Advertisement
ಕಾಣುತ್ತಿಲ್ಲವೇ ಅಲ್ಲಿ ಗೋದಿನಾಗರ…: ಡಾ. ಕೆ.ಬಿ. ಶ್ರೀಧರ್ ಕಾದಂಬರಿಯ ಪುಟಗಳು

ಕಾಣುತ್ತಿಲ್ಲವೇ ಅಲ್ಲಿ ಗೋದಿನಾಗರ…: ಡಾ. ಕೆ.ಬಿ. ಶ್ರೀಧರ್ ಕಾದಂಬರಿಯ ಪುಟಗಳು

ಪಲ್ಲವಿಯು ಮುಟ್ಟಿದಲ್ಲೆಲ್ಲಾ ರೋಹಿಣಿಯು ಸಡಿಲಗೊಂಡಳು. ಗಟ್ಟಿಯಾದ ಮೇಣವು ಬೆಂಕಿಯ ಕಾವಿಗೆ ಮೆತ್ತಗಾಗುವಂತೆ… ಗೌತಮನಿಗೆ ನಂಬಲಾಗಲಿಲ್ಲ, ಅರ್ಥವೂ ಆಗಲಿಲ್ಲ. ತನಗರಿಯದ ಯಾವುದೋ ಭಾಷೆಯಲ್ಲಿ ಇವರಿಬ್ಬರು ಸಂವಹಿಸುತ್ತಿದ್ದಾರೆ ಎಂದೆನಿಸಿತು. ಬಗೆಹರಿದಂತೆ ಕಂಡಿದ್ದ ಅನುಮಾನವು ಬುಗ್ಗೆಂದು ಹೊತ್ತಿಕೊಂಡಿತು. ಮೂತ್ರಕ್ಕೆ ಅವಸರವಾದಂತಾಗಿ ಬಚ್ಚಲ ಮನೆಗೆ ಓಡಿದ. ಪಲ್ಲವಿಯು ಮೆಲ್ಲಮೆಲ್ಲನೆ ರೋಹಿಣಿಯನ್ನು ನಡೆಸುತ್ತಾ ಮನೆಯೊಳಗೆ ಕರೆದುಕೊಂಡು ಬಂದು, ಸೋಫಾ ಮೇಲೆ ಕೂರಿಸಿದಳು. ಕಿಟಕಿಯ ಪರದೆಗಳಿನ್ನೂ ಮುಚ್ಚೇಯಿದ್ದಿದ್ದರಿಂದ ಮನೆಯೊಳಗೆ ಪೂರ್ತಿ ಬೆಳಕಿರಲಿಲ್ಲ. ಅಡುಗೆ ಮನೆಯ ದೀಪ ಹಾಕಿ, ಪಲ್ಲವಿ ಕಾಫಿ ಮಾಡಲು ಹೋದಳು.
ಡಾ. ಕೆ.ಬಿ. ಶ್ರೀಧರ್ ಹೊಸ ಕಾದಂಬರಿ “ಅನೂಹ್ಯ”ದ ಕೆಲವು ಪುಟಗಳು ನಿಮ್ಮ ಓದಿಗೆ

ಕಾರು ಕಲ್ಯಾಣಮಂಟಪದ ಹತ್ತಿರ ಬಂದಿತ್ತು. ಅದರ ಪಕ್ಕದ ಮರದ ಸುತ್ತ ಕಟ್ಟಿದ್ದ ಕಟ್ಟೆಯ ಮೇಲೆ ಕಾವಿಧಾರಿಯೊಬ್ಬರು ಕುಳಿತಿದ್ದುದು ಗೌತಮನ ಕಣ್ಣಿಗೆ ಬಿತ್ತು. “ಹೇ ರೋಹೂ, ಅವ್ರೇ.. ಅವ್ರೇ..” ಎಂದು ಕೂಗಿದ. “ಯಾರು? ಏನು?” ಎಂದು ರೋಹಿಣಿ ಹೌಹಾರಿದಳು.

“ಅಲ್ಲಿ ನಮ್ ಮದ್ವೆ ಚೌಲ್ಟ್ರೀ ಕಾಣಿಸ್ತಾಯಿದೆ ನೋಡು, ಅದ್ರು ಪಕ್‌ದಲ್ಲಿ ಒಬ್ರು ಸ್ವಾಮಿಗಳು ಕೂತಿದಾರೆ ನೋಡು.. ಅಲ್ಲಿ.. ಕಾಣುಸ್ತಾ?”
“ಆ… ಹೂ… ಹೂ…”
“ಕಾರ್‌ನ ಫುಲ್ ಸ್ಲೋ ಮಾಡ್ತೀನಿ, ನೋಡನಿರು”

(ಡಾ. ಕೆ.ಬಿ. ಶ್ರೀಧರ್)

