ರೆಯ್ನಾಲ್ಡ್ಸ್ ಗಮನಿಸಿದಂತೆ, “ಈ ಸ್ವಯಂ ಪ್ರಜ್ಞೆಯು ಸಮೃದ್ಧವಾದ ಮತ್ತು ಸುಲಲಿತವಾದ ಸೇರ್ಪಡೆಯಾಗಿದೆ.” ಆಲಿವರ್-ರ ಕಾವ್ಯದಲ್ಲಿ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ಮಯದ ವ್ಯಾಪಕ ಸ್ವರವಿದೆ. ಆಲಿವರ್ ಅವರ ಕಾವ್ಯ “ಕವಿ ವಿಲಿಯಮ್ ಬ್ಲೇಕ್-ನ ಕವಿದೃಷ್ಟಿಯ ದಿವ್ಯದರ್ಶನದ ಗುಣ” ಹೊಂದಿವೆ ಎಂದು ರೆಯ್ನಾಲ್ಡ್ಸ್ ಅರಿತರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಅಮೇರಿಕಾ ದೇಶದ ಕವಿ ಮೇರಿ ಆಲಿವರ್-ರವರ (Mary Oliver, 1935-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಮೇರಿ ಆಲಿವರ್ 1935 ಇಸವಿಯ ಸೆಪ್ಟೆಂಬರ್ 10-ರಂದು ಜನಿಸಿದರು ಹಾಗೂ ಒಹಾಯೋದ ಕ್ಲೀವ್‌ಲ್ಯಾಂಡಿನ ಉಪನಗರವಾದ ಮೇಪಲ್ ಹೈಟ್ಸ್-ನಲ್ಲಿ ಬೆಳೆದರು. ತನ್ನ ಬಾಲ್ಯದ ಮನೆಯಲ್ಲಿನ ಕ್ಲಿಷ್ಟ ವಾತಾವರಣದಿಂದ ದೂರವಿರಲು ಅವರು ಹತ್ತಿರವಿದ್ದ ಕಾಡಿಗೆ ಹೋಗುತ್ತಿದ್ದರು; ಅಲ್ಲಿ ಅವರು ಕಡ್ಡಿ ಮತ್ತು ಹುಲ್ಲಿನ ಗುಡಿಸಲುಗಳನ್ನು ಕಟ್ಟುತ್ತಿದ್ದರು, ಕವಿತೆಗಳನ್ನು ಬರೆಯುತ್ತಿದ್ದರು. ಅವರು ಒಹಾಯೋ ಸ್ಟೇಟ್ ಯೂನಿವರ್ಸಿಟಿ ಮತ್ತು ವಸಾರ ಕಾಲೇಜ್-ಗಳಲ್ಲಿ ಓದಿದರಾದರೂ, ಎರಡೂ ಸಂಸ್ಥೆಗಳಿಂದ ಪದವಿಯನ್ನು ಪಡೆಯಲಿಲ್ಲ. ಯುವ ಕವಿಯಾಗಿ, ಆಲಿವರ್-ರವರು ಅಮೇರಿಕಾದ ಖ್ಯಾತ ಕವಿ ಎಡ್ನಾ ಸೇಂಟ್ ವಿನ್ಸೆಂಟ್ ಮಿಲೆ-ಯಿಂದ (Edna St. Vincent Millay) ಆಳವಾಗಿ ಪ್ರಭಾವಿತರಾದರು.
ಅಮೇಕಾದ ಮೇರು ಕವಿ ವಾಲ್ಟ್ ವಿಟ್‌ಮನ್-ರ (Walt Whitman) ಪ್ರಭಾವ ತನ್ನ ಕವಿತ್ವದ ಮೇಲೆ ಗಾಢವಾಗಿ ಹಬ್ಬಿದೆಯೆಂದು ಹೇಳುತ್ತಿದ್ದ ಆಲಿವರ್, ತನ್ನ ವಿಸ್ಮಯ ತುಂಬಿದ, ಭರವಸೆಯ, ಮತ್ತು ಪ್ರಕೃತಿಯ ಬಗ್ಗೆ ಚಿಂತನೆಗಳು ಹಾಗೂ ಅವಲೋಕನಗಳಿಗೆ ಹೆಸರುವಾಸಿಯಾಗಿದ್ದಾರೆ. “ಮೇರಿ ಆಲಿವರ್ ಅವರ ಕಾವ್ಯವು ನಾಗರಿಕತೆಯ ಮಿತಿಮೀರಿದ ಅತಿರೇಕಗಳಿಗೆ, ಅತಿಯಾದ ಕೋಲಾಹಲ ಮತ್ತು ಅಜಾಗರೂಕತೆ ಮತ್ತು ನಮ್ಮ ಸಾಮಾಜಿಕ ಮತ್ತು ವೃತ್ತಿಪರ ಜೀವನದ ‘ಬರೊಕ್’ (ಅತಿ ಅಲಂಕಾರದ) ಸಂಪ್ರದಾಯಗಳಿಗೆ ಒಂದು ಅತ್ಯುತ್ತಮ ಪ್ರತ್ಯೌಷದವಾಗಿದೆ. ಅವರು ಸೂಕ್ಷ್ಮ ಪರಿಜ್ಞಾನದ ಮತ್ತು ಔದಾರ್ಯದ ಕವಿಯಾಗಿದ್ದು, ಅವರ ದೃಷ್ಟಿಯು ನಾವು ತಯಾರಿಸದ ಜಗತ್ತನ್ನು ನಿಕಟವಾಗಿ ನೋಡಲು ಅನುವು ಮಾಡಿಕೊಡುತ್ತದೆ,” ಎಂದು ‘ಹಾರ್ವರ್ಡ್ ರಿವ್ಯೂ’ ಪತ್ರಿಕೆಯ ಒಬ್ಬ ವಿಮರ್ಶಕರು ಬರೆದಿದ್ದಾರೆ.
