ಮೊನ್ನೆ ಆಚೆ ಹೋಗಕೆ ಇದ್ದೆ. ಅಲ್ಲೊಬ್ಬ ಡೆಲಿವರಿ ಬಾಯ್ ಫೋನ್ ಲೌಡಲ್ಲಿ ಇಟ್ಕೊಂಡು “ಹಲೋ ಇವತ್ತು ಡಿಲೆವರಿ ಇತ್ತು” ಎಂದ. ಆಚೆಕಡೆಯಿಂದ ಹಲೋ ತಮ್ಮ ಹೆಸರು ಅಂದ್ರೆ ರತ್ನ ಅಂದ್ರು. ಹೌದು ಮೇಡಮ್ ಡೆಲಿವರಿ ಮಾಡ್ತೀನಿ ನೀವ್ ಇರ್ತೀರ ಎಂದರೆ ಆ ಕಡೆಯಿಂದ ಇಲ್ಲ ನನ್ ಮಗಳ್ ಇರ್ತಾಳೆ ಫೋನ್ ಮಾಡಿ ಹೇಳ್ತೀನಿ… ಹಣ ಕಳ್ಸ್ತೀನಿ ಅಲ್ಲೆ ಡೆಲಿವರಿ ಮಾಡಿ” ಅನ್ನೋದ. ನನಗೆ “ಡೆಲಿವರಿ ಕೊಡಿ” ಅಂದ್ರೆ ಏನಾಗ್ತಿತ್ತು ಹಾಳಾದವರಿಗೆ ಅನ್ನಿಸಿ ಮುಂದೆ ಹೋದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೈದನೆಯ ಬರಹ ನಿಮ್ಮ ಓದಿಗೆ

ನಯನಾ ಅಮ್ಮ ಸುಬ್ಬಮ್ಮ ಮಗಳ ಮನೆಗೆ ಅಂತ ಬೆಂಗಳೂರಿಗೆ ಹೋಗಿದ್ರಂತೆ. ಮಗಳು ಅಳಿಯ ಡೆಲಿವರಿ ಬೇಗ ಆಗುತ್ತೆ…  ಈಗ…  ಈಗ….  ಅಂತ ಖುಷಿ ಪಡ್ತಿದ್ದರೆ ಸುಬ್ಬಮ್ನಿಗೋ ತಲೆ ಬಿಸಿ ಆಗಿ  “ಡೆಲಿವರಿ ಅಂದ್ರೆ ಹೆರಿಗೆ ಅಲ್ವಾ!  ಯಾಕೆ ಡೆಲಿವರಿ ಬಾಯ್ ಬಂದ!  ಡೆಲಿವರಿ ಆಯ್ತಾ! ಅಂತಾ ಕೇಳ್ತಾ ಅವ್ರೆ” ಎಂದು ಘನ ಯೋಚನೆ ಮಾಡುತ್ತಾ “ಅಲ್ಲಾ ಕಣೆ ನಯ್ನ… ದಿನ ಆಗೈತೆ ಅಂತ ಒಂದು ಸೊಲ್ಲ್ ಹೇಳಬಾರ್ದ. ಬೆಣ್ಣೆ… ಅದು… ಇದೂ.. ಎಲ್ಲ ತಗೊಂಡು ಬರ್ತಾ ಇದ್ನಲ್ಲ…. ಖಾಲಿ ಕೈಯಲ್ಲಿ  ಬಂದೆ ನೋಡು… ಬಿಡೆ ನೀನೂ….” ಎಂದು ಮಗಳಲ್ಲಿ ಕೊಸರಿದಳು.
“ಇದ್ಯಾಕಮ್ಮ  ಹೀಗ್  ಮಾತಾಡ್ತೀಯ. ಡೆಲಿವರಿ ಅಂತ ವಿಚಾರ ಮುಚ್ಚಿಡೋಕಾಗುತ್ತಾ ನೀನೂ…..” ಎಂದ ನಯನನ ಮಾತನ್ನು ಕೇಳಿಸಿಕೊಂಡ  ಸುಬ್ಬಮ್ಮ ಮತ್ತೆ  ಅಳಿಯನ ಬಾಯಲ್ಲಿ ಡೆಲಿವರಿ ಪದ ಕೇಳಿ “ಇದ್ಯಾಕೆ ವಿಷ್ಯ ಮುಚ್ಚಿಡ್ತಾ ಇದ್ದಿ  ನನ್ ತವನೆ.. ಅಲ್ನೋಡು ಅಳಿಯಂದ್ರು  ಡೆಲಿವರಿ ಅಂತಿಲ್ವ”  ಎಂದಳು.
