ಮೀನು ಎಂದಿನಂತೆ ನೂರು ಮೀಟರ್ ರೇಸಿನಲ್ಲಿ ಬಿದ್ದಿತ್ತು. ಹೆಂಡತಿಗೆ ಕರೆದು ತೋರಿಸಿದೆ. ‘ಎಲ್ಲಿ ಸಾಯಲಿಕ್ಕೆ ಬಂದಿದೆಯೆನೋ’ ಎಂದು ಉತ್ತರಿಸಿ ಮನೆಗೆಲಸದಲ್ಲಿ ತೊಡಗಿಸಿಕೊಂಡಳು. ನಮಗೆ ಮೀನನ್ನು ಸಂಭಾಳಿಸುವುದಕ್ಕಿಂತ ಮಕ್ಕಳನ್ನು ನಿಯಂತ್ರಿಸುವುದೇ ಕಷ್ಟಕರವಾಗಿತ್ತು. ಎಲ್ಲಿ ಬೌಲನ್ನು ಬಿಳಿಸುತ್ತಾರೋ…. ಎಂಬ ಭಯ..! ಮಗಳು ಕಿಡ್ಡಿಯಂತೂ “ಹತ್ರ ಹೋಗಬೇಡ ಬಾಂಬಿ ಮೀನು ಕಚ್ಚುತ್ತೆ” ಎಂದು ತನ್ನ ತೊದಲು ನುಡಿಯಲ್ಲಿ ಅಣ್ಣನಿಗೆ ಉಪದೇಶ ನೀಡಿ ತಾನೆ ಬೌಲ್‌ನ ಮುಂದೆ ಮೀನುಗಳು ಭಯ ಬೀಳುವಂತೆ ಹಲ್ಲು ಕಿರಿದುಕೊಂಡು ನಿಲ್ಲುತ್ತಿದ್ದಳು.
ಮಯೂರ ಬಿ ಮಸೂತಿ ಬರಹ ನಿಮ್ಮ ಓದಿಗೆ
ಸಾಮಾನ್ಯವಾಗಿ ನಾನು ಸಂಜೆ ೫ ಇಲ್ಲ ೫:೩೦ ವರೆಯಿಂದ ಅರ್ಧ ಘಂಟೆ ಮಲಗುತ್ತೇನೆ. ಏಕೆಂದರೆ, ನಿರಂತರ ಲ್ಯಾಪ್ಟಾಪ್ ಮುಂದೆ ಕುಳಿತು ಕಣ್ಣುಗಳು ಉರಿಯುತ್ತಿರುತ್ತವೆ. ಈ ಸಮಯವಾಯಿತೆಂದರೆ ಸಾಕು ನನ್ನ ಕಣ್ಣುಗಳು ಸ್ವಾಭಾವಿಕವಾಗಿಯೇ CTRL ALT DEL ಬಟನ್‌ಗಳನ್ನು ಗಮನಿಸುತ್ತಿರುತ್ತವೆ. ಅಂದು ಒಂದು ಸಣ್ಣ ನಿದ್ರೆಯನ್ನು ಮುಗಿಸಿ ಕಣ್ಣು ತೆರೆಯುತ್ತಿದ್ದಂತೆಯೇ ನನ್ನ ಮುಂದೆ ಪ್ರತ್ಯಕ್ಷವಾದವಳು ನನ್ನ ಮಡದಿ, ಒಂದು ಕೈಯಲ್ಲಿ ಆಕ್ಸಿಜನ್ ತುಂಬಿ, ಅರ್ಧದವರೆಗೂ ನೀರು ತುಂಬಿದ ಪ್ಲಾಸ್ಟಿಕ್ ಮತ್ತು ಅದರಲ್ಲಿ ‘WORLD IS SO SMALL’ ಎಂದು ಪಿಳಪಿಳನೆ ಕಣ್ಣುಗಳನ್ನು ಬಿಟ್ಟುಕೊಂಡು ಓಡಾಡುತ್ತಿದ್ದ ಎರಡು ಬಿಳಿ ಮೀನುಗಳು ಕಂಡವು. ‘ಏನೇ ಇವನ್ನೆಲ್ಲಿಂದ ತಂದೆ ನೀನು…?’ ಎಂದು ಕೊಂಚ ತಾತ್ಸಾರದಿಂದಲೇ ಕೇಳಿದೆ. ಏಕೆಂದರೆ, ಮಕ್ಕಳನ್ನ ನೋಡಿಕೊಳ್ಳುವುದೇ ಸಾಕಾಗಿರುತ್ತದೆ. ಇದೆಲ್ಲದರ ನಡುವೆ ಈ ಮೂಕ ಜೀವಿಗಳು ಬೇರೆ…! ಮಕ್ಕಳೋ… ಏನೇ ಆದರೂ ಬಾಯಿಬಿಟ್ಟು ಹೇಳುತ್ತಾರೆ. ಆದರೆ ಈ ಮೂಕ ಜೀವಿಗಳು ಹಾಗಲ್ಲ ಪಾಪ… ಎಲ್ಲಾ ಸೃಷ್ಟಿಯ ಲೀಲೆ..! ಇವುಗಳಲ್ಲಿ ಬುದ್ಧಿ ವಿಕಾಸವಾಗಿರುವುದಿಲ್ಲ… ಏನೇ ಆದರೂ ಅವುಗಳನ್ನು ನಾವೇ ಗಮನಿಸಬೇಕು…. ಅಕಸ್ಮಾತ್ತಾಗಿ ಸೃಷ್ಟಿ ಏನಾದರೂ ಸ್ವಲ್ಪ ತಲೆಕೆಳಗಾಗಿದ್ದರೆ… ಅಂದರೆ ಈ ಜೀವಗಳ ಬುದ್ಧಿ ವಿಕಾಸವಾಗಿದ್ದಾರೆ… ಮಾತಾಡುವಂತಿದ್ದರೆ… ಇವುಗಳು ಮನುಷ್ಯನ ಹತ್ತಿರವೂ ಸುಳಿಯುತ್ತಿರಲಿಲ್ಲವೇನೋ…? ಅದು ಬೇರೆ ಪ್ರಶ್ನೆ.
ಮಗನ ಟ್ಯೂಷನ್ ಮೇಡಂ ಗಿಫ್ಟ್ ಕೊಟ್ಟಿದ್ದಾರೆ ಎಂದಳು. ಈಗೇನು ಮಾಡುವುದು ಎಂದು ಹೆಂಡತಿಯನ್ನೊಮ್ಮೆ ನೋಡಿದೆ. ನಡಿಯಿರಿ ಎಲ್ಲರೂ ಸೇರಿ ಇಲ್ಲೇ ಮನೆಯಿಂದ ಸ್ವಲ್ಪ ದೂರವಿರುವ ಸಾಕು ಪ್ರಾಣಿಗಳ ಅಂಗಡಿಗೆ ಹೋಗಿ ಒಂದು ಪುಟ್ಟ ‘FISH BOWL’ ತರುವ ಎಂದು ನಕ್ಕಳು. ಪರಿವಾರ ಸಮೇತ ಹೋಗಿ ಮೀನುಗಳ ವಸತಿಗೆ ಬೇಕಾದ ಸಾಮಗ್ರಿ ಮತ್ತು ಆಹಾರವನ್ನು ತಂದೆವು. ಕೊನೆಗೂ ತಮಗಾಗಿ ತಂದಿದ್ದ ಪುಟ್ಟ ಪ್ರಪಂಚದಲ್ಲಿ ಮೀನುಗಳು ಟಿಕಾಣಿ ಹೂಡಿದವು. ನನಗಂತೂ ಆ ಕಪ್ಪು ಉಸುಗು… ಪಾರದರ್ಶಕ ಗಾಜಿನ ಗೋಳ ಮತ್ತು ನೀರು ಎಲ್ಲವೂ ಸೇರಿ ಬ್ರಹ್ಮಾಂಡದಲ್ಲಿರುವ ಒಂದು ಪುಟ್ಟ ಗ್ರಹದಂತೆ ಗೋಚರಿಸಿತು… ಹಾಗೆ ಆ ಮೀನುಗಳು… ‘ARE WE ALONE IN THIS PLANET’ ಎಂದು ನಿರಂತರವಾಗಿ ತಮ್ಮ ಗ್ರಹದ ಎಲ್ಲೆಯನ್ನು ಹುಡುಕಲು ಓಡಾಡುತ್ತಿರುವ ಅನ್ಯ ಗ್ರಹದ ಜೀವಿಗಳಂತೆ ಕಂಡವು. ನಮಗೇನೋ ನಾವಿರುವ ಬಾಡಿಗೆಯ ಮನೆ ಹಳೆಯದು ಆದರೆ ನವ ವಿವಾಹಿತರಂತೆ ಬಂದಿರುವ ಈ ಮೀನುಗಳಿಗೆ ಎಲ್ಲ ಹೊಸತು. ಈ ಮೀನುಗಳಲ್ಲಿ ಗಂಡು ಯಾವುದೋ…? ಹೆಣ್ಣು ಯಾವುದೋ…? ದೇವರಾಣೆ ನಂಗಂತೂ ಗೊತ್ತಾಗಲಿಲ್ಲ…. ನೋಡಲು ಎರಡೂ ಒಂದೇ ತರನೆ ಕಾಣಿಸುತ್ತಿದ್ದವು…! ಅವುಗಳನ್ನು ಸೂಕ್ಷ್ಮದಿಂದ ಗಮನಿಸಿ ಗುರುತು ಹಿಡಿಯುವ ಕಾತುರವು ನನಗಿರಲಿಲ್ಲ. ಏಕೆಂದರೆ ಅವುಗಳ ಪ್ರೈವಸಿಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ.
