Advertisement
ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಇರಾಕ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಇರಾಕ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

2003ರಲ್ಲಿ ಇರಾಕ್ ಯುದ್ಧದ ಮೂಲಕ ಈ ನಿರ್ದಯಿಯ ಆಡಳಿತ ಕೊನೆಗೊಂಡಾಗಲೇ ಇರಾಕ್‌ನ ಜನತೆ ನಿರಾಳತೆಯ ನಿಟ್ಟುಸಿರು ಬಿಟ್ಟದ್ದು. ಇರಾಕ್‌ನಲ್ಲಿ ರಾಜಕೀಯ ಸಂಕೀರ್ಣತೆ ಇರುವುದರ ಜೊತೆಗೆ ರಾಜಕೀಯ ವಿಡಂಬನೆಯೂ ಇದೆ. ಅಲ್ಲಿನ ಜನರು ತಮಾಷೆಯ ಮೂಲಕವೇ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುತ್ತಾರೆ. ಆಡಳಿತ ವ್ಯವಸ್ಥೆಯ ಅಸಮರ್ಥತೆಯಿಂದಾಗಿ ದಿನನಿತ್ಯದ ಜೀವನದಲ್ಲಿ ಉಂಟಾಗುವ ಏರಿಳಿತಗಳನ್ನು ನಿಭಾಯಿಸಬೇಕಾದರೆ ಇಂತಹ ಹಾಸ್ಯಪ್ರವೃತ್ತಿ ಇರಬೇಕಾಗುತ್ತದೆ ಎನ್ನುವುದು ನಿಜ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಇರಾಕ್ ದೇಶದ ಕುರಿತ ಬರಹ ನಿಮ್ಮ ಓದಿಗೆ

ಇವತ್ತಿನ ಇರಾಕ್ ದೇಶವನ್ನು ಗಮನಿಸಿಕೊಂಡಾಗ ನಮ್ಮಲ್ಲಿ ವಿಸ್ಮಯವನ್ನು ಹುಟ್ಟುಹಾಕಬಲ್ಲ ಅನೇಕ ಸಂಗತಿಗಳನ್ನು ಇರಾಕ್ ಪರಂಪರೆಯಲ್ಲಿ ಬಚ್ಚಿಟ್ಟುಕೊಂಡಿವೆ. ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆಯನ್ನು ಹೊಂದಿದ ಹೆಗ್ಗಳಿಕೆ ಇರಾಕ್‌ನದ್ದು. ಮೆಸಪಟೋಮಿಯಾವನ್ನು ನಾಗರಿಕತೆಯ ತೊಟ್ಟಿಲು ಎಂದು ಗುರುತಿಸಲಾಗಿದೆ. ರೈತರಿಂದ ಕೂಡಿದ್ದ ಈ ಪ್ರದೇಶ ಫಲವತ್ತಾಗಿತ್ತು. ಕ್ರೆಸೆಂಟ್ ಎಂದು ಕರೆಯಲ್ಪಡುತ್ತಿತ್ತು. ಮೆಸಪಟೋಮಿಯಾ ಎನ್ನುವುದು ಇರಾಕಿನ ಹಳೆಯ ಹೆಸರು. ಯುಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ನಡುವಿನ ಪ್ರದೇಶವಿದು. ಇರಾಕ್ ಎನ್ನುವ ಪದ ಅರಬ್ಬೀ ಭಾಷೆಯಿಂದ ಬಂದಿದೆ. ಇರಾಕ್ ಎಂದರೆ ‘ಫಲವತ್ತಾದ’ ಎಂದರ್ಥ. ಒಂದು ಕಾಲಕ್ಕೆ ಫಲವತ್ತಾಗಿದ ಈ ಪ್ರದೇಶ ಇದ್ದ ಸ್ಥಿತಿಗೆ ತಕ್ಕಂತೆ ಹೆಸರನ್ನು ಗಳಿಸಿಕೊಂಡಿತ್ತು. ಆದರೆ ಇಂದು ಹವಾಮಾನದ ಬದಲಾವಣೆಯಿಂದಾಗಿ ಬರಡು ಭೂಮಿಯಾಗಿ ಮಾರ್ಪಟ್ಟಿದೆ. ತೀವ್ರವಾದ ಬರದಿಂದಾಗಿ ಅತೀ ಪ್ರಾಚೀನ ನಗರ ಇರಾಕ್‌ನ ಜನರ ಕಣ್ಣಿಗೆ ಗೋಚರಿಸುವಂತಾಯಿತು. ಟೈಗ್ರಿಸ್ ನದಿಯ ದಡದಲ್ಲಿ ಈ ನಗರವನ್ನು ಕಂಡುಕೊಳ್ಳಲಾಗಿದೆ. ಸುಮಾರು 3,400 ವರ್ಷಗಳಷ್ಟು ಹಳೆಯದಾದ ನಗರವು ಕಂಚಿನ ಯುಗಕ್ಕೆ ಸೇರಿದೆ.

ಮಿಟ್ಟಾನಿ ಸಾಮ್ರಾಜ್ಯಕ್ಕೆ ಇದು ಸೇರಿದ್ದಿರಬಹುದು ಎಂಬ ಊಹೆ ಪುರಾತತ್ವ ಶಾಸ್ತ್ರಜ್ಞರದ್ದು. 1980ರ ಕಾಲಘಟ್ಟದಲ್ಲಿ ಈ ನಗರವು ಮೊಸುಲ್ ಅಣೆಕಟ್ಟಿನಿಂದ ಪ್ರವಾಹಕ್ಕೆ ಒಳಗಾಯಿತು. ಪ್ರಪಂಚದ ಪ್ರಾಚೀನ ಏಳು ಅದ್ಭುತಗಳಲ್ಲಿ ಒಂದಾಗಿದ್ದ ಬ್ಯಾಬಿಲೋನ್ ನಗರವು ಈಗ ಇರಾಕ್‌ನಲ್ಲಿದೆ. ಇಶ್ತಾರ್ ಗೇಟ್ ಮತ್ತು ನೇತಾಡುವ ಉದ್ಯಾನವನಗಳು ಈ ನಗರದಲ್ಲಿ ಕಂಡುಬರುವ ಅದ್ಭುತ ವಾಸ್ತುಶಿಲ್ಪ ನಿರ್ಮಿತಿಗಳಾಗಿವೆ. ಇಶ್ತಾರ್ ಗೇಟ್ ಸಮರ್ಪಣೆಯಾಗಿರುವುದು ಇರಾಕ್‌ನ ಇಶ್ತಾರ್ ಹೆಸರಿನ ದೇವತೆಗೆ. ದೊರೆ ಎರಡನೇ ನೆಬುಚಾಡ್ನೆಜರ್ ತನ್ನ ರಾಣಿಗೆ ಉಡುಗೊರೆಯಾಗಿ ನೇತಾಡುವ ಉದ್ಯಾನವನವನ್ನು ನಿರ್ಮಿಸಿದ್ದಾನೆ. ರಾಣಿಯ ತವರೂರಿನಲ್ಲಿ ಕಂಡುಬರುವ ವಿಶಿಷ್ಟ ಎಲೆಗಳನ್ನು ಹೋಲುವ ಎಲೆಯ ವಿನ್ಯಾಸಗಳನ್ನು ಈ ಉದ್ಯಾನದಲ್ಲಿ ಕಾಣಬಹುದಾಗಿದೆ. ಪ್ರಪಂಚದ ಅತ್ಯಂತ ಹಳೆಯ ಲಿಪಿ ಹುಟ್ಟಿಕೊಂಡದ್ದು ಇರಾಕ್‌ನಲ್ಲಿ. ಕ್ಯೂನಿಫಾರ್ಮ್ ಎನ್ನುವ ಲಿಪಿಯು ದಕ್ಷಿಣ ಮೆಸಪಟೋಮಿಯಾದಲ್ಲಿ ರೂಪುಗೊಂಡಿದೆ. ಸುಮಾರು ಕ್ರಿ.ಪೂ. 3400ರ ಕಾಲಘಟ್ಟದಲ್ಲಿ ಇದು ಅಭಿವೃದ್ಧಿ ಕಂಡಿತು. ಸುಮೇರಿಯನ್ ಜನಾಂಗದವರ ಭಾಷೆಯನ್ನು ದಾಖಲಿಸುವುದಕ್ಕಾಗಿ ಈ ಲಿಪಿಯನ್ನು ರೂಪಿಸಲಾಗಿದೆ. ಇದು ಈಜಿಪ್ಟಿನ ಚಿತ್ರಲಿಪಿಗಿಂತಲೂ ಹಳೆಯದು.