 ಅಮ್ಮ ಡಿಲೆವರಿ ಅಂದ್ರೆ ಬ್ಯುಸಿನೆಸ್ ಅನ್ನುತ್ತಿದ್ದಂತೆ “ಅಯ್ಯೋ! ಹೌದು! ಮಕ್ಳ ಹೆತ್ತು ಮಾರೋದು ಬಿಸಿನೆಸ್ಸಾ…..”  ಎಂದು ಸುಬ್ಬಮ್ಮ ಹಣೆ ಚಚ್ಚಿಕೊಂಡಾಗ  ನಯನ
ಅಲ್ಲಾ ಅಮ್ಮಾ ವಸ್ತುಗಳ್ನ ಮನೆ ಬಾಗ್ಲುವರೆಗೂ ತಂದ್ ಕೊಡೋದು ಬ್ಯುಸಿನೆಸ್.. ಅದನ್ನ ಡೆಲಿವರಿ ಆಯ್ತು.. ಆಗುತ್ತೆ.. ಅಂತಿದಾರೆ ಅಷ್ಟು ಗೊತ್ತಾಗಲ್ವೇ? ಹೆರಿಗೆ ವಿಚಾರನೆಲ್ಲಾ ಮುಚ್ಚಿಡೋಕ್ ಆಗುತ್ತಾ…. ಹೇಳು! ಎನ್ನುತ್ತಿದ್ದಂತೆ ಈ ಸುಬ್ಬಮ್ಮಂಗೆ ಡೆಲಿವರಿ ಪದ ಕೇಳಿ ಕೇಳಿ ಸಾಕಾಗಿ ಹಂಗೆ  ತಲೆ ಮೇಲೆ ಕೈ ಹೊತ್ಕೊಂಡು ಕೂತ್ಕೊಂಡು ರಾಮಾ ರಾಮಾ ಅಂತಿದ್ರೆ ಮಗಳು “ನಿನ್ ಅಳಿಯಂದ್ರಿಗೆ ರೊಟ್ಟಿ ಚಟ್ನಿ ಇಷ್ಟ ಅದನ್ನೆ ಝೋಮ್ಯಾಟೋಗೆ ಆರ್ಡ್ರಾಕೊಂಡಿದ್ರು”  ಅದನ್ನೆ ಡೆಲಿವರಿ  ಡೆಲಿವರಿ ಅಂತಿರೋದು” ಎಂದು ಅಮ್ಮನಿಗೆ ಅರ್ಥ ಮಾಡಿಸುತ್ತಿದ್ದಳು. ಅಷ್ಟರಲ್ಲಿ ಫೋನ್  ಬಂದಾಗ ಅಳಿಯಂದ್ರು ಲೌಡ್ ಸ್ಪೀಕರ್ ಆನ್ ಮಾಡಿ ಫೋನ್ ಅಟೆಂಡ್ ಮಾಡ್ತಾ ಇದ್ರೆ ಹಲೋ ಅಂದವ್ನು ಇಲ್ಲೇ ಇದ್ದೀವಿ ಅಡ್ರೆಸ್ ಗೊತ್ತಾಗ್ತಿಲ್ಲ. ಹಾಗೆ ಲೊಕೇಶನ್ ಕಳ್ಸಿ ಸರ್”  ಅಂದ.