ಸ್ಪಷ್ಟ ಮತ್ತು ಹೃದಯಸ್ಪರ್ಶಿ ಅವಲೋಕನಗಳು ಮತ್ತು ನೈಸರ್ಗಿಕ ಪ್ರಪಂಚದ ನೋಟಗಳ ಅಭಿವ್ಯಂಜಕ ಬಳಕೆಗೆ ಹೆಸರುವಾಸಿಯಾದ ಅವರ ಕಾವ್ಯವು ರೋಮ್ಯಾಂಟಿಕ್ ಪ್ರಕೃತಿ ಕಾವ್ಯದ ಸಂಪ್ರದಾಯದಲ್ಲಿ ದೃಢವಾಗಿ ಬೇರೂರಿದೆ. ಅವರ ಕಾವ್ಯವು ಆರಂಭದಲ್ಲೇ ವಿಮರ್ಶಾತ್ಮಕ ಗಮನವನ್ನು ಪಡೆಯಿತು ಹಾಗೂ 1983-ರಲ್ಲಿ ಪ್ರಕಟವಾದ ಅವರ ಐದನೇ ಕವನ ಸಂಕಲನ American Primitive ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
1986-ರಲ್ಲಿ ಪ್ರಕಟವಾದ Dream Work, ಪ್ರಕೃತಿಯ ವಿಸ್ಮಯ ಮತ್ತು ನೋವು ಎರಡನ್ನೂ ಅರ್ಥಮಾಡಿಕೊಳ್ಳುವಲ್ಲಿ ಆಲಿವರ್-ರವರ ಹುಡುಕಾಟವನ್ನು ಮುಂದುವರೆಸಿದೆ. ಈ ಸಂಕಲವನ್ನು ಸಮೀಕ್ಷಿಸಿದ ಆಸ್ಟ್ರಿಕರ್, ಪರಭಕ್ಷಕ ಮತ್ತು ಬಲಿಪ್ರಾಣಿಯ ಪ್ರಪಂಚದ ಪ್ರಾಯೋಗಿಕ ಅರಿವನ್ನು ಉಳಿಸಿಕೊಳ್ಳುತ್ತಾ, ಭಾವಪರವಶತೆಯನ್ನು ವಿವರಿಸುವ ಮತ್ತು ಪ್ರಸರಿಸುವ ಕೆಲವೇ ಅಮೇರಿಕನ್ ಕವಿಗಳಲ್ಲಿ ಆಲಿವರ್ ಒಬ್ಬರು ಎಂದು ಪರಿಗಣಿಸುತ್ತಾರೆ. Dream Work, ಅಂತಿಮವಾಗಿ, ಆಲಿವರ್-ರವರು “ನೈಸರ್ಗಿಕ ಪ್ರಪಂಚದಿಂದ ಮತ್ತು ಅದರ ಆಸೆಗಳಿಂದ, ಅಂದರೆ, ‘ಹಸಿವಿನ ಸ್ವರ್ಗ’-ದಿಂದ… ಐತಿಹಾಸಿಕ ಮತ್ತು ವೈಯಕ್ತಿಕ ದುಃಖದ ಜಗತ್ತಿನೊಳಗೆ ಕಾಲಿಡುವ ಸಂಪುಟವಾಗಿದೆ… ಈ ಸಂಕಲನದಲ್ಲಿ ಅವರು ಬದಲಾಯಿಸಲಾಗದಿದ್ದನ್ನು ಸ್ಥಿರವಾಗಿ ಎದುರಿಸುತ್ತಾರೆ.”
ನೈಸರ್ಗಿಕ ಪ್ರಪಂಚದಿಂದ ಹೆಚ್ಚು ವೈಯಕ್ತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಪರಿವರ್ತನೆಯು 1992-ರಲ್ಲಿ ಪ್ರಕಟವಾದ New and Selected Poems-ನಲ್ಲಿ ಸ್ಪಷ್ಟವಾಗಿದೆ. ಈ ಸಂಕಲನವು ರಾಷ್ಟ್ರೀಯ ಪುಸ್ತಕ ಪ್ರಶಸ್ತಿಯನ್ನು (National Book Award) ಗೆದ್ದುಕೊಂಡಿತು. ಈ ಸಂಕಲನ ಆಲಿವರ್-ರವರ ಹಿಂದಿನ ಎಂಟು ಸಂಕಲನಗಳ ಕವನಗಳು ಹಾಗೂ ಹಿಂದೆ ಪ್ರಕಟಿಸದ, ಹೊಸ ಕವನಗಳನ್ನು ಸಹ ಒಳಗೊಂಡಿದೆ. ಈ ಸಂಕಲನವನ್ನು ವಿಮರ್ಶಿಸಿದ ಸೂಸನ್ ಸಾಲ್ಟರ್ ರೆಯ್ನಾಲ್ಡ್ಸ್, ಆಲಿವರ್-ರವರ ಆರಂಭಿಕ ಕವನಗಳು ಹೆಚ್ಚಾಗಿ ಪ್ರಕೃತಿಯ ಕಡೆಗೆ ಆಧಾರಿತವಾಗಿವೆ ಎಂದು ಗಮನಿಸಿದರು, ಆದರೆ ಈ ಕವನಗಳು ‘ತಾನು’ ಅಥವಾ ‘ಸ್ವಯಂ’-ನ ಪರಿಶೀಲನೆಯನ್ನು ಹೆಚ್ಚಾಗಿ ಮಾಡುವುದಿಲ್ಲ ಮತ್ತು ಈ ಕವನಗಳು ಎಂದಿಗೂ ವೈಯಕ್ತಿಕವಾಗಿರಲಿಲ್ಲ. ಇದಕ್ಕೆ ವಿರುದ್ಧವಾಗಿ, ಆಲಿವರ್ ತನ್ನ ನಂತರದ ಕೃತಿಗಳಲ್ಲಿ ನಿರಂತರವಾಗಿ ಕಾಣಿಸಿಕೊಂಡರು. ಆದರೆ ರೆಯ್ನಾಲ್ಡ್ಸ್ ಗಮನಿಸಿದಂತೆ, “ಈ ಸ್ವಯಂ ಪ್ರಜ್ಞೆಯು ಸಮೃದ್ಧವಾದ ಮತ್ತು ಸುಲಲಿತವಾದ ಸೇರ್ಪಡೆಯಾಗಿದೆ.” ಆಲಿವರ್-ರ ಕಾವ್ಯದಲ್ಲಿ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ಮಯದ ವ್ಯಾಪಕ ಸ್ವರವಿದೆ. ಆಲಿವರ್ ಅವರ ಕಾವ್ಯ “ಕವಿ ವಿಲಿಯಮ್ ಬ್ಲೇಕ್-ನ ಕವಿದೃಷ್ಟಿಯ ದಿವ್ಯದರ್ಶನದ ಗುಣ” ಹೊಂದಿವೆ ಎಂದು ರೆಯ್ನಾಲ್ಡ್ಸ್ ಅರಿತರು. New and Selected Poems-ನಲ್ಲಿ ಕಂಡುಬರುವ “When Death Comes” ಎಂಬ ಕವಿತೆಯಲ್ಲಿ ಆಲಿವರ್ ತನ್ನ ವಿಸ್ಮಯದ ಬಯಕೆಯನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ:
ಎಲ್ಲಾ ಮುಗಿದ ನಂತರ, ನಾನು ಹೇಳಲು ಬಯಸುವೆ: ನನ್ನ ಜೀವನವೆಲ್ಲಾ
ನಾನು ವಿಸ್ಮಯದ ಜತೆ ಮದುವೆಯಾದ ಮದುಮಗಳಾಗಿದ್ದೆ.
ಜಗತ್ತನ್ನು ನನ್ನ ಆಲಿಂಗನದಲ್ಲಿ ಸೆಳೆದುಕೊಂಡ ಮದುಮಗನಾಗಿದ್ದೆ.
ಮಾರಿಯಾನ್ ಮೂರ್, ಎಲಿಜಬೆತ್ ಬಿಷಪ್, ಎಡ್ನಾ ಸೇಂಟ್ ವಿನ್ಸೆಂಟ್ ಮಿಲೆ ಮತ್ತು ವಾಲ್ಟ್ ವಿಟ್‌ಮನ್ ಸೇರಿದಂತೆ ಇತರ ಶ್ರೇಷ್ಠ ಅಮೇರಿಕನ್ ಭಾವಗೀತಾತ್ಮಕ ಮತ್ತು ಪ್ರಕೃತಿಯ ಸಂಭ್ರಮಾಚರಣೆ ಮಾಡುವ ಕವಿಗಳ ಜತೆ ಆಲಿವರ್-ರನ್ನು ವಿಮರ್ಶಕರು ಹೋಲಿಸಿದ್ದಾರೆ. 1994-ರಲ್ಲಿ ಪ್ರಕಟವಾದ White Pine ಸಂಕಲನವನ್ನು ವಿಮರ್ಶಿಸುತ್ತಾ ರಿಚರ್ಡ್ ಟಿಲ್ಲಿಂಗ್‌ಹಾಸ್ಟ್ ಹೀಗನ್ನುತ್ತಾರೆ, “ಆಲಿವರ್-ರ ಕಾವ್ಯ ಸಮಕಾಲೀನ ಅಮೇರಿಕನ್ ಕಾವ್ಯದ ಪಂಥಗಳನ್ನು ಮತ್ತು ವಿವಾದಗಳನ್ನು ಮೀರಿ ಮೇಲಕ್ಕೆ ಮತ್ತು ಅವುಗಳ ಸುತ್ತ ತೇಲುತ್ತಿರುತ್ತದೆ. ನೈಸರ್ಗಿಕ ಪ್ರಪಂಚದೊಂದಿಗಿನ ಅವರ ಪರಿಚಿತತೆಯು ಅಸಂಕೀರ್ಣ, ಹತ್ತೊಂಬತ್ತನೇ ಶತಮಾನದ ಭಾವನೆಯನ್ನು ಹೊಂದಿದೆ.”
