Advertisement
ಜೀವಶಾಸ್ತ್ರದಲ್ಲಿ ಸ್ಕೋರ್ ಮಾಡಿಸಿದ ಕೈಬೆರಳ ತಂತ್ರ!! ಬಸವನಗೌಡ ಹೆಬ್ಬಳಗೆರೆ‌ ಸರಣಿ

ಜೀವಶಾಸ್ತ್ರದಲ್ಲಿ ಸ್ಕೋರ್ ಮಾಡಿಸಿದ ಕೈಬೆರಳ ತಂತ್ರ!! ಬಸವನಗೌಡ ಹೆಬ್ಬಳಗೆರೆ‌ ಸರಣಿ

ಊರಲ್ಲಿ ಫಲಿತಾಂಶ ಕೇಳಿ ಏನೂ ಹೇಳಲಿಲ್ಲ. “ವಿಜ್ಞಾನವೆಂದರೆ ಕಷ್ಟ; ಅಂತಾದ್ರಲ್ಲಿ ನೀನು ಇಷ್ಟಾದ್ರೂ ತೆಗೆದೆಯಲ್ಲಾ ಅಂತಾ ಖುಷಿ ಪಟ್ಟರು”! ಅವರು ನನ್ನ ಫಲಿತಾಂಶದಲ್ಲಿ ಬೇಸರ ಪಟ್ಟುಕೊಳ್ಳದಿರಲು ಇನ್ನೊಂದು ಕಾರಣವಿದೆ. ಅವರಿಗೆ ನನ್ನ ಹಾಸ್ಟೆಲ್ ಹುಡುಗರ ಫಲಿತಾಂಶ ಹೇಳಿದ್ದು. ನಮ್ಮ ಹಾಸ್ಟೆಲ್ಲಿನಲ್ಲಿ ಇದ್ದ ಸೆಕಂಡ್ ಪಿಯುಸಿಯ 24 ವಿದ್ಯಾರ್ಥಿಗಳ ಪೈಕಿ ಪಾಸ್ ಆಗಿದ್ದು ಇಬ್ಬರೇ!! ಅದು ನಾನು ಮತ್ತು ಲಿಂಗರಾಜ ಮಾತ್ರ. ಅದರಲ್ಲೂ ಹಾಸ್ಟೆಲ್ಲಿಗೆ ಅತೀ ಹೆಚ್ಚು ಅಂಕ ನನ್ನವೇ ಆಗಿದ್ದವು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೊಂದನೆಯ ಕಂತು ನಿಮ್ಮ ಓದಿಗೆ

