Advertisement
ಆಟ ಕಟ್ಟಲು ಕಣದ ಸಿದ್ಧತೆ: ಡಾ. ವಿನತೆ ಶರ್ಮ ಅಂಕಣ

ಆಟ ಕಟ್ಟಲು ಕಣದ ಸಿದ್ಧತೆ: ಡಾ. ವಿನತೆ ಶರ್ಮ ಅಂಕಣ

ಪಕ್ಕದ ಮನೆಯ ಅಂಗಳದಲ್ಲಿರುವ ನಮ್ಮನೆ ಬೇಲಿಗೆ ಆತುಕೊಂಡಿರುವ ಮುರಯ (Murraya) ಮರ ಮೈತುಂಬಾ ಬಿಳಿ ಹೂ ಧರಿಸಿ ನಗುತ್ತಿದೆ. ಶುಭ್ರ ಬಿಳಿ ಹೂ ರಾಶಿ, ಕಡು ಹಸಿರು ಎಲೆಗಳು ಒಂದಕ್ಕೊಂದು ಅಪ್ಪಿಕೊಂಡು ಆ ಬಿಳಿಹಸಿರು ಚಾದರವನ್ನು ಅಪ್ಪಿಕೊಳ್ಳುವ ಆಸೆಯಾಗುತ್ತದೆ. ಹೂಗಳ ಘಮಘಮದಿಂದ ಮೂಗು ಅರಳುತ್ತದೆ. ಹೂಗೊಂಚಲಿನಲ್ಲಿ ಮೊಗ್ಗುಗಳೆ ಹೆಚ್ಚಿರುವುದಕ್ಕೊ ಏನೋ ಅವಕ್ಕೆ ಇನ್ನೂ ಜೇನ್ನೊಣಗಳ ಆಗಮನವಾಗಿಲ್ಲ. ಜೇನ್ನೊಣಗಳ ದಂಡು ಬಂದಾಗ ಅವುಗಳ ಝೇಂಕಾರದ ನಿನಾದ, ಮುರಯ ಹೂ ಗೊಂಚಲುಗಳ ಅಂದ, ತಂಪೇರಿದ ಸಂಜೆ ಮತ್ತು ತರಿಸುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಶರತ್ಕಾಲದ ಕುರುಹುಗಳು ಕಾಣುತ್ತಿವೆ. ಹೊರಗಡೆ ತಾಪಮಾನ ತಂಪಾಗುತ್ತಿದೆ. ಆಸ್ಟ್ರೇಲಿಯಾದ ದಕ್ಷಿಣ ರಾಜ್ಯಗಳ ಉದ್ಯಾನವನಗಳಲ್ಲಿ, ಕುರುಚಲು ಪೊದೆಕಾಡುಗಳಲ್ಲಿ ಎಲೆ ಉದುರುವುದು ಶುರುವಾಗಿದೆ. ಉತ್ತರದ ಕಡೆ ತಿರುಗಿದರೆ ಹೂ ನಲಿದಾಡುತ್ತಿದೆ, ಹಣ್ಣು ಮಾಗುತ್ತಿದೆ, ಅಲ್ಲಲ್ಲಿ ಹೊಸಚಿಗುರು ಕಾಣಿಸುತ್ತಿದೆ. ಇನ್ನೂ ಉತ್ತರದ ನೆತ್ತಿಗೆ ಹೋದರೆ ಅಲ್ಲೆಲ್ಲಾ ಬಿಸಿಲು ಪ್ರಖರವಾಗೇ ಇದೆಯಂತೆ. ಪಶ್ಚಿಮದ ಕಡೆ ಹೇಗಿದೆಯೊ ಗೊತ್ತಿಲ್ಲ. ಈ ಬೃಹತ್ ಖಂಡ-ದೇಶದ ಸೊಗಸಿರುವುದೇ ಈ ವೈವಿಧ್ಯತೆಗಳಲ್ಲಿ. ಒಂದೆಡೆ ಅತಿ ಮಳೆ, ಸಣ್ಣ ಬಿಸಿಲು, ಮಂಡೆ ಬಿಸಿಯಾಗುವಷ್ಟು ಧಗೆ, ಇನ್ನೊಂದೆಡೆ ಸಣ್ಣ ಚಳಿ, ಕಾಣೆಯಾದ ಮಳೆ, ಮುಂಬರುವ ಚಳಿಗಾಲವನ್ನು ನೆನೆನೆನೆದೇ ಇನ್ನಷ್ಟು ಮೈಚಳಿ!