ಕಾವ್ಯ ಮತ್ತು ಗದ್ಯ, ಎರಡೂ ಪ್ರಕಾರದಲ್ಲಿ ಸಮೃದ್ಧವಾಗಿ ಬರೆದ ಆಲಿವರ್-ರವರು ವಾಡಿಕೆಯಂತೆ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಹೊಸ ಪುಸ್ತಕವೊಂದನ್ನು ಪ್ರಕಟಿಸುತ್ತಿದ್ದರು. ಮಾನವ ಮತ್ತು ನೈಸರ್ಗಿಕ ಪ್ರಪಂಚದ ಮಧ್ಯದ ಸಂಧಿಸ್ಥಾನ, ಹಾಗೆಯೇ ಅಂತಹ ಕೂಡುವಿಕೆಯನ್ನು ವ್ಯಕ್ತಪಡಿಸುವಲ್ಲಿ ಮಾನವ ಪ್ರಜ್ಞೆ ಮತ್ತು ಭಾಷೆಯ ಮಿತಿಗಳು ಅವರ ಮುಖ್ಯ ವಿಷಯಗಳಾಗಿ ಮುಂದುವರಿಯುತ್ತದೆ. “ವಸ್ತುಗಳ ಪ್ರಪಂಚದಿಂದ ಪ್ರತ್ಯೇಕತೆಯ ಮೇಲೆ ಅವಲಂಬಿತವಾಗಿಲ್ಲದ ವ್ಯಕ್ತಿನಿಷ್ಠತೆಯನ್ನು ನಿರ್ಮಿಸುವುದು ಆಲಿವರ್-ರವರ ದಾರ್ಶನಿಕ ಗುರಿಯಾಗಿತ್ತು. ಬದಲಾಗಿ, ಅವರು ಪ್ರಕೃತಿಯ ಮೇಲೆ ಕರ್ತೃತ್ವವನ್ನು ಗೌರವದಿಂದ ಪ್ರದಾನ ಮಾಡುತ್ತಾರೆ, ಆ ಮೂಲಕ ವ್ಯಾಖ್ಯಾನಕ್ಕಾಗಿ ವಿರೋಧವನ್ನು ಅವಲಂಬಿಸಿರದ ಒಂದು ರೀತಿಯ ಅಸ್ಮಿತೆಯನ್ನು ರೂಪಿಸಿದರು,” ಎಂದು ವಿಮರ್ಶಕಿ ಜೆನೆಟ್ ಮೆಕ್‌ನ್ಯೂ ಅಭಿಪ್ರಾಯಪಡುತ್ತಾರೆ.
ಮೇರಿ ಆಲಿವರ್-ರವರು “ನೈಸರ್ಗಿಕ ಜಗತ್ತಿಗೆ ಒಬ್ಬ ಅವಿಶ್ರಾಂತ ಮಾರ್ಗದರ್ಶಿಯಾಗಿದ್ದರು, ವಿಶೇಷವಾಗಿ ಅದರ ಕಡಿಮೆ-ತಿಳಿದಿರುವ ಅಂಶಗಳಿಗಾಗಿ,” ಎಂದು ವಿಮರ್ಶಕ ಮ್ಯಾಕ್ಸಿನ್ ಕುಮಿನ್ ಬರೆದರು. “ಆಲಿವರ್ ಅವರ ಕಾವ್ಯವು ಪ್ರಕೃತಿಯ ಘಟನೆಗಳ ಶಾಂತತೆಯ ಮೇಲೆ ಕೇಂದ್ರೀಕೃತವಾಗಿತ್ತು: ಅವಿಶ್ರಾಂತ ಹಮ್ಮಿಂಗ್‌ಬರ್ಡ್ ಹಕ್ಕಿಗಳು, ಬೆಳ್ಳಕ್ಕಿಗಳು, ನಿಶ್ಚಲ ಕೊಳಗಳು, ಮುದುಡಿ ಕೂತಿರುವ ದೀಪ-ಕಣ್ಣುಗಳ ತೆಳುದೇಹದ ಗೂಬೆಗಳು. ನಾವು ಸಡಿಲವಾಗಿ ‘ಪ್ರಾಣಿ’ ಎಂದು ಕರೆಯುವ ಜೀವಿಗಳಿಂದ ಮನುಷ್ಯನನ್ನು ಪ್ರತ್ಯೇಕಿಸುವ ತೆಳುವಾದ ಪೊರೆಯಾದ ಭೂಮಿ ಮತ್ತು ಆಕಾಶದ ನಡುವಿನ ರೇಖೆಯ ಮೇಲೆ, ವಸ್ತುಗಳ ಅಂಚುಗಳ ಮೇಲೆ ಆಲಿವರ್-ರವರು ನೆಮ್ಮದಿಯಿಂದ ನಿಂತಿದ್ದಾರೆ,” ಎಂದು ಕುಮಿನ್ ಗಮನಿಸಿದರು.
ಆಲಿವರ್-ರವರ ಮೊದಲ ಕವನ ಸಂಕಲನ, No Voyage, and Other Poems, 1965-ರಲ್ಲಿ ಹೊರಬಂತು. ತದನಂತರ, ಅವರು ಹದಿನೈದಕ್ಕೂ ಹೆಚ್ಚಿನ ಕವನ ಸಂಕಲನಗಳನ್ನು ಪ್ರಕಟಿಸಿದರು. 1983-ರಲ್ಲಿ ಪ್ರಕಟವಾದ American Primitive-ಗಾಗಿ ಅವರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದರು, 1990-ರಲ್ಲಿ ಪ್ರಕಟವಾದ House of Light ಸಂಕಲನ Christopher Award ಹಾಗೂ L. L. Winship/PEN New England Award-ಗಳನ್ನು ಪಡೆಯಿತು, ಹಾಗೂ 1992-ರಲ್ಲಿ ಪ್ರಕಟವಾದ New and Selected Poems, Volume One-ಗಾಗಿ National Book Award ಬಹುಮಾನ ಪಡೆದರು. ಇವಲ್ಲದೆ, ಅವರು American Academy of Arts & Letters Award, the Poetry Society of America’s Shelley Memorial Prize ಹಾಗೂ Alice Fay di Castagnola Award-ಗಳನ್ನು ಸಹ ತಮ್ಮ ಜೀವಮಾನದಲ್ಲಿ ಪಡೆದರು.
೧
ಒಂದು ಕೊಳ
ಮೂಲ: The Pond
ಮತ್ತೊಂದು ಬೇಸಿಗೆಯ ಆಗಸ್ಟ್ ತಿಂಗಳು,
ಮತ್ತೊಮ್ಮೆ ನಾನು ಬಿಸಿಲನ್ನು ಕುಡಿಯುತ್ತಿರುವೆ,
ಮತ್ತೊಮ್ಮೆ ಲಿಲಿ ಹೂಗಳು ಹರಡಿವೆ ನೀರಿನ ಅಗಲಕ್ಕೆ.
