Advertisement
ನಾಯಕತ್ವದ ನಿರ್ಣಾಯಕ ದಿನವಿಂದು: ಡಾ. ವಿನತೆ ಶರ್ಮ ಅಂಕಣ

ನಾಯಕತ್ವದ ನಿರ್ಣಾಯಕ ದಿನವಿಂದು: ಡಾ. ವಿನತೆ ಶರ್ಮ ಅಂಕಣ

ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಲೀ ಸ್ಮಿತ್ ಹೇಳಿದ್ದು ‘ನಮ್ಮ ಜೀವನ ಗುಣಮಟ್ಟ ನಿರ್ಧಾರವನ್ನು ವಾಪಸ್ ಪಡೆಯೋಣ, ಅದು ನಮ್ಮ ಹಕ್ಕು’ ಎಂದು. ಪರಿಸರವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಈಕೆ ಜನಸಮುದಾಯದಲ್ಲಿ ಬೆರೆತು ಜನಾಭಿಪ್ರಾಯವನ್ನು ಅರಿತು ಸಮುದಾಯ ಅವಶ್ಯಕತೆಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಪ್ರತಿದಿನ ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡುವುದು, ಸಣ್ಣಪುಟ್ಟ ವ್ಯಾಪಾರ ಸಂಸ್ಥೆಗಳಿಗೆ ಪ್ರೋತ್ಸಾಹ, ವಸತಿ ವೆಚ್ಚದಲ್ಲಿ ರಿಯಾಯ್ತಿ, ರಸ್ತೆಗಳನ್ನು ಉತ್ತಮ ಪಡಿಸುವುದು, ಇತ್ಯಾದಿ ಈಕೆಯ ಗುರಿಗಳು. ಸುಮಾರು ಮೂರು ತಿಂಗಳುಗಳಿಂದ ನನಗೆ ತಿಳಿದಿರುವ ಇಬ್ಬರು ಮಹಿಳೆಯರು ತಮ್ಮ ಈ ನೆಚ್ಚಿನ ಅಭ್ಯರ್ಥಿ ಪರವಾಗಿ ಪ್ರಚಾರ ಕೆಲಸ ಮಾಡುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ತಾಪಮಾನ ಇಳಿಯುತ್ತಿದೆ. ನಿನ್ನೆ ಪ್ರಕಾರ ನಮ್ಮ ರಾಣಿರಾಜ್ಯದ ದಿನದ ತಾಪಮಾನ ೨೨ ಡಿಗ್ರಿ, ರಾತ್ರಿ ಹೊತ್ತಿನ ತಾಪಮಾನ ೧೫ ಡಿಗ್ರಿ. ಆಸ್ಟ್ರೇಲಿಯಾದ ಬಾಲದಲ್ಲಿರುವ ಟಾಸ್ಮೆನಿಯಾ ರಾಜ್ಯದಲ್ಲಿನ ದಿನದ ತಾಪಮಾನ ಐದು ಡಿಗ್ರಿ. ನೋಡನೋಡುತ್ತಿದ್ದಂತೆ ಕಳ್ಳಬೆಕ್ಕಿನ ಜಾಡನ್ನು ಅನುಕರಿಸುವಂತೆ ಆಸ್ಟ್ರೇಲಿಯಾದಲ್ಲಿ ಚಳಿ ಕಾಲಿಟ್ಟಿದೆ. ಪೆಟ್ಟಿಗೆಯಿಂದಲೊ ಇಲ್ಲಾ ವಾರ್ಡ್-ರೋಬಿನಿಂದಲೋ ಬೆಚ್ಚಗಿನ ಮೇಲ್ಪದರ ಉಡುಪುಗಳಾದ ಶಾಲು, ಸ್ವೆಟರ್, ಜಾಕೆಟ್ ಮುಂತಾದವು ಹೊರಬಂದಿವೆ. ಬಿಸಿಲಿಗೆ ಬೆನ್ನು ಕೊಡುವುದು ಹಿತವಾಗಿದೆಯಾದರೂ ವಾರದ ಕೆಲಸದ ದಿನಗಳಲ್ಲಿ ಅದಕ್ಕೆಂದೆ ಸಮಯ ಹೊಂದಿಸಿಕೊಳ್ಳುವುದು ಸವಾಲಾಗಿದೆ. ಎಂದಿನಂತೆ ಚಳಿಗಾಲ ಬರುವುದಕ್ಕೂ ಮುನ್ನ ಏಳುವ ನೈಸರ್ಗಿಕ ನೈಜ ಬಿಸಿಲನ್ನು ಸವಿಯುವುದೋ ಇಲ್ಲಾ ವಿಟಮಿನ್ ಡಿ ಮಾತ್ರೆ ನುಂಗುವುದೋ ಅನ್ನೋ ಜಿಜ್ಞಾಸೆ ಇದ್ದೇಯಿದೆ.