ದ್ವಿತೀಯ ಪಿಯುಸಿ ಜೀವಶಾಸ್ತ್ರದ ಪರೀಕ್ಷೆಗೆ ಎರಡು ದಿನ ರಜೆ ಇತ್ತು. ಆ ಸಮಯದಲ್ಲಿ ನಾನು ಹಾಗೂ ಲಿಂಗರಾಜ ಜೀವಶಾಸ್ತ್ರ ಓದಬೇಕು ಅಂತಾ ಒಂದೆಡೆ ಸೇರಿದ್ವಿ. ಮೊದಲಿಂದಲೂ ಓದದೇ ಇದ್ದುದಕ್ಕೆ ನಮಗೆ ಈಗ ತುಂಬಾ ಒತ್ತಡ ಬಿತ್ತು. ಹೇಗಾದರೂ ಮಾಡಿ ಜೀವಶಾಸ್ತ್ರದ ವಿಷಯವನ್ನು ಪಾಸ್ ಮಾಡಬೇಕೆಂದು ಬೇರೆ ಬೇರೆ ರೀತಿಯ ತಂತ್ರಗಳನ್ನು ಹುಡುಕತೊಡಗಿದೆವು. ಆಗ ಲಿಂಗರಾಜ ಮೊದಲು ಯಾವ್ಯಾವ ಪಾಠಕ್ಕೆ ಎಷ್ಟೆಷ್ಟು ಅಂಕಗಳು ಅಂತಾ ಬರೆದುಕೊಂಡ. ನಂತರ ಆ ಪಾಠದಲ್ಲಿ ಹಿಂದಿನ ವರ್ಷ ಬಂದಿರುವ ಪ್ರಶ್ನೆಗಳನ್ನು ಒಂದೆಡೆ ಬರೆದ. ನಂತರ ಅವೆಲ್ಲವನ್ನೂ ಓದೋಣ ಎಂದುಕೊಂಡೆವು. ಆದರೆ ಅವುಗಳನ್ನೆಲ್ಲಾ ಓದಲು ಸಮಯ ತುಂಬಾ ಸಾಲದಾಗುತ್ತೆ ಎಂದು ನಾವೇ ಅಂದುಕೊಂಡೆವು. ‘ಏನು ಮಾಡಬೇಕು?’ ಅಂತಾ ಯೋಚನೆಯಲ್ಲಿ ಮುಳುಗಿದ್ದಾಗ ಸುಧಾಕರನ ಮತ್ತೊಬ್ಬ ಅಣ್ಣ ‘ಸಂತೋಷ್’ ಬಂದ್ರು. ಅವರೂ ದ್ವಿತೀಯ ಪಿಯುಸಿಯಲ್ಲಿ ಜೀವಶಾಸ್ತ್ರದ ವಿಷಯದಲ್ಲಿ ಕಳೆದೆರಡು ವರ್ಷದಿಂದ ಫೇಲ್ ಆಗಿದ್ದರಂತೆ. ಅವರು ನಮ್ಮ ಹತ್ತಿರ ಬಂದು ‘ಆ ಪರೀಕ್ಷೆ ಪಾಸಾಗಲು ಏನಾದರೂ ಟೆಕ್ನಿಕ್ ಹೇಳಿಕೊಡಿ’ ಎಂದು ಕೇಳಿಕೊಂಡರು. ಅವರ ಬಗ್ಗೆ ನಾವು ತೀರಾ ವಿಚಾರಿಸಿದಾಗ “ಪಾಸ್ ಆಗದೇ ಇದ್ದುದಕ್ಕಾಗಿ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡು ಇದ್ದೇನೆ.ಈ ವರ್ಷ ಪಾಸ್ ಆಗದೇ ಇದ್ರೆ ನನಗೆ ತುಂಬಾ ಕಷ್ಟ ಆಗುತ್ತೆ. ದಯವಿಟ್ಟು ನನಗೆ ಸಹಾಯ ಮಾಡಿ “ಎಂದು ಬೇಡಿಕೊಂಡರು. ನಮಗೆ ಆಗ ತುಂಬಾ ಪೀಕಲಾಟದ ಸ್ಥಿತಿ. ಯಾಕೆಂದರೆ ನಾವೇ ಪಾಸ್ ಆಗದ ಸ್ಥಿತಿಯಲ್ಲಿ ಇದ್ದೇವೆ. ಅದ್ಹೇಗಪ್ಪಾ ಇವರಿಗೆ ಹೇಳಿಕೊಡೋದು? ಅಂತಾ!!