ಇರಾಕ್ ಮೂಲತಃ ಪರ್ಷಿಯಾದ ಸಸಾನಿಯನ್ ಸಾಮ್ರಾಜ್ಯದ ಪ್ರಾಂತ್ಯವಾಗಿತ್ತು. ಮಧ್ಯಪ್ರಾಚ್ಯದಲ್ಲಿ ಅತೀ ಹೆಚ್ಚು ಜನರಿಂದ ಕೂಡಿದ್ದ ಶ್ರೀಮಂತ ಪ್ರದೇಶ ಇದಾಗಿತ್ತು. ಸಸಾನಿಯನ್ ಸಾಮ್ರಾಜ್ಯ ನಾಲ್ಕು ಭಾಗಗಳಾಗಿ ವಿಂಗಡಣೆಯಾದಾಗ ಅದರಲ್ಲಿ ಖ್ವಾರ್ವರನ್ ಎಂದು ಕರೆಯಲ್ಪಡುವ ಪ್ರದೇಶವೂ ಒಂದಿತ್ತು. ಈ ಪ್ರದೇಶವು ಈಗಿನ ಇರಾಕ್‌ನ ಹೆಚ್ಚಿನ ಭಾಗವನ್ನು ಒಳಗೊಂಡಿತ್ತು ಎಂಬ ಅಭಿಪ್ರಾಯವಿದೆ. ಇರಾಕ್‌ನ ಮೂಲ ಹೆಸರು ಅಲ್ ಜಝೀರಾ. ದ್ವೀಪ ಎಂದರ್ಥ. ಮೆಸಪಟೋಮಿಯಾ ಎಂಬ ಹೆಸರೂ ಇದೆ. ಅದರ ಅರ್ಥವೂ ದ್ವೀಪ ಎಂದಾಗುತ್ತದೆ. ಟೈಗ್ರಿಸ್ ಮತ್ತು ಯೂಫ್ರಟಿಸ್ ಎನ್ನುವ ಎರಡು ನದಿಗಳ ನಡುವಿನ ಪ್ರದೇಶ ಆಗಿರುವ ಕಾರಣಕ್ಕೆ ಈ ಹೆಸರು ಬಂದಿದೆ. ಅಧಿಕಾರದ ಹಪಾಹಪಿಯು ಇರಾಕಿನ ಇತಿಹಾಸವನ್ನು ರಕ್ತಮಯವಾಗಿಸಿದೆ. ಹಲವಾರು ಸಂಘರ್ಷಗಳು ಈ ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಅರಾಜಕತೆಯನ್ನು ಕಾಣುತ್ತಲೇ ಬ್ರಿಟೀಷರ ಆಡಳಿತಕ್ಕೆ ಸಿಲುಕಿಕೊಂಡ ರಾಷ್ಟ್ರವಿದು. ಮೊದಲ ಮಹಾಯುದ್ಧದ ನಂತರ ಇರಾಕ್‌ನಲ್ಲಿ ರಾಷ್ಟ್ರೀಯ ಪ್ರಜ್ಞೆ ಅತಿರೇಕಾವಸ್ಥೆಯನ್ನು ತಲುಪಿತು. ಯುದ್ಧದ ಸಮಯದಲ್ಲಿನ ಬ್ರಿಟೀಷ್ ಮಿಲಿಟರಿ ಅಧಿಕಾರಿಗಳ ವರ್ತನೆಯಿಂದಾಗಿ ಪ್ರತ್ಯೇಕ ರಾಷ್ಟ್ರದ ಕೂಗು ಮುಗಿಲು ಮುಟ್ಟಿತು. ಜೊತೆಗೆ ಹೊಸ ಇರಾಕ್ ರಾಷ್ಟ್ರದ ವ್ಯಾಪ್ತಿಯನ್ನು ನಿರ್ಧರಿಸಿತು. ಇದರ ಹೊರತಾಗಿಯೂ ಬ್ರಿಟೀಷ್ ಸರ್ಕಾರಕ್ಕೆ ಇನ್ನೂ ಗೊಂದಲ ಉಳಿದುಕೊಂಡಿತ್ತು. ಇರಾಕ್‌ನನ್ನು ನೇರ ನಿಯಂತ್ರಣಕ್ಕೆ ಒಳಪಡಿಸಬೇಕೇ ಅಥವಾ ಪರೋಕ್ಷ ನಿಯಂತ್ರಣದಡಿಗೆ ತರಬೇಕೇ ಎನ್ನುವ ಎರಡು ಪ್ರಶ್ನೆಗಳಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಬ್ರಿಟೀಷ್ ಅಧಿಕಾರಿಗಳಲ್ಲಿಯೇ ಒಮ್ಮತ ಇರಲಿಲ್ಲ. ಈ ಎಲ್ಲಾ ರಾಜಕೀಯ ವಿದ್ಯಮಾನಗಳು ಇರಾಕ್ ಜನರಲ್ಲಿ ರಾಷ್ಟ್ರೀಯತೆಯನ್ನು ಬಲಪಡಿಸಿದವು. ರಾಷ್ಟ್ರೀಯವಾದಿ ಚಳುವಳಿಗಳು ಹಲವು ಪ್ರದೇಶಗಳಲ್ಲಿ ನಡೆದವು. ಬ್ರಿಟೀಷ್ ಸೇನಾಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕೆಲವು ಪ್ರದೇಶಗಳಲ್ಲಿ ಮಾತ್ರ ದಂಗೆ ವಿಫಲವಾಯಿತು. ಬ್ರಿಟೀಷರ ನಿರಂತರ ಪ್ರಯತ್ನದಿಂದ ಇರಾಕ್‌ನ ದಂಗೆ ನಿಯಂತ್ರಣಕ್ಕೆ ಬಂದರೂ ಸಹ ಇರಾಕ್‌ನ ಸ್ವಾತಂತ್ರ್ಯದ ಪರವಾದ ಸಾರ್ವಜನಿಕ ಅಭಿಪ್ರಾಯ ಬ್ರಿಟನ್‌ನಲ್ಲಿ ರೂಪುಗೊಳ್ಳುವಂತಾಯಿತು.

