ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು. ಈ ಅದ್ಭುತ ಕಟ್ಟದ ಸುತ್ತಲೂ ಹೆಚ್ಚಿನ ಸಾಂದ್ರತೆಯಲ್ಲಿ ಅಂಗಡಿ ಸಂಕೀರ್ಣಗಳು ಮತ್ತು ಮಾಲ್‌ಗಳನ್ನು ನಿರ್ಮಿಸಿದ ಕಾರಣ ಲಾಭದ ಪರಿಕಲ್ಪನೆ ಯಶಸ್ವಿಯಾಯಿತು.
ದುಬೈ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ
ಅರಬ್ ಎಮಿರೇಟ್ಸ್ ಅಥವಾ ಅರಬ್ ಮುಸ್ಲಿಮ್ ರಾಜರು ಕಟ್ಟಿರುವ ಈ ಎರಡು ಆಧುನಿಕ ಕಟ್ಟಡಗಳು ಜಗತ್ತಿನ ಜನರನ್ನೆಲ್ಲ ತಮ್ಮ ಕಡೆಗೆ ಸೆಳೆಯುತ್ತಿವೆ. ಒಟ್ಟು 22 ಅರಬ್ ದೇಶಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಏಳು ಎಮಿರೇಟ್ಸ್‌ಗಳನ್ನು ಹೊಂದಿದೆ (ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ಉಮ್ ಅಲ್ ಕುವೈನ್ ಮತ್ತು ಫುಜೈರಾ). ಮಧ್ಯಪ್ರಾಚ್ಯದ ಇವರು ಮೂಲವಾಗಿ ಬೆಡೋಯಿನ್‌ಗಳು ಮತ್ತು ಎಮಿರಾಟಿಸ್‌ಗಳ ಮಿಶ್ರಣ, ಮುಖ್ಯವಾಗಿ ಮೆಡಿಟರೇನಿಯನ್ ಮತ್ತು ಬಾಲ್ಕನ್ ಪ್ರದೇಶಗಳು ಮತ್ತು ಉತ್ತರ ಆಫ್ರಿಕಾದ ಯುರೋಪಿಯನ್ನರ ನಿಕಟ ಸಂಬಂಧಿಗಳು ಎಂದು ಹೇಳಲಾಗುತ್ತದೆ.
ಎಮಿರೇಟ್ಸ್ ಎಂದರೆ ಎಮಿರ್‌ನಿಂದ (ಮುಸ್ಲಿಮ್ ರಾಜರು) ಆಳಲ್ಪಡುವ ಪ್ರದೇಶಗಳು. ಯುಎಇ’ಯ ಪ್ರತಿಯೊಂದು ಎಮಿರೇಟ್‌ಅನ್ನು ಪ್ರತ್ಯೇಕ ರಾಜಮನೆತನ ಆಳುತ್ತಿದೆ, ಆದರೆ ಅಬುಧಾಬಿಯ ಎಮಿರ್ ದೇಶದ ಅಧ್ಯಕ್ಷ ಮತ್ತು ರಾಷ್ಟ್ರದ ಮುಖ್ಯಸ್ಥನಾಗಿದ್ದು, ದುಬೈನ ಎಮಿರ್ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಒಂದು ಕಾಲದಲ್ಲಿ ಬೆಂಗಾಡು-ಮರಳುಗಾಡಾಗಿದ್ದ ಜನರೇ ಇಲ್ಲದೆ ಭಣಗುಡುತ್ತಿದ್ದ ಯುಎಇ ವಲಯ ತೈಲ ಸಿಕ್ಕಿದ್ದೆ ಜಗತ್ತಿನ ಐಶ್ವರ್ಯ ದೇಶಗಳಲ್ಲಿ ಒಂದು ಪ್ರದೇಶವಾಗಿ ಮಾರ್ಪಟ್ಟಿತು. 1938ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದ ದಮ್ಮಮ್ ತೈಲ ಕ್ಷೇತ್ರದಲ್ಲಿ ನೆಲಮಟ್ಟದಿಂದ 1,140 ಮೀಟರುಗಳ ಕೆಳಗೆ ತೈಲ ದೊರಕಿತು.
ಯುಎಇ’ಯ ಒಟ್ಟು ಭೂಪ್ರದೇಶ 83,600 ಚ.ಕಿ.ಮೀ.ಗಳು, ಅಂದರೆ ನಮ್ಮ ಕರ್ನಾಟಕದ ಸುಮಾರು 40% ನೆಲ, ಜನಸಂಖ್ಯೆ ಒಂದು ಕೋಟಿಗಿಂತ ಕಡಿಮೆ. ಹೊರಗಿನಿಂದ ಬಂದಿರುವ 59.4% ಜನರು (38.2 ಭಾರತೀಯರು, 9.5% ಬಾಂಗ್ಲಾ, 9.4% ಪಾಕಿಸ್ತಾನಿಗಳು) ಇಲ್ಲಿ ದುಡಿಯುತ್ತಿದ್ದಾರೆ. ಇನ್ನು ಧರ್ಮಗಳ ಲೆಕ್ಕಾಚಾರಕ್ಕೆ ಬಂದರೆ ಯುಎಇ’ಯಲ್ಲಿ 76% ಇಸ್ಲಾಮಿ, 9% ಕ್ರಿಶ್ಚಿಯನ್ ಮತ್ತು 6% ಹಿಂದೂಗಳು ಇದ್ದಾರೆ. ಸರ್ಕಾರ ಫೆಡರಲ್ ಇಸ್ಲಾಮಿಕ್ ಅರೆ ಸಾಂವಿಧಾನಿಕ ರಾಜಪ್ರಭುತ್ವವಾಗಿದೆ. ಈ ಪ್ರದೇಶ 1820-1892 ರವರೆಗೆ ಬ್ರಿಟಿಷರ ಆಳ್ವಿಕೆಯಲ್ಲಿದ್ದು 1971ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು.
