Advertisement
ಬೇರಿನಿಂದ ಬೆಳಕಿಗೆ: ಮಿತ್ರಾ ವೆಂಕಟ್ರಾಜ ಅನುವಾದಿತ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

ಬೇರಿನಿಂದ ಬೆಳಕಿಗೆ: ಮಿತ್ರಾ ವೆಂಕಟ್ರಾಜ ಅನುವಾದಿತ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

‘ಒಂದು ಪುರಾತನ ನೆಲದಲ್ಲಿʼ ಕೃತಿ ಭಾರತ ಮತ್ತು ಈಜಿಪ್ಟ್‌ನಂತಹ ಎರಡು ಪುರಾತನ ನೆಲದ ಸಂಸ್ಕೃತಿಯ ತಾಯಿ ಬೇರುಗಳ ಸಂಶೋಧನೆಯ ಅತ್ಯುನ್ನತ ದಾಖಲೆಯಾಗಿದೆ. ಕಳೆದ ಆರು ಶತಮಾನಗಳಿಂದ ವಿಸ್ಮೃತಿಯೆಡೆಗೆ ದಾಪುಗಾಲಿಡುತ್ತಿರುವ ಕಡಲ ತೀರದ ಕೆಲವು ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿನ, ಜನಜೀವನದ, ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣವನ್ನು ಪಾತ್ರಗಳ ಮೂಲಕ ಕಟ್ಟಿಕೊಡುವ ಇಲ್ಲಿನ ಕ್ರಮ ವಿನೂತನವಾಗಿದೆ.
ಹಿರಿಯ ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್ ಅನುವಾದಿಸಿರುವ ‘ಒಂದು ಪುರಾತನ ನೆಲದಲ್ಲಿʼ ಕಾದಂಬರಿಯ ಕುರಿತು ದೇವಿಕಾ ನಾಗೇಶ್‌ ಬರಹ

‘ಒಂದು ಪುರಾತನ ನೆಲದಲ್ಲಿʼ ಹಿರಿಯ ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್ ಅವರು ಕನ್ನಡಕ್ಕೆ ಅನುವಾದಿಸಿರುವ ಜ್ಞಾನಪೀಠ ಪ್ರಶಸ್ತಿ ಪಡೆದ ಅಮಿತಾವ್ ಘೋಷ್ ಅವರ ಇಂಗ್ಲಿಷ್ ಮೂಲದ ‘In An Antique Landʼ ಕೃತಿ. ಮನೋಹರ ಗ್ರಂಥ ಮಾಲೆ ಪ್ರಕಟಿಸಿರುವ 326 ಪುಟಗಳಿರುವ ಕಾದಂಬರಿ ಇದು. ವರ್ತಮಾನದ ತುರ್ತಿಗೆ ಅನುಗುಣವಾಗಿ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪತ್ರ, ಹಾಗೂ ಇತರ ದಾಖಲೆಗಳನ್ನು ಆಧರಿಸಿ, ಕ್ಷೇತ್ರ ಕಾರ್ಯ ಮಾಡಿ ಜನ ಜೀವನವನ್ನು ಅಧ್ಯಯನ ಮಾಡಿ ರಚಿಸಿರುವ ಕೃತಿ ಇದು. ಹದಿಮೂರನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗಿನ ಜಗತ್ತಿನ ಪುರಾತನ ನಾಗರಿಕತೆಗಳೆರಡರ ಏಳು ಬೀಳುಗಳ ಕಿರು ಚಿತ್ರಣವಿದೆ. ಇಲ್ಲಿ ಹಿಂದೂ- ಮುಸ್ಲಿಂ, ಯಹೂದಿ -ಮುಸ್ಲಿಂ ಭಾರತೀಯ-ಈಜಿಪ್ಟ್ ಒಂದರೊಳಗೊಂದು ಜೀವ ಭಾವದ ಸಂಬಂಧಗಳಾಗಿ ಹೆಣೆದುಕೊಂಡು ಬದುಕಿದ ರೀತಿ ಆಯಾಕಾಲದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ತಲ್ಲಣಗಳ ಪಕ್ಷಿ ನೋಟ ಆಪ್ತವಾಗಿ ಮೂಡಿ ಬಂದಿದೆ.