ನಾನು ಲಿಂಗರಾಜ ಸೇರಿ ಪರೀಕ್ಷೆಗೆ ಬರಬಹುದಾದ ಪ್ರಶ್ನೆಗಳನ್ನು ಗುರುತಿಸಿಕೊಳ್ಳಲು ಒಂದು ಐಡಿಯಾ ಮಾಡಿದೆವು. ನಾವಿಬ್ಬರೂ ಪ್ರತೀ ಪಾಠದಲ್ಲಿ ಬರಬಹುದಾದ ಪ್ರಶ್ನೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಳ್ಳಬೇಕು. ಆ ಹಾಳೆಗಳನ್ನು ಒಂದು ಕಡೆ ಇಟ್ಟು, ಪ್ರತೀ ಪಾಠದ ಪ್ರಶ್ನೆಗಳಿರುವ ಹಾಳೆಯನ್ನು ತೆಗೆದುಕೊಂಡು, ದೇವರಿಗೆ ಬೇಡುತ್ತಾ, ಕಣ್ಣು ಮುಚ್ಚಿಕೊಂಡು ಪ್ರಶ್ನೆಗಳ ಮೇಲೆ ಬೆರಳು ಇಡುವುದು, ಯಾವ ಪ್ರಶ್ನೆಯು ನಾವು ಮುಟ್ಟಿದಾಗ ಸಿಗುವುದೋ ಅದನ್ನೇ ಓದಿಕೊಂಡು ಹೋಗಬೇಕೆಂದು ತೀರ್ಮಾನಿಸಿದೆವು. ಅದೇ ಸಮಯಕ್ಕೆ ಸಂತೋಷ್ ಸಹ ಬಂದು ಅವನಿಗೂ ಪಾಸ್ ಆಗಲು ಓದಬೇಕಾದ ಮುಖ್ಯವಾದ ಪ್ರಶ್ನೆ ಕೇಳಿದನು. ನಾವು ಕೈಬೆರಳು ಇಟ್ಟಾಗ ಯಾವ ಪ್ರಶ್ನೆ ಬಂದಿತ್ತೋ ಅದೇ ಪ್ರಶ್ನೆಯನ್ನು ಅವನಿಗೂ ಓದಲು ತಿಳಿಸಿದೆವು. ಅವನು ಅದೇ ರೀತಿ ಅನುಸರಿಸಿದ. ಮಾರನೇ ದಿನ ಪರೀಕ್ಷೆಯಲ್ಲಿ ಅದ್ಯಾವ ಜನುಮದ ಪುಣ್ಯದ ಫಲವೋ ಏನೋ?! ನಾವು ಓದಿಕೊಂಡು ಹೋದ ಪ್ರಶ್ನೆಗಳೇ ಬಂದಿದ್ದವು!! ಪ್ರಶ್ನೆಪತ್ರಿಕೆ ನೋಡಿ ಮನಸ್ಸು ತುಂಬಾ ಖುಷಿಯಾಗಿ ಬರೀ ಪಾಸ್ ಆಗಲೆಂದು ಹೋದ ನಾವು ಫಸ್ಟ್ ಕ್ಲಾಸ್‌ಗಿಂತ ಹೆಚ್ಚಿನ ಅಂಕಗಳು ಬರೋ ಹಾಗೆ ಬರೆದೆವು. ಆದರೆ ಇದೇ ರೀತಿ ಭೌತಶಾಸ್ತ್ರದ ಪರೀಕ್ಷೆಗೆ ಮಾಡಲು ಹೋಗಲಿಲ್ಲ. ಈ ಮೊದಲೇ 5 ಮಾದರಿ ಪ್ರಶ್ನೆಗಳನ್ನು ಬಿಡಿಸಿಕೊಂಡು ಇಟ್ಟುಕೊಂಡಿದ್ದೆವೋ ಅವೇ ಪ್ರಶ್ನೆಗಳನ್ನೇ ಓದಿಕೊಂಡು ಹೋಗಿ ಅದರಲ್ಲೂ ಯಶಸ್ವಿಯಾದೆವು!

ಅಂತೂ ಇಂತೂ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂಬಂತಹ ಪರಿಸ್ಥಿತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದೆವು. ಇನ್ನು ಸಿಇಟಿ ಎಕ್ಸಾಂ ಅನ್ನು ಮನೆಯವರ ಒತ್ತಾಯಕ್ಕೆ ನಾನು ತೆಗೆದುಕೊಂಡಿದ್ದೆನಾದ್ದರಿಂದ ಆ ಪರೀಕ್ಷೆಗೆ ಓದಲು ಹೋಗಲಿಲ್ಲ. ಅದರ ಬದಲು ಮುಂದಿನ ಬಾರಿ ಇದೇ ಪಿಯುಸಿ ಪರೀಕ್ಷೆ ಬರೆಯಲು ನೋಟ್ಸ್ ಬರೆದುಕೊಂಡು ಅಣಿಯಾಗತೊಡಗಿದೆ!! ಮನೆಯಲ್ಲೇ ಇದ್ದು ಓದುತ್ತಿದ್ದೆನಾದ್ದರಿಂದ ಅವರಿಗೂ ಅನುಮಾನ ಬಂದು ‘ಯಾಕೆ ಈ ರೀತಿ ಮಾಡುತ್ತಿದ್ದೀಯಾ?’ ಎಂದು ಕೇಳಿದಾಗ ‘ಸಿಇಟಿಗೆ ತಯಾರಾಗುತ್ತಿದ್ದೇನೆ’ ಎಂದು ಹೇಳಿದ್ದೆ! ಸಿಇಟಿ ಪರೀಕ್ಷೆಯನ್ನು ತಕ್ಕ ಮಟ್ಟಿಗೆ ಬರೆದೆ. ಆ ನಂತರದ ರಜೆಯಲ್ಲಿ ಪಿಯುಸಿ ಎಕ್ಸಾಂ ಗೆ ಓದಿದ್ದೇ ಓದಿದ್ದು!! ಅಷ್ಟೇ ಅಲ್ಲದೇ ಎನ್.ಡಿ.ಎ ಎಕ್ಸಾಂ ಬೇರೆ ತೆಗೆದುಕೊಂಡಿದ್ದೆ. ಅದಕ್ಕೂ ತಯಾರಾಗತೊಡಗಿದೆ. ಇದರ ಜೊತೆಯಲ್ಲಿ ನಮ್ಮೂರ ಗ್ರಂಥಾಲಯದಲ್ಲಿ ಸಿಕ್ಕ ಸಿಕ್ಕ ಕಾದಂಬರಿಗಳನ್ನು ಓದತೊಡಗಿದೆ. ಓದುವುದು ಹವ್ಯಾಸವಾಗಿ ಹೋಯಿತು, ಪರೀಕ್ಷೆಗೆ ಮೀಸಲಾಗಿದ್ದ ಪುಸ್ತಕಗಳನ್ನು ಬಿಟ್ಟು!!