ಕಲ್ಯಾಣಮಂಟಪದ ಮುಂದೆ ಬರುವಷ್ಟರಲ್ಲಿ ಕಾರಿನ ವೇಗವು ಗಣನೀಯ ಪ್ರಮಾಣದಲ್ಲಿ ಇಳಿದು, ನಿಂತೇ ಹೋಗುವಂತೆ ಮುಂದೆ ಹೋಗುತ್ತಿತ್ತು. ರೋಹಿಣಿಯು ಕುಳಿತಿದ್ದ ಬದಿಯಲ್ಲೇ ಸ್ವಾಮಿಗಳೂ ಕುಳಿತಿದ್ದರು. ಅಪರಿಚಿತರನ್ನು ನೋಡುವುದು, ಅದೂ ದಿಟ್ಟಿಸಿ ನೋಡುವುದು ರೋಹಿಣಿಗೆ ಆಗಿ ಬರುವ ಕೆಲಸವಲ್ಲ. ಗೌತಮನ ಒತ್ತಾಯಕ್ಕೆ, ಅವನಲ್ಲೆದ್ದಿದ್ದ ಉದ್ವೇಗಕ್ಕೆ ಒಮ್ಮೆ ಕಣ್ಣು ಹಾಯಿಸಿದಳು. ಸಣ್ಣ ಚುಳುಕು. ದೇಹದಲ್ಲಲ್ಲ, ಮನಸ್ಸಿನದೂ ಅಲ್ಲ…. ಮತ್ತೆಲ್ಲೋ ಆಳದಲ್ಲಿ. ಕಿಡಿಯೊಂದರಿಂದ ಬಿಡುಗಡೆಗೊಂಡ ಶಕ್ತಿ ತರಂಗಗಳು ಗುಡುಗುಟ್ಟುತ್ತಾ ಮೇಲೆದ್ದು ದೇಹವನ್ನೆಲ್ಲಾ ವ್ಯಾಪಿಸಿದಂತಾಯಿತು. ಮೈಯೆಲ್ಲಾ ತಣ್ಣಗಾಗಿ ಕೈಮೇಲಿನ ಕೂದಲುಗಳು ಮೇಲೆದ್ದವು. ‘ಎಲ್ಲೋ ನೋಡಿರಂಗಿದ್ಯಲ್ಲಾ? ನೋಡಿದಿನಾ? ನೊ ನೊ.. ನೋಡಿರಕ್ಕೆ ಸಾಧ್ಯಾನೇಯಿಲ್ಲ. ಅವರ್ಯಾರೋ ಏನೋ? ಆದ್ರೂ ಏನಿದು ಈ ತರ ಆಗ್ತಾಯಿದೆ? ದೇಜಾವು ಅಂತಾರಲ್ಲಾ ಅದ್ ಇದೇನಾ?’ ರೋಹಿಣಿಯು ಸ್ವಗತದಲ್ಲಿ ಮುಳುಗಿದಳು. ಕಾರು ಮಂದಗತಿಯಲ್ಲಿ ಮುಂದ್ಹೋಗುತ್ತಿತ್ತು. ಆ ಸ್ವಾಮಿಯ ಮೇಲೆ ನೆಟ್ಟಿದ್ದ ಇವರಿಬ್ಬರ ನೋಟವು, ದೇಹ ಮುಂದ್ಹೋಗುತ್ತಿದ್ದರೂ ಕತ್ತನ್ನು ವಿರುದ್ಧ ದಿಕ್ಕಿಗೆ ತಿರುಗಿಸುತ್ತಿತ್ತು. ಇನ್ನೇನು ನೋಟದಿಂದ ಮರೆಯಾಗಬೇಕು, ಸ್ವಾಮಿಯು ತಲೆಯೆತ್ತಿ ರೋಹಿಣಿಯನ್ನು ನೋಡಿದರು. ಹೊರಪ್ರಪಂಚವು ಕ್ಷಣಿಕವಾಗಿ ಸ್ತಬ್ಧಗೊಂಡು, ಸ್ವಾಮಿಯ ಎದುರು ರೋಹಿಣಿಯ ನೋಟವು ನಿಂತುಬಿಟ್ಟಿತು. ಇವಳ ಕಣ್ಣಿನ ಅಮಾವಾಸ್ಯೆಯ ಕಪ್ಪು ಅಲ್ಲಿಂದಾಚೆಗೆ ಹರಡಿ ಸ್ವಾಮಿಯ ಕಣ್ಣಿನೊಳಕ್ಕೆ ವಿಸ್ತರಿಸಿತು. ಸುತ್ತೆಲ್ಲಾ ಕಾಡುಕಪ್ಪು. ಅಣುವೊಂದೂ ಕಾಣುತ್ತಿಲ್ಲ, ಮೇಲೆ ಚುಕ್ಕಿಗಳೂ ಇಲ್ಲ. “ಛೋಡ್‌ದೋ ಬೇಟೀ” ಎಂಬ ಅಚಾನಕ್ ಸಿಡಿಲು… ಎದೆಬಿರಿಯುವ ಸಿಡಿಲು… ಬೆಳಕಿನ ಮಿಂಚೇಯಿಲ್ಲ.. ಓಡಲ್ಹೋದರೆ ಕಿಂಡಿಯೇ ಕಾಣುತ್ತಿಲ್ಲ.. ಬಂಧಿಯಾದಂತೆ.