ಪಕ್ಕದ ಮನೆಯ ಅಂಗಳದಲ್ಲಿರುವ ನಮ್ಮನೆ ಬೇಲಿಗೆ ಆತುಕೊಂಡಿರುವ ಮುರಯ (Murraya) ಮರ ಮೈತುಂಬಾ ಬಿಳಿ ಹೂ ಧರಿಸಿ ನಗುತ್ತಿದೆ. ಶುಭ್ರ ಬಿಳಿ ಹೂ ರಾಶಿ, ಕಡು ಹಸಿರು ಎಲೆಗಳು ಒಂದಕ್ಕೊಂದು ಅಪ್ಪಿಕೊಂಡು ಆ ಬಿಳಿಹಸಿರು ಚಾದರವನ್ನು ಅಪ್ಪಿಕೊಳ್ಳುವ ಆಸೆಯಾಗುತ್ತದೆ. ಹೂಗಳ ಘಮಘಮದಿಂದ ಮೂಗು ಅರಳುತ್ತದೆ. ಹೂಗೊಂಚಲಿನಲ್ಲಿ ಮೊಗ್ಗುಗಳೆ ಹೆಚ್ಚಿರುವುದಕ್ಕೊ ಏನೋ ಅವಕ್ಕೆ ಇನ್ನೂ ಜೇನ್ನೊಣಗಳ ಆಗಮನವಾಗಿಲ್ಲ. ಜೇನ್ನೊಣಗಳ ದಂಡು ಬಂದಾಗ ಅವುಗಳ ಝೇಂಕಾರದ ನಿನಾದ, ಮುರಯ ಹೂ ಗೊಂಚಲುಗಳ ಅಂದ, ತಂಪೇರಿದ ಸಂಜೆ ಮತ್ತು ತರಿಸುತ್ತದೆ.

ಇದೆಲ್ಲ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಮಯವಿರಬೇಕು. ಕಣ್ಣುಗಳು ಸವಿಯುತ್ತಾ, ಮನದೊಳಗೆ ಅದು ಇಳಿಯುತ್ತಾ ಅದೊಂದು ಧ್ಯಾನ ಸ್ಥಿತಿಯಾಗಲು ಅದಕ್ಕೆ ಅಡ್ಡಬರುವ ಕಾರಣಗಳು ಇದ್ದೇಇರುತ್ತವೆ. ಅದರಲ್ಲೂ ದೇಶದಲ್ಲಿ ಹೊಸ ಕೇಂದ್ರಸರಕಾರಕ್ಕೆಂದು ಚುನಾವಣೆಗಳು ನಡೆಯಲಿವೆ ಎಂದಾಗ ಮನಸ್ಸು ಪಲ್ಲಟವಾಗುತ್ತದೆ.