ಯುಎಇ ದೇಶದ ದುಬೈ ನಗರದಲ್ಲಿರುವ ಬುರ್ಜ್ ಖಲೀಫಾ ಜಗತ್ತಿನ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿದೆ. ಇದರ ಒಟ್ಟು ಎತ್ತರ 2,722 ಅಡಿಗಳು. 2009ರಲ್ಲಿ ಬುರ್ಜ್ ಖಲೀಫಾ ಅಗ್ರಸ್ಥಾನ ಪಡೆದ ನಂತರ ಜಗತ್ತಿನ ಅತಿ ಎತ್ತರದ ರಚನೆ ಮತ್ತು ಕಟ್ಟಡವಾಗಿದ್ದ 101 ಅಂತಸ್ತುಗಳ `ತೈಪೆ-101′ ಕಟ್ಟಡದ ದಾಖಲೆಯನ್ನು ಹಿಂದಕ್ಕೆ ಹಾಕಿತು. 2009ರಲ್ಲಿ ಇದನ್ನು ಕಟ್ಟಿ ಮುಗಿಸಿದಾಗ 200 ಅಂತಸ್ತುಗಳ ಈ ಕಟ್ಟಡದಲ್ಲಿ 160 ವಾಸಯೋಗ್ಯ ಅಂತಸ್ತುಗಳಿದ್ದು 900 ಫ್ಲ್ಯಾಟ್‌ಗಳಲ್ಲಿ 10,000 ಜನರು ಏಕಕಾಲಕ್ಕೆ ವಾಸಿಸಬಹುದಾಗಿದೆ. ಬುರ್ಜ್ ಖಲೀಫಾ ಕಟ್ಟಡಕ್ಕೆ 150 ಅಡಿಗಳ ಅಡಿಪಾಯ ಹಾಕಲಾಯಿತು. ಈ ಗಗನಚುಂಬಿ ಕಟ್ಟಡ ಗಂಟೆಗೆ 240 ಕಿ.ಮೀ.ಗಳ ವೇಗ ಬೀಸುವ ಗಾಳಿಯನ್ನು ಮತ್ತು ಭೂಕಂಪನವಾದರೆ ರಚ್ಚರ್ ಮಾಪನದಲ್ಲಿ 7 ಪ್ರಮಾಣದ ಭೂಕಂಪನ ತಡೆದುಕೊಳ್ಳುತ್ತದೆ ಎನ್ನಲಾಗಿದೆ. ದುಬೈ ನಗರ ಮಧ್ಯಮ ಮತ್ತು ಕಡಿಮೆ ಭೂಕಂಪನ ವಲಯದಲ್ಲಿ ನೆಲೆಸಿದ್ದು, ಗಲ್ಫ್ ಕರಾವಳಿಯಲ್ಲಿ ಸಮುದ್ರಮಟ್ಟದಿಂದ ಕೇವಲ 50 ಅಡಿಗಳ ಎತ್ತರದಲ್ಲಿದೆ.
2004ರಲ್ಲಿ ಅಡಿಪಾಯ ಹಾಕಿ 2009ರಲ್ಲಿ ಕಟ್ಟಡವನ್ನು ಪೂರ್ಣಗೊಳಿಸಲಾಯಿತು. ಇದರ ಪ್ರಾಥಮಿಕ ರಚನೆಯನ್ನು ಬಲವರ್ಧಿತ ಕಾಂಕ್ರೀಟ್ ಮತ್ತು ಕಟ್ಟಡದ ಕೆಲವು ರಚನಾತ್ಮಕ ಯೋಜನೆಯನ್ನು ಪೂರ್ವ ಬರ್ಲಿನ್‌ನಲ್ಲಿರುವ ಗಣರಾಜ್ಯದ ಅರಮನೆ ಮತ್ತು ಪೂರ್ವ ಜರ್ಮನಿಯ ಸಂಸತ್ತಿನಿಂದ ಪ್ರೇರಣೆ ಪಡೆಯಲಾಗಿದೆ. ದುಬೈ ಡೌನ್‌ಟೌನ್ ಎಂಬ ಹೊಸ ಅಭಿವೃದ್ಧಿಯ ಒಂದು ಭಾಗವಾಗಿ ಕಟ್ಟಡವನ್ನು 2010ರಲ್ಲಿ ತೆರೆಯಲಾಯಿತು. ಇದನ್ನು ದೊಡ್ಡ ಪ್ರಮಾಣದಲ್ಲಿ ಮಿಶ್ರ-ಬಳಕೆಯ ಅಭಿವೃದ್ಧಿಯ ಕೇಂದ್ರಬಿಂದುವಾಗಿ ವಿನ್ಯಾಸಗೊಳಿಸಲಾಯಿತು. ಯುಎಇ ಸರ್ಕಾರ, ತೈಲ ಆಧಾರಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಮತ್ತು ದುಬೈಗೆ ಅಂತರರಾಷ್ಟ್ರೀಯಯ ಮನ್ನಣೆಯನ್ನು ಪಡೆಯಲು ಈ ಕಟ್ಟಡವನ್ನು ನಿರ್ಮಿಸುವ ನಿರ್ಧಾರ ತೆಗೆದುಕೊಂಡಿತು. ಯುಎಇ ಮಾಜಿ ಅಧ್ಯಕ್ಷ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ ಅವರ ಗೌರವಾರ್ಥವಾಗಿ ಕಟ್ಟಡಕ್ಕೆ ಅವರ ಹೆಸರನ್ನು ಇಡಲಾಯಿತು. ಅಬುಧಾಬಿ ಮತ್ತು ಯುಎಇ ಸರ್ಕಾರಗಳು ದುಬೈಗೆ ಹಣವನ್ನು ಸಾಲವಾಗಿ ನೀಡಿದವು.