 ಸುಬ್ಬಮ್ಮ ಗಾಬರಿ ಆಗಿ ಮಗಳನ್ನು “ಅಲ್ಲ ಕಣೆ ಲೋಕೇಶ ಅನ್ನೋರ್ ಯಾರೆ ಇದ್ದಾರೆ ನಮ್ಮನೇಲಿ. ಅವನು ಯಾವನು ಲೋಕೇಶನ್ ಕಳಿಸಿ ಲೊಕೇಶನ್ ಕಳ್ಸಿ ಅಂತ ಕೇಳ್ತಾನಲ್ಲ ಏನ್ ಮಾಡೋದು?” ಫೋನ್ ಮಾಡಿದವನನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ನಯನಾ “ಅಲ್ಲಮ್ಮ ಅದು ಲೋಕೇಶನ್…  ನಾವು  ಎಲ್ಲಿದ್ದೀವೋ ಅದನ್ನ ಕಳಿಸೋದು” ಅಂತಂದ್ರೆ  ಸುಬ್ಬಮ್ಮಂಗೆ ತಲೆಗೇ ಹೋಗ್ಲಿಲ್ಲ. ಅಳಿಯಂದ್ರೆ ಮತ್ತೆ ಮಾತಾಡ್ತಾ “ನೋಡಪ್ಪ ಲೊಕೇಶನ್ ಕಳಿಸಿದ್ದೀನಿ” ಅಂದ್ರು. ಇನ್ನೆರಡು ನಿಮಿಷದಲ್ಲಿ ಕಾಲ್ ಮಾಡಿದವನು “ಸರ್ ಆರ್ಡರ್ ತಗೊಳಿ ಮಿಸ್ ಮಾಡ್ದೆ ಫೀಡ್ ಬ್ಯಾಕ್ ಕೊಡಿ” ಎಂದು  ಗಾಡಿ  ಸ್ಟಾರ್ಟ್ ಮಾಡಿ ಕೈಬೀಸಿದ. ಸುಬ್ಬಮ್ಮ ಹಾಗೆ ಕಿಟಕಿಲಿ ನೋಡಿ “ಕೆಂಪಂಗಿ ಹಾಕ್ವನೆ ಸರ್ದಾರ ಪರವಾಯಿಲ್ಲ” ಎಂದು ಗುನುಗುತ್ತಾ ಒಳಗೆ ಬಂದ್ರೆ  ರೊಟ್ಟಿಚಟ್ನಿಗೆ ಮುಗಿಬಿದ್ದ ಅಳಿಯಂದ್ರನ್ನ ನೋಡಿ “ಅಯ್ಯಾ ಬರ್ಗೆಟ್ಟಂಗೆ ತಿಂತಾವ್ರೆ  ರಾಮಾ ಕೃಷ್ಣಾ  ನಮ್ಮಳ್ಳಿಲಿ  ಬೆಳಗಾಗೆದ್ರೆ ಇದೆ ಅಲ್ವ….. ತಿನ್ನದು. ಬರ್ಗೆಟ್ಟು ತಿಂತಿರದ್ ನೋಡು”  ಎಂದು ಜೋರಾಗಿ ನಕ್ಕಳು. ಸರಿಯಾಗಿ ಕೇಳಿಸಿಕೊಳ್ಳದ ಮಗಳು “ಅದು ಬರ್ಗರ್ ಅಲ್ಲಮ್ಮ…….”  ಎನ್ನುತ್ತಿರಬೇಕಾದರೆ  ಕರೆ ಗಂಟೆ ಬಾರಿಸಿತು. ಬಾಗಿಲು ತೆರೆದರೆ ಎದುರು ಮನೆ ಶೋಭ ನಯನ ಫ್ರೆಂಡ್ ಇದ್ದಳು.  ನಯನ  ಹಣೆ ಹಣೆ ಚಚ್ಚಿಕೊಳ್ಳುತ್ತಾ  “ಇವಳು ಇನ್ನೇನು ತಲೆನೋವು ತಂದಿದಾಳೋ” ಎನ್ನುತ್ತಲೇ “ಓಹ್ ಬನ್ನಿ… ಶೋಭ  ಎಲ್ಲಾ ಅರಾಮ.  ನಮ್ಮನೇಲಿ ಒಂದು ಸಮಸ್ಯೆ  ಏನು ಗೊತ್ತಾ?” ಎಂದು ಆಲಾಪಿಸುತ್ತಿದ್ದಂತೆ,
 ಶೋಭ “ಇಲ್ಲ! ಗೊತ್ತಿಲ್ಲ ಹೇಳಿ!  ಹೇಳಿ!” ಎಂದಳು. ನಯನ ಅಷ್ಟೂ ಹಲ್ಲು ಕಿರಿಯುತ್ತಾ  ಅದನ್ನೆ ಹೇಳಕ್ ಬರ್ತಾ ಇದ್ದೆ…  ನಮ್ಮಮ್ಮ ಇವತ್ತು ಊರಿಂದ ಬಂದ್ರ…” ಎನ್ನುವುದೇ ತಡ ..