ಈ ವಾರ ಪೂರ್ತಿ ದಿನ ಮತ್ತು ರಾತ್ರಿಯ ಉಷ್ಣ ತಾಪಮಾನ ಇಳಿಯುತ್ತಿದ್ದಂತೆ ರಾಜಕೀಯ ವಲಯದಲ್ಲಿ ಇನ್ನಷ್ಟು, ಮತ್ತಷ್ಟು ಹೊಸ ಬಿಸಿ ಕಂಡು ಅದು ಏರಿದೆ, ಏರುತ್ತಲೇ ಇದೆ. ರಾಜಕೀಯ ಪಕ್ಷಗಳಿಗೆ, ಮಾಧ್ಯಮಗಳಿಗೆ ಬಿಡುವಿಲ್ಲದ ಕೆಲಸ. ಅದಿರಲಿ, ನಮ್ಮಂತಹ ಸಾರ್ವಜನಿಕರಿಗೂ ಕೂಡ ತಗ್ಗಿಲ್ಲದ ಉತ್ಸಾಹ! ಯಾಕೆಂದರೆ ಇವತ್ತು ಆಸ್ಟ್ರೇಲಿಯಾದಲ್ಲಿ ಕೇಂದ್ರ ಸರಕಾರ ರಚನೆಗೆ ಫೆಡೆರಲ್ ಎಲೆಕ್ಷನ್ ನಡೆಯುತ್ತಿದೆ. Australia Votes. ನೀವು ಈ ಅಂಕಣ ಲೇಖನವನ್ನು ಓದುವಷ್ಟರಲ್ಲಿ Australia Voted ಎಂದಾಗಿರುತ್ತದೆ!

ಇವತ್ತು ಮೇ ತಿಂಗಳ ಮೂರನೇ ತಾರೀಕು ಆಸ್ಟ್ರೇಲಿಯನ್ ಪ್ರಜೆಗಳು ಯಾರು ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ. ತಂತಮ್ಮ ಕ್ಷೇತ್ರಗಳಿಂದ ಮೆಂಬರ್ ಆಫ್ ಪಾರ್ಲಿಮೆಂಟ್ (ಎಂಪಿ) ಗಳನ್ನು ಚುನಾಯಿಸಿ ಅವರನ್ನು ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಅಂದರೆ ಸದನದ ಕೆಳಮನೆಗೆ ಕಳಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ೧೫೦ ಎಂಪಿಗಳು ಆರಿಸಿ ಬರಲಿದ್ದಾರೆ. ಈ ಎಂಪಿಗಳ ಕೈಯಲ್ಲಿ ಎಲ್ಲವೂ ಇದೆ – submarine ಕೊಳ್ಳುವುದು, nuclear power station ಸ್ಥಾಪಿಸುವುದು, ಜನಾರೋಗ್ಯಕ್ಕೆ ಬೇಕಿರುವ ಕ್ರಮ ತೆಗೆದುಕೊಳ್ಳುವುದು, ಸದ್ಯಕ್ಕೆ ವಿಪರೀತ ಚರ್ಚೆಗೊಳಗಾಗಿರುವ ಕಾಸ್ಟ್ ಆಫ್ ಲಿವಿಂಗ್ ಮತ್ತು housing price ಇತ್ಯಾದಿ ವಿಷಯಗಳು. ಅಂತಾರಾಷ್ಟ್ರೀಯ, ದೇಶೀಯ ಮಟ್ಟದ ಮತ್ತು ಸ್ಥಳೀಯ ಎಲ್ಲಾ ಸಮಸ್ಯೆಗಳನ್ನೂ ಕೈಗೆತ್ತಿಕೊಂಡು ಜನಪರ ಆಡಳಿತ ನಡೆಸುವ ಹೊಣೆ ಇವರ ಮೇಲಿದೆ. ಜನಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಅಡಗಿದೆ. ನಮ್ಮಗಳ ಹಣೆಬರಹ ಇವರ ಮುಷ್ಟಿಯಲ್ಲಿದೆ!