ಜುಲೈ 1921ರಲ್ಲಿ ಇರಾಕ್‌ನ ಫೈಶಾಲ್‌ನನ್ನು ಅಲ್ಲಿಯ ರಾಜ ಎಂದು ಘೋಷಿಸುವ ನಿರ್ಣಯ ಅಂಗೀಕರಿಸಲ್ಪಟ್ಟಿತು. ಹೀಗೆ ರಾಜಪ್ರಭುತ್ವ ಸ್ಥಾಪನೆ ಆದದ್ದರಿಂದಾಗಿ ಸ್ವಾತಂತ್ರ್ಯವನ್ನು ಪಡೆಯಲು ಇರಾಕ್‌ಗೆ ಹೆಚ್ಚು ಅನುಕೂಲ ಒದಗಿಬಂತು. ಬ್ರಿಟನ್ ಜೊತೆಗೆ ಮೈತ್ರಿ ಒಪ್ಪಂದವನ್ನು ನಡೆಸಲಾಯಿತು. ಸಂವಿಧಾನದ ಕರಡನ್ನು 1924ರಲ್ಲಿ ಅಂಗೀಕರಿಸಲಾಯಿತು. ಬಸ್ರಾ, ಬಾಗ್ದಾದ್ ಮತ್ತು ಮೊಸುಲ್ ಈ ಮೂರು ಪ್ರಾಂತ್ಯಗಳನ್ನು ಸೇರಿಸಿ ಒಂದು ಆಡಳಿತ ಘಟಕವನ್ನು ರೂಪಿಸುವ ನಿರ್ಣಯ ಕೈಗೊಳ್ಳಲಾಯಿತು. ಈ ಪ್ರಾಂತ್ಯಗಳಲ್ಲಿರುವ ಬೇರೆ ಬೇರೆ ಜನಾಂಗಗಳು ಮತ್ತು ಧರ್ಮಗಳನ್ನು ಒಂದು ರಾಷ್ಟ್ರವಾಗಿ ಒಟ್ಟುಗೂಡಿಸುವ ನಿರ್ಧಾರ ರೂಪುಗೊಂಡಿತು. ಇದರ ಫಲವಾಗಿ 1932ರ ಅಕ್ಟೋಬರ್ 3ರಂದು ಇರಾಕ್ ಸ್ವತಂತ್ರ ರಾಷ್ಟ್ರವಾಗಿ ಮಾನ್ಯತೆ ಪಡೆಯಿತು.

ವಾಸ್ತವವಾಗಿ ಇರಾಕಿನ ಆಡಳಿತ ವ್ಯವಸ್ಥೆ ಅನಪೇಕ್ಷಿತ ಪಲ್ಲಟಗಳನ್ನು ಕಾಣುವಂತಾದದ್ದು ಸ್ವಾತಂತ್ರ್ಯಾನಂತರವೇ. ಬ್ರಿಟೀಷರಿಂದ ಇರಾಕಿನ ರಾಜರಿಗೆ ಹಸ್ತಾಂತರಿಸಲ್ಪಟ್ಟ ಅಧಿಕಾರ ದೇಶದ ಪಾಲಿಗೆ ವರವಾಗುವ ಬದಲು ಶಾಪವಾಯಿತು. ಅಸಿರಿಯನ್ ಜನಾಂಗದವರ ದಂಗೆ ನಡೆದು ನೂರಾರು ಜನರು ಭೀಕರವಾಗಿ ಕೊಲ್ಲಲ್ಪಟ್ಟರು. ಆಡಳಿತದ ಗಂಧಗಾಳಿ ಇಲ್ಲದವರು ರಾಜವಂಶದವರೆಂಬ ಏಕಮಾತ್ರ ಕಾರಣಕ್ಕಾಗಿ ಪಟ್ಟಕ್ಕೆ ಏರಿ ದೇಶದ ಸ್ಥಿತಿಯನ್ನು ವಿಷಮಗೊಳಿಸಿದರು. ಬುಡಕಟ್ಟು ದಂಗೆ ನಡೆದದ್ದರಿಂದಾಗಿ ಕೇವಲ ಎರಡು ವರ್ಷಗಳಲ್ಲಿ ಮೂರು ಸಲ ಆಡಳಿತ ವ್ಯವಸ್ಥೆ ಬದಲಾಗುವಂತಾಯಿತು. ಅಧಿಕಾರದ ಬಗೆಗೆ ಅತಿರೇಕದ ಆಸಕ್ತಿ ಇಟ್ಟುಕೊಂಡಿದ್ದ ರಾಜಕೀಯ ನಾಯಕರು ಇರಾಕಿನ ಸೇನಾ ವ್ಯವಸ್ಥೆಯನ್ನು ಪ್ರಚೋದಿಸಿದ್ದರಿಂದಾಗಿ ಮಿಲಿಟರಿ ದಂಗೆ ನಡೆಯಿತು. ಮಿಲಿಟರಿ ವ್ಯವಸ್ಥೆಯು ಆಡಳಿತ ನೀತಿಯಲ್ಲಿ ಹಸ್ತಕ್ಷೇಪ ನಡೆಸುವಂತಾಯಿತು. ಮೊದಲ ಮಹಾಯುದ್ಧದ ಆರಂಭದ ವೇಳೆಗೆ ತೈಲ ನಿಕ್ಷೇಪಗಳ ದೊರಕುವಿಕೆಯಿಂದಾಗಿ ಇರಾಕ್‌ನಲ್ಲಿ ಹೊಸ ಭರವಸೆ ಮೂಡಿತು. ರಾಷ್ಟ್ರಕ್ಕೆ ಆದಾಯವನ್ನು ತರುವ ಲಕ್ಷಣಗಳು ಗೋಚರವಾದವು. ಇಂತಹ ಧನಾತ್ಮಕ ಅಂಶಗಳ ಹೊರತಾಗಿಯೂ ರಾಜಕೀಯ ಅಸ್ಥಿರತೆ ನಡೆಯುತ್ತಲೇ ಇತ್ತು. 1958ರಲ್ಲಿ ನಡೆದ ಕ್ರಾಂತಿಯ ಪರಿಣಾಮವಾಗಿ ರಾಜಪ್ರಭುತ್ವ ಕೊನೆಗೊಂಡಾಗ ಈ ಬಗೆಯ ಗೊಂದಲ, ಅಶಾಂತಿಗಳಿಗೆ ತಾತ್ಕಾಲಿಕವಾದ ವಿರಾಮ ದೊರಕಿತು.

ಇದಕ್ಕೂ ಮೊದಲು ಹತ್ತು ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ಈ ಅವಧಿಯಲ್ಲಿ ಐವತ್ತಕ್ಕೂ ಹೆಚ್ಚು ಸಂಸತ್ತುಗಳು ಇರಾಕ್‌ನಲ್ಲಿ ರಚನೆಯಾಗಿದ್ದವು. ಹತ್ತು ಚುನಾವಣೆಗಳಿಂದ ಐವತ್ತು ಸಂಸತ್ತುಗಳು ರಚನೆಯಾಗುವುದೆಂದರೆ ಯಾವ ಬಗೆಯ ರಾಜಕೀಯ ಪಲ್ಲಟಕ್ಕೆ ದೇಶ ಗುರಿಯಾಗಿದ್ದಿರಬಹುದು ಎನ್ನುವುದನ್ನು ಅಂದಾಜಿಸಿಕೊಳ್ಳುವುದಕ್ಕೆ ಸಾಧ್ಯವಿದೆ.