ಕಾರು ಗುಡಿಯ ಸಮೀಪಕ್ಕೆ ಬರತೊಡಗಿತು. ಗರಬಡಿದವಳಂತೆ ಕುಳಿತಿದ್ದ ರೋಹಿಣಿಯನ್ನು ಅಲುಗಿಸುತ್ತಾ ಗೌತಮ, “ರೋಹೂ, ರೋಹೂ” ಎಂದು ಚೀರತೊಡಗಿದ. ಎಡಗೈಯಲ್ಲಿ ರೋಹಿಣಿಯ ಕೆನ್ನೆಯನ್ನು ಬಡಿಯುತ್ತಾ, ಬಲಗೈನಲ್ಲಿ ಕಾರಿನ ಸ್ಟೇರಿಂಗ್ ನಿಭಾಯಿಸುತ್ತಿದ್ದವನಿಗೆ ಸುರಂಗವೊಂದನ್ನು ಹೊಕ್ಕಂತಾಯಿತು. ಸಾಗುತ್ತಿದ್ದ ಸುರಂಗವನ್ನು ಅಂತ್ಯಗೊಳಿಸಿದ್ದು ದೊಡ್ಡ ಕಲ್ಲಿನ ಗೋಡೆ. ಅತ್ತ ಕಡೆಯಿಂದ ಚೂರೂ ಬೆಳಕು ಇಣುಕುತ್ತಿಲ್ಲ. ಬ್ರೇಕ್ ಒತ್ತಿದ.

ವಿಶಾಲವಾದ ಬಯಲು. ದೂರದೂರಕ್ಕೂ ಸಮತಟ್ಟಾದ ಬಯಲು. ಅತ್ತ ಇತ್ತ ಎತ್ತ ನೋಡಿದರೂ ಬರಿದಾದ ಬಟಾಬಯಲು. ಅಲ್ಲೆಲ್ಲೋ ದೂರದ ಆಗಸದಲ್ಲಿ ಹಕ್ಕಿಗಳು ಒಂದೇ ವರ್ತುಲದಲ್ಲಿ ತಿರುಗುತ್ತಿವೆ. ಏನದೂ? ಕಣ್ಣು ಚಿಕ್ಕದು ಮಾಡಿ ನೋಡಿದರೆ, ಒಂದು ಮರ. ಒಣಗುತ್ತಿದ್ದ ತುಟಿಗಳಿಗೆ ನೆರಳಿನ ಬಯಕೆಯಾಯಿತು. ಅತ್ತ ಕಾಲ್ಹಾಕಿದ, ದಾಪುಗಾಲ್ಹಾಕಿ ಆ ಕಡೆಗೆ ಓಡತೊಡಗಿದ. ಯಾವುದರಿಂದಲೋ ತಪ್ಪಿಸಿಕೊಂಡು ದೌಡಾಯಿಸುವಂತೆ… ಯಾವುದರಿಂದ? ಭಯದಿಂದ ಓಡುತ್ತಿರುವುದೋ? ಬಯಕೆಗೋಸ್ಕರವಲ್ಲವೇ? ನಿಲ್ಲಲಾಗುತ್ತಿಲ್ಲ. ದೊಡ್ಡ ಮರ. ಮರದ ತುಂಬೆಲ್ಲಾ ಹಣ್ಣುಗಳು.. ಮಾಗಿ ಕೆಳಕ್ಕೆ ಬೀಳಲು ತಯಾರಾಗಿರುವ ಹಣ್ಣುಗಳು.. ಕೆಳಗೆ ನೋಡಿದರೆ ಸುತ್ತೆಲ್ಲಾ ಬಿದ್ದು ಕಳಿತಾಗಿರುವ ಹಣ್ಣುಗಳು.. ಬಿದ್ದಿದ್ದ ಹಣ್ಣೊಂದನ್ನು ಕೈಗೆತ್ತಿಕೊಂಡು ತಿನ್ನಲ್ಹೋದರೆ ಕೈಯಲ್ಲಿ ಪಿಚಕ್ಕೆಂದ ಹಣ್ಣಿನ ಒಳಗಿಂದ ಹುಳಗಳು ಬೀಳುತ್ತಿವೆ. ದೂರಕ್ಕೆಸೆದು ಕೈ ತೊಳೆಯೋಣ ಎಂದು ಅತ್ತಿತ್ತ ನೋಡಿದರೆ ಮರದ ಬುಡದಲ್ಲೇ ಕೊಳ. ಅರೆ, ನೆನ್ನೆಯ ಮರವೇ? ಮತ್ತೊಮ್ಮೆ ನೋಡಿದ. ಇಲ್ಲಾ ಅದಲ್ಲ, ಇದು ಬೇರೆಯದು. ಹಣ್ಣಿನ ಮರ. ರುಚಿಯಾದ ಹಣ್ಣು ತಿನ್ನುವುದಕ್ಕಾಗುತ್ತಿಲ್ಲವೇ ಎಂಬ ಭಯಂಕರ ಕೊರಗು. ಬಯಕೆ, ಕೊರಗು, ಅವುಗಳ ನಡುವೆ ಭಯ. ಏನಾದರೂ ಮಾಡಿ ಮರದ ಮೇಲಿನ ಹಣ್ಣು ಪಡೆಯಬಹುದೇ ಎಂದು ಹುಡುಕುತ್ತಿದ್ದಾನೆ. ಬೆಳಗಿನ ನಸುಗೆಂಪು ಬಣ್ಣಕ್ಕೆ ಚಿನ್ನದಂತೆ ಹೊಳೆಯುತ್ತಿರುವ ಹಣ್ಣು. ಮರವನ್ನು ಹತ್ತಲಂತೂ ಆಗದು, ಎಷ್ಟು ಕಡಿದಾಗಿದೆ.. ಅದರ ಬುಡಕ್ಕೊರಗಿ ಅಳುತ್ತಿದ್ದಾನೆ. ಕನಿಷ್ಠ ಕಳಿತ ಹಣ್ಣಾದರೂ ಸಿಗಲೆಂದು ಬಿದ್ದಿದ್ದರಲ್ಲಿ ಒಂದನ್ನು ಎತ್ತಿ ಬಾಯಿಗಿಟ್ಟು ಅಗಿದಗಿದು ನುಂಗಿದ. ಚೆನ್ನಾಗಿಯೇ ಇದೆ. ಸ್ವಲ್ಪೇ ಹೊತ್ತು. ಬೆರಳುಗಳ ತುದಿಯಿಂದ ಹುಳಗಳು ಉದುರುತ್ತಿವೆ.. ನೋಡನೋಡುತ್ತಿದ್ದಂತೆ ದೇಹದ ಕಣಕಣದಲ್ಲೂ ಹುಳಗಳು, ಬಾಯಿಯಲ್ಲೂ… ಥೂ ಎಂದು ಉಗಿದು, “ಹೇ” ಎಂದು ಕೂಗುತ್ತಾ….. ಕಾರಿನ ಬಾಗಿಲು ತೆಗೆದು ಕೆಳಕ್ಕೆ ಬಿದ್ದು, ಆದಷ್ಟೂ ಆದಷ್ಟೂ ದೂರಕ್ಕೆ ಅಂಬೆಗಾಲಿಟ್ಟು ಮೇಲೆದ್ದು ತೂರಾಡುತ್ತಾ, ಕಡೆಗೆ ಓಡುತ್ತಾ ಹೋದ. ಏನನ್ನೋ ಮರೆತಿರುವಂತಿದೆ, ಏನೂ… ಏನೂ… ಹೋ ರೋಹಿಣಿ!