ಎಂಪಿ ಗಳ ಆಯ್ಕೆಯ ಜೊತೆ ಮತದಾರರು ಇಂದು ಸದನದ ಮೇಲ್ಮನೆಗೆ ಅಂದರೆ Senate ಗೆ ಕೂಡ ಅರ್ಹರನ್ನು ಚುನಾಯಿಸಲಿದ್ದಾರೆ. ಈ ಬಾರಿ ೪೦ ಸೆನೆಟರ್‌ಗಳು ಇದ್ದಾರೆ. ಕೆಳಮನೆಯ ಎಂಪಿಗಳು ಕೈಗೊಳ್ಳುವ ನಿರ್ಧಾರಗಳನ್ನು ಇವರು ಪರಿಶೀಲಿಸಿ ಆ ನಂತರವೇ ಅವು ಕಾನೂನಿಗೆ ಪರಿಧಿಗೆ ಬರುತ್ತವೆ. ಹಾಗಾಗಿ ಈ ಸೆನೆಟರ್‌ಗಳ ಪಾತ್ರವೂ ದೊಡ್ಡದು.

ಆಸ್ಟ್ರೇಲಿಯಾ ಪ್ರಜೆಯಾಗಿ ನಾನು ಇಂದು ಬೆಳಗ್ಗೆ ಮೊಟ್ಟಮೊದಲ ಬಾರಿ ಕೇಂದ್ರೀಯ ಚುನಾವಣೆಯಲ್ಲಿ ಮತ ಚಲಾಯಿಸಿದೆ. ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಘಳಿಗೆ. ನಾನು ವಾಸಿಸುವುದು ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರ Dickson ಮತಕ್ಷೇತ್ರದಲ್ಲಿ. ಈ ಬಾರಿ ಪ್ರಧಾನಮಂತ್ರಿ ಪಟ್ಟಕ್ಕೆ ಪೀಟರ್ ಡಟ್ಟನ್ ಕಣದಲ್ಲಿದ್ದಾರೆ. ಹಾಗಾಗಿ ಎಲ್ಲರ ಕಣ್ಣೂ Dickson ಎಲೆಕ್ಟೋರೇಟ್ ಕ್ಷೇತ್ರದ ಮೇಲಿದೆ! ಅಂದಮೇಲೆ ಇದೊಂದು ವಿಶೇಷ ಅನುಭವವಲ್ಲವೇ! ನೆನಪಿಗೆಂದು ಒಂದಷ್ಟು ಫೋಟೋಗಳನ್ನು ತೆಗೆದುಕೊಂಡೆ.