ಬುರ್ಜ್ ಖಲೀಫಾವನ್ನು ಸ್ಕಿಡ್‌ಮೋರ್, ಓವಿಂಗ್ಸ್ ಮತ್ತು ಮೆರಿಲ್‌ನ ಆಡ್ರಿಯನ್ ಸ್ಮಿತ್ ನೇತೃತ್ವದ ತಂಡವು ವಿನ್ಯಾಸಗೊಳಿಸಿತು. ಚಿಕಾಗೋದಲ್ಲಿನ ಸಿಯರ್ಸ್ ಗೋಪುರವನ್ನು ವಿನ್ಯಾಸಗೊಳಿಸಿದ ಸಂಸ್ಥೆಯು ವಿಶ್ವದ ಅತಿ ಎತ್ತರದ ಕಟ್ಟಡವನ್ನು ನಿರ್ಮಿಸಿದ ಹಿಂದಿನ ದಾಖಲೆಯನ್ನು ಹೊಂದಿತ್ತು. ಯೋಜನೆಯ ವಾಸ್ತುಶಿಲ್ಪವನ್ನು ಮೇಲ್ವಿಚಾರಣೆ ಮಾಡಲು ಎನ್‌ಒಆರ್‌ಆರ್ ಗ್ರೂಪ್ ಕನ್ಸಲ್ಟೆಂಟ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನೊಂದಿಗೆ ಮೇಲ್ವಿಚಾರಣ ಎಂಜಿನಿಯರ್ ಆಗಿ ಹೈದರ್ ಕನ್ಸಲ್ಟಿಂಗ್‌ಅನ್ನು ಆಯ್ಕೆ ಮಾಡಲಾಯಿತು. ವಿನ್ಯಾಸವನ್ನು ಸಮ್ರಾದ (ಇರಾಕ್) ಗ್ರೇಟ್ ಮಸೀದಿಯಲ್ಲಿರುವ ಇಸ್ಲಾಮಿಕ್ ವಾಸ್ತುಶಿಲ್ಪದಿಂದ ಪಡೆದುಕೊಳ್ಳಲಾಯಿತು. ವೈ-ಆಕಾರದ ತ್ರಿಪಕ್ಷೀಯ ನೆಲದ ರೇಖಾಗಣಿತದೊಂದಿಗೆ ಕಟ್ಟಡವನ್ನು ಅತ್ಯುತ್ತಮವಾಗಿ ನಿರ್ಮಿಸಲು ವಿನ್ಯಾಸಗೊಳಿಸಲಾಗಿದೆ.
ಕಟ್ಟಡದ ಎತ್ತರವನ್ನು ಬೆಂಬಲಿಸುವುದಕ್ಕೆ ಬಟ್ರೆಸ್ಡ್ (ಗೋಡೆ) ಸೆಂಟ್ರಲ್ ಕೋರ್ ಮತ್ತು ರೆಕ್ಕೆಗಳನ್ನು ಬಳಸಲಾಗಿದೆ. ಈ ವಿನ್ಯಾಸವನ್ನು ಗೋಪುರದ ಅರಮನೆ-3 (ಅಂತಸ್ತು) ರಿಂದ ಪಡೆಯಲಾಗಿದೆಯಾದರೂ, ಬುರ್ಜ್ ಖಲೀಫಾದ ಮಧ್ಯಭಾಗವು ಪ್ರತಿಯೊಂದು ರೆಕ್ಕೆಯ ಒಳಗೆ ಹೊರಹೋಗುವ ಮೆಟ್ಟಿಲುಗಳನ್ನು ಹೊರತುಪಡಿಸಿ ಎಲ್ಲಾ ಲಂಬ ಸಾರಿಗೆಯನ್ನು ಪ್ರಸ್ತುತಪಡಿಸಲಾಗಿದೆ. ಈ ರಚನೆ ದುಬೈನ ಬೇಸಿಗೆ ಉಷ್ಣತೆಯನ್ನು ತಡೆದುಕೊಳ್ಳಲು ಕ್ಲಾಡಿಂಗ್ (ಪದರುಗಳು) ವಿನ್ಯಾಸದ ವ್ಯವಸ್ಥೆಯನ್ನು ಹೊಂದಿದೆ. ಬುರ್ಜ್ ಖಲೀಫಾ ಕಟ್ಟಡ ಒಟ್ಟು 57 ಎಲಿವೇಟರ್‌ಗಳು ಮತ್ತು 8 ಎಸ್ಕಲೇಟರ್‌ಗಳನ್ನು ಒಳಗೊಂಡಿದೆ.
ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು. ಈ ಅದ್ಭುತ ಕಟ್ಟದ ಸುತ್ತಲೂ ಹೆಚ್ಚಿನ ಸಾಂದ್ರತೆಯಲ್ಲಿ ಅಂಗಡಿ ಸಂಕೀರ್ಣಗಳು ಮತ್ತು ಮಾಲ್‌ಗಳನ್ನು ನಿರ್ಮಿಸಿದ ಕಾರಣ ಲಾಭದ ಪರಿಕಲ್ಪನೆ ಯಶಸ್ವಿಯಾಯಿತು. ದುಬೈ ಡೌನ್‌ಟೌನ್ ಸುತ್ತಮುತ್ತಲಿನ ಮಾಲ್‌ಗಳು, ಹೋಟಲುಗಳು ಮತ್ತು ವ್ಯಾಪಾರ ಸಂಕೀರ್ಣಗಳು ಒಟ್ಟಾರೆಯಾಗಿ ಹೆಚ್ಚಿನ ಆದಾಯವನ್ನು ಗಳಿಸತೊಡಗಿದವು. ಆದರೆ ಬುರ್ಜ್ ಖಲೀಫಾ ಯಾವುದೇ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಬುರ್ಜ್ ಖಲೀಫಾದ ಕಟ್ಟಡ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಪೂರ್ವ ಮತ್ತು ದಕ್ಷಿಣ ಏಷ್ಯಾದಿಂದ ವಲಸೆ ಬಂದ ಕಾರ್ಮಿಕರಿಗೆ ಕಡಿಮೆ ವೇತನ ನೀಡುವುದು, ಕೆಲವೊಮ್ಮೆ ಅವರ ಪಾಸ್‌ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎನ್ನುವ ದೂರುಗಳು ಕೇಳಿಬಂದವು.