ರಾಜಪ್ರಭುತ್ವ ಕೊನೆಗೊಂಡಾಗ ರೂಪುಗೊಂಡ ಶಾಂತಿಯುತ ವಾತಾವರಣ ತಾತ್ಕಾಲಿಕವಾದದ್ದಾಗಿತ್ತು. ಇರಾಕ್ ಪರಿಸ್ಥಿತಿಯೇನೂ ಬದಲಾಗಲಿಲ್ಲ. ಸದ್ದಾಂ ಹುಸೇನ್ ಅವರ ನಾಯಕತ್ವದಲ್ಲಿ ದೇಶ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಕೊಂಡಿತು. ಪರಿಶ್ರಮದಿಂದಲೇ ಉನ್ನತ ಸ್ಥಾನಕ್ಕೇರಿದ್ದರು ಸದ್ದಾಂ ಹುಸೇನ್. ಆದರೆ ಪಕ್ಷದ ವಿಫಲತೆಗೆ ಕಾರಣವನ್ನು ಹುಡುಕಹೊರಟ ಅವರು ಹಲವಾರು ಪರಿವರ್ತನೆಗಳನ್ನು, ಕಠಿಣ ಕ್ರಮಗಳನ್ನು ಜಾರಿಗೆ ತಂದರು. ಯಾವುದೇ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳಬಾರದು. ಬೇರೆ ಪಕ್ಷದವರ ವಿರೋಧಗಳನ್ನೂ ಪರಿಗಣಿಸಬಾರದು. ತನ್ನ ಪಕ್ಷದಲ್ಲಿರುವವರು ಪಕ್ಷದ ಸಿದ್ಧಾಂತಗಳಿಗೆ ಮಾತ್ರವಲ್ಲ; ತನಗೂ ಬದ್ಧರಾಗಿರಬೇಕು ಇಂತಹ ಕೆಲವು ಆಲೋಚನೆಗಳನ್ನು ಸದ್ದಾಂ ಹುಸೇನ್ ಕಾರ್ಯರೂಪಕ್ಕಿಳಿಸಿದರು. ತಮ್ಮ ಆಡಳಿತವನ್ನು ವಿರೋಧಿಸಿದವರು ಜೈಲು ಸೇರುವಂತೆ ಮಾಡಿದರು. ಮರಣದಂಡನೆ ವಿಧಿಸಿದರು. ತಮ್ಮ ಪಕ್ಷದವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಂಡರು. ಇದರ ಫಲವಾಗಿ ಅವರೊಬ್ಬ ಸರ್ವಾಧಿಕಾರಿಯ ರೀತಿಯಲ್ಲಿ ಗುರುತಿಸಲ್ಪಟ್ಟರು. ಅವರನ್ನು ವಿರೋಧಿಸಿದರೆ ಆಪತ್ತು ಎದುರಾಗುತ್ತದೆ ಎನ್ನುವ ಭೀತಿ ಇದ್ದುದರಿಂದ ಅವಿರೋಧ ನಾಯಕರಾಗಿ ಅವರು ರೂಪುಗೊಳ್ಳುವಂತಾಯಿತು. ವಿರೋಧಗಳನ್ನೇ ವಿರೋಧಿಸಿದ ಸದ್ದಾಂ ತೆಗೆದುಕೊಂಡದ್ದೇ ನಿರ್ಣಯವಾಯಿತು. ಹೇಳಿದ್ದೇ ಆದೇಶವಾಯಿತು. ಮಾಡಿದ್ದೇ ಮಹಾನ್ ಕಾರ್ಯವಾಯಿತು. ಸದ್ದಾಂ ಹುಸೇನ್ ಕಾರುಬಾರು ಇರಾಕ್‌ನೊಳಗೆ ಮಾತ್ರವಲ್ಲದೆ ರಾಷ್ಟ್ರದ ಹೊರಗೂ ನಡೆಯಿತು. ಇದರಿಂದಾಗಿ ಬೇರೆ ದೇಶಗಳ ಜೊತೆಗೆ ಇರಾಕಿನ ಸಂಬಂಧ ಹದಗೆಡುತ್ತಾ ಹೋಯಿತು. ಇರಾನ್-ಇರಾಕ್ ಯುದ್ಧ, ಪರ್ಷಿಯನ್ ಗಲ್ಫ್ ಯುದ್ಧಗಳು ನಡೆದದ್ದು ಇವರ ನಿರಂಕುಶ ಧೋರಣೆಯಿಂದಲೇ. ಇದರ ಅಂತಿಮ ಫಲ ಇಷ್ಟೇ, ವಿಶ್ವದ ಪ್ರಮುಖ ರಾಷ್ಟ್ರಗಳು ಇರಾಕನ್ನು ಪ್ರತ್ಯೇಕವಾಗಿಟ್ಟವು. ಇದರಿಂದ ಆರ್ಥಿಕ ಬಿಕ್ಕಟ್ಟು ಇರಾಕನ್ನು ಬಾಧಿಸುವಂತಾಯಿತು. ಇರಾಕಿನ ಸಾಮಾಜಿಕ ವ್ಯವಸ್ಥೆ ಅತಂತ್ರಗೊಂಡಿತು. ದೇಶದ ಸ್ಥಿತಿ ಇನ್ನು ಹಾಳಾಗುವುದಕ್ಕೇನೂ ಬಾಕಿಯಿಲ್ಲ ಎನ್ನುವಷ್ಟು ಕೆಟ್ಟುಹೋಯಿತು.

ಆಳುವವರು ಜನರ ಪರವಾಗಿರದೆ ಸ್ವಾರ್ಥಪರರಾದರೆ ದೇಶ ಅದಾವ ಪರಿಯಲ್ಲಿ ದಿಕ್ಕುಗೆಡಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ಸದ್ದಾಂ ಹುಸೇನ್ ಅವಧಿಯ ಇರಾಕ್ ಕಡೆಗೊಮ್ಮೆ ಕಣ್ಣು ಹರಿಸಬೇಕು. 2003ರಲ್ಲಿ ಇರಾಕ್ ಯುದ್ಧದ ಮೂಲಕ ಈ ನಿರ್ದಯಿಯ ಆಡಳಿತ ಕೊನೆಗೊಂಡಾಗಲೇ ಇರಾಕ್‌ನ ಜನತೆ ನಿರಾಳತೆಯ ನಿಟ್ಟುಸಿರು ಬಿಟ್ಟದ್ದು. ಇರಾಕ್‌ನಲ್ಲಿ ರಾಜಕೀಯ ಸಂಕೀರ್ಣತೆ ಇರುವುದರ ಜೊತೆಗೆ ರಾಜಕೀಯ ವಿಡಂಬನೆಯೂ ಇದೆ. ಅಲ್ಲಿನ ಜನರು ತಮಾಷೆಯ ಮೂಲಕವೇ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುತ್ತಾರೆ. ಆಡಳಿತ ವ್ಯವಸ್ಥೆಯ ಅಸಮರ್ಥತೆಯಿಂದಾಗಿ ದಿನನಿತ್ಯದ ಜೀವನದಲ್ಲಿ ಉಂಟಾಗುವ ಏರಿಳಿತಗಳನ್ನು ನಿಭಾಯಿಸಬೇಕಾದರೆ ಇಂತಹ ಹಾಸ್ಯಪ್ರವೃತ್ತಿ ಇರಬೇಕಾಗುತ್ತದೆ ಎನ್ನುವುದು ನಿಜ.