(ಮಿತ್ರಾ ವೆಂಕಟರಾಜ್)

“ಮಧ್ಯಕಾಲೀನ ಯಹೂದಿ ವರ್ತಕರ ಪತ್ರಗಳು” ಕೈರೋದ ಪುರಾತನ ‘ಗೆನಿಝʼ ಎಂಬ ಉಗ್ರಾಣದಿಂದ ಲಭ್ಯವಾದ ಪತ್ರಗಳಿವು. ಈ ಓದು ಅಮಿತಾವ್ ಘೋಷ್ ಅವರನ್ನು ವಿಷಯದ ಆಳಕ್ಕೆ ಉಪಕ್ರಮಿಸುವಂತೆ ಮಾಡಿತ್ತು. ನಂತರ ಇದು ಇವರನ್ನು ಕಾಡಿದ ಪರಿಯಂತೂ ವಿಸ್ಮಯ ಹುಟ್ಟಿಸುವಂಥದ್ದು. ಸಾಮಾಜಿಕ ಮಾನವ ಶಾಸ್ತ್ರಜ್ಞರಾಗಿರುವ ಅಮಿತಾವ್ ಘೋಷ್ ನಂತರ ತಮ್ಮ ಜೀವಮಾನದ ಅತ್ಯಮೂಲ್ಯ ಸಮಯವನ್ನು ಈ ಕಾದಂಬರಿಯನ್ನು ಕಟ್ಟುವ ಸಲುವಾಗಿ ಮೀಸಲಿಟ್ಟರು. ಟ್ಯೂನಿಸಿಯ ಹೋಗಿ ಅರಬ್ಬಿ ಭಾಷೆ ಕಲಿತರು. ಈಜಿಪ್ಟ್‌ನ ಹಳ್ಳಿಯಲ್ಲಿ ನಿಂತು ಕ್ಷೇತ್ರ ಕಾರ್ಯ ಮಾಡಿದರು. ಇದು ತನ್ನ ಸಾಮಾಜಿಕ ಜವಾಬ್ದಾರಿ ಎನ್ನುವಂತೆ ತಳಸಮುದಾಯದವನಾದ ಬೊಮ್ಮನ ಚರಿತ್ರೆ ಅರಸಿ ತುಳುನಾಡು ಮಂಗಳೂರಿಗೂ ಬಂದರು. ಹೀಗೆ ಸಿದ್ಧವಾದ ಕಾದಂಬರಿಯನ್ನು ‘ಪಾಚಿ ಕಟ್ಟಿದ ಪಾಗಾರʼ ಕಾದಂಬರಿ ಖ್ಯಾತಿಯ ಲೇಖಕಿ ಮಿತ್ರಾ ವೆಂಕಟರಾಜ್ ಅಷ್ಟೇ ಶ್ರದ್ಧೆಯಿಂದ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ತುಳುನಾಡಿನ ಕಡಲ ಮಕ್ಕಳ ಆರಾಧ್ಯ ದೈವ ಬೊಬ್ಬರ್ಯ. ಹಿಂದೆ ಪೂರ್ವ ಪಶ್ಚಿಮವನ್ನು ಜೋಡಿಸುವ ಸಮುದ್ರ ಯಾನದಲ್ಲಿ ಅಕಾಲ ಮರಣವನ್ನು ಅಪ್ಪಿದ ಮುಸ್ಲಿಂ ನಾವಿಕ ಈತ.