ನನಗೆ ಗೊತ್ತು ಅವು ಈಗ
ಒಂದನ್ನೊಂದು ಮುಟ್ಟಲು ಬಯಸುತ್ತಿವೆಯೆಂದು.
ಸುಮಾರು ವರ್ಷಗಳಾಯಿತು ಇಲ್ಲಿಗೆ ಬಂದಿಲ್ಲ ನಾನು,
ನನ್ನ ಜೀವನವನ್ನು ಜೀವಿಸುತ್ತಿದ್ದೆ ಈ ವರ್ಷಗಳಲ್ಲಿ.
ಬರೀ ಕರಕರಿಸಲು ಮಾತ್ರ ಗೊತ್ತಿರುವ ಕ್ರೌಂಚ ಪಕ್ಷಿ,
ತನಗೆ ಹಾಡಲು ಬರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಹಾಗೆ,
ನನಗೂ ಹಾಡಲು ಬರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.
ಪ್ರತಿಯೊಂದು ಕೊರಳಿನಿಂದ ಒಂದು ಪುಟ್ಟ ನನ್ನಿ ಸಾಕಾಗುತ್ತೆ.
ಇದು ಹಿಂದಿನಿಂದಲೂ ಹೀಗೆಯೇ ಇತ್ತು,
ಇದು ಇಂದೂ ಹೀಗೆಯೇ ಇದೆ:
ನನ್ನ ಜೀವಮಾನವಿಡೀ ನಾನು
ಆನಂದವೇನೆಂಬುದನ್ನು ಅನುಭವಿಸಿರುವೆ,
ಯಾವುದೆಲ್ಲ ಆನಂದವಲ್ಲವೋ ಅವನ್ನು ಹೊರತಾಗಿ,
ಅವೂ ನೆನಪಿದೆ ನನಗೆ.
ನಮ್ಮಲ್ಲಿ ಪ್ರತಿಯೊಬ್ಬರೂ ಒಂದು ನೆರಳನ್ನು ತೊಟ್ಟಿರುವೆವು.
ಆದರೆ ಈಗ, ಮತ್ತೊಮೆ ಬೇಸಿಗೆ ಬಂದಿದೆ,
ನಾನು ನೋಡುತ್ತಿರುವೆ ಲಿಲಿ ಹೂಗಳು
ಒಂದಕ್ಕೊಂದು ತಲೆಬಾಗುವುದನ್ನು,
ನಂತರ ಗಾಳಿಯ ಮೇಲೆ ಸರಿಯುವುದನ್ನು, ಮತ್ತೆ
ಅದೇ ಆಸೆಯ ಸೆಳೆತ,
ಹತ್ತಿರವಾಗಿ, ಒಂದರಿನ್ನೊಂದರ ಹತ್ತಿರವಾಗಿ.
ಇನ್ನು ಸ್ವಲ್ಪ ಹೊತ್ತಿನಲ್ಲಿ,
ನಾನು ತಿರುಗಿ ನಡೆಯುವೆ ಮನೆಯ ಕಡೆ.
ಮತ್ತೆ, ಯಾರಿಗೆ ಗೊತ್ತು, ನಾನು ಹಾಡುತ್ತಿರಬಹುದು ಕೂಡ.
೨
ಕವಿತಾ ಟೀಚರ್
ಮೂಲ: The Poetry Teacher
ಪಾಠ ಮಾಡಲೆಂದು ಯೂನಿವರ್ಸಿಟಿಯವರು
ನನಗೊಂದು ಸೊಗಸಾದ, ಹೊಸ ಕ್ಲಾಸ್‌ರೂಮೊಂದನ್ನು ಕೊಟ್ಟರು.
ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ.
ನಿಮ್ಮ ನಾಯಿಯನ್ನು ನೀವು ಇಲ್ಲಿಗೆ ತರಬಾರದು.
ನನ್ನ ಕಾಂಟ್ರಾಕ್ಟ್-ನಲ್ಲಿ ಹಾಗೇನೂ ಇಲ್ಲವಲ್ಲ, ನಾನಂದೆ.
(ಇದರ ಬಗ್ಗೆ ನಾನು ಮೊದಲೇ ಖಾತ್ರಿ ಮಾಡಿಕೊಂಡಿದ್ದೆ.)
ಸರಿ, ನಾವು ಮಾತಾಡಿ ಒಂದು ಒಪ್ಪಂದಕ್ಕೆ ಬಂದೆವು,
ಒಂದು ಹಳೆಯ ಕಟ್ಟಡದಲ್ಲಿದ್ದ ಹಳೆಯ ಕ್ಲಾಸ್‌ರೂಮಿಗೆ
ನನ್ನನ್ನು ಕಳಿಸಿದರು.
ಬಾಗಿಲನ್ನು ಅಗಲ ತೆರೆದಿಟ್ಟೆ.
ಒಂದು ಬೋಗುಣಿಯಲ್ಲಿ ನೀರು ತುಂಬಿಸಿಟ್ಟೆ.
ದೂರದಲ್ಲಿ ಮತ್ತಿತ್ತರ ಬೊಗಳುವ, ಬೊಬ್ಬಿಡುವ ಧ್ವನಿಗಳ
ಜತೆ ಬೆನ್-ನ ಧ್ವನಿಯೂ ಕೇಳಿಬರುವುದು.
ಅವರೆಲ್ಲರೂ ಕೂಡಿ ಓಡಿ ಬರುವರು –
ಬೆನ್, ಅವನ ಗೆಳೆಯರು,
ಒಂದೆರಡು ಅಪರಿಚಿತ ನಾಯಿಗಳು,
ಬಾಯಾರಿ, ಖುಷಿಯಾಗಿ.