ಅಂತು ದುಬೈ ಕೊನೆಗೆ ಜಗತ್ತಿನ ಅತ್ಯಂತ ಆಕರ್ಷಕ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿತು. ಬುರ್ಜ್ ಖಲೀಫಾ, ಬುರ್ಜ್ ಆಲ್ ಅರಬ್, ಪಾಮ್ ಜುಮೇರಾ, ಕೃತಕ ನಿರ್ಮಿತ ದ್ವೀಪ, ಭವಿಷ್ಯದ ವಸ್ತುಸಂಗ್ರಹಾಲಯ, ದುಬೈ ಅಕ್ವೇರಿಯಂ, ಅಟ್ಲಾಂಟಿಸ್ ಅಕ್ವಾವೆಂಚರ್ ಮತ್ತು ಸೀಕ್ರೇಟ್ ಚೇಂಬರ್, ಸ್ಕೀದುಬೈ, ದುಬೈ ಮರೀನಾ, ದುಬೈ ಪ್ರೇಮ್, ಮಿರಾಕಲ್ ಗಾರ್ಡನ್ ಇನ್ನೂ ಹಲವಾರು ಆಕರ್ಷಕ ಯಾತ್ರಾ ಸ್ಥಳಗಳನ್ನು ನಿರ್ಮಿಸಲಾಯಿತು. ಅಂದರೆ ಬೆಂಗಾಡು-ಮರಳುಗಾಡಿನಲ್ಲಿ ದ್ವೀಪ, ಸರೋವರ, ಗಗನಚುಂಬಿ ಕಟ್ಟಡಗಳು, ಉದ್ಯಾನವನಗಳೊಂದಿಗೆ ಎಲ್ಲಾ ರೀತಿಯ ಯಾತ್ರಾ ಆಕರ್ಷಣೆಗಳನ್ನು ಸೃಷ್ಟಿಸಲಾಯಿತು. 2022ರಲ್ಲಿ 14.36 ದಶಲಕ್ಷ ಜನರು ದುಬೈ ಪಟ್ಟಣಕ್ಕೆ ಭೇಟಿ ನೀಡಿದರು. ಮರಳುಗಾಡನ್ನು ಕೂಡ ಉದ್ಯಾನವನ ಮಾಡಬಹುದು ಎನ್ನುವುದಕ್ಕೆ ದುಬೈ ಒಂದು ಒಳ್ಳೆಯ ಉದಾಹರಣೆಯಾಗಿದೆ.
ಪ್ರಸ್ತುತ ಜಗತ್ತಿನ ಹೆಚ್ಚೆಚ್ಚು ದೇಶಗಳ ಜನರು ಧರ್ಮಗಳ ಅಮಲೇರಿಸಿಕೊಂಡು ಮಾರಾಮಾರಿಯಲ್ಲಿ ತೊಡಗಿಕೊಂಡಿದ್ದಾರೆ. ಅದೇವೇಳೆ ಕೆಲವು ದೇಶಗಳು, ದೇಶದೇಶಗಳ ಮಧ್ಯೆ ಜಗಳ ತಂದಿಟ್ಟು ಲಾಭ ಪಡೆದುಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡಿದ್ದರೆ, ಇನ್ನಷ್ಟು ದೇಶಗಳು ಈ ಎರಡನ್ನೂ ಮರೆತು ದೇಶ ಕಟ್ಟುವ ಕೆಲಸವನ್ನು ಮಾಡುತ್ತಿವೆ. ಇನ್ನು ಅನೇಕ ಭಯೋತ್ಪಾದನೆ ಗುಂಪುಗಳು ಧರ್ಮಾಧಾರಿತ/ಜನಾಂಗ ಆಧಾರಿತ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿವೆ. ಯುಎಇ ಅಂತಹ ಕೆಲವು ದೇಶಗಳು ತಾನು, ತನ್ನ ದೇಶದ ಅಭಿವೃದ್ಧಿಯ ಬಗ್ಗೆ ಕೇಂದ್ರೀಕೃತಗೊಂಡು ಕೆಲಸ ಮಾಡುತ್ತಿವೆ. ಈಗ ಭಾರತವೂ ಧರ್ಮಾಧಾರಿತ ಅಮಲನ್ನು ನೆತ್ತಿಗೆ ಏರಿಸಿಕೊಳ್ಳುತ್ತಿದೆ. ಧರ್ಮಗಳನ್ನು ನೆತ್ತಿಗೇರಿಸಿಕೊಂಡ ಯಾವ ದೇಶವೂ ಇತಿಹಾಸದಲ್ಲಿ ನೆಮ್ಮದಿಯಾಗಿಲ್ಲ.