ಇನ್ನೇನು ಫಲಿತಾಂಶದ ಸಮಯ. ನನಗೆ ತುಂಬಾ ಭಯವಾಗಿತ್ತು. ಪರೀಕ್ಷೆಯ ಫಲಿತಾಂಶ ಏನಾಗುತ್ತೋ? ಏನೋ? ಅಂತಾ. ಪರೀಕ್ಷೆ ಫಲಿತಾಂಶ ನೋಡಿಕೊಂಡು ಬರುತ್ತಿದ್ದವರೆಲ್ಲಾ ಸಪ್ಪನೆಯ ಮೋರೆ ಹಾಕಿಕೊಂಡು ಹೋಗುತ್ತಿದ್ದರು. ಆಗ ಈಗಿನಂತೆ ಅಂತರ್ಜಾಲದಲ್ಲಿ ಪರೀಕ್ಷಾ ಫಲಿತಾಂಶವನ್ನು ನೋಡುವ ಅವಕಾಶ ಇರಲಿಲ್ಲ. ನಾವು ಓದಿದ ಕಾಲೇಜಿಗೆ ಹೋಗಿ ನೋಡಬೇಕಾಗಿತ್ತು. ನಾನು ಫಲಿತಾಂಶ ನೋಡಲು ಹೋದಾಗ ಹೆಚ್ಚಿನ ವಿದ್ಯಾರ್ಥಿಗಳು ನೋಡುತ್ತಿದ್ದರಿಂದ ನನಗೆ ನೋಡಲು ಸಾಧ್ಯವಾಗಲಿಲ್ಲ. ನಾನು ಹಾಗೆಯೇ ನನ್ನ ಚಿಕ್ಕಮ್ಮನ ಮನೆಗೆ ಹೋದೆ. ಅವರು ಫಲಿತಾಂಶವನ್ನು ಕೇಳಲು ‘ನಾನು ನೋಡಿಲ್ಲ’ ಅಂದಾಗ ಅವರ ನೋಟವೇಕೋ ನಾನು ಸುಳ್ಳು ಹೇಳುತ್ತಿದ್ದೇನೆ ಎಂಬರ್ಥ ತೋರುವಂತಿತ್ತು. ನಾನು ಮತ್ತೆ ವಾಪಸ್ಸು ಬಂದು ಪರೀಕ್ಷಾ ಫಲಿತಾಂಶವನ್ನು ಹುಡುಗರ ಮಧ್ಯದಲ್ಲಿ ನುಸುಳಿ ನೋಡಿದಾಗ ನನಗೆ ಅಲ್ಲಿ ನಮೂದಾಗಿದ್ದ ‘ಎಸ್’ ಎಂಬ ಅಕ್ಷರ ನನಗೆ ದ್ವಂದ್ವಕ್ಕೆ ಸಿಲುಕಿಸಿತ್ತು. ‘ಪಿ’ ಅಂದರೆ ‘ಪಾಸ್’ ಅಂತಲೂ, ‘ಎಫ್’ ಎಂದರೆ ‘ಫೇಲ್’ ಎಂತಲೂ ಕೆಲವರು ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿದ್ದ ‘ನನಗೆ ಇದೇನಪ್ಪಾ ದೇವರೇ, ನನ್ನ ಫಲಿತಾಂಶದಲ್ಲಿ ಇದೇಕೆ ಹೀಗೆ ಬಂದಿದೆ’ ಎಂದು ಮತ್ತೆ ವಾಪಾಸ್ ಮೈದಾನಕ್ಕೆ ಹೋದೆ. ನಾನು ಪ್ರತೀ ವಿಷಯವಾರು ಅಂಕಗಳನ್ನು ನೋಡಿದ್ದರೆ ನನಗೆ ತಿಳಿಯುತ್ತಿತ್ತೇನೋ. ಆದರೆ ತುಂಬಾ ರಶ್ ಇದ್ದುದರಿಂದ ಫಲಿತಾಂಶದ ಕೊನೇ ಕಾಲಮ್ಮನ್ನಷ್ಟೇ ನೋಡಿದ್ದೆ! ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ವಿಷಯವಾರು ನೋಡಿದಾಗ ಸದ್ಯ ಎಲ್ಲಾ ವಿಷಯಗಳಲ್ಲೂ ಪಾಸ್ ಆಗಲು ಬೇಕಾದ ಅಂಕಗಳ ಗಡಿಯನ್ನು ನನ್ನ ಅಂಕಗಳು ದಾಟಿದ್ದವು. ನನಗಾಗ ಖುಷಿಯೋ ಖುಷಿ! ‘ಎಸ್’ ನ ಅರ್ಥ ನನಗೆ ತಿಳಿದದ್ದು ‘ಸೆಕಂಡ್ ಕ್ಲಾಸ್’ ಎಂದು. ಕೂದಲೆಳೆ ಅಂತರದಲ್ಲಿ ಪ್ರಥಮ ದರ್ಜೆ ತಪ್ಪಿ ಹೋಗಿತ್ತು!