ಹೌದು, ಆಸ್ಟ್ರೇಲಿಯಾದಲ್ಲಿ ಸದ್ಯಕ್ಕೆ ಬರಲಿರುವ ಕೇಂದ್ರೀಯ ಚುನಾವಣೆಗಳಿಗಾಗಿ ಸಿದ್ಧತೆಗಳು ನಡೆಯುತ್ತಿವೆ. ಆಟ ಕಟ್ಟಲು ಎಲ್ಲರೂ ತಯ್ಯಾರಾಗುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇರುವುದು ಎರಡು ದೊಡ್ಡ, ಮುಖ್ಯ ಪಕ್ಷಗಳು – ಆಸ್ಟ್ರೇಲಿಯನ್ ಲೇಬರ್ ಪಾರ್ಟಿ ಮತ್ತು ಲಿಬರಲ್ ನ್ಯಾಷನಲ್ ಪಾರ್ಟಿ. ಇವೆರಡಕ್ಕೆ ಚುರುಕು ಮುಟ್ಟಿಸುತ್ತಿರುವುದು ಗ್ರೀನ್ಸ್ ಪಕ್ಷ, ಇಂಡಿಪೆಂಡೆಂಟ್ ಮತ್ತು ಟೀಲ್ಸ್ ಅಭ್ಯರ್ಥಿಗಳು, ಒನ್ ನೇಶನ್ ಪಕ್ಷ, ಕೆಲವು ಸಣ್ಣಪುಟ್ಟ ಪಕ್ಷಗಳು. ಲೇಬರ್ ಮತ್ತು ಲಿಬರಲ್ ಪಕ್ಷಗಳು ಮಿತ್ರತ್ವದ ಹಸ್ತ ಚಾಚಿ ಈ ಮಿಕ್ಕ ಪಕ್ಷಗಳ ಮನವೊಲಿಸುತ್ತಿವೆ. ಈ ಎರಡೂ ದೊಡ್ಡ ಪಕ್ಷಗಳಿಗೆ ಆತಂಕವುಂಟಾಗಿದೆ. ಏಕೆಂದರೆ ಆಸ್ಟ್ರೇಲಿಯಾದ ವಲಸೆಗಾರ ಜನರ ತಲೆಮಾರುಗಳ ಬೇರುಗಳು ಭದ್ರವಾಗಿ ಬೆಳೆದು ಈಗ ಅವರ ಸಂತತಿಗಳು ಚುನಾವಣಾ ಕಣವನ್ನು ಪ್ರವೇಶಿಸುತ್ತಿದ್ದಾರೆ. ಅವರ ಸಾಮಾಜಿಕ-ಸಾಂಸ್ಕೃತಿಕ ಅಸ್ಮಿತೆಗಳು ಚುನಾವಣೆಯಲ್ಲಿ ದಾಳಗಳಾಗಲಿವೆ. ದಕ್ಷಿಣದ ನ್ಯೂ ಸೌತ್ ವೇಲ್ಸ್, ವಿಕ್ಟೋರಿಯಾ ಮತ್ತು ಸೌತ್ ಆಸ್ಟ್ರೇಲಿಯಾ ರಾಜ್ಯಗಳಲ್ಲಿ ಈಗಾಗಲೆ ಸಾಂಸ್ಕೃತಿಕ-ಭಾಷಿಕ ವೈವಿಧ್ಯತೆಗಳ ಕೆಲ ಜನರು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದೂ ಅಲ್ಲದೆ ಚುನಾವಣೆಗಳಲ್ಲಿ ಆರಿಸಿ ಬಂದು ಗುರುತರ ಸ್ಥಾನಗಳಲ್ಲಿದ್ದಾರೆ. ಇವರೆಲ್ಲ ಮತ್ತು ಇವರ ಸಮುದಾಯಗಳ ನಾಯಕರು ಈ ಬಾರಿಯ ಕೇಂದ್ರೀಯ ಚುನಾವಣಾ ಕಣಕ್ಕಿಳಿದು ಆಟವಾಡಲು ಸಿದ್ಧರಾಗುತ್ತಿದ್ದಾರೆ.