ಕನಿಷ್ಠ 10 ದೇಶಗಳಾದರು ತೀವ್ರ ಇಸ್ಲಾಮಿಕ್ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿವೆ: ಅಫ್ಘಾನಿಸ್ತಾನ, ಈಜಿಫ್ಟ್, ಇರಾಕ್, ಇರಾನ್, ಪ್ಯಾಲೆಸ್ಟೈನ್, ಲಿಬಿಯಾ, ನೈಜೀರಿಯಾ, ಪಾಕಿಸ್ತಾನ, ಸೊಮಾಲಿಯಾ ಮತ್ತು ಸಿರಿಯಾ. ಇನ್ನು ಅಮೆರಿಕ, ರಷ್ಯಾ, ಚೀನಾ, ಇಸ್ರೇಲ್, ಉತ್ತರ ಕೊರಿಯಾ ಇತ್ಯಾದಿ ದೇಶಗಳ ಸರ್ಕಾರಗಳೆ ಭಯೋತ್ಪಾದಕರ ಸಹಾಯಕ ಸರ್ಕಾರಗಳಾಗಿವೆ. 2023ರ ಜಾಗತಿಕ ಶಾಂತಿಯುತ ದೇಶಗಳ ಸೂಚ್ಯಂಕ ನಕ್ಷೆಯಲ್ಲಿ ಯು.ಕೆ. 37, ಚೀನಾ 80, ಭಾರತ 126, ಅಮೆರಿಕ 131, ಪಾಕಿಸ್ತಾನ 146 ಮತ್ತು ರಷ್ಯಾ 158ನೇ ಸ್ಥಾನದಲ್ಲಿವೆ. ಮೊದಲ 10 ಶಾಂತಿಯುತ ದೇಶಗಳೆಂದರೆ, ಐಸ್‌ಲ್ಯಾಂಡ್, ಡೆನ್ಮಾರ್ಕ್, ಐರ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ಸಿಂಗಾಪುರ್, ಪೋರ್ಚುಗಲ್, ಸ್ಲೋವೇನಿಯಾ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್. ಭಾರತ ಸದ್ಯಕ್ಕೆ 126ನೇ ಸ್ಥಾನ ಪಡೆದುಕೊಂಡಿದ್ದು ಮುಂದೆ ಎಲ್ಲಿಗೆ ತಲುಪುತ್ತದೊ ನೋಡಬೇಕು.
ಅಬುಧಾಬಿಯ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿ
ಈ ಮಸೀದಿ ಯುಎಇ ರಾಜಧಾನಿ ಅಬುಧಾಬಿಯಲ್ಲಿದ್ದು ಇದು ಜಗತ್ತಿನ ಮೂರನೇ ದೊಡ್ಡ ಮಸೀದಿಯಾಗಿದೆ. ಮೊದಲ ಮತ್ತು ಎರಡನೆ ದೊಡ್ಡ ಮಸೀದಿಗಳಾದ ಅಲ್ ಹರಾಮ್ ಮಸೀದಿ, ಮೆಕ್ಕಾ ಮತ್ತು ಅಲ್ ಮಸೀದಿ-ನಬಾಲ್, ಮದಿನಾ ಪಟ್ಟಣಗಳಲ್ಲಿವೆ. ಈ ಎರಡೂ ಪಟ್ಟಣಗಳು ಸೌದಿ ಅರೇಬಿಯಾದಲ್ಲಿವೆ. ಇಂಡೋನೇಷ್ಯಾದ ಸುರಕರ್ತದಲ್ಲಿ ಗ್ರ್ಯಾಂಡ್ ಮಸೀದಿಯ ಚಿಕಣಿ ಪ್ರತಿಕೃತಿ ಇದೆ.
ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯನ್ನು 1994 ಮತ್ತು 2007ರ ನಡುವೆ ನಿರ್ಮಿಸಿ ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಉದ್ಘಾಟಿಸಲಾಯಿತು. ಕಟ್ಟಡದ ಸಂಕೀರ್ಣವು ಸರಿಸುಮಾರು 950-1,380 ಅಡಿಗಳಿದ್ದು 30 ಎಕರೆಗಳಿಗಿಂತ ಹೆಚ್ಚಿನ ಪ್ರದೇಶವನ್ನು ಆವರಿಸಿಕೊಂಡಿದೆ. ಕಟ್ಟಡದ ಮುಖ್ಯ ಅಕ್ಷವು ನಿಜವಾದ ಪಶ್ಚಿಮ ದಿಕ್ಕಿನಿಂದ ಸುಮಾರು 12 ಡಿಗ್ರಿಗಳು ದಕ್ಷಿಣಕ್ಕೆ ತಿರುಗಿಕೊಂಡಿದೆ, ಅಂದರೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ ಕಾಬಾದ ದಿಕ್ಕಿಗೆ ಅದನ್ನು ಜೋಡಿಸಲಾಗಿದೆ. ಈ ಯೋಜನೆಯನ್ನು ಯುಎಇ’ಯ ಮಾಜಿ ಅಧ್ಯಕ್ಷ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಪ್ರಾರಂಭಿಸಿದರು. ಇವರು ಮಸೀದಿಯನ್ನು ಇಸ್ಲಾಮಿಕ್ ಜಗತ್ತಿನ ಸಾಂಸ್ಕೃತಿಕ ವೈವಿಧ್ಯದ ವಾಸ್ತುಶಿಲ್ಪ, ಕಲೆಯ ಐತಿಹಾಸಿಕತೆ ಮತ್ತು ಆಧುನಿಕ ಮೌಲ್ಯಗಳೊಂದಿಗೆ ಒಂದುಗೂಡಿಸುವ ರಚನೆಯನ್ನು ರೂಪಿಸಲು ಬಯಸಿದ್ದರು. 2004ರಲ್ಲಿ ಶೇಖ್ ಜಾಯೆದ್ ನಿಧನರಾಗಿ ಅವರನ್ನು ಮಸೀದಿಯ ಅಂಗಳದಲ್ಲಿ ಸಮಾಧಿ ಮಾಡಲಾಯಿತು.