ನಿಂತು ತಿರುಗಿದರೆ ರಸ್ತೆಯ ಬದಿಗೆ ಕಾರು ನಿಂತಿದೆ. ದೂರದಿಂದ ಕಾರಿನೊಳಗಿನದು ಸ್ಪಷ್ಟವಾಗಿ ಕಾಣುತ್ತಿಲ್ಲ. ಓಡಿ ಗುಡಿಯನ್ನೂ ದಾಟಿ ಸುಮಾರು ದೂರವೇ ಬಂದಿದ್ದಾನೆ. ವಾಪಸ್ಸಾಗತೊಡಗಿದ. ಹತ್ತಿರ ಹತ್ತಿರ ಬಂದಂತೆ ರೋಹಿಣಿಯ ಚಿತ್ರ ಸ್ಪಷ್ಟವಾಗುತ್ತಿದೆ. ಪ್ರತಿಮೆಯಂತಾಗಿದ್ದಾಳೆ, ಕಲ್ಲಿನ ಪ್ರತಿಮೆ. ತೆರೆದ ಕಣ್ಣು ತೆರೆದೇಯಿದೆ, ರೆಪ್ಪೆಗಳೂ ಅಲುಗುತ್ತಿಲ್ಲ. ಬೆನ್ನು ಕಾರಿನ ಸೀಟಿಗೆ ಒರಗಿಲ್ಲ, ಮುಂದೆ ಬಂದಿದೆ, ನೆಟ್ಟಗೆ ನಿಂತಿದೆ, ಯಾವುದೇ ಆಧಾರವಿಲ್ಲದೆ.. ಮುಖದ ಮೇಲಿನ ಭಾವವಂತೂ, ಮಾನವ ಪ್ರಪಂಚಕ್ಕೆ ಅಪರಿಚಿತವಾದುದು. ಉಸಿರು ನಿಂತಿದೆಯೇ ಎಂಬ ಅನುಮಾನ ಬಂದು ಗೌತಮನ ಎದೆ ಧಸಕ್ಕೆಂದಿತು. “ರೋಹೂ, ರೋಹೂ” ಎಂದು ಗಟ್ಟಿಯಾಗಿ ಕೂಗತೊಡಗಿದ. ಯಾವುದೇ ಪ್ರತಿಕ್ರಿಯೆಯಿಲ್ಲ. ಇವನ ಚೀರಾಟ, ಕೂಗಾಟ ಕೇಳಿ ಜನ ಸೇರತೊಡಗಿದರು. ದೂರದಿಂದ ಆ ಸ್ವಾಮಿಗಳೂ ಮೇಲೆದ್ದು ಬರತೊಡಗಿದರು. ಕಾರಿನ ಹತ್ತಿರಕ್ಕೋಗಲು ಭಯ, ಆದರೂ ಇಲ್ಲಿಂದ ಓಡಬೇಕು. ಧೈರ್ಯ ತಂದುಕೊಂಡು ನುಗ್ಗಿದ ಗೌತಮ, ಕಾರನ್ನು ಸ್ಟಾರ್ಟ್ ಮಾಡಿ ಮೊದಲನೆಯ ಗೇರಿಗ್ಹಾಕಿ, “ಯೋ ಯೋ” ಎನ್ನುತ್ತಿದ್ದ ಜನಗಳ ನಡುವಿನಿಂದ ತೂರಿಸಿಕೊಂಡು ಹೊರಟ.