ನನಗೆ ಆಗ ಅನ್ನಿಸತೊಡಗಿದ್ದು ಬರೀ ಒಂದೆರಡು ದಿನ ಓದಿ ಇಷ್ಟೊಂದು ಅಂಕ ಪಡೆದೆ, ಒಂದೊಮ್ಮೆ ಮಿಡ್ ಟರ್ಮ್ ಆದ ನಂತರದಿಂದಲಾದರೂ ಓದುತ್ತಾ ಕುಳಿತಿದ್ದರೆ ಈ ವರ್ಷವೇ ನಾನಂದುಕೊಂಡಿದ್ದನ್ನು ಸಾಧಿಸಬಹುದಿತ್ತೇನೋ ಅಂತಾ! ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ, ಇನ್ನೇನಿದ್ದರೂ ಮುಂದೆ ಬರುವುದನ್ನು ನೋಡಿಕೊಳ್ಳಬೇಕು ಎಂದುಕೊಂಡು ಊರಿಗೆ ಹೋದೆ. ಊರಲ್ಲಿ ಫಲಿತಾಂಶ ಕೇಳಿ ಏನೂ ಹೇಳಲಿಲ್ಲ. “ವಿಜ್ಞಾನವೆಂದರೆ ಕಷ್ಟ; ಅಂತಾದ್ರಲ್ಲಿ ನೀನು ಇಷ್ಟಾದ್ರೂ ತೆಗೆದೆಯಲ್ಲಾ ಅಂತಾ ಖುಷಿ ಪಟ್ಟರು”! ಅವರು ನನ್ನ ಫಲಿತಾಂಶದಲ್ಲಿ ಬೇಸರ ಪಟ್ಟುಕೊಳ್ಳದಿರಲು ಇನ್ನೊಂದು ಕಾರಣವಿದೆ. ಅವರಿಗೆ ನನ್ನ ಹಾಸ್ಟೆಲ್ ಹುಡುಗರ ಫಲಿತಾಂಶ ಹೇಳಿದ್ದು. ನಮ್ಮ ಹಾಸ್ಟೆಲ್ಲಿನಲ್ಲಿ ಇದ್ದ ಸೆಕಂಡ್ ಪಿಯುಸಿಯ 24 ವಿದ್ಯಾರ್ಥಿಗಳ ಪೈಕಿ ಪಾಸ್ ಆಗಿದ್ದು ಇಬ್ಬರೇ!! ಅದು ನಾನು ಮತ್ತು ಲಿಂಗರಾಜ ಮಾತ್ರ. ಅದರಲ್ಲೂ ಹಾಸ್ಟೆಲ್ಲಿಗೆ ಅತೀ ಹೆಚ್ಚು ಅಂಕ ನನ್ನವೇ ಆಗಿದ್ದವು!! ನಮ್ಮ ಸೀನಿಯರ್‌ಗಳೂ ಸಹ ನಾನೂ ಸಹ ಢುಮ್ಕಿ ಹೊಡೆಯುತ್ತೇನೆ ಅಂದುಕೊಂಡಿದ್ದರಂತೆ. ಆದರೆ ಅವರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದು ನನ್ನ ಹೆಗ್ಗಳಿಕೆ. ಅದರಲ್ಲೂ ನನಗೆ ತುಂಬಾ ಆಶ್ಚರ್ಯ ತರಿಸಿದ ಸಂಗತಿಯೆಂದರೆ ನಮ್ಮ ಹಾಸ್ಟೆಲ್ಲಿನಲ್ಲಿದ್ದ ದಿನವಿಡೀ ಓದುತ್ತಿದ್ದವನೊಬ್ಬ ನಾಲ್ಕೂ ವಿಷಯದಲ್ಲೂ ಫೇಲ್ ಆಗಿದ್ದು! ಅವನನ್ನು ನೋಡಿ ಪಾಪ ಎನಿಸಿತು. ಸುಧಾಕರನ ಅಣ್ಣನ ಪಾಸ್ ಆಗದೇ ಉಳಿದುಕೊಂಡಿದ್ದ ಜೀವಶಾಸ್ತ್ರದ ವಿಷಯವನ್ನು ಪಾಸ್ ಆಗಿದ್ದನ್ನು ಕೇಳಿ ನನಗೆ ತುಂಬಾ ಖುಷಿಯಾಯ್ತು. ಅವರು ನನಗೆ ಸಿಕ್ಕು ಖುಷಿ ವ್ಯಕ್ತಪಡಿಸಿದರಲ್ಲದೇ ‘ನಿನ್ನನ್ನಂತೂ ನನ್ನ ಜೀವನದಲ್ಲಿ ಮರೆಯೋಲ್ಲ’ ಎಂದು ಹೇಳಿದರು. ಮುಂದೆ ಇದೇ ವ್ಯಕ್ತಿ ಡಿ ಫಾರಂ, ಬಿ ಫಾರಂ, ಎಂ ಫಾರಂ ಮಾಡಿ ಈಗ ಸರ್ಕಾರದ ದೊಡ್ಡ ಹುದ್ದೆಯಲ್ಲಿರುವುದನ್ನು ಕೇಳಿ ತುಂಬಾ ಖುಷಿ ಎನಿಸುತ್ತದೆ.