ಮಸೀದಿಯ ಪಶ್ಚಿಮ ಮಿನಾರ್‌ಗಳಲ್ಲಿ ಕಛೇರಿಗಳಿದ್ದು ದಿನನಿತ್ಯದ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತವೆ ಮತ್ತು ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಂದರ್ಶಕರ ಕಾರ್ಯಕ್ರಮಗಳ ಮೂಲಕ ಕಲಿಕೆ ಮತ್ತು ಅನ್ವೇಷಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈಶಾನ್ಯದ ಮಿನಾರ್‌ನಲ್ಲಿರುವ ಪುಸ್ತಕ ಭಂಡಾರವು ಶಾಸ್ತ್ರೀಯ ಪುಸ್ತಕಗಳು ಮತ್ತು ಇಸ್ಲಾಮಿಕ್ ವಿಷಯಗಳ ಶ್ರೇಣಿಯನ್ನು ತಿಳಿಸುವ ಪ್ರಕಟಣೆಗಳೊಂದಿಗೆ ಸೇವೆ ಸಲ್ಲಿಸುತ್ತದೆ. ವಿಶೇಷವಾಗಿ ವಿಜ್ಞಾನ ವಿಷಯಗಳು, ನಾಗರಿಕತೆ, ಕ್ಯಾಲಿಗ್ರಫಿ, ಕಲೆಗಳು, ನಾಣ್ಯಗಳು ಮತ್ತು ಕೆಲವು ಅಪರೂಪದ ಪ್ರಕಟಣೆಗಳೂ ಇವೆ. ಅರೇಬಿಕ್, ಇಂಗ್ಲಿಷ್, ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಜರ್ಮನ್ ಮತ್ತು ಕೊರಿಯನ್ ಸೇರಿದಂತೆ ಅನೇಕ ಭಾಷೆಗಳಲ್ಲಿ ರಚಿಸಿರುವ ಗ್ರಂಥಗಳಿವೆ.
ವಿನ್ಯಾಸ ಮತ್ತು ನಿರ್ಮಾಣ: ಮಸೀದಿಯನ್ನು ಸಿರಿಯನ್ ವಾಸ್ತುಶಿಲ್ಪಿ ಯೂಸೆಫ್ ಅಬ್ದೆಲ್ಕೆ ಅವರ ನಿರ್ವಹಣೆಯಲ್ಲಿ ಸಿರಿಯಾದ ಇತರ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದರು. ಇವರು ಯೂಸೆಫ್ ಅಲೆಕ್ಸಾಂಡ್ರಿಯಾದಲ್ಲಿನ ಅಬು ಅಲ್-ಅಬ್ಬಾಸ್ ಅಲ್-ಮುರ್ಸಿ ಮಸೀದಿ, 1920ರ ದಶಕದ ಮಾರಿಯೋ ರೊಸ್ಸಿ; ಪಾಕಿಸ್ತಾನದ ಲಾಹೋರ್‌ನಲ್ಲಿರುವ ಬಾದ್‌ಶಾಹಿ ಮಸೀದಿ ಮತ್ತು ಪರ್ಷಿಯನ್, ಮೊಘಲ್, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪಗಳ ಸ್ಫೂರ್ತಿ ಪಡೆದುಕೊಂಡರು. ಮಸೀದಿಯ ಗುಮ್ಮಟದ ವಿನ್ಯಾಸ ಮತ್ತು ನೆಲಹಾಸು ಬಾದ್‌ಶಾಹಿ ಮಸೀದಿಯಿಂದ ಪ್ರೇರಿತವಾಗಿದೆ. ಇದರ ಕಮಾನುಗಳು ಸರ್ವೋತ್ಕೃಷ್ಟವಾಗಿ ಮೊರಿಶ್ ಮತ್ತು ಅದರ ಮಿನಾರುಗಳ ರೂಪರೇಷೆಗಳಾಗಿವೆ.
ಇಟಾಲಿಯನ್ ಗುತ್ತಿಗೆದಾರರಾದ ಇಂಪ್ರೆಗಿಲೊ ಮತ್ತು ರಿಜ್ವಾನಿ ಡಿ ಎಚರ್ ನಡುವಿನ ಜಂಟಿ ಉದ್ಯಮದಲ್ಲಿ, 3000ಕ್ಕೂ ಹೆಚ್ಚು ಕಾರ್ಮಿಕರು ಮತ್ತು 38 ಉಪ-ಗುತ್ತಿಗೆ ಕಂಪನಿಗಳು ಮಸೀದಿಯ ನಿರ್ಮಾಣದಲ್ಲಿ ತೊಡಗಿಕೊಂಡಿದ್ದವು. ಅಮೃತಶಿಲೆ, ಚಿನ್ನ, ಅರೆ-ಪ್ರಶಸ್ತ ಕಲ್ಲುಗಳು, ಹರಳುಗಳು ಮತ್ತು ಪಿಂಗಾಣಿ ಸೇರಿದಂತೆ ದೀರ್ಘಾವಧಿಯ ಗುಣಗಳುಳ್ಳ ನೈಸರ್ಗಿಕ ವಸ್ತುಗಳನ್ನು ಅದರ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಕುಶಲಕರ್ಮಿಗಳು ಮತ್ತು ಸಾಮಗ್ರಿಗಳು ಸಿರಿಯಾ ಸೇರಿದಂತೆ ಅನೇಕ ದೇಶಗಳಿಂದ ಬಂದವು. ವಿಶೇಷವಾಗಿ ಡಮಾಸ್ಕಸ್ ಮತ್ತು ಅಲೆಪ್ಪೊ, ಭಾರತ, ಇಟಲಿ, ಜರ್ಮನಿ ಟರ್ಕಿ, ಪಾಕಿಸ್ತಾನ, ಮಲೇಷಿಯಾ, ಇರಾನ್, ಚೀನಾ, ಯು.ಕೆ., ನ್ಯೂಜಿಲ್ಯಾಂಡ್, ಉತ್ತರ ಮ್ಯಾಸಿಡೋನಿಯಾ ಮತ್ತು ಯುಎಇ ಗಳಿಂದಲೂ ಬಂದವು.