ಇರಾಕ್‌ನಲ್ಲಿ ಅದೆಷ್ಟೇ ರಾಜಕೀಯ ಸಮಸ್ಯೆಗಳು ಇದ್ದರೂ ಸಹ ಕಲೆ- ಸಾಹಿತ್ಯಗಳಂತಹ ಕ್ರಿಯಾತ್ಮಕ ವಿಚಾರಗಳಲ್ಲಿ ದೇಶವು ಹಿಂದೆ ಬಿದ್ದಿಲ್ಲ. ಬಾಗ್ದಾದ್ ಪ್ರದೇಶವನ್ನು ಕೇಂದ್ರವಾಗಿರಿಸಿಕೊಂಡು ಸೃಜನಶೀಲ ಚಟುವಟಿಕೆಗಳು ಬೆಳವಣಿಗೆ ಕಂಡಿವೆ. ನೃತ್ಯ, ಸಾಹಿತ್ಯ, ರಂಗಭೂಮಿ ಸೇರಿದಂತೆ ಅನೇಕ ಕಲಾಪ್ರಕಾರಗಳು ಸಾಂಪ್ರದಾಯಿಕ- ಆಧುನಿಕ, ದೇಶೀಯ- ಪಾಶ್ಚಿಮಾತ್ಯ ಇಂತಹ ಭೇದ- ಭಾವಗಳನ್ನು ಇಟ್ಟುಕೊಳ್ಳದೆ ಅಭಿವೃದ್ಧಿ ಸಾಧಿಸುತ್ತಿವೆ. ಈ ಕಾರಣದಿಂದ ಪಾರಂಪರಿಕವಾದ ಕಲೆಗಳ ಜೊತೆಗೆ ಪಾಶ್ಚಿಮಾತ್ಯ ಕಲಾಪ್ರಕಾರಗಳೂ ಸಹ ಇರಾಕನ್ನು ಪ್ರವೇಶಿಸಿವೆ. ನಾಜಿಕ್ ಅಲ್ ಮಲಾಕಾ, ಬದ್ರ್ ಶಾಕಿರ್ ಅಲ್ ಸಯಬ್, ಅಬ್ದ್ ಅಲ್ ವಾಹ್ಹಾ ಅರೇಬಿಕ್, ಮುಹಮ್ಮದ್ ಮಹ್ದಿ ಅಲ್ ಜವಾಹಿರಿ ಮೊದಲಾದವರು ಇಪ್ಪತ್ತನೇ ಶತಮಾನದಲ್ಲಿ ಇರಾಕ್ ಸಾಹಿತ್ಯ ಕ್ಷೇತ್ರವನ್ನು ಮುನ್ನೆಲೆಗೆ ತಂದವರಾಗಿದ್ದಾರೆ. ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದ ವರ್ಣಚಿತ್ರಕಾರರು ಇರಾಕ್‌ನಲ್ಲಿದ್ದಾರೆ. ಚರ್ಮ ಮತ್ತು ತಾಮ್ರದ ಕೆಲಸ ಮಾಡುವವರಿಗೆ ಸರ್ಕಾರವೇ ಪ್ರೋತ್ಸಾಹ ನೀಡುವ ಮೂಲಕ ಕರಕುಶಲ ಕಲೆಗಳನ್ನು ಮುಂದಿನ ಪೀಳಿಗೆಗೆ ರವಾನಿಸುವುದರ ಕಡೆಗೆ ಗಮನ ನೀಡಿದೆ.

ಇರಾಕಿನ ಬಾತ್ ಪಕ್ಷವು ಅಲ್ಲಿನ ಸಂಸ್ಕೃತಿಯ ಬೆಳವಣಿಗೆಗೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಿಂದಲೂ ಅಗಾಧವಾದ ಉತ್ತೇಜನೆಯನ್ನು ನೀಡುತ್ತಲೇ ಬಂದಿದೆ. ಪ್ರದರ್ಶನ ಕಲೆಗಳು, ಸಾಹಿತ್ಯ, ನಾಟಕ, ಶಿಲ್ಪಕಲೆ ಮೊದಲಾದವುಗಳಿಗೆ ನಿರಂತರವಾಗಿ ಬೆಂಬಲ ಕೊಡುವ ಮೂಲಕ ದೇಶಕ್ಕೆ ಸಾಂಸ್ಕೃತಿಕ ನೆಲೆಯ ಗುರುತಿಸುವಿಕೆಯನ್ನು ಒದಗಿಸಿಕೊಡುವ ಪ್ರಯತ್ನ ನಡೆಯಿತು. ಇರಾಕ್‌ನ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಕಲಾಪ್ರಕಾರಗಳನ್ನು ಪ್ರದರ್ಶಿಸಲು ಅಲ್ಲಿನ ನಾಗರಿಕರನ್ನು ಪ್ರೇರೇಪಿಸಲಾಯಿತು. ಪ್ರತೀ ಆಡಳಿತ ಪ್ರಾಂತ್ಯದಲ್ಲಿ ಪುರಾತತ್ವ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಯಿತು. ಬೇರೆ ಬೇರೆ ಪ್ರದೇಶಗಳಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ಅದ್ಧೂರಿಯಾಗಿ ನಡೆಸಲಾಯಿತು. ವಿದೇಶಗಳಿಂದಲೂ ಜನರನ್ನು ಆಹ್ವಾನಿಸಲಾಯಿತು. ಇರಾಕ್‌ನ ಆಡಳಿತ ವ್ಯವಸ್ಥೆಯು ಆಧುನಿಕ ಕಾಲಘಟ್ಟದ ಒತ್ತಡಕ್ಕೆ ಸಿಲುಕಿ ದೇಶವು ಪಾರಂಪರಿಕ ಮೌಲ್ಯಗಳನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದೆ. ಇಸ್ಲಾಮಿಕ್ ಸಂಪ್ರದಾಯ ಮತ್ತು ನೈತಿಕ ಕಾನೂನುಗಳನ್ನು ಪುನರುಜ್ಜೀವನಗೊಳಿಸಲು ಶ್ರಮಿಸಿದೆ.

ಬಹುತೇಕ ಅರಬ್ ದೇಶಗಳ ಜನರು ಫುಟ್‌ಬಾಲ್ ಪ್ರಿಯರು. ಇರಾಕ್‌ನ ಜನರೂ ಸಹ ಇದಕ್ಕೆ ಹೊರತಾಗಿಲ್ಲ. ಫುಟ್‌ಬಾಲ್ ಇರಾಕಿನ ಜನರಲ್ಲಿ ಉತ್ಸಾಹ ಮೂಡಿಸುವ ಕ್ರೀಡೆಯಾಗಿದೆ. ಬಾಗ್ದಾದ್‌ನಲ್ಲಿರುವ ಅಲ್ ಶಾಬ್ ಕ್ರೀಡಾಂಗಣವು ಫುಟ್‌ಬಾಲ್ ಆಟಕ್ಕೆ ಹೆಸರುವಾಸಿಯಾಗಿದೆ. ಅಲ್ ಶಾಬ್ ಎಂದರೆ ಜನರು ಎಂದರ್ಥ. ಕ್ರೀಡಾಂಗಣದ ಹೆಸರಿಗೆ ತಕ್ಕಂತೆ ಫುಟ್‌ಬಾಲ್ ಪಂದ್ಯ ಇದ್ದಾಗಲೆಲ್ಲಾ ಅಲ್ಲಿ ಜನಸಮೂಹವೇ ನೆರೆದಿರುತ್ತದೆ. ದೂರದರ್ಶನದ ಮೂಲಕ ವೀಕ್ಷಿಸುವ ಲಕ್ಷಾಂತರ ಜನರಿದ್ದಾರೆ. ಫುಟ್‌ಬಾಲ್ ಎಂದರೆ ಆ ಬಗೆಯ ಕ್ರೇಜ಼್ ಇದೆ ಇರಾಕ್‌ನಲ್ಲಿ. ಇರಾಕ್‌ನ ಫುಟ್‌ಬಾಲ್ ತಂಡವು 2006ರ ಏಷ್ಯನ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಫೈನಲ್‌ವರೆಗೆ ಹೋಗಿತ್ತು. ಆದರೆ ಟ್ರೋಫಿ ಒಲಿಯಲಿಲ್ಲ. ಮರುವರ್ಷವೇ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಇರಾಕಿನ ಫುಟ್‌ಬಾಲ್ ಆಟಗಾರರು ದೇಶದ ಕನಸನ್ನು ನನಸಾಗಿಸಿದರು.

ಇರಾಕ್‌ನಲ್ಲಿ ರಾಷ್ಟ್ರೀಯ ಒಲಿಂಪಿಕ್ ಸಮಿತಿ ರಚನೆಯಾದದ್ದು 1948ರಲ್ಲಿ. ಲಂಡನ್ ಒಲಿಂಪಿಕ್ ಇರಾಕ್‌ನ ಕ್ರೀಡಾಪಟುಗಳ ಪಾಲಿಗೆ ಮೊದಲ ಒಲಿಂಪಿಕ್ ಕ್ರೀಡಾಕೂಟವಾಗಿತ್ತು. ಮೊದಲ ಒಲಿಂಪಿಕ್ ಪದಕ ಗೆಲ್ಲುವುದಕ್ಕೆ ಹನ್ನೆರಡು ವರ್ಷಗಳೇ ಬೇಕಾಯಿತು. ಈ ಮೊದಲ ಜಯ ಒಲಿದದ್ದು ಭಾರ ಎತ್ತುವ ಸ್ಪರ್ಧೆಯಲ್ಲಿ. ಇರಾಕ್‌ನ ಕ್ರೀಡಾಕ್ಷೇತ್ರವನ್ನು ಅಲ್ಲಿನ ರಾಜಕೀಯ ವ್ಯವಸ್ಥೆ ಅತಿರೇಕದಿಂದ ನಿಯಂತ್ರಿಸಿದೆ. ಈ ಕಾರಣದಿಂದಲೇ ಅಲ್ಲಿಯ ಒಲಿಂಪಿಕ್ ಸಮಿತಿ ಅನೇಕ ಸಮಸ್ಯೆಗಳಿಗೆ ತುತ್ತಾಗಿದೆ. ಸದ್ದಾಂ ಹುಸೇನ್ ಪುತ್ರ ಉದಯ್ ಹುಸೇನ್ ಒಲಿಂಪಿಕ್ ಸಮಿತಿಯ ಅಧ್ಯಕ್ಷನಾಗಿದ್ದ. ಆದರೆ ಯುದ್ಧದ ಸಮಯದಲ್ಲಿ ಇವನು ಇರಾಕ್ ಸೈನಿಕರಿಂದ ಕೊಲ್ಲಲ್ಪಟ್ಟ ಕಾರಣ ಏಷ್ಯಾದ ಒಲಿಂಪಿಕ್ ಸಮಿತಿಯಿಂದ ಇರಾಕನ್ನು ಹೊರಹಾಕಲಾಗಿದೆ. ಇರಾಕ್ ಭಾಗವಹಿಸಿದ ಪಂದ್ಯಾವಳಿಗಳನ್ನು ಇತರ ಅರಬ್ ದೇಶಗಳು ಬಹಿಷ್ಕರಿಸಿದ ಉದಾಹರಣೆಯೂ ಇದೆ. ಇಂತಹ ರಾಜಕೀಯ ತಿಕ್ಕಾಟಗಳಿಂದಾಗಿ ಏನೇ ನಡೆದರೂ ಅಂತಿಮವಾಗಿ ಸಮಸ್ಯೆ ಅನುಭವಿಸುವವರು ಗೆಲುವಿನ ಕನಸು ಕಾಣುತ್ತಿದ್ದ ಕ್ರೀಡಾಪಟುಗಳು ಎನ್ನುವುದು ನಿಜಕ್ಕೂ ವಿಷಾದದ ಸಂಗತಿ.

ಇರಾಕ್‌ನ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿಕೊಂಡಾಗ ಧನಾತ್ಮಕ ಮತ್ತು ಋಣಾತ್ಮಕವಾದ ಸಂಗತಿಗಳೆರಡೂ ಗೋಚರವಾಗುತ್ತವೆ. ಉನ್ನತ ಹುದ್ದೆಗಳನ್ನು ಅಲಂಕರಿಸುವ ಅರ್ಹತೆ ಗಳಿಸಿಕೊಂಡ ಸಾಕಷ್ಟು ಜನರು ಈ ದೇಶದಲ್ಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ದೇಶಗಳು ಅವಕಾಶ ಮಾಡಿಕೊಟ್ಟಿತ್ತು. ಹಿಂದೆ ಇರಾಕಿನ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಾಗಿ ಅಮೇರಿಕಾ ಮತ್ತು ಯುರೋಪಿನ ದೇಶಗಳಿಗೆ ಹೋಗುತ್ತಿದ್ದರು. ಆದರೆ ಪರ್ಷಿಯನ್ ಗಲ್ಫ್ ಯುದ್ಧದ ನಂತರ ಇರಾಕ್ ಬಗ್ಗೆ ಬೇರೆ ದೇಶಗಳಲ್ಲಿ ಋಣಾತ್ಮಕ ಅಭಿಪ್ರಾಯ ರೂಪುಗೊಂಡಿತು. ಇದರ ಪರಿಣಾಮವನ್ನು ಇರಾಕಿನ ವಿದ್ಯಾರ್ಥಿಗಳು ಅನುಭವಿಸುವಂತಾಯಿತು. ವಿದೇಶಗಳಿಗೆ ಅನುಮತಿ ನಿರಾಕರಿಸಲ್ಪಟ್ಟಿತು.

1990ರ ದಶಕದ ಆರಂಭದಲ್ಲಿ ಅಲ್ಲಿಯ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಬಹುತೇಕರು ಜೀವನ ನಡೆಸಬೇಕಾದರೆ ದುಡಿಯಬೇಕಾದ ಒತ್ತಡಕ್ಕೆ ಸಿಲುಕಿದ್ದರು. ಇದರಿಂದಾಗಿ ಹಲವರು ಶಿಕ್ಷಣದಿಂದ ವಂಚಿತರಾದರು. ಇದರ ಹೊರತಾಗಿಯೂ ಇರಾಕಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗಳಲ್ಲಿ ಮುಂದಿದ್ದಾರೆ. ಅಲ್ಲಿಯ ಹುಡುಗಿಯರೂ ಸಹ ವಿದ್ಯಾಭ್ಯಾಸ ಪಡೆಯುವಂತಾಗಿದೆ. ಕೆಲವು ವಿಶ್ವವಿದ್ಯಾಲಯಗಳನ್ನು ಪರಿಗಣನೆಗೆ ತೆಗೆದುಕೊಂಡು ಹೇಳುವುದಾದರೆ, ಉನ್ನತ ಶಿಕ್ಷಣ ಪಡೆಯುವವರಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತಲೂ ಅಧಿಕವಾಗಿದೆ. ಆದರೆ ಇರಾಕಿನ ಒಟ್ಟು ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿಕೊಂಡಾಗ ಗುಣಮಟ್ಟದ ಕೊರತೆ ಇದೆ ಎನ್ನುವುದು ಸ್ಪಷ್ಟ.