ನನ್ನ ಸಿಇಟಿ ಫಲಿತಾಂಶದಲ್ಲೂ ಅದ್ಯಾವ ಅದೃಷ್ಟವೋ ಎಂಬಂತೆ ಓದದಿದ್ದರೂ ನಾನು ಹಾಗೆಯೇ ಗೆಸ್ ಮಾಡಿ ಹಾಕಿದ್ದ ಉತ್ತರಗಳು ಸರಿಯಾಗಿ ಉತ್ತಮ ರ್ಯಾಂಕೇ ಬಂದಿತ್ತು. ನನಗೆ ಬಂದ ರ್ಯಾಂಕಿನಲ್ಲಿ ಆಗ ದಾವಣಗೆರೆ ಸರ್ಕಾರಿ ಕಾಲೇಜಿನಲ್ಲೇ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಸಿಗೋದು. ಯಾಕೆಂದರೆ ಆ ವರ್ಷ ಸಾಫ್ಟ್ ವೇರ್‌ಗೆ ಬೇಡಿಕೆ ಇಲ್ಲದಂತಾಗಿ ಆ ಕೋರ್ಸಿಗೆ ಡಿಮ್ಯಾಂಡ್ ಕಮ್ಮಿಯಾಗಿತ್ತು. ಆದರೆ ನಾನು ಆ ಯಾವ ಕೋರ್ಸ್‌ಗಳಿಗೂ ಸೇರಲಿಲ್ಲ. ನನಗೆ ಇದ್ದದ್ದು ಒಂದೇ ಗುರಿ ಅದು ದನದ ಡಾಕ್ಟರ್ ಆಗುವುದು!

