ಇತ್ಯಾದಿಗಳು. ಇಲ್ಲಿ ಣ್>ಳ್,>ಳ್,ನ್>ರ್ ಪರಿವರ್ತನೆಯನ್ನು ನೋಡಬಹುದು. ತಪ್ಪೋ ಸರಿಯೋ ಒಂದು ಧ್ವನಿಯ ಬದಲಾಗಿ ಮತ್ತೊಂದು ಧ್ವನಿ ಬಂದು ಸೇರಿದಾಗಲೂ ಈ ಪದಗಳ ಅರ್ಥ ವ್ಯತ್ಯಾಸವಾಗುವುದಿಲ್ಲ.

ಮುಂದುವರೆದಂತೆ ನಮ್ಮಲ್ಲಿ ಫಲಹಾರ> ಫಲಾಹಾರ ಎರಡೂಪದಗಳ ಬಳಕೆಯನ್ನು ಕಾಣಬಹುದು. ಇವೆರಡರಲ್ಲಿ ‘ಫಲಹಾರ’ ಸರಿಯಾದ ಪದ ಬಳಕೆ ಬೆಳಗ್ಗೆ ಅಥವಾ ಸಂಜೆ ತೆಗೆದುಕೊಳ್ಳುವ ಲಘುವಾದ ಆಹಾರ ಅಥವಾ ಹಣ್ಣುಗಳ ಸೇವನೆ ಮಾಡುವುದು ಎಂದಾಗುತ್ತದೆ. ಈ ಸಂದರ್ಭದಲ್ಲಿ ನನಗಂತೂ ಸುಬ್ಬಮ್ಮನ ಉಪವಾಸ ನೆನಪಾಗುತ್ತದೆ. ಬಿ.ಆರ್ ಲಕ್ಷ್ಮಣರಾವ್ ಅವರ ‘ಆಚೆ ಮನೆಯ ಸುಬ್ಬಮ್ಮನ ಏಕಾದಶಿ ಉಪವಾಸ’ ಅರ್ಥಾತ್ ಫಲಹಾರ ಉಪ್ಪಿಟ್ಟು, ಅವಲಕ್ಕಿ, ಇಡ್ಲಿ, ಬಾಳೆಹಣ್ಣು, ಕೋಡುಬಳೆ, ರವೆಉಂಡೆ ಆದ ಬಳಿಕ ಪಕ್ಕದ ಮನೆ ರಾಮೇಗೌಡರ ಸೀಮೆ ಹಸುವಿನ ಹಾಲಿಂದ ಕೊನೆಗೊಳ್ಳುತ್ತಿತ್ತಂತೆ. ಈ ಶಿಶು ಗೀತೆ ವೈನೋದಿಕವಾಗಿದ್ದರು ಮಕ್ಕಳಿಗೆ ಆಹಾರದ ಪಟ್ಟಿಯನ್ನು ಹೇಳಿಕೊಡುತ್ತದೆ. ಇಲ್ಲಿಯೂ ‘ಉಪಹಾರ’ ಸರಿಯಾದ ಪ್ರಯೋಗ ‘ಉಪಾಹಾರ’ ತಪ್ಪು ಪ್ರಯೋಗ. ಕೆಲವು ಆಹ್ವಾನಪತ್ರಿಕೆ ನೋಡಿದರೆ ‘ಲಘು ಉಪಹಾರದ ವ್ಯವಸ್ಥೆಯಿರುತ್ತದೆ’ ಎಂದು ಅಚ್ಚುಹಾಕಿಸಿರುತ್ತಾರೆ. ಅಂದರೆ ಲಘುವಾಗಿ, ಹಿತವಾಗಿ ಸ್ವೀಕರಿಸಿ ಎಂಬ ಪರೋಕ್ಷ ನೋಟೀಸು ನೀಡಿದ್ದಾರೆ ಎಂದು ಅನಿಸುತ್ತದೆಯಲ್ಲವೆ? ಇಷ್ಟಾದರೂ ಕೆಲವರು‌ ಪ್ಲೇಟ್‌ಗಟ್ಟಲೆ ತಿಂದರೂ ಹಾಗೆ‌ ರುಚಿ ನೋಡಿದೆ ಎನ್ನುತ್ತಿರುತ್ತಾರೆ. ಇದನ್ನು ಅವರವರ ಭಾವಕ್ಕೆ ಬಿಡೋಣ ಬಿಡಿ!