ಸದಾಕಾಲವೂ ಯುದ್ಧ, ದಂಗೆ, ಕಲಹ, ಸಂಘರ್ಷ ಎಂದೇ ಪಠಿಸುತ್ತಿರುವ ಇರಾಕಿನ ದೈನಂದಿನ ಜೀವನ ಹೇಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದ್ವೇಷವನ್ನೇ ಮುಂದುಮಾಡಿಕೊಂಡ ದೇಶವೊಂದು ದಿನದಿನವೂ ವಿನಾಶವನ್ನೇ ಕಾಣುತ್ತಿರುತ್ತದೆ ಎನ್ನುವುದು ಎಲ್ಲರಿಗೂ ವೇದ್ಯವಾಗಿರುವ ವಿಚಾರ. ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಿಕೊಡುವಲ್ಲಿ ಇರಾಕ್ ಸರ್ಕಾರ ತೀರಾ ಹಿಂದುಳಿದಿದೆ. ನೀರಿನ ಕೊರತೆಯಿದೆ. ವಿದ್ಯುತ್‌ನ ಅಭಾವವಿದೆ. ನಿರುದ್ಯೋಗ ಮಟ್ಟ ಏರುತ್ತಲೇ ಇದೆ. ಇರಾಕ್‌ನಲ್ಲಿ ಸದ್ದಾಂ ಹುಸೇನ್ ಆಡಳಿತಾವಧಿಯಲ್ಲಿ ಪತ್ರಿಕೆಗಳು ಸರ್ಕಾರದ ಮರ್ಜಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆ ಬಳಿಕ ಮಾಧ್ಯಮಗಳು ಸ್ವತಂತ್ರಗೊಂಡರೂ ಸಹ ಸಂಪೂರ್ಣವಾಗಿ ನಿಯಂತ್ರಣದಿಂದ ಹೊರಬಂದಿವೆ ಎಂದು ಹೇಳುವಂತಿಲ್ಲ. ಸಂಪ್ರದಾಯವಾದಿ ಮನಃಸ್ಥಿತಿಯು ಈಗಲೂ ಸಹ ಇರಾಕ್‌ನ ಪತ್ರಿಕೆಗಳು ಮತ್ತು ದೂರದರ್ಶನ ವಾಹಿನಿಗಳ ಮೇಲೆ ಪ್ರಭಾವ ಬೀರುತ್ತಲೇ ಇವೆ. ಇರಾಕ್‌ನಲ್ಲಿ ಹಲವು ಜನಾಂಗಗಳಿವೆ. ಸೆಮಿಟಿಕ್, ಬ್ಯಾಬಿಲೋನಿಯನ್, ಅಸಿರಿಯನ್ ಮತ್ತು ಸುಮೇರಿಯನ್ ಜನರು ಬಹಳ ಹಿಂದೆಯೇ ಇಲ್ಲಿಗೆ ವಲಸೆ ಬಂದವರು. ಏಳನೇ ಶತಮಾನದ ಹೊತ್ತಿಗೆ ಬಂದವರು ಅರಬ್ಬರು. ಕುರ್ದಿಶ್ ಜನಾಂಗದವರೂ ಇಲ್ಲಿದ್ದಾರೆ. ಇರಾಕ್‌ನ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಅರಬ್ಬರು. ಕಾಲು ಭಾಗದಷ್ಟು ಜನರು ಕುರ್ದಿಗಳು. ಇವರನ್ನು ಬಿಟ್ಟರೆ ಉಳಿದವರು ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ.

ಇರಾಕಿನ ಪುರುಷರ ಸಾಂಪ್ರದಾಯಿಕ ಉಡುಪನ್ನು ಥವ್ಬ್ ಎನ್ನಲಾಗುತ್ತದೆ. ಇದು ಉದ್ದನೆಯ ಅಂಗಿಯಂತಹ ದಿರಿಸು. ಮಹಿಳೆಯರು ಚಾದರ್- ಹಿಜಾಬ್‌ಗಳನ್ನು ಧರಿಸುತ್ತಾರೆ. ಆದರೆ ಪಾಶ್ಚಿಮಾತ್ಯ ಶೈಲಿಯ ಉಡುಗೆಯನ್ನು ಧರಿಸುವ ಪುರುಷರೂ ಇದ್ದಾರೆ; ಮಹಿಳೆಯರೂ ಇದ್ದಾರೆ. ಇರಾಕಿನ ಪಾಕಪದ್ಧತಿ ಸಿರಿಯಾ ಮತ್ತು ಲೆಬನಾನ್‌ಗಳಿಂದ ಪ್ರಭಾವಿತವಾಗಿದೆ. ಟರ್ಕಿ ಮತ್ತು ಇರಾನ್‌ನ ಪ್ರಭಾವವೂ ಇದೆ. ಡೊಲ್ಮಾ ಎನ್ನುವುದು ಇರಾಕ್‌ನ ಜನಪ್ರಿಯ ಖಾದ್ಯವಾಗಿದೆ. ತರಕಾರಿಗಳನ್ನು ಅಕ್ಕಿ ಮತ್ತು ಮಾಂಸದಲ್ಲಿ ತುಂಬಿ ಇದನ್ನು ತಯಾರಿಸಲಾಗುತ್ತದೆ. ಕೋಳಿ ಮತ್ತು ಕುರಿಮರಿಗಳ ಮಾಂಸ ಇಲ್ಲಿನವರ ನೆಚ್ಚಿನ ಆಹಾರವಾಗಿದೆ. ಮಾಂಸಕ್ಕೆ ನಿಂಬೆರಸ, ಬೆಳ್ಳುಳ್ಳಿ ಮತ್ತು ಮಸಾಲೆಗಳನ್ನು ಸೇರಿಸಿ, ಇದ್ದಿಲಿನ ಮೇಲೆ ಸುಟ್ಟು ತಿನ್ನುವುದನ್ನು ಇಷ್ಟಪಡುತ್ತಾರೆ. ಫ್ಲಾಟ್‌ಬ್ರೆಡ್ ಇಲ್ಲಿನ ಪ್ರಧಾನ ಆಹಾರವಾಗಿದೆ. ಖರ್ಜೂರಗಳನ್ನೂ ಸಹ ಇರಾಕ್ ಜನರು ಇಷ್ಟಪಟ್ಟು ತಿನ್ನುತ್ತಾರೆ. ಮಸ್ಗೌಫ್, ಕ್ಯುಜಿ, ತಶ್ರೀಬ್, ಮಖ್ಲಾಮಾ, ಮಾರ್ಗತ್ ಬಾಮಿಯಾ, ಶೋರ್ಬತ್ ರುಮ್ಮನ್, ಮಕ್ಲುಬಾ ಇಂತಹ ವಿಶಿಷ್ಟ ಖಾದ್ಯಗಳು ಇರಾಕ್‌ನಲ್ಲಿವೆ. ಹುರಿದ ಲ್ಯಾಂಬ್ ರೋಸ್ಟ್, ಸುಟ್ಟ ಮೀನು, ದಾಳಿಂಬೆ ಸ್ಟ್ಯೂ ಮೊದಲಾದವು ಇರಾಕ್‌ನ ವಿಶೇಷ ಆಹಾರಗಳಾಗಿವೆ.