ನೀರು ಕುಡಿದು, ವಿದ್ಯಾರ್ಥಿಗಳ ಮಧ್ಯೆ ಹೋಗಿ ಬಿದ್ದುಕೊಳ್ಳುವರು.
ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ.
ಅವರೆಲ್ಲರೂ ಬಾಯಾರಿದ, ಆನಂದದ ಕವನಗಳನ್ನು ಬರೆದರು.
೩
ಕಲ್ಲುಗಳಿಗೆ ಭಾವನೆಗಳಿವೆಯೆ?
ಮೂಲ: Do Stones Feel
ಕಲ್ಲುಗಳಿಗೆ ಭಾವನೆಗಳಿವೆಯೆ?
ಕಲ್ಲುಗಳು ತಮ್ಮ ಬಾಳ್ಮೆಯನ್ನು ಪ್ರೀತಿಸುತ್ತವೆಯೆ?
ಅಥವಾ, ಅವುಗಳ ತಾಳ್ಮೆ ಉಳಿದೆಲ್ಲವನ್ನು
ಮುಳುಗಿಸಿಬಿಡುತ್ತದೆಯೆ?
ಕಡಲತೀರದಲ್ಲಿ ನಡೆದುಕೊಂಡು ಹೋಗುವಾಗ
ಕೆಲವು ಬಿಳಿ ಬಣ್ಣದ, ಕಡು ಬಣ್ಣದ, ಬಹು ಬಣ್ಣದ
ಕಲ್ಲುಗಳನ್ನು ಹೆಕ್ಕಿಕೊಳ್ಳುವೆ.
ಚಿಂತೆಮಾಡಬೇಡಿ, ನಾನನ್ನುವೆ,
ನಿಮ್ಮನ್ನೆಲ್ಲಾ ಮತ್ತೆ ಇಲ್ಲೇ ತಂದು ಬಿಡುವೆ,
ಮತ್ತೆ, ಹೇಳಿದಂತೆ ತಂದು ಬಿಡುವೆ.
ಎತ್ತರಕ್ಕೆ ಏರುತ್ತಿರುವ ಮರ,
ಒಂದೊಂದೂ ಒಂದೊಂದು ಕವಿತೆಯಂತಿರುವ
ತನ್ನ ಹಲವಾರು ರೆಂಬೆಗಳ ನೋಡಿ ಖುಷಿಪಡುತ್ತದೆಯೆ?
ತಮ್ಮಲ್ಲಿರುವ ಕಂತೆ ಕಂತೆ ಮಳೆಯನ್ನು ಕಳಚಿ
ಸುರಿಸುವಾಗ ಮೋಡಗಳಿಗೆ ಹಾಯೆನಿಸುತ್ತದೆಯೆ?
ಇಲ್ಲ, ಇಲ್ಲ, ಹೀಗೆ ಸಾಧ್ಯವಿಲ್ಲ,
ಅಂತ ಜಗದ ಹೆಚ್ಚಿನ ಜನರು ಹೇಳುತ್ತಾರೆ.
ಈ ತರಹದ ಒಂದು ಇತ್ಯರ್ಥದ ಬಗ್ಗೆ ಯೋಚಿಸಲೂ ನಾನು ಬಯಸಲ್ಲ.
ಒಂದು ವೇಳೆ ನನ್ನನಿಸಿಕೆ ತಪ್ಪೆಂದಾದರೆ, ಎಷ್ಟೊಂದು ಆಘಾತಕರವದು.
೪
ನವಿರಾದ, ನಮ್ರವಾದ ಕೊರಳಿನ ಗುಬ್ಬಚ್ಚಿಗಾಗಿ, ಧನ್ಯವಾದಗಳೊಂದಿಗೆ
ಮೂಲ: With thanks to the field sparrow, whose voice is so delicate and humble
ನಮ್ಮ ಈ ಸಮಯದ ಚತುರತೆಯ ಸಂಗಡ
ನಾನು ಸಂತೋಷವಾಗಿ ಯಾ ಸುಖವಾಗಿ ಬಾಳುತ್ತಿಲ್ಲ.
ಮಾತೆಲ್ಲ ಬರೀ ಕಂಪ್ಯೂಟರ್-ಗಳ ಬಗ್ಗೆ,
ಸುದ್ದಿಯೆಲ್ಲ ಬರೀ ಬಾಂಬುಗಳು ಹಾಗೂ ರಕ್ತದ ಬಗ್ಗೆ.
ಈ ದಿನ ಬೆಳಗ್ಗೆ, ಹಸಿರಾದ ಬಯಲಿನಲ್ಲಿ,
ಅಡಗಿ ಕೂತಿರುವ ಗುಬ್ಬಿಚ್ಚಿಗೂಡೊಂದನ್ನು ಕಂಡೆ.
ಅದರಲ್ಲಿ ನಾಲ್ಕು ಬೆಚ್ಚನೆಯ ಮಚ್ಚೆಕವಿದ ಮೊಟ್ಟೆಗಳಿದ್ದವು.
ನಾನು ಆ ಮೊಟ್ಟೆಗಳ ಸವರಿದೆನು.
ಮತ್ತೆ ಅಲ್ಲಿಂದ ಮೆತ್ತಗೆ ನಡೆದು ಹೋದೆ,
ನ್ಯೂ ಯಾರ್ಕ್ ನಗರದ ಸಮಸ್ತ ವಿದ್ಯುಚ್ಛಕ್ತಿಗಿಂತಲೂ
ಅದ್ಭುತವಾದುದನ್ನು ಅನುಭವಿಸಿದ ಸಂತಸದಲಿ.