ಮತ ಚಲಾಯಿಸುವ ವಿಧಾನ ಸರಳ ಮತ್ತು ಸುಲಭ. ವೋಟಿಂಗ್ ಸೆಂಟರ್‌ಗೆ ಹೋದಾಗ ‘ನೀವು Dickson ಕ್ಷೇತ್ರದ ಮತದಾರರೇ?’ ಎಂದು ಕೇಳಿದರು. ಹೌದೆಂದು ಉತ್ತರಿಸಿದ ಬಳಿಕ ನನ್ನ ಮನೆ ಅಡ್ರೆಸ್ ಖಚಿತಪಡಿಸುವ ದಾಖಲೆ ಇರುವ ಸಿಬ್ಬಂದಿಯತ್ತ ಕಳಿಸಿದರು. ಅವರು ನನ್ನ ಪೂರ್ತಿ ಹೆಸರು ಮತ್ತು ಮನೆ ವಿಳಾಸ ಕೇಳಿ, ಅವರ ಬಳಿ ಇದ್ದ ದೊಡ್ಡದೊಂದು ಪುಸ್ತಕದಲ್ಲಿ ಅವನ್ನು ಹುಡುಕಿ, ಪಕ್ಕ ಗುರುತುಹಾಕಿ, ನಂತರ ಮತಪತ್ರಗಳನ್ನು ಕೊಟ್ಟು ಮತಪೆಟ್ಟಿಗೆಗೆ ಕಳಿಸಿದರು. ಎರಡು ಮತಪತ್ರಗಳು – ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ (ಎಂಪಿ) ಮತ್ತು Senate. ಎಂಪಿ ಆಯ್ಕೆಗೆ ಇದ್ದ ಮತಪತ್ರವು ಹಸಿರು ಬಣ್ಣದ್ದು, ಚಿಕ್ಕ ಗಾತ್ರದ್ದು. ಸ್ಪರ್ಧಿಸಿದ್ದ ಕೇವಲ ಒಂಭತ್ತು ಅಭ್ಯರ್ಥಿಗಳ ಹೆಸರುಗಳ ಪಕ್ಕ ಚಿಕ್ಕದೊಂದು ಚೌಕವಿತ್ತು. ಪ್ರತಿಯೊಂದು ಚೌಕದಲ್ಲೂ ನಾವು ನಮ್ಮ ಆಯ್ಕೆಯನ್ನು ಅಂಕಿಗಳ ಮೂಲಕ ಸೂಚಿಸಬೇಕು. ಅಂದರೆ ಪ್ರಥಮ ಆಯ್ಕೆ ಇವರು, ನಂಬರ್ ಎರಡು ಇವರು… ಹಾಗೆ. ಎಲ್ಲಾ ಚೌಕಿಗಳಲ್ಲೂ ಒಂದು ನಂಬರ್ ಇರಲೇಬೇಕು, ಆಗ ಮಾತ್ರ ನಮ್ಮ ಮತವನ್ನು ಸರಿಯಾದದ್ದು ಎಂದು ಎಣಿಸುತ್ತಾರೆ.

ಸೆನೆಟ್ ಮತಪತ್ರ ಸಂಪೂರ್ಣ ಭಿನ್ನವಾದದ್ದು. ಇದು ಬಿಳಿ ಬಣ್ಣದ್ದು, ಉದ್ದನೆ ಗಾತ್ರದ್ದು. ಸುಮಾರು ಹದಿನೈದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತವನ್ನು ಸೂಚಿಸುವ ಕ್ರಮ ಕೂಡ ಭಿನ್ನವಾಗಿತ್ತು. ಮತಪತ್ರದ ಮಧ್ಯೆ ಒಂದು ದಪ್ಪನೆ ಉದ್ದನೆ ಕಪ್ಪು ರೇಖೆಯಿತ್ತು. ಈ ರೇಖೆಯ ಮೇಲೆ (above the line) ಆರು ಅಭ್ಯರ್ಥಿಗಳ ಹೆಸರು ಮತ್ತು ಚೌಕವಿತ್ತು. ನಮ್ಮ ಆಯ್ಕೆಯನ್ನು ನಂಬರ್ ಮೂಲಕ ಬರೆಯಬೇಕಿತ್ತು. ಇದು ಬೇಡ, ಸೆನೆಟ್ ಸ್ಥಾನಕ್ಕೆ ನಿಂತಿರುವ ಎಲ್ಲಾ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷವನ್ನು ಅರಿತುಕೊಂಡು ಮತ ಅಂಕೆ ಬರೆಯುತ್ತೀವಿ ಎಂದಾದರೆ Below the line ವಿಧಾನವನ್ನು ಪಾಲಿಸಬೇಕು. ಆಗ ಎಲ್ಲಾ ಹದಿನೈದು ಅಭ್ಯರ್ಥಿಗಳ ಹೆಸರು, ಪಕ್ಷಗಳು ಎಲ್ಲವನ್ನೂ ಪರಿಶೀಲಿಸಿ ನಂತರ ಕನಿಷ್ಠ ೧೨ ಮಂದಿಯನ್ನು ಅಂಕೆಗಳ ಮೂಲಕ ಆರಿಸಿ ನಮ್ಮ ಮತವನ್ನು ದಾಖಲಿಸಬೇಕು. ನಾನು ಈ ವಿಷಯಗಳನ್ನೆಲ್ಲಾ ಗಮನಿಸಿ, ಅರಿತುಕೊಂಡು ಮತ ಚಲಾಯಿಸಲು ಸ್ವಲ್ಪ ಜಾಸ್ತಿ ಸಮಯವೇ ಹಿಡಿಸಿತು. ಅಕ್ಕಪಕ್ಕದವರು ಸರಸರನೆ ಕೆಲಸ ಮುಗಿಸಿ ನಡೆದಾಗಲೂ ನಾನು ಇನ್ನೂ ಮತಪತ್ರದ ಅಂಗುಲಗಳನ್ನು ನೋಡುತ್ತಾ ನಿಂತಿದ್ದೆ. ಸೆನೆಟ್ ಅಭ್ಯರ್ಥಿಗಳ ಯಾರ ಹೆಸರುಗಳನ್ನೂ ನಾನು ಕೇಳಿಯೇ ಇರಲಿಲ್ಲ. ನಮ್ಮನ್ನು ಪ್ರತಿನಿಧಿಸುವ ಇವರು ಯಾರು, ಯಾಕೆ ಪ್ರಚಾರ ನಡೆಸಲಿಲ್ಲ, ಎಲ್ಲರ ಗಮನವೂ ಎಂಪಿ ಸ್ಥಾನದ ಕಡೆಗೆ ಇದ್ದು ಇವರು ‘ನೋಡೋಣ ಒಂದು ಚಾನ್ಸ್’ ಎಂದು ಸೆನೆಟ್ ಸ್ಪರ್ಧೆಗೆ ಬಂದರೇ ಎಂದೆಲ್ಲಾ ಪ್ರಶ್ನೆಗಳು ಎದ್ದವು. ಮತಪೆಟ್ಟಿಗೆಯಲ್ಲಿ ನಿಂತಿರುವವರು ಯಾರ ಬಳಿಯೂ ಮಾತನಾಡಬಾರದು, ಫೋಟೋ ತೆಗೆಯಬಾರದು, ಎಲ್ಲವನ್ನೂ ಗೌಪ್ಯವಾಗಿಡಬೇಕು ಎಂದೆಲ್ಲಾ ನಿಯಮಗಳಿವೆ. ಹಾಗಾಗಿ ಹೆಚ್ಚಿನ ಸಮಯ ತೆಗೆದುಕೊಂಡು ಅರ್ಥ ಮಾಡಿಕೊಂಡು ಮತಪತ್ರಗಳನ್ನು ಬೇರೆಬೇರೆ ಎರಡು ಪೆಟ್ಟಿಗೆಗಳಲ್ಲಿ ಹಾಕಿ ಹೊರಬಂದಾಗ ಅಲ್ಲಿ ಯಾರ ಬಳಿಯೊ ಹರಟೆ ಹೊಡೆಯುತ್ತಿದ್ದ ನನ್ನ ಗಂಡ ‘ಸೆನೆಟ್ ಮತಪತ್ರದಿಂದ ಗೊಂದಲವಾಯ್ತಾ, ನನಗೂ ಹಾಗೆ ಆಯ್ತು. ಯಾರು ಈ ಅಭ್ಯರ್ಥಿಗಳು, ಹೆಸರೇ ಕೇಳಿಲ್ಲವಲ್ಲ ಎಂದುಕೊಂಡೆ’ ಎಂದಾಗ ನನಗೆ ಸ್ವಲ್ಪ ಸಮಾಧಾನವಾಯ್ತು.

