Advertisement
ಅಲ್ಲೊಂದು ವೇಲ್ ಸಾವು, ಇಲ್ಲೊಂದು ಪಟಾಕಿ ಸಿಡಿತ: ಡಾ. ವಿನತೆ ಶರ್ಮ ಅಂಕಣ

ಅಲ್ಲೊಂದು ವೇಲ್ ಸಾವು, ಇಲ್ಲೊಂದು ಪಟಾಕಿ ಸಿಡಿತ: ಡಾ. ವಿನತೆ ಶರ್ಮ ಅಂಕಣ

ಈ ವಾರದ ಕೊನೆಯಲ್ಲಿ – ಶುಕ್ರವಾರ – ಬೇರೊಂದು ಹೊಸ ಕಥೆ ಶುರುವಾಗಿದೆ. ಇದು ಮನುಷ್ಯರಿಗಿರುವ ‘ತಾನೇ ಮೇಲು’ ಅನ್ನೋ ಅಹಂಭಾವ ಸೂಚಕ ಕಥೆ. ಚೈನಾ ದೇಶಕ್ಕೆ ಸೇರಿದ ಮೂರು ಯುದ್ಧ ನೌಕೆಗಳು ಆಸ್ಟ್ರೇಲಿಯಾದ ಟಾಸ್ಮನ್ ಸಮುದ್ರಪ್ರದೇಶದಲ್ಲಿ ‘ಲೈವ್-ಫೈರ್’ ಕಸರತ್ತು ನಡೆಸಿವೆ. ಅಂದರೆ ತಮ್ಮ ನೌಕೆಗಳಿಂದ ಆಕಾಶದಲ್ಲಿ ಸುಮಾರು ಐವತ್ತು ಸಾವಿರ ಅಡಿ ಎತ್ತರಕ್ಕೆ ಯುದ್ಧಾಯುಧಗಳನ್ನು ಚಿಮ್ಮಿಸಿವೆ. ದೀಪಾವಳಿ ಹಬ್ಬ ಬಂದರೆ ಭಾರತದಲ್ಲಿ ಪಟಾಕಿ ಸಿಡಿಸುವುದಿಲ್ಲವೇ ಹಾಗೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಅವು ಹೀಗೇ ಸಾಯಬೇಕಿತ್ತಾ, ಯಾಕೆ ಹೀಗೆ ಸಾಯಬೇಕಿತ್ತು … ಅನ್ನೋ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ತಜ್ಞರನ್ನು ಕೇಳಿದ್ದಾಯ್ತು, ವಿಜ್ಞಾನಿಗಳನ್ನು ವಿಚಾರಿಸಿದ್ದಾಯ್ತು, ಪರಿಸರಪ್ರೇಮಿಗಳನ್ನು ಸಮಾಧಾನ ಪಡಿಸಿದ್ದಾಯ್ತು. ಎಲ್ಲರಲ್ಲೂ, ಯಾರಲ್ಲೂ ‘ಹೀಗ್ಯಾಕೆ ಅವು ಸತ್ತವು?’ ಅನ್ನೋ ಕಳಕಳಿಯ ಪ್ರಶ್ನೆಗೆ, ಒಂದು + ಒಂದು = ಎರಡು ಎನ್ನುವಂಥ ಖಚಿತ ಉತ್ತರವಿಲ್ಲ.

ಇದೇ ವಾರ ಆಸ್ಟ್ರೇಲಿಯಾದ ಬಾಲವೆಂಬಂತೆ ಇರುವ ಟ್ಯಾಸ್ಮೆನಿಯಾ ರಾಜ್ಯದ ಒಂದು ಸಮುದ್ರತೀರಕ್ಕೆ ಬಂದು ಸೇರುವ ಆರ್ಥರ್ ನದಿ ಬಳಿ ಸುಮಾರು ನೂರೈವತ್ತು ಫಾಲ್ಸ್ ಕಿಲ್ಲರ್ ವೇಲ್‌ಗಳು ಸತ್ತಿವೆ. ಫಾಲ್ಸ್ ಕಿಲ್ಲರ್ ವೇಲ್ ಎಂಬ ಹೆಸರು ಬಂದಿರುವುದು ಅವು ಪ್ರಪಂಚದ ದೊಡ್ಡಾಕಾರದ ಡಾಲ್ಫಿನ್ ಜಾತಿಗೆ ಸೇರಿದವು. ನೋಡಲು ಸ್ವಲ್ಪ ನಿಜವಾದ ಕಿಲ್ಲರ್ ವೇಲ್ ಆದ Orca ಗಳಂತೆ ಕಪ್ಪು-ಗಾಢ ಕಂದು ಬಣ್ಣದಿಂದ ಅದೇ ಆಕಾರದಂತೆ ಕಾಣುತ್ತವೆ.