೫
ಚೈನಾ ದೇಶದ ಪ್ರಾಚೀನ ಕವಿಗಳು
ಮೂಲ; The Old Poets of China
ನಾನು ಎಲ್ಲಿ ಹೋದರೂ,
ಈ ಜಗತ್ತು ನನ್ನನ್ನು ಅಟ್ಟಿಸಿಕೊಂಡು ಬರುತ್ತದೆ.
ಅದು ತನ್ನ ಅವಿಶ್ರಾಂತತೆಯನ್ನು ನನಗೆ ನೀಡುತ್ತದೆ.
ನನಗದು ಬೇಡವೆಂದರೆ ಅದು ನಂಬುವುದಿಲ್ಲ.
ಚೈನಾ ದೇಶದ ಪ್ರಾಚೀನ ಕವಿಗಳು
ಯಾಕೆ ದೂರದ ಎತ್ತರದ ಬೆಟ್ಟಗಳೆಡೆಗೆ ಹೋಗಿ,
ಯಾಕೆ ಮಸುಕಾದ ಮಂಜಿನೊಳಗೆ
ಸದ್ದಿಲ್ಲದೆ ಸೇರಿಕೊಂಡರೆಂದು
ಈಗ ನನಗೆ ಅರಿವಾಗಿದೆ.
೬
ಬೇಸಿಗೆಯ ಕವನ
ಮೂಲ: Summer Poem
ಮನೆಯಿಂದ ಹೊರಗೆ ಕಾಲಿಟ್ಟು
ನಾನು ನೋಡಲು ಹೋದೆ
ಹೊಳೆಯುವ ಹಸಿರು ಚರ್ಮ ತೊಟ್ಟಿರುವ
ಒಂದು ಕಪ್ಪೆಯನ್ನು, ಅಂತ ಅಂದುಕೊಳ್ಳಿ,
ನಯವಾದ ಅವಕುಂಠನದಂತೆ ಅವಳ ಮೊಟ್ಟೆಗಳ ಜಾಲ;
ಮತ್ತವಳ ಬಂಗಾರದಂಚಿನ ಕಣ್ಣುಗಳು;
ಮತ್ತೆ ಆ ಕೊಳ,
ಅದರಲ್ಲಿ ಎದ್ದುನಿಂತಿರುವ ಲಿಲಿ ಹೂವುಗಳು;
ಮತ್ತೆ ಆ ಕೊಳದ ಬೆಚ್ಚನೆಯ ದಡಗಳಲ್ಲಿ
ಬೊಟ್ಟುಗಳಂತರಳಿದ ಗುಲಾಬಿ ಬಣ್ಣದ ಹೂವುಗಳು;
ಮತ್ತೆ ಆ ದೀರ್ಘ, ಗಾಳಿಯಿಲ್ಲದ ಮಧ್ಯಾಹ್ನ;
ಅಲ್ಲಿ, ಆ ಬಿಳಿ ಸಾರಸ ಪಕ್ಷಿ
ಆಕಾಶದಿಂದ ಇಳಿದ ಮೋಡದಂತೆ,
ಒಂದು ಮಂದಗತಿಯ ಹೆಜ್ಜೆ ಇಟ್ಟ
ನಂತರ ತುಸು ನಿಂತು ಮತ್ತೆ
ಇನ್ನೊಂದು ಹೆಜ್ಜೆ ಇಡುತ್ತಾ,
ತನ್ನದೇ ಮೃದುಪಾದದ ಕವನ
ಬರೆಯುತ್ತಿದ್ದಾಳವಳು ಈ ನಿಶ್ಚಲ ನೀರಿನುದ್ದಕ್ಕೂ.
೭
ಹಿತ್ತಲಂಗಳ
ಮೂಲ: Backyard
ಸೊರಗಿಹೋದ ಗಿಡ ಕಂಟಿ ಬಳ್ಳಿಗಳನ್ನು
ಕಿತ್ತೆಸೆಯಲು ಸಮಯವಿರಲಿಲ್ಲ,
ಒಣಗಿದ, ಬಾಡಿಹೋದ ಅವುಗಳನ್ನು
ಮೇಲೆ, ಕೆಳಗೆ, ಅಡ್ಡಲಾಗಿ,
ಗಾಳಿ ಹೇಗೆ ತೂಗಾಡಿಸುವುದೋ,
ಅವು ಹಾಗೇ ತೂಗಿ ಬಿದ್ದಿದ್ದವು,
ಬೇಸಿಗೆಯ ಉದ್ದಕ್ಕೂ ಹಿತ್ತಲಂಗಳ ಹಾಗೇ ಇತ್ತು,
ಕತ್ತರಿಸದೆ, ಮತ್ತೂ ದಟ್ಟವಾಗುತ್ತಾ.
ಕಾಲುದಾರಿಗಳು ಪಾಚಿಕಟ್ಟುತ್ತಾ,
ಮತ್ತೂ ಒದ್ದೆಯಾಗುತ್ತಾ, ಕಿರಿಕಿರಿ ಹೆಚ್ಚಿಸುತ್ತಾ,
ಎಷ್ಟೆಂದರೆ, ಒಂದು ಇಲಿ, ಒಂದು ನೆರಳ ಹೊರತು
ಬೇರೆ ಯಾರೂ ಅಲ್ಲಿ ಹೋಗದಷ್ಟು ದಟ್ಟವಾಗಿತ್ತು.
ದಿಕ್ಕಿಲ್ಲದೆ ವ್ಯವಸ್ಥೆಯಿಲ್ಲದೆ ಮೇಲ್ವಿಚಾರಣೆಯಿಲ್ಲದೆ
ಕರಿಬೆರಿಗಿಡಗಳ, ಜರೀಗಿಡಗಳ, ಎಲೆಗಳ ಕಸ
ಅಲ್ಲಿ ಚೆಲ್ಲಾಪಿಲ್ಲಿ ಹರಡಿತ್ತು.