ಇವತ್ತು ಬೆಳಗ್ಗೆ ಖುದ್ದಾಗಿ ಪ್ರಧಾನಮಂತ್ರಿ ಆಂಟೋನಿ ಅಲ್ಬಾನೀಸಿ Dickson ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಎಂದು ಸುದ್ದಿಯಿತ್ತು. ಆ ನಂತರ ಅವರು ದೇಶದ ಬೇರೆಬೇರೆ ರಾಜ್ಯಗಳ ರಾಜಧಾನಿ ನಗರಗಳಿಗೆ ಹೋಗುವುದಿದೆ ಎಂದು ಎಬಿಸಿ ರೇಡಿಯೋ ಹೇಳಿತ್ತು. ಅದೇ ರೀತಿ ಪೀಟರ್ ಡಟ್ಟನ್ ಇವತ್ತು ಬೆಳಗ್ಗೆ ಮೆಲ್ಬೋರ್ನ್ ನಗರದಲ್ಲಿ ಓಡಾಡಿ ಮತದಾರರನ್ನು ಓಲೈಸಿದ ಸಮಾಚಾರ ಬಿತ್ತರವಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಮೆಲ್ಬೋರ್ನ್ ಗೆ ಡಟ್ಟನ್ ಭೇಟಿಕೊಟ್ಟದ್ದು ಇದೇ ಮೊದಲಬಾರಿ ಅಂತೆ.

ಈ ಚುನಾವಣೆಯ ಪ್ರಚಾರದಲ್ಲಿರುವುದು ಮೂರು ಮುಖ್ಯ ಅಂಶಗಳು. ಜೀವನವೆಚ್ಚ, ವಸತಿ, ಮತ್ತು ಆರೋಗ್ಯ. ಪ್ರಧಾನಮಂತ್ರಿ ಆಂಟೋನಿ ಅಲ್ಬಾನೀಸಿ ನೇತೃತ್ವದಲ್ಲಿ ಅಧಿಕಾರದಲ್ಲಿರುವ ಲೇಬರ್ ಪಕ್ಷವು ಈ ಮೂರು ವರ್ಷಗಳಲ್ಲಿ ತಮ್ಮ ಕೈಲಾಗುವಷ್ಟೂ ಕಷ್ಟಪಟ್ಟು ತಾವುಗಳು ಆಸ್ಟ್ರೇಲಿಯಾ ಸಮಾಜದಲ್ಲಿ ಸುಧಾರಣೆ ಮತ್ತು ಬದಲಾವಣೆಗಳನ್ನು ತಂದಿದ್ದೀವೆ. ಒಂದು ದೇಶವಾಗಿ ಮತ್ತು ಸಮಾಜವಾಗಿ ಆಸ್ಟ್ರೇಲಿಯಾವನ್ನು ಮುನ್ನಡೆಸುವತ್ತ ಗಮನವಿದೆ. ತಾವು ಆರಂಭಿಸಿರುವ ಸುಧಾರಣಾ ಕೆಲಸಗಳಿಗೆ ಪ್ರೋತ್ಸಾಹ ಕೊಟ್ಟು ಪ್ರಜೆಗಳು ತಮ್ಮನ್ನು ಹುರಿದುಂಬಿಸಲಿ ಎಂದಿದ್ದಾರೆ. ಈ ಕೆಲಸಗಳಲ್ಲಿ ಜೀವನವೆಚ್ಚ ತಗ್ಗಿಸುವುದು – ತೆರಿಗೆ ವಿನಾಯ್ತಿಯ ಮುಂದುವರಿಕೆ, ಎಲೆಕ್ಟ್ರಿಸಿಟಿ ಮತ್ತಿತರ ದರಗಳಲ್ಲಿ ಈಗಾಗಲೆ ಕೊಟ್ಟಿರುವ ವಿನಾಯ್ತಿಯನ್ನು ಮುಂದುವರೆಸುವುದು, ಡಾಕ್ಟರ್ ಫೀಸ್ ತಗ್ಗಿಸಿರುವುದು ಇಲ್ಲವೇ ಪೂರ್ತಿ ವಿನಾಯ್ತಿ ಕೊಡುವದು, ಡಾಕ್ಟರ್ ಬರೆದುಕೊಡುವ prescription ಔಷಧ ಖರೀದಿ ಬೆಲೆಯನ್ನು ೨೫ ಡಾಲರ್ ಮೀರದಂತೆ ಕ್ರಮ ತರುವುದು, ವಿಶ್ವವಿದ್ಯಾಲಯ ವ್ಯಾಸಂಗದ ಫೀಸ್ ಮತ್ತಷ್ಟು ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಇತ್ಯಾದಿ – ಸೇರಿದೆ. ಇವೆಲ್ಲದರಿಂದ ಜೊತೆಗೂಡಿ ದೇಶವನ್ನು ಮುನ್ನಡೆಸೋಣ ಎಂದಿದ್ದಾರೆ. ಚುನಾವಣೆಯಲ್ಲಿ ಆಂಟೋನಿ ಅಲ್ಬಾನೀಸಿ ಮತ್ತೊಮ್ಮೆ ಗೆದ್ದರೆ ಅದೊಂದು ದಾಖಲೆಯಾಗುತ್ತದೆ. ೨೦೦೪ರ ಈಚೆಗೆ ಯಾವ ಆಸ್ಟ್ರೇಲಿಯನ್ ಪ್ರಧಾನಮಂತ್ರಿಯೂ ಎರಡನೇ ಬಾರಿ ಗೆದ್ದು ಬಂದಿಲ್ಲ.