ಒಂದು ರಾತ್ರಿ ಒಬ್ಬನೇ ಟಿವಿಯಲ್ಲಿ ಹಾಡುಗಳನ್ನು ನೋಡುತ್ತಾ ಕುಳಿತಿದ್ದೆ. ಉದಯ ಮ್ಯೂಸಿಕ್‌ನಲ್ಲಿ, ಭಟ್ಟರ ‘ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ’ ಹಾಡು ಬರುತಿತ್ತು. ನನ್ನ ಗಮನ ಮೆಲ್ಲನೆ ಬೌಲ್‌ನ ಕಡೆ ಹೋಯಿತು. ಅಲ್ಲಿ ಒಂದು ಮೀನು ಇನ್ನೊಂದು ಮೀನನ್ನು ಅಟ್ಟಾಡಿಸಿಕೊಂಡು ಓಡಾಡುತ್ತಿರುವುದು ಕಾಣಿಸಿತು. ಇದೇನಪ್ಪಾ ಹೀಗೆ ಒಂದೇ ಸಮನೆ ಸುತ್ತುತ್ತಿವೆ…? ‘STRUGGLE FOR EXISENCE’ ನಡೆಯುತ್ತಿದೆಯೇ..? ಎಂದು ಹಾಗೆ ಮೆಲ್ಲಗೆ ನಿದ್ರೆಗೆ ಜಾರಿ ಹೋಗಿದ್ದೆ.
ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ಒಂದು ಮೀನು ಬೌಲಿನ ತಳದಲ್ಲಿಯೇ ಕುಳಿತು ನಿಧಾನವಾಗಿ ರೆಕ್ಕೆ ಬಡಿಯುತ್ತಿತ್ತು ಮತ್ತು ಹೊಟ್ಟೆ ಸ್ವಲ್ಪ ಉಬ್ಬಿ ಹೋಗಿತ್ತು. ಇನ್ನೊಂದು ಮೀನು ಎಂದಿನಂತೆ ನೂರು ಮೀಟರ್ ರೇಸಿನಲ್ಲಿ ಬಿದ್ದಿತ್ತು. ಹೆಂಡತಿಗೆ ಕರೆದು ತೋರಿಸಿದೆ. ‘ಎಲ್ಲಿ ಸಾಯಲಿಕ್ಕೆ ಬಂದಿದೆಯೆನೋ’ ಎಂದು ಉತ್ತರಿಸಿ ಮನೆಗೆಲಸದಲ್ಲಿ ತೊಡಗಿಸಿಕೊಂಡಳು. ನಮಗೆ ಮೀನನ್ನು ಸಂಭಾಳಿಸುವುದಕ್ಕಿಂತ ಮಕ್ಕಳನ್ನು ನಿಯಂತ್ರಿಸುವುದೇ ಕಷ್ಟಕರವಾಗಿತ್ತು. ಎಲ್ಲಿ ಬೌಲನ್ನು ಬಿಳಿಸುತ್ತಾರೋ…. ಎಂಬ ಭಯ..! ಮಗಳು ಕಿಡ್ಡಿಯಂತೂ “ಹತ್ರ ಹೋಗಬೇಡ ಬಾಂಬಿ ಮೀನು ಕಚ್ಚುತ್ತೆ” ಎಂದು ತನ್ನ ತೊದಲು ನುಡಿಯಲ್ಲಿ ಅಣ್ಣನಿಗೆ ಉಪದೇಶ ನೀಡಿ ತಾನೆ ಬೌಲ್‌ನ ಮುಂದೆ ಮೀನುಗಳು ಭಯ ಬೀಳುವಂತೆ ಹಲ್ಲು ಕಿರಿದುಕೊಂಡು ನಿಲ್ಲುತ್ತಿದ್ದಳು.