ಅವನ್ನು ಯಾರೂ ಸಾಯಿಸಲಿಲ್ಲ. ತಾವೇತಾವಾಗಿ ದಂಡುದಂಡಾಗಿ ತೀರವನ್ನು ಸೇರಿ, ಮರಳಿನ ಮೇಲೆ ಮಲಗಿ ಅವು ವಾಪಸ್ ನೀರಿಗೆ ಹೋಗಲಿಲ್ಲ. ವಾರದ ಆರಂಭದಲ್ಲಿ ಅವನ್ನು ಗಮನಿಸಿದ್ದ ಸ್ಥಳೀಯ ರೇಂಜರ್‌ಗಳು ಪರಿಸರ ವಿಜ್ಞಾನಿಗಳಿಗೆ, ಸರಕಾರಕ್ಕೆ ವಿಷಯ ಮುಟ್ಟಿಸಿ ಅವುಗಳ ಮೇಲೆ ಕಣ್ಣಿಟ್ಟಿದ್ದರು. ತಂಪುನೀರಿನ ಆವರಣವನ್ನು ಬಿಟ್ಟು ಮರಳಿನ ಶಾಖಕ್ಕೆ ಅವು ನಲುಗುತ್ತಾ ಸಾಯಲಾರಂಭಿಸಿದಾಗ ಅವನ್ನು ನೀರಿಗೆ ಸೇರಿಸುವ ಪ್ರಯತ್ನ ಶುರುವಾಯ್ತು. ಒಂದಿಷ್ಟು ಪ್ರಯತ್ನಿಸಿದರೂ ಒಂದು ಟನ್ ಭಾರವಿರುವ ಅವು ಮಿಸುಕಾಡಲಿಲ್ಲ. ಎಲ್ಲರಲ್ಲೂ ಅವನ್ನು ರಕ್ಷಿಸುವ ಇಚ್ಛೆ ಬಲವಾಗಿದ್ದರೂ ನಗರಪ್ರದೇಶದಿಂದ ಮುನ್ನೂರು ಕಿಲೋಮೀಟರ್ ದೂರದ ತಲುಪಲು ಕಷ್ಟವಾದ ಪ್ರದೇಶವಾಗಿತ್ತು. ಇಂಥಾ ದುರ್ಗಮ ಪ್ರದೇಶಕ್ಕೆ ಅವು ಯಾಕೆ ಬಂದವು ಎನ್ನುವುದು ಮನುಷ್ಯರಿಗೆ ಅರ್ಥವಾಗದ ವಿಷಯ ಎಂದು ವೇಲ್‌ಗಳ ಬಗ್ಗೆ ಅಧ್ಯಯನ ಮಾಡುವ ಸಮುದ್ರ ಜಲಜೀವ ವಿಜ್ಞಾನಿಗಳು ಬೇಸರಿಸಿದ್ದಾರೆ.