ಆಲ್ಬಾನೀಸಿ ಅವರ ಚುನಾವಣಾ ಪ್ರಣಾಳಿಕೆಗೆ ಬದಲು ಹೇಳುತ್ತಾ, ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರು ತಮ್ಮ ಲಿಬರಲ್ ಪಕ್ಷವನ್ನು ಆರಿಸಿ ತಾವು ಪ್ರಧಾನಮಂತ್ರಿಯಾದರೆ ಪೆಟ್ರೋಲ್ ಪ್ರತಿ ಲೀಟರಿಗೆ ೨೫ Cent ಕಡಿಮೆ ಮಾಡುವುದು, ಹೊಸ ವಲಸೆಗಾರ ವೀಸಾಗಳನ್ನು ಮತ್ತಷ್ಟು ಮೊಟಕುಗೊಳಿಸುವುದು, ಹೊಸದಾಗಿ ಪ್ರಪ್ರಥಮ ಬಾರಿ ಮನೆ ಕೊಳ್ಳುವವರಿಗೆ stamp duty ರದ್ದು ಮಾಡುವುತ್ತೀವಿ ಅಂದಿದ್ದಾರೆ. ಇವರ ಚುನಾವಣಾ ಮಂತ್ರ ‘let us put Australia back on track’ ಕೆಲವರಿಗೆ ಗಾಬರಿ ತಂದಿದೆ. ಪೀಟರ್ ಡಟ್ಟನ್ ಅವರ ಕೆಲ ಹೇಳಿಕೆಗಳು ಹೀಗಿವೆ – ತಾವು ಅಧಿಕಾರಕ್ಕೆ ಬಂದರೆ ಎಲ್ಲಾ ನೌಕರರು ಕಚೇರಿಗೆ ಮರಳುವಂತೆ ಮಾಡುತ್ತೀನಿ, ಯಾರೂ ಮನೆಯಿಂದ ಕೆಲಸ ಮಾಡುವಂತಿಲ್ಲ, ತೆರಿಗೆಗಳನ್ನು ಹೆಚ್ಚಿಸುತ್ತೀನಿ, ಆರೋಗ್ಯ ವಿಷಯದಲ್ಲಿ ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತೀನಿ, ಎಂದು. ಖಚಿತ ಕ್ರಮಗಳ ಮಾತು, ಒಂದು ನಿರ್ದಿಷ್ಟ ಗುರಿಯಿರದ ಅವರ ಹೇಳಿಕೆಗಳು, ಪ್ರಧಾನಮಂತ್ರಿ ಆಲ್ಬಾನೀಸಿ ಮತ್ತವರ ಸರಕಾರದ ಬಗ್ಗೆ ಮಾಡುವ ವಿಪರೀತ ಟೀಕೆಗಳು, ಅಪನಿಂದನೆ, ಋಣಾತ್ಮಕ ನಿಲುವು ಇತ್ಯಾದಿ ಎಲ್ಲರಿಗೂ ಇಷ್ಟವಾಗಿಲ್ಲ. ಇದಲ್ಲದೆ ಡಟ್ಟನ್ ಹೇಳಿರುವುದು ತಾವು ಅಧಿಕಾರಕ್ಕೆ ಬಂದು ಪ್ರಧಾನಮಂತ್ರಿಯಾದರೆ ತಮ್ಮ ಮತಕ್ಷೇತ್ರದಲ್ಲಿ nuclear power ಪ್ಲಾಂಟ್ ಒಂದನ್ನು ಸ್ಥಾಪಿಸುತ್ತೀನಿ. ಅಂದರೆ ನಾನು ವಾಸಿಸುತ್ತಿರುವ Dickson ಕ್ಷೇತ್ರದಲ್ಲಿ, ಸುಮಾರು ೫೦-೮೦ ಕಿಮೀ ವಲಯ ಪ್ರದೇಶದಲ್ಲಿ nuclear power ಪ್ಲಾಂಟ್ ಬರಲಿದೆ. ನಮ್ಮೆಲ್ಲರ ಆರೋಗ್ಯದ ಗತಿ ಆ ದೇವರಿಗೇ ಸೇರಿದ್ದು ಎಂದಾಯ್ತು!