ಕಡಲ ಮಕ್ಕಳ ಸಂರಕ್ಷಣೆಗಾಗಿ ದೈವವಾಗಿ ಮಾನ್ಯತೆ ಪಡೆದ ಬೊಬ್ಬರ್ಯ ಕಡಲ ತೀರದಲ್ಲಿ 19ನೇ ಶತಮಾನದ ಕೊನೆಯವರೆಗೂ ಕಲ್ಲು ಕಟ್ಟೆಯ ಮೇಲೆ ಮರದ ಗದೆಯ ರೂಪದಲ್ಲಿ ನೆಲೆಯಾಗಿರುವುದನ್ನು ಜನ ನಂಬುತ್ತಿದ್ದರು. ಅನಾದಿಯಿಂದಲೂ ಜಾತಿ ಶ್ರೇಣೀಕರಣ ವ್ಯವಸ್ಥೆಯನ್ನು ಶಕ್ತಿ ಬಲದಿಂದ ಎದುರಿಸುತ್ತಿದ್ದ ವ್ಯಕ್ತಿಗತ ವ್ಯಕ್ತಿ ಪರಂಪರೆಗಳು ತುಳುನಾಡಿನ ದೈವರಾಧನೆಯ ಸ್ವರೂಪ ಪಡೆದಿತ್ತು. ಇಂತಹ ಕೋಮು ಸೌಹಾರ್ದವನ್ನು ನೆಲೆಯಾಗಿಸಿಕೊಂಡು ಪವಾಡ ಮೆರೆದ ಸಾವಿರಾರು ದೈವಗಳು ಈ ನೆಲದ ಹಿರಿಮೆ ಮೆರೆದಿತ್ತು. ಇಂದು ಇವು ಏಕಮುಖ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ದೇವಾಲಯಗಳ ರೂಪ ಪಡೆದುಕೊಂಡಿರುವುದನ್ನು ಅಮಿತಾವ್ ತಮ್ಮ ಕ್ಷೇತ್ರ ಕಾರ್ಯದಲ್ಲಿ ಗುರುತಿಸಿ ಸೂಕ್ಷ್ಮವಾಗಿ ಉಲ್ಲೇಖಸಿರುವುದು ಗಮನಾರ್ಹ.

‘ಒಂದು ಪುರಾತನ ನೆಲದಲ್ಲಿʼ ಕೃತಿ ಭಾರತ ಮತ್ತು ಈಜಿಪ್ಟ್‌ನಂತಹ ಎರಡು ಪುರಾತನ ನೆಲದ ಸಂಸ್ಕೃತಿಯ ತಾಯಿ ಬೇರುಗಳ ಸಂಶೋಧನೆಯ ಅತ್ಯುನ್ನತ ದಾಖಲೆಯಾಗಿದೆ. ಕಳೆದ ಆರು ಶತಮಾನಗಳಿಂದ ವಿಸ್ಮೃತಿಯೆಡೆಗೆ ದಾಪುಗಾಲಿಡುತ್ತಿರುವ ಕಡಲ ತೀರದ ಕೆಲವು ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿನ, ಜನಜೀವನದ, ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣವನ್ನು ಪಾತ್ರಗಳ ಮೂಲಕ ಕಟ್ಟಿಕೊಡುವ ಇಲ್ಲಿನ ಕ್ರಮ ವಿನೂತನವಾಗಿದೆ.