ಮಸೀದಿಯಲ್ಲಿ ಒಂದೇ ಸಲಕ್ಕೆ 40,100 ಜನರು ಕುಳಿತು/ನಿಂತು ಪ್ರಾರ್ಥಿಸಬಹುದು. ಮುಖ್ಯ ಮತ್ತು ವಿಶೇಷ ಪ್ರಾರ್ಥನಾ ಮಂದಿರದಲ್ಲಿ 7000 ಜನರು ಪ್ರಾರ್ಥಿಸಬಹುದು. ಇವುಗಳೊಂದಿಗೆ ಇನ್ನೆರಡು ಚಿಕ್ಕ ಮಂದಿರಗಳಿದ್ದು (ಪ್ರತಿಯೊಂದರಲ್ಲಿ 1500 ಜನರು ಸೇರಬಹುದು) ಅವುಗಳಲ್ಲಿ ಒಂದು ಮಹಿಳೆಯರ ಪ್ರಾರ್ಥನಾ ಮಂದಿರವಿದೆ. ಅಂಗಳದಲ್ಲಿ ನಾಲ್ಕು ಮಿನಾರುಗಳಿದ್ದು ಅವುಗಳ ಎತ್ತರ 351 ಅಡಿಗಳು. ಪ್ರಾಂಗಣವು ಹೂವಿನ ವಿನ್ಯಾಸಗಳೊಂದಿಗೆ ರೂಪಿಸಲಾಗಿದ್ದು ಅದರ ಒಟ್ಟು ವಿಸ್ತಾರ 1,80,000 ಚದರ ಅಡಿಗಳು. ಇದು ಅಮೃತಶಿಲೆಯ ಮೊಸಾಯಿಕ್‌ನಿಂದ ಸಿಂಗರಿಸಲಾದ ಜಗತ್ತಿನ ಬಹುದೊಡ್ಡ ಪ್ರಾಂಗಣವಾಗಿದೆ. ಪ್ರಾಂಗಣದಲ್ಲಿ ಜಗತ್ತಿನ ಅತಿದೊಡ್ಡ ಉಣ್ಣೆ ಕಾರ್ಪೆಟ್ ಹಾಸಲಾಗಿದ್ದು ಅದು 60,570 ಚದರ ಅಡಿಗಳ ವಿಸ್ತೀರ್ಣವಿದ್ದು ಅದರ ತೂಕ 35 ಟನ್ನುಗಳು. ಸ್ಪಟಿಕಗಳು, ಆರ್ಕೇಡ್‌ಗಳು ಮತ್ತು ಚಂದ್ರನ ಬೆಳಕಿನ ಹಂತಗಳನ್ನು ಪ್ರತಿಬಿಂಬಿಸುವ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ನೀಲಿ ಬೂದು ಮೋಡಗಳು ಬಾಹ್ಯ ಗೋಡೆಗಳ ಮೇಲೆ ದೀಪಗಳಲ್ಲಿ ಪ್ರಕ್ಷೇಪಿಸಲ್ಪಡುತ್ತವೆ ಮತ್ತು ಅದು ಚಂದ್ರನ ಬೆಳಕಿನ ಹಂತಹಂತಕ್ಕೆ ಅನುಗುಣವಾಗಿ ಪ್ರಕಾಶಮಾನವಾಗಿ ಮತ್ತು ಗಾಢವಾಗುತ್ತದೆ. ಮುಖ್ಯ ಪ್ರಾರ್ಥನಾ ಮಂದಿರದಲ್ಲಿ 96 ಅಂಕಣಗಳು ಅಮೃತಶಿಲೆಗಳಿಂದ ಹೊದಿಸಲ್ಪಟ್ಟಿದ್ದು ನೋಡಲು ಅದ್ಭುತವಾಗಿವೆ. ಸಾಂಪ್ರದಾಯಿಕ ಕುಫಿಕ್ ಕ್ಯಾಲಿಗ್ರಫಿಯಲ್ಲಿ ಅಲ್ಲಾಹ್‌ನ 99 ಹೆಸರುಗಳನ್ನು ಕಿಬ್ಲಾ ಗೋಡೆಯ (ಮೆಕ್ಕಾ ಕಡೆಗಿರುವ) ಮೇಲೆ ಬರೆಯಲಾಗಿದೆ. ಬಹುಶಃ ಒಂದು ಇಡೀ ಹುಣ್ಣಿಮೆ ರಾತ್ರಿ ಇಲ್ಲಿ ಕುಳಿತುಕೊಂಡು ಆಕಾಶ ಮತ್ತು ಈ ಮಸೀದಿ ಗೋಡೆಗಳನ್ನು ನೋಡುತ್ತಿದ್ದರೆ ಹೇಗಿರುತ್ತದೆ ಎನ್ನುವ ಆಲೋಚನೆ ನನ್ನಲ್ಲಿ ಹುಟ್ಟಿಕೊಂಡಿತು?