ಇರಾಕ್‌ನ ಜನರಿಗೆ ಚಹಾ ಎನ್ನುವುದು ಕೇವಲ ಪಾನೀಯವಲ್ಲ. ಅದರ ಬಗೆಗೆ ಅವರಿಗೊಂದು ಭಾವನಾತ್ಮಕತೆಯಿದೆ. ಇರಾಕಿನ ಯಾವುದೇ ಮನೆಗೆ ಯಾವುದೇ ಸಮಯದಲ್ಲಿ ಹೋದರೂ ಸಹ ಚಹಾವನ್ನು ನೀಡಿ ಸ್ವಾಗತಿಸಲಾಗುತ್ತದೆ. ಭೇಟಿ ಕೊಟ್ಟ ಅತಿಥಿಗಳೂ ಸಹ ಚಹಾವನ್ನು ಬೇಡ ಎನ್ನುವುದಿಲ್ಲ. ಮನಸಾರೆ ಇಷ್ಟಪಟ್ಟು ಕುಡಿಯುತ್ತಾರೆ. ಇರಾಕ್‌ನ ಹೆಚ್ಚಿನ ಬೀದಿಗಳಲ್ಲಿ ಚಹಾ ಮಾರಾಟ ಮಾಡುವವರಿದ್ದಾರೆ. ಚಹಾ ಎನ್ನುವುದು ಇರಾಕ್ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ.

ಇರಾಕ್ ದೇಶವು ಕಟ್ಟರ್ ಇಸ್ಲಾಮ್‌ವಾದಿ ಪರಂಪರೆಯನ್ನು ಹೊಂದಿದ್ದರೂ ಸಹ ಇತ್ತೀಚಿನ ದಶಕಗಳಲ್ಲಿ ಕೆಲವು ಗಮನಾರ್ಹ ಬದಲಾವಣೆಗಳು ಸಂಭವಿಸುತ್ತಿವೆ. ನಗರೀಕರಣ ಪ್ರಕ್ರಿಯೆ ಕಂಡುಬಂದಿದೆ. ಇಪ್ಪತ್ತನೇ ಶತಮಾನದಲ್ಲಿ ಆರಂಭವಾದ ಇದು ಪ್ರಸ್ತುತ ಕಾಲಘಟ್ಟದಲ್ಲಿ ಏರುಗತಿಯಲ್ಲಿದೆ. ನಗರಗಳ ಕಡೆಗೆ ಹೆಚ್ಚಿನ ಜನರು ಆಕರ್ಷಿತರಾಗುತ್ತಿದ್ದಾರೆ. ಆಧುನಿಕವಾದ ಪಾಶ್ಚಿಮಾತ್ಯ ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ನಾಲ್ಕು ಗೋಡೆಗಳ ನಡುವೆ ಇರದೆ ಉದ್ಯೋಗಕ್ಕೆ ತೆರಳುತ್ತಿದ್ದಾರೆ. ಮದ್ಯಪಾನ ಮಾಡಲು ಸಾಕಷ್ಟು ಅವಕಾಶಗಳಿವೆ. ಪಾಶ್ಚಿಮಾತ್ಯ ಶೈಲಿಯ ಮನರಂಜನೆಯನ್ನೂ ಪಡೆದುಕೊಳ್ಳುವುದಕ್ಕೆ ಸಾಧ್ಯ ಇದೆ. ಈ ಬಗೆಯ ಸ್ಥಿತ್ಯಂತರಗಳಿಗೆ ಧರ್ಮನಿಷ್ಠ ಮುಸ್ಲಿಮರು ವಿರೋಧವನ್ನು ಸೂಚಿಸುತ್ತಲೇ ಇದ್ದಾರೆ. ಆದರೆ ಇವರ ವಿರೋಧದ ಹೊರತಾಗಿಯೂ ಈ ಬಗೆಯ ಮಾರ್ಪಾಡುಗಳು ಇರಾಕ್‌ನಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಲೇ ಇವೆ.‌

ಮನುಷ್ಯ ಸಮಾಜವು ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಚಲಿಸಿಕೊಂಡು ಬಂದಿದೆ ಎನ್ನುವುದು ಪ್ರಚಲಿತವಾದ ಗ್ರಹಿಕೆ. ಆದರೆ ಇರಾಕ್‌ನ ಇತಿಹಾಸ ಮತ್ತು ವರ್ತಮಾನವನ್ನು ಗಮನಿಸಿಕೊಂಡಾಗ ಈ ಗ್ರಹಿಕೆಯು ಶೀರ್ಷಾಸನ ಮಾಡಿದಂತೆ ತೋರುತ್ತದೆ. ಪ್ರಪಂಚದ ಪ್ರಾಚೀನ ನಾಗರಿಕತೆಗೆ ನೆಲೆಯಾಗಿದ್ದ ಇರಾಕ್ ಇಪ್ಪತ್ತು ಮತ್ತು ಇಪ್ಪತ್ತೊಂದನೇ ಶತಮಾನದಲ್ಲಿ ಸತತವಾಗಿ ಯುದ್ಧ, ಸಂಘರ್ಷಗಳನ್ನೇ ಉಸಿರಾಡಿದೆ. ಪ್ರಪಂಚದ ಅತ್ಯಂತ ಹಳೆಯ ಲಿಪಿ ಜನ್ಮ ಪಡೆದದ್ದು ಇರಾಕಿನಲ್ಲಿ. ಆದರೆ ಈಗಿನ ಕಾಲಘಟ್ಟದ ಅಲ್ಲಿಯ ಮಕ್ಕಳು ಅಕ್ಷರದ ಸಹವಾಸ ಪಡೆಯುವುದಕ್ಕೆ ಹಲವು ಅಡೆತಡೆಗಳಿವೆ. ಇದನ್ನೆಲ್ಲಾ ಅವಲೋಕಿಸಿದಾಗ ನಾಗರಿಕವಾಗಿದ್ದ ಇರಾಕ್ ಸಮಾಜ ಅನಾಗರಿಕತೆಯನ್ನು ಗಮ್ಯವಾಗಿಸಿಕೊಂಡಿತೇ ಎಂಬ ಸಂಶಯ ಕಾಡುತ್ತದೆ. ಇರಾಕ್‌ನ ಪರಿಸ್ಥಿತಿ ಬದಲಾಗಬೇಕಾಗಿದೆ. ಅಲ್ಲಿಯ ಜನರು ನೆಮ್ಮದಿಯಿಂದ ಬದುಕುವ ಸ್ಥಿತಿ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಅಲ್ಲಿನ ಎಲ್ಲಾ ಜನರ ಇಚ್ಛಾಶಕ್ತಿಯ ಅಗತ್ಯವಿದೆ. ಇರಾಕ್ ಈಗ ಚೇತರಿಸಿಕೊಳ್ಳಲೇಬೇಕಾಗಿದೆ. ದೀರ್ಘಕಾಲದ ಸಂಘರ್ಷವಂತೂ ಕೊನೆಯಾಗಿದೆ. ಈಗ ದೇಶ ಅಭಿವೃದ್ಧಿಯ ಹೆಜ್ಜೆಗಳನ್ನಿಡಲು ಯೋಜಿಸಬೇಕಾಗಿದೆ. ಬೇರೆ ದೇಶಗಳ ನೆರವನ್ನೂ ಪಡೆದುಕೊಳ್ಳಬೇಕಿದೆ. ಇದೆಲ್ಲಾ ಸಾಧ್ಯವಾದರೆ ಇರಾಕ್ ಪ್ರಗತಿ ಹೊಂದುವುದಕ್ಕೆ ಸಾಧ್ಯವಿದೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