ಬುಧವಾರ ಬರುವಷ್ಟರಲ್ಲಿ ಅನೇಕವು ಸತ್ತು ಸುಮಾರು ತೊಂಭತ್ತು ಉಳಿದಿದ್ದು ಆಗಲೋ ಈಗಲೂ ಎಂಬಂತೆ ಇದ್ದ ಪರಿಸ್ಥಿತಿ ಎಲ್ಲರ ಮನ ಕಲಕಿತ್ತು. ಒಟ್ಟಾಗಿ ಬಂದು ತೀರ ಸೇರಿದ್ದ ಕುಟುಂಬದಲ್ಲಿ ಮರಿ ವೇಲ್, ಮದರ್ ವೇಲ್, ಅಪ್ಪ, ಅಣ್ಣ, ಅಜ್ಜಿ-ತಾತ ವೇಲ್‌ಗಳು ಎಲ್ಲರೂ ಇದ್ದರು. ಕಣ್ಣು ಬಿಟ್ಟುಕೊಂಡು ಜನರನ್ನು ನೋಡುತ್ತಿದ್ದ ಅಸಹಾಯಕ ಮರಿಗಳನ್ನು ನೋಡಿ ಸ್ಥಳೀಯರು ಕಣ್ಣೀರಿಡುತ್ತಿದ್ದರು. ವಿಡಿಯೋ ತೋರಿಸುತ್ತಿದ್ದ ಮಾಧ್ಯಮ ವಾಹಿನಿಗಳು ವೀಕ್ಷಕರಿಗೆ ‘ಇದು ನಿಮಗೆ ಮಾನಸಿಕ ಕ್ಲೇಶ ಉಂಟುಮಾಡಬಹುದು, ದಯವಿಟ್ಟು ಮುನ್ನೆಚ್ಚರಿಕೆ ವಹಿಸಿ’ ಎಂದು ಹೇಳಿ ನಂತರ ಈ ಪ್ರಾಣಿಗಳು ಕಡೆ ಉಸಿರು ಎಳೆದುಕೊಳ್ಳುತ್ತಿರುವ ದೃಶ್ಯ ತೋರಿಸುತ್ತಿದ್ದರು. ಕಡೆಗೆ ಸರಕಾರದ ನಿರ್ಧಾರದಂತೆ ಆ ತೊಂಭತ್ತು ವೇಲ್‌ಗಳಿಗೆ ‘ಪ್ರಾಣಿದಯೆ’ ಮಾನವ ಪ್ರಯತ್ನದಿಂದ ‘ಸುಖಸಾವು’ ಕೊಟ್ಟು ಅಂತಿಮನಮನ ಸಲ್ಲಿಸಿದ್ದಾಯ್ತು. ಮಾನವರನ್ನು ಮೀರಿದ ಅಗೋಚರ ಪ್ರಕೃತಿ ಪ್ರಕ್ರಿಯೆಗಳಿಗೆ ತಲೆ ಬಾಗಿದ್ದಾಯ್ತು.

ಇದು ನಡು-ವಾರದ ಕಥೆ. ಈ ವಾರದ ಕೊನೆಯಲ್ಲಿ – ಶುಕ್ರವಾರ – ಬೇರೊಂದು ಹೊಸ ಕಥೆ ಶುರುವಾಗಿದೆ. ಇದು ಮನುಷ್ಯರಿಗಿರುವ ‘ತಾನೇ ಮೇಲು’ ಅನ್ನೋ ಅಹಂಭಾವ ಸೂಚಕ ಕಥೆ. ಚೈನಾ ದೇಶಕ್ಕೆ ಸೇರಿದ ಮೂರು ಯುದ್ಧ ನೌಕೆಗಳು ಆಸ್ಟ್ರೇಲಿಯಾದ ಟಾಸ್ಮನ್ ಸಮುದ್ರಪ್ರದೇಶದಲ್ಲಿ ‘ಲೈವ್-ಫೈರ್’ ಕಸರತ್ತು ನಡೆಸಿವೆ. ಅಂದರೆ ತಮ್ಮ ನೌಕೆಗಳಿಂದ ಆಕಾಶದಲ್ಲಿ ಸುಮಾರು ಐವತ್ತು ಸಾವಿರ ಅಡಿ ಎತ್ತರಕ್ಕೆ ಯುದ್ಧಾಯುಧಗಳನ್ನು ಚಿಮ್ಮಿಸಿವೆ. ದೀಪಾವಳಿ ಹಬ್ಬ ಬಂದರೆ ಭಾರತದಲ್ಲಿ ಪಟಾಕಿ ಸಿಡಿಸುವುದಿಲ್ಲವೇ ಹಾಗೆ.