ಅದಕ್ಕೆ ಉತ್ತರವಾಗಿ Dickson ಕ್ಷೇತ್ರದ ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಲೀ ಸ್ಮಿತ್ ಹೇಳಿದ್ದು ‘ನಮ್ಮ ಜೀವನ ಗುಣಮಟ್ಟ ನಿರ್ಧಾರವನ್ನು ವಾಪಸ್ ಪಡೆಯೋಣ, ಅದು ನಮ್ಮ ಹಕ್ಕು’ ಎಂದು. ಪರಿಸರವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಈಕೆ ಜನಸಮುದಾಯದಲ್ಲಿ ಬೆರೆತು ಜನಾಭಿಪ್ರಾಯವನ್ನು ಅರಿತು ಸಮುದಾಯ ಅವಶ್ಯಕತೆಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಪ್ರತಿದಿನ ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡುವುದು, ಸಣ್ಣಪುಟ್ಟ ವ್ಯಾಪಾರ ಸಂಸ್ಥೆಗಳಿಗೆ ಪ್ರೋತ್ಸಾಹ, ವಸತಿ ವೆಚ್ಚದಲ್ಲಿ ರಿಯಾಯ್ತಿ, ರಸ್ತೆಗಳನ್ನು ಉತ್ತಮ ಪಡಿಸುವುದು, ಇತ್ಯಾದಿ ಈಕೆಯ ಗುರಿಗಳು. ಸುಮಾರು ಮೂರು ತಿಂಗಳುಗಳಿಂದ ನನಗೆ ತಿಳಿದಿರುವ ಇಬ್ಬರು ಮಹಿಳೆಯರು ತಮ್ಮ ಈ ನೆಚ್ಚಿನ ಅಭ್ಯರ್ಥಿ ಪರವಾಗಿ ಪ್ರಚಾರ ಕೆಲಸ ಮಾಡುತ್ತಿದ್ದಾರೆ.

ಈ ದೇಶದ ಕಾನೂನಿನಂತೆ ಈಗಾಗಲೇ ‘early voting’ ಶುರುವಾಗಿ ಸುಮಾರು ೫೦% ಕ್ಕೂ ಹೆಚ್ಚು ಜನ ಮತ ಚಲಾಯಿಸಿದ್ದಾರೆ ಎಂದು ಮಾಧ್ಯಮ ವಿಶ್ಲೇಷಣೆ ಹೇಳಿದೆ. ಒಟ್ಟು ಸುಮಾರು ಹದಿನೆಂಟು ಮಿಲಿಯನ್ ಮತದಾರರಿದ್ದಾರಂತೆ. ಇಂದು ಮಧ್ಯಾಹ್ನದಿಂದ ಎಲ್ಲಾ ಟೀವಿ ಚಾನೆಲ್‌ಗಳಲ್ಲಿ ಚುನಾವಣಾ ವಿಶೇಷ ಕಾರ್ಯಕ್ರಮಗಳೂ, ವಿಶ್ಲೇಷಣೆಗಳೂ ಪ್ರಸಾರವಾಗಲಿದೆ. ಎಲ್ಲರ ಕಣ್ಣು, ಕಿವಿಗಳಿಗೆ ಬಿಡುವಿಲ್ಲದ ಕೆಲಸ! ಸೋಮವಾರದೊಳಗೆ ದೇಶದ ಭವಿಷ್ಯಕ್ಕೆ ಹೊಸಭಾಷ್ಯೆ ಬರೆಯುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