 

ಕಾರು ತಿರುಗುತ್ತಿದ್ದರೆ, ರೋಹಿಣಿಯ ದೇಹವೂ ಕುಳಿತ ಭಂಗಿಯಲ್ಲೇ ಅತ್ತಿತ್ತ ಬೀಳುತ್ತಿದೆ, ಕಡೆದಿಟ್ಟ ವಿಗ್ರಹದಂತೆ. ಗೌತಮನಿಗೆ ಸ್ಥಿಮಿತ ಕಳೆದುಕೊಳ್ಳುತ್ತಿರುವಂತೆ ಭಾಸವಾಗತೊಡಗಿತು. ಓಡುತ್ತಿದ್ದ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ. ನೀರನ್ನು ಕುಡಿದು, ಮುಖಕ್ಕೆ, ಕತ್ತಿಗೆ ಸವರಿಕೊಂಡ. ರೋಹಿಣಿಯ ಮೂಗಿನ್ಹತ್ತಿರಕ್ಕೆ ಬೆರಳ್ಹಿಡಿದ, ಅವನ ಬೆರಳುಗಳು ನಡುಗುತ್ತಿವೆ. ಉಸಿರಾಡುತ್ತಿದ್ದಾಳೆ. ಜೀವ ಬಂದಂತಾಯಿತು. ನೀರನ್ನು ರೋಹಿಣಿಯ ಮುಖಕ್ಕೆ ಚಿಮುಕಿಸಿ, ಕೆನ್ನೆ ಮೆಲ್ಲನೆ ಬಡಿಯುತ್ತಾ “ರೋಹೂ ರೋಹೂ” ಎನ್ನುತ್ತಾ ಎಚ್ಚರಿಸಲು ಪ್ರಯತ್ನಿಸತೊಡಗಿದ. ಸಿಂಪಡಿಸಿದ ನೀರಿನ ಸಣ್ಣ ಹನಿಯೊಂದು ಅವಳ ಕಣ್ಣಿನೊಳಗೆ ಬಿದ್ದರೂ, ರೆಪ್ಪೆ ಮಿಟುಕಲಿಲ್ಲ. ಕೈ ಹಿಡಿದು ನಾಡಿಬಡಿತ ನೋಡಲು ಯತ್ನಿಸಿದ. ಕೈ ಬೆಚ್ಚಗೇಯಿದೆ, ನಾಡಿಯೂ ಮಿಡಿಯುತ್ತಿದೆ. ಮನಸ್ಸಿನಲ್ಲಿ ಏಳುತ್ತಿದ್ದ ಪ್ರಶ್ನೆಗಳಿಗೆ ನಿರುತ್ತರನಾದ.

‘ನನ್‌ಗಾದಂಗೆ ಅವ್ಳಿಗೂ ಏನೋ ಕಂಡಿದೆ.. ಅದ್ರ್‌ ಹೊಡ್ತ ತಡ್ಕೊಳಕ್ಕಾಗ್ತಾಯಿಲ್ಲ ಅನ್ಸುತ್ತೆ.. ಏನ್ ಮಾಡದೂ?’ ಎಂದು ತಳಮಳಿಸುತ್ತಿದ್ದವನಿಗೆ, ಪಲ್ಲವಿಯ ನೆನಪಾಯಿತು. ಅವಳ ನೆನಪೇಕೆ ಈಗ? ಎಲ್ಲದ್ದಕ್ಕೂ ಸಂಬಂಧವಿರಬೇಕೆ? ರೋಹಿಣಿಯ ಫೋನಿನಲ್ಲಿ ಪಲ್ಲವಿಯ ನಂಬರ್ ಹುಡುಕಿ, ಕರೆ ಮಾಡಿದ. “ಏನೇ ರೋಣೀ? ಎಷ್ಟ್ ದಿನುದ್ ಮೇಲೆ ಕಾಲ್ ಮಾಡಿದ್ಯಾ? ಹೇಗಿದ್ಯಾ?” ಅತ್ತ ಕಡೆಯಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸದೆ, ಗೌತಮ “ಪಲ್ಲವಿ ಅವ್ರೇ, ನಾನು ಗೌತಮ..” ಎಂದ. ಅವನ ನಡುಗುತ್ತಿದ್ದ ಕಂಠವನ್ನು ಕೇಳಿ ಗಾಬರಿಗೊಂಡು ಪಲ್ಲವಿ, “ಹೋ, ಗೌತಮ್.. ಸಾರಿ. ರೋಹಿಣಿ ಅನ್ಕೊಂಡೆ. ಹೇಳಿ ಏನಾಯ್ತು? ಯಾಕ್ ಟೆನ್ಸ್ ಆಗಿದೀರ? ರೋಹಿಣಿ ಹೇಗಿದಾಳೆ?” ಪ್ರಶ್ನೆಗಳ ಸುರಿಮಳೆಗೈದಳು. ಸಂಕ್ಷಿಪ್ತವಾಗಿ ತಲೆಯಲ್ಲಿ ಬಂದಿದ್ದನ್ನು ವಿವರಿಸಿದ ಗೌತಮ, “ಇವುಳ್ ಬಾಡಿ ಒಂತರಾ ಕಲ್‌ತರ ಆಗೋಗಿದೆ.. ಏನ್ ಮಾಡುದ್ರೂ ರೆಸ್‌ಪಾನ್ಸೆಯಿಲ್ಲ.. ಏನೋ ಹಿಡ್ಕೊಂಬಿಟ್ಟಿರತರ ಆಗೋಗಿದಾಳೆ.. ನನ್ಗೆ ಕೈಕಾಲ್ ಆಡ್ತಾಯಿಲ್ಲ” ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ. “ಆಸ್ಪತ್ರೆಗೆ ಕರ್ಕೊಂಡೋಗಣಾ?’’ ಎಂಬ ಪಲ್ಲವಿಯ ಪ್ರಶ್ನೆಗೆ, “ಬೇಡ ಅನ್ಸುತ್ತೆ, ಏನೋ ಗಾಬರಿ ಮಾಡ್ಕೊಂಡಿದಾಳೆ.. ಸರಿ ಹೋಗ್‌ಬೋದು… ಇಲ್ಲಾ ಎಮರ್ಜೆನ್ಸಿಗೆ ಕರ್ಕೊಂಡೋಗ್ಲಾ?” ನಿರ್ಧರಿಸಲು ಗೌತಮನಿಗೆ ಕಷ್ಟವಾಗುತ್ತಿತ್ತು.