ಮುಂದುವರೆದ ಹಾಗೆ ನಮ್ಮಲ್ಲಿ ಏಕಾದಶೀ ಫಲಹಾರ, ಪಾನಕ ಫಲಹಾರ ಇತ್ಯಾದಿ ಪದಗಳನ್ನು ಬಳಸುತ್ತಾರೆ. ‘ಫಲಾಹಾರ’ ಎಂದುಬಿಟ್ಟರೆ ಅದು ತಪ್ಪು ಪ್ರಯೋಗ. ‘ಹಾರ’ ಎಂದರೆ ಹೂವಿನ ಮಾಲೆ ಎಂಬ ಅರ್ಥವೂ ‘ಬಲಿ’ ಎಂಬ ಅರ್ಥವೂ ಇದೆ ಎಚ್ಚರದಿಂದಿರಬೇಕು. ‘ಫಲಹಾರ ‘ಬಂದಾಗ ರಾಮನವಮಿ ನೆನಪಾಗುತ್ತದೆ. ಅದರಲ್ಲಿಯೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ನವ್ಯದ ಶ್ರೇಷ್ಟ ಕವಿತೆಗಳಲ್ಲಿ ಒಂದಾದ ಅಡಿಗರ ‘ಶ್ರೀರಾಮನವಮಿದಿವಸ’ ಕವನ ನೆನಪಾಗಲೇ ಬೇಕು.

ವೀರೇಂದ್ರ ಸಿಂಪಿಯವರ ಪ್ರಬಂಧವನ್ನು ಮತ್ತೆ ನೆನಪಿಸಿಕೊಳ್ಳುವುದಾದರೆ ಅದರಲ್ಲಿ ‘ಸುಗ್ಗಿ’ ಪದ ಉಲ್ಲೇಖವಾಗಿತ್ತು. ‘ಸುಗ್ಗಿ’ ಪದ ಕೇಳಿದರೆ ಬಹಳ ಹಿಗ್ಗು ಅಲ್ವೆ! ‘ಸುಗ್ಗಿಯೊಳುಂಡುದಂ ಕಾರೊಲ್ ಕಾಯಿವನಕ್ಕುಂʼ ಎಂಬುದೊಂದು ವಾಕ್ಯವಿದೆ. ಸುಗ್ಗಿಯಲ್ಲಿ ಉಂಡುದಂ ಕಾರಿನಲ್ಲಿ ಕಾರು (ಕಾರು ಎಂದರೆ ವಾಂತಿಮಾಡು ಎಂಬರ್ಥವೂ ಇದೆ. ದ್ವೇಷಕಾರು ಎಂದರೆ ದ್ವೇಷದಿಂದಲೆ ನೋಡು ಮಾತನಾಡಿಸು ಎಂದಾಗುತ್ತದೆ)ಎಂದರೆ ಆಭಾಸವೆ ಬಿಡಿ! ಸುಗ್ಗಿಯಲ್ಲಿ ಪಡೆದುಕೊಂಡ ಅನುಭವವವನ್ನು ಮುಂಗಾರಿನಲ್ಲಿ ಕಾರ್ಯಗತಗೊಳಿಸು ಎಂಬುದಾಗಿ ಅದರೆ ಅರ್ಥ. ‘ಕಾರು’ ಇಂಗ್ಲಿಷಿನ(car) ಕಾರಿನ ನೆನಪು ತರಿಸಿದರೂ (ಕಾರಿ ಎಂದರೆ ಕೊಲ್ಲಿ ಎಂಬರ್ಥವಿದೆ. ತಕ್ಷಣ ಕಾರಿಹೆಗ್ಗಡೆ ಕವಿತೆ ನೆನಪಾಯಿತು. ಕಾರಿಹೆಗ್ಗಡೆಯ ಮಗಳು ಇದು ಬಿ. ಎಂಶ್ರೀಯವರಿಂದ ಅನುವಾದಿತವಾದ ಲಾರ್ಡ್ ಉಲ್ಲಿನ್ಸ್ ಡಾಟರ್ ಕವಿತೆ. ಇದೊಂದು ದುರಂತ ಪ್ರೇಮಕವಿತೆ) ನಮ್ಮ ಅಚ್ಚಕನ್ನಡದ ಬನಿಯುಳ್ಳ ಶಬ್ದ ‘ಕಾರ್’ ಎಂದರೆ ಕಾರ್ಗಾಲ. ‘ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ’ ಎಂದು ಕುವೆಂಪು ಮಳೆಗಾಲವನ್ನು ಕುರಿತು ಹೇಳಿಲ್ಲವೆ? ನಾಗಚಂದ್ರ ‘ಪೊಸಗಾರ ಸಿಡಿಲ್ʼ ಎಂಬುದಾಗಿ ಮುಂಗಾರು ಮತ್ತು ಮುಂಗಾರಿನ ಭಯಂಕರ ಸಿಡಿಲಿನ ಬಗ್ಗೆ ಹೇಳಿದ್ದಾನೆ. ಒಟ್ಟಾರೆ ‘ಕಾರ್’ ಎಂದರೆ ‘ಮುಂಗಾರು’ ಎಂದು. ‘ಸಿಡಿಲು’ ಪದ ಬಂದಾಗ,
ಸಿಡಿಲಕಾಲದೊಳೆರಗುವಂತಿರೆ
ಕಡಲು ಕಲ್ಪದೊಳುಕ್ಕುವಂತಿರೆ
ಪಡವಿಯಾಕಸ್ತ್ಮಿಕದೊಳಿಳಿವಂತಿರೆ ರಸಾತಳಕೆ ಎಂದು ಕುಮಾರವ್ಯಾಸ ಉಲ್ಲೇಖಿಸಿದ್ದಾನೆ.