ಹೋದ ಬಾರಿಯ ಅಂಕಣ ಬರಹದಲ್ಲಿ ಟ್ರಾಪಿಕಲ್ ಸೈಕ್ಲೋನ್ ಆಲ್ಫ್ರೆಡ್ ಬಂದ ಎಂದು ಬರೆದಿದ್ದೆ. ಅವನ ಬರುವಿಕೆಗಾಗಿ ನಾವೆಲ್ಲ ಅಂದರೆ ಸೌತ್-ಈಸ್ಟ್ ಕ್ವೀನ್ಸ್ಲ್ಯಾಂಡ್ ಅಲ್ಲಿರುವವರು ಕಾದಿದ್ದೇ ಕಾದಿದ್ದು. ಆಲ್ಫ್ರೆಡ್ ನಮ್ಮ ಬ್ರಿಸ್ಬೇನ್ ನಗರದ ತಲೆ ಮೇಲೆಯೆ ಹಾದುಹೋಗುತ್ತಾನೆ ಎಂದು ಮೂರು ದಿನ ಮೊದಲೆ ಎಲ್ಲವೂ ಬಂದ್ ಆಗಿ ನಾವೆಲ್ಲಾ ಗೃಹಬಂಧಿಗಳಾಗಿದ್ದೆವು. ಗುರುವಾರ ಬರುತ್ತಾನೆ, ಶುಕ್ರವಾರ ಸೈಕ್ಲೋನ್ ಶುರುವಾಗುತ್ತದೆ ಎಂದೆಲ್ಲಾ ಇದ್ದಿದ್ದ ಲೆಕ್ಕಾಚಾರ ತಪ್ಪಾಗಿ ಆಲ್ಫ್ರೆಡ್ ತಲೆಮರೆಸಿಕೊಂಡಿದ್ದ. ಎಲ್ಲರೂ ನಗಾಡಿದ್ದೆ ಆಯ್ತು. ಕಡೆಗೆ ನೋಡಿದರೆ ಶನಿವಾರ ರಾತ್ರಿ ಭಾರಿ ಮಳೆ ಜೊತೆ ವಿದ್ಯುಚ್ಛಕ್ತಿಗೆ, ಇಂಟರ್ನೆಟ್‌ಗೆ ಚ್ಯುತಿ ಬಂತು. ಎರಡು ದಿನ ಹೊರಪ್ರಪಂಚದೊಡನೆ ಸಂಪರ್ಕ ಕಡಿದುಹೋಗಿ ಚಂಡಮಾರುತದಂಥ ಗಾಳಿ ಮಳೆ ಜೊತೆಗೆ ಜೀವಿಸಿದ್ದಾಯ್ತು. ಅನೇಕರು ಆಲ್ಫ್ರೆಡ್ ಬರುವ ಮುಂಚೆ ನಿಂತುಹೋದ ಕೆಲಸಗಳು, ಬಂದು ಹೋದಾದ ಮೇಲಿನ ಕೆಲಸಗಳನ್ನು ನಿಭಾಯಿಸಲು ಸಮಯ, ಶ್ರಮಗಳನ್ನು ವ್ಯಯಿಸುತ್ತಿದ್ದಾರೆ. ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ಹಾನಿ ಸರಿಪಡಿಸಲು, ಮನೆ ರಿಪೇರಿ ಮಾಡಿಸಲು ಇನ್ಶೂರೆನ್ಸ್ ಕಂಪನಿಗಳನ್ನು ಎಡತಾಕಬೇಕು. ಅವರ ಬಳಿ ಈಗಾಗಲೇ ಮಾರುದ್ದದ ಪಟ್ಟಿಯಿದೆ. ನಮ್ಮ ಸರದಿ ಬರಲು ಅದೆಷ್ಟು ತಿಂಗಳುಗಳಾಗುತ್ತದೆಯೋ ಗೊತ್ತಿಲ್ಲ. ಇನ್ಶೂರೆನ್ಸ್ ಹಣದ ಜೊತೆ ಇನ್ನಷ್ಟು ಹಣ ಸೇರಿಸಲೇಬೇಕು ಎನ್ನುವುದೂ ನಿಜ. ಆಗ ಮತ್ತೆ ತಲೆ ತಾಕುತ್ತದೆ ಕಾಸ್ಟ್ ಆಫ್ ಲಿವಿಂಗ್ ಭೂತ!

ಸೈಕ್ಲೋನ್, ಚುನಾವಣಾ ಎಲ್ಲದರ ನಡುವೆಯೂ ಎಲ್ಲರ ಗಮನಕ್ಕೂ ಬಂದಿದ್ದು ದುಬಾರಿಯಾಗಿಯೆ ಉಳಿದಿರುವ ಜೀವನ ವೆಚ್ಚ (cost of living). ಬರುವ ಬೆರಳೆಣಿಕೆ ಸಾವಿರ ಸಂಬಳಕ್ಕೂ ಪ್ರತಿದಿನದ ಖರ್ಚುಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿರುವ ಸರ್ಕಾರವು ಹಿಂದಿನ ಸರ್ಕಾರದತ್ತ ಬೆಟ್ಟು ಮಾಡಿ ತೋರಿಸಿದರೆ ಆಗಿದ್ದ ಸರ್ಕಾರವು ಕೋವಿಡ್-೧೯ರ ಕಡೆ ಮುಖಮಾಡುತ್ತಿತ್ತು. ಹಲವಾರು ವರ್ಷಗಳಿಂದ ಒಂದೇ ಸಮನೆ ಏರುತ್ತಿರುವ ಮನೆಬಾಡಿಗೆ, ದಿನಸಿ ಸಾಮಾನಿನ ಬೆಲೆ, ನೀರು, ವಿದ್ಯುಚ್ಛಕ್ತಿ, ಫೋನ್, ಗ್ಯಾಸ್, ಬೇರೆಬೇರೆ ತರಾವರಿ ತೆರಿಗೆಗಳು ಎಲ್ಲವೂ ಏರುತ್ತಲೇ ಇದೆ ವಿನಃ ಕಡಿಮೆಯಾಗುವ ಲಕ್ಷಣವೇ ಇಲ್ಲ. ಈ ವಿಷಯ ಈಗಿನ ಸರ್ಕಾರವನ್ನು ಅಲ್ಲಾಡಿಸುತ್ತಿದೆ. ಮುಂದೆ ಹೊಸ ಪಕ್ಷ, ಸರ್ಕಾರ ಬಂದರೂ ಈ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎನ್ನುವುದೂ ಗೊತ್ತಿದೆ.