“ಹೂ ಇಲ್ಲೆ ಇದ್ದಾರಲ್ಲ” ಎಂದು ಶೋಭ ಕೈ ತೋರಿ ನಗುತ್ತಿದ್ದಳು. “ಇರ್ರಿ ಹೇಳ್ತೀನಿ…….  ನಮ್ಮನೆಯವ್ರೋ ಝೊಮ್ಯಾಟೊ ಆರ್ಡರ್ ಹಾಕಿದ್ದರು. ಅವನೊ  ಡೆಲಿವರಿ ಮಾಡಕ್ ಗೊತ್ತಾಕ್ತಿಲ್ಲ ಅಂತಿದ್ದ. ಈ ನಮ್ಮಮ್ಮಂಗೆ ಡೆಲಿವರಿ  ಡೆಲಿವರಿ ಪದ ಬಾಳ ತೊಂದ್ರೆ ಕೊಡ್ತಾ ಇದೆ. ಡೆಲಿವರಿ ಅದ್ರೆ ಹೆರಿಗೆ ಅದ್ಕೊಂಡು ಬೇಡ ನನ್ ಅವಸ್ಥೆ” ಎಂದು  ಕೆನ್ನೆ ತಟ್ಟಿಕೊಳ್ಳುತ್ತಿದ್ದ ನಯನಾಗೆ ಶೋಭ “ಅಯ್ಯೋ ಹಾಗಂದ್ರೆ ಆಗುತ್ತಾ ಬಿಡ್ಸಿ ಹೇಳ್ಬೇಕು..

ಅದೇ ನಮ್ಮ ಪೋಸ್ಟ್ ಮ್ಯಾನ್ ಪೋಸ್ಟ್ ಕೊಟ್ಟಾಗ್ಲೂ  ಡೆಲಿವರಿ ಅಂತೀವಿ. ಆಫೀಸ್ ಬಾಯ್, ರೂಮ್ ಬಾಯ್ ಅನ್ನಲ್ವ ಹಾಗೆ ಡೆಲಿವರಿ ಬಾಯ್ ಅನ್ನಬೇಕು…. ಕ್ಯಾಶ್ ಆನ್ ಡೆಲಿವರಿ, ಡೋರ್ ಡೆಲಿವರಿ, ಎಲೆಕ್ಟ್ರಾನಿಕ್ ಗೂಡ್ಸ್  ಡೆಲಿವರಿ, ಮೆಸೇಜ್ ಡಿಲಿವರಿ, ಡೈಲಾಗ್ ಡೆಲಿವರಿ. ಪಾರ್ಸೆಲ್ ಡೆಲಿವರಿ. ಹಿಂಗೆ ಡ್ಯಾಶ್ ಡ್ಯಾಶ್ ಎಷ್ಟು ತರಾವರಿ ಡೆಲಿವರಿ ಇದ್ದಾವೆ ಬಿಡಿಸಿ ಹೇಳ್ಬೇಕು ಮತ್ತೆ… ಇನ್ನೊಂದು ವಿಷ್ಯಾ ಗೊತ್ತಾ…

ಮೊನ್ನೆ ಆಚೆ ಹೋಗಕೆ ಇದ್ದೆ. ಅಲ್ಲೊಬ್ಬ ಡೆಲಿವರಿ ಬಾಯ್ ಫೋನ್ ಲೌಡಲ್ಲಿ ಇಟ್ಕೊಂಡು “ಹಲೋ ಇವತ್ತು ಡಿಲೆವರಿ ಇತ್ತು” ಎಂದ. ಆಚೆಕಡೆಯಿಂದ ಹಲೋ ತಮ್ಮ ಹೆಸರು  ಅಂದ್ರೆ ರತ್ನ  ಅಂದ್ರು. ಹೌದು ಮೇಡಮ್ ಡೆಲಿವರಿ ಮಾಡ್ತೀನಿ ನೀವ್ ಇರ್ತೀರ ಎಂದರೆ ಆ ಕಡೆಯಿಂದ ಇಲ್ಲ ನನ್ ಮಗಳ್ ಇರ್ತಾಳೆ ಫೋನ್ ಮಾಡಿ ಹೇಳ್ತೀನಿ… ಹಣ ಕಳ್ಸ್ತೀನಿ ಅಲ್ಲೆ ಡೆಲಿವರಿ ಮಾಡಿ” ಅನ್ನೋದ. ನನಗೆ “ಡೆಲಿವರಿ ಕೊಡಿ” ಅಂದ್ರೆ ಏನಾಗ್ತಿತ್ತು ಹಾಳಾದವರಿಗೆ ಅನ್ನಿಸಿ ಮುಂದೆ ಹೋದೆ.