ಇಲ್ಲಿ ಉಪಮಾನವಾಗಿ ‘ಸಿಡಿಲು’ ಪದವನ್ನು ದುಡಿಸಿಕೊಂಡಿರುವ ಕವಿಯ ಅನನ್ಯ ಪ್ರತಿಭೆಯನ್ನು ಕಾಣಬಹುದು.

ಮತ್ತೆ ಸುಗ್ಗಿಗೆ ಮರಳುವುದಾದರೆ ‘ಸುಗ್ಗಿ’ ಪದ ವಿಶಾಲಾರ್ಥದಲ್ಲಿ ಬಳಕೆಯಾಗುತ್ತದೆ. ಹೊಸಚೈತನ್ಯ ಮತ್ತು ಸಮೃದ್ಧಿಗಾಗಿ ಬಳಸುವ ಪದವಿದು. ಯಾವುದಾದರೂ ಒಂದು ಪರಿಪ್ರೇಕ್ಷ ವಿಶೇಷವಾಗಿ ಸಿಗುವ ಕಾಲವನ್ನು ‘ಸುಗ್ಗಿ’ ಎನ್ನುತ್ತಾರೆ. ‘ಕೊಯ್ಲು ‘ಅಥವಾ ‘ಕಟಾವಿನ ಸಮಯ’ ಎಂದೂ ಆಗುತ್ತದೆ. ಒಟ್ಟಾರೆಯಾಗಿ ‘ಸುಗ್ಗಿ’ ಎಂದರೆ ‘ಯಥೇಚ್ಛವಾಗಿ ಸಿಗುವುದು’ ಅಥವಾ ‘ಸಮೃದ್ಧಿಯ ಕಾಲʼ ಎನ್ನಬಹುದು.

ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ತನ್ನನ್ನು ಮುತ್ತಲು ಬಂದ ಸೇನೆಯನ್ನು ಸುಲಭವಾಗಿ ನೀರು ಪಾಲು ಮಾಡಿದನು. ಆನೆಗಳನ್ನು ಕೊಂದು ಮೆದೆಯೊಟ್ಟಿದನು. ರಥಗಳನ್ನು ಪುಡಿಪುಡಿ ಮಾಡಿದನು. ಕಾಲಾಳುಗಳನ್ನು ಕತ್ತರಿಸಿದನು. ಅದುವೆ ‘ರಕುತದ ಸುಗ್ಗಿಯಾದುದು ಶಾಕಿನಿಯರಿಗೆ ಕಳನ ಚೌಕದಲಿ’ ಎಂಬ ಸಾಲು ಮಹಾಭಾರತದ ಭೀಷ್ಮಪರ್ವದ 8ನೆ ಸಂಧಿ 46ನೆಯ ಪದ್ಯದಲ್ಲಿ ಬರುತ್ತದೆ. ವಿಶೇಷ ನೋಡಿ ಶಾಕಿನಿಯರಿಗೆ ರಕುತದ ಸುಗ್ಗಿಯಾದರೆ ಓದುಗರಿಗೆ ಕಾವ್ಯಾಸ್ವಾದನೆಯ ಸುಗ್ಗಿ. ಇಂಥ ಸಾಲುಗಳನ್ನು ಓದುತ್ತಾ ಹೋದಂತೆ ಕವಿ ಪ್ರತಿಭೆಗೆ ಪ್ರಣಾಮಗಳನ್ನು ಹೇಳಲೇಬೇಕೆನಿಸುತ್ತದೆ.