“ಒಂದ್ ಕೆಲ್ಸ ಮಾಡಿ ಗೌತಮ್, ಎಲ್ಲಿದಿರಾ ನೀವೀಗ?” ಪಲ್ಲವಿಯ ಪ್ರಶ್ನೆಗೆ,
“ನನ್ ಆಫೀಸತ್ರ.. ನಮ್ ಮದ್ವೆ ಆಗಿತ್ತಲಾ? ಆ ಚೌಲ್ಟ್ರಿಯಿಂದ ಸ್ವಲ್ಪ ಮುಂದೆ..”
“ಸರಿ ನೀವು ನಿಮ್ಮನೆ ಹತ್ರ ಬನ್ನಿ.. ನಾನೂ ಈಗ ಹೊರಡ್ತಿನಿ, ನೀವು ಬರೋಷ್ಟರಲ್ಲಿ ನಾನೂ ಬಂದಿರ್ತೀನಿ”
“ಓಕೆ”

ಗೌತಮನು ಹೋಗುವ ಹೊತ್ತಿಗೆ, ಪಲ್ಲವಿಯ ಕಾರು ಮನೆಯ ಮುಂದೆ ನಿಂತಿತ್ತು. ರೋಹಿಣಿಯ ಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ‘ಕಲ್ಲಿನ ಮೂರ್ತಿಯಂತಾಗಿರುವ ಇವಳನ್ನು ಕಾರಿನಿಂದಿಳಿಸುವುದು ಹೇಗೆ, ಮನೆಯೊಳಗೆ ಕರೆದುಕೊಂಡು ಹೋಗುವುದು ಹೇಗೆ?’ ಎಂಬ ಪ್ರಶ್ನೆಗಳು ಅವನನ್ನು ಕಾಡತೊಡಗಿದವು. ಕೊನೆಯ ಬಾರಿಗೆಂಬಂತೆ “ರೋಹೂ, ರೋಹೂ.. ಮನೆ ಬಂತು.. ಎದ್ದೇಳು” ಎಂದು ಭುಜ ಅಲುಗಾಡಿಸಿದ. ಸ್ಪಂದನೆಯೇ ಇಲ್ಲ. ಇವನು ಇಳಿದು ಕಾರಿನ ಅತ್ತ ಕಡೆಗೆ ಬರುವಷ್ಟರಲ್ಲಿ ಪಲ್ಲವಿಯೂ ಬಂದಳು. ರೋಹಿಣಿಯ ಸ್ಥಿತಿಯನ್ನು ನೋಡಿ ಎದೆ ಝಲ್ಲೆಂದಿತ್ತು. ಮುಖ್ಯವಾಗಿ ಪಲ್ಲವಿಯನ್ನು ಹಿಡಿದಿದ್ದು ರೋಹಿಣಿಯ ಮುಖದ ಭಾವ. ಏನನ್ನೋ ನೋಡಿ, ಆ ನೋಟ ಅಲ್ಲೇ ಸಿಕ್ಕಿಹಾಕಿಕೊಂಡಂತಿದೆ… ಯಾವುದನ್ನೋ ಕೇಳಿ, ಆ ಶಬ್ದವು ಒಳಕ್ಕೆ ಎಳೆದುಕೊಂಡಿರುವಂತಿದೆ… ಯಾವುದೋ ಇದಿರಾಗಿ ತಪ್ಪಿಸಿಕೊಳ್ಳದಂತೆ ಹಿಡಿದಿರುವಂತಿದೆ…