ಮಾತಲ್ಲಿ ಎಷ್ಟು ವ್ಯತ್ಯಾಸ ಆಗುತ್ತೆ ಎನ್ನುತ್ತಾ ಕಾಫಿ ಮಾಡುತ್ತಿದ್ದ ನಯನಾ ಬಳಿ ಹೋಗಿ ಹೆಗಲ ಮೇಲೆ ಕೈ ಹಾಕುತ್ತಾ   “ಮತ್ತೆ ಅಲ್ಲರೀ ನಯನ ಕೊರೊನಾ ಬಂದ್ಮೇಲೆ ಅಮೆಜಾನ್ ಇಲ್ಲೆಲ್ಲಾ ಡೆಲಿವರಿ ಬಾಯ್ಸ್ನ ತೆಗುದ್ರಲ್ಲ. ಎಷ್ಟು ಕಷ್ಟ ಆಯ್ತು ಅವ್ರಿಗೆ.. ಮೊದ್ಲೆಲ್ಲಾ ಪೊಟ್ರೋಲಿಗ್ ದುಡ್ಡು ಎಲ್ಲಾ ಕೊಡೋರಂತೆ. ಈಗ ಎಷ್ಟು ಪಾರ್ಸಲ್ ಕೊಡ್ತಾರೆ  ಅದಕ್ಕೆ ತಕ್ಕ ಹಾಗೆ  ದುಡ್ಡಂತೆ ಪಾಪ. ನಮ್ಮನೆಗೆ ಬರ್ತಾನಲ್ಲ ಅಮೆಜಾನ್ ಬಾಯ್  ಅವ್ನುಹೇಳ್ತಾ ಇದ್ದ”  ಎಂದು ಬೇಜಾರಾಗುತ್ತಿದ್ದರೆ….. ನಯನ “ಹೂ ರೀ ಎಷ್ಟು ಕಷ್ಟ ಅವ್ರಿಗೆ, ನಾನೂ ಒಂದು ಜೊತೆ ದೀಪ ಆರ್ಡರ್ ಹಾಕಿದ್ದೆ ರೀ….. ಫೊಟೊದಲ್ಲಿ ದೊಡ್ದಾಗಿ ಕಾಣಿಸ್ತಾ ಇತ್ತು. ಪ್ಯಾಕೂ ದೊಡ್ದೆ ಇತ್ತು…. ಬಿಡಿಸಿ ನೋಡಿದ್ ತಕ್ಷಣ ಹಳ್ಳಕ್ಕೆ ಬಿದ್ದೆ ಅನ್ನಿಸ್ತು. ನಮ್ಮನೆಯವರು ವಾಪಾಸ್ ಕಳ್ಸು ಅಂದ್ರು. ಅವರ ಬಲವಂತಕ್ಕೆ  ಡಿಲಿವರಿ ಬಾಯ್  ಕರೆದು ವಾಪಸ್ ತಗೊಂಡು ಹೋಗು ಅಂದೆ. ನಮ್ಮನೆಯವರು ಅವ್ನೇ ಎನೋ ಮಾಡಿದಾನೆ ಅನ್ನೋಹಾಗೆ ರೇಗಿಬಿಟ್ರಾ….. ಪಾಪ ಡೆಲಿವರಿ ಕಂದಾ ಅಲ್ಲಲ್ಲಾ ಬಾಯ್ ವೈ ದಿಸ್ ಡಿಲವರಿ…..ವರಿ ಡಿಲವರಿ ಅಂದ್ಕೊಂಡ್ ಹೋದ. ನನ್ಗೋ ನಗು ತಡೆಯಕ್ಕಾಗ್ಲಿಲ್ಲ…. ಹೋಗಲಿ ಬಿಡ್ರಿ…. ನಕ್ಬಿಟ್ಟೆ. ಅಂದ್ ಹಾಗೆ  ನಾಟಕದಲ್ಲಿ  ಡೈಲಾಗ್ ಡೆಲಿವರಿ ಸರಿಯಾಗ್ ಆಗ್ಬೇಕು ನೋಡಿ. “ಬಾ ಬೇಗ ಮನಮೋಹನ  ಇದ್ದಿದ್ದು  ಬಾಬೇಗ ಮನೆಗೋಗನ ಬಾ ಬೇಗ ಮನೆಗೋಗನ ಅಂದು ಬಿಟ್ರೆ.. ನಾಟಕದ ಮೇಷ್ಟ್ರು ಕತೆ ಅಷ್ಟೆ” ಎನ್ನುತ್ತಾ ಅಡುಗೆ ಮನೆಗೆ ಹೋದಳು.