ನಾನು ಮುಂದೆ ರಿಜೆಕ್ಟ್ ಮಾಡಬೇಕು ಅಂದುಕೊಂಡಿದ್ದೆ. ಆದರೆ ಮನೆಯವರಿಗೆ ಗೊತ್ತಾಗದಂತೆ ರಿಜೆಕ್ಟ್ ಮಾಡಬೇಕು ಎಂದು ಬಯಸಿ ಅವರ ಮಾತಿನಂತೆ ಶಿವಮೊಗ್ಗದ ಡಿವಿಎಸ್ ಕಾಲೇಜಿಗೆ ಬಿ.ಎಸ್ಸಿ. ಪದವಿಗೆ ಸೇರಿದೆ. ನನ್ನ ತಮ್ಮನೂ 10 ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದಿದ್ದರಿಂದ ಅವನನ್ನೂ ಶಿವಮೊಗ್ಗಕ್ಕೆ ಸೇರಿಸಿದರು. ನಾನು ಬಿ.ಎಸ್ಸಿ ಸೇರಿದ ಮೇಲೆ ಇಬ್ಬರನ್ನೂ ಓದಿಸಲು ಮನೆಯಲ್ಲಿ ಆಗುವುದಿಲ್ಲವೆಂದು ಇದ್ದ ಹೊಲದಲ್ಲಿ ಅರ್ಧ ಎಕರೆ ಹೊಲವನ್ನು ಮಾರಲು ತೀರ್ಮಾನಿಸಿ ಅದರಂತೆ ಮಾರಿದರು. ನನಗೆ ಏನಾದ್ರೂ ಮಾಡಿ ವೆಟರ್ನರಿ ಕೋರ್ಸ್ ಪಡೆಯಬೇಕೆಂಬ ಆಸೆಯಿಂದ ನಾನು ಕಾಲೇಜಿನ ಆಫೀಸಿಗೆ ಹೋಗಿ ನನ್ನ ಅಂಕಪಟ್ಟಿಯನ್ನು ವಾಪಾಸ್ಸು ಕೊಡಲು ಹೇಳಿದೆ. ಅವರು, ಕಾರಣ ಕೇಳಿದಾಗ ನಾನು ಇದ್ದ ವಿಷಯವನ್ನು ಹೇಳಿದೆ. ಅವರು ನಿನ್ನ ಅಂಕಪಟ್ಟಿಗೆ ಅದಾಗಲೇ ವಿಶ್ವವಿದ್ಯಾಲಯದ ಸೀಲ್ ಬಿದ್ದಿದೆ. ನೀನು ರಿಜೆಕ್ಟ್ ಮಾಡಲು ಬರುವುದಿಲ್ಲವೆಂದು ತಿಳಿಸಿದರು. ನನಗೆ ತುಂಬಾ ಬೇಸರವಾಯ್ತು. ಇದ್ದ ಒಂದು ಯೋಜನೆಯೂ ಕೈಕೊಟ್ಟಿತಲ್ಲಾ ಎಂಬ ಬೇಸರದಿಂದ ಹಾಗೆ ವಾಪಾಸ್ಸು ಹೋದೆ.