ಕಾರಿನ ಬಾಗಿಲು ತೆಗೆದು ಯಾವ ರೀತಿಯಲ್ಲಿ ಅವಳನ್ನು ಇಳಿಸಬಹುದೆಂದು ಗೌತಮನು ಯೋಚಿಸತೊಡಗಿದ. ತಲೆ ಓಡುತ್ತಿಲ್ಲ. ಪಲ್ಲವಿಯು “ನಾನ್ ಒಂದ್ ಕಡೆ ಹಿಡ್ಕೊತಿನಿ, ನೀವ್ ಒಂದ್ ಕಡೆ ಹಿಡ್ಕೊಳ್ಳಿ ಗೌತಮ್” ಎಂದು ರೋಹಿಣಿಯ ಭುಜವನ್ನು ಮುಟ್ಟಿದಳು. ಮೊದಲ ಬಾರಿಗೆ ರೋಹಿಣಿಯ ಕಣ್ಣರೆಪ್ಪೆಗಳು ಮಿಟುಕಿದವು. “ಹೇ.. ಹೇ.. ಕಣ್ ಮಿಟುಕ್ಸ್ದ್ಳು” ಎಂದು ಗೌತಮ ಕೂಗಿದ. “ರೋಣಿ, ರೋಣೀ, ಏನಾಯ್ತೆ? ಇಲ್ನೋಡೆ” ಎಂದು ಪಲ್ಲವಿಯು ಮೆಲ್ಲನೆ ಹೇಳತೊಡಗಿದಾಗ, ರೋಹಿಣಿಯು ನಿಧಾನವಾಗಿ ಕತ್ತನ್ನು ಅವಳೆಡೆಗೆ ತಿರುಗಿಸಿದಳು.

“ನಾನ್ ಕಣೇ ರೋಣಿ, ಪಲ್ಲೂ… ಏನಾಗಲ್ಲ ಬಾರೆ.. ಹೆದ್ರುಕೋಬೇಡ ಬಾ, ಮನೆಯೊಳ್‌ಗೋಗಣ..” ಎಂದು ಅವಳ ಭುಜವಿಡಿದು ಎತ್ತಿದಳು. ಪಲ್ಲವಿಯು ಮುಟ್ಟಿದಲ್ಲೆಲ್ಲಾ ರೋಹಿಣಿಯು ಸಡಿಲಗೊಂಡಳು. ಗಟ್ಟಿಯಾದ ಮೇಣವು ಬೆಂಕಿಯ ಕಾವಿಗೆ ಮೆತ್ತಗಾಗುವಂತೆ… ಗೌತಮನಿಗೆ ನಂಬಲಾಗಲಿಲ್ಲ, ಅರ್ಥವೂ ಆಗಲಿಲ್ಲ. ತನಗರಿಯದ ಯಾವುದೋ ಭಾಷೆಯಲ್ಲಿ ಇವರಿಬ್ಬರು ಸಂವಹಿಸುತ್ತಿದ್ದಾರೆ ಎಂದೆನಿಸಿತು. ಬಗೆಹರಿದಂತೆ ಕಂಡಿದ್ದ ಅನುಮಾನವು ಬುಗ್ಗೆಂದು ಹೊತ್ತಿಕೊಂಡಿತು. ಮೂತ್ರಕ್ಕೆ ಅವಸರವಾದಂತಾಗಿ ಬಚ್ಚಲ ಮನೆಗೆ ಓಡಿದ. ಪಲ್ಲವಿಯು ಮೆಲ್ಲಮೆಲ್ಲನೆ ರೋಹಿಣಿಯನ್ನು ನಡೆಸುತ್ತಾ ಮನೆಯೊಳಗೆ ಕರೆದುಕೊಂಡು ಬಂದು, ಸೋಫಾ ಮೇಲೆ ಕೂರಿಸಿದಳು. ಕಿಟಕಿಯ ಪರದೆಗಳಿನ್ನೂ ಮುಚ್ಚೇಯಿದ್ದಿದ್ದರಿಂದ ಮನೆಯೊಳಗೆ ಪೂರ್ತಿ ಬೆಳಕಿರಲಿಲ್ಲ. ಅಡುಗೆ ಮನೆಯ ದೀಪ ಹಾಕಿ, ಪಲ್ಲವಿ ಕಾಫಿ ಮಾಡಲು ಹೋದಳು.