ಅಬ್ರಾಹಂ ಬೆನ್ ಯಿಜು ಟ್ಯೂನಿಸಿಯಾದ ಯಹೂದಿ ವರ್ತಕ. ವ್ಯಾಪಾರ ಸಂಬಂಧ ತುಳುನಾಡಿನ ಕರಾವಳಿಗೆ ಬಂದು ಇಲ್ಲಿ 17 ವರ್ಷಗಳ ಕಾಲ ನೆಲೆ ನಿಂತು ಕೇರಳ ಮೂಲದ ನಾಯರ್ ಕುಟುಂಬದ ಆಶು ಎಂಬ ಮಹಿಳೆಯನ್ನು ಮದುವೆಯಾಗಿ ಮಕ್ಕಳನ್ನು ಪಡೆದ. ಬೊಮ್ಮ ಈತನ ಗುಲಾಮ. ಒಡೆಯನ ವ್ಯಾಪಾರ ವಹಿವಾಟುಗಳನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡಿದ್ದವ. ಈತನಿಗೆ ಕುಡಿತದ ಚಟವಿದ್ದರೂ ಬೆನ್ ಯಿಜು ತನ್ನ ಜೀವಿತದ ಕೊನೆಯವರೆಗೂ ಈತನನ್ನು ತನ್ನ ಜೊತೆಗಿಟ್ಟುಕೊಂಡಿದ್ದ. ಈ ಭಾವನಾತ್ಮಕ ಬೆಸುಗೆಯ ಫಲ ಒಡೆಯ ತನ್ನ ಇಳಿ ವಯಸ್ಸಿನಲ್ಲಿ ತನ್ನ ಹುಟ್ಟೂರು ಎಡನ್‌ಗೆ ತೆರಳುವಾಗ ತನ್ನ ಮಕ್ಕಳ ಜೊತೆಗೆ ಬೊಮ್ಮನನ್ನು ಕರೆದೊಯ್ದ. ಈ ಕಾದಂಬರಿಯ ವಸ್ತು ವಿಷಯ ಸ್ಥಳಗಳ ವಿಸ್ತಾರವನ್ನು ಗಮನಿಸುವಾಗ ಇದು ಧರ್ಮ ಯುದ್ಧದಿಂದ ತೊಡಗಿ ಆಪರೇಷನ್ ಡೆಸರ್ಟ್ಸ್ ಸ್ಟೋರ್ಮ್ ಯುದ್ಧ ನಂತರದ ಬದಲಾದ ಗಲ್ಫ್ ಜಗತ್ತು ಕಂಡ ತಲ್ಲಣದ ಸಂಕ್ಷಿಪ್ತ ಚಿತ್ರಣವನ್ನು ನೀಡುತ್ತದೆ.

(ಅಮಿತಾವ್ ಘೋಷ್)