ಹಾಗೆ ಯುದ್ಧಾಯುಧಗಳನ್ನು ಚಿಮ್ಮಿಸುವ ಮೊದಲು ‘ಯಾರೂ ಹತ್ತಿರಕ್ಕೆ ಬರಬೇಡಿ’ ಎಂದು ಚೈನಾ ದೇಶದವರು ಹೇಳಿದ್ದು, ಇದ್ದಕ್ಕಿದ್ದಂತೆ ಬಂದ ಈ ಸೂಚನೆಯಿಂದ ಆತಂಕಗೊಂಡು ಆಗಸದಲ್ಲಿ ಹಾರಾಡುತ್ತಿದ್ದ ಆಸ್ಟ್ರೇಲಿಯನ್ ವಾಣಿಜ್ಯ ವಿಮಾನಗಳು ಕಕ್ಕಾಬಿಕ್ಕಿಯಾಗಿ ಬೇರೆ ‘ಆಕಾಶ ದಾರಿ’ ಹಿಡಿದಿವೆ. ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಮತ್ತು ವಿದೇಶ ಸಚಿವೆ ಚೈನಾ ದೇಶದ ಈ ವರ್ತನೆಗೆ ಕಾರಣ ಕೇಳಿ ವಿವರಗಳನ್ನು ಕೊಡಿ ಎಂದಿದ್ದಾರೆ. ಅತ್ತ ಚೈನಾ ದೇಶದ ಸಚಿವಾಲಯ ‘ಎಲ್ಲವೂ ಅಂತಾರಾಷ್ಟ್ರೀಯ ಸಮುದ್ರ ಪ್ರದೇಶದಲ್ಲಿ’ ನಡೆದಿದ್ದು, ತಾವು ಯಾವುದೇ ಅಂತಾರಾಷ್ಟ್ರೀಯ ಒಡಂಬಡಿಕೆಗಳನ್ನು ಮುರಿದಿಲ್ಲ, ಎಂದಿದ್ದಾರೆ. ಬರುಬರುತ್ತಾ ಇತ್ತೀಚಿನ ವರ್ಷಗಳಲ್ಲಿ ಚೈನಾದೇಶವು ಗೂಳಿ ತರ ವರ್ತಿಸುತ್ತಿದೆ ಎಂದು ಆಸ್ಟ್ರೇಲಿಯನ್ ರಾಜಕಾರಣಿಗಳು ಹೇಳುತ್ತಿದ್ದಾರೆ. ಗೂಳಿಯನ್ನು ಹೇಗೆ ಮಣಿಸುವುದು ಎನ್ನುವುದು ಯಾರಿಗೂ ಗೊತ್ತಿಲ್ಲ. ಅದಕ್ಕೆಲ್ಲಾ ದೊಡ್ಡಣ್ಣ ಅಮೆರಿಕೆಯೇ ಮುಂದಾಳತ್ವ ವಹಿಸಿ, ಚೈನಾಗೆ ಛೀಮಾರಿ ಹಾಕಬೇಕೇನೋ.