ದುಬೈ ಮಿರಾಕಲ್ ಗಾರ್ಡನ್
ಮರುದಿನ ದುಬೈ ಮಿರಾಕಲ್ ಗಾರ್ಡನ್ ನೋಡಲು ಹೋದೆವು. ಮರಳುಗಾಡಿನಲ್ಲಿ ಓಯಸಿಸ್ ಎನ್ನುವುದಕ್ಕೆ ಬದಲಾಗಿ, ಮರಳುಗಾಡಿನಲ್ಲಿ ಹೂತೋಟ ಎನ್ನುವಂತೆ ಅದು 780,000 ಚದರ ಅಡಿಗಳಲ್ಲಿ ಹರಡಿಕೊಂಡಿತ್ತು. ಐವತ್ತು ದಶಲಕ್ಷಕ್ಕಿಂತ ಹೆಚ್ಚು ಹೂವುಗಳು ಮತ್ತು 250 ದಶಲಕ್ಷಕ್ಕಿಂತ ಹೆಚ್ಚು ಸಸ್ಯಗಳನ್ನು ಒಳಗೊಂಡಿರುವ ವಿಶ್ವದ ಅತಿದೊಡ್ಡ ಈ ನೈಸರ್ಗಿಕ ಉದ್ಯಾನವನ್ನು ಸೆಪ್ಟೆಂಬರ್ ತಿಂಗಳಿಂದ ಮಾರ್ಚ್ ನಡುವೆ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಉಳಿದ ಕಾಲದಲ್ಲಿ ಇಲ್ಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿಹೋಗಿ ಹೂವುಗಳು ಬಾಡಿಹೋಗುತ್ತವೆ. ದುಬೈ ಮಹಾನಗರದ ಆಡಳಿತ ನಗರದ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಮಿರಾಕಲ್ ಉದ್ಯಾನಕ್ಕೆ ಡ್ರಿಪ್ ನೀರಾವರಿ ವ್ಯವಸ್ಥೆಯನ್ನು ಮಾಡಿದೆ. ಬಣ್ಣಬಣ್ಣದ ಹೂವುಗಳು ಮತ್ತು ಗಿಡಗಳಲ್ಲಿ ಅರಮನೆಗಳು, ಪ್ರಾಣಿಗಳು, ವಿಮಾನಗಳು ಹೀಗೆ ನೂರಾರು ರೀತಿಯ ಗೊಂಬೆ/ಚಿತ್ರಗಳನ್ನು ನಿರ್ಮಿಸಲಾಗಿದೆ. ಉದ್ಯಾನವನದಲ್ಲಿ ಪ್ರಖ್ಯಾತ ಕಂಪನಿಗಳ ಗೂಪಿ, ಮಿಕ್ಕಿ ಮೌಸ್, ಪ್ಲೂಟೊ, ಡೈಸಿಡಕ್, ಡೊನಾಲ್ಡ್ ಡಕ್ ಇತ್ಯಾದಿ ಚಿತ್ರಗಳನ್ನು ನಿರ್ಮಿಸಲಾಗಿದೆ.
2013ನೇ ವರ್ಷದ ಪ್ರೇಮಿಗಳ ದಿನ ಫೆಬ್ರವರಿ 14ರಂದು ಈ ಉದ್ಯಾನವನವನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾಯಿತು. ಈ ಯೋಜನೆಗೆ ಒಟ್ಟು 11 ದಶಲಕ್ಷ ಯು.ಎಸ್. ಡಾಲರ್‌ಗಳು ಖರ್ಚಾಗಿದ್ದು, ಚಿಟ್ಟೆಗಳ ಉದ್ಯಾನ, ಅಂಗಡಿಗಳು, ಮಸೀದಿಗಳು ಇನ್ನಿತರ ಸೌಲಭ್ಯಗಳುಳ್ಳ ಕಟ್ಟಡಗಳನ್ನು ಕಟ್ಟಲಾಯಿತು. ತೋಟದ ಮಧ್ಯದಲ್ಲಿ ನಿರ್ಮಿಸಿರುವ ಏರ್‌ಬಸ್ ಎ-380 ಮಾದರಿ ಹೂವುಗಳ ವಿಮಾನ ಜಗತ್ತಿನಲ್ಲಿಯೆ ಅತಿದೊಡ್ಡದು. ಉದ್ಯಾನವನದ ಒಳಗಿರುವ ಒಳಾಂಗಣ ಸಂಗ್ರಹಾಲಯದಲ್ಲಿ 26 ಜಾತಿಗಳ 15,000 ಚಿಟ್ಟೆಗಳು ಜನರ ಮಧ್ಯೆ ಓಡಾಡುತ್ತಿರುತ್ತವೆ. ಈ ಉದ್ಯಾನವನದಲ್ಲಿ ಅನೇಕ ಇಂಗ್ಲಿಷ್ ಮತ್ತು ಹಿಂದಿ ಸಿನಿಮಾಗಳ ಚಿತ್ತಾರಗಳನ್ನು ಚಿತ್ರಿಸಲಾಗಿದ್ದು ದುಬೈ ಮಿರಾಕಲ್ ಗಾರ್ಡನ್ ಮೂರು ಬಾರಿ ಗಿನ್ನೀಸ್ ಪುಸ್ತಕದಲ್ಲಿ ದಾಖಲಾಗಿದೆ. ಪಕ್ಕದಲ್ಲಿ 8,55,000 ಚದರ ಅಡಿಗಳ ಬಹುಮಹಡಿ ಕಾರುಗಳ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಯಾವುದೇ ದೇಶ, ದೇಶದ ನಾಯಕರು ಮತ್ತು ಜನರು ಶಿಸ್ತು ಬೆಳೆಸಿಕೊಂಡರೆ ಫಲಿತಾಂಶ ಹೀಗಿರುತ್ತದೆ ಎನ್ನುವ ಪಾಠ ಇಲ್ಲಿ ಕಾಣಿಸುತ್ತದೆ (ಪ್ರವಾಸ: ಜನವರಿ 2019).
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.