ಲಟೈಫ, ನಷಾವಿ ಮತ್ತು ಮಂಗಳೂರು, ಎಡನ್ನಗಳನ್ನು ಕೇಂದ್ರವಾಗಿಸಿಕೊಂಡು ಕಾದಂಬರಿಯ ಒಟ್ಟು ಚಲನೆಯು ಉಪಕ್ರಮಿಸಿದೆ. ಆರು ಶತಮಾನಗಳ ಜನ ಜೀವನದ ನಂಬಿಕೆ, ಆಚರಣೆ ವ್ಯಾಪಾರ ವೈವಾಹಿಕ ಸಂಬಂಧಗಳ ಒಳ ನೋಟಗಳನ್ನು ತೆರೆದಿಡುತ್ತದೆ. ಇಲ್ಲಿ ನಿರೂಪಕನ ಪ್ರವೇಶದ ಕಾಲಕ್ಕೆ ಸಾಕಷ್ಟು ಜನದಟ್ಟಣೆಯಿದ್ದು ಒಂದೇ ಸೂರಿನಡಿ ಜನರು ಸಾಕುಪ್ರಾಣಿಗಳು ಕೋಳಿಗಳನ್ನು ಒಳಗೊಂಡಂತೆ ಒಟ್ಟಿಗೆ ಬದುಕುತ್ತಿದ್ದರು. ಇರಾನ್ ಇರಾಕ್ ಗಲ್ಫ್ ದೇಶಗಳಿಗೆ ಯುವಕರ ವಲಸೆಯಿಂದ ಭಾರತದಂತೆ ಈಜಿಪ್ಟ್‌ನ ಆರ್ಥಿಕತೆ ಬದಲಾಯಿತು. ನಂತರ ಯುದ್ಧ ತಂದಿತ್ತ ವೇದನೆ ನೋವು ಆಸಾಧಾರಣವಾದದ್ದು. ಅಮಿತಾವ್ ಸಾಮಾಜಿಕ ಮಾನವ ಶಾಸ್ತ್ರದ ವಿದ್ಯಾರ್ಥಿಯಾಗಿ ಕಾದಂಬರಿಯೊಳಗಿನ ಒಂದು ಪಾತ್ರವಾಗಿ ಅಬು ಅಲಿ, ಶೇಕ್ ಮೂಸಾ ರಂತಹ ಹಿರಿ ಜೀವಗಳನ್ನು ಒಳಗೊಂಡ ಪರಿ ಅವರ ನಡುವಿನ ಅನ್ಯೋನತೆ ವಿಶಿಷ್ಟವಾದುದು. ಸಾಂಸ್ಕೃತಿಕ ಭಿನ್ನತೆಗಳಿರುವ ಕಾರಣಕ್ಕಾಗಿ ಹಿಂದೂ ಅಮಿತಾವ್ ಈಜಿಪ್ಟಿನ ನೆಲದಲ್ಲಿ ಅನಾಗರಿಕ ಎನಿಸಿಕೊಂಡ. ಈತನಿಗೆ ಸುನ್ನತಿ, ಗುಪ್ತಾಂಗಳ ಸ್ವಚ್ಛತೆ ಲೈಂಗಿಕತೆಗಳ ಬಗ್ಗೆ ಗೊತ್ತಿಲ್ಲ, ಮತ್ತು ತನ್ನ ದೇಶದಲ್ಲಿ ಹೆಣ ಸುಡುತ್ತಾರೆ, ದನಗಳನ್ನು ಪೂಜಿಸುತ್ತಾರೆ ಎನ್ನುವ ಕಾರಣಕ್ಕಾಗಿ ಈಜಿಪ್ಟ್ ನೆಲದಲ್ಲಿ ಆತನಿಗಿಂತ ಕಿರಿಯರ ನಡುವೆ ಅಪಹಾಸ್ಯಕ್ಕೆ ಒಳಗಾದ ಈತ ತನ್ನ ದೇಶದಲ್ಲಿ ತಯಾರಾದ ನೀರಿನ ಪಂಪು ಈಜಿಪ್ಟ್‌ನಲ್ಲಿ ಜನ ಬಳಸತೊಡಗಿ ಅಮಿತಾವ್‌ನ ಸಲಹೆ ಬಯಸಿದ ಕಾರಣಕ್ಕಾಗಿ ತನ್ನ ಗೌರವವನ್ನು ಹೆಚ್ಚಿಸಿಕೊಂಡ ಪರಿ ವಿಶಿಷ್ಟ. ಬದಲಾಗುತ್ತಿರುವ ಜಗತ್ತಿನಲ್ಲಿ ಶಿಕ್ಷಣ, ತಂತ್ರಜ್ಞಾನ, ಬಂಡವಾಳ ವ್ಯವಸ್ಥೆ ಬೀರುತ್ತಿರುವ ಪ್ರಭಾವವನ್ನು ಈ ದೃಶ್ಯ ಪ್ರತಿನಿಧಿಸುತ್ತದೆ.