 ಸುಬ್ಬಮ್ಮ  ಎಲ್ಲಾ ಕೇಳಿಸ್ಕೊಂಡು “ಅಲ್ಲಾ ಬರೆ ಡೈಲಾಗಲ್ಲಿ ಹೇಗ್ ಡೆಲಿವರಿ ಮಾಡ್ಸಕ್ ಆಗುತ್ತಾ. ಮೈಕೈ ಸಡ್ಲ  ಮಾಡಿ  ಮಗು ಆಚೆ ಬರಕೆ ಬಿಡ್ಬೇಕು” ಎನ್ನುತ್ತಿದ್ದರೆ ಶೋಭ ಡೆಲಿವರಿ ಅಂದರೆ ಬರೇ ಹೆರಿಗೆ ಅಲ್ಲಮ್ಮ. ಯಾವುದಾದರು ವಸ್ತು, ಪೋಸ್ಟ್, ಗೂಡ್ಸ್  ಇವುಗಳನ್ನು  ಅಡ್ರೆಸ್‌ದಾರರಿಗೆ  ತಲುಪಿಸೋದು  ಎಂದು ಹೇಳುತ್ತಿದ್ದಂಗೆ ಶೋಭ “ಕನ್ನಡದಲ್ಲಿ ಡೆಲಿವರಿಗೆ ಪ್ರಸವ ಅಂತಾರೆ ಗಜಪ್ರಸವ, ಸುಖಪ್ರಸವ ಅಂತಾರಲ್ಲ ನಯನಾ ನನ್ ಮಗನ ಡೆಲಿವರಿಲಿ ನನ್ಗೆ ದಿನಾ ಆದ್ರೂ ನೋವೇ ಬಂದಿರ್ಲಿಲ್ಲ. ನಮ್ ಡಾಕ್ಟ್ರು ಗಾಯತ್ರಿ ಮೇಡಮ್ ಸುಖಪ್ರಸವ ಸುಖಪ್ರಸವ ಅಂತಿದ್ರು. ನನಗೆ ಕೇಸರಿಬಾತ್  ಗಸಗಸೆ ಪಾಯ್ಸ ಕುಡಿಬೇಕು ಅನ್ಸಿತ್ತು. ಮನೆಯವ್ರು ಅವ್ರ  ಫ್ರೆಂಡ್ ಮನೆಲಿ  ಕೇಸ್ರಿಬಾತ್ ಮಾಡ್ಸ್ಕೊಂಡು  ಬರ್ತೀನಿ ಅಂತ ಹೋದ್ರೆ ಈಕಡೆ ಡಾಕ್ಟ್ರು  ನಾನೂ ಮನೆಗ್ ಹೋಗ್ಬೇಕು ಬನ್ನಿ ನೋಡಣ  ಅಂತ ಕರ್ದು  ಚೆಕ್ ಮಾಡಿ ಮಗು ಉಸಿರ್ ಕಟ್ತಾ ಇದೆ. ಸಿಝೇರಿಯನ್ ಮಾಡ್ಬೇಕು ಅಂತ ಮಾಡೇ ಬಿಟ್ರು. ಕೇಸ್ರೀ ಬಾತೂ ಇಲ್ಲ ಏನೂ ಇಲ್ಲ  ಸುಖಪ್ರಸವ  ಅಲ್ಲ ಸೀಝರ್  ಪ್ರಸವ ಆಯ್ತು. ಸದ್ಯ ಮಗ ಆರೋಗ್ಯವಾಗಿತ್ತು. ನಾಲ್ಕುಕೆ.ಜಿ ಇದ್ದ  ಆಸ್ಪತ್ರೆಲೀ ಅವನನ್ನ ಬಾಲ ಭೀಮ! ಬಾಲ ಭೀಮ!  ಅಂದ್ರು…

 ಚ್  ಚ್ ಬಿಡಿ ಶೋಭ.. ಮಗು ನೀವು ಆರೋಗ್ಯವಾಗಿದ್ದೀರಲ್ಲ…..  ಎಂದು ನಯನಾ ಲೊಚಗುಟ್ಟುತ್ತಾ  ಈಗ  ಪೇಯ್ನ್ ಲೆಸ್ ಡೆಲಿವರಿ ಬಂದಿದೆಯಂತೆ. ವಾಟರ್  ಡೆಲಿವರಿ…. ಸ್ವಲ್ಪ ಬಿಸಿ ಇರುತ್ತಂತೆ ನೀರು. ಆ ಟಬ್ಬಲ್ಲಿ ಕೂರಿಸಿ ಡೆಲಿವರಿ ಮಾಡಿಸ್ತಾರಂತೆ. ಅದು ಬೆಂಗ್ಳೂರಲ್ಲೂ ಇದೆಯಂತೆ. ಆದ್ರೆ ಪ್ರೀ ಬುಕಿಂಗ್. ಏನ್ ಕಾಲ ಬಂತುನೋಡಿ.  ವಡ್ಡಾರಾಧನೆ ಕಾಲಕ್ಕೆ ಇದಕ್ಕೆ ದಾಖಲೆ ಇದೆಯಂತೆ. ಅಂದಿನ ಜಲಪ್ರಸವ  ಇಂದಿನ ವಾಟರ್ ಬರ್ತ್ ಅಷ್ಟೆ.