ಛೀಮಾರಿ ಎಂದಾಗ ನೆನಪಿಗೆ ಬಂದದ್ದು, ದೊಡ್ಡ ಸಾಹೇಬರು ಯೂಕ್ರೇನ್ ದೇಶದವರಿಗೆ ಅದರಲ್ಲೂ ಅವರ ಅಧ್ಯಕ್ಷ ಝೆಲಾನ್ಸ್ಕಿ ಅವರಿಗೆ ‘ನೀವೇ ಮೊದಲು ಯುದ್ಧ ಶುರುಮಾಡಿದ್ದು’ ಎಂದು ಛೀಮಾರಿ ಹಾಕಿದ್ದಾರೆ. ಅಮೆರಿಕೆಯ ವಿಷಯ ಯಾಕಾದ್ರೂ ಬಂತೊ. ಬೇಡವೆಂದ್ರೂ ಎಲ್ಲಾರೂ ಹಿರಿಯಣ್ಣ ಟ್ರಂಪ್ ಸಾಹೇಬರ ರಾಜಾಡಳಿತದ ಅತಿರೇಕಗಳನ್ನೇ ಮಾತನಾಡುತ್ತಾರೆ. ವಾರಕ್ಕೊಮ್ಮೆಯಾದ್ರೂ ನಾನು ಅಂತಾರಾಷ್ಟ್ರೀಯ ಮಟ್ಟದ ಮೀಟಿಂಗ್ ಅಥವಾ ಟ್ರೇನಿಂಗ್‌ ಅಥವಾ ಇನ್ನೇನೋ ವಿಷಯಕ್ಕೆಂದು ಅವರಿವರ ಜೊತೆ ಮಾತನಾಡುವುದು, ಮಾತು ಕೇಳಿಸಿಕೊಳ್ಳುವುದು ಇರುತ್ತದೆ. ಆಗೆಲ್ಲಾ, ಅಮೆರಿಕನ್ನರು, ಅವರ ಜೊತೆ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವ ಕೆನಡಿಯನ್ನರು ಗೋಳಾಡುತ್ತಾರೆ.


ಟ್ರಂಪ್ ಬಾಯಲ್ಲಿ ಬರುವ ಅಣಿಮುತ್ತುಗಳನ್ನು ನೆನಪಿಸಿಕೊಂಡು ‘ಅಯ್ಯೋ ಹೀಗೆಲ್ಲಾ ಯಾಕಾಗಬೇಕಿತ್ತು, ಇನ್ನೇನೆಲ್ಲಾ ಏನೇನು ಆಗುತ್ತದೆಯೋ ಯಾರಿಗೆ ಗೊತ್ತು’ ಎಂದು ದೀರ್ಘವಾದ ಒಂದು ಉಸಿರನ್ನು ಎಳೆದುಕೊಳ್ಳುತ್ತಾರೆ. ಕೆನಡಾದವರು ಅವರ ಸ್ವಾತಂತ್ರ್ಯದ ಬಗ್ಗೆ ಬಾಯಿ ಹಾಕಿದ ದೊಡ್ಡ ಸಾಹೇಬರ ಬಾಯಾಳಿತನವನ್ನು ಆಡಿಕೊಳ್ಳುತ್ತಾ ಈ ಕಾಲದಲ್ಲಿ ಹೀಗೆಲ್ಲಾ ಮಾತನಾಡುವ ನಾಯಕರು ಇದ್ದಾರೆ ಎಂದರೆ ನಂಬುವುದಕ್ಕೇ ಆಗುವುದಿಲ್ಲ ಎನ್ನುತ್ತಾ ಬೇಸರಿಸಿಕೊಳ್ಳುತ್ತಾರೆ. ಅವರಿಗೆ ಸಮಾಧಾನ ಹೇಳುವುದು ಅಮೆರಿಕನ್ನರು, ಬ್ರಿಟನ್ನರು ಮತ್ತು ನಮ್ಮ ಆಸ್ಟ್ರೇಲಿಯನ್ನರು. ಈ ದೇಶಗಳಲ್ಲಿ ಹೊಸಸಮಾಜಗಳ ರಚನೆ ಉಂಟಾಗಿದ್ದೇ ಅಲ್ಲಿದ್ದ ಮತ್ತೊಬ್ಬರ – ಮೂಲನಿವಾಸಿಗಳ – ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರಿಂದ ಅಲ್ಲವೇ. ಇದನ್ನು ಹೇಗೆ ಮರೆಯಲು ಸಾಧ್ಯ ಎಂದು ನನ್ನ ಭಾರತೀಯ – postcolonial – ಮನಸ್ಸು ಪಿಸುಗುಟ್ಟುತ್ತದೆ. ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ನನ್ನ ಭಾರತೀಯ ಪೌರತ್ವವನ್ನು ಬಿಟ್ಟುಕೊಟ್ಟು ಆಸ್ಟ್ರೇಲಿಯನ್ ಪಾಸ್ಪೋರ್ಟ್ ಹಿಡಿದಿದ್ದು ಅಣಕಿಸುತ್ತದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