ಜಬೀರ್, ನಬಿಲ ನೇಕಾರ ಝಫಾಲ್, ಅಮಿತಾವ್‌ನ ಸಹವರ್ತಿಗಳಾಗಿದ್ದುಕೊಂಡು ಆತನನ್ನು ಪೊರೆದವರು. ಈಜಿಪ್ಟ್ ಎನ್ನುವ ಪುರಾತನ ಜಗತ್ತು ಅರ್ಥ ಮಾಡಿಕೊಳ್ಳಲು ಅಮಿತಾವ್‌ಗೆ ಬೆಂಬಲವಾಗಿ ನಿಂತವರು. ಇಮಾಮ್ ಇಬ್ರಾಹಿಂ ವೈದ್ಯನಾಗಿ, ಕ್ಷೌರಿಕನಾಗಿ ಒಂದು ಕಾಲದಲ್ಲಿ ನಷಾವಿಯಲ್ಲಿ ಜನಾನುರಾಗಿಯಾಗಿ ತನ್ನ ಛಾಪುಮೂಡಿಸಿದಾತ. ಆದರೆ ಅಮಿತಾವ್ ಆ ಊರಿಗೆ ಹೋದಾಗ ಜೀವಂತನಿದ್ದೂ ಜನರ ಮನಸ್ಸಿನಿಂದ ಮರೆಯಾದವ. ಇವನ ಸ್ಥಾನವನ್ನು ತನ್ನದೇ ಸಮಾಜಮುಖಿ ಚಟುವಟಿಕೆಯಿಂದ ತುಂಬಿದವ ಉಸ್ತಾದ್ ಸಾಬ್. ಈತ ಜನರಲ್ಲಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಕಾರ್ಯ ಪ್ರವೃತ್ತನಾಗುವವ. ಅಮಿತಾವ್‌ಗೂ ಆತನ ಅಧ್ಯಯನದಲ್ಲಿ ಅಗತ್ಯ ಸಲಹೆ ನೀಡುತ್ತಿದ್ದ. ಕೃಷಿ ಮತ್ತು ಬಡತನದಲ್ಲಿ ಹಾಗೂ ಇನ್ನಿತರ ವಿಷಯಗಳಲ್ಲಿ ಭಾರತ ಮತ್ತು ಈಜಿಪ್ಟ್‌ಗೆ ಇರುವ ಸಾಮ್ಯ, ಸೋದರತ್ವದ ಸಂಬಂಧದ ಬಗ್ಗೆ ತನ್ನ ಜನರಿಗೆ ಹೇಳಿ ಅಮಿತಾವ್‌ನನ್ನು ಪರಿಚಯಿಸಿ ಎರಡು ದೇಶದ ನಡುವೆ ಸ್ನೇಹ, ಬಂಧುತ್ವದ ಭಾವ ಬೆಸೆಯಲು ಪ್ರಯತ್ನ ಮಾಡುವ ಅಧ್ಯಾಪಕ. ಜಬೀರನ ಚಿಕ್ಕಪ್ಪ ಲಟೈಫ್‌ನ ಉಸ್ತಾಝ ಮುಸ್ತಫಾನದು ಇನ್ನೊಂದು ವಿಪರ್ಯಾಸದ ಮಾದರಿ. ಈತ ಅಲೆಕ್ಸಾಂಡರ್ ವಿಶ್ವವಿದ್ಯಾನಿಲಯದ ಕಾನೂನು ಪದವೀಧರ. ಭಾರತದ ಬಗ್ಗೆ ಏನೇನೂ ಗೌರವವಿಲ್ಲದ ಈ ಮನುಷ್ಯ ಅಮಿತಾವ್ನನ್ನು ಮುಸ್ಲಿಂ ಆಗಿ ಮತಾಂತರಗೊಳಿಸುವುದು ತನ್ನ ಜೀವನದ ಆಜನ್ಮಸಿದ್ಧ ಹಕ್ಕು ಎಂದು ಭಾವಿಸಿ ವರ್ತಿಸುತ್ತಿದ್ದ. ಆದರೆ ಆತ ತನ್ನ ಈ ಪ್ರಯತ್ನದಿಂದ ಹಿಮ್ಮೆಟ್ಟಿದ್ದು ಅಮಿತಾವ್‌ನ ತಂದೆಗೆ ಇದರಿಂದ ಆಘಾತವಾಗುತ್ತದೆ ಎನ್ನುವುದು ಮನವರಿಕೆಯಾದ ನಂತರ. ಮುದಿಯ ಇಮಾಮ್ ಸಾಬ್ 1952ರ ಕ್ರಾಂತಿ, ಅರಸೊತ್ತಿಗೆಯ ಕಾಲದಲ್ಲಿ ತಾವು ಜಮೀನ್ದಾರರಿಂದ ಅನುಭವಿಸುತ್ತಿದ್ದ ಅಮಾನುಷ ಹಿಂಸೆಯ ಬಗ್ಗೆ ಹೇಳುತ್ತಿದ್ದರೆ ಆತನ ಮಗ ಯಾಸಿರಾ ತಣ್ಣಗೆ ಕೇಳುತ್ತ ಕುಳಿತಿರುತ್ತಾನೆ. ಆದರೆ ಈತನ ಮಕ್ಕಳು ಅಜ್ಜನನ್ನು ಅಪಹಾಸ್ಯ ಮಾಡುತ್ತಾರೆ. ಎರಡು ಮೂರು ತಲೆಮಾರುಗಳ ನಡುವಿನ ಬದಲಾದ ಮನಸ್ಥಿತಿ ಗಳನ್ನು ಪ್ರತಿನಿಧಿಸುವ ಈ ಸಂಗತಿಗಳಿವು. ಒಂದು ಸಾಮಾನ್ಯ ಸಾವನ್ನು ಕಂಡು ಯುವಕರು ಪ್ರತಿಕ್ರಿಯಿಸುವ ಮಾದರಿಯಲ್ಲಿ ರೋಷ ಆವೇಶ ಹಿಂಸೆಗಳಿದ್ದರೆ ಹಿರಿಯರು ಅದೇ ಸಾವನ್ನು ಅನುಭವದ ಪಾತಾಳಿಯಲ್ಲಿಟ್ಟು ಜನಜೀವನದ ಶಾಂತಿಗೆ ಧಕ್ಕೆಯಾಗದಂತೆ ಪ್ರತಿಕ್ರಿಯಿಸುತ್ತ ಯಾವುದೇ ವಿಷಮ ಪರಿಸ್ಥಿತಿ ಉದ್ಭವ ಆಗದಂತೆ ಎಚ್ಚರ ವಹಿಸುವ ರೀತಿಗೂ ಇರುವ ವ್ಯತ್ಯಾಸಗಳನ್ನು ಕಾದಂಬರಿ ಆರೋಗ್ಯಪೂರ್ಣವಾಗಿ ಕಟ್ಟಿಕೊಡುತ್ತದೆ.

ಯಹೂದಿ- ಇಸ್ಲಾಂ -ಹಿಂದೂ ಈ ಯಾವುದೇ ತಲೆ ಬರಹಗಳಿಲ್ಲದಂತೆ ಎಲ್ಲ ಜನಸಾಮಾನ್ಯರು ಬಯಸುವುದು ದಿನನಿತ್ಯದ ಬದುಕಿನ ನೆಮ್ಮದಿಯನ್ನು. ಕೇವಲ ಮನುಷ್ಯರಾಗಿ ಸಹಜೀವಿಗಳ ಜೊತೆ ಪ್ರೀತಿಯ ರಾಜಕಾರಣ ಮಾಡುತ್ತ ಬದುಕುವುದು ಇಂದಿನ ಅಗತ್ಯ. ಒಟ್ಟಾರೆಯಾಗಿ ಇಡೀ ಕಾದಂಬರಿ ಮನುಷ್ಯ ಸಂಬಂಧಗಳ ಪ್ರೀತಿಗೆ ಬೆಸುಗೆಗೆ ನೂರು ದಾರಿಗಳು ಅಂದೂ ಇದ್ದವು, ಇಂದೂ ಇವೆ. ಆದರೆ ಕ್ಷುಲ್ಲಕ ಕಾರಣಗಳಿಂದಾಗಿ ಹುಟ್ಟಿಕೊಂಡ ಯುದ್ಧ, ಜಿದ್ದು, ಮತ್ಸರಗಳು ಕೋಮು, ವರ್ಣ, ದ್ವೇಷಗಳ ದಳ್ಳುರಿಗಳಾಗಿ ಜಗತ್ತಿನ ಅತ್ಯುನ್ನತ ನಾಗರೀಕತೆಗಳ ನಾಶಕ್ಕೆ ಕಾರಣವಾಗಿದೆ. ಈ ವಾಸ್ತವವನ್ನು ಅರ್ಥ ಮಾಡಿಕೊಂಡಾಗ ಸಹಜೀವಿಯನ್ನು ಪ್ರೀತಿ ಕಾಳಜಿಯೊಂದಿಗೆ ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಆಗ ನಮ್ಮ ಈ ಭೂಮಿಯು ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊಸ ಮೆರುಗು ಪಡೆಯುತ್ತದೆ ಎನ್ನುವ ಸೂಕ್ಷ್ಮಾವಲೋಕನಕ್ಕೆ ಈ ಕೃತಿಯ ಓದು ಭೂಮಿಕೆ ತೆರೆದಿಡುತ್ತದೆ.

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