ಕಾರ್ತಿಕ ಋಷಿ ಕತೇಲಿ ಕೃತ್ತಿಕೆ ತುಂಬಿದ ಪ್ರೆಗ್ನೆಂಟ್ ಇದ್ದಾಗ ಸರವಣ ಅನ್ನೋ ಬಾವಿಲಿ ನಂಗೆ  ಆಟಾಡ್ಬೇಕು; ಅದೆ ನನ್ನ ನಸುರಿ ಬಯಕೆ  ಅಂತ ಅಗ್ನಿರಾಜನಿಗೆ  ಹೇಳಿ ಅವನ್ ಒಪ್ಪಿದ್ ಮೇಲೆ ನೀರಲ್ಲಾಡಿ ಮಗನನ್ನು ಹಡೆದಳಂತೆ.  ಇದೆ ವಾಟರ್ ಬರ್ತ್; ಅಂದರೆ ನೀರಲ್ಲಿ ಹೆರಿಗೆಯಾಗುವುದು. ಇದರಲ್ಲಿ ಮೆಡಿಕಲ್ ಫಾರ್ಮಾಲಿಟಿಸ್.. ಮತ್ತೆ ನೋವು ಕಡಿಮೆ ಅಂತೆ. ನ್ಯಾಚುರಲ್ ಹೆರಿಗೆ ಇದು ಟಬ್‌ನಲ್ಲಿ ನೀರನ್ನು ಎದೆಮಟ್ಟಕ್ಕೆ ತುಂಬಿಸಿರ್ತಾರಂತೆ. ಹೊಸ ನೀರು ಬರಲು, ಹಳೆಯ ನೀರು ಹೋಗಕೆ ಪೈಪ್ ಹಾಕಿರ್ತಾರಂತೆ ಹೆರಿಗೆಯಾದ ಸ್ವಲ್ಪ ಹೊತ್ತು ಮಗು ಗರ್ಭ ಚೀಲದಲ್ಲಿಯೇ ಉಸಿರಾಡುತ್ತೆ ಅದಕ್ಕೂ ಮೊದಲು ನೀರಲ್ಲಿಯೇ ಇರುತ್ತದೆ ಅಲ್ವೆ! ಹಾಗಾಗಿ ಮಗುವಿಗೆ ಅಪಾಯವಿಲ್ಲ. ಹೊಕ್ಕಳ ಬಳ್ಳಿ ಕತ್ತರಿಸಿದ ನಂತರ  ಸ್ವತಂತ್ರವಾಗಿ ಉಸಿರಾಡುತ್ತಂತೆ. ಇಲ್ಲ ಬೆಚ್ಚಗಿನ ನೀರು ದೇಹವನ್ನು ರಿಲ್ಯಾಕ್ಸ್ ಮಾಡೋದ್ ಅಲ್ದೆ, ಹೆರಿಗೆ ನೋವನ್ನೂ ಕಡಿಮೆ ಮಾಡುತ್ತಂತೆ. ಒಟ್ಟಾರೆ  ನೋವು ರಹಿತ ಡೆಲಿವರಿ.. ಹಿಂದೆ ಎಲ್ಲಾ ಮನೆಯಲ್ಲೆ ಅಲ್ವ   ಪ್ರೆಗ್ನೆಂಟ್ ಲೇಡಿಸ್ ಇದ್ರೆ ಅದಕ್ಕೆ ಅಂತಾನೆ ಸಪರೇಟ್ ರೂಮಲ್ಲಿ ಹಾಸಿಗೆ ಮಗು ಮಲಗಿಸೋಕೆ ಮೊರ  ಒಂದು ಮಡಿಕೆ ಎಲ್ಲಾ ಇಟ್ಟಿರೋರಂತೆ….. ಅವತ್ತಿನ್ ತಯಾರಿಗೂ ಇವತ್ತಿಗೂ ಎಷ್ಟು ಅಪ್ಡೇಟ್ಸ್ ನೋಡಿ… ಅಷ್ಟರಲ್ಲಿ ಸುಬ್ಬಮ್ಮ ಬಂದು ಚೇಳಿನ್ ಹೆರಿಗೆ ವಿಷ್ಯ ಗೊತ್ತಾ.. ಅದು ಮಕ್ಕಳನ್ನ ಹೆತ್ತಾದ್ಮೇಲೆ ಮರಿಗೊಳು ಹೊಟ್ಟೆ ಹಸ್ದು ಕವ ಕವ ಅಂತಿರ್ತಾವಂತೆ. ಆಗ ಪೂರ್ತಿ ಮೈ ಬಿಡಿಸಿ ಕೊಡುತ್ತಂತೆ. ಎಷ್ಟು ಪ್ರೀತಿ ಮರಿಗೊಳು ಅಂದ್ರೆ ಅದ್ಕೆ ಬಾಳೆಗೊಂದೆ ಗೊನೆ ಚೇಳಿಗೊಂದೆ ಬಸುರು ಅನ್ನೋದು. ಬಾಳೆ ಗಿಡ ಹಂಗೆ ಅಲ್ವ; ಗೊನೆ ಕಡಿತ್ತಿದ್ದಂಗೆ ಗಿಡಾನೂ ಕಡ್ದು ಹಾಕಲ್ವ! ಎಂದರೆ ನಯನ  ಡೆಲಿವರಿ ಕಷ್ಟ ಯಾರ್ಗೂ ಬೇಡ. ಇನ್ನೊಮ್ಮೆ ಹುಟ್ಟಿ ಬಂದ್ ಹಾಗೆ ಎಂದರೆ ಶೋಭ ಹುಟ್ಟೋದು ಒಂದೇ ಅಲ್ಲ ರೀ ಎದುರು ಮನೆ ವಿಭಾ ಇದ್ದಾರಲ್ಲ ಅವ್ರು ಪುಸ್ತಕ  ಬರಿತಾರೆ. ಪುಸ್ತಕ ಬಿಡುಗಡೆ ಮಾಡೋದೂ ಸಹ ಪ್ರಸವ ಇದ್ದಂಗೆ ಅಂತಿದ್ರು. ಇನ್ನು  ಮನೆ ಕಟ್ಟಿ  ಕೆಲಸಗಾರರ  ಜೊತೆ  ಹೆಣಗಿ ಗೃಹ ಪ್ರವೇಶ ಮಾಡೋದೂ  ಡೆಲಿವರಿ…..ಅಲ್ವ  ಮಕ್ಳು ಪರೀಕ್ಷೆ ಬರೆದು ರಿಸಲ್ಟ್ ಬಂದ್ರೆ ಅದೂ ಡೆಲಿವರಿ  ಆದಹಾಗೆ ಅಲ್ವ! ಡೆಲಿವರಿ ಆಗೋವರ್ಗೂ ವೈ ದಿಸ್ ಡೆಲಿವರಿ ಡೆಲಿವರಿ ಡಿ…. ಅನ್ಬೇಕು ನೋಡಿ. ಮಗು ಹುಟ್ಟೋದು ಅಲ್ದೆ ತರಾವರಿ ಡಿಲೆವರಿಗಳು ಆಗಾಗ ಆಗ್ತ  ಇರುತ್ವೆ. ಯಾವುದೇ ಆಗ್ಲಿ ಡಿಲೆವರಿ  ಆಗೋವರ್ಗೂ ವೈ ದಿಸ್ ಡೆಲಿವರಿ ಅನ್ಸುತ್ತೆ ಆದ್ಮೇಲೆ ನೋವರಿ; ಖುಷಿವರಿ ಖುಷಿವರಿ……..ಡಿ……