ಒಂದು ದಿನವಂತೂ ಅಚ್ಚರಿಯೇ ಕಾದಿತ್ತು…! ಮೀನು ಜಾಗವನ್ನು ಬದಲಿಸಿತ್ತು, ನ್ಯೂಟನ್‌ನ ಮೊದಲನೆಯ ನಿಯಮಕ್ಕೆ ಸಾಕ್ಷಿ ಎನ್ನುವಂತೆ. ಇದೇನಿದು ನಾನು ಹಾಕುವ ಮೀನಿನ ಆಹಾರದ ಕಾಳುಗಳು ನೀರಿಗೆ ದಪ್ಪಗೆ ಗುಂಡಾಗಿ ಉಬ್ಬಿ ಹೋಗಿವೆ ಎಂದು ಮೀನು ಮೊದಲಿದ್ದ ಜಾಗದಲ್ಲಿ ಬಿದ್ದ ಕಾಳುಗಳನ್ನು ನೋಡಿ ಅಂದುಕೊಂಡೆ. ಆಮೇಲೆ ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದು ಬಂದದ್ದು ಅವು ಮೊಟ್ಟೆಗಳು ಎಂದು. ಅಂದು ರಾತ್ರಿ ನೋಡಿದ ಶೃಂಗಾರದ ಹೊಂಗೆ ಮರ ಹಾಡನ್ನು ಮೀನುಗಳು ತುಂಬಾ ಗಂಭೀರವಾಗಿಯೇ ತೆಗದುಕೊಂಡಿವೆ ಎಂದು ಮನದಲ್ಲೆ ನಸು ನಕ್ಕೆ. ಹೀಗೆ ಹೆಣ್ಣು ಮೀನು ಜಾಗ ಬದಲಿಸುತ್ತಾ ಸುಮಾರು ಮೂರರಿಂದ ಏಳು ಮೊಟ್ಟೆಗಳನ್ನಿಟ್ಟಿತು. ಮೊಟ್ಟೆ ಇಟ್ಟ ಕೆಲವೇ ದಿನಗಳಲ್ಲಿ ತಾಯಿ ಮೀನು ‘ಮಹಾತಾಯಿ’ ಆಗಿ ನಮ್ಮೆಲ್ಲರಿಂದ ನಿರ್ಗಮಿಸಿತು. ಅದಾದ ಬಳಿಕ ಮೊಟ್ಟೆಗಳೇ ಕಾಣಲಿಲ್ಲ. ಮೊದಲಿನಂತೆ ಬರೀ ಕಪ್ಪು ಉಸುಗು ಮತ್ತು ಯಾವುದನ್ನೂ ಲೆಕ್ಕಿಸದೆ ನಿರಂತರ ರೇಸಿನಲ್ಲಿ ಬಿದ್ದಿರುವ ಈ ಎಡಬಿಡಂಗಿ ಗಂಡು ಮೀನು.