ಹಕ್ಕಿಗಳಿಗಂತೂ ಖುಷಿಯೋ ಖುಷಿ.
೮
ನಿಂತಿದ್ದೆ ನಾನು
ಮೂಲ: I Happened to be Standing
ಪ್ರಾರ್ಥನೆಗಳು ಎಲ್ಲಿಗೆ ಹೋಗುತ್ತವೆ,
ಏನು ಮಾಡುತ್ತವೆ, ಗೊತ್ತಿಲ್ಲ ನನಗೆ.
ಬೆಕ್ಕುಗಳು ಪ್ರಾರ್ಥಿಸುತ್ತವೆಯೆ,
ಬಿಸಿಲಿನಲ್ಲಿ ಅರೆನಿದ್ರೆಯಲ್ಲಿ ಮಲಗಿರುವಾಗ?
ಒಪೊಸಮ್ ಪ್ರಾರ್ಥಿಸುತ್ತದೆಯೆ,
ಅದು ರಸ್ತೆಯ ದಾಟುವಾಗ?
ಸೂರ್ಯಕಾಂತಿ ಹೂವುಗಳು?
ವರುಷದಿಂದ ವರುಷಕ್ಕೆ ವಯಸ್ಸಾಗುತ್ತಿರುವ
ಆ ಹಳೆಯ ಕರಿ ಓಕ್ ಮರ?
ಈ ಲೋಕದ ದಾರಿಯಲ್ಲಿ
ನಡೆದುಹೋಗಬಲ್ಲೆನೆಂದು ಗೊತ್ತು ನನಗೆ,
ದಡದ ಬದಿಯಿಂದ ಅಥವಾ ಮರಗಳ ಕೆಳಗಿನಿಂದ,
ಮನದಲ್ಲಿ ತುಂಬಿಕೊಂಡು ಅಪ್ರಸ್ತುತ ವಿಷಯಗಳನ್ನು,
ಸಂಪುರ್ಣ ಸ್ವ-ಇರುವಿಕೆಯಲ್ಲಿ.
ನಾನು ಜೀವಂತವಾಗಿರುವೆ ಎಂದು
ನಾನು ನಿಶ್ಚಿತವಾಗಿ ಹೇಳಲಾಗದ ಪರಿಸ್ಥಿತಿ ಇದು.
ಪ್ರಾರ್ಥನೆಯೆಂಬುದು ಒಂದು ಕೊಡುಗೆಯಾ,
ಮನವಿಯಾ, ಅಥವಾ ಅದು ಸಂಬಂಧವಿಲ್ಲದ ವಿಷಯವಾ?
ಸೂರ್ಯಕಾಂತಿ ಹೂವುಗಳು ಪ್ರಜ್ವಲಿಸುತ್ತಿವೆ,
ಹಾಗಿರುವುದೇ ಅವುಗಳ ರೂಢಿಯಿರಬಹುದು.
ಬೆಕ್ಕುಗಳು ಗಾಢನಿದ್ರೆಯಲ್ಲಿರಬಹುದು.
ಇಲ್ಲದೇನೂ ಇರಬಹುದು.
ಇವನ್ನೆಲ್ಲ ಯೋಚಿಸುತ್ತಿರುವಾಗ ನಾನು
ನನ್ನ ಮನೆಬಾಗಿಲ ಹೊರಗೆ ನಿಂತಿದ್ದೆ,
ನನ್ನ ನೋಟ್‌ಬುಕ್ ತೆರೆದಿತ್ತು,
ನಾನು ಮುಂಜಾನೆಗಳನ್ನು ಹೀಗೆಯೇ ಆರಂಭಿಸುವೆ,
ಆದೇ ಹೊತ್ತಿಗೆ ಪ್ರಿವೆಟ್ ಗಿಡಗಳ ಬೇಲಿಯಿಂದ
ರೆನ್ ಹಕ್ಕಿಯೊಂದು ಹಾಡಲಾರಂಭಿಸಿತು.
ಅದು ನಿಸ್ಸಂದೇಹವಾಗಿಯೂ ಉತ್ಸಾಹದಲ್ಲಿ ತೊಯ್ದುಹೋಗಿತ್ತು,
ಯಾಕೆ ಅಂತ ಗೊತ್ತಿಲ್ಲ ನನಗೆ. ಆದರೂ, ಯಾಕಾಗಿರಬಾರದು.
ನಿನ್ನ ನಂಬಿಕೆಗಳು ಏನೇ ಇರಲಿ, ಇಲ್ಲದಿರಲಿ,
ಅವುಗಳಿಂದ ನಿನ್ನನ್ನು ದೂರವೊಲಿಸಲ್ಲ ನಾನು.
ಅದು ನಿನ್ನ ಉಸಾಬರಿ.
ಆದರೆ, ನಾನು ರೆನ್ ಹಕ್ಕಿಯ ಗಾಯನದ ಬಗ್ಗೆ ಯೋಚಿಸಿದೆ,
ಇದು ಪ್ರಾರ್ಥನೆಯಲ್ಲವಾದರೆ, ಮತ್ತಿನ್ನೇನಾಗಿರಬಹುದು ಇದು?
ಎಂದು ನಾನು ಸುಮ್ಮನೆ ಹಾಗೇ ಆಲಿಸಿದೆ,
ನನ್ನ ಎತ್ತಿದ ಪೆನ್ನು ಹಾಗೇ ಗಾಳಿಯಲ್ಲಿ ನಿಂತಿತ್ತು.
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.
REading Jaya sRinivasaraos poems has a redeeming effect on ones persona-totally.Look forward to read all these poems in an anthology.