ಅಡುಗೆ ಮನೆಯ ಒಳಗಿನಿಂದ ಬರುತ್ತಿದ್ದ ವಿದ್ಯುದ್ದೀಪದ ಬೆಳಕು, ರೋಹಿಣಿಯ ಮುಖದ ಮೇಲೆ ಬೀಳುತ್ತಿತ್ತು. ಸುಸ್ತಿನಿಂದ ಕಣ್ಣು ಮುಚ್ಚಿ, ತಲೆಯನ್ನು ಹಿಂಬದಿಯ ಸೋಫಾಕ್ಕೆ ಒರಗಿಸಿದಳು. “ಸರ ಸರ” ಶಬ್ದವಾಯಿತು. ಪಾತ್ರೆಗಳು ಸರಿದಾಡಿದವು. ಎಷ್ಟು ಜೋರಾದ ಶಬ್ದವೆಂದರೆ, ಇಂದು ಅದು ಹೊರಬರುತ್ತದೆಂದು ಗಾಬರಿಯಾಗಿ, ಕಣ್ಣು ಬಿಟ್ಟ ರೋಹಿಣಿ “ಗೌತೂ.. ಗೌತೂ.. ಅಡ್ಗೆ ಮನೇಲಿದ್ದಿದ್ದು ಹೊರ್ಗಡೆ ಬರ್ತಿದೆ.” ಎಂದು ಕೂಗಿದಳು. ನಿತ್ರಾಣಗೊಂಡಿದ್ದವಳ ಧ್ವನಿಯು ಕ್ಷೀಣವಾಗಿತ್ತು. ಆದರೂ ಆ ಮಾತು ಗೌತಮನ ಕಿವಿಗೆ ಬಿದ್ದು, ಬಚ್ಚಲಿನಿಂದ ಹೊರಗೋಡಿ ಬಂದ. ರೋಹಿಣಿಯ ಕೂಗನ್ನು ಕೇಳಿ ಪಲ್ಲವಿಯು “ಏನಾಯ್ತೆ ರೋಣಿ?” ಎನ್ನುತ್ತಾ ಅಡುಗೆ ಮನೆಯ ಬಾಗಿಲಿಗೆ ಬಂದಳು. ಬಂದವನೇ ಗೌತಮ ರೋಹಿಣಿಯತ್ತ ನೋಡಿದ. ಅವಳು ಅರೆಮುಚ್ಚಿದ ಕಣ್ಣಿನಿಂದ ಏನನ್ನೋ ನೋಡುತ್ತಾ, ಅಡುಗೆ ಮನೆಯ ಹೊಸ್ತಿಲ ಹತ್ತಿರ ಬೆರಳು ಮಾಡಿದಳು. ಮಿರಮಿರ ಮಿಂಚುವ ಗೋದಿನಾಗರ! ಮುಷ್ಠಿ ಗಾತ್ರದ್ದು. ಹರಿಯುತ್ತಾ ಬಂದು ಹೊಸ್ತಿಲಲ್ಲಿ ಹೆಡೆಯೆತ್ತಿ ನಿಂತಿತು. ಹಾವಿಗೆ ತೀರ ಹತ್ತಿರದಲ್ಲಿ ನಿಂತಿದ್ದ ಪಲ್ಲವಿಯ ನೆರಳು ಉದ್ದಕ್ಕೆ ಚಾಚಿಕೊಂಡು, ರೋಹಿಣಿಯ ಅರ್ಧ ಮುಖವನ್ನು ಮುಚ್ಚಿತ್ತು. ಹೌಹಾರಿದ ಗೌತಮ “ಅಯ್ಯೋ ಹಾವು.. ನಾಗರಹಾವು! ಈ ಕಡೆ ಬನ್ನಿ ಪಲ್ಲವಿ ಅವ್ರೇ.. ಈ ಕಡೆ ಬನ್ನಿ..” ಎಂದು ಜೋರುಗಂಟಲಿನಲ್ಲಿ ಕಿರುಚಿದ. “ಎಲ್ಲಿ ಇವ್ರೆ? ಏನೂ ಇಲ್ಲಾ?’’ ಎಂದು ಆಶ್ಚರ್ಯದಿಂದ ಪಲ್ಲವಿ ಅತ್ತಿತ್ತ ಎಲ್ಲಾ ನೋಡಿದಳು. “ರೀ.. ಅಲ್ಲೇ ಇದ್ಯಲ್ರೀ? ಯಪ್ಪಾ ಎಷ್ಟ್ ದೊಡ್ದುದಿದೆ.. ರೋಹೂ ಕಾಣುಸ್ತಾಯಿಲ್ವಾ? ಹೇಳು ಇವ್ರಿಗೆ..” ಎಂದು ಗೌತಮ ಕೂಗುತ್ತಲೇಯಿದ್ದ. ತೋರುತ್ತಿದ್ದ ಬೆರಳನ್ನು ಕೆಳಗೆ ಮಾಡಿ, ಕಣ್ಮುಚ್ಚಿ ಮತ್ತೆ ರೋಹಿಣಿ ಹಿಂದಕ್ಕೆ ಒರಗಿದಳು. “ಏನೂ ಇಲ್ಲಾ ಗೌತಮ್.. ಎಲ್ಲಿದೆ? ನೀವ್ ಸ್ವಲ್ಪ ಕಾಮ್ ಆಗಿ..” ಎಂಬ ಪಲ್ಲವಿಯ ಶಾಂತ ಧ್ವನಿಯು ಗೌತಮನಲ್ಲಿ ದಿಗ್ಭ್ರಮೆ ಮೂಡಿಸಿತು. ಹೊಸ್ತಿಲನ್ನೇ ಎವೆಯಿಕ್ಕಿ ನೋಡತೊಡಗಿದ. ಗೋದಿ ನಾಗರಹಾವು ಅಲ್ಲಿದೆ.. ಅಲ್ಲೇ ಹೆಡೆ ಎತ್ತಿ ನಿಂತಿದೆ… ಆದರೆ ಪಲ್ಲವಿಯ ನೆರಳು ಬಿದ್ದಿರುವ ಜಾಗದಲ್ಲಿ ಆ ಹಾವಿನ ದೇಹವಿಲ್ಲ.. ನೆರಳಿನೊಂದಿಗೆ ಬೆರೆತು ಹೋಗಿದೆ. ನೆರಳು ಮುಗಿದ ಜಾಗದಲ್ಲಿ ಮತ್ತೆ ಮೇಲೆದ್ದಿದೆ… ಪಲ್ಲವಿಯು ಹಾವೇ ಕಾಣುತ್ತಿಲ್ಲವೆಂದು ಹೇಳಿದ್ದನ್ನು ಕೇಳಿ ಗೌತಮನಿಗೆ ಭಯವಾಯಿತು; ಜೀವ ಭಯ!

(ಕೃತಿ: ಅನೂಹ್ಯ (ಕಾದಂಬರಿ), ಲೇಖಕರು: ಡಾ. ಶ್ರೀಧರ್‌ ಕೆ.ಬಿ., ಬೆಲೆ: 220/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