ಸ್ವಲ್ಪ ದಿನಗಳ ನಂತರ ಒಂದು ಮುಂಜಾನೆಯ ಜಾವ ಹೆಂಡತಿ ಆಶ್ಚರ್ಯದಿಂದ ‘ರೀ… ಒಮ್ಮೆ ಇಲ್ಲಿ ಬಂದು ನೋಡಿ..!’ ಎಂದು ಮಲಗಿಕೊಂಡಿದ್ದ ನನ್ನನ್ನು ಒತ್ತಾಯದಿಂದ ಕರೆದುಕೊಂಡು ಬಂದು ಗೋಳದ ಮುಂದೆ ನಿಲ್ಲಿಸಿದಳು. ನಿಜಕ್ಕೂ ಅಚ್ಚರಿ ಕಾದಿತ್ತು…! ಅಷ್ಟು ದಿನಗಳಿಂದ ಕಣ್ಮರೆಯಾಗಿದ್ದ ಮೊಟ್ಟೆಗಳು ಇಂದು ನವಜಾತ ಶಿಶುಗಳಾಗಿ ಹೊಸ ಪ್ರಪಂಚಕ್ಕೆ ಕಾಲಿಟ್ಟಿದ್ದವು. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಮನುಷ್ಯನ ಜೀವನದಲ್ಲಿ ಬಾಣಂತನ ಹೆರಿಗೆ ಎಂಬ ಪದಗಳು ಕೇಳಿಬರುತ್ತವೆ, ಮಗು ಹೊಸ ಪ್ರಪಂಚಕ್ಕೆ ಕಾಲಿಡುವ ಮುನ್ನ. ಆದರೆ ಈ ಮೀನಿನ ಮರಿಗಳೊ ಯಾವುದೇ ಬಂಧನಕ್ಕೊಳಗಾಗದೆ ಸ್ವತಂತ್ರ ಸೇನಾನಿಗಳಾಗಿ ಹೊರಹೊಮ್ಮಿದ್ದು ನಿಜಕ್ಕೂ ನನ್ನನ್ನು ಸೃಷ್ಟಿಯನ್ನು ಪ್ರಶ್ನಿಸುವಂತೆ ಮಾಡಿತು. ತುಂಬಾ ದಿನಗಳಾಗಿದ್ದರಿಂದ ಗೋಳ ಮೀನುಗಳ ವಿಸರ್ಜನೆಯಿಂದ ಗಲೀಜಾಗಿತ್ತು, ಶುಚಿ ಮಾಡಲು ನಿರ್ಧರಿಸಿದೆವು. ಹಳೆಯ ಚಹಾದ ಸೋಸಣಿಕೆಯಿಂದ ಮರಿಗಳನ್ನು ಬೇರ್ಪಡಿಸಿ ಒಂದು ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿದೆವು. ನಂತರ ಮೀನು ಮತ್ತು ಮರಿಗಳನ್ನು ಗೋಳದಲ್ಲಿ ಬಿಟ್ಟೆವು. ಬಹುಷಃ ನಾವು ಮಾಡಿದ ತಪ್ಪು… ಅಲ್ಲ, ಘೋರ ಅಪರಾಧವಿದು…! ಏಕೆಂದರೆ ಕೆಲವೇ ದಿನಗಳಲ್ಲಿ ತಂದೆ ಮೀನು ಎಲ್ಲಾ ಮರಿಗಳನ್ನು ತನ್ನ ಹೊಟ್ಟೆಗೆ ಸೇರಿಸಿಕೊಂಡಿತ್ತು. ಆಮೇಲೆ ಆ ಮೀನು ಕೂಡ ಶಿವನಪಾದ ಸೇರಿಕೊಂಡಿತು. ಈಗ ಬರೀ ಕಪ್ಪು ಉಸುಗು ನೀರು ಮಾತ್ರ ಗೋಳದಲ್ಲಿ ಉಳಿದಿದೆ ಮತ್ತು ಈ ಪುಟ್ಟ ಗ್ರಹದ ಎಲ್ಲೆಯನ್ನು ಹುಡುಕಾಡುವ ಯಾವ ಜೀವಿಯೂ ಇನ್ನುಳಿದಿಲ್ಲ. ಮತ್ತೆ ಹೊಸ ಜೀವಿಗಳ ಉಗಮವಾಗುವುದೇ…? ಕಾದು ನೋಡಬೇಕಿದೆ..!

ಬಾಗಲಕೋಟೆ ಮೂಲದ ಮಯೂರ ಬಿ ಮಸೂತಿ ಸಾಫ್ಟವೇರ್ ಇಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ವೈಜ್ಞಾನಿಕ ಕಥೆಗಳನ್ನು ಹಾಗು ಪ್ರಬಂಧ ಬರೆಯುವುದು ಇವರ ಹವ್ಯಾಸ. ಇವರ ಸಣ್ಣ ಕಥೆಗಳು, ಹಲವಾರು ಪ್ರಬಂಧಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.