ಏನು ಮಾಡಬೇಕು ಅಂತಾನೂ ತೋಚದೇ ದಿನವಿಡೀ ಒಬ್ಬನೇ ಕುಳಿತು ಅತ್ತೆ! ನನಗೆ ನಾನೇ ಸಮಾಧಾನ ಮಾಡಿಕೊಂಡು ಹೇಗಿದ್ರು ನನಗೆ ಗಣಿತ ಇಷ್ಟ, ಡಿಗ್ರಿ ಮುಗಿಸಿ, ಮಾಸ್ಟರ್ ಡಿಗ್ರಿ ಗಣಿತದಲ್ಲಿಯೇ ಮಾಡಿ ಗಣಿತದ ಲೆಕ್ಚರ್ ಆಗೋಣ ಅಂದುಕೊಂಡೆ. ಇದೇ ಆಲೋಚನೆ ಯಾಕೆ ಬಂತಪ್ಪಾ ನನಗೆ ಅಂದ್ರೆ ನನಗೆ ಗಣಿತದಲ್ಲಿ ಸೆಕಂಡ್ ಪಿಯುಸಿಯಲ್ಲಿ ಬರೀ 37 ಅಂಕಗಳು ಬಂದಿದ್ದವು!! ನನಗೆ ಆದಂತೆ ಬೇರೆಯವರಿಗೆ ಆಗಬಾರದು ಎಂದು ಯೋಚಿಸಿ ಒಬ್ಬ ಉತ್ತಮ ಗಣಿತ ಉಪನ್ಯಾಸಕನಾಗ ಬಯಸಿದೆ. ಇದಕ್ಕಾಗಿ ಡಿಗ್ರಿಯಲ್ಲೂ ಗಣಿತಕ್ಕೆ ಟ್ಯೂಷನ್ ಸೇರಿದೆ. ಒಳ್ಳೇ ಪ್ರಯತ್ನ ಹಾಕಿ ಓದಿದೆ. ಮಂದೆ ಏನಾಯ್ತು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಅನೇಕ ಸಾಧಕರು “ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತಾದಲ್ಲಿ ನಾವು ಕನಸು ಕಾಣಬೇಕು, ಅದನ್ನು ಬೆನ್ನಟ್ಟಬೇಕು” ಎಂದು ಹೇಳುತ್ತಾರೆ. ಆದರೆ ಅನೇಕರಿಗೆ ಕಂಡ ಕನಸನ್ನು ಈಡೇರಿಸಿಕೊಳ್ಳಲಾಗುವುದಿಲ್ಲ. ಆಗ ಅಂತವರು ಜೀವನದ ಬಗ್ಗೆ ಜಿಗುಪ್ಸೆ ತಾಳುತ್ತಾರೆ. ಮತ್ತೊಂದು ಬದಿಯಲ್ಲಿ ಆಲೋಚಿಸುವುದಿಲ್ಲ. ನಾವು ಯಾವತ್ತೂ ಕಂಡ ಕನಸು ನನಸಾಗದಿದ್ದರೆ ಇದೇ ಕೊರಗಿನಲ್ಲಿ ಕೂರುವುದು ಬೇಡ. ಇರುವುದೊಂದೇ ಜೀವನ. ಮತ್ತೊಂದಕ್ಕೆ ಪ್ರಯತ್ನ ಪಡೋಣ. ಸಿಕ್ಕುದರಲ್ಲಿಯೇ ಸಂತೃಪ್ತಿ ಹೊಂದೋಣ. ಆಗ ಮಾತ್ರ ನಮಗೆ ಖುಷಿ ಸಿಗುತ್ತದೆ. ’ಹಣೆಯಲ್ಲಿ ಬರೆದಿದ್ದನ್ನು ಹಣೆಗಣ್ಣನೂ ಅಳಿಸಲಾರ’ ಎಂಬ ಮಾತಿದೆ. ಸಿಗದಿದ್ದುದಕ್ಕೆ ಕೊರಗೋ ಬದಲು ಸಿಕ್ಕಿದ್ದರಲ್ಲಿಯೇ ಖುಷಿ ಪಡೋದನ್ನು ಕಲಿಯೋಣ. ಇದರ ಜೊತೆ ಡಿವಿಜಿಯವರ ಕಗ್ಗದ ಈ ಮಾತನ್ನು ತಿಳಿದುಕೊಂಡರೆ ನಾವು ಆರಾಮಾಗಿ ಇರಬಹುದು.

ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ|
ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
ವಿವರಗಳ ಜೋಡಿಸುವ ಯಜಮಾನ ಬೇರಿಹನು|
ಸವೆಸು ನೀಂ ಜನುಮವನು-ಮಂಕುತಿಮ್ಮ||

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

1 Comment

  1. ಮಂಜಪ್ಪ

    ನೀವು ದನದ ಡಾಕ್ಟರ್ ಆಗದಿದ್ದದ್ದು ಒಳ್ಳೆಯದು ಆಯಿತು. ಹಾಗೇನಾದರೂ ಆಗಿದ್ದರೆ ನೀವು ಈ ಜೀವನದಲ್ಲಿ ನಮಗೆ ಸಿಗುತ್ತಿರಲಿಲ್ಲ.ಇಷ್ಟು ಖುಷಿ ಸಿಗುತ್ತಿರಲಿಲ್ಲ. ಹಾಗೇ ಒಬ್ಬ ಉತ್ತಮ ಹಾಸ್ಯಪ್ರಜ್ಞೆಯುಳ್ಳ ಬರಹಗಾರನನ್ನು ಕಳೆದುಕೊಳ್ಳುತ್ತಿದ್ದೆವು. ನಿಮ್ಮ ಬರಹಗಳನ್ನು ನಾನು ಸದಾ ನಿರೀಕ್ಷಿಸುತ್ತೇನೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