ನಡುವೆ ಬಂದಿರುವುದು ಮತ್ತೊಂದು ಸಮಸ್ಯೆ – ಅಮೆರಿಕೆಯ ಆ ದೊಡ್ಡ ಮಹಾಶಯರ ಆಟಾಟೋಪ. ಅವರ ಜೊತೆ ಸೇರಬೇಕೇ ಬೇಡವೇ, ಎಷ್ಟು ಹೇಗೆ ಎಂಬೆಲ್ಲ ಪ್ರಶ್ನೆಗಳು ನಮ್ಮ ಆಸ್ಟ್ರೇಲಿಯನ್ ರಾಜಕೀಯ ನಾಯಕರಿಗೆ. ಇತ್ತ ಈ ಮಹಾಶಯ, ಅತ್ತ ಆ ಯುರೋಪ್ ರಾಷ್ಟ್ರಗಳು, ಮಧ್ಯೆ ಬ್ರಿಟನ್. ಈ ಮೂರು ಕೋನಗಳ ಯಾವ ತುದಿಯನ್ನೂ ಹಿಡಿಯಲಾರದೆ ನಮ್ಮ ಆಸ್ಟ್ರೇಲಿಯಾ ಎಡಬಿಡಂಗಿಯಾಗಿದೆ.

ಹಾಗಂತೇನೂ ಮಧ್ಯಮವರ್ಗ ಜನರ ಜೀವನ ನಿಂತುಹೋಗಿಲ್ಲ. ರಾಜಕೀಯ ನಾಯಕರ ಚುನಾವಣಾ ಸಿದ್ಧತೆ ಭರದಿಂದ ಸಾಗಿದೆ. ಎಂದಿನಂತೆ ಸಂಗೀತ, ಸಾಹಿತ್ಯ, ಆರ್ಟ್ಸ್, ಕ್ರೀಡೆಗಳು ಎಲ್ಲವೂ ಮಾಮೂಲಿನಂತೆ ನಡೆದಿದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಉತ್ತರದ Northern Territory ಯಲ್ಲಿ ಹೋದ ವರ್ಷ ಅಧಿಕಾರಕ್ಕೆ ಬಂದ ಪಕ್ಷ ಮಕ್ಕಳ ಹಕ್ಕುಗಳಿಗೆ ಮಾನ್ಯತೆ ಕೊಡುತ್ತಿಲ್ಲ. ನಮ್ಮ ರಾಣಿರಾಜ್ಯದಲ್ಲಿ ಅಧಿಕಾರ ಹಿಡಿದವರು ಕೂಡ ಅದನ್ನೇ ಮಾಡಿದ್ದೂ ಅಲ್ಲದೆ ಹಿಂದಿನ ಸರ್ಕಾರವು ರಾಜ್ಯದ ಮೂಲನಿವಾಸಿಗಳ ಪರ ಮಾಡಿದ್ದ ವಾಗ್ದಾನಗಳನ್ನು ರದ್ದು ಮಾಡಿದ್ದಾರೆ. ರಾಜಧಾನಿ ಬ್ರಿಸ್ಬೇನ್ ನಗರದಲ್ಲಿ ವಸತಿಹೀನ ಜನರು ಹಾಕಿಕೊಂಡಿರುವ ಟೆಂಟ್‌ಗಳನ್ನು ತೆಗೆದುಹಾಕಿ ಅವರನ್ನು ಅಲ್ಲಿಂದ ಸ್ಥಳಾಂತರಿಸುವುದಾಗಿ ಘೋಷಿಸಲಾಗಿದೆ. ಸರ್ಕಾರದ ವತಿಯಿಂದ ಅವರೆಲ್ಲರಿಗೂ ಸಮರ್ಪಕವಾದ ವಸತಿ ಸಿಕ್ಕುತ್ತದೆಯೇ ಎನ್ನುವುದು ಖಚಿತವಾಗಿಲ್ಲ. ಈ ಸರ್ಕಾರವು ಇದ್ದಿದ್ದ ಸಮಸ್ಯೆಗಳನ್ನು ಪರಿಹರಿಸುತ್ತದೆಯೊ ಇಲ್ಲಾ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆಯೊ ಎನ್ನುವ ಆತಂಕವೆದ್ದಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