‘ಸುಗ್ಗಿ’ ಹೇಗೆ ಸಂದರ್ಭಕ್ಕೆ ತಕ್ಕ ಅರ್ಥವನ್ನು ಪಡೆಯುತ್ತದೆ ಅದಕ್ಕೆ ಉದಾಹರಣೆಯನ್ನೂ ನೋಡೋಣ! ಈಗೆಲ್ಲಾ ಕ್ಯಾಲೆಂಡರ್ ಹೊಸ ವರ್ಷ ಆಚರಿಸುವ ಸುಗ್ಗಿ ಅದನ್ನು ಪಾರ್ಟಿ ಎನ್ನಲೂಬಹುದು. ಎಲ್ಲಿ ನೋಡಿದರೂ ಪಾರ್ಟಿ ಪಾರ್ಟಿ ಪಾರ್ಟಿ…! ನ್ಯೂ ಇಯರ್ ಪಾರ್ಟಿ, ಸಕ್ಸಸ್ ಪಾರ್ಟಿ, ರೇವ್ ಪಾರ್ಟಿ, ಬರ್ತಡೇಪಾರ್ಟಿ, ಎಣ್ಣೆ ಪಾರ್ಟಿ ಹೀಗೆ… ಪಾರ್ಟಿಗೆ ಕನ್ನಡದಲ್ಲಿ ಪಕ್ಷ, ಪಂಗಡ, ಔತಣಕೂಟ, ವಿನೋದಕೂಟ, ಕಕ್ಷಿದಾರ ಎಂಬೆಲ್ಲಾ ಅರ್ಥವಿದೆ. ‘ಎಣ್ಣೆ ಪಾರ್ಟಿ’ ಎನ್ನುತ್ತಾರಲ್ಲ ‘ಎಣ್ಣೆ’ ಎಂದರೆ ‘ಅಡುಗೆ ಎಣ್ಣೆಗೂ, ‘ಮದ್ಯಕ್ಕೂ ಎಣ್ಣೆ’ ಎಂದು ಹೀನಾರ್ಥದಲ್ಲಿ ಕರೆಯಲಾಗುತ್ತದೆ.

ನಿಜಕ್ಕೂ ‘ಎಣ್ಣೆ’ ಇದು ‘ಎಳ್’ ಮತ್ತು ‘ನೆಯ್’ ಎಂಬ ಎರಡು ಶಬ್ದಗಳು ಆಗಿರುವ ಒಂದೇ ಪದ. ‘ಎಳ್ಳಿನ ನೆಯ್’ ಎಂದರೆ ‘ಜಿಡ್ಡು’ ಅರ್ಥಾತ್ ‘ಎಳ್ಳಿನ ತೈಲ’. ‘ಎಳ್ಳಿನ ಜಿಡ್ಡಿಗೆ’ ಮಾತ್ರ ‘ಎಣ್ಣೆ’ ಎಂಬ ಶಬ್ದ ಅಕ್ಷರಶಃ ಸರಿಹೊಂದುತ್ತದೆ. ಆದರೆ ಎಣ್ಣೆ ಪದವೇ ವಿಶಾಲಗೊಂಡಿದೆ ತೆಂಗಿನ ಜಿಡ್ಡು, ನೆಲಗಡಲೆಜಿಡ್ಡು, ಸೂರ್ಯಕಾಂತಿ ಜಿಡ್ಡು, ತಾಳೆ ಜಿಡ್ಡು ಎಲ್ಲದಕ್ಕೂ ‘ಎಣ್ಣೆ’ ಎಂದೇಕರೆಯಲಾಗುತ್ತದೆ. ಇರಲಿ! ನಾವೆಲ್ಲ 2024 ಕಳೆದು 2025 ಎಂದು ಕ್ಯಾಲೆಂಡರ್ ಬದಲಾವಣೆ ಆಗುತ್ತಿರುವ ಸುಗ್ಗಿಯಲ್ಲಿದ್ದೇವೆ.

ಸುಗ್ಗಿಮಾಡೋಣು ಬಾರವ್ವ… ಬಾರವ್ವ… ಸುಗ್ಗಿ ಮಾಡೋಣು ಬಾರವ್ವ… ಗೆಳತಿ….. ಸುಮ್ಮನ್ಯಾಕೆ ಕುಳಿತಿ… ಎನ್ನುವಂತೆ ವಿದ್ಯಾರ್ಥಿಗಳು ಅಧ್ಯಯನ ಸುಗ್ಗಿಯಲ್ಲಿ, ಶಿಕ್ಷಕರು ಪಠ್ಯಕ್ರಮ ಮುಗಿಸುವ ಸುಗ್ಗಿಯಲ್ಲಿ, ಉದ್ಯಮಿಗಳು ಹೊಸ ಹಣಕಾಸು ವರ್ಷ ನಿರೀಕ್ಷಿಸುವ ಸುಗ್ಗಿಯಲ್ಲಿ, ರೈತರು ಒಕ್ಕಲಿನ ಸುಗ್ಗಿಯಲ್ಲಿ, ನೌಕರರು ವೇತನ ಹೆಚ್ಚಳದ ಸುಗ್ಗಿಯಲ್ಲಿ, ಬರಹಗಾರರು ಹೊಸಬರಹಗಳ ಸುಗ್ಗಿಯಲ್ಲಿ ವ್ಯಸ್ತರಾಗಲಿ ಎಂದು ಆಶಿಸೋಣವೇ?